ಹೇಗಿದ್ದೀರಿ…ನಿಮ್ಮ ಹುಟ್ಟಿದ ದಿನ ನಮಗೆ ಹಬ್ಬ
ಮಾತ್ರವಲ್ಲ ಬುದ್ದಣ್ಣ ನೆಟ್ಟ ಬಿಡುಗಡೆಯ ಬೀಜ
ಚಿಗುರೊಡೆದಿದ್ದು ಅವತ್ತೆ.
ಅಂಗಾಗಿ ನಾವು ಇವತ್ತು ಇಂಗಾಗಿದ್ದೇವೆ.
ಬಾಬಾಸಾಹೇಬ
ಮೊನ್ನೆ ನೀವು ಸಿಕ್ಕಿದ್ರಲ್ಲ
ಆಗ ಹೇಳೋದು ಮರೆತಿದ್ದೆ
ನೀವು ನೆಟ್ಟ ಮರದ ಹಣ್ಣು
ಹುಳಿ
ಕಿತ್ತು ಉಪ್ಪಿನ ಕಾಯಿ ಮಾಡಿದ್ದೆ
ಸಿಹಿ
ಕಿತ್ತು ಊರಿಗೆಲ್ಲ ಹಂಚಿದ್ದೆ
ನೀವು ನೆಟ್ಟ ಬಳ್ಳಿಯ
ಏರಿ
ಮೇಲೆ
ಕುಳಿತ ಹುಡುಗಿಯರು
ಸ್ವಾಭಿಮಾನದ ಗೆಜ್ಜೆ ಕಟ್ಟಿದ್ದಾರೆ
ಸಮಾನತೆಯ ತಾಳಕ್ಕೆ ಹೆಜ್ಜೆ ಹಾಕಿದ್ದಾರೆ
ನೀವು ಊರಿಗೆ ಹೋದಾಗ ಕರೆ ತಂದ
ಹುಡುಗರು
ಹೊಂಗೆಯ ನೆರಳವರು
ಆಲದಂತೆ ಹಬ್ಬಿದ್ದರೆ
ಕನಸುಗಳ ಕಟ್ಟಿದ್ದಾರೆ
ಕಾಡಿನಂತೆ
ಸಾವಿರಾರು ನದಿ, ತೊರೆ, ಹಳ್ಳಗಳು
ಹರಿದಿವೆ
ಕೊಳೆ ತೊಳೆದಿವೆ
ಪೈರು-ಪಚ್ಛೆ ಬೆಳೆದಿವೆ
ನಡುವೆ ನಂದ ಕಲೆ ಕೀಳಲು
ಅಗ್ನಿಹಂಸಗಳು ಹಾರಾಡಿವೆ
ಅವುಗಳ ನೆರಳು ನಿಮ್ಮದೇ
ಪ್ರತಿರೂಪದಂತಿವೆ.
ನಿಮ್ಮ ನಿಲುವು
ನಮ್ಮ ನೆಲದ
ಪ್ರೇಮ ದೀಪವಾಗಿದೆ
ಒಲವ ಅಲೆಯು
ಎಲ್ಲರೆದೆಯ ಉಸಿರಾಗಿದೆ.
– ಕೆ. ಮುರಳಿ ಮೋಹನ ಕಾಟಿ
(ಬದುಕು ಕಮ್ಯೂನಿಟಿ ಕಾಲೇಜು, ಉಪನ್ಯಾಸಕರು )
#ಕವನ