ಬೂದು ಕುಂಬಳ ಕಾಯಿ ಮಜ್ಜಿಗೆ ಹುಳಿ ಜೊತೆಗೆ ಕಡ್ಲೆಬೇಳೆ ಮಸಾಲೆ ವಡೆ ಇದ್ರೆ ಊಟದ ಗಮ್ಮತ್ತೇ ಬೇರೆ. ಮಾಡುವ ವಿಧಾನವನ್ನು ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ನೀವು ಮಾಡಿ ನೋಡಿ…

ಬೇಕಾಗುವ ಪದಾರ್ಥಗಳು :
- ಬೂದು ಕುಂಬಳ ಕಾಯಿ
- ಹುಳಿ ಮೊಸರು – 1 ಕಪ್
- ಕಡ್ಲೆಬೇಳೆ – 4 ಸ್ಪೂನ್
- ಹಸಿ ಮೆಣಸಿನಕಾಯಿ
- ಜೀರಿಗೆ – ಸ್ವಲ್ಪ
- ಕಾಳು ಮೆಣಸು – ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಶುಂಠಿ – ಸ್ವಲ್ಪ
- ಬೆಳ್ಳುಳ್ಳಿ – ಸ್ವಲ್ಪ
- ಉಪ್ಪು ರುಚಿಗೆ ತಕ್ಕಷ್ಟು
- ತೆಂಗಿನ ಕಾಯಿ – ಸ್ವಲ್ಪ
ಮಾಡುವ ವಿಧಾನ :
ಮೊದಲಿಗೆ ಕಡ್ಲೆಬೇಳೆ ನೆನೆಸಿಟ್ಟುಕೊಳ್ಳಿ. ಈಗ ಬೂದುಗುಂಬಳ ಕಾಯಿ ಸಿಪ್ಪೆ ಹಾಗೂ ತಿರುಳು ತೆಗೆದು ಬೇಯಿಸಿಕೊಳ್ಳಿ. ಮೇಲೆ ಹೇಳಿದ ಪದಾರ್ಥಗಳೊಂದಿಗೆ ನೆನೆಸಿಟ್ಟ ಕಡ್ಲೆಬೇಳೆಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಆದಮೇಲೆ ಸಾಸಿವೆ , ಜೀರಿಗೆ ಇಂಗು, ಕರಿಬೇವಿನ ಸೊಪ್ಪು, ಒಂದೆರಡು ಒಣ ಮೆಣಸಿನ ಕಾಯಿ ಹಾಕಿ ಒಗ್ಗರಣೆ ಮಾಡಿ ರುಬ್ಬಿಟ್ಟ ಮಿಶ್ರಣ ಹಾಕಿ ಸ್ವಲ್ಪ ಫ್ರೈ ಮಾಡಿ ಬೇಯಿಸಿಟ್ಟ ಕುಂಬಳ ಕಾಯಿ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಈಗ ಕುದಿಯುತ್ತಿದ್ದ ಮಸಾಲೆಗೆ ಬೀಟ್ ಮಾಡಿದ ಗಟ್ಟಿ ಮೊಸರು ಹಾಕಿ 5 ನಿಮಿಷ ಕುದಿಸಿ ಮುಚ್ಚಿಡಿ. ರುಚಿಯಾದ ಮಜ್ಜಿಗೆ ಹುಳಿ ರೆಡಿ.
ಕಡ್ಲೆಬೇಳೆ ಮಸಾಲೆ ವಡೆ

ಬೇಕಾಗುವ ಪದಾರ್ಥಗಳು :
- ಕಡ್ಲೆಬೇಳೆ
- ಹಸಿಮೆಣಸಿನ ಕಾಯಿ
- ಒಣ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಪುದಿನಾ ಸೊಪ್ಪು
- ಶುಂಠಿ ,ಬೆಳ್ಳುಳ್ಳಿ
- ಜೀರಿಗೆ ,ಕಾಳು ಮೆಣಸು
- ತೆಂಗಿನ ಕಾಯಿ ಚೂರುಗಳು
- ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
ಕಡ್ಲೆಬೇಳೆಯನ್ನು ಒಂದು ಗಂಟೆ ನೆನೆಸಿಟ್ಟು ಕೊಳ್ಳಿ. ಈಗ ಮೇಲೆ ಹೇಳಿದ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.ಕೊನೆಯಲ್ಲಿ ನೆನೆಸಿಟ್ಟ ಕಡ್ಲೆಬೇಳೆ ಹಾಕಿ ತರಿ ತರಿಯಾಗಿ ರುಬ್ಬಿ ಕೊಳ್ಳಿ.
ಕಾದ ಎಣ್ಣೆಯಲ್ಲಿ ಬೇಕಾದ ಸೈಜ್ ಗೆ ಉಂಡೆ ಮಾಡಿ ಅಂಗೈಯಲ್ಲಿ ಮಿಡಿಯಂ ಸೈಜ್ ಗೆ ತಟ್ಟಿ ಕೆಂಪಗೆ ಕಾಯಿಸಿ. ಈಗ ಮಾಡಿದ ವಡೆಯನ್ನು ಮಾಡಿಟ್ಟ ಮಜ್ಜಿಗೆ ಹುಳಿಗೆ ಹಾಕಿ ನೆನೆಸಿ ಸವಿಯಿರಿ.
ಅಡುಗೆ ಮಜ್ಜಿಗೆ ಹುಳಿಗೆ ವಡೆ ಹಾಕುವುದರಿಂದ ಇದಕ್ಕೆ ಈರುಳ್ಳಿ ಬಳಸಿಲ್ಲ. ರುಚಿಯಾದ ಊಟ ತಯಾರಾಯಿತು…
- ಶಕುಂತಲಾ ಸವಿ – ನಳಪಾಕ ಪ್ರವೀಣೆ, ಮೈಸೂರು
