ಗೋವಾ ವಿಮೋಚನಾ ದಿನ…- ವಿಂಗ್ ಕಮಾಂಡರ್ ಸುದರ್ಶನ19 ಡಿಸೆಂಬರ್ ಗೋವಾ ವಿಮೋಚನಾ ದಿನವೆಂದು ಆಚರಿಸಲಾಗುತ್ತದೆ. ‘ಗೋವಾ’ ಎನ್ನುವ ಹೆಸರು ಬಂದದ್ದು ಹೇಗೆ? ಕುತೂಹಲಕಾರಿ ವಿಷಯವನ್ನು ವಿಂಗ್ ಕಮಾಂಡರ್ ಸುದರ್ಶನ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ಮುಂದೆ ಓದಿ…

ಸ್ಕಂದ ಪುರಾಣದ ಸಹ್ಯಾದ್ರಿಖಾಂಡದ ಪ್ರಕಾರ #ಪರಶುರಾಮ ಏಳು ಬಾಣಗಳನ್ನು ಸಮುದ್ರದ ಏಳು ದಿಕ್ಕಿನಲ್ಲಿ ಹೊಡೆದು ಸೃಷ್ಟಿಸಿದ ಕಡಲತೀರದ ನಾಡು “ಸಪ್ತ ಕೋಣ ಕಣ”, ಮುಂದೆ ಅದು ಕೋಣ ಕಣ..ಕೊಂಕಣವೆಂದು ಪ್ರಸಿಧ್ಧಿಯಾಯಿತಂತೆ. ಪರಶುರಾಮ ಈ ನಾಡನ್ನು ಸೃಷ್ಟಿಸಿದ್ದು ಇದು ಸಂತರ, ಪಂಡಿತರ ಮತ್ತು ಜ್ಞಾನಿಗಳ ಬೀಡಾಗಲಿ ಎಂದು..ಇದೊಂದು ಪಾಪನಾಶಿನಿ, ಪುಣ್ಯಕ್ಷೇತ್ರವಾಗಿರಲಿ ಎಂದು. ಮಹಾಭಾರತದ ಭೀಷ್ಮಪರ್ವದ ಪ್ರಕಾರ.. ಜರಾಸಂಧನ ಕಿರುಕುಳ ತಾಳಲಾರದೆ ಮಥುರಾ ನಗರದಿಂದ ಹಲವಾರು ಯಾದವರು ತಮ್ಮ ಗೋವುಗಳ ಸಮೇತ ಇಲ್ಲಿಗೆ ವಲಸೆ ಬಂದರಂತೆ. ಆ ಪ್ರದೇಶವನ್ನು “ಗೋವುಪುರ”ಎಂದು ಕರೆಯಲಾಯಿತಂತೆ. ಮುಂದೆ ಹಲವಾರು ರಾಜವಂಶಗಳ ಆಳ್ವಿಕೆಗೆ ಒಳಪಟ್ಟು, ವಿದೇಶೀಯರ ಆಕರ್ಷಣೆಗೆ ಒಳಪಟ್ಟು ‘ಗೋವಾ’ ಎನ್ನುವ ಹೆಸರು ಉಳಿದುಕೊಂಡು ಬಿಟ್ಟಿತಂತೆ.

ಫೋಟೋ ಕೃಪೆ : kn.wikipedia.org

ಇಂಥಹ ಪುಣ್ಯಕ್ಷೇತ್ರಕ್ಕೆ ಹದಿನಾರನೇ ಶತಮಾನದ ಪ್ರಾರಂಭದಲ್ಲಿ ವ್ಯಾಪಾರಕ್ಕೆಂದು ಪೋರ್ಚುಗಲ್ಲಿನಿಂದ ಹಡಗಿನಲ್ಲಿ ಬಂದಿಳಿದವನು ವಾಸ್ಕೋಡಗಾಮ. ಇದರೊಂದಿಗೆ ಗೋವಾದ ಶಾಂತಿಪ್ರಿಯ ಜನರಿಗೆ ಪರಿಚಯವಾಯಿತು. ಯೂರೋಪಿಯನ್ನರ ಕ್ರೌರ್ಯ, ಕುತಂತ್ರ ಮತ್ತು ಕುಯುಕ್ತಿ. ನಂತರ ಬಂದ ಜೇವಿಯರ್ ಎನ್ನುವ ಕ್ಯಾಥೋಲಿಕ್ ಪಾದ್ರಿಯಿಂದ ಪರಿಚಯವಾಯಿತು. ಚರ್ಚಿನ ಮತಾಂಧತೆ ಮತ್ತು ಹಿಂಸಕ ಪ್ರವೃತ್ತಿ. ಪೋರ್ಚುಗೀಸಿನಿಂದ ಬಂದ ಪಾದ್ರಿಗಳು ಮತ್ತು ಅವರ ಜೊತೆಯ ಮೃತ್ಯುದೂತರು ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸಿ, ಅವರ ಮೇಲೆ ಹಲವಾರು ನಿರ್ಭಂದನೆಗಳನ್ನು ಹೇರಿದರು. ಈ ನಿರ್ಭಂದನೆಗಳನ್ನು ಉಲ್ಲಂಗಿಸಿದವರಿಗೆ ನಾನಾ ತರಹದ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಕೊಡುತ್ತಿದ್ದರು. ಹಿಂದೂಗಳು ತಿಲಕ ಅಥವಾ ನಾಮ ಧರಿಸುವ ಹಾಗಿಲ್ಲ. ಏಕೆಂದರೆ ಇದು ಚರ್ಚಿನ ಪ್ರಕಾರ ಸೈತಾನನ ಲಕ್ಷಣಗಳಂತೆ. ಯಾರೂ ಜನಿವಾರ ಧರಿಸುವ ಹಾಗಿಲ್ಲ ಮತ್ತು ಉಪನಯನ ನಿಷಿಧ್ಧ. ಮನೆಯ ಮುಂದೆ ತುಳಸೀ ಗಿಡ ಕಾಣಬಾರದು ಮತ್ತು ಮನೆ ಒಳಗೆ ವಿಗ್ರಹಗಳನ್ನಿಡಬಾರದು. ಕನ್ನಡ ಹಾಗು #ಕೊಂಕಣಿಯಲ್ಲಿ ಮಾತಾಡಬಾರದು ಮತ್ತು ಪೋರ್ಚುಗೀಸನ್ನು ಕಲಿಯುವುದು ಕಡ್ಡಾಯ. ಹದಿನೈದು ವರ್ಷ ದಾಟಿದ ಎಲ್ಲಾ ಯುವಕ ಯುವತಿಯರು ವಾರಕ್ಕೊಂದು ಸಲ ಚರ್ಚಿಗೆ ಬಂದು ಅಲ್ಲಿ ಬೈಬಲ್ಲಿನ ಪಠನ ಕಡ್ಡಾಯವಾಗಿ ಮಾಡಬೇಕು. ಹಿಂದೂಗಳಾರು ಪಲ್ಲಕ್ಕಿಯಲ್ಲಾಗಲಿ, ಕುದುರೆಯ ಮೇಲಾಗಲಿ ಸವಾರಿ ಮಾಡುವಂತಿಲ್ಲ. ದೇವರ ಉತ್ಸವ ಮಾಡುವಂತಿಲ್ಲ ಮತ್ತು ಧಾರ್ಮಿಕ ಆಚರಣೆಗಳಾಗಲಿ, ಸಂಪ್ರದಾಯದ ಮದುವೆ , ಸಮಾರಂಭಗಳು ನಿಷಿದ್ದ. #ಗೋವಾದ ಪ್ರತಿಯೊಬ್ಬ ಪ್ರಜೆಯೂ ಕ್ರಿಶ್ಚಿಯನ್ನಾಗಿ ಮತಾಂತರಗೊಳ್ಳ ಬೇಕು. ಇಲ್ಲಾ ಆಸ್ತಿಪಾಸ್ತಿಯನ್ನೆಲ್ಲಾ ಬಿಟ್ಟು ಗೋವಾದಿಂದ ಓಡಿ ಹೋಗಬೇಕು. ಇಂತಹವರ ಆಸ್ತಿಯನ್ನು ಚರ್ಚುಗಳನ್ನು ಕಟ್ಟಲು ವಿನಿಯೋಗಿಸಿಕೊಳ್ಳಬೇಕು. ಗೋವಾ ಅಂದಿನ ಹಿಂದೂ ಧರ್ಮದ ಧಾರ್ಮಿಕ ಸಂಕೇತವಾಗಿತ್ತು.ಮೂಲೆ ಮೂಲೆಗೂ ಒಂದೊಂದು ದೇವಸ್ಥಾನಗಳಿದ್ದವು. ಈ ಹಿಂಸಕ ಪಾದ್ರಿಗಳು ಆ ಧರ್ಮದ ಭಕ್ತಾದಿಗಳನ್ನು ಮತಾಂತರಿಸಿ ಅವರಿಂದಲೇ ದೇವಸ್ಥಾನಗಳನ್ನು ಕೆಡವಿಸಿ ಅದೇ ಜಾಗದಲ್ಲಿ ಚರ್ಚನ್ನು ಕಟ್ಟಬೇಕು ಎನ್ನುವ ಕಾನೂನು ಜಾರಿಗೊಳಿಸಿದರು.ಹೀಗೆ ಗೋವಾದ ಹಿಂದೂಗಳ ಮೇಲೆ ನರಮೇಧಯಾಗವನ್ನು ನಡೆಸಿಬಿಟ್ಟಿದ್ದರು ಪೋರ್ಚುಗೀಸಿನ ಸೈನಿಕರು.

1947 ರಲ್ಲಿ ಬ್ರಿಟಿಷರು ಭಾರತದಿಂದ ತೊಲಗಿ ಹೋದರೂ ಈ ಮೊಂಡು ಪೋರ್ಚಗೀಸರು ತೊಲಗಲು ಸಿದ್ಧವಿರಲಿಲ್ಲ. ಆಪರೇಷನ್ ವಿಜಯ್ ಎನ್ನುವ ಹೆಸರಿನ ಸೈನ್ಯದ ಕಾರ್ಯಾಚರಣೆಯ ಮೂಲಕ ಡಿಸೆಂಬರ್19, 1961 ರಂದು ಸುಮಾರು ಮೂರು ಸಾವಿರ ಪೋರ್ಚುಗೀಸ್ ಸೈನಿಕರ ಶರಣಾಗತಿಯೊಂದಿಗೆ ಗೋವಾವನ್ನು #ಪೋರ್ಚುಗೀಸರ ಆಡಳಿತದಿಂದ ಮುಕ್ತಗೊಳಿಸಲಾಯಿತು.


  • ವಿಂಗ್ ಕಮಾಂಡರ್ ಸುದರ್ಶನ  (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW