ವಿಧಿಯಾಟಕ್ಕೆ ಜಗ್ಗದ ಗಟ್ಟಿಗಿತ್ತಿ ಪಾರ್ವತಿ ಜಗದೀಶ – (ಭಾಗ ೨)

ಹೆಣ್ಣು ಮನಸ್ಸು ಮಾಡಿದ್ರೆ ಏನು ಬೇಕಾದರೂ ಸಾಧಿಸಬಲ್ಲಳು. ಅವಳ ಜೀವನ ಅಲ್ಲೋಲ ಕಲ್ಲೋಲವೇ ಆಗಲಿ ಧೃತಿಗೆಡದೆ ದಾರಿ ತರುತ್ತಾಳೆ. ಸಾಕಷ್ಟು ನೋವಿನಲ್ಲಿ ಬೆಂದರೂ ಛಲ ಬಿಡದೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡ ಹೆಣ್ಣು ಮಗಳ ನೋವಿನ ಕತೆ ಇದು. ಛಲಗಾರ್ತಿ ಪಾರ್ವತಿ ಜಗದೀಶ ಅವರ ಕತೆ ಇನ್ನೊಬ್ಬರಿಗೆ ಪ್ರೇರಣೆಯಾಗಿದೆ, ತಪ್ಪದೆ ಓದಿ…

ಅವ್ವ, ಮಣ್ಣಲ್ಲಿ ಮಣ್ಣಾಗಿ ಹೋದಳು.  ನೆಂಟರಿಷ್ಟರೆಲ್ಲ ಸಮಾಧಾನ ಮಾಡಿದರು. ಎಷ್ಟೇ ದೂರದ ಊರಿಂದ ನೆಂಟರಿಷ್ಟರು ಬಂದು, ಎಷ್ಟೇ ಸಮಾಧಾನ ಮಾಡಿದ್ರು ಅವ್ವ ಬರ್ತಾಳಾ!?. ಇಲ್ಲಾ… ತಾನೇ. ಜೀವನದ ಕಟು ಸತ್ಯವನ್ನು ನಾನು ಅರ್ಥಮಾಡಿಕೊಂಡೆ. ಅಷ್ಟೋತ್ತಿಗೆ ಕಣ್ಣಲ್ಲಿನ ನೀರು ಬತ್ತಿ ಹೋಗಿತ್ತು. ಮಾಲೆ ಹಾಕಿದ್ದ ಅವ್ವನ ಫೋಟೋ ನೋಡುತ್ತಾ ‘ನೋಡವ್ವ…ನೀನು ನನ್ನನ್ನು ನಡು ದಾರಿಯಲ್ಲಿಯೇ ಬಿಟ್ಟು ಹೋದೆ, ಆ ನೋವು ನಾನು ಸಾಯೋವರೆಗೂ ಇದ್ದೇ ಇರುತ್ತೆ. ಹಾಗಂತ ನಿನ್ನ ನೋವಲ್ಲೇ ಜೀವನ ಪರ್ಯಂತ ಅಳುತ್ತಾ ಕೂಡುವ ಹೆಣ್ಣುಮಗಳು ನಾನಲ್ಲ. ನನ್ನ ಮಗನ ಭವಿಷ್ಯಕ್ಕಾಗಿ ನಾನು ಎದ್ದು ನಿಲ್ತಿನಿ’… ಅಂತ ಅಮ್ಮನ ಮುಂದೆ ಪ್ರಮಾಣ ಮಾಡಿದೆ. ಅದರಂತೆ ನನ್ನ ಓದಿನ ಕಡೆ ಗಮನ ಹರಿಸಿದೆ.

ಕರೆಸ್ಪಾಂಡೆನ್ಸ್ ನಲ್ಲಿ ಎಂ ಎಸ್ಸಿ ಮಾಡಿಕೊಂಡೆ. ಚನ್ನಾಗಿ ಓದಿದ ಮೇಲೆ ಮನೆಯಲ್ಲಿ ಕೂಡದೆ, ನಾಲ್ಕು ಕಾಸು ಸಂಪಾದಿಸೋಕೆ ಕೆಲಸ ಹುಡುಕಿಕೊಂಡು ಹೊರಟೆ. ಆಗ ನಂಗೆ ಸಿಕ್ಕದ್ದು ಒಂದು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿಯ ಕೆಲಸ. ನನ್ನ ಜ್ಞಾನವನ್ನು ಮಕ್ಕಳಿಗೆ ಹಂಚಬೇಕು, ಮಕ್ಕಳ ಭವಿಷ್ಯವನ್ನು ನಾನು ರೂಪಿಸಬೇಕು ಎನ್ನುವ ಉತ್ಸಾಹ ನನ್ನಲ್ಲಿ ಸಾಕಷ್ಟು ಇತ್ತು. ಅದೇ ಉತ್ಸಾಹದಲ್ಲಿಯೇ ಶಾಲೆ ಸೇರಿಕೊಂಡೆ. ನಿತ್ಯ ಶಾಲೆಗೆ ಹೋಗುವುದು ಅಲ್ಲಿಯ ಮಕ್ಕಳಿಗೆ ಪಾಠ ಮಾಡುವುದು ನನ್ನಲ್ಲಿ ಸಾಕಷ್ಟು ನೋವನ್ನು ಮರೆಯಿಸಿತು. ಮಕ್ಕಳ ನಗುವಿನ ಜೊತೆ ನಾನು ನಗತೊಡಗಿದೆ. ಮಕ್ಕಳು ಕೂಡಾ ನನ್ನನ್ನು ಅತಿಯಾಗಿ ಹಚ್ಚಿಕೊಂಡರು. ಆಗೊಮ್ಮೆ ಈಗೊಮ್ಮೆ ಅವ್ವನ ನೆನಪು ಬರುತ್ತಿತ್ತು. ನೆನಪು ಬಂದಾಗ ಕಣ್ಣೀರಿನ ನಾಲ್ಕು ಹನಿ ನನಗೆ ತಿಳಿಯದೆ ಕಣ್ಣಿಂದ ಉದುರುತ್ತಿತ್ತು.  ಹೀಗೆ ದಿನಗಳೆಲ್ಲ ಓಡ ತೊಡಗಿದವು.

ಹೃದಯಕ್ಕೆ ಆದ ಗಾಯ ಇನ್ನೂ ಮಾಸಿರಲಿಲ್ಲ. ಅಷ್ಟರಲ್ಲಿ ಕಷ್ಟದ ದಿನಗಳು ಮತ್ತೆ ಒಕ್ಕರಿಸಿತು. ಆ ಒಂದು ದಿನ ಮಲಗಿದ್ದಾಗ ಇದ್ದಕ್ಕಿದ್ದಂತೆ ಜ್ವರ ಶುರುವಾಯಿತು. ಮೊದ ಮೊದಲು ಸಾಮಾನ್ಯ ಜ್ವರ ಅಂದುಕೊಂಡು ಕಂಬಳಿ ಹೊದ್ದುಕೊಂಡು ಮಲಗಿದೆ. ಆಮೇಲೆ ಸಣ್ಣಗೆ ಬಂದ ಜ್ವರ ನಿಧಾನಕ್ಕೆ ಜಾಸ್ತಿ ಆಗಿ, ಮೈಯೆಲ್ಲಾ ನಡುಗೋಕೆ ಶುರು ಮಾಡಿತು.  ಮೈ ಸುಡೋದು ಒಂದು ತಿಂಗಳಾದರೂ ಕಮ್ಮಿಯೇ ಆಗಲಿಲ್ಲ. ಹಾವೇರಿಯಲ್ಲಿ ಇದ್ದ ಕ್ಲಿನಿಕ್ ಗಳೆಲ್ಲ ಮುಗಿದವು, ಅಲ್ಲಿಂದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ತೋರಸೋಕೆ ಶುರು ಮಾಡಿದೆ, ಹುಬ್ಬಳ್ಳಿ ಕೆಎಂಸಿ, ದಾವಣಗೆರೆ ಬಾಪೂಜಿ ಕೊನೆಗೆ ಬೆಂಗಳೂರು ರಾಜೀವಗಾಂಧಿ ಆಸ್ಪತ್ರೆಯವರೆಗೂ ನನ್ನ ಆನಾರೋಗ್ಯ ಬಂದು ನಿಂತಿತು. ಡಾಕ್ಟರ್ ಗಳಿಗೆ ನನ್ನ ಖಾಯಿಲೆ ಆರ್ಥವಾಗಲಿಲ್ಲವೋ ಅಥವಾ ನನಗೆ ಬಂದ ಖಾಯಿಲೆ ಅವರ ಪುಸ್ತಕದಲ್ಲಿ ಇರಲಿಲ್ಲವೋ ಗೊತ್ತಿಲ್ಲ.

ತೋರಿಸಿದ ಡಾಕ್ಟರ್ ಗಳೆಲ್ಲ ನೂರೆಂಟು ಪರೀಕ್ಷೆಗಳನ್ನ, ಮಾತ್ರೆಗಳನ್ನು ಬರೆಯುತ್ತಿದ್ದರು. ದಿನವೂ ಊಟಕ್ಕಿಂತ ಮಾತ್ರೆಗಳೇ ನನ್ನ ಆಹಾರವಾದವು . ದಿನಕ್ಕೆ ಏನಿಲ್ಲವೆಂದರೂ ಕನಿಷ್ಠ ೩೦ ಮಾತ್ರೆಗಳು ನನ್ನ ದೇಹದೊಳಗೆ ಸೇರುತ್ತಿತ್ತು. ಮಾತ್ರೆ ಹೆಚ್ಚಾದಾಗ ದೇಹ, ಮಾತ್ರೆಗಳನ್ನು ತಿರಸ್ಕರಿಸುತ್ತಿತ್ತು. ವಾಂತಿ, ಭೇದಿಯಾಗುತ್ತಿತ್ತು. ಒಂದನ್ನು ಸರಿ ಮಾಡಲು ಹೋದರೆ, ಮತ್ತೊಂದು ಮಾತ್ರೆ ಬರುತ್ತಿತ್ತು. ಜೀವನ ನರಕವಾಗಿ ಹೋಗಿತ್ತು. ಪೆಟ್ಟು ತಿಂದವಳಿಗೆ ಮೇಲೆ ಮೇಲೆ ಪೆಟ್ಟುಗಳು ಬೀಳುತ್ತಲೇ ಇತ್ತು.

ಮಾತ್ರೆಗೆ  ನಿಧಾನವಾಗಿ ಕಣ್ಣುಗಳು ಮಂಜಾದವು, ಕಿವಿಗಳು ಮಂಕಾದವು. ಜೀವನ ಸಾಕೆನ್ನುವಷ್ಟು ಬೇಸರಗಳು ಶುರುವಾಯಿತು. ಕಣ್ಣಿನ ಡಾಕ್ಟರ್ ಹತ್ತಿರ ಹೋಗಿ ಕಣ್ಣಿನ ಆಪರೇಷನ್ ಮಾಡಿಸಿದೆ. ಮಂಜಾದ ಕಣ್ಣುಗಳು ಹೇಗೋ ದೇವರ ದಯದಿಂದ ಸರಿ ಹೋದವು. ಆದರೆ ಮಂಕಾದ ಕಿವಿಗಳು ಮಾತ್ರ ಶೇಕಡಾ ೯೦ ರಷ್ಟು ತನ್ನ ಕೆಲಸವನ್ನು ನಿಲ್ಲಿಸಿದವು.

This slideshow requires JavaScript.

ಓಡುತ್ತಿರುವ ಗಾಡಿಗೆ ಯಾವಾಗಲು ಹೆಚ್ಚು ಬೆಲೆ, ನಿಂತ ಗಾಡಿಗೆ ಹೇಳುವವರು ಕೇಳುವವರು ಯಾರು ಇರೋಲ್ಲ… ಅಂತೆಯೇ ನನ್ನ ಬದುಕು ಕೂಡಾ ಹಾಗೆ ಆಯಿತು. ಕಿವಿ, ಆರೋಗ್ಯ ಮೇಲೆ ಮೇಲೆ ಕೈ ಕೊಟ್ಟಾಗ ಸಂಬಂಧಗಳು ಒಂದೊಂದಾಗಿ ನನ್ನಿಂದ ದೂರವಾಗುತ್ತಾ ಹೋದವು. ಸ್ವಂತ ತಾಯಿಯೇ ನನ್ನನ್ನು ಬಿಟ್ಟು ದೂರ ಹೋದ ಮೇಲೆ ಎಲ್ಲೋ ಇರುವ ಸಂಬಂಧಗಳು ದೂರವಾದಾಗ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಹೋಗೋರಿಗೆ ಹೋಗಲು ಬಿಟ್ಟೆ.

ಆದರೆ ನನ್ನ ದೇಹವೇ ನನಗೆ ಮೋಸ ಮಾಡಿದಾಗ ಏನು ಮಾಡಲಿ. ಜೀವನದ ದಾರಿಗಳು ಕಾಣದಂತಾಯಿತು. ಎಷ್ಟೋ ದಿನ ಕತ್ತಲೆಯಲ್ಲಿ ಸುಮ್ಮನೆ ಕೂತು ಮನಸೋಇಚ್ಛೆ ದೇವರಿಗೆ ಶಪಿಸಿದೆ, ಅತ್ತು ಅತ್ತು ಮನಸ್ಸಿನ ಭಾರವನ್ನೆಲ್ಲ ಹಗುರ ಮಾಡಿಕೊಂಡೆ. ಹೇಗಾದರೂ ಮಾಡಿ ಈ ಕಷ್ಟದ ದಿನಗಳನ್ನು ಎದುರಿಸಲೇಬೇಕು ಎಂದು ನಿರ್ಧಾರ ಮಾಡಿ ಮತ್ತೆ  ಧೈರ್ಯ ತಗೆದುಕೊಂಡು ಎದ್ದು ನಿಂತೆ. ಧೈರ್ಯವೇನೋ ಮಾಡಿದೆ, ಆದರೆ ಮುಂದಿನ ದಾರಿ ಏನು?… ಎತ್ತ…ತಿಳಿಯದೆ ಆದೆ. ನನ್ನ ಕಿವಿಗಳೇ ನನಗೆ ಶತ್ರುಗಳಾದಾಗ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂದು ತಿಳಿಯದೆ ಸುಮ್ಮನೆ ನಿಂತೇ .

ಹಾವೇರಿಯಲ್ಲಿ ಪುಟ್ಟದಾದ ಕಡಿಮೆ ಬಾಡಿಗೆಯ ಮನೆ ಮಾಡಿಕೊಂಡು ನಾನು, ನನ್ನ ಮಗ ಆ ಗೂಡಿನಲ್ಲಿ ಸೇರಿಕೊಂಡೆವು. ಮಗನಿಗೆ ಅಲ್ಲಿಯೇ ಶಾಲೆ ಹಾಕಿದೆ. ನನ್ನ ಶ್ರವಣಶಕ್ತಿ ಸಂಪೂರ್ಣ ನಶಿಸಿದ್ದರಿಂದ ಶಿಕ್ಷಕಿಯಾಗುವ ಕನಸ್ಸನ್ನು ಬಿಟ್ಟು ಬಿಟ್ಟೆ .ಆದರೆ  ಬೇರೆ ಎಲ್ಲಿಯೂ ಕೆಲಸ ಸಿಗುವುದು ಅಸಾಧ್ಯವೆನಿಸಿತು. ಬೇರೆ ಯಾವ ಕೆಲಸ ಮಾಡಲು ತೋಚದೆ ಕೂತಾಗ ನನ್ನ ತಲೆಗೆ ಬಂದದ್ದು ನಮ್ಮವ್ವ ಕಲಿಸಿಕೊಟ್ಟ ರೊಟ್ಟಿ, ಚಟ್ನಿ ಪುಡಿಗಳನ್ನು ಮಾಡುವ ವಿದ್ಯೆ.

ಮಗನ ಜೊತೆ ಪಾರ್ವತಿ ಜಗದೀಶ್

ನನ್ನ ಅಕ್ಕ ಮೆಸ್ ಒಂದರಲ್ಲಿ ನಿತ್ಯ ೫೦ ರೊಟ್ಟಿ ಮಾಡಿ ಕಳುಹಿಸುತ್ತಿದ್ದಳು. ನಾನು ಅವಳ ಜೊತೆ ಸೇರಿ ರೊಟ್ಟಿ ಬಡೆಯತೊಡಗಿದೆ. ನಿಧಾನವಾಗಿ ನಾನೊಬ್ಬಳೇ ರೊಟ್ಟಿ ಮಾಡಲು ಶುರು ಮಾಡಿದೆ. ಮೊದ ಮೊದಲು ದೊಡ್ಡ ಪ್ರಮಾಣದಲ್ಲಿ ರೊಟ್ಟಿ ಮಾಡಲು ಕಷ್ಟವಾಗುತ್ತಿತ್ತು. ಆಮೇಲೆ ನಿಧಾನವಾಗಿ ೧೦೦, ೩೦೦ ರೊಟ್ಟಿ ಮಾಡಲು ಸಿದ್ಧಳಾದೆ. ಗೃಹಪ್ರವೇಶ, ನಾಮಕರಣ, ಹೀಗೆ ಮನೆಯ ಕಾರ್ಯಕ್ರಮಗಳಿಗೆ ರೊಟ್ಟಿ ಸೇರಿದಂತೆ ಹೋಳಿಗೆ, ಚಟ್ನಿ ಪುಡಿ, ಉಪ್ಪಿನಕಾಯಿಗಳ ಆರ್ಡರ್ ಬರಲು ಶುರುವಾಯಿತು.  ಧೈರ್ಯ ಮಾಡಿ ಕಾರ್ಯಕ್ರಮಗಳಿಗೆ ಆರ್ಡರ್ ತಗೆದುಕೊಳ್ಳಲು ಶುರು ಮಾಡಿದೆ.

ಈಗ ೧,೦೦೦ ರೊಟ್ಟಿ ಮಾಡಲು  ಕೈಗಳು ಸಮರ್ಥವಾಗಿದೆ, ಆದರೆ ಆ ದೇವರು ನನಗೆ ಉತ್ತಮ ಆರೋಗ್ಯ ಕೊಡಬೇಕಷ್ಟೆ. ಕಷ್ಟಗಳು ನನ್ನ ಬೆನ್ನಿಗೆ ಅಂಟಿಕೊಂಡೇ ಬಂದವು. ಹಣದ ಸಮಸ್ಯೆ, ಆರೋಗ್ಯದ ಸಮಸ್ಯೆ ಪದೆ ಪದೆ ಸಾಕಷ್ಟು ಕಾಡಿದವು. ಯಾವುದಕ್ಕೂ ಜಗ್ಗದೆ, ಯಾರ ಮುಂದೆಯೂ ಕೈ ಚಾಚದೆ ಸ್ವಾಭಿಮಾನಿಯಾಗಿ ಬದಕನ್ನು ಕಟ್ಟಿಕೊಂಡವಳು ನಾನು.

****

ದುಡಿಯುವ ಕೈಗಳಿಗೆ ಪ್ರೋತ್ಸಾಹಿಸುವ, ಮನಸ್ಸು ನಿಮ್ಮದಾಗಿರಲಿ …

ಪಾರ್ವತಿ ಜಗದೀಶ್ ಅವರ ಬಳಿ ರೊಟ್ಟಿ, ಚಟ್ನಿ ಪುಡಿ, ಶೇಂಗಾ ಹೋಳಿಗೆ, ಉಪ್ಪಿನಕಾಯಿ ಬೇಕಾದವರು ಸಂಪರ್ಕಿಸಲು :

ಮೊಬೈಲ್ ನಂಬರ್ : 8892779116

ಪಾರ್ವತಿ ಜಗದೀಶ್ ಅವರಿಗೆ ಶ್ರವಣದ ಸಮಸ್ಯೆ ಇರುವುದರಿಂದ ನಿಮಗೆ ಬೇಕಾದದನ್ನು ಮೆಸ್ಸೇಜ್ ಮುಖಾಂತರ ತಿಳಿಸಿದರೆ ರಾಜ್ಯದ ಯಾವ ಮೂಲೆಗಾದರು ಪಾರ್ವತಿ ಅವರು ತಲುಪಿಸುತ್ತಾರೆ.

ಒಂದು ರೊಟ್ಟಿಯ ಬೆಲೆ ೮ ರೂಪಾಯಿ + ೧೦೦ ಕೋರಿಯರ್ ಖರ್ಚು.


  • ಶಾಲಿನಿ ಹೂಲಿ ಪ್ರದೀಪ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading