ಬದುಕಿನ ಪಾಠವನ್ನು ಕವನದ ಮೂಲಕ ಕಲಿತರೆ ಚಂದ. ಕವಿ ಕೊಟ್ರೇಶ್ ಅರಸೀಕೆರೆ ಅವರ ಒಂದು ಸುಂದರ ಕವನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
“ಪಲಾವ್ ಮಾಡುವುದು ಹೇಗೆ?”
ಕೇಳಿದಳು ಮಗಳು ಅಮ್ಮನಿಗೆ
ಒಂದಿಷ್ಟು ನಾಟಿ ಬೆಳ್ಳುಳ್ಳಿ
ನೆಲದಾಳಕ್ಕಿಳಿದು ಬೆಳೆದ
ಶುಂಠಿ ಸ್ವಲ್ಪ ಮಿಕ್ಸಿ ಜಾರಿಗೆ
ಹಾಕು”
“ಅಷ್ಟೆನಾ?”
ನಕ್ಕು ನುಡಿದಳು ತಾಯಿ”,
ಚೆಕ್ಕೆ, ಒಣ ಮೆಣಸು,
ಲವಂಗ, ಒಂದು ಏಲಕ್ಕಿ ”
“ಮತ್ತೆ? ” ಕೇಳಿದಳು ಮಗಳು
“ಅವಸರಿಸದರು ಕಂದಾ, ಎರಡು
ಚಕ್ರ ಮೊಗ್ಗೊ,ಎರಡು ಮರಾಠಿ ಮೊಗ್ಗು
ಸ್ವಲ್ಪ ಜೀರಿಗೆ, ತುಂಡು ಮಾಡಿದ ಜಾಕಾಯಿ, ನಾಲ್ಕು ಹಸಿಮೆಣಸು
ಸಣ್ಣ ಗೆ ಹೆಚ್ಚಿದ ನಾಟಿ ಕೊತ್ತಂಬರಿ
ಪುದೀನಾ ಸೊಪ್ಪು”
” ಇಷ್ಟೇನಾ?”
“ಹೂಂ, ಎಲ್ಲಾ ಹಾಕಿ ಸಣ್ಣಗೆ ರುಬ್ಬು
ಮಸಾಲೆ ಮಾಡಿಕೋ ಸ್ವಲ್ಪ ಕಾಯಿತುರಿ
ಹಾಕಿ”
” ಆಮೇಲೆ?”
“ಒಲೆಯ ಮೇಲೆ ಪಾತ್ರೆ ಇಡು
ಸ್ವಲ್ಪ ಎಣ್ಣೆ ಹಾಕು
ಜೀರಿಗೆ, ಕರಿಬೇವು ಹಾಕಿ ಮಸಾಲೆ
ಕೊಡು
ಮಸಾಲೆ ಗೆ ನೆನಸಿದ ಬಟಾಣಿ
ಮೊದಲೇ ಹೆಚ್ಚಿಕೊಂಡ ಈರುಳ್ಳಿ
ಹುಳಿ ಟೊಮ್ಯಾಟೋ,ತಾಜಾ ಕ್ಯಾರೆಟ್
ಬೀನ್ಸ್, ಆಲೂಗಡ್ಡೆ, ಹೂ ಕೋಸು
ಬೇಯಿಸು ಚೆನ್ನಾಗಿ ಮಸಾಲೆಯೊಡನೆ
ಜೊತೆಗೆ ಧನಿಯಾ ಪುಡಿಯೊಡನೆ ಮಸಾಲೆ ಎಲೆ ಹಾಕಿ ”
” ಇಷ್ಟೆಲ್ಲಾ ಮಾಡಬೇಕಾ?”
“ಇನ್ನೂ ಇದೆ ಮಗಳೇ,ತರಕಾರಿ ಬೆಂದ
ನಂತರ ನೀರು ಹಾಕಿ, ಕುದಿ ಬಂದ ನಂತರ ಅಕ್ಕಿ ಹಾಕು”
” ಆಮೇಲೆ?”
” ತಾಳ್ಮೆಯಿರಲಿ ಕಂದಾ, ಚೆನ್ನಾಗಿ
ಬೇಯಬೇಕು ಪದಾರ್ಥಗಳೆಲ್ಲಾ
ಪಕ್ವವಾಗಬೇಕು,
ಹದವಾಗಬೇಕು,ಮಾಗಬೇಕು ಸಣ್ಣ ಬೆಂಕಿಯ ಉರಿಯೊಡನೆ ದಮ್ಮಾಗಬೇಕು
ಹತ್ತು ನಿಮಿಷ ”
” ತಿಳಿಯಿತು ಅಮ್ಮ ಈಗ, ಆದರೆ ನಾಟಿ
ಬೆಳ್ಳುಳ್ಳಿನೇ ಬೇಕಾ?”
” ಬೇಕು ಪುಟ್ಟ, ನೆಲದ ಸಂಸ್ಕೃತಿ,
ಗಂಧ,ಗುಣ ”
” ನಾಟಿ ಸಿಗದಿದ್ದರೆ?”
” ಹೊಂದಿಕೊಳ್ಳಬೇಕು ಮಗು ಸಿಕ್ಕಿದ್ದೇ
ಅದು ಎಂದು, ರಾಜಿಮಾಡಿಕೊಳ್ಳಬೇಕು,
ಹೊಂದಿಕೊಳ್ಳಬೇಕು, ಜೀವಪರತೆ ಜೊತೆ
ಬದುಕಬೇಕು”
” ಆಯ್ತು ಅಮ್ಮ, ನೀ ಹೇಳಿದಂತೆ ಮಾಡುವೆ, ಬದುಕುವೆ ನಿನ್ನಾಸೆಯಂತೆ
ಕೂಡ
ಹೊರಟೆ, ಪಲಾವ್ ಮಾಡಲು ಎಲ್ಲಾ
ಪದಾರ್ಥಗಳ ಸಮ್ಮಿಲನದೊಂದಿಗೆ
ಪಕ್ವವಾಗಿಸುವೆ ತಿಂಡಿಯ ಉಸಿರಿನಂತೆ
ಬದುಕಿನಂತೆ
” ಹೂಂ ಮಗಳೇ, ಘಮ್ಮೆನ್ನಬೇಕು ಜೀವ, ಹಬ್ಬಬೇಕು
ನಾಲ್ಕು ದಿಕ್ಕಿನಲಿ”
- ಕೊಟ್ರೇಶ್ ಅರಸೀಕೆರೆ
