ಈರುಳ್ಳಿ ಪುರಾಣಈರುಳ್ಳಿ ಪದರಗಳಲ್ಲಿ ಜೀವನದ  ಮೌಲ್ಯಗಳ  ಹುಡುಕಾಟದ ಪ್ರಯತ್ನ ಮಾಡಲಾಗಿದೆ. ಹಾಸ್ಯದ ಜೊತೆಗೆ ಜೀವನದ ಅರ್ಥವನ್ನು ಓದುಗರಿಗೆ ತಲುಪಿಸುವ ಪ್ರಯತ್ನವನ್ನು ಲೇಖಕ ಎನ್. ವಿ.ರಘುರಾಂ ಅವರು ಮಾಡಿದ್ದಾರೆ. ಓದಿ ನಗಿ ಮತ್ತು ಜೀವನದ ಅರ್ಥ ತಿಳಿಯಿರಿ. 

ನೋಡಿ ಸ್ವಾಮಿ ಈ ಈರುಳ್ಳಿ ಉಪಯೋಗಿಸದವರು ಯಾರು ಇದ್ದಾರೆ?   ಟೊಮೇಟೊ ಜೊತೆಗೆ  ಈರುಳ್ಳಿ ಇಲ್ಲದೇ  ರಸಂ  ಆಗುತ್ತದೆಯೇ?   ಕಾಯಿ ಜೊತೆಗೆ ಈರುಳ್ಳಿ ತಿರುವಿ  ಹಾಕದೇ ಸಾಂಬಾರ್ ಇಲ್ಲ ಬಿಡಿ!  ಹೆಚ್ಚಿ ಹಾಕಿದರೆ  ಎಂತಹ ತರಕಾರಿಯಾದರೂ ಪರವಾಗಿಲ್ಲ, ಪಲ್ಯ  ರುಚಿಯಾಗುತ್ತದೆ!   ಇನ್ನೇನಾದರೂ ಉಳಿಯಿತೇ?    ಬರೀ ದಕ್ಷಿಣ ಭಾರತದ ತಿನಿಸು ಅಲ್ಲ ಸ್ವಾಮಿ, ಉತ್ತರ ಭಾರತದ ತಿನಿಸುಗಳು ಈರುಳ್ಳಿ ಇಲ್ಲದೇ ಇಲ್ಲ ಬಿಡಿ.   ಪಲಾವ್, ಫ್ರೈಡ್ ರೈಸ್, ಬಿರಿಯಾನಿ,ಏನೇ ರೈಸ್ ಇರಲಿ ಈರುಳ್ಳಿ ಇಲ್ಲದೆ ಮಾಡಲು ಆಗುತ್ತದೆಯೇ? ಇನ್ನೂ ಯಾವುದೇ  ಸಬ್ಜಿ ಮಾಡಿ, ಈರುಳ್ಳಿಯೇ ಮೊದಲ ಸಾಮಾನು!   ಇಷ್ಟೇ  ಅಲ್ಲ ಬಿಡಿ.  ಚೈನಿಸ್, ಮೆಕ್ಸಿಕನ್ ಇನ್ನು  ಏನೇನು ಹೆಸರು ಗೊತ್ತಿದೆಯೋ  ನೆನಪಿಸಿ ಕೊಳ್ಳಿ. ಅದರಲ್ಲಿ ಈ ಈರುಳ್ಳಿ ಇಲ್ಲದೇ ಇರುವುದು ಸಾಧ್ಯವೇ ಇಲ್ಲ.ಏನೇ ಮಾಡಿ ಈರುಳ್ಳಿ  ಎಲ್ಲರದ ಜೊತೆ ಹೊಂದಿಕೊಂಡು ಹೋಗುತ್ತೆ. ಈ ಈರುಳ್ಳಿ ತಿನ್ನುವವರಿಗೂ ಈ ರೀತಿ ಎಲ್ಲರ ಜೊತೆ ಹೊಂದಿಕೊಳ್ಳವ ಸಾಧ್ಯತೆ ಇದ್ದರೆ ಚೆನ್ನಾಗಿರುತ್ತದೆ ಅಲ್ಲವೇ?  ಹೋಗಲಿ ಬಿಡಿ.  ಹೌದಲ್ಲ, ಇದೆಲ್ಲಾ   ಸಾಲದು  ಎಂದರೆ  ಹಸಿ ಈರುಳ್ಳಿ ತಿನ್ನುವವರು ಕಡಿಮೆ ಜನ ಇದ್ದಾರೇ? ಮಜ್ಜಿಗೆಗೆ ಒಗ್ಗರಣೆ  ಈರುಳ್ಳಿ ಇಲ್ಲದೆ ಊಹೆ ಮಾಡಲು ಸಾಧ್ಯವೇ?.

ಫೋಟೋ ಕೃಪೆ : Foodal

ಎಲ್ಲದಕ್ಕೂ ಇದು ಬೇಕಾದರೂ  ಈರುಳ್ಳಿ ಹೆಚ್ಚಲು ಮಾತ್ರ ಹಿಂಜರಿಯುವರೇ ಜಾಸ್ತಿ. ಕಣ್ಣೀರಿಗೂ ಈರುಳ್ಳಿಗೂ ಅವಿನಾವ  ಸಂಬಂಧ. ಅದಕ್ಕೆ ಬಹುಶಃ ಅದಕ್ಕೆ “ನೀರುಳ್ಳಿ” ಎಂದು ಕೆಲವರು ಕರೆಯುವುದು. ಕನ್ನಡಕ ಹಾಕಿಕೊಂಡು ಹಚ್ಚಿದರೂ  ಕಣ್ಣೀರಿಗೆ  ಕೊರತೆ ಆಗುವುದಿಲ್ಲ ಬಿಡಿ.

ಆದರೆ ನೋಡಿ, ಯಾವುದಾದರೂ ಒಂದು ನಿಜವಾದ  ಜಾತ್ಯಾತೀತ, ಲಿಂಗಾತೀತ, ಸೀಮಾತೀತವಾದ  ತಿನ್ನುವ ವಸ್ತು ಇದೆ ಎಂದರೆ ಈ ಈರುಳ್ಳಿ  ಮಾತ್ರ. ಯಾವಾಗ ಈ ಈರಳ್ಳಿ  ಭೂಮಿ ಲೋಕಕ್ಕೆ ಬಂದಿತೋ ಗೊತ್ತಿಲ್ಲ.  ಆದರೆ ಬಂದ ದಿವಸದಿಂದ ಒಂದೂ ದಿನ ಬಿಡದೆ ತಿನ್ನುತ್ತಿದ್ದೇವೆ!  ಅದಕ್ಕೆ  ಇದು ನೋಡಿ  ಯಾವಾಗಲೂ ಸುದ್ದಿಯಲ್ಲಿ ಇರುತ್ತದೆ.ಈ ಸಾರಿ ಮಳೆ ಚೆನ್ನಾಗಿ ಬಂತು. ಬೆಳೆ ಚೆನ್ನಾಗಿ ಆಗುತ್ತದೆ ಎಂದು ಸಮಾಧಾನ ಪಟ್ಟುಕೊಳ್ಳುವ ಹೊತ್ತಿಗೆ ಪ್ರವಾಹದಲ್ಲಿ ಈರುಳ್ಳಿ ಬೆಳೆ ನಾಶವಾದ ಸುದ್ದಿ. ಮಾರನೇಯ ದಿನವೇ ಈರುಳ್ಳಿ ಬೆಲೆ  ಮೋಡದಷ್ಟೇ ಎತ್ತರಕ್ಕೆ ಜಿಗಿಯುತ್ತೆ ನೋಡಿ.  ದುಡ್ಡು ಜಾಸ್ತಿ ಒಂದೇ ಅಲ್ಲ, ಮನೆಗೆ ತಂದು ಹೆಚ್ಚಿದರೆ ಎರಡರಲ್ಲಿ  ಒಂದು ಹಾಳಾಗಿರುತ್ತದೆ!  ವಾರ್ತಾಪತ್ರಿಕೆಯಲ್ಲಿ ಮೊದಲನೇಯ ಪುಟದಲ್ಲಿ ಸುದ್ದಿ. ಈ ಸಾರಿಯಂತೂ  ಒಂದು ಗ್ರಾಮ್ ಬಂಗಾರ ಕೊಂಡವರಿಗೆ ಒಂದು ಕಿಲೋ ಗ್ರಾಮ್ ಈರುಳ್ಳಿ ಕೊಡುವ ಹೊಸ ರೀತಿಯ ಸ್ಕಿಮ್ ಬಂದಿತ್ತು.

ಬೆಲೆ ಜಾಸ್ತಿ ಆದರೆ ಸರ್ಕಾರ ಸುಮ್ಮನೆ ಕೂರಲು ಆಗುವುದೇ?.  ಸರಿ, ಬಂತು ನೋಡಿ ವಿದೇಶಿ  ಈರುಳ್ಳಿ. ನಮ್ಮ ವಿದೇಶಿ ವ್ಯಾಹೋಮ  ಹೊಸದೇನು ಇಲ್ಲ ಬಿಡಿ. ಸುಹಾಸಿತ ದ್ರವ್ಯದಿಂದ ಹಿಡಿದು  ಮುಖ ಕ್ಷೌರದ ಬ್ಲೇಡ್ ವರೆಗೆ ವಿದೇಶಿ ವಸ್ತುಗಳಿಗೇ ಮಣೆ  ಹಾಕುವ ನಾವು, ಈಗ ವಿದೇಶಿ ಈರುಳ್ಳಿ ಬಿಡುವುದಿಲ್ಲ ಎಂದು ಲೆಕ್ಕಾಚಾರ ಹಾಕಿ ಸರ್ಕಾರವೇ ವಿದೇಶಿ ಈರುಳ್ಳಿ ತಂದಿತು. ಅದೂ ಈರುಳ್ಳಿ ಚುನಾವಣೆಗಳ  ಮೇಲೆ  ಬೀರುವ ನೇರ ಪ್ರಭಾವ ಎಲ್ಲರಿಗೂ ಗೊತ್ತಿದೆ ಬಿಡಿ. ಆದರೆ ಬಿಳಿ ದೇಶದ ಕೆಂಪು ಈರುಳ್ಳಿನ ನಾವು ಒಪ್ಪಲಿಲ್ಲ  ನೋಡಿ.  ನಾವು  ಒಪ್ಪದಿರುವುದಕ್ಕೂ, ಈ ವಿದೇಶಿ ಈರುಳ್ಳಿಗೆ ಇಂಗ್ಲಿಷ್ ವಾರ್ತಾಪತ್ರಿಕೆಯವರು  “ಬಲ್ಬ್”  ಎಂದು ಕರೆಯುವುದಕ್ಕೂ  ಏನಾದರೂ ಸಂಬಂಧ ಇದೆಯೇ? ಎಂದು ನನಗೆ ಗೊತ್ತಿಲ್ಲ.  ಆದರೆ ಈ ಸಾರಿ ವಿದೇಶಿ ಈರುಳ್ಳಿ ಕಡಿಮೆ ಬೆಲೆ ಇದ್ದರೂ ಜನ ಸ್ವದೇಶಿ ಈರುಳ್ಳಿಗೇ ಮಣೆ ಹಾಕಿದ್ದರು.


ಮಳೆಗಾಲ ಮುಗಿತು, ಈಗ ಚಳಿಗಾಲ.  ಹೊಸ ಈರುಳ್ಳಿ ಬರುತ್ತಿದೆ ಎಂದಾಗ  ಆಕಾಶಕ್ಕೆ ಹೋದ ಬೆಲೆ  ಮತ್ತೆ ಭೂಮಿಗೆ ಬರುತ್ತೆ. ಈಗ ಈರುಳ್ಳಿ ಒಂದು ವಿಷಯವೇ ಅಲ್ಲ ಬಿಡಿ. ಮತ್ತೆ  ಹಳೆಯದೆಲ್ಲಾ ಮರೆತು ಹೊಸ ಈರುಳ್ಳಿ ತಿನ್ನಲು ಪ್ರಾರಂಭ ಮಾಡುತ್ತಾರೆ.ಸಾಮಾನ್ಯ ಜನರಿಗೆ ಈ ನಾಡಿನಲ್ಲಿ ಯಾವಾಗಲೂ ಬೆಲೆ ಸಿಗುವುದಿಲ್ಲ ಬಿಡಿ.

ಫೋಟೋ ಕೃಪೆ : The Indian Express

ಬೆಲೆ ಕಡಿಮೆ ಆಗಿದೆ ಎಂದು ಯಾರೂ ಹೇಳಬೇಕಾಗಿಲ್ಲ. ಹೋಟಲ್ ನಲ್ಲಿ ಸಲಾಡ್ ಜೊತೆಗೆ ಈರುಳ್ಳಿ ಇದೆ ಎಂದರೆ ಬೆಲೆ ಕಡಿಮೆ ಆಗಿದೆ ಎಂದೇ ಅರ್ಥ. ಈರುಳ್ಳಿ ದೋಸೆ ಈ ದಿನದ ವಿಶೇಷ ತಿಂಡಿ ಬೋರ್ಡ್ನಲ್ಲಿ  ಮತ್ತೆ ಬಂದಿದೆ.

ಗಾಡಿಯಲ್ಲಿ  ಈರುಳ್ಳಿ ಮಾರುವವರ ವರಸೆಯೇ ಬೇರೆ ಈಗ. “ಬಳ್ಳಾssssss..ರೀss” ಎಂದು ಕೂಗುತ್ತಾ  ಹೋಗುತ್ತಾನೆ.  “ಬಳ್ಳಾರಿ” ಎಂದು ಅವನು ಕೂಗುತ್ತಿರುವುದು  ಎಂದು ಅರ್ಥ  ಆಗುವುದು  ಹತ್ತಿರದಿಂದ ಕೇಳಿದಾಗ ಮಾತ್ರ. ಅಂದಹಾಗೆ ಬಳ್ಳಾರಿ ಎಂದು ಕೂಗಿದರೆ  ಈರುಳ್ಳಿ ಗಾಡಿ ಬಂದಿದೆ ಎಂದು ಅರ್ಥ. ಒಂದೇ  ಆಕಾರದ  ತಿಳಿಕೆಂಪು ಬಣ್ಣದ ಒಳ್ಳೆಯ ಈರುಳ್ಳಿಗಳನ್ನು ಚೆನ್ನಾಗಿ ಜೋಡಿಸಿಕೊಂಡು ಒಳ್ಳೆಯ ಗತ್ತಿನಿಂದ ಮಾರುವ ಕಾಲ ಇದು.  ಗಾಡಿಯವನು ಏನು ತಂದರೂ ಚೌಕಾಸಿ ಇಲ್ಲದೇ ವ್ಯಾಪಾರ ಮಾಡುವವರು ಇಲ್ಲ ಬಿಡಿ. ಅವನೂ ಅವಕ್ಕೆಲ್ಲ ತಯಾರಿಯಾಗಿಯೇ ಬಂದಿರುತ್ತಾನೆ. ತೆಗೆದುಕೊಳ್ಳುವವರಿಗೂ ಸಂತೋಷ. ಮಾರುವವನ ಲಾಭಕ್ಕೆ ಮೋಸ ಇಲ್ಲ. ಆದರೆ  ದಿನಕ್ಕೆ ಅವರಿಗೆ ಎಷ್ಟು ವ್ಯಾಪಾರ ಮಾಡುತ್ತಾರೆ. ಅದರಲ್ಲಿ ಎಷ್ಟು ಲಾಭ  ಬರುತ್ತದೆ? ಅದರಲ್ಲಿ ಎಷ್ಟರ ಮಟ್ಟಿಗೆ ಜೀವನ ಮಾಡಲು ಸಾಧ್ಯ?  ನನ್ನ  ಊಹೆಗೆ ಮೀರಿದ ವಿಷಯ.ಸಂಕ್ರಾಂತಿ ಮುಗಿಯಿತು ಎಂದರೆ ಇನ್ನು ಮದುವೆ ಮನೆಗಳಿಗೆ ಹೋಗುವ ಕಾಲ.  ಬಸ್ಸು, ಕಾರು, ರೈಲುಗಳಿಗೆ ಪ್ರಯಾಣ ಪ್ರಾರಂಭ. ಪ್ರಯಾಣದ ರೀತಿ ಯಾವುದೇ ಆದರೂ ಕಾಫೀ ಬ್ರೇಕ್ ಮಧ್ಯದಲ್ಲಿ ಇದ್ದೇ ಇರುತ್ತದೆಯಲ್ಲ. ಕಾಫೀ ಜೊತೆಗೆ  ಪಕೋಡ ನಿಶ್ಚಿತ. ಮಲೆನಾಡಿನ ದಾರಿಯಲ್ಲಿ ಇದ್ದರೆ  ವೃತ್ತಾಕಾರದ  ಗರಿಗರಿಯಾದ  ಈರುಳ್ಳಿ  ಹಾಕಿದ ಈ ಪಕೋಡ  ಬಾಯಲ್ಲಿ ಹೇಗೆ ಕರಗುತ್ತವೆ ನೋಡಿ…ಉತ್ತರ ಕರ್ನಾಟಕದ ದಾರಿಯಲ್ಲಿ ಪಕೋಡ ಇಲ್ಲ ಸ್ವಾಮಿ, ಅಲ್ಲಿ ಸಿಗುವುದೇ “ಕಾಂಧಾ ಬಜ್ಜಿ”. ಮೃದುವಾಗಿ ಬಾಯಲ್ಲಿ ಕರಗುವ ಇದು ಎಷ್ಟು ತಿಂದೆವು ಎಂದು ಗೊತ್ತಾಗುವುದಿಲ್ಲ. ಇನ್ನು ಹಳೇ ಮೈಸೂರಿನ ಪ್ರಾಂತ್ಯದಲ್ಲಿ ದಾರಿಯಲ್ಲಿ  ಸಿಗುವ ಈರುಳ್ಳಿ ಪಕೋಡ  ಕರಂ…ಕರಂ… ಎನ್ನುತ್ತಾ ಮಾಯವಾಗುತ್ತೆ ಬಾಯಲ್ಲಿ. ಆದರೂ ನೋಡಿ… ಮೆಣಸಿನ ಕಾಯಿ ಬೊಂಡ ಮಾಡಲು ಹೋಗಿ ಉಳಿದಿರುವ ಹಿಟ್ಟಿಗೆ ಈರುಳ್ಳಿನ ಬಿಲ್ಲೆ ತರಹ ಕತ್ತರಿಸಿ  ಮಾಡುವ ಬೊಂಡದ ರುಚಿ ಇನ್ನು ಯಾವುದರ  ಮುಂದೆಯೂ ಇಲ್ಲ. ಈಗೆಲ್ಲ “ಕಾಂಬೋ” ಸ್ಕೀಮ್ ಗಳ ಕಾಲ ನೋಡಿ.  ಅದರಲ್ಲೂ ಕಾಫೀ ಜೊತೆಗೆ ಕೊಡುವ ಎರಡೇ ಎರಡು ಈರುಳ್ಳಿ  ಪಕೋಡದ ಅಥವಾ ಬಜ್ಜಿಯ  ರುಚಿ   ಬಹಳ ಚೆನ್ನಾಗಿರುತ್ತೆ. ಎಲ್ಲಿ ತಿಂದರೂ ಅದೇ ರುಚಿ. ನಮ್ಮ ಜನ ಕೂಡ ಹಾಗೆ ಅಲ್ಲವೇ? ಪ್ರಾಂತ್ಯ ಯಾವುದಾದರೂ ಏನು? ಎಲ್ಲರೂ ಒಂದೇ ಮನದಲ್ಲಿ ಬೇಸಿಗೆ ಬಂತಲ್ಲ. ತರಕಾರಿ  ಬೆಲೆಗಳು ಮೇಲಕ್ಕೆ  ಹೋದಂತೆ  ಈರುಳ್ಳಿ ಬೆಲೆ ಕೆಳಗೆ ಇಳಿಯುತ್ತೆ!  ಈಗ ಈ ಈರುಳ್ಳಿ  ಮತ್ತೆ ವಾರ್ತಾಪತ್ರಿಕೆ ಯಲ್ಲಿ ಮೊದಲ ಪುಟದಲ್ಲಿ ಬರುವ ಕಾಲ.  ರೈತರು  ಬೆಲೆ ಇಲ್ಲದೇ ರಸ್ತೆಯಲ್ಲಿ ಸುರಿದಿರುವ ಈರುಳ್ಳಿ ರಾಶಿ ಚಿತ್ರಗಳು. ಆ ಒಂದು ರೂಪಾಯಿ ಈರುಳ್ಳಿಯನ್ನು ವೃತ್ತಾಕಾರದ ತುಂಡುಗಳನ್ನಾಗಿ ಮಾಡಿ ಪಿಂಗಾಣಿಯ ತಟ್ಟೆಯಲ್ಲಿ ಚಿಟ್ಟೆಯ ಆಕಾರದಲ್ಲಿ ಜೋಡಿಸಿ ನಮ್ಮ ಐದು ನಕ್ಷತ್ರದ  ಐಷಾರಾಮಿ ಹೋಟಲ್ ಗಳಲ್ಲಿ ಈರಳ್ಳಿ ಸಲಾಡ್  ಆಗಿ  ಕೊಡುವ ದರ ಮಾತ್ರ  ಒಂದು ಮೂಟೆ  ಈರುಳ್ಳಿ  ಬೆಲೆ ಆಗಿಯೇ ಇರುವುದು ಮಾತ್ರ ವಿಪರ್ಯಾಸ. ಅಂದ ಚಂದ ಇದ್ದರೆ ಅಲ್ಲವೇ  ನಾವು ಮಣೆ ಹಾಕುವುದು. ಇನ್ನೊಂದು ಕಡೆ ರಾಗಿ ಮುದ್ದೆಯ ಜೊತೆ ಒಂದು ಈರುಳ್ಳಿ. ಒಂದು ಮೆಣಸಿನಕಾಯಿ ನಂಜಿಕೊಂಡು ತಿನ್ನುವ ಜನರಿಗೇನೂ ಕಡಿಮೆ ಇಲ್ಲ ಬಿಡಿ.

ಫೋಟೋ ಕೃಪೆ : dobbernationloves

ಆದರೂ ನೋಡಿ, ಕೆಲವು ಸಾರಿ ಈ ಈರುಳ್ಳಿ ಪೂಜೆಗೆ ಬರಲ್ಲ ಎಂದು ಕೆಲವರು ಹೇಳುವುದು ಉಂಟು. ಕೆಲವರಿಗೆ  ದಸರಾದಲ್ಲಿ ಹತ್ತು ದಿನ, ಇನ್ನು ಕೆಲವರಿಗೆ  ಗುರುವಾರ, ಶನಿವಾರ  ಈರುಳ್ಳಿ ತಿನ್ನಬಾರದು ಎಂದು  ಯಾರೋ ಹೇಳಿದ್ದಾರೆ. ಆ ದಿನ ಮಾಡುವ ಉಪ್ಪಿಟ್ಟು, ಅವಲಕ್ಕಿ ಎಲ್ಲರೂ “ಫುಡ್ ಬೈ ಮಿಷ್ಟೇಕ್” ಎಂದು ಬೈದು ಕೊಂಡು ತಿನ್ನುವುದು ಸಾಮಾನ್ಯ. ಇನ್ನು ಅಂಬೋಡೆ ಈರುಳ್ಳಿ ಇಲ್ಲದೇ  ಮಾಡಿಬಿಟ್ಟರೆ ಅದು ಗಟ್ಟಿ ಆಗದೆ ಇರುವುದೇ? ನಾಳೆ ಗುರುವಾರ, ಏನಪ್ಪಾ ತಿಂಡಿ ಮಾಡೋದು? ಈರುಳ್ಳಿ ಇಲ್ಲದೆ ಇರುವ  ತಿಂಡಿ ಎನ್ನುವ ಚಿಂತೆ. ಹಿಂದಿನ ದಿನ ರಾತ್ರಿಯೇ ಪ್ರಾರಂಭ ಆಗಿರುತ್ತದೆ ಕೆಲವರಿಗೆ. ಕೆಲವರಿಗೆ ಮಕ್ಕಳಿಗೆ  ದೋಷವಿಲ್ಲ ಎಂದು ನಿಯಮ ಸ್ವಲ್ಪ ಕಡಿಮೆ ಆಗುತ್ತೆ. ಇರೋರು ಮೂರು ಜನಕ್ಕೆ ಎರಡೂ, ಮೂರು ತರಹ ತಿಂಡಿ ಮಾಡಲು  ಆಗುವುದಿಲ್ಲವಲ್ಲ ಎಂದು ಸಮಾಧಾನ ಮಾಡಿಕೊಳ್ಳುತ್ತಾರೆ ಕೆಲವರು. ಆದರೆ ಹಬ್ಬದ ದಿನ ಈರುಳ್ಳಿ ತಿನ್ನಬಾರದು ಎಂದರೆ ಹೇಗೋ ಮಾಡಿ ತಿನ್ನದೇ ಇರಬಹುದು. ಆದರೆ ನೋಡಿ, ಈರುಳ್ಳಿ  ನೆನೆಯಬಾರದು ಎಂದರೆ ಮಾತ್ರ ಬಹುಶಃ ಬಹಳ ಕಷ್ಟ.ಆದರೆ ನೋಡಿ ಈ ಈರುಳ್ಳಿ ಸಣ್ಣ, ದಪ್ಪ  ಹೇಗೆ ಇರಲಿ  ಅದರ ಸಿಪ್ಪೆ ಮಾತ್ರ ಒಂದೇ ತರಹ.  ಮೊದಲು ಎಲ್ಲದರ ಸಿಪ್ಪೆ ತೆಗೆಯಲೇ ಬೇಕು. ಅತ್ಯಂತ ತೆಳುವಾದ ಸಿಪ್ಪೆ. ಅಷ್ಟೇಲ್ಲಾ ಪದರಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಹೇಗೆ ಸಾಕುತ್ತದೆ ನೋಡಿ. ನಮ್ಮ ಸೂಕ್ಷ್ಮ ಮನಸ್ಸು ಕೂಡ ಹಾಗೆ. ಎಷ್ಟೆಲ್ಲಾ ವಿಷಯಗಳನ್ನು ಈ ಮನಸ್ಸು ಒಳಗೆ ಪದರ ಪದರವಾಗಿ ಜೋಪಾನವಾಗಿ ಇಟ್ಟು ಕೊಂಡಿರುತ್ತದೆ ಅಲ್ಲವೇ?.

ಫೋಟೋ ಕೃಪೆ : gardensalive

ಆದರೂ ಈರುಳ್ಳಿ ತೆಗೆದುಕೊಳ್ಳಬೇಕಾದರೆ ಅದರ ಬಣ್ಣ ನೋಡಿ ತೆಗೆದು ಕೊಳ್ಳುವವರೇ ಜಾಸ್ತಿ. ಸಿಟ್ಟು ಬಂದಾಗ ಮುಖ ಕೆಂಪಗೆ ಇರುತ್ತದೆಯಲ್ಲವೆ? ಹಾಗೇ ಈರುಳ್ಳಿ ಕಡುಕೆಂಪು ಇದ್ದರೆ  ಕಾರವಾಗಿ ಇರುತ್ತೆ. ಆದರೆ ಹೆಂಡತಿ ಮುಖ ಕೆಂಪು  ಆಗುವುದಕ್ಕೂ, ಪ್ರೇಯಸಿಯ ಕೆನ್ನೆ ಕೆಂಪಗೆ ಆಗುವುದಕ್ಕೂ ಬೇರೆಯದೇ ಅರ್ಥ ಇದೆ ಬಿಡಿ.  ಈರುಳ್ಳಿ  ಬಣ್ಣ ಸ್ವಲ್ಪ ತಿಳಿ ಆಗಿದ್ದರೆ ಘಾಟು ಕಡಿಮೆ. ತಿಳಿ ಬಣ್ಣ ಸೌಮ್ಯ ತಾನೇ? ಅದರಲ್ಲೂ ಗೊಂಚಲಲ್ಲಿ ಬರುವ ಈರುಳ್ಳಿ ಎಲ್ಲದಕ್ಕಿಂತ ಚೆನ್ನ ನೋಡಿ. ಕೂಡಿ ಬಾಳಿದರೆ  ಸ್ವರ್ಗ ಸುಖ ಅಲ್ಲವೇ?.

ಮೊನ್ನೆ ನನ್ನ ಬಾಲ್ಯ ಸ್ನೇಹಿತ ರಾಮಣ್ಣ ಅವನ ಮನೆಯವರ ಜೊತೆಗೆ ಮನೆಗೆ ಬಂದಿದ್ದ. ಎಲ್ಲರೂ  ಹಾಲಿನಲ್ಲಿ ಕುಳಿತು ಲೋಕಾಭಿರಾಮವಾಗಿ ಮಾತನಾಡುತ್ತಾ ಇರುವಾಗ ಇದ್ದಕ್ಕಿದ್ದಂತೆ  “ಅಲ್ಲಯ್ಯಾ ನೀನು ನಿನ್ನ ಹೆಂಡತಿಯನ್ನು ಎಷ್ಟು ಸಾರಿ ಕಣ್ಣೀರು ಹಾಕಿಸಿದ್ದೀಯಾ” ಎಂದು ಕೇಳಿದ.  ಇದೇನು ಇದ್ದಕ್ಕಿದ್ದಂತೆ ವಿಪಯ ಸೀರಿಯಸ್ ಆಗಿ ಬದಲಾವಣೆ ಆಯಿತಲ್ಲ ಎಂದು ನನಗೆ ಒಂದು  ಗಳಿಗೆ ಕಸಿವಿಸಿ ಆಯ್ತು.  ಅಳಿಸಿರುವುದಾ? ಇಲ್ಲವಲ್ಲ!  ಇಲ್ಲಪ್ಪ ನಾನು ಅಳಿಸಿಲ್ಲ ಎಂದೇ.  ನಿಜಾನಾ, ಇನ್ನೊಮ್ಮೆ ಜ್ಞಾಪಕ ಮಾಡಿಕೋ ಎಂದ ರಾಮಣ್ಣ. ನನ್ನ ಹೆಂಡತಿ ಈಗ ನನ್ನ ಬೆಂಬಲಕ್ಕೆ ಬಂದಳು. “ಇಲ್ಲಾರೀ, ಅವರು ನನಗೆ ಚೆನ್ನಾಗಿ ನೋಡಿಕೊಳ್ಳುತ್ತಾರೆ”  ಎಂದಳು. “ಅರೆ ನಾನೆಲ್ಲಿ ಚೆನ್ನಾಗಿ ನೋಡಿಕೊಳ್ಳಲ್ಲಾ ಎಂದು ಹೇಳಿದೆ?. ನಾನು ಕೇಳಿದ್ದು,ಬರೀ ಕಣ್ಣೀರಿನ ವಿಷಯ ಅಷ್ಟೇ” ಎಂದಾಗ  ಎನು ಹೇಳಬೇಕು ಎಂದು ನನಗೆ ಗೊತ್ತಾಗಲಿಲ್ಲ.  “ಹಾಗಾದರೆ ಈಗ ಒಂದು ವಿಷಯ ಖಾತ್ರೀ  ಅಯ್ತು. ನಿಮ್ಮ ಮನೆಯಲ್ಲಿ ದಿನವೂ ಈರುಳ್ಳಿ ಹೆಚ್ಚುವವನು ನೀನೆ ಅಂಥಾ”.  ಈಗ ಎಲ್ಲರಿಗೂ ನಗು ತಡೆಯಲಾಗಲಿಲ್ಲ. ರಾಮಣ್ಣ ಹಾಗೆ… ಎಲ್ಲಿದ್ದರೂ ಎಲ್ಲರಿಗೂ ಜೀವನದಲ್ಲಿ  ಜೀವ ತುಂಬಿಸುತ್ತಾನೆ.

ಅಂದ ಹಾಗೆ… ನೀವೆಲ್ಲಾ ಮನೆಯಲ್ಲಿ ಈರುಳ್ಳಿ ಹೆಚ್ಚಿ ಕೊಡುತ್ತಿದ್ದೀರೀ ತಾನೆ?. ಇಲ್ಲದಿದ್ದರೆ ಇನ್ನೂ ಮೇಲಾದರೂ ಈರುಳ್ಳಿ ಹೆಚ್ಚಿ ಕೊಡಿ. ಪತ್ನಿಯ ಮೇಲಿನ ಪ್ರೀತಿಯ ನಿರೂಪಿಸಿ…


  • ಎನ್. ವಿ.ರಘುರಾಂ (ನಿವೃತ್ತ ಅಧೀಕ್ಷಕ ಅಭಂತರ (ವಿದ್ಯುತ್) ಕ.ವಿ.ನಿ.ನಿ)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW