#ಚೆನ್ನಭೈರಾದೇವಿ ಎಂಟು ತಿಂಗಳಲ್ಲಿ ನಾಲ್ಕು ಮುದ್ರಣ! ಅಂಕಿತ ಪುಸ್ತಕದ ದಾಖಲೆ! ಪುಸ್ತಕ ಪ್ರಿಯ ಅನಿವಾಸಿ ಭಾರತೀಯ ಓದುಗ ದಂಪತಿಗಳಿಂದ ನಿನ್ನೆ ನಾಲ್ಕನೇ ಮುದ್ರಣದ ಪ್ರತಿ ಬಿಡುಗಡೆಯಾಯಿತು.ಮುಂದೆ ಓದಿ…

2021ರ ವರ್ಷದಲ್ಲಿ ಅತ್ಯಂತ ಹೆಚ್ಚು ಮಾರಾಟ ಕಂಡ ಕಾದಂಬರಿಗಳ ಸಾಲಿನಲ್ಲಿ ಮೊದಲ ಪಂಕ್ತಿಯಲ್ಲಿರುವ, ಕನ್ನಡನಾಡಿನ ಪ್ರಖ್ಯಾತ ಪ್ರಕಾಶನ ಸಂಸ್ಥೆ ಅಂಕಿತದಿಂದ ಪ್ರಕಾಶನಗೊಂಡ,
“ಚೆನ್ನಭೈರಾದೇವಿ” – ಕರಿಮೆಣಸಿನ ರಾಣಿಯ ಅಕಳಂಕ ಚರಿತೆ
ಕಾದಂಬರಿ ಕೇವಲ ಎಂಟು ತಿಂಗಳಲ್ಲಿ ನಾಲ್ಕನೇ ಮುದ್ರಣ ಕಂಡಿದ್ದು, ನಿನ್ನೆ ಅಂಕಿತ ಪ್ರಕಾಶನ ಪುಸ್ತಕ ಮಳಿಗೆಯಲ್ಲಿ, ಕನ್ನಡ ಪುಸ್ತಕಪ್ರಿಯರೂ, ಅಮೆರಿಕದಲ್ಲಿ ಕನ್ನಡ ಪುಸ್ತಕಭಂಡಾರವನ್ನೇ ಇಟ್ಟುಕೊಂಡ ಸಾಹಿತ್ಯ ಪ್ರೇಮಿಗಳೂ, ಅಮೆರಿಕದಿಂದ ಪ್ರಸ್ತುತ ಭಾರತಕ್ಕೆ ಆಗಮಿಸಿರುವ ಅನಿವಾಸಿ ಭಾರತೀಯ ದಂಪತಿಗಳೂ ಆಗಿರುವ ಶ್ರೀಮತಿ ಮಮತಾ ಹಾಗೂ ಶ್ರೀ ತಾಂಡವ ಮೂರ್ತಿಗಳಿಂದ ಬಿಡುಗಡೆಗೊಂಡಿತು. ಈ ಸಂದರ್ಭದಲ್ಲಿ ಹಾಜರಿದ್ದ ಪ್ರೊಫೆಸರ್ ಶಿವಕುಮಾರ್ ಸರ್ ಮಾತನಾಡಿ ಪುಸ್ತಕಕ್ಕೆ ಶುಭ ಹಾರೈಸಿದರು. ಈ ಚಿಕ್ಕ, ಚೊಕ್ಕ ಸಮಾರಂಭದಲ್ಲಿ ಮೇಲ್ಕಂಡ ಅತಿಥಿಗಳ ಜೊತೆಗೆ ಅಂಕಿತ ಪ್ರಕಾಶನದ ಪ್ರಕಾಶ ಮತ್ತು ಪ್ರಭಾ ದಂಪತಿಗಳು, ಅಂಕಿತದ ಅಕ್ಷರಕನ್ಯೆಯರು, ನಾನು ಮತ್ತು ನನ್ನ ಮಗ ಹಾಜರಿದ್ದೆವು.

“ಚೆನ್ನಭೈರಾದೇವಿ ಕಾದಂಬರಿಯು, ಎರಡು ತಿಂಗಳ ಲಾಕ್ಡೌನ್ ನಡುವೆಯೂ ಕೇವಲ ಎಂಟು ತಿಂಗಳಲ್ಲಿ ನಾಲ್ಕು ಮುದ್ರಣ ಕಂಡಿದ್ದು ನಮಗೆ ಅತ್ಯಂತ ಸಂತಸ ತಂದಿದೆ. ಅಂಕಿತ ಪ್ರಕಾಶನದ ಪುಸ್ತಕ ಮಾಲಿಕೆಯಲ್ಲೇ ಇದೊಂದು ದಾಖಲೆ ಎಂಬ ಹೇಳಿಕೆಯೊಡನೆ ಪ್ರಕಾಶ್ ಪ್ರಭಾ ದಂಪತಿಗಳ ಹಾಜರಿದ್ದವರಿಗೆಲ್ಲ ಸಿಹಿ ಹಂಚಿದರು.
ದಾಖಲೆಯ ಐವತ್ನಾಲ್ಕು ವರ್ಷಗಳಷ್ಟು ಸುದೀರ್ಘ ಕಾಲ ಪೋರ್ಚುಗೀಸರ ಆಕ್ರಮಣವನ್ನು ಹಿಮ್ಮೆಟ್ಟಿಸಿ, ಕನ್ನಡದ ನೆಲವನ್ನು ಅತ್ಯಂತ ಶ್ರೀಮಂತವಾಗಿ, ಸುಭದ್ರವಾಗಿ ಮತ್ತು ಸರ್ವಧರ್ಮ ಸಮಭಾವದಿಂದ ಆಳಿ, “ರೈನಾ ದ ಪೆಮೆಂಟಾ” ಎಂಬ ಬಿರುದುಗಳಿಸಿ, ರಾಣಿ ಎಲಿಜಬೆತ್ತಳಿಗೆ ಸರಿಮಿಗಿಲೆನ್ನಿಸಿ ನಾಡನ್ನು ಆಳಿದರೂ, ರಾಣಿ ಚೆನ್ನಭೈರಾದೇವಿಯನ್ನು ಅದೇಕೋ ಕನ್ನಡ ನಾಡಿನ ಇತಿಹಾಸ ಮರೆತುಬಿಟ್ಟಿತ್ತು. ಅವಳ ಯೋಗ್ಯತೆಗೆ ತಕ್ಕುದಾಗಿ ಸಿಗಬೇಕಾಗಿದ್ದ ಮಾನ್ಯತೆ ಆಕೆಗೆ ದಕ್ಕಿರಲೇ ಇಲ್ಲ. ಆದರೆ ಇಂದಿನ ಕನ್ನಡ ಓದುಗರು ಎಲ್ಲ ಅವಜ್ಞೆಗಳನ್ನು ಮೆಟ್ಟಿ ಅವಳನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಅವಳ ಅಕಳಂಕ ಚರಿತ್ರೆಯನ್ನು ಸಾರುವ ಈ ಕಾದಂಬರಿಯನ್ನೂ ಮೆಚ್ಚಿ, ಕೊಳ್ಳುತ್ತಿದ್ದಾರೆ. ಜೊತೆಗೆ ಈ ಕೃತಿಯನ್ನು ಓದಿ ಮೆಚ್ಚಿಕೊಂಡ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆವರಂತಹ ಮಹನೀಯರು ಅವಳ ಚರಿತ್ರೆಯನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಅವಳ ಸಾಧನೆಗಳ ಕಲಾವೈಭವವನ್ನು ಪ್ರದರ್ಶಿಸುವ “ಥೀಮ್ ಪಾರ್ಕ್” ಒಂದನ್ನು ಹೊನ್ನಾವರದ ಕಡಲತೀರದ ಸುಂದರ ಸ್ಥಳವೊಂದರಲ್ಲಿ ನಿರ್ಮಿಸುವ ಸಿದ್ದತೆಯಲ್ಲಿದ್ದಾರೆ.
ಈ ಸುಸಂದರ್ಭದಲ್ಲಿ ಕಾದಂಬರಿಯನ್ನು ಓದಿ, ಮೆಚ್ಚಿ, ಪ್ರೋತ್ಸಾಹಿಸುವುದರ ಜೊತೆಗೆ ಕನ್ನಡ ಸಾಹಿತ್ಯವನ್ನು ಪರಿಪೋಷಿಸುತ್ತಿರುವ ಎಲ್ಲ ಓದುಗ ಅಭಿಮಾನಿಗಳಿಗೂ, ಅವಳ ಕುರಿತು ಥೀಮ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವ ಪೂಜ್ಯ ಡಾ ವೀರೇಂದ್ರ ಹೆಗ್ಗಡೆಯವರಿಗೂ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ.
- ಗಜಾನನ ಶರ್ಮ (ಕರಿಮೆಣಸಿನ ರಾಣಿಯ ‘ಚೆನ್ನಭೈರಾದೇವಿ’ ಕಾದಂಬರಿ ಲೇಖಕರು)
