ಪಾಲಕರ ಹರಸಾಹಸ : ವಿಜಯಲಕ್ಷ್ಮಿ ನಾಗೇಶ್

ಹಿಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದವು, ಆಗ ಮಗುವನ್ನು ಸಾಕಲು ಸಮಸ್ಯೆಗಳೇ ಬರುತ್ತಿರಲಿಲ್ಲ. ಆದರೆ ಇಂದು ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿವೆ. ಇದರಿಂದ ಮಕ್ಕಳನ್ನು ಸಾಕಲು ಪಾಲಕರು ಹರಸಾಹಸ ಪಡುತ್ತಿದ್ದಾರೆ. ಇಂದಿನ ಪಾಲಕತ್ವದ ಕುರಿತು ಲೇಖಕಿ ವಿಜಯಲಕ್ಷ್ಮಿ ನಾಗೇಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ನೀವು ಕೂಡಾ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

ಒಂದಲ್ಲ ಎರಡಲ್ಲ ಹತ್ತಾರು ಮಕ್ಕಳನ್ನು ಹೆತ್ತು ಹೊತ್ತು ಸಾಕಿ ಸಲಹಲು  ಏನೆಲ್ಲಾ ಕಸರತ್ತನ್ನು ಮಾಡುತ್ತಿದ್ದರು. ಕೃಷಿಯೇ ಪ್ರಧಾನವಾಗಿದ್ದ ಅಂದಿನ ದಿನಗಳಲ್ಲಿ ಹೊಲವನ್ನು ಉತ್ತು, ಬಿತ್ತು , ಕಳೆ ತೆಗೆದು, ಮಳೆಗಾಗಿ ಕಾದು, ಬೆಳೆ ಬೆಳೆದು ಉಪಜೀವಿಸಬೇಕಿತ್ತು. ಅದರೊಂದಿಗೆ ಒಂದಿಷ್ಟು ಪಶುಗಳ ಸಾಕಾಣಿಕೆಯೊಂದಿಗೆ ಪ್ರೀತಿ ಸಹಕಾರ ಸಾಮರಸ್ಯದ ಬದುಕು ಸಮತೋಲನೆಯಲ್ಲಿ ಸಾಗುತ್ತಿತ್ತು.

ಅಷ್ಟೇನೂ ವಿದ್ಯೆ ಇಲ್ಲದಿದ್ದರೂ ನಮ್ಮ ಹಿರಿಯರಲ್ಲಿ ವಿನಯ ಸಂಸ್ಕಾರ, ಹೃದಯವಂತಿಕೆ, ಕಾಳಜಿ, ಪ್ರೀತಿ ಎಲ್ಲವೂ ಮನೆಮಾಡಿತ್ತು. ಆಧುನಿಕತೆಯನ್ನು ಇನ್ನೂ ಅಷ್ಟಾಗಿ ಕಂಡಿರದಿದ್ದ ಆ ದಿನಗಳಲ್ಲಿ ಆದರ, ಅಭಿಮಾನ, ಅನುಕಂಪಗಳ ಹೊಳೆಯೇ ಹರಿಯುತ್ತಿತ್ತು. ಕೋಳಿ ಕೂಗುವ ಹೊತ್ತಿಗೇ ಎದ್ದು ಅವ್ವ ರಾಗಿ ಬೀಸುವುದಕ್ಕೆ ಅಣಿಯಾಗಬೇಕಿತ್ತು. ರಾಗಿ ಬೀಸುವಾಗ ರಾಗವಾದ ಹಾಡಿನ ಗುನುಗು ಕೇಳಿ ಬರುತ್ತಿತ್ತು. ರಾಗಿ ಬೀಸಿ, ಭತ್ತ ಕುಟ್ಟಿ ಅಕ್ಕಿ ಮಾಡಿ, ಆಕಳ ಹಾಲು ಕರೆದು ಮಕ್ಕಳಿಗೂ ಸೇರಿ ಮನೆಯವರಿಗೆಲ್ಲ ಉಣಬಡಿಸುತ್ತಿದ್ದುದ್ದರಲ್ಲಿ ಪೋಷಣೆಯ ಮಾಡಿದಂಥ ಸಾರ್ಥಕತೆಯು ದೊರಕುತ್ತಿತ್ತು.

ಫೋಟೋ ಕೃಪೆ : ಅಂತರ್ಜಾಲ

ಯಾವುದೇ ಸ್ವಾರ್ಥವಿಲ್ಲದೇ ಮನೆಯ ಯಜಮಾನ ವೃದ್ಧ ತಂದೆ ತಾಯಿಗಾಗಿ ತನ್ನ ಸಂಸಾರಕ್ಕಾಗಿ ತಾನೊಬ್ಬನೇ ದುಡಿದು ತರುತ್ತಿದ್ದಂಥ ಕಾಲದಲ್ಲಿ ತೃಪ್ತಿ ಎಂಬುದು ತುಂಬಿ ತುಳುಕುತ್ತಿತ್ತು. ಹಬ್ಬ ಹರಿದಿನ ಬಂದರೆ ಒಬ್ಬರ ಮನೆ ಸಾಲ ಮಾಡಿಯಾದರೂ ಹೊಸ ಉಡುಪುಗಳನ್ನು ಮಕ್ಕಳಿಗೆ ತೊಡಿಸುವ ಹಂಬಲವಿತ್ತು ಉತ್ಸುಕತೆಯಿತ್ತು.

ಅಕ್ಕ ತಂಗಿಯರು ಮಾತೃ ಹೃದಯಿಗಳಾಗಿ ಸಲಹುತ್ತಿದ್ದರು, ಅಣ್ಣ ತಮ್ಮಂದಿರು ತಂದೆಯ ಜವಾಬ್ದಾರಿಗಳನ್ನು ಹೊತ್ತು ನಿಭಾಯಿಸುತ್ತಿದ್ದರು. ಅಂದು ಮತ್ತು ಇಂದು ಸಂಸ್ಕಾರ, ಮಮಕಾರವೆಂಬ ಪದಗಳ ಅರ್ಥವನ್ನೇ ಕಳೆದುಕೊಳ್ಳುತ್ತಿರುವುದನ್ನು ತಾಳೆ ಹಾಕಿ ನೋಡಿದಾಗ ಒಂದೇ ಮಗು ಸಾಕು ಈಗಿನ ಖರ್ಚಿನಲ್ಲಿ ನಮಗಿರುವ ಆದಾಯಕ್ಕೆ ಎರಡು ಮಕ್ಕಳಾದರೆ ಸಾಕುವುದು ಹೇಗೆ ಎಂಬ ಆತಂಕವನ್ನು ಹೊಂದುವಂತಹ ವಿಪರ್ಯಾಸದ ಪರಿಸ್ಥಿತಿಯನ್ನು ನಾವೇ ತಂದುಕೊಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಒಂದು ಮನೆಯಲ್ಲಿ ಹತ್ತು ಜನ ದುಡಿದರೂ ತೃಪ್ತಿ ಎಂಬುದೇ ಇಲ್ಲದಂತಾಗಿದೆ ಇಂದಿನ ಜೀವನ ಶೈಲಿ. ಅಗತ್ಯಕ್ಕೂ ಮೀರಿದ ಅಳತೆಗೂ ಮೀರಿದ ಆಡಂಬರದ ಬದುಕು ಮತ್ತು ನಾಜೂಕಿನ ಸೆಳೆತವು ಸ್ವಾರ್ಥತೆಗೆ ಎಡೆಮಾಡಿಕೊಡುವುದರ ಮೂಲಕ ಮನ ಮನಗಳ ನಡುವಿನ ಪ್ರೀತಿ, ಮಮತೆ, ಬಾಂಧವ್ಯದ ಮೌಲ್ಯಗಳು ಕುಸಿಯುವಂತೆ ಮಾಡುತ್ತಿದೆಯೇನೋ ಎನ್ನಿಸುತ್ತದೆ.

ಜನ್ಮ ನೀಡಿದ ಕೆಲವೇ ಕೆಲವು ತಿಂಗಳುಗಳು ಮಾತ್ರ ಎದೆ ಹಾಲುಣಿಸಿ ನಂತರ ಎಲ್ಲಿ ತನ್ನ ಸೌಂದರ್ಯ ಹಾಳಾಗುತ್ತದೆಯೋ ಎಂಬ ಅಸಮಂಜಸ ಧೋರಣೆಯಿಂದ ಹಾಲುಣಿಸುವುದನ್ನು ನಿಲ್ಲಿಸುವ ( ಕೆಲವು ) ತಾಯಂದಿರು ಒಂದೆಡೆಯಾದರೆ, ಹುಟ್ಟಿದ ಮಗುವಿಗೆ ಮೂರು ವರ್ಷಗಳು ತುಂಬುತ್ತಿದ್ದಂತೆಯೇ ಅದಕ್ಕೆ ಶಿಶುವಿಹಾರಕ್ಕೆ ಹಾಕಿ ದುಡಿಮೆಗೆ ತೆರಳಬೇಕಾದ ಅನಿವಾರ್ಯತೆ ಕೆಲವು ತಾಯಂದಿರಿಗೆ ಇನ್ನೊಂದೆಡೆ. ಅವಿಭಕ್ತ ಕುಟುಂಬಗಳು ಹೆಚ್ಚಾಗಿರುತ್ತಿದ್ದ ಹಿನ್ನೆಲೆಯಲ್ಲಿ ಆ ದಿನಗಳಲ್ಲಿ ಮಕ್ಕಳ ಲಾಲನೆ ಪಾಲನೆಯಲ್ಲಿ ಹಿರಿಯರ ಬೆಂಬಲವು ಯಥೇಚ್ಚವಾಗಿ ಸಿಗುತ್ತಿತ್ತು. ಆದರೀಗ ಅಂತಹ ಹಿರಿಯರಿಗೂ ಸದಾ ತೆರೆದ ಬಾಗಿಲು ಎನ್ನುವಂತೆ ಎಲ್ಲೆಲ್ಲೂ ವೃದ್ಧಾಶ್ರಮಗಳದ್ದೇ ಗತ್ತು.!

ಫೋಟೋ ಕೃಪೆ : ಅಂತರ್ಜಾಲ

ಒಂದು ಕೈಯಲ್ಲಿನ ಐದು ಬೆರಳುಗಳೂ ಒಂದೇ ಸಮನಾಗಿರುವುದಿಲ್ಲ ಎನ್ನವಂತೆ ಕೆಲವು ಕುಟುಂಬಗಳಲ್ಲಿ ಕುಡಿತ, ಜೂಜು ಮತ್ತಿತರ ದುಶ್ಚಟಗಳಿಗಿಳಿದ ಎಷ್ಟೋ ಪೋಷಕರ ಮಕ್ಕಳಿಗೆ ಇನ್ನೆಲ್ಲಿಯ ಪೋಷಣೆ.?! ಹೀಗಿರುವಾಗ ಪೋಷಣೆ ಎಂಬ ಪದದ ಅರ್ಥವನ್ನು ಪ್ರತಿಯೊಬ್ಬ ಪೋಷಕರೂ ಗಂಭೀರವಾಗಿ ಯೋಚಿಸಬೇಕಾಗಿದೆ. ಹಣದ ಆಮಿಷ, ಅಸ್ತಿಗಾಗಿ ಹೆಣಗಾಟ, ಆಡಂಬರದ ಬದುಕಿನ ವ್ಯಾಮೋಹ, ಎಲ್ಲವೂ ಮಾನವೀಯತೆಯನ್ನೇ ಮರೆಸಿ ಸಂಬಂಧಗಳ ಕೊಂಡಿಯನ್ನೇ ಕಳಚುವಂತೆ ಮಾಡಿವೆ.

ಮನದಲ್ಲಿ ಇರುವಂಥ ಪ್ರೀತಿಯನ್ನು ಮಕ್ಕಳೊಂದಿಗೆ ಹಂಚಿಕೊಳ್ಳಲು ಸಮಯವೇ ಇಲ್ಲದಂತಾಗಿ, ಪೋಷಣೆಯು ಒಂದು ಕರ್ತವ್ಯ ಎನ್ನುವುದರ ಬದಲಾಗಿ ಅದೊಂದು ಅನಿವಾರ್ಯ ಜವಾಬ್ದಾರಿ ಅಂದುಕೊಳ್ಳುವ ಪರಿಸ್ಥಿತಿಯು ನಿರ್ಮಾಣವಾಗಿದೆ. ಪೋಷಕರೆಂಬ ಪೋಷಾಕನ್ನು ಧರಿಸಿ ಮಕ್ಕಳನ್ನೇ ಆಗಲಿ ಮನೆಯವರನ್ನೇ ಆಗಲಿ ಪೋಷಿಸುವಂತೆ ಆಗಿರುವುದು ವಿಷಾದನೀಯವೇ. ಆದಷ್ಟು ನಮ್ಮ ಮಕ್ಕಳಿಗೂ ಹಾಗೂ ನಮ್ಮನ್ನು ಹೆತ್ತು ಹೊತ್ತು ಸಾಕಿ ಬೆಳೆಸಿದಂಥ ಹಿರಿಯರಿಗೂ ಉತ್ತಮ ಪೋಷಕರಾಗಿರಲು ಪ್ರಯತ್ನಿಸೋಣವೇ.


  •  ವಿಜಯಲಕ್ಷ್ಮಿ ನಾಗೇಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW