ಉಷಾ ಪಿ.ರೈ ಅವರು ದುಡಿಯುವ ಮಹಿಳೆಯಾಗಿ, ಲೇಖಕಿಯಾಗಿ, ಚಿತ್ರ ಕಲಾವಿದೆಯಾಗಿ, ಒಳ್ಳೆಯ ತಾಯಿ, ಪತ್ನಿ, ಅಜ್ಜಿ,ಪ್ರವಾಸಿಗಳಾಗಿ, ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಎಲ್ಲಾ ಪಾತ್ರಗಳನ್ನೂ ಸಮರ್ಥವಾಗಿ ನಿಭಾಯಿಸಿದ ರೀತಿ ಎಲ್ಲರಿಗೂ ದಾರಿದೀಪವಾಗಿದೆ. ಅವರ ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ
ಲೇಖಕರು: ಉಷಾ ಪಿ.ರೈ
ಪ್ರಿಯದರ್ಶಿನಿ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೨೩.
ಪುಟಗಳು: ೪೬೦.
ಬೆಲೆ: ರೂ. ೫೦೦.
ಸದಾ ಕ್ರಿಯಾಶೀಲ ಮನೋಭಾವದ ಹಿರಿಯ ಲೇಖಕಿ ಶ್ರೀಮತಿ ಉಷಾ ಪಿ.ರೈಯವರ ‘ಯಾವ ನಾಳೆಯೂ ನಮ್ಮದಲ್ಲ’ ಎನ್ನುವ ಆತ್ಮಕಥೆಯ ಮುಂದುವರೆದ ಭಾಗವಿದು. ಈ ಮೊದಲ ಭಾಗವನ್ನು ಓದಿದ ನಂತರ ಇದನ್ನು ಓದಿದರೆ ಪರಿಣಾಮ ಹೆಚ್ಚು. ಎರಡೂ ಕೃತಿಗಳ ಅರ್ಥಪೂರ್ಣವಾದ ಶೀರ್ಷಿಕೆಯೇ ಮನ ಸೆಳೆಯುವಂತಿವೆ. ಓದಿದ ಮೇಲೂ ಕಾಡುವ ಅವರ ಆತ್ಮ ಚರಿತ್ರೆಯ ಗುಂಗಿನಿಂದ ಹೊರ ಬರಲು ತುಸು ಸಮಯ ಬೇಕು. ಅಷ್ಟು ಭಾವಪೂರ್ಣವಾದ ಬರಹ.
ಇದು ದಿನಾಂಕ. ೮.೩.೨೦೨೩ ರಂದು ನಡೆದ ಅವರದೇ ಸಾಹಿತ್ಯ ಕೃತಿಗಳ ಕುರಿತಾದ ಅಭಿಯಾನದಲ್ಲಿ ಅವರಿಂದಲೇ ದೊರಕಿದ ಪುಸ್ತಕ ಕಾಣಿಕೆ. ಅರವತ್ತು ವರ್ಷಗಳವರೆಗೆ ಚೆನ್ನಾಗಿಯೇ ಇದ್ದ ಉಷಾ ಅವರ ಜೀವನ ೨೦೦೫ ರಲ್ಲಿ ಆದ ಭೀಕರ ರಸ್ತೆ ಅಪಘಾತದಿಂದ, ಅದರಿಂದಾದ ಏಟುಗಳಿಂದ ದೈಹಿಕವಾಗಿ ಮೊದಲಿನಂತೆ ಆಗಲೇ ಇಲ್ಲ. ! ಆದರೆ ತಾವು ಈ ಘಟನೆಯಿಂದ ಮಾನಸಿಕವಾಗಿ ಗಟ್ಟಿಯಾಗುತ್ತಾ ಜೀವನದಲ್ಲಿ ಹೊಸ ತಿರುವು ಪಡೆಯುತ್ತಾ ಸಾಗಿದ ಬಗೆಯನ್ನು ವಿವರಿಸಿದ್ದಾರೆ.
ಇಲ್ಲಿ ಅವರು ತಮ್ಮ ಕುಟುಂಬದ ಮಕ್ಕಳ- ಮೊಮ್ಮಕ್ಕಳ ಕುರಿತು ಹೇಳಿದ್ದಾರೆ. ಬದಲಾದ ಬದುಕಿಗೆ ಒಗ್ಗಿಕೊಂಡ ಸಮಾಧಾನಕರ ಅಂಶವನ್ನು ಹಂಚಿ ಕೊಂಡಿದ್ದಾರೆ. ಅವರು ದುಡಿಯುವ ಮಹಿಳೆಯಾಗಿ, ಲೇಖಕಿಯಾಗಿ, ಚಿತ್ರ ಕಲಾವಿದೆಯಾಗಿ, ಒಳ್ಳೆಯ ತಾಯಿ, ಪತ್ನಿ, ಅಜ್ಜಿ,ಪ್ರವಾಸಿಗಳಾಗಿ, ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಎಲ್ಲಾ ಪಾತ್ರಗಳನ್ನೂ ಸಮರ್ಥವಾಗಿ ನಿಭಾಯಿಸಿದ ರೀತಿ ಎಲ್ಲರಿಗೂ ದಾರಿದೀಪವಾಗಿದೆ.

ಪದೇ ಪದೇ ಕೈ ಕೊಡುವ ಅನಾರೋಗ್ಯದಲ್ಲೂ ಮಾನಸಿಕ ಸ್ಥೈರ್ಯ ಕುಸಿಯದಂತೆ ಚೇತರಿಸಿಕೊಂಡು ಚಿತ್ರಕಲೆ- ಬರವಣಿಗೆಯಂತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅವರು ಮಾಡಿದ ಅಪ್ರತಿಮ ಸಾಧನೆ ನನಗೊಂದು ಬೆರಗು!.
ಉಸಿರಾಟದ ಸಮಸ್ಯೆ, ವೆರಿಕೋಸ್ ವೈನ್ ಅಪರೇಶನ್, ಮೂಳೆ ಮುರಿತ, ಪತಿಯ ಅನಾರೋಗ್ಯ, ವಿದೇಶದಲ್ಲಿರುವ ಮಗನ ಮನೆಗೆ ಹೋದಾಗ ಮೊಮ್ಮಗಳಿಗೆ ಕಾಡಿದ ಅಪರೂಪದ ಖಾಯಿಲೆ ‘ಕವಸಾಕಿ’ ತಮಗೇ ಅನಾರೋಗ್ಯ ವಿದ್ದಾಗ್ಯೂ ಚಿಕ್ಕ ಮೊಮ್ಮಗಳನ್ನು ಜತನ ಮಾಡಿದ್ದು, ಇವೆಲ್ಲಾ ನೋಡುವಾಗ ಆ ದೇವರು ಇವರನ್ನು ಅದೆಷ್ಟು ಬಗೆಯಾಗಿ ಪರೀಕ್ಷೆಗೆ ಒಡ್ಡಿದನೋ ಎನಿಸುತ್ತದೆ .
ಕಲಾವಿದನಾಗುವುದು ಸುಲಭವಲ್ಲ .ಆದರೆ ಪರ ದೇಶಗಳ ನೆಲದಲ್ಲೂ ಚಿತ್ರ ಕಲಿಕೆ,ಪ್ರದರ್ಶನಗಳ ನೋಟ ಹಲವು ಸ್ಥಳಗಳ ಭೇಟಿ, ಹೊರದೇಶದಲ್ಲಿ ನಮ್ಮ ಗಾಂಧಿಯ ಪ್ರತಿಮೆ ಕಂಡಾಗ ಆದ ಸಂತೋಷ, ಮನೆಯ ಸಾಕು ನಾಯಿಗಳ ಪ್ರೀತಿ, ಮೋಸ ಮಾಡಿದ ಕಂಟ್ರಾಕ್ಟರ್ ನಿಂದ ಮಾನಸಿಕ ಶಾಂತಿ ಕಳೆದು ಕೊಂಡಿದ್ದು, ೫೧ ವರ್ಷ ಜೊತೆಗಾರನಾಗಿದ್ದ ಪತಿಯಸಾವು, ನಂತರ ಅವರಿಗೆ ಬಂದ ಒಂದಷ್ಟು ಪ್ರಶಸ್ತಿಗಳ ಕಾರ್ಯಕ್ರಮಗಳು,ಕಟ್ಟಿದ ಆಕಾಂಕ್ಷಾದಂತ ಚಿತ್ರಕಲಾ ಸಂಘ, ಸಮುದ್ರದ ನೀರಿನಾಳದಲ್ಲಿ ಅವರ ಮಗ ಹಾಗೂ ಮೊಮ್ಮಗನ ಡೈವಿಂಗ್ ಸಾಹಸ ಅದರಿಂದ ಆದ ಆನಂದ -ಆತಂಕ ಹೀಗೆ ಸವಾಲಿನ ಸಕಲವನ್ನೂ ಇಲ್ಲಿ ತಿಳಿಸುತ್ತಾ ಹೋಗುತ್ತಾರೆ.
ಅವರ ಮನೆ ಕೆಲಸಕ್ಕೆ ಬಂದ ಹಲವು ನಮೂನೆಯ ಜನರಿಂದಾದ ತೊಂದರೆ ತಾಪತ್ರಯ ಅನುಭವಿಸಿದ್ದು, ಬೆಂಗಳೂರಿನ ಸ್ವಂತ ಮನೆ ‘ಸಮೃದ್ಧ’ವನ್ನುಮಾರಿದ್ದು, ಪ್ಲಾಟ್ ಬದಲಾಯಿಸಿದಾಗ ಇಷ್ಟಪಟ್ಟು ಕೊಂಡ ಪೀಠೋಪಕರಣ, ಪಾತ್ರೆಗಳು, ಪುಸ್ತಕಗಳನ್ನು ಕಷ್ಟ ಪಟ್ಟು ವಿಲೇವಾರಿ ಮಾಡಿದ ರೀತಿ, ಕರೋನಾ ಕಾಲದ ಆರೋಗ್ಯ ಸಮಸ್ಯೆಯ ಸಂಕಷ್ಟಗಳನ್ನು ಎದುರಿಸಿದ ರೀತಿ ಇವೆಲ್ಲಾ ಅವರ ಸಂವೇದನಾಶೀಲತೆಯನ್ನು ಅಭಿವ್ಯಕ್ತಗೊಳಿಸುತ್ತದೆ.
ತಮ್ಮ ಬಾಲ್ಯದ ಗೆಳತಿ ವಸಂತಿಯ ಭೇಟಿಗೆ ಆಸ್ಟ್ರೇಲಿಯಾಕ್ಕೆ ಹೋಗಿದ್ದು, ಅಲ್ಲಿ ಅವರು ನಡೆಸುತ್ತಿದ್ದ ಸತ್ಯ ನಾರಾಯಣ ಪೂಜೆ, ಬೊಟಾನಿಕ್ ಗಾರ್ಡನ್, ಮೆಲ್ ಬರ್ನ್ ಮುಂತಾದ ಪ್ರೇಕ್ಷಣೀಯ ಸ್ಥಳಗಳ ಭೇಟಿಯ ಜೊತೆ ಅಲ್ಲಿನ ಇತಿಹಾಸದ ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸಿ ಬರೆದಿದ್ದು ಕೂಡಾ ವಿಶೇಷವೆನಿಸುತ್ತದೆ.
ಈ ಪುಸ್ತಕ ಓದಿದಾಗ ಅವರು ತಮ್ಮ ಸ್ನೇಹಿತೆಯರು, ಒಡಹುಟ್ಟಿದವರು ಹಾಗೂ ಸಾರ್ವಜನಿಕ ವಲಯದಲ್ಲಿ ಎಲ್ಲರೊಡನೆ ಒಡನಾಡಿದ ಸಂದರ್ಭಗಳಲ್ಲಿ ಸಂಬಂಧವನ್ನು ಉಳಿಸಿ -ಬೆಳೆಸಿಕೊಂಡು ಬಂದ ಪರಿ ಮೆಚ್ಚುವಂತದ್ದು. ವೃದ್ದಾಪ್ಯದಲ್ಲಿ ಮುಖ್ಯವಾಗಿ ಬೇಕಾಗಿದ್ದು ಆರ್ಥಿಕ ಸ್ವಾತಂತ್ರ್ಯ ಎನ್ನುವ ಅವರ ಚಿಕಿತ್ಸೆಯ ವೈದ್ಯಕೀಯ ವೆಚ್ಚ ಕೇಳಿ ಭಯವೂ ಆಯಿತು.ಅವರ ಇಬ್ಬರು ಮಕ್ಕಳು ಹೆತ್ತವರನ್ನು ಕಾಳಜಿಯಿಂದ ನೋಡಿ ಕೊಳ್ಳುವ ರೀತಿ ಶ್ಲಾಘನೀಯ.
ಎಷ್ಟು ಮಂದಿ ಕೆಲಸದವರು ಅವರಿಗೆ ಮತ್ತಷ್ಟು ಸಮಸ್ಯೆ ತಂದಿದ್ದರು!! ವಯಸ್ಸಾದವರ ಅಸಹಾಯಕತೆಯ ಲಾಭವನ್ನು ಇಂತಹ ಜನ ಹೇಗೆಲ್ಲಾ ಪಡೆಯುತ್ತಾರೆಂದು ಓದುವಾಗ ಬೇಸರವೂ ಆಗುತ್ತದೆ. ಆದರೆ ಬೆಳಿಗ್ಗೆ ಎದ್ದು ಚೆಂದ ಮಾಡಿಕೊಂಡು ಮೊಬೈಲ್ ಹಿಡಿದು ಕೂರುವ, ಇಡೀದಿನ ಫೋನಲ್ಲಿ ಮಾತಾಡಿ ಕಿರಿ ಕಿರಿ ಹಿಡಿಸುವ ಕೆಲಸದವಳು…ಪಾರ್ಲರ್ ಗೆ ಹೋಗಿ ಕೂದಲು- ಹುಬ್ಬು ಕತ್ತರಿಸಿ ಕೊಂಡು ಬರುವಾಕೆಯ ಸುಳ್ಳು,ಕಳ್ಳತನ, ಇಂಥವರನ್ನು ಕಲ್ಪಿಸಿ ನಗುವೂ ಬಂತು.

ವಿವಿಧ ದೇಶವನ್ನು ಸುತ್ತಿ ನೋಡಿ, ಕೋಶವನ್ನು ಓದಿ ಬರೆದು, ಚಿತ್ರಿಸಿ, ಹೋದಲ್ಲೆಲ್ಲಾ ನಗು ನಗುತ್ತಾ ತಮ್ಮ ಛಾಪು ಮೂಡಿಸಿದ್ದರು ಎನ್ನುವುದಕ್ಕೆ ಉಷಾ ಮೇಡಂ ಅವರ ಜೊತೆ ಪೇಂಟಿಂಗ್ ಮಾಡಿ ಸಂತಸ ಪಟ್ಟ ವಿದೇಶೀ ಚಿತ್ರ ಕಲಾವಿದ ಮೈಕೇಲ್ ಹಾಗೂ ಫೋಟೋ ಕ್ಲಿಕ್ಕಿಸಿಕೊಂಡ ನವತರುಣಿಯರೇ ಸಾಕ್ಷಿ. ಅವರ ಸಜ್ಜನಿಕೆ, ಪ್ರತಿಭೆ, ಅನುಭವಗಳ ಆಳ -ವಿಸ್ತಾರ ನನ್ನಂತ ಸಾಮಾನ್ಯಳ ಊಹೆಗೂ ನಿಲುಕದ್ದು.!!
‘ನಮ್ಮದಲ್ಲದ ನಾಳೆಗಳನ್ನು ನಮ್ಮದಾಗಿಸುತ್ತಾ ಮುಂದೆ ಸಾಗಲೇ ಬೇಕಾದ ಅನಿವಾರ್ಯತೆ ಮುಂದಿರುವಾಗ ನಿನ್ನೆಗಳ ನೋವಿಗೆ, ಸೋಲಿಗೆ ಕುಸಿದು ಕುಳಿತು ಕೊಳ್ಳದೆ ಮುಂದಿನ ಹೆಜ್ಜೆಗಳಿಗೆ ಕಸುವು ತುಂಬಿ ಕೊಳ್ಳ ಬೇಕಾದವರು ನಾವೇ. ಅದೇ ಜೀವನದ ಗೆಲುವು. ಯಾವ ನಾಳೆಯೂ ನಮ್ಮದಲ್ಲ ನಿಜ. ಆದರೆ ನಾಳೆಗಳೆಲ್ಲಾ ನಿನ್ನೆಗಳಾಗುತ್ತಾ ಆ ನಿನ್ನೆಗಳು ನಾಳೆಗಳಲ್ಲಿ ಮರೆಯಾಗುತ್ತಾ ಸಾಗುತ್ತದೆ. ಅದೇ ಜೀವನದ ಸತ್ಯ. ಒಲ್ಲೆಯೆನ್ನದಿರು ನಮ್ಮದಲ್ಲದ ನಾಳೆಗಳ! ‘ ಎನ್ನುವ ಭರವಸೆಯ ಈ ಕೊನೆಯ ಸಾಲುಗಳು ಎಷ್ಟು ಅರ್ಥಪೂರ್ಣವಾಗಿದೆಯೆಂದರೆ ನಾಲ್ಕಾರು ಬಾರಿ ಮನದಲ್ಲೇ ಗುನು ಗುನಿಸಿದೆ. ಹಾಗಾಗಿ ಮತ್ತೆ ಇಲ್ಲಿ ಬರೆದೆ.
ಉಷಾ ಮೇಡಂ, ಎಷ್ಟು ಚೆಂದವಾಗಿ -ಆಪ್ತವಾಗಿ- ಹೃದ್ಯವಾಗಿ ನವರಸಗಳನ್ನು ತುಂಬಿ ನೀವು ಬರೆದ ರೀತಿ ತುಂಬಾ ತುಂಬಾ ಇಷ್ಟವಾಯಿತು. ನಿಮ್ಮ ನಗುವಿನ ಸುಂದರತೆಯ ಹಿಂದಿರುವ ನೋವನ್ನು ಜೀವನಾನು ಭವವನ್ನು ಹೀಗೆ ಪದಗಳ ಹಾರವಾಗಿ ಓದುಗರ ಮುಂದೆ ಹರವಿದ ಪರಿ ಮರೆಯುವಂತದ್ದಲ್ಲ. !!! ನಿಮ್ಮ ಆದರ್ಶದ- ಸ್ಪರ್ಶದ ಈ ಪುಸ್ತಕ ನಮಗೆಲ್ಲಾ ಹೊಸ ದಾರಿಯನ್ನು ತೋರುವಂತಿದೆ. ಮತ್ತೆ ಮತ್ತೆ ಓದ ಬೇಕೆನಿಸುತ್ತದೆ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
