ಗೌರವ ಮತ್ತು ನಿರೀಕ್ಷೆ ಹುಟ್ಟಿಸುವ ಬರಹ



೧೯೩೪ರ ಫೆಬ್ರವರಿ ೨೫ – ೨೬ರಂದು ಮಹಾತ್ಮಾ ಗಾಂಧೀಜಿ ಉಡುಪಿ ಕುಂದಾಪುರಗಳಿಗೆ ಭೇಟಿ ಕೊಟ್ಟ ಒಂದು ಐತಿಹಾಸಿಕ ವಾಸ್ತವವನ್ನು ನೆಲೆಗಟ್ಟಾಗಿಟ್ಟುಕೊಂಡು, ಪತ್ರಕರ್ತ ಮಂಜುನಾಥ್ ಚಾಂದ್ ಬರೆದ ಕಾದಂಬರಿ ’ಕಾಡ ಸೆರಗಿನ ಸೂಡಿ’ಯು ಕುಂದಗನ್ನಡದ ಬೆಡಗು ಮತ್ತು ಮಂಜುನಾಥರ ಕಲ್ಪನಾಶಕ್ತಿಯ ಸೊಬಗಿನಿಂದ ಗಮನ ಸೆಳೆಯುವ ರಚನೆಯಾಗಿದೆ.ರಮೇಶ್ ಭಟ್ ಬೆಳಗೋಡು ಅವರು ಕಾದಂಬರಿಯನ್ನು ಓದುಗರಿಗೆ ಪರಿಚಯ ಮಾಡಿದ್ದಾರೆ.ಮುಂದೆ ಓದಿ …

ಪುಸ್ತಕ : ಕಾಡ ಸೆರಗಿನ ಸೂಡಿ (ಕಾದಂಬರಿ)
ಲೇಖಕರು : ಮಂಜುನಾಥ್ ಚಾಂದ್
ಪ್ರಕಾಶಕರು : ಅಕ್ಷರ ಮಂಡಲ ಪ್ರಕಾಶನ, ಬೆಂಗಳೂರು (೯೪೪೯೨೩೮೧೫೪)
ಪುಟಗಳು: ೧೯೨;
ಬೆಲೆ : ೧೮೦ ರೂಪಾಯಿ

(ಕಾಡ ಸೆರಗಿನ ಸೂಡಿ ಕಾದಂಬರಿಕಾರರು  ಮಂಜುನಾಥ್ ಚಾಂದ್)

ಕಳೆದ ಶತಮಾನದ ನಲವತ್ತರ ದಶಕದ ಮೊದಲವರ್ಷಗಳಲ್ಲಿ ಗಾಂಧೀಮಾರ್ಗವೆನ್ನುವುದು ಒಂದು ಸಮ್ಮೋಹಕ ಶಕ್ತಿಯಾಗಿ ಕುಂದಾಪುರದಂತಹ ಚಿಕ್ಕ ಊರುಗಳ ಜನರನ್ನು ಸ್ವಾತಂತ್ರ್ಯಹೋರಾಟಕ್ಕೆ ಧುಮ್ಮಿಕ್ಕುವಂತೆ ಮಾಡಿದ್ದನ್ನು ನಾವು ಬಲ್ಲೆವು.ಆ ದಿನಗಳಲ್ಲಿ ಕೃಷ್ಣರಾಯ ಕೊಡ್ಗಿಯವರು, ಹಲ್ಸನಾಡು ಸೂರಪ್ಪಯ್ಯನವರು, ಕೋಣಿ ಅಣ್ಣಪ್ಪ ಕಾರಂತರು, ಶಿವರಾಮ ಕಾರಂತರು, ರಾಮಕೃಷ್ಣ ಕಾರಂತರು, ಮಾದಪ್ಪ ಉರಾಳರು, ಸೂರ್ಯನಾರಾಯಣ ಅಡಿಗರು, ಕೋಣಿ ನರಸಿಂಹಕಾರಂತರು, ನಿಟ್ಟೂರು ಶ್ರೀನಿವಾಸ ರಾಯರು, ಎ ಬಿ ಶೆಟ್ಟರು, ಶ್ರೀನಿವಾಸ ಮಲ್ಯರು, ಕಾರ್ನಾಡು ಸದಾಶಿವ ರಾಯರೇ ಮೊದಲಾದ ಗಣ್ಯರು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ, ಗಾಂಧೀ ಮಾರ್ಗದಲ್ಲಿ ಕಾಣಿಸಿಕೊಂಡ ಬಗ್ಗೆ ಸಾಕಷ್ಟು ಬರಹಗಳು ಬಂದಿವೆ. ಇದೇ ಸಂದರ್ಭದಲ್ಲಿ ಕುಂದಾಪುರದ ಹಳ್ಳಿಗಾಡಿನ ಶ್ರೀಸಾಮಾನ್ಯರೂ ಗಾಂಧಿ ಹಚ್ಚಿಕೊಟ್ಟ ಸೋಡರಿನ ಬೆಳಕಲ್ಲಿ ಸ್ವಾತಂತ್ರ್ಯದ ಹೋರಾಟ ನಡೆಸಿದ ಹಲವು ದಂತಕಥೆಗಳಂತಹ ಕಥೆಗಳಿವೆ. ಅವುಗಳ ಪಟ್ಟಿಗೆ ಸೇರಬಹುದಾದಂತಹ ಒಂದು ಕಥೆ ಹೇಳಲು, ಮಂಜುನಾಥ್ ಚಾಂದ್ ತಮ್ಮ ಹುಟ್ಟೂರ ಆಸುಪಾಸಿನ ನದಿ, ಕಾಡು, ಬೆಟ್ಟ, ಹಳ್ಳಿಗಾಡಿನ ವೇದಿಕೆಯೊಂದನ್ನು ಈ ಕಾದಂಬರಿಗೆಂದು ಕಟ್ಟಿಕೊಂಡಿದ್ದಾರೆ.

ಕಾಡ ಸೆರಗಿನ ಸೂಡಿ ಮುಖಪುಟ

ಕುಂದಾಪುರಕ್ಕೆ ಗಾಂಧಿ ಬಂದಿದ್ದರು ಎನ್ನುವುದು ನೆವ ಮಾತ್ರ ಎಂದು ಹೇಳುವ ಕಾದಂಬರಿಕಾರ, ಗಾಂಧೀ ಸಂದೇಶವನ್ನು ಹಳ್ಳಿಗರಿಗೆ ಮುಟ್ಟಿಸುವ ’ಸೂಡಿ’ ಎಂಬ ಪತ್ರಿಕೆಯ ಸುತ್ತಲಿನ ಕಾಲ್ಪನಿಕ ಚೌಕಟ್ಟಿನಲ್ಲಿ ಕಟ್ಟಿಕೊಡುವ, ತಮ್ಮ ಮಿತಿಗೆ ಮಿಗಿಲಾದ ಆದರ್ಶವನ್ನು ಕನಸುವ ತನಿಯ, ಗಿರಿಜಾ, ಪಟೇಲ್ ಸುಂದರ ಶೆಟ್ಟಿ, ಶ್ರೀಪತಿ ಹೆಗಡೆ, ಶಿವರಾಮ ಪಂಡಿತರು, ಮೊದಲಾದ ಸಾಮಾನ್ಯರು ತಮಗೇ ಅರಿವಿಲ್ಲದೆ ಆದರ್ಶಜೀವಿಗಳಾಗುವ ಕಥೆ, ಈ ದೇಶದ ಸ್ವಾತಂತ್ರ್ಯ ಹೋರಾಟದ ಹಲವು ಅನನ್ಯ ಕಥೆಗಳಿಂದ ಪ್ರೇರಿತವಾದಂತಿದೆ. ತನಗರಿಯದೇ ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು ಹೋರಾಟಗಾರರ ನೆರವಿಗೆ ನಿಂತು ಬಲಿಯಾಗುವ ತನಿಯಾ ಮತ್ತು ಸ್ವಾತಂತ್ರ್ಯ ಹೋರಾಟದ ಮೈನವಿರೇಳಿಸುವ ಪ್ರಸಂಗಗಳಿಂದ ಪ್ರಚೋದಿತನಾಗಿ ತಾನೂ ಗಾಂಧೀಮಾರ್ಗವನ್ನು ಹಿಡಿಯುವ ಪರಂಗಿ ಸಾಹೇಬ ಈ ಪ್ರೇರಣೆಯ ಸಾಧ್ಯತೆಗಳು. ವಾಗಾಡಂಬರದ ಆದರ್ಶಗಳಿಂದ ಪೇಲವವಾಗಿಬಿಡಬಹುದಾದ ಪಾತ್ರಗಳನ್ನು ಮಂಜುನಾಥ್ ಕಲಾವಿದನ ಎಚ್ಚರಿಕೆಯಿಂದ ಮತ್ತು ಪತ್ರಕರ್ತನ ಸೂಕ್ಷ್ಮತೆಯಿಂದ ಅಭಿನಂದನೀಯವಾಗಿ ಕಟ್ಟಿಕೊಟ್ಟಿದ್ದಾರೆ.




ಮೊಗಸಾಲೆಯವರ ‘ಉಲ್ಲಂಘನೆ’ ಮತ್ತು ಮಿತ್ರಾ ವೆಂಕಟರಾಜರ ‘ಪಾಚಿಗಟ್ಟಿದ ಪಾಗಾರ’ಗಳಲ್ಲಿ ಸಾಧ್ಯವಾಗುವ ಕನ್ನಡ ಜಿಲ್ಲೆಗೆ ’ಗಾಂಧಿ ಬಂದ ಘಟನೆಯ’ ಸಾಂಸ್ಕೃತಿಕ ಮಹತ್ವದ ಸಭ್ಯ ವಿಶ್ಲೇಷಣೆಯ ಸಹನೀಯ ಮುಂದುವರಿಕೆ ಮಂಜುನಾಥ್ ಚಾಂದರ ’ಕಾಡಸೆರಗಿನ ಸೂಡಿ’ಯಲ್ಲಿದೆ ಎಂದರೆ ತಪ್ಪಾಗದು. ಹಾಗೆ ನೋಡಿದರೆ, ಮಂಜುನಾಥರ ಭಾಷೆಯು ಅವರು ಹೇಳುವ ಕಥೆಗೆ ಸಾಕ್ಷಿಯಂತಿರುವ ಸೌಪರ್ಣಿಕಾ ನದಿಯಷ್ಟೇ ಸಮೃದ್ಧವಾದದ್ದು, ಸಂಗತವಾದದ್ದು, ಸಗಾಢವಾದದ್ದು. ಆದುದರಿಂದಲೇ ಇಲ್ಲಿ ಗಮನಕ್ಕೆ ಬರುವ ಕಥೆಯಾಗಿ ಓದಿಸಿಕೊಳ್ಳುವ ವೈಚಾರಿಕತೆಯ ಸಾಧ್ಯತೆಗಳು ಮಂಜುನಾಥರ ಬರಹದ ಕುರಿತು ಗೌರವ ಮತ್ತು ನಿರೀಕ್ಷೆ ಹುಟ್ಟಿಸುತ್ತವೆ.


  • ರಮೇಶ್ ಭಟ್ ಬೆಳಗೋಡು (SIBM ಕಾಲೇಜಿನನಿವೃತ್ತ ಪ್ರಾಂಶುಪಾಲರು,ಲೇಖಕರು) ಮಣಿಪಾಲ 

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW