ಸಾಧಿಸಬೇಕು ಎನ್ನುವ ಛಲವಿರುವವರಿಗೆ ತಡೆಯುವುದು ಅಸಾಧ್ಯ ಎನ್ನುವುದಕ್ಕೆ ಉತ್ತಮ ಉದಾಹರಣೆ ಹರ್ಷಿಯಾ ಬಾನು ಅವರು. ಹರ್ಷಿಯಾ ಅವರಿಗೆ ಹುಟ್ಟಿನಿಂದಲೂ ಅಂಧತ್ವ ಕಾಡಿದರೂ ಸಹ ಸಾಧಿಸಬೇಕು ಹಠ ಅವರಲ್ಲಿ ಮನೆ ಮಾಡಿತ್ತು. ಶಿಕ್ಷಕಿಯಾಗಿ ಇದ್ದುಕೊಂಡೇ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಮಕ್ಕಳಿಗೆ ಇವರೆಂದರೆ ಬಲು ಪ್ರೀತಿ. ಅವರ ಬಗ್ಗೆ ಮಮತಾ ಅರಸೀಕೆರೆ ಅವರು ಬರೆದಿರುವ ಕಿರು ಪರಿಚಯ ಓದಿ, ನಿಮ್ಮ ಮನೆಮಗಳನ್ನು ಪ್ರೋತ್ಸಾಹಿಸಿ…
ಹರ್ಷಿಯಾ ಬಾನು ಅರಸೀಕೆರೆಯ ಹುಡುಗಿ . ಇಲ್ಲಿಯೇ ವಿದ್ಯಾಭ್ಯಾಸ ಪೂರೈಸಿ ಬಿ ಎಡ್ ನಂತರ ಹೈಸ್ಕೂಲ್ ಟೀಚರ್ ಆದಾಕೆ . ನಂತರ ಎಂಎ ಎಂ ಎಡ್ ಎಂದು ಶಿಕ್ಷಣವನ್ನ ಮುಂದುವರೆಸಿ ತನ್ನ ಶಿಕ್ಷಣದ ಜ್ಞಾನದಾಹ ಪೂರೈಸಿಕೊಂಡಳು. ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಅತ್ಯಾಸಕ್ತಿ. ಕಲಿಯುವ , ಕಲಿಸುವ ಹಂತದಲ್ಲಿ ಬರವಣಿಗೆಯನ್ನ ಜೊತೆ ಮಾಡಿಕೊಂಡವಳು. ಅನೇಕ ಕವನ ರಚಿಸಿ ಹಲವು ಸಭೆಗಳು ವೇದಿಕೆಯಲ್ಲಿ ವಾಚಿಸಿದ್ದಾಳೆ.

ಇಷ್ಟಾಗಿದ್ದರೆ ಅಲ್ಲೇನೂ ಮಹತ್ವದ ವಿಷಯವಿರಲಿಲ್ಲ. ಹರ್ಷಿಯಾ ಭಾಗಶಃ ಅಂಧತ್ವದಲ್ಲೇ ಈ ಎಲ್ಲಾ ಸಾಧನೆ ಮಾಡಿದ್ದಾಳೆ ಎನ್ನುವುದು ಬಹಳ ಮುಖ್ಯವಾಗಿ ಗಮನಿಸಬೇಕಾದ್ದು . ಹುಟ್ಟಿನಿಂದಾರಾಭ್ಯ ಆಕೆ ತನ್ನ ಈ ಕೊರತೆಯನ್ನ ಕಡೆಗಣಿಸಿ ತನ್ನ ಗುರಿಯೆಡೆ ಮುನ್ನುಗ್ಗಿದವಳು. ಹಲವು ಸವಾಲುಗಳನ್ನೆದುರಿಸಿ ಶಿಕ್ಷಣ ಮುಂದುವರೆಸಿ ಉದ್ಯೋಗ ಗಿಟ್ಟಿಸಿ ಬೇರೆಲ್ಲಾ ಚಟುವಟಿಕೆಗಳನ್ನೂ ಮುಂದುವರೆಸಿದಳು. ಈ ಮಾರ್ಗದಲ್ಲಿ ಆಕೆಗೆ ಅವಳ ಪೂರಾ ಕುಟುಂಬದ ಸಹಕಾರವಿದೆ. ಅಮ್ಮ-ಅಪ್ಪ- ತಮ್ಮ- ತಂಗಿ ಪ್ರೀತಿಯಿಂದ ಸಹಕರಿಸುತ್ತಾರೆ .

ಕೋಲಾರದ ಬಂಗಾರಪೇಟೆಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿ ನೇಮಕಗೊಂಡು ಎದುರಿಸಿದ ಸವಾಲು ದೊಡ್ಡದೇ . ಆದರ್ಶ ಶಾಲೆಯಲ್ಲಿ ವಿಪರೀತ ಕೆಲಸದೊತ್ತಡ . ಅಂತದ್ದರಲ್ಲೂ ಆಕೆ ಯಶಸ್ವಿಯಾಗಿ ನಿಭಾಯಿಸಿ ಈಗ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿಗೆ ವರ್ಗವಾಗಿದ್ದಾಳೆ . ತಾನು ಆ ಶಾಲೆಯಲ್ಲಿ ಇರುವಷ್ಟು ಕಾಲ ಉತ್ತಮ ಶಿಕ್ಷಕಿಯಾಗಿ ಅನೇಕ ಪ್ರಯೋಗ ಕೈಗೊಂಡು ಮೆಚ್ಚುಗೆ ಪಡೆದಿದ್ದಾಳೆ . ಅವಳು ಶಾಲಾ ಕಲಿಕೆಗೆ ಪೂರಕವಾಗಿ ರಚಿಸಿದ ಅನೇಕ ಕಲಿಕೋಪಕರಣಗಳೇ ಅವಳ ಕ್ರಿಯಾಶೀಲತೆಗೆ ಸಾಕ್ಷಿ.

ಅತ್ಯಾಪ್ತ ಅತ್ಯುತ್ಸಾಹದ ಮನಸ್ಥಿತಿಯ ಹರ್ಷಿಯಾ ಸಹೃದಯಿ . ಸ್ನೇಹಮಯಿ. ತನ್ನ ಸುತ್ತಲಿನವರ, ಜತೆಗಾರರ ವಿಶ್ವಾಸಗಳಿಸಿಕೊಂಡು ಎಲ್ಲರನ್ನೂ ಸಂಬಂಧಗಳಲ್ಲಿ ಕಟ್ಟಿ ಹಾಕಿ ಅಮ್ಮ, ಅಕ್ಕ , ಅಣ್ತಮ್ಮ ಹೆಸರಿನಲ್ಲಿ ಆಪ್ತತೆ ಗಟ್ಟಿಮಾಡಿಕೊಂಡು ಸ್ನೇಹ ಕಾಯ್ದುಕೊಂಡಾಕೆ.

ಅವಳ ಈ ಕೆಲಸದ ಅಗಾಧತೆ ಹಾಗೂ ಸೃಜನಶೀಲ ಕೆಲಸಗಳನ್ನು ಮೆಚ್ಚಿ ನಾಡಿನ ಅನೇಕ ಪತ್ರಿಕೆಗಳು ಅವಳ ಕುರಿತು ಬರೆದಿವೆ . ಅವಳ ಕೆಲಸಕ್ಕೆ ಸೂಕ್ತ ಮನ್ನಣೆ ಸಲ್ಲಿಸಿವೆ. ಪ್ರಜಾವಾಣಿ , ವಿಶ್ವವಾಣಿ , ವಾರ್ತಾಭಾರತಿ , ಡೆಕ್ಕನ್ ಹೆರಾಲ್ಡ್ , ನ್ಯಾಯಪಥ ಮೊದಲಾದವು ಹಾಗೂ ಕೆಲವು ಸಹೃದಯ ಸ್ನೇಹಿತರು ಆಕೆ ಬಗ್ಗೆ ಬರೆದು ಗಡಿನಾಡಿನಲ್ಲಿ ಕನ್ನಡ ಕಲರವದ ಜತೆಗೆ ಶಿಕ್ಷಕಿಯಾಗಿ ಆಕೆ ಮಾಡಿದ ಕಾರ್ಯವನ್ನ ಶ್ಲಾಘಿಸಿವೆ.

ಪ್ರೋತ್ಸಾಹ ಸಿಕ್ಕಿದಷ್ಟೂ ನಮ್ರಳಾಗುವ ಹರ್ಷಿಯಾಳ ಕೆಲಸಕ್ಕೆ ಅವಳ ಕ್ರಿಯಾಶೀಲತೆಗೆ ಆಕೆಯ ಜೀವನ್ಮುಖಿ ಮನೋಭಾವಕ್ಕೆ ಅಪಾರ ಮೆಚ್ಚುಗೆ ಹಾಗೂ ಪ್ರೀತಿ . ಹರ್ಷಿಯಾ ನಿನ್ನ ಸಾಧನೆ ಹಲವು ಮೈಲಿಗಲ್ಲುಗಳಲ್ಲಿ ಹರಡಲಿ , ದಾಖಲಾಗಲಿ…ನಿಯಂತರ ಮುಂದುವರೆಯಲಿ …
- ಮಮತಾ (ಲೇಖಕರು, ಸಾಹಿತಿಗಳು) ಅರಸೀಕೆರೆ
