ಉಪೇಂದ್ರರವರ ಪ್ರಜಾಕೀಯ ಕನಸ್ಸು ನನಸ್ಸಾಗುವುದೇ?

ಪ್ರಭುಸ್ವಾಮಿ ನಟೇಕರ್ (ಲೇಖಕರು ಮತ್ತು ಪತ್ರಕರ್ತರು)

prabhu.natekar80@gmail.com

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭು ಎಂಬ ಪರಿಕಲ್ಪನೆಯಲ್ಲಿ ರಾಜಕೀಯಕ್ಕೆ ಪರ್ಯಾಯವಾಗಿ ‘ಪ್ರಜಾಕೀಯ’ ಘೋಷಣೆಯೊಂದಿಗೆ ರಾಜಕೀಯಕ್ಕೆ ಪ್ರವೇಶಿಸಿದ ಬಳಿಕ ನಾನಾ ಕಾರಣಗಳಿಂದ ರಾಜಕಾರಣದಿಂದ ದೂರ ಉಳಿದಿದ್ದ ರಿಯಲ್ ಸ್ಟಾರ್ ನಟ ಉಪೇಂದ್ರ ಇದೀಗ ಮತ್ತೊಮ್ಮೆ ರೀ ಎಂಟ್ರಿ ಕೊಟ್ಟಿದ್ದಾರೆ.

ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷದಿಂದ (ಕೆಪಿಜೆಪಿ) ಹೊರಬಂದ ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷ ಎಂಬ ಹೊಸ ಪಕ್ಷ ರಚಿಸಿ ಮತ್ತೊಮ್ಮೆ ಅದೃಷ್ಟಪರೀಕ್ಷೆಗಿಳಿದಿದ್ದಾರೆ. ಸೃಜನಾತ್ಮಕವಾಗಿ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದ ಉಪೇಂದ್ರ ಇದೀಗ ರಾಜಕೀಯದಲ್ಲಿಯೂ ನೆಲೆಯೂರುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕ್ರಿಯಾತ್ಮಕ ಸಿನಿಮಾಗಳ ಮೂಲಕ ಗಮನಸೆಳೆದವರು ಉಪೇಂದ್ರ. ನಿರ್ದೇಶನದ ಗೀಳು ಅಂಟಿಸಿಕೊಂಡ ಉಪ್ಪಿ ವಿಭಿನ್ನ ಸಿನಿಮಾಗಳ ನಿರ್ದೇಶನ ಮಾಡಿ ತಮ್ಮದೇ ಅಭಿಮಾನ ಬಳಗವನ್ನು ಸೃಷ್ಟಿಸಿಕೊಂಡರು.೧೯೯೫ರಲ್ಲಿ ಬಿಡುಗಡೆಯಾದ ಶಿವರಾಜ್ ಕುಮಾರ

ಅಭಿನಯದ ’ಓಂ’ ಚಿತ್ರ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿಯೂ ಹೊಸ ಸಂಚಲನ ಸೃಷ್ಟಿಸಿದ್ದು ಸುಳ್ಳಲ್ಲ. ಬಳಿಕ ಎ ಚಿತ್ರ ನಿರ್ದೇಶಿಸಿ ನಟಿಸುವ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ಎ ಸಿನಿಮಾದ ಜತೆಗೆ ಉಪೇಂದ್ರ ಸಿನಿಮಾ ಅವರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ.

ತಮ್ಮ ವಿಶಿಷ್ಟ ಆಲೋಚನಾ ಲಹರಿಯಿಂದ ಖ್ಯಾತ ಪಡೆದ ಉಪೇಂದ್ರ ರಾಜಕೀಯದಲ್ಲಿಯೂ ಬದಲಾವಣೆ ಪರ್ವದ ಆಲೋಚನೆ ಹೊಂದಿದ್ದಾರೆ. ಆದರೆ, ಅದು ಎಷ್ಟು ಸಫಲವಾಗಿದೆ ಎಂಬುದೇ ಯಕ್ಷ ಪ್ರಶ್ನೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಪ್ರಜಾಕೀಯ ಪರಿಕಲ್ಪನೆಯಲ್ಲಿ ರಾಜಕೀಯಕ್ಕೆ ಧುಮುಕಿದರು. ವಿಧಾನಸಭೆ ಚುನಾವಣಾ ಕಣಕ್ಕಿಳಿಯುವ ಅಭಿಲಾಷೆಯಿಂದ ಮಹೇಶ್ ಗೌಡ ಸಂಸ್ಥಾಪನೆಯ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷದ ಮೂಲಕ ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶಿಸಿದರು. ಆದರೆ, ಮಹೇಶ್ವರ ಗೌಡ ಮತ್ತು ಉಪೇಂದ್ರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಆ ಪಕ್ಷಕ್ಕೆ ಗುಡ್ ಬೈ ಹೇಳಿದರು. ಉಪೇಂದ್ರ ಅವರ ಹೆಸರಲ್ಲಿ ಪಕ್ಷದ ಹೆಸರು ರಾಜ್ಯದ ಜನತೆಗೆ ಪರಿಚಯವಾಯಿತು. ವಿಧಾನಸಭೆಯ ಚುನಾವಣೆ ಕಣಕ್ಕಿಳಿಯಲು ನಡೆಸಿದ ತಯಾರಿ ಯಾವುದೇ ಪ್ರಯೋಜನವಾಗಲಿಲ್ಲ. ಕೆಪಿಜೆಪಿಯಿಂದ ಹೊರಬಂದ ಉಪೇಂದ್ರ ಕೆಲವೇ ದಿನದಲ್ಲಿ ಉತ್ತಮ ಪ್ರಜಾಕೀಯ ಪಕ್ಷ ಎಂಬ ಹೊಸ ಪಕ್ಷ ರಚಿಸಿ ಚುನಾವಣಾ ಅಯೋಗದಲ್ಲಿ ನಮೂದಿಸಿದರು.

ಸೆ.೧೮ ಅವರ ಹುಟ್ಟುಹಬ್ಬದಂದು ಅಧಿಕೃತವಾಗಿ ಯುಪಿಪಿಗೆ ಚಾಲನೆ ನೀಡಲಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಕ್ರಿಯಾತ್ಮಕ ವ್ಯಕ್ತಿ ಎಂದು ಗುರುತಿಸಿಕೊಂಡಿರುವ ಉಪೇಂದ್ರಗೆ ರಾಜಕೀಯ ಅಷ್ಟೊಂದು ಸುಲಭವಲ್ಲ. ಸಿನಿಮಾದಲ್ಲಿ ಯಶಸ್ಸು ಗಳಿಸಿದಂತೆ ರಾಜಕೀಯದಲ್ಲಿ ಗಳಿಸಲು ಆಗುವುದಿಲ್ಲ. ಘಟಾನುಘಟಿ ನಾಯಕರೇ ಪಕ್ಷವನ್ನು ಸ್ಥಾಪಿಸಿ ಮುಗ್ಗರಿಸಿರುವ ಘಟನೆಗಳು ನಮ್ಮ ಕಣ್ಣ ಮುಂದಿವೆ. ಮಾತ್ರವಲ್ಲ ಕನ್ನಡಿಗರು ಪರದೆಯ ಮೇಲೆ ಮಾತ್ರ ನಟರನ್ನು ನಾಯಕ ಎಂದು ಒಪ್ಪಿಕೊಳ್ಳುತ್ತಾರೆ ಹೊರತು ರಾಜಕೀಯದಲ್ಲಲ್ಲ. ಸಿನಿಮಾ ನಟರನ್ನು ರಾಜಕೀಯದಲ್ಲಿ ಕನ್ನಡಿಗರು ಅಪ್ಪಿಕೊಂಡಿಲ್ಲ. ನೆರೆ ರಾಜ್ಯ ತಮಿಳುನಾಡು, ಆಂಧ್ರ ಪ್ರದೇಶದ ವಾತಾವರಣ ನಮ್ಮಲ್ಲಿ ಇಲ್ಲ. ಚಿತ್ರ ತಾರೆಯರು ಯಾವುದಾದರೂ ಪಕ್ಷದ ಮೂಲಕ ಗುರುತಿಸಿಕೊಂಡಿದ್ದಾರೆ ವಿನಹ ಸ್ವಂತ ಪಕ್ಷ ಕಟ್ಟಿ ಬೆಳೆದ ಉದಾಹರಣೆ ಇಲ್ಲ.

ಭ್ರಷ್ಟಾಚಾರ ನಿರ್ಮೂಲನೆ, ಪಾರದರ್ಶಕತೆ ಆಡಳಿತ ನೀಡಬೇಕು ಎಂಬ ಉಪೇಂದ್ರ ಅವರ ಆಲೋಚನೆ ಒಪ್ಪುವಂತಹದ್ದು. ಆದರೆ ಜನರ ಮನಸ್ಥಿತಿಯೇ ಬೇರೆ. ರಾಜಕೀಯ ಎಂಬುದು ಜಾತಿ ಮತ್ತು ಹಣ ಬಲದಿಂದ ನಡೆಯುತ್ತಿದೆ. ಇದನ್ನು ಬದಲಿಸುವುದು ಸುಲಭವಲ್ಲ.ಪತ್ರಕರ್ತರ ಈ ಪ್ರಶ್ನೆಗೂ ಉಪೇಂದ್ರ ಅವರು ಆಶಾಭಾವನೆಯಲ್ಲಿಯೇ ಉತ್ತರಿಸುತ್ತಾರೆ.

ಅದೇನೇ ಇರಲಿ ಸಮಾಜದಲ್ಲಿ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಪ್ರವೇಶಿಸಿರುವ ಉಪೇಂದ್ರ ಅವರು ರಾಜಕಾರಣದಲ್ಲಿ ನೆಲೆಯೂರಲಿದ್ದಾರೆಯೇ? ಕಾಲವೇ ಉತ್ತರಿಸಲಿದೆ…

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW