ಪರ್ವತವಾಣಿಯವರು ಎದ್ದು ನಿಂತು ಕೂಗಿದ್ದು ಯಾರಿಗಾಗಿ?ಯಾತಕ್ಕಾಗಿ?

(ಫೋಟೋ ಕೃಪೆ : ಶ್ರೀಮತಿ ಯಮುನಾ ಮೂರ್ತಿ)

ನೆನಪು ಸಾವಿರ – ಹೂಲಿ ಶೇಖರ್‌
ಅಂದು ಅವರು ಕಲಾಕ್ಷೇತ್ರ ನಡುಗುವಂತೆ ಗಟ್ಟಿಯಾಗಿ ಕೂಗಿದರು. ಪ್ರೇಕ್ಷಕರ ಮಧ್ಯ ಕುಳಿತಿದ್ದ ಜನಪ್ರಿಯ ನಾಟಕಕಾರ ಪರ್ವತದಂಥ ಗಟ್ಟಿದನಿಯ ನಟ, ನಾಟಕಕಾರ ಪರ್ವತವಾಣಿಯವರು ಎದ್ದು ನಿಂತು ಕೂಗಿದ್ದು ಯಾರಿಗಾಗಿ? ಯಾತಕ್ಕಾಗಿ?

*******

ಯಾವುದೋ ಕೆಲಸದ ನಿಮಿತ್ತ ದೂರದ ಅಂಬಿಕಾನಗರದಿಂದ [ಉ.ಕ.] ಬೆಂಗಳೂರಿಗೆ ಬಂದಿದ್ದೆ. ನನ್ನ ಪ್ರೀತಿಯ ಮತ್ತು ಆತ್ಮೀಯರಾಗಿದ್ದ ಶ್ರೀ ಬಿ.ವಿ.ವೈಕುಂಠರಾಜು ಅವರು ‘ಬೆಂಗಳೂರಿಗೆ ಬಂದಾಗ ಭೇಟಿಯಾಗಿರಿ’ ಎಂದು ಫೋನು ಮಾಡಿದ್ದರು. ಆಗ ಅವರು ರಾಜ್ಯ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ನಾನು ಅಕಾಡೆಮಿಯ ಸದಸ್ಯನೂ ಆಗಿರಲಿಲ್ಲ. ಆದರೂ ನನ್ನ ಬಗ್ಗೆ ಏನೋ ವಿಶ್ವಾಸ ಅವರಿಗೆ. ಅನೇಕ ಬಾರಿ ಅವರೊಟ್ಟಿಗೆ ಹುಬ್ಬಳ್ಳಿ, ದಾಂಡೇಲಿ, ಶಿರಸಿ, ದಾವಣಗೆರೆ ಎಂದೆಲ್ಲ ಸುತ್ತಾಡಿ ಹಲವು ರಂಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ.

ಮತ್ತೇನೋ ಹೊಸ ಯೋಜನೆ ಹಾಕಿಕೊಂಡಿರಬೇಕೆಂದು ಅವರನ್ನು ಭೇಟಿಯಾಗಲು ಅಕಾಡೆಮಿಯ ಕಚೇರಿ ಇರುವ ರವೀಂದ್ರ ಕಲಾಕ್ಷೇತ್ರದ ಕಡೆಗೆ ಹೊರಟೆ. ಆಗಿನ್ನೂ ಕನ್ನಡ ಭವನ ನಿರ್ಮಾಣವಾಗಿರಲಿಲ್ಲ. ಅಕಾಡೆಮಿ ಕಚೇರಿ ಆಗ ಕಲಾಕ್ಷೇತ್ರದ ಬಲಮಹಡಿಯ ಮೇಲಿತ್ತು.

ಟೌನ್‌ ಹಾಲ್‌ ಮುಂದಿನ ಬಸ್‌ ಸ್ಟಾಪ್‌ನಲ್ಲಿ ಇಳಿದು ಕಲಾಕ್ಷೇತ್ರದ ಕಚೇರಿಯ ಆವರಣದಲ್ಲಿ ಕಾಲಿಡುತ್ತಿದ್ದಂತೆ ಎದುರಿಗೆ ಮೈಕೋ ಲಲಿತ ಕಲಾಸಂಘದವರು ಹಾಕಿದ್ದ ದೊಡ್ಡ ಬೋರ್ಡು ನೋಡಿ ಕುತೂಹಲಗೊಂಡೆ. ಮತ್ತು ಸಂತೋಷವೂ ಆಯಿತು. ಯಾಕೆಂದರೆ ಅದು ಅಂದು ಸಂಜೆ ಕಲಾಕ್ಷೇತ್ರದಲ್ಲಿ ಪ್ರದರ್ಶನವಾಗುತ್ತಿರುವ ನಾಟಕದ ಫಲಕ ಅದಾಗಿತ್ತು. ಸಂತೋಷ ಯಾಕೆಂದರೆ ಅವತ್ತು ಪ್ರದರ್ಶನವಾಗಲಿರುವ ನಾಟಕ ಬೇರೆ ಯಾವುದೂ ಅಲ್ಲ. ನನ್ನದೇ ನಾಟಕ ‘ಹಾವು ಹರಿದಾಡತಾವ’ ಆಗಿತ್ತು. ಖ್ಯಾತ ರಂಗ ನಿರ್ದೇಶಕಿ ಬಿ. ಜಯಶ್ರೀಯವರ ನಿರ್ದೇಶನ ಬೇರೆ. ಪಳಗಿದ ಮೈಕೋ ಕಲಾವಿದರ ತಂಡ. ನಾನು ಉತ್ಸಾಹದಿಂದ ಅಕಾಡೆಮಿ ಕಚೇರಿಯ ಮೆಟ್ಟಿಲು ಹತ್ತಿದೆ. ಅಧ್ಯಕ್ಷರಾದ ಶ್ರೀ ಬಿ.ವಿ. ವೈಕುಂಠರಾಜು ಅವರಿಗೆ ಈ ಬಗ್ಗೆ ಹೇಳೋಣ ಎಂದು ಅವಸರದ ಹೆಜ್ಜೆ ಇಟ್ಟೆ.

ಒಳಗೆ ಹೋಗುತ್ತಿದ್ದಂತೆ ಅಲ್ಲಿಯ ಸಿಬ್ಬಂದಿ ಹೇಳಿದರು. ‘ ಬನ್ನಿ ಸಾರ್‌. ನಿಮಗೆ ಗೊತ್ತಾಗ್ಲಿಲ್ವ? ವೈಕುಂಠರಾಜು ಅವರು ಅಕಾಡೆಮಿ ಅಧ್ಯಕ್ಷತೆಗೆ ರಾಜೀನಾಮೆ ಕೊಟ್ಟಾಯ್ತು’ಅದನ್ನು ಕೇಳುತ್ತಲೇ ನಾನು ಇನ್ನೂ ಅಚ್ಚರಿಯಿಂದ ಅಧ್ಯಕ್ಷರ ಚೇಂಬರಿನತ್ತ ನೋಡಿದೆ. ‘ಪರವಾಗಿಲ್ಲ. ಒಳಗೋಗಿ…! ಹೊಸ ಅಧ್ಯಕ್ಷರು ಬಂದು ಸೀಟ್‌ ಮೇಲೆ ಕೂತಾಯ್ತು’ ಎಂದೂ ಹೇಳಿದರು. ನಾನು ಪೆಚ್ಚನಂತೆ ಅವರನ್ನೊಮ್ಮೆ ನೋಡಿ ಹೊಸ ಅಧ್ಯಕ್ಷರು ಯಾರಿರಬಹುದು ಎಂದು ಒಳಗೆ ಕಾಲಿಟ್ಟೆ. ಅಲ್ಲಿ ಅಧ್ಯಕ್ಷರ ಖುರ್ಚಿ ಮೇಲೆ ಕೂತಿದ್ದ ವ್ಯಕ್ತಿಯನ್ನು ನೋಡಿ ಇನ್ನೂ ಅಚ್ಚರಿಪಟ್ಟೆ. ಖುರ್ಚಿಗೆ ಪೂರಾ ತುಂಬಿಕೊಂಡ ವ್ಯಕ್ತಿ. ವೈಕುಂಠರಾಜು ಅವರು ಈ ಖುರ್ಚಿಯಲ್ಲಿ ಕೂತಾಗ ಅರ್ಧ ಖುರ್ಚಿ ಇನ್ನೂ ಜಾಗವಿದೆ ಎಂದು ಹೇಳವಂತಿರುತ್ತಿತ್ತು. ಆದರೆ ಈ ವ್ಯಕ್ತಿ ಕೂತ ಭಂಗಿ ಖುರ್ಚಿಯನ್ನು ಮುರಿಯುವಂತಿತ್ತು. ಅವರು ಬೇರೆ ಯಾರೂ ಆಗಿರದೆ ನನಗೆ ಈ ಮೊದಲೇ ಪರಿಚಯವಿದ್ದ ಹಿರಿಯರಾದ ಜನಪ್ರಿಯ ನಾಟಕಕಾರ ಪರ್ವತವಾಣಿಯವರಾಗಿದ್ದರು.

‘ ಓ… ಹೋಹೋ… ! ಹುಲಿರಾಯ… ಎಲ್ಲಿಂದ?… ಯಾವ ಬೆಟ್ಟದಿಂದ ಬಂತು’ ಎಂದು ಆಫೀಸೇ ನಡುಗುವಂತೆ ಗಹಗಹಿಸಿ ನಕ್ಕರು. ಜೊತೆಗೆ ಕಾಫಿಗೂ ಆರ್ಡರು ಮಾಡಿದರು. ಪರ್ವತವಾಣಿಯವರನ್ನು ಕಂಡವರಿಗಷ್ಟೇ ಗೊತ್ತು. ನಿಜವಾಗಲೂ ಅವರು ದೇಹ ತೂಕದಲ್ಲೂ ಪರ್ವತ. ಗುಡುಗುವ ದನಿಯಲ್ಲೂ ಪರ್ವತ. ನಟನೆ- ನಾಟಕ ರಚನೆಯಲ್ಲೂ ಪರ್ವತ. ಅವರ ‘ಬಹದ್ದೂರ ಗಂಡು’ ನಾಟಕ ನೋಡಿದವರು ಅವರನ್ನೆಂದೂ ಮರೆಯುವುದಿಲ್ಲ. ವೃತ್ತಿಯಲ್ಲಿ ಅರಣ್ಯ ಇಲಾಖೆಯ ನೌಕರನಾಗಿ ರಂಗಭೂಮಿಯಲ್ಲಿ ಅವರಿಟ್ಟ ಶ್ರದ್ಧೆಯೂ ಪರ್ವತದಂತೆಯೇ ಅಷ್ಟೇ ಗಟ್ಟಿ. ನಾನು ವಿದ್ಯುತ್ ಇಲಾಖೆಯಲ್ಲಿ ನೌಕರಿ ಮಾಡುತ್ತಲೇ ರಂಗಭೂಮಿಯತ್ತ ವಾಲಿದವ. ನಮ್ಮಂತೆ ಇತರ ಅನೇಕ ಕ್ಷೇತ್ರಗಳಲ್ಲಿ ವೃತ್ತಿ ಮಾಡಿಕೊಂಡೇ ರಂಗಭೂಮಿಯ ತೇರು ಎಳೆಯುವವರು ಅದೆಷ್ಟೋ ಜನ ಇದ್ದಾರಲ್ಲ. ನಮಗೆಲ್ಲ ಅವರೇ ಸ್ಫೂರ್ತಿ. ನಮ್ಮನ್ನು ಗುರುತಿಸಿದ್ದೂ ಅವರೇ. ಯೂನಿವರ್ಸಿಟಿಯ ಅಕಾಡೆಮಿಕಗಳಲ್ಲ.ಇದನ್ನು ಪರ್ವತವಾಣಿಯವರೇ ನನಗೆ ಹೇಳಿದ್ದು.

ಅವತ್ತು ಕಲಾಕ್ಷೇತ್ರದಲ್ಲಿ ನನ್ನ ನಾಟಕವಿರುವುದು ಅವರಿಗೂ ಗೊತ್ತಿತ್ತಂತೆ. ಬೆಳಿಗ್ಗೆ ಯಾರದೋ ಕೈನಲ್ಲಿ ಆಮಂತ್ರಣ ಪತ್ರಿಕೆ ಕೊಟ್ಟು ಕಳಿಸಿ, ‘ಬಂದು ನಾಟಕ ನೋಡಿ ಸಾರ್‌’ ಅಂದಿದ್ದರಂತೆ. ಅಕಾಡೆಮಿ ಖುರ್ಚಿಯಲ್ಲಿ ಕುಳಿತಿದ್ದರಲ್ಲ. ದಿನಕ್ಕೆ ಅಂಥ ಹತ್ತಾರು ಆಮಂತ್ರಣ ಪತ್ರಿಕೆಗಳು ಟೇಬಲ್ಲಿಗೆ ಬರುತ್ತಿದ್ದುದು ವಾಡಿಕೆ. ಅದನ್ನು ಅವರು ಅಷ್ಟು ಗಂಭೀರವಾಗಿಯೂ ತಗೆದುಕೊಂಡಿರಲಿಲ್ಲ. ನನ್ನನ್ನು ನೋಡಿದ ಮೇಲೆ ಅವರು ನಾಟಕಕ್ಕೆ ಬರುವುದನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡರು. ‘ಇವತ್ತು ನಿಮ್ಮ ನಾಟಕವನ್ನು ನಿಮ್ಮ ಪಕ್ಕದಲ್ಲಿ ಕೂತೇ ನೋಡ್ತಿನಿ. ಆದ್ರೆ ಕಲಾಕ್ಷೇತ್ರದಲ್ಲಿ ನಾನು ಬರುವ ವಿಚಾರ ಯಾರಿಗೂ ಹೇಳಬೇಡಿ. ವೈಕುಂಠರಾಜು ತಮ್ಮ ಅವಧಿಯನ್ನು ಪೂರ್ಣಗೊಳಿಸದೇ ರಾಜೀನಾಮೆ ಕೊಟ್ಟು ಹೋದರು. ಶ್ರೀರಾಮ ವನವಾಸಕ್ಕೆ ಹೋದ ಮೇಲೆ ಭರತ ರಾಜ್ಯ ಆಳಿದಂಥ ಸ್ಥಿತಿ ನನ್ನದು. ಕಾರಣ ಏನೂಂತ ಕೇಳಬೇಡಿ. ನಾನು ಇಲ್ಲಿ ಹಿರಿಯ ಸದಸ್ಯ ನೋಡಿ. ಎಲ್ಲ ಸೇರಿ ನನ್ನ ಕೊರಳಿಗೆ ತಗಲಿಸಿದ್ರು’ ಎಂದು ಮತ್ತೊಮ್ಮೆ ಜೋರಾಗಿ ನಕ್ಕರು.

(ಫೋಟೋ ಕೃಪೆ : ಶ್ರೀಮತಿ ಯಮುನಾ ಮೂರ್ತಿ. ರೇಡಿಯೋ ನಾಟಕದಲ್ಲಿ ಶ್ರೀರಂಗ, ಪರ್ವತವಾಣಿ ಮತ್ತು ಎನ್.ವಿ.ರಾಮಚಂದ್ರ ಮೂರ್ತಿ(ಯಮುನಾ ಮೂರ್ತಿ ಪತಿ))

ನಾಟಕ ಸುರುವಾಗುವ ಎರಡು ನಿಮಿಷದ ಮೊದಲು ಇಬ್ಬರೂ ಕಲಾಕ್ಷೇತ್ರದ ಕತ್ತಲೆಯೊಳಗೆ ಹಿಂದಿನ ಸಾಲಿನಲ್ಲಿ ಖುರ್ಚಿ ಹುಡುಕಿಕೊಂಡು ಅಕ್ಕ-ಪಕ್ಕ ಕೂತೆವು. ಕತ್ತಲಲ್ಲಿಯೇ ಪರ್ವತವಾಣಿಯವರನ್ನು ಗುರುತಿಸಿದ ಹಲವು ಪ್ರೇಕ್ಷಕರು ಸದ್ದಿಲ್ಲದೇ ‘ನಮಸ್ಕಾರ ಸಾರ್’ ಅಂದರು. ನಾಟಕ ಅಕಾಡೆಮಿಯ ಅಧ್ಯಕ್ಷರೊಬ್ಬರು ಕೊನೆಯ ಸಾಲಿನಲ್ಲಿ ಕೂತು ನಾಟಕ ನೋಡುವುದು ಕೇವಲ ಶ್ರೀ ಪರ್ವತವಾಣಿಯಂಥವರಿಗೆ ಸಾಧ್ಯವೇನೋ. ಯಾಕೆಂದರೆ ಆಮಂತ್ರಣದಲ್ಲಿ ಹೆಸರು ಅಚ್ಚು ಹೊಡೆಸಿ, ಮುಂದಿನ ಸಾಲಿನಲ್ಲಿ ಖುರ್ಚಿ ಕಾದಿರಿಸಿದರೂ ಹಲವರು ಬಂದು ನಾಟಕ ನೋಡುವುದಿಲ್ಲ. ಅಂಥದನ್ನೂ ನೋಡಿದ್ದೇನೆ.

ನಾನು ಅಲ್ಲಿ ಬಂದಿರುವುದನ್ನು ತಂಡದವರಿಗಾಗಲೀ, ನಿರ್ದೇಶಕರಿಗಾಗಲೀ ಹೇಳಿರಲಿಲ್ಲ. ಅವತ್ತಿನ ಪ್ರದರ್ಶನದ ನಾಟಕಕಾರ ತಂಡದ ಯಾರಿಗೂ ಹೇಳದೆ ಮಾಮೂಲಿ ಪ್ರೇಕ್ಷಕಕನಂತೆ, ತನ್ನ ನಾಟಕ ನೋಡುವ ಸಂಭ್ರಮವೇ ಬೇರೆ. ಅಂಥ ಸಂಭ್ರಮ ಹಲವಾರು ಕಡೆ ಹಲವಾರು ಬಾರಿ ನನಗೆ ಒದಗಿದೆ. ಕೇವಲ ಇವತ್ತಿನ ನಾಟಕ ಮಾತ್ರವಲ್ಲ. ಹಾಗಾಗಿ ನನಗೆ ಏನೂ ಅನಿಸಲಿಲ್ಲ.

ನಾಟಕ ಸುರುವಾಯಿತು. ಜಾನಪದ ಹಾಡು ನೃತ್ಯ ಸೊಗಸಾಗಿತ್ತು. ನಾಟಕಕ್ಕೆ ಖ್ಯಾತ ಸಂಗೀತ ಮಾಸ್ತರರೂ, ನಟರೂ ಗುಬ್ಬಿ ಕಂಪನಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದವರೂ ಆಗಿದ್ದ ಶ್ರೀ ಹೆಚ್‌.ಕೆ.ಯೋಗಾನರಸಿಂಹ ಅವರು ಸಂಗೀತ ನೀಡಿದ್ದು ಅಮೋಘವಾಗಿತ್ತು. ಪ್ರಖ್ಯಾತರೂ ಪ್ರತಿಭಾವಂತರೂ ಆದ ಶ್ರೀಮತಿ ಬಿ.ಜಯಶ್ರೀ ಅವರು ಇಂಥ ನಾಟಕ ಕಟ್ಟುವಲ್ಲಿ ಪಳಗಿದ ಕೈ. ಉತ್ತರ ಕರ್ನಾಟಕದ ಸಣ್ಣಾಟ ಪ್ರಾಕಾರದಲ್ಲಿ ನಾಟಕವನ್ನು ರಚಿಸಿದ್ದೆ. ಕತೆಗೆ ಪೂರಕವಾದ ಹಾಡುಗಳನ್ನೂ ಬರೆದಿದ್ದೆ. ಶ್ರೀ ಯೋಗಾನರಸಿಂಹ ಅವರ ಸಂಗೀತ ವಿಶಿಷ್ಠವಾಗಿತ್ತು. ನೃತ್ಯದಿಂದ ಒಡಗೂಡಿದ ದೃಶ್ಯ ಸಂಯೋಜನೆ, ಕುತೂಹಲಕಾರಿಯಾಗಿತ್ತು. ಪಕ್ಕದಲ್ಲಿ ಕುಳಿತಿದ್ದ ಪರ್ವತವಾಣಿಯವರು ಆಗಾಗ ನನ್ನ ಬೆನ್ನು ಚಪ್ಪರಿಸಿ ‘ವ್ಹಾ…ವ್ಹಾ..!’ ಅನ್ನುತ್ತಿದ್ದರು. ನಾನು ಅಂಥ ಸಹೃದಯ ಧೀಮಂತರ ನುಡಿಗಳನ್ನು ಕೇಳಿ ಪುಳಕಿತನಾಗಿದ್ದೆ.

(ಫೋಟೋ ಕೃಪೆ :ಶ್ರೀಮತಿ ಯಮುನಾ ಮೂರ್ತಿ)

ಪ್ರದರ್ಶನ ಮುಗಿದು ಹತ್ತು ನಿಮಿಷ ಇಡೀ ಕಲಾಕ್ಷೇತ್ರದ ತುಂಬ ಚಪ್ಪಾಳೆಗಳ ಸುರಿಮಳೆಯೇ ಆಯಿತು. ಒಳಗಿದ್ದ ಕಲಾವಿದರೆಲ್ಲ ರಂಗಕ್ಕೆ ಬಂದು ಸಾಲಾಗಿ ನಿಂತು ಪ್ರೇಕ್ಷಕರಿಗೆ ವಂದಿಸಿದರು. ಮತ್ತೆ ಚಪ್ಪಾಳೆಗಳು. ಪರ್ವತವಾಣಿ ಯವರು ಜೋರಾಗಿ ಕೈ ತಟ್ಟುತ್ತಿದ್ದರು. ನಿರೂಪಕರು ಬಂದು ಎಲ್ಲ ಕಲಾವಿದರು ಮತ್ತು ತಂತ್ರಜ್ಞರ ಹೆಸರನ್ನು ಹೇಳಿ ಪರಿಚಯಿಸಿದರು. ಕೊನೆಯಲ್ಲಿ ನಿರ್ದೇಶಕಿ ಬಿ. ಜಯಶ್ರೀ ಅವರನ್ನೂ ಪರಿಚಯಿಸಲಾಯಿತು. ಎಲ್ಲ ಮುಗಿಯಿತೆಂದು ಪ್ರೇಕ್ಷಕರು ಎದ್ದೇಳುವ ಸಮಯ. ಕೂಡಲೇ ಎದ್ದು ನಿಂತ ಪರ್ವತವಾಣಿಯವರು ಗಟ್ಟಿಯಾಗಿ ಎದುರು ಪರದೆಗೆ ಪ್ರತಿಧ್ವನಿಯಾಗುವಂತೆ ಕೂಗಿ ಹೇಳಿದರು. ‘ ನಾಟಕ ಬರೆದ ಲೇಖಕರೂ ಸಭಾಂಗಣದಲ್ಲಿದ್ದಾರೆ. ಅವರನ್ನೂ ವೇದಿಕೆಗೆ ಕರೀರಿ ಸ್ವಾಮೀ…!’ ಅಂದರು. ಒಂದು ಕ್ಷಣ ಇಡೀ ಕಲಾಕ್ಷೇತ್ರ ಹಿಂದಿನ ಸಾಲಿನತ್ತ ಹೊರಳಿ ನೋಡಿತು. ಎಲ್ಲರಿಗೂ ದಿಗಿಲು.ಅಚ್ಚರಿ. ವೇದಿಕೆಯಲ್ಲಿದ್ದವರು ಎದ್ದು ನಿಂತ ಪರ್ವತವಾಣಿಯವರನ್ನೇ ನೋಡುತ್ತಿದ್ದರು. ನನಗೋ ಸಂಕೋಚ-ಮುಜುಗುರದಿಂದ ಮೈ ಹಿಡಿಯಾಗಿ ಹೋಗಿತ್ತು. ಕಾರಣ ನಾನು ಅಲ್ಲಿಗೆ ಬಂದಿರುವ ವಿಷಯವನ್ನು ಮೊದಲೇ ತಂಡದವರಿಗೆ ತಿಳಿಸಿರಿಲಿಲ್ಲ. ಹಾಗೇ ಅವತ್ತು ನನ್ನ ನಾಟಕವನ್ನು ಪ್ರದರ್ಶನಕ್ಕೆ ಇಟ್ಟುಕೊಂಡಿದ್ದೇವೆ ಎಂದು ಅವರೂ ಕೂಡ ನನಗೆ ಹೇಳಿರಲಿಲ್ಲ. ಅವರಿಗೂ ಮುಜುಗುರ. ನನಗೂ ಸಂಕೋಚ. ಇಂಥ ಅನೇಕ ಸಂಕೋಚಗಳು ಮುಂದೆ ಸಾಕಷ್ಟು ಕಡೆ ನನಗಾಗಿದೆ. ರಾಜ್ಯದ ಅನೇಕ ಕಡೆ ನನ್ನ ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ನನಗೆ ಗೊತ್ತೇ ಇರುವುದಿಲ್ಲ. ಏನಾದರಾಗಲಿ. ನನ್ನ ಹೆಸರು ಹೇಳಿಕೊಂಡು ಆಡುತ್ತಾರಲ್ಲ. ಅಷ್ಟು ಸಾಕು.

ಕೊನೆಗೆ ಶ್ರೀ ಪರ್ವತವಾಣಿಯವರು ನನಗೆ ಹೇಳಿದ ಮಾತು ಇವತ್ತಿಗೂ ನನ್ನ ಮನಸ್ಸಿನಲ್ಲಿದೆ.

‘ಕನ್ನಡದಲ್ಲಿ ಇಂದು ಲಕ್ಷ-ಲಕ್ಷ ಖರ್ಚು ಮಾಡಿ ನಾಟಕ ಮಾಡುತ್ತಾರೆ. ಆದರೆ ನಾಟಕಕಾರನಿಗೆ ಒಂದು ರೂಪಾಯಿಯ ಕಾರ್ಡು ಬರೆದು ತಿಳಿಸುವ ಒಪ್ಪಿಗೆ ಪಡೆಯುವ ಸೌಜನ್ಯ ತೋರುವುದಿಲ್ಲ.

ಇದೇ ನೋವಿನ ಸಂಗತಿ’ ಅಂದರು. ನಾನು ಏನೂ ಮಾತಾಡದೆ ಪ್ರಯೋಗ ಸುಂದರವಾಗಿತ್ತೆಂದು ಊರಿನ ಜನಕ್ಕೆ ಬಂದು ಹೇಳಿದೆ.

ಲೇಖನ : ಹೂಲಿಶೇಖರ್

ak.shalini@outlook.com

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW