ಮದುವೆ ಮನೆಯಲ್ಲಿ ದೇವರ ಸಮಾರಾಧನೆ ದಿವಸ ಹೂವೀಳ್ಯ ಎಲ್ಲ ಮುಗಿದ ಮೇಲೆ ಊಟಕ್ಕೆ ಬೇಳೆ ಒಬ್ಬಟ್ಟು, ಚಿತ್ರಾನ್ನ, ಬೋಂಡಾ, ಪಾಯಸ, ಕೋಸಂಬರಿ, ಪಲ್ಯ, ಅನ್ನ, ಸಾರಿನ ಜೊತೆ ಈ ಸಂಡಿಗೆ ಹುಳಿ ಇದ್ದರೇ ಊಟದ ರುಚಿ ಇನ್ನಷ್ಟು ಹೆಚ್ಚಿಸುವುದು. ಒಮ್ಮೆ ಆ ರುಚಿ ಸವಿದ ಮೇಲೆ ಮತ್ತೆ ಮತ್ತೆ ತಿನ್ನಬೇಕು ಎನ್ನುವರಿಗೆ ಈ ಸಂಡಿಗೆ ಹುಳಿ ಮಾಡುವ ವಿಧಾನ.
ಆಂಬೋಡೆಗೆ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು :
1/2 ಕಪ್ ಕಡಲೆಬೇಳೆ
1/4 ಕಪ್ ತೊಗರಿಬೇಳೆ
3 ಚಮಚ ಕಾಯಿ ತುರಿ
5 ರಿಂದ 6 ಹಸಿಮೆಣಸಿನಕಾಯಿ
ಶುಂಠಿ
ಕೊತ್ತಂಬರಿ
ಕರಿಯಲು ಎಣ್ಣೆ
ರುಚಿಗೆ ತಕ್ಕಷ್ಟುಉಪ್ಪು
ಆಂಬೋಡೆ ಮಾಡುವ ವಿಧಾನ : 1/2 ಕಪ್ ಕಡಲೆಬೇಳೆ, 1/2 ಕಪ್ ತೊಗರಿಬೇಳೆಯನ್ನು ಚೆನ್ನಾಗಿ ನೆನಸಬೇಕು. ಒಂದು ಮಿಕ್ಸಿ ಜಾರ್ ನಲ್ಲಿ ನೆನೆಸಿದ 1/2 ಕಪ್ ತೊಗರಿ ಬೇಳೆಯಲ್ಲಿ 1/4 ಕಪ್ ಮತ್ತು 1/2 ಕಪ್ ಕಡಲೆಬೇಳೆ,ಕಾಯಿ ತುರಿ, ಹಸಿಮೆಣಸಿನಕಾಯಿ, ಶುಂಠಿ, ಇಂಗು, ಕೊತ್ತಂಬರಿ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಆಂಬೋಡೆ ಹದಕ್ಕೆ ಮಿಕ್ಸಿ ಮಾಡಬೇಕು. ಮಿಕ್ಸಿ ಆದ ನಂತರ ಈ ಮಿಶ್ರಣದಿಂದ ಒಂದು ಚಮಚ ಹುಳಿಗೆ ಎತ್ತಿಟ್ಟುಕೊಂಡು, ಉಳಿದದ್ದನ್ನು ಆಂಬೋಡೆ ಆಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಬೇಕು ಅಥವಾ ಸ್ಟೀಮ್ ಮಾಡಿ ಹುಳಿಗೆ ಹಾಕಬಹುದು.
ಹುಳಿ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು :
1/4 ಕಪ್ ತೊಗರಿಬೇಳೆ
1 1 ಟೀ ಚಮಚ ಕೋತಂಬರಿ ಬೀಜ
1/2 1 ಟೀ ಚಮಚ ಜೀರಿಗೆ
5 ರಿಂದ 6 ಒಣಮೆಣಸಿನ ಕಾಯಿ
1 1 ಟೀ ಚಮಚ ಎಣ್ಣೆ
ಒಗ್ಗರಣ್ಣೆಗೆ 1 ಚಮಚ ಕಾಯಿ ತುರಿ
ಇಂಗು
ಕರಿಬೇವು
1/4 1 ಟೀ ಚಮಚ ಅರಿಶಿನ
1/2 ಚಮಚ ಬೆಲ್ಲ
ರುಚಿಗೆ ತಕ್ಕಷ್ಟು ಉಪ್ಪು
ಹುಳಿ ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ 1 ಟೀ ಚಮಚ ಕೊತ್ತಂಬರಿ ಬೀಜ, 1/2 ಟೀ ಚಮಚ ಜೀರಿಗೆ, 5 ರಿಂದ 6 ಒಣಮೆಣಸಿನ ಕಾಯಿಯನ್ನುಹಾಕಿ ಚನ್ನಾಗಿ ಹುರಿದುಕೊಳ್ಳಬೇಕು. ಅನಂತರ ಈ ಮಿಶ್ರಣದ ಜೊತೆಗೆ ನನೆಸಿಟ್ಟ 1/4 ಕಪ್ ತೊಗರಿಬೇಳೆಯನ್ನು ಸೇರಿಸಿ ಮಿಕ್ಸಿ ಮಾಡಿ ಮಸಾಲೆಯನ್ನು ಸಿದ್ಧಪಡಿಸಬೇಕು. ಸ್ಟೋವ್ ಮೇಲೆ ಪಾತ್ರೆಯನ್ನಿಟ್ಟು ಅದರಲ್ಲಿ ಎತ್ತಿಟ್ಟುಕೊಂಡ ಒಂದು ಚಮಚ ಆಂಬೊಡೆ ಮಸಾಲೆ, ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ಸ್ವಲ್ಪ ಅರಿಶಿನ, ಮಿಕ್ಸಿ ಮಾಡಿದ ಮಸಾಲೆ ಮತ್ತು ಕರಿದಿಟ್ಟುಕೊಂಡ ಆಂಬೋಡೆಯನ್ನು ಒಂದೇ ಪಾತ್ರೆಯಲ್ಲಿ ಹಾಕಬೇಕು.
ಅನಂತರ ಸ್ವಲ್ಪ ಎಣ್ಣೆಯಲ್ಲಿ ಸಾಸಿವೆ,ಇಂಗು,ಒಣಮೆಣಸಿನ ಕಾಯಿ,ಕರಿಬೇವು ಹಾಕಿ ಒಗ್ಗರಣೆ ರೆಡಿ ಮಾಡಿ ಅದನ್ನು ಸಿದ್ದವಾದ ಮಸಾಲೆ ಪಾತ್ರೆಗೆ ಹಾಕಿ ಚನ್ನಾಗಿ ಕುದಿಸಿದರೆ ಮುಗಿತು. ಬಾಯಿ ರುಚಿಗೆ ಸಂಡಿಗೆ ಹುಳಿ ಸಿದ್ದ.
ಅಡುಗೆ ಕೈ ಚಳಕ : ಭವಾನಿ ದಿವಾಕರ್