ಆಕ್ಸಿಟೊಸಿನ್ ಚುಚ್ಚುಮದ್ದಿನ ಬಗ್ಗೆ ತಿಳಿದಿರಲಿ – ಎನ್.ಬಿ.ಶ್ರೀಧರ



ಕರು ಸತ್ತ ಮೇಲೆ ತೊರೆ ಬಿಡದ ಎಮ್ಮೆಗಳಿಗೆ ಆಕ್ಸಿಟೊಸಿನ್ ಚುಚ್ಚುಮದ್ದು ನೀಡಿ ನಿಮಿಷದೊಳಗೆ ಹಾಲನ್ನು ಇಳಿಸಿ ಕೊಳ್ಳುತ್ತಾರೆ ಗೋಪಾಲಕರು. ಕೆಲವೊಮ್ಮೆ ಮನೆ ಮನೆ ಬಾಗಿಲಲ್ಲಿಗೆ ಬಂದು “ಶುದ್ಧ ಹಾಲು ನೀಡುವುದಾಗಿ ಗೋಪಾಲಕರು ಈ ಚುಚ್ಚುಮದ್ದನ್ನು ನೀಡಿ ಹಾಲು ಇಳಿಸಿ ಮಾರಿದ್ದಿದ್ದೆ.ಈ ಆಕ್ಸಿಟೊಸಿನ್ ಚುಚ್ಚು ಇದನ್ನು “ಲವ್ ಹಾರ್ಮೋನು”“ಪ್ರೀತಿಯ ಹಾರ್ಮೋನು”ಮತ್ತೊಂದು ಹೆಜ್ಜೆ ಮುಂದೆ ಹೋಗಿ ಇದನ್ನು “ಪಾರ್ಟಿ ಹಾರ್ಮೋನು” ಎಂದೂ ಕರೆಯುತ್ತಾರೆ.ಆಕ್ಸಿಟೊಸಿನ್ ಚುಚ್ಚುಮದ್ದಿನ ಬಗ್ಗೆ ಜಾಗ್ರತೆ ಎನ್ನುತ್ತಾರೆ ಖ್ಯಾತ ಪಶುವೈದ್ಯ ಎನ್.ಬಿ.ಶ್ರೀಧರ ಅವರು.ಮುಂದೆ ಓದಿ…

“ಹಾಲು ಜಾಸ್ತಿ ಆಗ್ಲಿಕ್ಕೆ ದನಕ್ಕೆ ಆಕ್ಸಿಟೋಸಿನ್ ಚುಚ್ತಾರಂತೆ ಕಣ್ರೀ…ಅದನ್ನು ಕುಡಿದ್ರೆ #ಕ್ಯಾನ್ಸರ್ ಬರ್ತದಂತೆ.. ಹೆಣ್ ಮಕ್ಳು ಬೇಗ ಮೆಚುರಿಟಿ ಆಗ್ತಾರಂತೆ.. ಹುಡುಗ್ರಿಗೆ ಗಡ್ಡ ಮೀಸೆನೆ ಬರಲ್ವಂತೆ…
ದೇವ್ರೆ.!!..ಈ ಆಕ್ಸೊಟೋಸಿನ್ ತರಕಾರಿಗಳಿಗೆ ಇಂಜೆಕ್ಷನ್ ಕೊಟ್ಟು ದಪ್ಪ ಬೆಳ್ಸ್ತಾರಂತೆ.. ತರ್ಕಾರಿ ತಿಂದ್ರೂನೂ ತೊಂದ್ರೆಯಂತೆ!!..

“ಆಕ್ಸಿಟೋಸಿನ್ ಪಾರ್ಟಿ ಅಂತ ಶ್ರೀಮಂತರೆಲ್ಲಾ ರಾಜಸ್ಥಾನದಲ್ಲಿ ಮಾಡ್ತಾರಂತೆ.. ಹೆಣ್ಮಕ್ಕಳು ಚಂದ ಕಾಣಲು ಬಳಸ್ತಾರಂತೆ” ಇತ್ಯಾದಿ ಅನೇಕ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿಡಾಡುತ್ತಿದ್ದವು.

ಭಾರತದ ಔಷಧ ನಿಯಂತ್ರಕರು ಸಹ ಸಂಬಂಧಿಸಿದ ಎಲ್ಲ ಔಷಧ ತಯಾರಕ ಕಂಪನಿಗಳ ಸಭೆ ಕರೆದು ಈ ವಿಷಯವನ್ನು ಚರ್ಚಿಸಿ ಈ ಹಾರ್ಮೋನು ಜನ ಸಾಮಾನ್ಯರ ಹಾಗೂ ರೈತರ ಕೈಗೆ ಸುಲಭವಾಗಿ ಸಿಗದಂತೆ ಕಟ್ಟಪ್ಪಣೆ ಮಾಡಿದರು. ಇದು ಇನ್ನೇನು ಬ್ಯಾನಾಗಲಿದೆ ಅಂದಾಗ ಅದರ ಬಗ್ಗೆ ಸಂಬಂಧಿಸಿದವರಿಗೆ ನಿಜ ವಿಷಯ ಗೊತ್ತಾಗಿ ಸದ್ಯ ಅದು ವೈದ್ಯರ ಚೀಟಿ ಇಲ್ಲದೇ ನೀಡದ ಔಷಧಗಳ ಪಟ್ಟಿಗೆ ಸೇರಿದೆ. ಔಷಧಗಳ ಬಗ್ಗೆ ಹೀಗೆಯೇ ಅನೇಕ ಮಿಥ್ಯ-ಸತ್ಯಗಳು ಇದ್ದೇ ಇವೆ.

ಫೋಟೋ ಕೃಪೆ : psiloveyou

ಏನಿದು ಆಕ್ಸಿಟೋಸಿನ್? ಈ ಹಾರ್ಮೋನಿಗೆ “#ಲವ್_ಹಾರ್ಮೋನು” ಅಥವಾ “ಪ್ರೀತಿಯ ಹಾರ್ಮೋನು” ಅಥವಾ “ಮುದ್ದಿನ ಹಾರ್ಮೋನು” ಅಂತಲೂ ಕರೆಯುತ್ತಾರೆ. ಮತ್ತೊಂದು ಹೆಜ್ಜೆ ಮುಂದೆ ಹೋಗಿ ಇದನ್ನು “ಪಾರ್ಟಿ ಹಾರ್ಮೋನು” ಎಂದೂ ಕರೆಯುತ್ತಾರೆ. ಅಂದರೆ ಉತ್ತರ ಅಮೇರಿಕಾ ಮತ್ತು ಭಾರತದ ಕೆಲವು ಭಾಗಗಳಲ್ಲಿ ಹೆಣ್ಣುಮಕ್ಕಳು ಬೇಗ ಪ್ರೌಢಾವಸ್ಥೆಗೆ ಬರಲು ಈ ಹಾರ್ಮೋನನ್ನು ಉಪಯೋಗಿಸುತ್ತಾರೆ ಎಂಬ ಹೇಳಿಕೆ ಇದೆ.

ಮೆದುಳಿನ ಪಿಟ್ಯುಟರಿ ಹಿಂಬಾಗದ ಗ್ರಂಿಥಿಯಲ್ಲಿ ಉತ್ಪಾದನೆಯಾಗುವ ಈ ಪೆಪ್ಟೈಡ್ ಹಾರ್ಮೋನು. ಬಿಡುಗಡೆಯಾದ ತಕ್ಷಣ ಕ್ಷಣ ಮಾತ್ರದಲ್ಲಿ ಇದು ರಕ್ತದಲ್ಲಿ ಸೇರಿ ದೇಹದ ಎಲ್ಲಾ ಭಾಗದಲ್ಲಿರುವ #ಆಕ್ಸಿಟೋಸಿನ್ ರಿಸೆಪ್ಟಾರುಗಳನ್ನು ತಲುಪಿ ಅವುಗಳ ಮೂಲಕ ತನ್ನ ಕಾಯಕ ಪ್ರಾರಂಭಿಸುತ್ತದೆ. ಗರ್ಭಕೋಶದ ಪದರುಗಳಲ್ಲಿ ಈ ಆಕ್ಸಿಟೋಸಿನ್ ರಿಸೆಪ್ಟಾರುಗಳಿರುವುದರಿಂದ ಅವುಗಳನ್ನು ಪ್ರಚೋದಿಸಿ ಗರ್ಭಕೋಶವನ್ನು ಸಂಕುಚನ ವಿಕಸನಗೊಳಿಸಿ ಕರು ಜನನವಾಗಲು ಕಾರಣವಾಗುತ್ತದೆ. ಹಾಗೇಯೆ ಕೆಚ್ಚಲಿನ ಮಾಂಸಖಂಡಗಳನ್ನು ಸಂಕುಚನಗೊಳಿಸಿ ಹುಟ್ಟಿದ ಕರುವಿಗೆ ತಕ್ಷಣ ಹಾಲು ದೊರೆಯುವಂತೆ ಮಾಡುತ್ತದೆ. ಕರು ಮತ್ತು ತಾಯಿಯ ಮೆದುಳಿನ ಜೀವ ಕೋಶದ ಮೇಲೆ ಕಾರ್ಯ ನಿರ್ವಹಿಸಿ ತಾಯಿ ಕರುವಿನ ಪ್ರೇಮ ಸಂಬಂಧ ಜಾಸ್ತಿಯಾಗುವಂತೆ ಮಾಡುತ್ತದೆ.ಎಲ್ಲ ಪ್ರಾಣಿಗಳಲ್ಲಿ ಈ ಕ್ರಿಯೆ ಸಾಮಾನ್ಯ. ಇದು ನೈಸರ್ಗಿಕ ಕ್ರಿಯೆ.

ಫೋಟೋ ಕೃಪೆ : youtube

ಕಣ್ಣು ಕಣ್ಣು ಸೇರಿದಾಗ ಪ್ರಣಯದ ಆಸಕ್ತಿಯನ್ನು ಗಂಡು ಹೆಣ್ಣುಗಳಲ್ಲಿ ಚಿಗುರಿಸಿ, ಪ್ರೇಮ ಚಿಗುರಿಸಿ ಸಂತಾನೋತ್ಪತ್ತಿಗೆ ಪ್ರೇರಿಪಿಸುವುದು ಈ ಹಾರ್ಮೋನಿನ ಒಂದು ಕರ್ತವ್ಯ. ಕೋಳಿ ಮೊಟ್ಟೆಗೆ ಕಾವು ಕೊಡುವುದು, ಗರ್ಭ ಧರಿತ ಶ್ವಾನ ಮರಿಗಳಿಗೆ ಗೂಡು ಮಾಡಲು ಬಟ್ಟೆ ಬರೆ ಒಟ್ಟು ಹಾಕುವುದು, ಹೆಣ್ಣು ಹಕ್ಕಿಗೆ ಗೂಡು ಕಟ್ಟಲು ಕಡ್ಡಿಗಳ ಸಂಗ್ರಹದ ಜೋಡಣೆಗೆ ಪ್ರೇರಣೆ ಇತ್ಯಾದಿ ಇದರ ಕರ್ತವ್ಯ. ಹಾಗೆಯೇ ಸಮಸ್ಥ ಪ್ರಾಣಿ ಸಂಕುಲಕ್ಕೆ ಅವುಗಳ ಕುಲದ ಅಭಿವೃದ್ಧಿಗೆ ಪ್ರೇರಣೆ ಈ ಹಾರ್ಮೋನು. ಅದಕ್ಕೆ ಇದಕ್ಕೆ “ಲವ್ ಹಾರ್ಮೋನು” ಅಥವಾ “ಪ್ರೀತಿಯ ಹಾರ್ಮೋನು” ಅಂತ ಕರೆಯೋದು.

ಮಾತೃ ಪ್ರೇಮ, ಪಿತ್ರ ಪ್ರೇಮ ಮತ್ತು ದೇಶ ಪ್ರೇಮಕ್ಕೂ ಈ ಹಾರ್ಮೋನಿಗೂ ಸಹ ತಳುಕು ಹಾಕುತ್ತಿದ್ದಾರೆ ವಿಜ್ಞಾನಿಗಳು!!. ಮುದ್ದಾದ ಮಗುವನ್ನು ಅಥವಾ ಮುದ್ದಾದ ಪ್ರಾಣಿಯನ್ನು ನೋಡಿದಾಗ ಅದನ್ನು ಎತ್ತಿ ಮುದ್ದಾಡಬೇಕೆಂಬ ಬಯಕೆ ಬರುವುದೂ ಈ ಆಕ್ಸಿಟೊಸಿನ್ ಹಾರ್ಮೋನಿನಿಂದಲೇ!!. ಅದಕ್ಕೇ ಇದನ್ನು ಮುದ್ದಿನ ಹಾರ್ಮೋನು” ಅಂತಲೂ ಕರೆಯುವುದು.
ಅನೇಕ ಜಾತಿಯ ಪ್ರಾಣಿಗಳಲ್ಲಿ ಹೆಣ್ಣು ಸಂಗಾತಿಯೊಂದಿಗೆ ಸುಖಿಸಲು ಪರಸ್ಪರ ಕಾದಾಡಿ ಗೆದ್ದ ಪ್ರಾಣಿಗೆ ಸಿಗುವ ಅವಕಾಶಕ್ಕೆ ಪ್ರೇರೇಪಣೆ ನೀಡುವುದೂ ಇದೇ ಹಾರ್ಮೋನು ಎಂಬ ಪ್ರತೀತಿ ಇದೆ. ಅಂದರೆ ಪ್ರಾಣಿಗಳಲ್ಲಿ ದೈಹಿಕವಾಗಿ “ಬಲಶಾಲಿಯದೇ ಬದುಕು” ಎನ್ನುವುದು ಪೃಕೃತಿಯ ನಿಯಮವಾಗಿರುವುದರಿಂದ ಸದೃಢವಾದ, ತನ್ನನ್ನು ತಾನು ಅಪಾಯದಿಂದ ರಕ್ಷಿಸಿಕೊಳ್ಳಬಲ್ಲ “ಮರಿ” ಯನ್ನು ಪಡೆಯಲು ಬಲಶಾಲಿ ತಂದೆ ತಾಯಿಗಳಿಗೆ ಹುಟ್ಟಿದ ಮರಿಯಿಂದ ಮಾತ್ರ ಸಾಧ್ಯ ಎನ್ನುವ ಪೃಕೃತಿಯ ಸಹಜ ನ್ಯಾಯ ಪಾಲನೆಗೂ ಸಹ ಈ ಹಾರ್ಮೋನೇ ಕಾರಣ ಎನ್ನುವುದು ಪ್ರತೀತಿ. ಮನುಷ್ಯರಲ್ಲಿ ಈ ನಿಯಮ ಉಲ್ಟಾ. ಇಲ್ಲಿ ಹಣವಿದ್ದರೆ ಮಾತ್ರ ಆತ ಬಲೀಷ್ಠ.. ಇರಲಿ.. ಸಮಾಜದಲ್ಲಿ ಬಹಳ ಸಾಮಾನ್ಯವಾಗಿರುವ “ಸ್ವಜಾತಿ ಪ್ರೇಮ” ವೂ ಸಹ ಈ ಆಕ್ಸಿಟೋಸಿನ್ ಎಂಬ “ಮನೆಮುರುಕ” ಹಾರ್ಮೋನಿನದೇ ಎಂಬುದು ಕೆಲ ಲೇಖನಗಳ ಅಂಬೋಣ.. ಆದರೂ ಈ ಕುರಿತ ವಿಸ್ತೃತ ಸಂಶೋಧನೆ ಆಗಬೇಕೇನೋ?!

ಫೋಟೋ ಕೃಪೆ : thenewsminute

ಈ ಹಾರ್ಮೋನನ್ನು ಹೆಂಗಳೆಯರಲ್ಲಿ ಗರ್ಭಕೋಶದ ಜಡತ್ವದಿಂದ ಪ್ರಸವ ತಡವಾದರೆ, ಅಥವಾ ಹಾಲೂಡಿಸುವ ಸಾಮರ್ಥ್ಯ ಕಡಿಮೆಯಾದರೆ ಔಷಧಿಯಾಗಿ ಬಳಸುತ್ತಿದ್ದರು. ಹಾಗೆಯೇ ಜಾನುವಾರುಗಳಲ್ಲಿ ತೊರೆ ಬಿಡಲು ಅಥವಾ ಎಲ್ಲಾ ಸರಿಯಿದ್ದು ಪ್ರಸವ ತಡವಾದರೆ ಈ ಹಾರ್ಮೋನನ್ನು ವೈದ್ಯರುಗಳು ಬಳಸುವುದು ಬಹಳ ಸಾಮಾನ್ಯ ಪದ್ಧತಿಯಾಗಿತ್ತು. ಆದರೆ ವೈದ್ಯರ ಚೀಟಿಯ ಹೊರತಾಗಿಯೂ ರೈತರು ಔಷಧ ಅಂಗಡಿಗಳಿಂದ ಇದನ್ನು ಖರೀದಿಸಿ, ಅವರ ಜಾನುವಾರುಗಳಿಗೆ ಅವರೇ ಚುಚ್ಚಿಕೊಂಡು ತೊರೆ ಬಿಡಿಸಿ ಹಾಲು ಕರೆದುಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿ ಹೋಯಿತು. ಅಕಸ್ಮಾತಾಗಿ ಕರು ಸತ್ತ ಮೇಲೆ ಜಪ್ಪಯ್ಯ ಎಂದರೂ ತೊರೆ ಬಿಡದ ಎಮ್ಮೆಗಳಿಗೆ ಇದನ್ನು ನೀಡಿದರೆ ನಿಮಿಷದೊಳಗೆ ಅವಕ್ಕರಿಯದಂತೆ ಹಾಲನ್ನು ಇಳಿಸಿ ಬಿಡುತ್ತವೆ. ಕೆಲವೊಮ್ಮೆ ಮನೆ ಮನೆ ಬಾಗಿಲಲ್ಲಿಯೇ “ಶುದ್ಧ” ಹಾಲು ಬೇಕೆಂದಾಗ ಹಣ ಬಾಕ ಗೋಪಾಲಕರು ಈ ಚುಚ್ಚುಮದ್ದನ್ನು ನೀಡಿ ಹಾಲು ಇಳಿಸಿ ಮಾರಿದ್ದಿದ್ದೆ. ಅದರಲ್ಲೂ ಜಾನುವಾರು ದಳ್ಳಾಳಿಗಳು, ದನ ವ್ಯಾಪಾರಸ್ಥರು ಈ ಹಾರ್ಮೋನನ್ನು ಜೇಬಿನಲ್ಲಿಯೇ ಇಟ್ಟುಕೊಂಡು ತಿರುಗಾಡಲಾರಂಭಿಸಿದ್ದು ದುರಂತ. ಎರಡೆರಡು ದಿನ ಹಾಲು ಕರೆಯದೇ ದನಕ್ಕೆ ಸತಾಯಿಸಿ ಅದಕ್ಕೆ ಅಕ್ಸಿಟೋಸಿನ್ ನೀಡಿ ಹಸುವನ್ನು ಕೊಳ್ಳಲು ಬಂದ ರೈತರ ರೈತರ ಸಮ್ಮುಖದಲ್ಲಿ ಡಬಲ್ ಹಾಲು ಕರೆದು ತ್ರಿಬಲ್ ಹಣ ವಸೂಲಿ ಮಾಡಿ ಮೋಸ ಮಾಡಿದ್ದೂ ಇದ್ದೇ ಇದೆ. ಆದರೆ ಈ ಹಾರ್ಮೋನು ಯಾವುದೇ ಕಾರಣಕ್ಕೂ ಹಾಲಿನ ಉತ್ಪಾದನೆ ಜಾಸ್ತಿ ಮಾಡುತ್ತದೆ ಎನ್ನುವುದಕ್ಕೆ ಪುರಾವೆ ಇಲ್ಲ. ಇದ್ದ ಹಾಲನ್ನು ಬಿಡುಗಡೆ ಮಾಡುತ್ತದೆ ಅಷ್ಟೇ!!. ಜಾನುವಾರುಗಳ ಆರೋಗ್ಯದ ಮೇಲೆ ಗುರುತರ ಪರಿಣಾಮ ಬೀರಲಾರದು ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.

“ಬೇನೆ” ಎಂದರೆ ಹೆರಿಗೆ ಬೇನೆಯ ಈ ಹಾರ್ಮೊನನ್ನು ಇದನ್ನು ಯಾಕೆ “ಬ್ಯಾನ್” ಮಾಡಲು ಹೊರಟಿದ್ದರು ಎಂಬುದನ್ನು ತಿಳಿದರೆ ವಿಜ್ಞಾನದ ಬಗ್ಗೆ ಜನರಿಗಿರುವ ತಾತ್ಸಾರ ಕಂಡು ನೀವು ಖಂಡಿತಾ ಆಶ್ಚರ್ಯ ಪಡುತ್ತೀರಿ..

ಫೋಟೋ ಕೃಪೆ : hindi.news18

ಎಲ್ಲಾ ರಾಸಾಯನಿಕಗಳು, ಔಷಧಗಳು ಆರೋಗ್ಯಕ್ಕೆ ಧಕ್ಕೆ ತರುವವು, ಅವುಗಳ ಇರುವಿಕೆ ಬೇಡವೇ ಬೇಡ ಎನ್ನುವ ಒಂದು ಗುಂಪೊಂದು ಈ ಹಾರ್ಮೋನನ್ನು ಸಿಕ್ಕಾಪಟ್ಟೆ ಪ್ರಮಾಣದಲ್ಲಿ ಜಾನುವಾರುಗಳ ಮೇಲೆ ರೈತರು ಬಳಸಿ ಅದರ ಹಾಲನ್ನು ಕುಡಿದಾಗ ಹಾಲಿನಲ್ಲಿ ಇದರ ಅಂಶ ಬಂದು ಇದರಿಂದ ಹೆಣ್ಣು ಮಕ್ಕಳು ಬೇಗ ಮೈನೆರೆದರೆ ಗಂಡು ಮಕ್ಕಳ ಗಡ್ಡ ಮೀಸೆಗಳು ಚಿಗುರಿ ಬೇಗ ಪ್ರೌಢಾವಸ್ಥೆಗೆ ತಲುಪುವ ಸಾಧ್ಯತೆಯಿರುವುದರಿಂದ ಈ ಹಾರ್ಮೋನನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರದಲ್ಲಿ ಮೊರೆಯಿಟ್ಟರು.ಆದರೆ ವಾಸ್ತವವೇ ಬೇರೆ. ಆಕ್ಸಿಟೋಸಿನ್  ಅಮಿನೋ ಆಮ್ಲಗಳಿಂದ ರಚಿತವಾದ ಹಾರ್ಮೋನು. ತೊರೆ ಬಿಡಲು ಇದನ್ನು ೫ ಯುನಿಟ್ ಚುಚ್ಚುಮದ್ದಿನ ಮೂಲಕ ನೀಡಿದಾಗ ಇದರ ಪರಿಣಾಮ ಕೇವಲ ೫-೭ ನಿಮಿಷ ಮಾತ್ರ ಇರುತ್ತದೆ. ಈ ಅವಧಿಯೊಳಗೆ ಹಾಲು ಕರೆದುಕೊಳ್ಳಬೇಕು. ಪಿತ್ತಜನಕಾಂಗವೆಂಬ ಶರೀರದೊಳಗೆ ಬರುವ ಎಲ್ಲಾ ವಸ್ತುಗಳನ್ನು ಮುಲಾಜಿಲ್ಲದೇ ಕಟ್ಟು ಮಾಡಿ ಬಿಸಾಕುವ ಅಂಗದಿಂದ ಇದು ಚಿಂದಿಯಾಗಿ ಮೂತ್ರಜನಕಾಂಗದಿಂದ ಸೋಸಲ್ಪಟ್ಟು ಶರೀರ ಬಿಟ್ಟು ತೊಲಗುತ್ತದೆ. ಈ ಕ್ರಿಯೆ ೧೦-೨೦ ನಿಮಿಷದಲ್ಲಿ ನಡೆಯುತ್ತದೆ. ಹಾಲಿನಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಈ ಹಾರ್ಮೋನು ಮತ್ತದರ ಕೆಲವು ಅಮೈನೋ ಆಮ್ಲಗಳ ತುಣುಕು ಬಂದರೂ ಸಹ, ಅದು ಆರೋಗ್ಯಕ್ಕೆ ಕೆಡುಕು ಎನ್ನಲು ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ನೈಸರ್ಗಿಕವಾಗಿ ತೊರೆ ಬಿಟ್ಟಾಗ ಹೆಚ್ಚಿನ ಹಾರ್ಮೋನು ಪ್ರಮಾಣ ಹಾಲಿನಲ್ಲಿರುತ್ತದೆ ಎನ್ನುವುದಕ್ಕೆ ಅನೇಕ ಪುರಾವೆಗಳಿವೆ. ಆದರೆ ಹಾಲನ್ನು ಕಾಯಿಸಿದಾಗ ಇವೆಲ್ಲವೂ ನಿಷ್ಕ್ರಿಯಗೊಳ್ಳುವುದರಿಂದ ಹಾಲನ್ನು ಸೇವಿಸಿದರೆ ಯಾವುದೇ ದೈಹಿಕ ಅಪಾಯಗಳಿಲ್ಲ ಎನ್ನುವುದು ಪ್ರಮಾಣಿತ.

ಭಾರತದಲ್ಲಿ ಕಾಯಿಸದೇ ಹಾಲನ್ನು ಬಹುತೇಕರು ಕುಡಿಯುವುದಿಲ್ಲ. ಹಾಲನ್ನು ಕುದಿಸಿದರೆ ಹಾರ್ಮೋನು ನಿರ್ಗುಣ ಗೊಳ್ಳುತ್ತದೆ. ಒಂದೊಮ್ಮೆ ಹಾರ್ಮೋನು ಇರುವ ಹಸಿ ಹಾಲನ್ನು ಸೇವಿಸಿದರೂ ಸಹ, ಹೊಟ್ಟೆಯೊಳಗೆ ಇರುವ ಜಠರಾಮ್ಲದಿಂದ ಜೀರ್ಣಗೊಳ್ಳುವುದು ಖಚಿತ. ಕರುಳಿನಲ್ಲಿರುವ ಕಿಣ್ವಗಳು ಈ ಹಾರ್ಮೋನನ್ನು ಚೂರು ಚೂರು ಮಾಡಬಲ್ಲವು. ಅದು ರಕ್ತಕ್ಕೆ ಸೇರುವ ಪ್ರಶ್ನೆ ದೂರವೇ ಉಳಿಯಿತು. ಹೀಗಿದ್ದ ಪಕ್ಷದಲ್ಲಿ ಹಾರ್ಮೋನಿನ ದುಷ್ಪರಿಣಾಮ ಹೇಗೆ ಸಾಧ್ಯ?!. ಸಾಧ್ಯವೇ ಇಲ್ಲ. ಈ ಕಾರಣದಿಂದಲೇ ಈ ಹಾರ್ಮೋನು ದುರುಪಯೋಗಗೊಳ್ಳಲಿದ್ದು ಅದನ್ನು ಬ್ಯಾನ್ ಮಾಡಬೇಕೆಂದು ದುಂಬಾಲು ಬಿದ್ದ ಮೇಲೆ ಅದನ್ನು ವೈದ್ಯರು ಚೀಟಿ ಕಡ್ಡಾಯವಾಗಿ ನೀಡುವುದರ ಪಡೆಯಬೇಕಾದ ಔಷಧದ ಪಟ್ಟಿಯಲ್ಲಿ ಇದರ ಸ್ಥಾನ ಬಿಗಿಗೊಂಡಿದ್ದು.



ಸಹ ಅದರ ಉಪಯೋಗ ತರಕಾರಿ ಮತ್ತು ಹಣ್ಣುಗಳಲ್ಲಿ ಎಂಬುದು ಪ್ರಶ್ನಾರ್ಹವಾದ್ರೂ ಅದಕ್ಕೆ ತಕ್ಕ ಆಧಾರಗಳಿಲ್ಲ. ತರಕಾರಿಗಳನ್ನು ಬೆಳೆಸುವಾಗ ತರಹೆವಾರಿ ರಾಸಾಯನಿಕಗಳನ್ನು ಬಳಸುವುದು ನಿಜವಾದರೂ ತರಕಾರಿಗಳಲ್ಲಿ ಈ ಪ್ರಾಣಿ ಹಾರ್ಮೋನು ಏನು ಮಾಡುತ್ತದೆ? ಯಾಕೆ ಅದನ್ನು ಉಪಯೋಗಿಸುತ್ತಾರೆ? ನಿಜವಾಗಿಯೂ ಅದನ್ನು ತರಕಾರಿ ಬೆಳೆಸುವಲ್ಲಿ ಮತ್ತು ಗೊಬ್ಬರದ ಖರ್ಚು ಕಡಿಮೆ ಮಾಡಲು ಉಪಯೋಗಿಸುತ್ತಾರೆಯೇ? ಎಂಬ ಬಗ್ಗೆ ಯಾವುದೇ ವೈಜ್ಞಾನಿಕ ಉಲ್ಲೇಖಗಳು ಕಡಿಮೆ.ಕಲ್ಲಂಗಡಿ ಹಣ್ಣನ್ನು ಜಾಸ್ತಿ ಕೆಂಪು ಕಾಣಲು ಮತ್ತು ಬೇಗ ಹಣ್ಣಾಗಲು ಈ ಹಾರ್ಮೋನು ಬಳಸುತ್ತಾರೆ ಎಂದು ಕೆಲವೊಂದು ಯು ಟ್ಯೂಬ್ ವರದಿಗಳಿವೆಯೇ ವಿನ: ಆ ಬಗ್ಗೆ ಸಬೂತುಗಳಿಲ್ಲ. ಅದುದರಿಂದ ಇದೊಂದು ಗೊಂದಲವೇ ಹೊರತು ಸತ್ಯವಿರಲಿಕ್ಕಿಲ್ಲ.

ಒಂದು ಔಷಧದ ಬಗ್ಗೆ ಸಾರ್ವಜನಿಕ ಚರ್ಚೆಯಾದಾಗ ಅದರ ಬಗ್ಗೆ ಸತ್ಯಾಂಶಗಳನ್ನು ತಿಳಿಯುವುದು ಮತ್ತು ತಿಳಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ.

ಬ್ಯಾನಾಗಿರುವ ಎಲ್ಲ ವಸ್ತುಗಳೂ ಕಳ್ಳ ದಾರಿಯಲ್ಲಿ ಸಿಗುವ ನಮ್ಮ ಪರಿಸರದಲ್ಲಿ ನಮ್ಮಲ್ಲಿ ಜಾಗೃತಿ ಆವಶ್ಯ. ಔಷಧಿ ಯಾವುದೇ ಆದರೂ ಅದರ ಸದುಪಯೋಗವಾಗಬೇಕು. ವೈದ್ಯರೇ ಅದನ್ನು ಬರೆದು ಕೊಡಬೇಕು. ಇದರ ದುರುಪಯೋಗವಾಗಬಾರದು ಮತ್ತು ಅದರ ಗುಣಾವಗುಣಗಳ ಬಗ್ಗೆ ಸತ್ಯ ತಿಳಿಯಬೇಕು ಎನ್ನುವುದೇ ಈ ಲೇಖನದ ಉದ್ದೇಶ.


  • ಡಾ.ಎನ್.ಬಿ.ಶ್ರೀಧರ  (ಪ್ರಾಧ್ಯಾಪಕರು, ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW