ಲೇಖಕಿ ಅನುಸೂಯ ಯತೀಶ್ ಅವರ ‘ರಂಗಸಂಕಥನ’ ಕೃತಿಯು ಡಾ. ಬೇಲೂರು ರಘುನಂದನ್ ಅವರ ನಾಟಕಗಳ ವಿಮರ್ಶೆಗಳನ್ನೊಳಗೊಂಡಿದೆ. ಈ ಕೃತಿಯ ಬಗ್ಗೆ ಸ್ವತಃ ಲೇಖಕಿ ಅನುಸೂಯ ಅವರು ಕಿರುಪರಿಚಯ ಮಾಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ರಂಗಸಂಕಥನ
ಲೇಖಕರು : ಅನುಸೂಯ ಯತೀಶ್
ಡಾ. ಬೇಲೂರು ರಘುನಂದನ್ ನಾಟಕಗಳ ವಿಮರ್ಶೆ
ಪ್ರಕಾಶನ : ಬೆರಗು ಪ್ರಕಾಶನ
ನಾಟಕಗಳು ನಮ್ಮ ಗ್ರಾಮೀಣ ಸೊಗಡಿನ ಕಲೆ, ಸಂಸ್ಕ್ರತಿಯ ಪ್ರತೀಕ. ಮೊದಲಿನಿಂದಲೂ ನನಗೆ ರಂಗಭೂಮಿಯ ಬಗ್ಗೆ ಒಲವು. ನಾವು ಬಾಲ್ಯದಲ್ಲಿದ್ದಾಗ ನಮ್ಮ ಹಳ್ಳಿಗಳಲ್ಲಿ ಪೌರಾಣಿಕ ನಾಟಕಗಳನ್ನು ಆಡುತ್ತಿದ್ದರು. ನಾಟಕ ಕಲಿಸುವ ಮೇಷ್ಟ್ರು ಅದೇ ಹಳ್ಳಿಯಲ್ಲಿ ತಿಂಗಳುಗಟ್ಟಲೆ ಇದ್ದುಕೊಂಡು ಹಳ್ಳಿಯ ಜನರಲ್ಲಿ ಅವರು ಒಬ್ಬರಾಗಿ ಊರವರ ಮನೆಗಳಲ್ಲಿ ಊಟ ತಿಂಡಿ ಮಾಡಿಕೊಂಡು ಇರುತ್ತಿದ್ದರು. ನಾಟಕ ಕಲಿಸುವಾಗ ಊರಿಗೆ ಬಂದರೆ ನಾಟಕ ಪ್ರದರ್ಶನ ಮುಗಿದ ಮೇಲೆ ಅವರು ಊರಿಗೆ ವಾಪಸ್ ಹೋಗುತ್ತಿದ್ದದ್ದು.
ನಮ್ಮ ರೈತಾಪಿ ಜನರಿಗೆ ಇದ್ದಂತಹ ಏಕೈಕ ಮನೋರಂಜನೆ ಈ ನಾಟಕಗಳು. ಬೆಳಗಿನಿಂದ ಸಂಜೆಯವರೆಗೂ ಹೊಲಗದ್ದೆಗಳಲ್ಲಿ ದುಡಿದು ದಣಿದು ಬಂದ ರೈತರು ತಮ್ಮ ಆಯಾಸವನ್ನು ನೀಗಿಸಿಕೊಳ್ಳಲು ನಾಟಕಗಳನ್ನು ಆಡುತ್ತಿದ್ದರು. ಆಡಲು ಆಸಕ್ತಿ ಇಲ್ಲದವರು ನಾಟಕ ತಾಲೀಮುಗಳನ್ನ ನೋಡಲು ಗುಂಪು ಸೇರುತ್ತಿದ್ದರು. ಮಹಿಳೆಯರು ತಾವೇನು ಕಡಿಮೆ ಎಂಬಂತೆ ಊರಾ ಉಸಾಬರಿ ಮಾತಾಡುತ್ತಾ ಇಡೀ ಊರಿನ ಸುದ್ದಿಗಳನ್ನು ನ್ಯೂಸ್ ಚಾನಲ್ ಗಳಂತೆ ಬಿತ್ತರಿಸುತ್ತಿದ್ದರು. ನಮ್ಮ ಕಡೆ ಸಾಮಾಜಿಕ ನಾಟಕಗಳು ಕಡಿಮೆ. ಪೌರಾಣಿಕ ನಾಟಕಗಳನ್ನು ಮಾತ್ರ ಆಡುತ್ತಿದ್ದರು.ನಾಟಕ ಕಲಿಸಲು ಬರುವ ಸಂಗೀತ ನಿರ್ದೇಶಕರನ್ನು ನಾಟಕದ ಮೇಷ್ಟ್ರು ಎಂದೇ ಕರೆದು ಅವರ ನಿಜವಾದ ಹೆಸರೇನು ಎಂಬುದು ಅವರಿಗೆ ಮರೆತು ಹೋಗುತ್ತಿತ್ತು. ಅವರ ನಿಜ ನಾಮವನ್ನು ಯಾರಾದರು ಕರೆದರೂ ಯಾರನ್ನೋ ಕರೆದಿರಬಹುದು ಎಂದು ಮೇಷ್ಟ್ರು ಸುಮ್ಮನೆ ಇರುತ್ತಿದ್ದರು. ಈ ಮೇಷ್ಟ್ರು ನಮ್ಮ ಮಣ್ಣಿನ ಕಲೆ ಸಂಸ್ಕೃತಿಯ ರಾಯಭಾರಿ ಗಳಾಗಿದ್ದರು. ಆ ಊರಿಗೆ ಒಂದು ರೀತಿಯ ನ್ಯಾಯವಾದಿಗಳಾಗಿಯೂ ಕೆಲಸ ಮಾಡುತ್ತಿದ್ದರು. ಊರ ಜನ ತಮ್ಮ ಕಷ್ಟ ಸುಖಗಳನ್ನು, ಸಮಸ್ಯೆ ಸವಾಲುಗಳನ್ನು ಮೇಷ್ಟ್ರು ಬಳಿ ಆಪ್ತವಾಗಿ ಹೇಳಿಕೊಂಡು ಹಗುರಾಗುತ್ತಿದ್ದರು. ನಮ್ಮ ಕಷ್ಟಕ್ಕೆ ಸಂತೈಸಲು ಮೇಷ್ಟ್ರು ಇದ್ದಾರೆ ಎಂಬ ಭಾವ ಊರಿನವರದಾದರೆ ಮನೆ ಮಡದಿ ಮಕ್ಕಳನ್ನು ಬಿಟ್ಟು ಹೊಟ್ಟೆ ಪಾಡಿಗಾಗಿ ಕಲಿತ ವಿದ್ಯೆ ಕಲಿಸಲು ಊರೂರು ಹೋಗುತ್ತಿದ್ದ ಮೇಷ್ಟ್ರುಗಳಿಗೂ ಆ ಹಳ್ಳಿಗಳು ಮನೆಯಂತಹ ಪ್ರೀತಿ ಕಾಳಜಿ ತೋರುತ್ತಿದ್ದವು. ಮನೆಯವರಿಗೆ ಸ್ವಲ್ಪ ಆತಿಥ್ಯ ಕಡಿಮೆಯಾದರೂ ಮೇಷ್ಟ್ರಿಗೆ ಮಾತ್ರ ಭರ್ಜರಿ ಭೋಜನ ಸಿಗುತ್ತಿತ್ತು. ಹಾಗೆಲ್ಲ ಹಳ್ಳಿಗಳಲ್ಲಿ ಶಿಕ್ಷಣ ಕಲಿತವರು ಓದು ಬರಹ ತಿಳಿದವರು ಅಪರೂಪ. ಆ ಕಲಿತವರಿಗೆ ಉಳಿದವರು ತಮ್ಮ ಬಳಿಗೆ ಸಹಾಯ ಕೇಳಲು ಬರುವರೆಂಬ ಕೋಡು ಸ್ವಲ್ಪ ಹೆಚ್ಚೇ ಇರುತ್ತಿತ್ತು. ಆದರೆ ಅದು ಒಂದು ರೀತಿಯ ತಮಾಷೆಯ ಗತ್ತೇ ವಿನಃ ಅಹಂಕಾರದ ನೆರಳು ಇರುತ್ತಿರಲಿಲ್ಲ. ಬರಿ ಅನಕ್ಷಸ್ಥರನ್ನು ಕೂಡಿಕೊಂಡು ನಾಟಕ ಕಲಿಸುತ್ತಿದ್ದ ಮೇಷ್ಟ್ರುಗಳ ತಾಳ್ಮೆ ಬಹುದೊಡ್ಡ ಕಾಣ್ಕೆಯಾಗಿತ್ತು. ಅಕ್ಷರ ಬಾರದ ಜನರಿಗೆ ನಾಟಕ ಕಲಿಸುವುದು ಎಂದರೆ ಅವರ ಒಳಗಿನ ಬದುಕನ್ನೇ ರಂಗದ ಮೇಲೆ ತರುವ ಪ್ರಯತ್ನವಾಗಿತ್ತು. ಅವರಿಗೆ ನಾಟಕದ ಹಾಡುಗಳನ್ನಾಗಲಿ, ಡೈಲಾಗ್ ಗಳನ್ನಾಗಲಿ ಓದಲು ಬರೆಯಲು ಬರುತ್ತಿರಲಿಲ್ಲ. ಆದರೂ ನಾಟಕ ಕಲಿತೆ ತಿರುವೆನೆಂಬ ಅವರ ಅದಮ್ಯ ಉತ್ಸಾಹಕ್ಕೆ ಬೆಲೆ ಕಟ್ಟಲಾಗದು. ಇಲ್ಲಿ ನಾಟಕದ ಮೇಷ್ಟ್ರುಗಳಿಗೆ ಸಹನೆ ಭೂಷಣವಾಗಿತ್ತು. ಮೌಖಿಕ ಪಾಠದ ಮೂಲಕ ಇಡೀ ನಾಟಕ ಕಲಿಸುವುದು ನಿಜಕ್ಕೂ ತ್ರಾಸದಾಯಕ ಕೆಲಸವಾಗಿತ್ತು. ರೈತರು ನೆನ್ನೆ ರಾತ್ರಿ ಮೇಷ್ಟ್ರು ಹೇಳಿಕೊಟ್ಟ ನಾಟಕದ ಡೈಲಾಗ್ ಗಳನ್ನು ತಮ್ಮ ದೈನಿಕ ಕೆಲಸಗಳಲ್ಲಿ ತೊಡಗಿದಾಗ ಅಂದರೆ ಬೀಜ ಬಿತ್ತುವಾಗ, ಹುಲ್ಲು ಕೊಯ್ಯುವಾಗ, ಎತ್ತುಗಳಿಗೆ ಜೋಳ ತಿನ್ನಿಸುವಾಗ, ಕಳೆ ತೆಗೆಯುವಾಗ, ಉಳುಮೆ ಮಾಡುವಾಗೆಲ್ಲ ಮನಸ್ಸಲ್ಲಿ ಗುನುಗಿ ಕೊಳ್ಳುತ್ತಿದ್ದರು. ಚೂರು ಮರೆತು ಹೋದರು ತಲೆ ಕೆಡಿಸಿಕೊಂಡು ಪುನಃ ಮೊದಲಿನಿಂದ ಡೈಲಾಗ್ ಹೇಳಿಕೊಳ್ಳುತ್ತಿದ್ದರು. ಇದು ಅವರಿಗೆ ಎಂದು ಬೇಸರ ಅನಿಸುತ್ತಿರಲಿಲ್ಲ. ಏನಾದರೂ ಮಾಡಿ ಚೆನ್ನಾಗಿ ಕಲಿಯಬೇಕು ಊರ ಜಾತ್ರೆಯಲ್ಲಿ ಚೆನ್ನಾಗಿ ನಾಟಕ ಆಡಿ ಊರವರು, ಸಂಬಂಧಿಕರು, ಹತ್ತೂರ ಹಳ್ಳಿಗರ ಮುಂದೆ ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕೆಂಬ ಆಶಯ ಬಹುದೊಡ್ಡದಾಗಿತ್ತು. ಅದಕ್ಕಾಗಿ ತುಂಬಾ ಪರಿಶ್ರಮ ಪಡುತ್ತಿದ್ದರು.

ನಾಟಕ ಕಲಿಯಲು ಈಗಿನಂತೆ ನಿರ್ದಿಷ್ಟ ಸ್ಥಳ ಇರುತ್ತಿರಲಿಲ್ಲ. ಊರಿನ ಎಲ್ಲಾ ಜನರು ಸೇರಲು ಅನುಕೂಲವಾಗುವ ಸ್ಥಳದಲ್ಲಿ ಕಡ್ಡಿಗಳನ್ನು, ತೆಂಗಿನಗರಿಗನ್ನು ಬಳಸಿ ಶೆಡ್ ಹಾಕುತ್ತಿದ್ದರು. ಅಲ್ಲಿ ಪೆಟ್ರೋಮ್ಯಾಕ್ಸ್, ಸೀಮೆಎಣ್ಣೆ ಬುಡ್ಡಿ ದೀಪ ನೇತಾಡುತ್ತಿತ್ತು. ಆ ದಿನ ಯಾರ ಮನೆಯಿಂದ ಸೀಮೆಎಣ್ಣೆ ತರುತ್ತಿದ್ದರೋ ಅವನ ಗಮನವೆಲ್ಲ ಬುಡ್ಡಿ ದೀಪದ ಕಡೆಗೆ ಇರುತ್ತಿತ್ತು. ಸೀಮೆಎಣ್ಣೆ ಖಾಲಿಯಾಗಿರೆ ಮತ್ತೆ ಸೀಮೆಎಣ್ಣೆ ತರಬೇಕಾಗುತ್ತದೆ. ಮನೆಗೆ ಹೋದರೆ ಹೆಂಡತಿ ನೀನು ಹೋಗಿ ಊರ ಮುಂದೆ ಕುಣಿಯಕ್ಕೆ ಎಣ್ಣೆ ತಕ್ಕೊಂಡು ಹೋದರೆ ನಾನು ಮಕ್ಕಳು ಕತ್ತಲೇಲಿ ಬಿದ್ದಿರಬೇಕಾ ಅಂತ ಪೂಜೆ ಮಾಡುತ್ತಾಳೆ ಎಂಬ ಕೊರಗಿನಲ್ಲೆ ಆ ದಿನದ ನಾಟಕ ಕಲಿಕೆಯನ್ನ ಮುಗಿಸುತ್ತಿದ್ದರು. ಆಗ ನಾಟಕದ ವೇಷ ಭೂಷಣಗಳು ಈಗಿನಂತಿರಲಿಲ್ಲ. ತಮ್ಮ ಮನೆಯಲ್ಲಿರುವ ಹೆಂಗಸರ ಬಣ್ಣ ಬಣ್ಣದ ಸೀರೆಗಳನ್ನು ಒಡವೆಗಳನ್ನು ಹಾಕಿಕೊಂಡು ನಾಟಕ ಆಡುತ್ತಿದ್ದರು.
ಈ ಮಣ್ಣಿನ ಮಕ್ಕಳಿಗೆ ಲಿಖಿತ ಭಾಷೆ ಗೊತ್ತಿರಲಿಲ್ಲ. ಆದರೆ ಭಾವಗಳಿಗೆ ಜೀವ ತುಂಬುವ ಅಪಾರ ಶಕ್ತಿ ಇತ್ತು. ಪ್ರೀತಿ, ವಾತ್ಸಲ್ಯ, ಕೋಪ ಆಕ್ರೋಶ, ಸಹನೆ, ಶಾಂತಿ ಎಲ್ಲ ಭಾವಗಳಿಗೆ ಡೈಲಾಗ್ ಗಳನ್ನು ಜೋಡಿಸಿಕೊಳ್ಳುವ ಕಲೆಗಾರಿಕೆ ಇತ್ತು. ಆದರೆ ಡೈಲಾಗ್ ನೆನಪಿಡೋದು ಅವರಿಗೆ ಹಿಮಗಿರಿ ಏರಿದಷ್ಟು ಪ್ರಾಸದಾಯಕವಾಗಿತ್ತು. ಅದಕ್ಕೆ ಅವರು ಮಾಡುತ್ತಿದ್ದ ಸರ್ಕಸ್ ಅಷ್ಟಿಷ್ಟಲ್ಲ. ಓದಲು ಬರುವವರ ಬಳಿ ಹೋಗಿ ಅವರಿಗೆ ಬೀಡಿ ಸಿಗರೇಟು, ಎಲೆ ಅಡಿಕೆ, ಕಾಫಿ ಟೀ ಕೊಡಿಸಿ ಡೈಲಾಗ್ ಹೇಳಿಸಿಕೊಂಡು ಕಲಿಯುತ್ತಿದ್ದರು. ಹಬ್ಬ ಬಂತೆಂದರೆ ನಾಟಕದ ಮೇಷ್ಟ್ರಿಗೆ ನಾಟಕ ಕಲಿಯುವವರ ಮನೆಯಲ್ಲಿ ಇರುವ ನಾಟಿ ಕೋಳಿ ಮೇಲೆ ಕಣ್ಣು. ಕೋಳಿ ಕೊಯ್ದು ಮಸಾಲೆ ಹಾಕಿ ಇಟ್ರೆ ಸಾಕು ಅವನಿಗೆ ನಾಟಕದ ತಾಲೀಮು ಜಾಸ್ತಿ ಸಿಗುತ್ತಿತ್ತು. ನಾಟಕದಲ್ಲಿ ಗೌರವವು ಜೋರಾಗಿ ಇರುತ್ತಿತ್ತು. ಎಷ್ಟು ಬಾರಿ ತಪ್ಪು ಮಾಡಿದರು ತಿದ್ದಿ ಹೇಳಿ ಕೊಡುತ್ತಿದ್ದರು. ಕೋಳಿ ಮೇಲೆ ಆಸೆ ಜಾಸ್ತಿಯಾಗಿ ಮೇಸ್ಟ್ರಿಗೆ ಕೋಳಿ ಸಾರು ಮಾಡಿ ಕೊಡಲಿಲ್ಲ ಅಂದ್ರೆ ಬೇಕಂತಲೇ ನಿನಗೆ ಎಷ್ಟು ಬಾರಿ ಹೇಳಿಕೊಡೋದು, ಶತಮೂರ್ಖ ನೀನು ಅಂತ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅದಕ್ಕೆ ಜನ ಕೋಳಿ ಹೋದರು ಪರವಾಗಿಲ್ಲ ಮಾನ ಹೋಗ್ಬಾರ್ದು ಅಂತ ನಾ ಮುಂದು ತಾ ಮುಂದು ಅಂತ ಜಟಾಪಟಿ ಮೇಲೆ ಮೇಷ್ಟ್ರಿಗೆ ಭವ್ಯ ಭೋಜನ ಏರ್ಪಡಿಸುತ್ತಿದ್ದರು.
ದೊಡ್ಡ ಸ್ವರದ ಡೈಲಾಗ್ ಹೇಳುವ ತಾರಕ ಪಾತ್ರಗಳಲ್ಲಿ ಗಂಟಲು ಕಟ್ಟಿಕೊಳ್ಳುವುದು ಸಾಮಾನ್ಯವಾಗಿತ್ತು. ಹಾಗೆಲ್ಲ ಮೇಷ್ಟ್ರು ಏನೇನೋ ಅಡ್ಡಾಡಿ ತಿಂದು ಗಂಟಲು ಕಟ್ಟುಸ್ಕೊಂತ ಇದ್ದೀರಾ? ಅಂತ ಬಯ್ಯೋದು ಸಾಮಾನ್ಯವಾಗಿತ್ತು. ಮನೆಯಲ್ಲಿರುವ ಹೆಂಗಸರಿಗೆ ಗಂಡಂದಿರ ಗಂಟಲು ಕಟ್ಟಿಕೊಳ್ಳದಂತೆ ಮಾಡಲು ಬೆಳ್ಳುಳ್ಳಿ ಜಜ್ಜಿ ಉಪ್ಪು ಹಾಕಿ ಹುರುಳಿಕಾಳು ಬೇಯಿಸಿ ಕಟ್ಟು ಮಾಡಿಕೊಡುವುದೇ ದೊಡ್ಡ ಕೆಲಸವಾಗುತ್ತಿತ್ತು. ಇದು ಸಾಲದು ಎಂಬಂತೆ ಮನೆ ಹೆಂಗಸರಿಗೆ ಕಾಣದಂತೆ ಕಾಫಿ, ಟೀ ಮಾಡಲು ಡಬ್ಬದಲ್ಲಿ ಬಚ್ಚಿಟ್ಟಿದ್ದ ಬೆಲ್ಲದ ಉಂಡೆಗಳು ಇದ್ದಕ್ಕಿದ್ದಂತೆ ಮಾಯವಾಗಿ ಇವರ ಗಂಟಲು ಕಟ್ಟುವುದನ್ನು ನಿಲ್ಲಿಸಲು ಗಂಟಲೊಳಗೆ ಸೇರುತ್ತಿದ್ದೆವು.
ಆಗೆಲ್ಲ ನಾಟಕಗಳಲ್ಲಿ ಹೆಣ್ಣು ಪಾತ್ರ ಮಾಡಲು ಹೆಣ್ಣು ಮಕ್ಕಳಿಗೆ ಅವಕಾಶ ಇರಲಿಲ್ಲ. ಗಂಡು ಮಕ್ಕಳೆ ಹೆಣ್ಣು ಪಾತ್ರಗಳನ್ನು ಮಾಡುತ್ತಿದ್ದರು. ಗಂಡು ಮಕ್ಕಳಿಗೆ ಸೀರೆ ಉಡುವುದು, ಹೆಣ್ಣುಮಕ್ಕಳ ಹಾವ ಭಾವಗಳನ್ನು ಕಲಿಯುವುದು ಅನಿವಾರ್ಯವಾಗಿತ್ತು. ಇದನ್ನೆಲ್ಲಾ ನೋಡಲು ಚಿಕ್ಕ ಮಕ್ಕಳಾದ ನಮಗೆ ಸಡಗರವೋ ಸಡಗರ. ನಾವು ಹೋಗಿ ಅಕ್ಕ ಅಕ್ಕ ಸೀರೆ ಕೊಡು,ಅಕ್ಕ ಅಕ್ಕ ಚೌವ್ಲಿ ಕೊಡು ಅಂತ ಸೀರೆ ಹಿಡಿಯೋದು ಚೌಲಿ ಎಳೆಯುವುದು ಮಾಡ್ತಿದ್ವಿ. ಅವರು ಕೋಪದಿಂದ ನಮ್ಮನ್ನು ಊರಲ್ಲೆಲ್ಲ ಅಟ್ಟಾಡಿಸಿಕೊಂಡು ಹೊಡೆಯಲು ಬರುತ್ತಿದ್ದರು. ಇದನ್ನು ಕಂಡ ಊರ ಹಿರಿಕರು ಆ ಚಿಕ್ಕ ಮಕ್ಕಳು ತಮಾಷೆ ಮಾಡ್ತಾವೆ. ನೀನು ದೊಡ್ಡ ಕತ್ತೆ ಥರ ಇದ್ಯಾ ಸ್ವಲ್ಪ ಆದ್ರೂ ಬುದ್ಧಿ ಬೇಡ್ವಾ, ಆ ಮಕ್ಕಳು ಜೊತೆ ಸೇರ್ಕೊಂಡು ಮಕ್ಕಳಾಡ್ದಂಗೆ ಆಡ್ತೀಯಾ ಅಂತ ಬೈತಿದ್ರು.
ಒಮ್ಮೆ ನಾಟಕ ನಡೆಯುವಾಗ ಹೆಣ್ಣು ಪಾತ್ರದಾರಿಯಾದ ಗಂಡು ತಾನು ಹೆಣ್ಣು ಅನ್ನೋದನ್ನು ಮರೆತು ಗಂಡಿನ ಧ್ವನಿಯಲ್ಲಿ ಮಾತನಾಡಿದ್ರು. ಆಗ ಜನರೆಲ್ಲ ಗೊಳ್ಳೆಂದು ನಕ್ಕು ಅಯ್ಯೋ ನೀನು ಗಂಡ್ಸಲ್ಲ. ಹೆಂಗ್ಸು ನೆಟ್ಟಗೆ ಹೆಂಗ್ಸಿನಂತೆ ಮಾತಾಡು ಅಂದಾಗ ಆ ಗಡಿಬಿಡಿಲಿ ಕೋಪಗೊಂಡು ಸೀರೆ ಸೊಡ್ಲಾಗಿ ಉದ್ರೋ ಯ್ತು ಜನರೆಲ್ಲ ಸೊಡ್ಲ ಸೊಡ್ಲ ಅಂತ ಜೋರಾಗಿ ಕೂಗಿದರು. ಅಂದಿನಿಂದ ಆತನಿಗೆ ಸೊಡ್ಲ ಅನ್ನುವ ಹೆಸರೇ ಉಳಿದೋಯ್ತು.
ಈ ನಾಟಕದಲ್ಲಿ ಟೈಮಿಂಗ್ ಡೈಲಾಗ್ ಗಳನ್ನು ರಂಗದ ಮೇಲೆ ಹೇಳಿಸಲು ಎಷ್ಟು ಹರ ಸಾಹಸ ಪಡುತ್ತಿದ್ದರು. ನಾಟಕದ ಸೀನ್ಸ್ ಮರೆಯಲ್ಲಿ ಒಬ್ಬರು ನಿಂತು ಡೈಲಾಗು ಹೇಳಿ ಕೊಡುತ್ತಿದ್ದರು. ಈ ಸಂಗೀತದ ತಾರಕ ಸ್ವರದಲ್ಲಿ ಅರ್ಧಂಬರ್ಧ ಕೇಳಿಸಿ ಅಲ್ಲಿ ಇರೋದೇ ಒಂದು ಡೈಲಾಗ್, ಇವರು ಹೇಳೋದೇ ಮತ್ತೊಂದು ಡೈಲಾಗ್ ಆಗೋಗ್ತಿತ್ತು. ಆಗ ನಾಟಕದ ಮೇಷ್ಟ್ರು ತಲೆ ತಲೆ ಚಚ್ಚಿಕೊಂಡು ಇವಕ್ಕೆ ಎಷ್ಟು ಹೇಳಿಕೊಟ್ಟರು ಮರೆತುಬಿಟ್ಟು ನನ್ನ ಮರ್ಯಾದೆ ತೆಗೆಯೋಕೆ ಅಂತಾನೆ ಬಂದಿವೆ ಎಂದು ರೇಗಾಡೋದು ಸಹಜವಾಗಿತ್ತು. ಅವರು ಹೇಳುವ ಸಂಭಾಷಣೆ ಏನಾದರೂ ಅವರ ವೈಯಕ್ತಿಕ ಬದುಕಿಗೆ ಕನೆಕ್ಟ್ ಆಯ್ತು ಅಂದ್ರೆ ಮುಗಿದೇ ಹೋಯಿತು. ಪಾತ್ರ ಮರೆತು ತಮ್ಮ ಗೋಳನ್ನು ರಂಗದ ಮೇಲೆ ಹೇಳಲು ಶುರುಹಚ್ಚಿಕೊಳ್ಳುತ್ತಿದ್ದರು.
ನನ್ನ ಅಪ್ಪ ಶಿವಕುಮಾರ್ ಅವರು ಕೂಡ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ನಾರದ ಮತ್ತು ಬೃಹನ್ಹಳೆ ಪಾತ್ರಗಳಲ್ಲಿ ಅಪ್ಪ ಅಭಿನಯ ಮಾಡಿದ್ದು ಈಗಲೂ ನೆನಪಿನ ಪುಟದಲ್ಲಿ ಅಚ್ಚಳಿಯದೆ ಉಳಿದಿದೆ. ಆಗ ನಾವೆಲ್ಲ ನಾಟಕಕ್ಕಿಂತ ನಾಟಕದ ತಾಲೀಮು ನೋಡಿ ಸಂಭ್ರಮಿಸಿದ್ದೆ ಹೆಚ್ಚು. ಏಕೆಂದರೆ ನಾಟಕ ನೋಡುವ ದಿನ ಬಂದಾಗ ಸಂಭ್ರಮವೋ ಸಂಭ್ರಮ. ಮನೆಯಲ್ಲಿ ನಾವು ನಾಟಕ ನೋಡಲು ಬರ್ತೀವಿ ಎದ್ದಿರ್ತೀವಿ ಅಂತ ಬೊಬ್ಬೆ ಹೊಡೆಯುತ್ತಿದ್ವಿ. ಅದನ್ನು ನೋಡಿ ಅಮ್ಮ ಯಾರ್ ಬೇಡ ಅಂದ್ರು ಕಣ್ಗೆ ಎಣ್ಣೆ ಬಿಟ್ಕೊಂಡು ಎದ್ದೀರಿ ಅಂತಿದ್ರು. ಒಂದ್ಸಲ ಕಣ್ಣು ಎಣ್ಣೆ ಬಿಟ್ಕೊಂಡ್ರೆ ನಿದ್ದೆ ಬರಲ್ಲ ಎದ್ದಿರಬಹುದು ಅಂತ ಹರಳೆಣ್ಣೆ ಹಚ್ಚಿಕೊಂಡು ನಾಟಕ ನೋಡಲು ಕೂತಲ್ಲೇ ಎಣ್ಣೆ ಕಣ್ ರೆಪ್ಪೆಗಳನ್ನು ಕೂಡಿಸಿ ಕಣ್ಣು ಬಿಡದಂತೆ ಮಾಡಿದ್ದು ಈಗಲೂ ನೆನಪಿದೆ. ಈಗಿನಂತೆ ಆಗೆಲ್ಲ ನಾಟಕ ನೋಡಲು ಬರುವವರಿಗೆ ಚೇರ್ ವ್ಯವಸ್ಥೆ ಇರುತ್ತಿರಲಿಲ್ಲ. ನಾಟಕ ನೋಡಲು ಹೋಗುವವರು ಅವರ ಮನೆಯಿಂದ ದೊಡ್ಡ ಚಾಪೆಯನ್ನು ಹೊತ್ತುಕೊಂಡು ಹೋಗಬೇಕಿತ್ತು. ಮತ್ತು ಕೆಲವರು ನೆಲದಲ್ಲಿ ಕಾಣುವುದಿಲ್ಲ ಅಂತ ಮನೆಯಲ್ಲಿರುವ ರಾಗಿ ಹುಬ್ಲು ತುಂಬಿದ ದಪ್ಪ ದಿಂಬುಗಳನ್ನು ತಂದು ಒಂದರ ಮೇಲೊಂದು ಪೇರಿಸಿಕೊಂಡು ಹಿಂದಿನವರಿಗೆ ಕಾಣದಂತೆ ಕುಳಿತುಕೊಳ್ಳುವುದು, ಹಿಂದಿನವರಿಗೆ ಕಾಣದೇ ತಲೆ ತಗ್ಗಿಸು ಅಂತ ತಲೆ ಮೇಲೆ ಮೊಟಕುವುದು, ಜಗಳವಾಡುವುದು ನಿಜಕ್ಕೂ ಇವೆಲ್ಲ ಮರೆಯಲಾಗದ ಬಾಲ್ಯದ ಅನುಭವಗಳು. ಈಗಿನಂತೆ ಆಗೇನು ನಾಟಕಕ್ಕೆ ಫಸ್ಟ್ ಬೆಲ್, ಸೆಕೆಂಡ್ ಬೆಲ್,ಥರ್ಡ್ ಬೆಲ್ ಗಳೆಂಬ ಸೂಚನೆಗಳಿರಲಿಲ್ಲ. ಮೈಕಿನಲ್ಲಿ ನಾಟಕ ಶುರುವಾಗುವ ಸಮಯ ಅನೌನ್ಸ್ ಮಾಡುತ್ತಿದ್ದಂಗೆ ಐದು ಗಂಟೆಗೆ ಚಾಪೆ ತಗೊಂಡು ಹೋಗಿ ನೆಲದ ಮೇಲೆ ಹಾಸಿ ನಮಗೆ ಮತ್ತು ನಮ್ಮ ಮನೆಯವರಿಗೆ ಜಾಗ ಭದ್ರಮಾಡಿಕೊಳ್ಳುತ್ತಿದ್ದೆವು. ಆದರೆ ಕೆಲವು ಘಾಟಿ ಹೆಂಗಸರು ಚಾಪೆ ತಳ್ಳಿ ಅವರು ಪಕ್ಕ ತೂರುತ್ತಿದ್ದರು. ನಾಟಕವನ್ನು ರಂಗದ ಮೇಲೆ ನೋಡಿದ್ದು ತೀರಾ ಅಪರೂಪ ಅಂತ ಹೇಳಬಹುದು.
ಚಿಕ್ಕ ಮಕ್ಕಳಾದ್ದರಿಂದ ಬಹುಬೇಗನೆ ನಿದ್ದೆಗೆ ಜಾರುತಿದ್ದೆವು. ಪ್ರಾರ್ಥನೆ ಸಮಯಕ್ಕೆ ತೂಕಡಿಸಲು ಶುರುಮಾಡಿ ನಾಟಕ ಆರಂಭದೊತ್ತಿಗೆ ಗಡತ್ ನಿದ್ದೆಗೆ ಜಾರಿ ಬೆಳಗಿನ ಮಂಗಳ ಹಾಡುವ ಕಾಲಕ್ಕೆ ಏಳುತ್ತಿದ್ದೆವು. ನಂತರದಲ್ಲಿ ಇವೆಲ್ಲ ಬದಲಾದವು. ಜನರು ವಿದ್ಯಾವಂತರಾದರೂ ತಮ್ಮ ಪಾತ್ರಗಳನ್ನು ತಾವೇ ಬರೆದುಕೊಂಡು ಕಂಠಪಾಠ ಮಾಡಿ ಕಲಿಯಲು ಆರಂಭಿಸಿದರು. ದೊಡ್ಡ ದೊಡ್ಡ ಬಣ್ಣದ ಲೈಟಿಂಗ್ಸ್ ಗಳುಳ್ಳ ರಂಗ ಸಜ್ಜುಕೆಗಳು, ಜಗಮಗಿಸುವ ವೇಷಭೂಷಣಗಳು, ಉಡುಗೆ ತೊಡುಗೆಗಳು ಮೇಕಪ್ ಗಳು ಬಂದವು. ಹೆಣ್ಣು ಪಾತ್ರ ಮಾಡಲು ಹೆಣ್ಣು ಮಕ್ಕಳು ಮುಂದೆ ಬಂದರು. ಈಗೆಲ್ಲ ಪಕ್ಕಾ ಕಮರ್ಷಿಯಲ್ ರಂಗಭೂಮಿಯಾಗಿದೆ. ನನ್ನ ಪತಿ ಯತೀಶ್ ಅವರ ಅಣ್ಣನ ಮಗ ರವಿ. ಆರ್ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು ಪ್ರವೃತ್ತಿಯಲ್ಲಿ ರಂಗ ಕಲಾವಿದರಾಗಿದ್ದಾರೆ.
ರವಿ ಆರ್ ಅವರಿಗೆ ಬಾಲ್ಯದಿಂದಲೂ ನಾಟಕದ ಬಗ್ಗೆ ತುಂಬಾ ಆಸಕ್ತಿ. ಈಗ ನಮ್ಮ ಊರಿನ ಯುವಕರನ್ನೆಲ್ಲ ಒಟ್ಟಿಗೆ ಸೇರಿಸಿ ‘ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ ಮಂಡಳಿ’ ಕಟ್ಟಿ ಪ್ರತಿ ವರ್ಷ ಕುರುಕ್ಷೇತ್ರ, ರಾಮಾಯಣ, ತ್ರಿಪುರ ಸಂಹಾರ ಸೇರಿದಂತೆ ಹಲವಾರು ಪೌರಾಣಿಕ ನಾಟಕಗಳ ಪ್ರದರ್ಶನವನ್ನು ನಮ್ಮ ಊರು ಮಾತ್ರವಲ್ಲದೆ ಅಕ್ಕಪಕ್ಕದ ಊರುಗಳ ಜಾತ್ರೆಗಳಲ್ಲೂ ಪ್ರದರ್ಶನ ನೀಡುತ್ತಿದ್ದಾರೆ. ಒಮ್ಮೆ ನಮ್ಮ ಕುಟುಂಬದವರೆ ಎಲ್ಲಾ ಪಾತ್ರಗಳನ್ನು ನಿರ್ವಹಿಸಿ ಕುರುಕ್ಷೇತ್ರ ನಾಟಕವನ್ನು ಆಡಿ ಎಲ್ಲರನ್ನು ಬೆರಗುಗೊಳಿಸಿದ್ದರು.ರಂಗಭೂಮಿ ಅವಸಾನದೆಡೆಗೆ ಹೊರಬೀಳುತ್ತಿರುವ ಈ ಹೊತ್ತಿನಲ್ಲಿ ರಂಗಭೂಮಿಯನ್ನು ಉಳಿಸಿ ಬೆಳೆಸುವ ಮೂಲಕ ನಮ್ಮ ನೆಲದ ಸೊಗಡನ್ನು ಕಾಪಾಡಲು, ನಮ್ಮ ನೆಲದ ಕಲೆಯನ್ನು, ನಮ್ಮ ರಂಗ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಲು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ನನ್ನ ಪತಿ ಯತೀಶ್ , ಮಗ ಗಗನ್ ಕೂಡ ರಂಗ ಕಲಾವಿದರು ಎಂಬುದು ನನಗೆ ಅತ್ಯಂತ ಖುಷಿಯ ಸಂಗತಿ. ಜೊತೆಗೆ ಮೈದುನ ಶಂಕರ್, ದಾಯಾದಿ ಸಹೋದರರಾದ ರವಿ ಆರ್, ಉಮೇಶ್ ಜಿ, ಚಂದ್ರಶೇಖರ್, ಅರುಣ್ ಆರ್, ಸೋಮಶೇಖರ್, ಕೂಡ ರಂಗ ಕಲಾವಿದರಾಗಿದ್ದಾರೆ. ಹಲವಾರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಟಕಗಳ ಬಗ್ಗೆ ಅಪಾರ ಒಲವು ಅಭಿರುಚಿ ಇರುವ ನಾನು ಇವರಿಗೆ ಪ್ರೋತ್ಸಾಹ ನೀಡುವ ಮೂಲಕ ಸಂಭ್ರಮಿಸಿದ್ದೇನೆ. ನಾಟಕ ಎಂದರೆ ಕೀಳಾಗಿ ನೋಡುತ್ತಿದ್ದ ಜನರು ಇಂದು ವಿಶಾಲ ಮನೋಭಾವದಿಂದ ನೋಡಿ ಗೌರವಿಸುವಂತಹ ಮನಸ್ಥಿತಿಯನ್ನು ಪಡೆಯುತ್ತಿರುವುದು ಆಶಾದಾಯಕ ಸಂಗತಿಯಾಗಿದೆ.
ನಾನು ನಾಟಕಗಳ ಬಗ್ಗೆ ಇಷ್ಟೆಲ್ಲ ನೆನಪಿಸಿಕೊಳ್ಳಲು ಕಾರಣವಾಗಿದ್ದು ನನ್ನ ಈ ‘ರಂಗ ಸಂಕಥನ’ ಕೃತಿ. ರಂಗಭೂಮಿಯ ಬಗ್ಗೆ ಇಷ್ಟೆಲ್ಲಾ ಪ್ರೀತಿ ಇರುವ ನನಗೆ ಸಾಹಿತ್ಯ ಹೊಸ ತಲೆಮಾರಿನ ರಂಗಕರ್ಮಿಗಳಾದ ಡಾ.ಬೇಲೂರು ರಘುನಂದನವರನ್ನು ಪರಿಚಯಿಸಿತು. ಅವರ ರಂಗಭೂಮಿಯ ಬಗೆಗಿನ ಪ್ರೀತಿ, ನಿಷ್ಠೆ, ಬದ್ಧತೆ, ಕಾಳಜಿ ಬಹು ದೊಡ್ಡದು. ಕನ್ನಡ ರಂಗಭೂಮಿಗೆ ಅವರ ಕಾಣಿಕೆಯು ಸ್ಮರಣೀಯ. ಅವರ ಅನೇಕ ನಾಟಕಗಳನ್ನು ಓದಿದ್ದೇನೆ. ಅವರ ನಾಟಕದ ವಸ್ತುಗಳು ನನ್ನನ್ನು ಬಹುವಾಗಿ ಕಾಡಿದವು. ಅಭದ್ರತೆ ಹಾಗೂ ಸಂಕಟಗಳಲ್ಲಿಯೆ ಬದುಕುತ್ತಿರುವ ಜನರ ನೋವಿಗೆ ಮಿಡಿಯುವ ಇವರ ಜೀವಪರತೆ, ಹೆಂಗರುಳ ಆದ್ರತೆ ಕಂಡು ಬೆರಗಾದೆ. ಈ ಮಧ್ಯೆ ಕವಿಗಳು ಪತ್ರಕರ್ತರು ಆದ ಹಾಸನದ ಚಲಂ ಹಾಡ್ಲಹಳ್ಳಿ ಅವರ ಪರಿಚಯವಾಯಿತು. ಅವರು ಕವಿ ಎನ್ನುವುದಕ್ಕಿಂತ ಮಿಗಿಲಾಗಿ ರಂಗಭೂಮಿಯಲ್ಲಿ ನಿರತರಾದವರು.
ರಂಗಭೂಮಿಯ ಬಗ್ಗೆ ಹೆಚ್ಚು ಆಸಕ್ತಿ ಇರುವ ಇವರು ತಮ್ಮ ‘ಜೇನುಗಿರಿ’ ಪತ್ರಿಕೆಯಲ್ಲಿ ಡಾ. ಬೇಲೂರು ರಘುನಂದನ್ ಅವರ ನಾಟಕಗಳ ಕುರಿತು ಅಂಕಣ ಬರೆಯಲು ಆಹ್ವಾನ ನೀಡಿದರು. ಇವರು ನೀಡಿದ ಅವಕಾಶವನ್ನು ಪ್ರೀತಿಯಿಂದ ಬಳಸಿಕೊಂಡು ಬೇಲೂರು ರಘುನಂದನ್ ಅವರ ಬದುಕು ಬರಹ, ಅವರ ರಂಗ ಪಯಣ, ರಂಗಕೃತಿಗಳು, ರಂಗ ಪಠ್ಯಗಳನ್ನು ಕುರಿತು ಅಂಕಣಗಳನ್ನು ಬರೆದಿದ್ದೇನೆ. ರಘುನಂದನ್ ಅವರ ನಾಟಕಗಳನ್ನು ಓದುತ್ತಾ ಹೋದಂತೆ ನನಗೊಂದು ಹೊಸ ಜಗತ್ತಿನ ಅನುಭವವಾಯಿತು. ಹೆಣ್ಣು ಮಕ್ಕಳ ಬಗ್ಗೆ ಇವರಿಗೆ ಇರುವ ಗೌರವ ಕಾಳಜಿ ಕಂಡು ಬೆರಗಾದೆ. ಮಹಿಳಾ ಜಗತ್ತನ್ನೇ ಕೇಂದ್ರಿಕರಿಸಿ ನಾಟಕ ರಚಿಸುವುದು ಇವರ ವಿಶೇಷತೆ. ಇವರ ಪ್ರತಿ ನಾಟಕದಲ್ಲೂ ಹೆಣ್ಣು ಶೋಷಣೆಯಿಂದ ಮುಕ್ತವಾಗಲೂ, ಪುರುಷ ಪ್ರಧಾನ ಹಿಡಿತದ ನಿರ್ಭಂದಗಳಿಂದ ಬಿಡಿಸಿಕೊಂಡು ತನ್ನದೇ ಅಸ್ಥಿತ್ವ ಸ್ಥಾಪಿಸಿಕೊಳ್ಳಲು ತವಕಿಸುವಳು. ನಿರ್ಲಕ್ಷಿತ ಸಮುದಾಯಗಳು, ಅಂಚಿಗೆ ದೂಡಲ್ಪಟ್ಟ ಜನರ ಬಗ್ಗೆ ಅಪಾರವಾಗಿ ಮಿಡಿಯುವ ಇವರ ಹೃದಯ ಶ್ರೀಮಂತಿಕೆ ಕಂಡು ಅಚ್ಚರಿಯಾಯಿತು. ರಘುನಂದನ್ ಅವರ ನಾಟಕಗಳ ವಿಶೇಷತೆ ಎಂದರೇ ತಾತ್ವಿಕ ಆಯಾಮಗಳನ್ನು ಚರ್ಚಿಸುವುದು. ತರ್ಕಬದ್ಧವಾದ ಚಿಂತನಾಶೀಲಾ ಆಲೋಚನೆಗಳಿಗೆ ಪ್ರೇಕ್ಷಕರನ್ನು ಹಚ್ಚುವುದು ಪ್ರಧಾನವಾಗಿ ಕಂಡುಬರುತ್ತದೆ. ಶರ್ಮಿಷ್ಠೆ, ತಿಪ್ಪೆರುದ್ರ, ಪ್ರೇಮಮಯಿ ಹಿಡಿಂಬ, ರಕ್ತವರ್ಣೆ ಇವುಗಳನ್ನು ಓದುತ್ತಾ ಹೋದರೆ ಪ್ರತಿ ಸಾಲನ್ನು ಇಟ್ಟುಕೊಂಡು ಒಂದೊಂದು ಪ್ರಬಂಧ ಬರೆಯಬಹುದು. ಅಷ್ಟೊಂದು ವಿಭಿನ್ನ ಸಂಭಾಷಣೆಗಳು, ರೂಪಕಗಳ ಮೂಲಕ ಸಶಕ್ತವಾದ ಸಾಲುಗಳನ್ನು ಕಟ್ಟಿದ್ದಾರೆ. ನಾಟಕ ದೃಶ್ಯ ಮಾಧ್ಯಮ ಆಗಿರುವುದರಿಂದ ನಾಟಕಗಳ ಪ್ರಮುಖ ಆಶಯ ರಂಗ ಪ್ರಯೋಗ ನಡೆಸುವುದು. ಅತ್ಯಂತ ಶ್ರದ್ಧೆ ಆಸಕ್ತಿ ಪ್ರೀತಿಯಿಂದ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದಾರೆ. ಇವರ ರಂಗಭೂಮಿಯ ಒಲವು ಹೀಗೆ ನಿತ್ಯ ತೊರೆಯಾಗಿರಲಿ.
ನನ್ನ ಓದಿಗೆ ದಕ್ಕಿದ, ಬರಹಕ್ಕೆ ನಿಲುಕಿದ್ದನ್ನು ‘ರಂಗ ಸಂಕಥನ’ದ ಮೂಲಕ ನಿಮ್ಮ ಒಡಲಿಗೆ ಹಾಕಿರುವೆ. ನೀವೆಲ್ಲರೂ ಈ ಕೃತಿಯನ್ನು ಅತ್ಯಂತ ಪ್ರೀತಿಯಿಂದ ಓದಿ ಪ್ರೋತ್ಸಾಹಿಸಿ ರಂಗಭೂಮಿಯನ್ನು ಉಳಿಸಿ ಬೆಳೆಸಲು ಕೈಜೋಡಿಸುವಿರೆಂದು ಆಶಿಸುವೆ.
- ಅನುಸೂಯ ಯತೀಶ್
