ಪದ್ಮನಾಭ ಭಟ್ಟರು ವೃತ್ತಿಯಲ್ಲಿ ವೈದ್ಯರಾಗಿದ್ದು, 1980 ರಿಂದ ಯಕ್ಷಗಾನ ಕಲೆಯನ್ನು ತಮ್ಮ ವೃತ್ತಿಯ ಜೊತೆಗೆ ಹವ್ಯಾಸವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಸುಳ್ಯದಲ್ಲಿ ಪ್ರಥಮ ಬಾರಿಗೆ “ಗೆಳೆಯರ ಯಕ್ಷಗಾನ ಕಲಾವೃಂದ ” ಸುಳ್ಯ ಎಂಬ ಕೇಂದ್ರವನ್ನು ಸ್ಥಾಪಿಸಿದರು. ಪದ್ಮನಾಭ ಭಟ್ ಅವರ ಸಾಧನೆಯ ಕುರಿತು ಬಾಲು ದೇರಾಜೆ ಅವರು ಬರೆದ ಲೇಖನ ತಪ್ಪದೆ ಓದಿ…
1964 ನೇ ಇಸವಿಯಲ್ಲಿ ಕಾಸರಗೋಡಿನ ಮೀಂಜ ಗ್ರಾಮದ ತೊಟ್ಟೆತ್ತೋಡಿಯಿಂದ ದ. ಕನ್ನಡ ಜಿಲ್ಲೆ ತಾಲೂಕು ಸುಳ್ಯದ ಕೆರೆಮೂಲೆಗೆ ಬಂದು ನೆಲೆಸಿದ ಯಕ್ಷಗಾನ ಕಲಾವಿದರಾದ ಶ್ರೀ ಟಿ.ರಾಮಕೃಷ್ಣ ಭಟ್ ಹಾಗೂ ಶ್ರೀಮತಿ ಲಕ್ಷ್ಮೀಅಮ್ಮ ದಂಪತಿಗಳು. ಇವರಿಗೆ 3 ಜನ ಹೆಣ್ಣುಮಕ್ಕಳು ಮತ್ತು ಏಕೈಕ ಮಗನಾದ
ಶ್ರೀ ಪದ್ಮನಾಭ ಭಟ್. ಇವರು ತಮ್ಮ ಕಿರಿಯ – ಹಿರಿಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಾಸರಗೋಡಿನ ಮಂಜೇಶ್ವರದ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ನಂತರ ಉಜಿರೆಯ ಸಿದ್ದವನ ಗುರುಕುಲದಲ್ಲಿ ಪೌಢ ಶಿಕ್ಷಣವನ್ನು ಮಾಡಿದ್ದರು.
1966 – 67 ನೇ ಇಸವಿಯಲ್ಲಿ ಶ್ರೀ ಪದ್ಮನಾಭ ಭಟ್ಟರು ಜಿಲ್ಲಾ ಆಸ್ಪತ್ರೆ ಮಂಗಳೂರುರಲ್ಲಿ ವೈದ್ಯರ ಸಹಾಯಕರಾಗಿ ಒಂದು ವರ್ಷ ತರಬೇತಿಗೊಂಡರು. 1975 ನೇ ಇಸವಿಯಲ್ಲಿ ಡಿಪ್ಲೊಮ ಮತ್ತು ಫಾರ್ಮಸಿಯ 1 ವರ್ಷ ಕೋರ್ಸ್ ಮಾಡಿ ತರಬೇತಿ ಗೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಸಹಾಯಕ ವೈದ್ಯರಾಗಿ ನೇಮಕಗೊಂಡರು. ಜೊತೆಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲೂ ಸೇವೆ ಸಲ್ಲಿಸಿದ್ದಾರೆ. ಬರುವಂತಹ ರೋಗಿಗಳನ್ನು ನಗುಮುಖದಿಂದಲೇ
ಮಾತಾಡಿಸುತ್ತಿದ್ದು, ಪ್ರಾಮಾಣಿಕತನದಿಂದ ವೃತ್ತಿಯಲ್ಲಿ ತೊಡಗಿ ರೋಗಿಗಳಿಗೆ ಉತ್ತಮ ಸುಶ್ರೂಷೆ ನೀಡುವಲ್ಲಿ ಗಮನ ಹರಿಸಿ ರೋಗಿ ರೋಗ ಮುಕ್ತನಾಗುವಲ್ಲಿ ಸಹಕರಿಸುತ್ತಿದ್ದರು.
ಶ್ರೀಯುತ ಭಟ್ಟರು 1980 ರಲ್ಲಿ ಪರಂಪರೆಯಲ್ಲಿ ಬಂದ ಯಕ್ಷಗಾನ ಕಲೆಯನ್ನು ತಮ್ಮ ವೃತ್ತಿಯ ಜೊತೆಗೆ ಹವ್ಯಾಸವಾಗಿ ಮುಂದುವರೆಸಿ, ಸುಳ್ಯದಲ್ಲಿ ಪ್ರಥಮ ಬಾರಿಗೆ ” ಗೆಳೆಯರ ಯಕ್ಷಗಾನ ಕಲಾವೃಂದ ” ಸುಳ್ಯ ಎಂಬ ಕೇಂದ್ರವನ್ನು ಸ್ಥಾಪಿಸಿ, ಪ್ರತೀವರ್ಷ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಯಕ್ಷಗಾನ ಕೂಟಕ್ಕೆ
ಕಾರಣ ಕರ್ತರಾಗಿದ್ದು, ಇವರ ಮುಂದಾಳತ್ವದಲ್ಲಿ ತಾಳಮದ್ದಳೆ ನಡೆಯುತ್ತಿದ್ದವು. 1996 ರಲ್ಲಿ ಕಿನ್ನಿಗೋಳಿಯಲ್ಲಿ ಯಕ್ಷಗಾನ ತಾಳಮದ್ದಳೆಯ ಸ್ಪರ್ಧೆಯಲ್ಲಿ ಇವರ ಕೂಟ ದ್ವಿತೀಯ ಸ್ಥಾನವನ್ನು ಪಡೆದಿರುತ್ತದೆ.
ಇವರು ಶಾಲಾದಿನಗಳಲ್ಲೇ ಯಕ್ಷಗಾನ – ನಾಟಕಗಳಲ್ಲಿ ಆಸಕ್ತಿ ಹೊಂದಿದ್ದು, ” ಮಯೂರ ಧ್ವಜನ ತ್ಯಾಗ ” ಎಂಬ ನಾಟಕದಲ್ಲಿ ಮಯೂರ ದ್ವಜನಾಗಿ ಅಭಿನಯಿಸಿ ಪ್ರಥಮ ಸ್ಥಾನ ಬಹುಮಾನಗಳಿಸಿರುತ್ತಾರೆ. ತಾಳಮದ್ದಳೆಯಲ್ಲಿ ನಿರರ್ಗಳ ಮಾತುಗಾರಿಕೆಯ ಅರ್ಥಧಾರಿಯಾಗಿ ಜನರ ಮೆಚ್ಚುಗೆಗಳಿಸಿದ್ದು, ಅಲ್ಲದೆ ಇವರು ಬಣ್ಣದ ವೇಷಧಾರಿಯಾಗಿದ್ದು, ಭೀಮ,ವೀರಭದ್ರ, ಯಮ ಮುಂತಾದ ವೇಷಗಳಲ್ಲಿ ಮಿಂಚಿದವರು.
ಜೊತೆಗೆ ಇವರು ಕಂಠ ಮಾಧುರ್ಯವುಳ್ಳ ಯಕ್ಷಗಾನ ಹಾಡುಗಾರಿಕೆಯ ಹಳೆಯ ಶೈಲಿಯ ಯಕ್ಷಗಾನ ಭಾಗವತರಾಗಿದ್ದಾರೆ. ಪಂಚವಟಿ, ಕೃಷ್ಣ ಸಂಧಾನ, ಅತಿಕಾಯಕಾಳಗ, ದೇವಿಮಹಾತ್ಮೆ ಮುಂತಾದ 10 ಪ್ರಸಂಗದ ಪದ್ಯಗಳನ್ನು ಕಂಠಪಾಠದಿಂದಲೇ (ಪುಸ್ತಕ ನೋಡದೆ) ಹಾಡುಗಾರಿಕೆಯಲ್ಲಿ ತೊಡಗುತ್ತಾರೆ. ಮಂಗಳೂರು, ಮಡಿಕೇರಿ, ಪುತ್ತೂರು, ಬೆಳ್ಳಾರೆ ಸೇರಿದಂತೆ ಸುಳ್ಯ ತಾಲೂಕಿನ ಹಲವಾರು ಕಡೆಗಳಲ್ಲಿ ಅರ್ಥಧಾರಿಯಾಗಿ, ಬಣ್ಣದ ವೇಷಧಾರಿಯಾಗಿ,
ಭಾಗವತರಾಗಿ ಕಾಣಿಸಿ ಕೊಂಡವರು. ಅಲ್ಲದೆ ಇವರ ಸಹಪಾಠಿಯಾಗಿದ್ದ ಶ್ರೀ ವೀರೇಂದ್ರ ಹೆಗ್ಗಡೆ, ಅಲ್ಲದೆ ಶ್ರೀಗಳಾದ ದಿ|ಕೊಳಂಬೆ ಪುಟ್ಟಣ್ಣಗೌಡ, ದಿ| ಕುರುಂಜಿ ವೆಂಕಟ್ರಮಣಗೌಡ, ಉಡುವೆ ಕೋಡಿ ಸುಬ್ಬಪ್ಪಯ್ಯ ಮುಂತಾದವರು ಇವರ ಯಕ್ಷಗಾನ ಕಲೆಗಾರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.ಪುತ್ತೂರು
ಸಹಕಾರಿ ಸಂಘದಿಂದ ಪ್ರಶಸ್ತಿಯಾಗಿ ಜಾಗಟೆ, (ಕೈಯಲ್ಲಿರುವ) ಯಕ್ಷಗಾನ ಕಲಾರಂಗ ಸುಳ್ಯ, ಚೊಕ್ಕಾಡಿಯಲ್ಲಿ ಜರುಗಿದ ಸುಳ್ಯ ತಾಲೂಕು 19ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮುಂತಾದಕಡೆಗಳಲ್ಲಿ ಗೌರವಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದ್ದಾರೆ.
ಶ್ರೀ ಭಟ್ಟರು ತಮ್ಮ 55 ನೇವಯಸ್ಸಿನಲ್ಲಿ ಸುಳ್ಯ ತಾಲೂಕು ಸರಕಾರಿ ನೌಕರರ ವೇಗದ ನಡಿಗೆಯಲ್ಲಿ ಪ್ರಥಮಸ್ಥಾನವನ್ನು ಗಳಿಸಿದವರು ಇವರ ಮನೆಯಿಂದ ಆಸ್ಪತ್ರೆ ಗೆ ಕೇವಲ 7 ನಿಮಿಷಗಳಲ್ಲಿ ತಲಪುತ್ತಾರಂತೆ. ಮುಖದಲ್ಲಿ ಮಂದಹಾಸ, ಕಾಲಲ್ಲಿ ಗಡಿಬಿಡಿಯಂತೆ ಕಾಣುವ ನಡಿಗೆ, ಕುತ್ತಿಗೆಗೆ ತಾಗಿಸಿದ ಕೈಯಲ್ಲಿ
ಮರದ ಹಿಡಿಯ ಕೊಡೆಯ ಜೊತೆಗೆ ಸುಳ್ಯಪೇಟೆಯಲ್ಲಿ ಕಂಡಾಗ ಇವರೊಬ್ಬರು ” ಶರ ವೇಗದ ಸರದಾರ ” ರೇ.
ಇವರ ಪತ್ನಿ ಶ್ರೀಮತಿ ಜಯಲಕ್ಷ್ಮಿ ಪುತ್ತೂರಿನ ವಿಕ್ಟರ್ಸ್, ಐವರ್ನಾಡಿನ ದೇವರಕಾನ, ಸುಳ್ಯವನ್ನೊಳಗೊಂಡಂತೆ ಮುಂತಾದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅಧ್ಯಾಪಿಕೆ- ಮಖ್ಯೋಪಧ್ಯಾಪಿಕೆಯಾಗಿ ನಿವೃತ್ತಿಗೊಂಡವರು ಹಾಗೂ ಎಂ.ಟೆಕ್ ಪದವೀಧರ ಸ್ವ- ಉದ್ಯೋಗ ದಲ್ಲಿ ತೊಡಗಿದ್ದು, ಹಲವಾರು ಪದಕಗಳನ್ನು ತನ್ನದಾಗಿಸಿಕೊಂಡು ಉತ್ತಮ ಕ್ರೀಡಾಪಟುವಾಗಿರುವ ಮಗ ಶ್ರೀ ಕೃಷ್ಣ ಕುಮಾರ್, ಮಗಳು ಶ್ರೀಮತಿ ವಿದ್ಯಾ ಶ್ರೀ ರಾಧಾಕೃಷ್ಣ ನಿರ್ದೇಶಕಿ, ಗಾನ ನೃತ್ಯ ಅಕಾಡೆಮಿ ಮಂಗಳೂರು. ನೃತ್ಯ ಕಲಾವಿದೆಯಾಗಿ ಗೌರವ ಪ್ರಶಸ್ತಿ ಪಡೆದವರು.
ದಿ.ಶ್ರೀ. ಕುರುಂಜಿ ವೆಂಕಟ್ರಮಣ ಗೌಡರಿಂದ “ಭೀಮ” ಭಟ್ಟರು ಎಂದೇ ಕರೆಯಿಸಿಕೊಂಡ ಇದೀಗ 79 ನೇ ವಯಸ್ಸಿನಲ್ಲಿರುವ ಶ್ರೀ ಪದ್ಮನಾಭ ಭಟ್ಟರು ಸುಳ್ಯದ ಕೆರೆಮೂಲೆಯಲ್ಲಿರುವ ತಮ್ಮ ನಿವಾಸವಾದ “ಶ್ರೀ ದೇವಿ ಕೃಪಾ” ದಲ್ಲಿ ಶ್ರೀ ದೇವರ ಪೂಜೆ ಇತ್ಯಾದಿ. ದಿನಚರಿಗಳ ಜೊತೆಗೆ ಪುಟ್ಟ ಸಂಸಾರದಲ್ಲಿ ವಿಶ್ರಾಂತಿ
ಜೀವನ ನಡೆಸುತ್ತಿದ್ದಾರೆ.
ವೃತ್ತಿಯಲ್ಲಿ ಒಂದೇ ಮುಖ. ಪ್ರವೃತ್ತಿಯಲ್ಲಿ ಬಹುಮುಖ. ಪ್ರತಿಭೆಯ ಕಲಾ ಸಾಧನೆಯ ಈ ಕಲಾವಿದರಿಗೆ…
- ಬಾಲು ದೇರಾಜೆ, ಸುಳ್ಯ.