ಪುಲಿ ಪದ (ಭೋಗ ಷಟ್ಪದಿ) -ಚನ್ನಕೇಶವ ಜಿ ಲಾಳನಕಟ್ಟೆ



‘ಕುಡಿಯು ಕಾಣದಾಗಿ ಹಸುವು, ತುಡಿದು ಹುಡಕುವಾಗ ಬಳಲಿ’…. ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಕವನಗಳು ಓದುಗರ ಮನ ಗೆಲ್ಲುತ್ತದೆ, ಮುಂದೆ ಓದಿ…

ಕಾಡಿನೊಳಗೆ ಪುಲಿಯರಸನು
ಕಾಡಿ ಕಾಡಿ ಭಯಗೊಳಿಸುತ
ಕೋಡಿ ಕೋಡಿ ರಕ್ತವರಿಸಿ ಸಿಕ್ಕಬೇಟೆಯ
ಆಡುತಿರುವ ಕರುವನೊಂದ
ಗೂಡಿನೊಳಗೆ ಹಿಡಿದು ತಂದು
ಕೂಡಿ ತಿನ್ನಲೆಂದು ತನ್ನ ಮರಿಯ ಕರೆಯಿತು

ಕುಡಿಯು ಕಾಣದಾಗಿ ಹಸುವು
ತುಡಿದು ಹುಡಕುವಾಗ ಬಳಲಿ
ಕುಡಿದು ನೀರ ದೇವರಲ್ಲಿ ಮೊರೆಯನಿಟ್ಟಿತು
ನಡೆದು ಬಂದ ಕೋತಿಯೊಂದು
ಮಿಡಿಯುತಿದ್ದ ಹಸುವ ಕಂಡು
ಕೆಡುಕ ಹುಲಿಯು ಕರುವ ಕಂಡು ಹಿಡಿಯಿತೆಂದಿತು

ಕರುವನರಸಿ ಹಸುವಳುತಲಿ
ಸುರಿಸಿನಿಂತು ಕಣ್ಣನೀರ
ತರತರದಲಿ ಕರುವ ಕೂಗಿ ಕರೆಯಿತಲ್ಲಿಯೆ
ಕರಮುಗಿವೆನು ರಾಯ ಹುಲಿಯೆ
ಪರಿಪರಿಯಲಿ ಬೇಡುತಿರುವೆ
ಮೊರೆಯ ಕೇಳಿ ನನ್ನನುಣ್ಣು ಕಳಿಸು ಕಂದನಾ

ಹಸುಕರುವದು ಹುಲಿಮರಿಯದು
ಬೆಸೆದು ಸ್ನೇಹದಿಂದವೆರೆಡು
ಹಸಿವ ಮರೆತು ಬೆರೆತು ಕೂಡಿಯಾಡುತಿದ್ದವು
ಉಸಿರುಳಿಸುವೆ ಹಸುಕರುವಿನ
ಹೆಸರುಳಿಸುವೆ ಗೆಳೆತನದಲಿ
ಹುಸಿನುಡಿಯೆನು ಜಗದೊಳಗಡೆ ಹುಲಿಯು ನುಡಿಯಿತು.


  • ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading