ADOLESCENCE ಮತ್ತು ಗಂಡುಮಕ್ಕಳು – ವಿನಯ್‌ ಮಾಧವ್

ವಿಕಾಸ್ ನೇಗಿಲೋಣಿ ಅವರ ‘ರಥಬೀದಿ ಎಕ್ಸ್‌ಪ್ರೆಸ್‌’ ನಲ್ಲಿ ಕ್ಲಿಷ್ಟಕರವಾದ ಹನ್ನೆರೆಡು ಮತ್ತು ಹದಿನಾರರ ವಯಸ್ಸಿನ ಕಾಲಘಟ್ಟವನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾನೆ. ವಿನಯ್‌ ಮಾಧವ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ರಥಬೀದಿ ಎಕ್ಸ್‌ಪ್ರೆಸ್‌
ಲೇಖಕರು : ವಿಕಾಸ್ ನೇಗಿಲೋಣಿ
ಪ್ರಕಾಶಕರು: ಹರಿವು ಬುಕ್ಸ್
ಪುಟ : 84
ಬೆಲೆ : 110.00

ಇಂಗ್ಲಿಷ್‌ ನಲ್ಲಿ Adolescence ಎಂದು ಕರೆಯಲ್ಪಡುವ ಹದಿಹರೆಯ ಯಾವಾಗ ಆರಂಭವಾಗುತ್ತದೆ ಮತ್ತು ಯಾವಾಗ ಕೊನೆಯಾಗುತ್ತದೆ ಎಂದು ಹೇಳುವುದು ನನ್ನ ಪ್ರಕಾರ ಸ್ವಲ್ಪ ಕಷ್ಟದ ವಿಷಯ.

ಲಂಕೇಶ್‌ ಪತ್ರಿಕೆಯಲ್ಲಿ ʻತುಂಟಾಟʼ ಅಂತ ಪೋಲಿ ಜೋಕ್‌ ಗಳ ಒಂದು ಕಾಲಂ ಬರುತ್ತಿತ್ತು. ಅದರಲ್ಲಿ ಒಂದು ಜೋಕ್‌ ಹೀಗಿತ್ತು. ಕಾಲೇಜು ಗೆಳತಿಯರ ಗುಂಪೋಂದು, ಲೈಂಗಿಕ ಆಸಕ್ತಿ ಯಾವಾಗ ಆರಂಭವಾಗುತ್ತದೆ? ಮತ್ತು ಯಾವಾಗ ಕೊನೆಯಾಗುತ್ತದೆ ಎಂದು ಸಂಶೋಧನೆ ಮಾಡಲು ಹೊರಟರು. ಯಾವಾಗ ಆರಂಭವಾಗುತ್ತದೆ ಎನ್ನುವುದು ಅವರಿಗೇ ಗೊತ್ತಿತ್ತು.

ಕೊನೆಯಾಗುವುದನ್ನು ತಿಳಿದುಕೊಳ್ಳುವುದು ಹೇಗೆ? ಎಂದು ಯೋಚಿಸುವಾಗ, ಅದರಲ್ಲೊಬ್ಬಳು, ʻನನ್ನ ಅಜ್ಜಿಯನ್ನು ಕೇಳೋಣ,ʼ ಎಂದು ಹೇಳುತ್ತಾಳೆ.

ಹುಡುಗಿಯರೆಲ್ಲ ಒಟ್ಟಾಗಿ ಆ ಹುಡುಗಿಯ ಅಜ್ಜಿಯ ಹತ್ತಿರ ಹೋಗಿ, ʻಅಜ್ಜಿ, ನಾವು ಹೀಗೊಂದು ಸಂಶೋಧನೆ ಮಾಡುತ್ತಿದ್ದೇವೆ. ಲೈಂಗಿಕ ಆಸಕ್ತಿ ಯಾವ ವಯಸ್ಸಿನಲ್ಲಿ ಕೊನೆಯಾಗುತ್ತದೆ?ʼ ಎಂದು ಕೇಳಿದರಂತೆ.

ಆಗ ಅಜ್ಜಿ ನಾಚುತ್ತಾ, ʻನನಗಿಂತ ವಯಸ್ಸಾದವರನ್ನು ಕೇಳಿ ನೋಡಿ,ʼ ಎಂದರಂತೆ.

ಇದು ಹೆಂಗಸರ ಬಗ್ಗೆ ಇರುವ ಜೋಕ್‌ ಆದರೆ, ಕೆಲವು ವರ್ಷಗಳ ಹಿಂದೆ ತೆರೆ ಕಂಡಿದ್ದ ʻತಿಥಿʼ ಸಿನೆಮಾದಲ್ಲಿ ಸೆಂಚುರಿ ಗೌಡ ಎಂಬ ಪಾತ್ರ ಇದೆ. ಈ ವಿಷಯದ ಬಗ್ಗೆ ಅದು ಬಹಳಷ್ಟು ಬೆಳಕು ಚೆಲ್ಲುತ್ತದೆ ಎಂದು ನನಗನ್ನಿಸುತ್ತದೆ.

ಆದರೆ, Adolescance ಎನ್ನುವುದು ಲೈಂಗಿಕಕ್ಕೆ ಮಾತ್ರ ಸಂಬಂಧ ಪಟ್ಟ ವಿಷಯವಲ್ಲ. ಅದು ದೈಹಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿತ್ವ ವಿಕಸನವಾಗುವ ಅವಧಿ. ದೈಹಿಕ ವಿಕಸನ ಹತ್ತೊಂಬತ್ತು, ಇಪ್ಪತ್ತನೇ ವಯಸ್ಸಿಗೆ ಮುಕ್ತಾಯವಾಗುತ್ತದೆ. ಈ ಮಾನಸಿಕ ವಿಕಸನ ಎನ್ನುವುದು ಮಾತ್ರ ವ್ಯಕ್ತಿಯಿಂದ, ವ್ಯಕ್ತಿಗೆ ವ್ಯತ್ಸಾಸವಾಗುತ್ತಾ ಹೋಗುತ್ತದೆ ಎನ್ನುವುದು ನನ್ನ ʻವೈಯಕ್ತಿಕʼ ಅಭಿಪ್ರಾಯ.

ಕೆಲವರು ಎಷ್ಟೇ ವಯಸ್ಸಾದರೂ ʻyoung at heartʼಆಗಿರುತ್ತಾರೆ, ಮತ್ತೆ ಇನ್ನು ಕೆಲವರು ʻchildish at heart́ ಆಗಿರುತ್ತಾರೆ. ಕೆಲವರು ಬಹಳ ಚಿಕ್ಕ ವಯಸ್ಸಿನಿಂದಲೇ ಗಂಭೀರವಾಗಿದ್ದರೆ, ಇನ್ನು ಕೆಲವರು ಜೀವನದ ಕೆಲವು ಮಜಲುಗಳನ್ನು ದಾಟಿದ ಮೇಲೆ ಗಂಭೀರವಾಗುತ್ತಾರೆ.

ಈ Adolescence ಕೊನೆಯಾಗುವ ಕಾಲಘಟ್ಟದ ಬಗ್ಗೆ ನನಗೆ ಬಹಳಷ್ಟು ಜಿಜ್ಞಾಸೆಗಳಿವೆ. ನಮ್ಮ ಪೀಳಿಗೆಯಲ್ಲಿ ಹುಡುಗಿಯರನ್ನು ಇಪ್ಪತ್ಮೂರು ವರ್ಷಗಳ ಒಳಗೆ ಮದುವೆ ಮಾಡುತ್ತಿದ್ದರು. ಹಾಗಾಗಿ, ಅವರಿಗೆ ವಯಸ್ಸಿಗೆ ಮೀರಿದ ಗಾಂಭೀರ್ಯದಿಂದ ನಡೆದುಕೊಳ್ಳಲು ಸಾಮಾಜಿಕ ಒತ್ತಡ ಇರುತ್ತಿತ್ತು. ಹಾಗಾಗಿ, ಅವರಿಗೆ ತಮ್ಮ ಹದಿಹರೆಯದ ವಿಕಸನವನ್ನು ಅನುಭವಿಸಿ, ತಾವಾಗಿಯೇ ಒಂದು ವ್ಯಕ್ತಿತ್ವ ರೂಪಿಸಿಕೊಳ್ಳಲು ಆಸ್ಪದವಿರಲಿಲ್ಲ ಎಂದು ಅನ್ನಿಸುತ್ತದೆ.

ಆದರೆ ಹುಡುಗರಿಗೆ ಆ ಒತ್ತಡ ಇರಲಿಲ್ಲ. ಮನೆಯ ಜವಾಬ್ದಾರಿ ಏನಿದ್ದರೂ ಮೂವತ್ತರ ಮೇಲೆಯೇ. ಮದುವೆಯಾದ ಮೇಲೆ. ಹಾಗಾಗಿ, ತಮ್ಮ ಹದಿಯರೆಯದ ಹುಚ್ಚಾಟಗಳನ್ನು ಸ್ವಲ್ಪ ವಿಸ್ತರಿಸಿಕೊಳ್ಳುತ್ತಿದ್ದರು ಎಂದು ಅನ್ನಿಸುತ್ತದೆ. ಈಗ ಪರಿಸ್ಥಿತಿ ಬದಲಾಗಿದೆ. ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡಬೇಕು ಎನ್ನುವು ಸಾಮಾಜಿಕ ಒತ್ತಡದಿಂದ ನಾವೆಲ್ಲ ಹೊರ ಬಂದಿದ್ದೇವೆ. ಈಗಿನ ಹೆಣ್ಣುಮಕ್ಕಳು ಸಹ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಆಸ್ಪದವಿದೆ.

ಪ್ರತಿಯೊಬ್ಬರಿಗೂ ತಮ್ಮ ಬಾಲ್ಯ ಎನ್ನುವುದರ ಮಧುರ ನೆನಪುಗಳು ಇದ್ದೇ ಇರುತ್ತದೆ. ಚಿಕ್ಕಂದಿನಲ್ಲಿ ಓದಿದ್ದ ಸುಭದ್ರಾ ಕುಮಾರಿ ಚೌಹಾನ್ (ಮೊದಲು ಠಾಗೋರ್ ಎಂದು ಬರೆದಿದ್ದೆ. ಅದನ್ನು ಸರಿಪಡಿಸಲು ಹೇಳಿದ Vani Sureshk ಅವರಿಗೆ ಧನ್ಯವಾದಗಳು) ಬರೆದ ʻಬಾರ್‌ ಬಾರ್‌ ಆತೀ ಹೈ ಮಧುರ ಯಾದ್‌ ಬಚಪನ್‌ ತೇರಿ, ಗಯಾಲೇ ಗಯಾತೂ ಜೀವನ್‌ ಕೀ, ಸಬ್‌ ಕೀ ಮಸ್ತ್‌ ಖುಷಿ ತೇರಿ,ʼ ನನಗೆ ಈಗಲೂ ಇಷ್ಟವಾಗುವ ಕವಿತೆ. ಆದರೆ, ಈ Adolescance ಎಂಬ ʻಪ್ರಕ್ಷುಬ್ಧʼ ಕಾಲಘಟ್ಟವನ್ನು ಚರ್ಚಿಸಲು ಬಹಳಷ್ಟು ಹಿಂದೇಟು ಹಾಕುತ್ತಾರೆ. ನಮ್ಮ ಸಾಮಾಜದ ಕಟ್ಟುಪಾಡುಗಳೂ ಇದಕ್ಕೆ ಒಂದು ಕಾರಣ ಎಂದು ಹೇಳಬಹುದು.

ರಥಬೀದಿ ಎಕ್ಸ್‌ಪ್ರೆಸ್‌ ಲೇಖಕ ವಿಕಾಸ್ ನೇಗಿಲೋಣಿ

ಆದರೆ, ಇಂತಹ ಒಂದು ಸಾಹಸವನ್ನು ಯಶಸ್ವಿಯಾಗಿ ವಿಕಾಸ್‌ ನೇಗಿಲೋಣಿ ʻರಥಬೀದಿ ಎಕ್ಸ್‌ಪ್ರೆಸ್‌ʼಪುಸ್ತಕದಲ್ಲಿ ಮಾಡಿದ್ದಾನೆ ಎಂದು ಹೇಳಬಲ್ಲೆ. ಈ ಪುಸ್ತಕದಲ್ಲಿ ವಿಕಾಸ್ ಬಹಳಷ್ಟು ಕಡೆ ಗೆದ್ದಿದ್ದಾನೆ ಎಂದು ನನಗೆ ಅನ್ನಿಸಿತು. ಮೊದಲನೆಯದಾಗಿ, ಆತ್ಮಚರಿತ್ರೆ ಎಂದು ಹೇಳಿಕೊಂಡರೂ, ಎಲ್ಲೂ ʻನಾನುʼ ಎಂದು ಬರೆದುಕೊಂಡಿಲ್ಲ. ಎರಡನೆಯದಾಗಿ, ಇತ್ತೀಚಿನ ಬರಹಗಾರರಲ್ಲಿ ನನಗೆ ವಿಕಾಸ್‌ ಮತ್ತು ಶರತ್‌ ಭಟ್‌ ಸೆರಾಜೆ ಬರೆಯುವ ಶೈಲಿ ಬಹಳ ಇಷ್ಟವಾಗುತ್ತದೆ. ಈ ಪುಸ್ತಕದ ಶೈಲಿಯಂತೂ ಅದ್ಭುತವಾಗಿದೆ.

ಈ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಹೋದಾಗಲೇ ನನಗೆ ಗೊತ್ತಾಗಿದ್ದು, ಇದು ಮರು ಮುದ್ರಣ ಎಂದು. ಆ ಸಾಹಸಕ್ಕೆ ಕೈ ಹಾಕಿದ #ಹರಿವುಬುಕ್ಸ್‌ ಮತ್ತು ರತೀಶ್‌ ಗೆ ಒಂದು ಆಭಿನಂದನೆ ಸಲ್ಲಿಸಲೇಬೇಕು.

ವಾಸ್ತವಿಕವಾಗಿ Adolescence ಹತ್ತೊಂಬತ್ತನೇ ವಯಸ್ಸಿನವರೆಗೂ ಇದ್ದರೂ, ವಿಕಾಸ್‌ ಅದನ್ನು ಮೊಟಕುಗೊಳಿಸಿದ್ದಾನೆ ಎಂದು ನನಗೆ ಅನ್ನಿಸಿತು. ಆದರೆ ಬಹಳ ಕ್ಲಿಷ್ಟಕರವಾದ ಹನ್ನೆರೆಡು ಮತ್ತು ಹದಿನಾರರ ವಯಸ್ಸಿನ ಕಾಲಘಟ್ಟವನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾನೆ. ಆ ಸಂದಿಗ್ಧ ಕಾಲಘಟ್ಟವನ್ನು ಮುನ್ನುಡಿಯಲ್ಲಿ ಜೋಗಿ ಬಹಳ ಸೊಗಸಾಗಿ ವರ್ಣಿಸಿದ್ದಾರೆ: ʻಒಂದೆಡೆ ಬಾಲ್ಯದ ತಬ್ಬಲಿ ಹುಡುಗ, ಮತ್ತೊಂದೆಡೆ ಯಾರನ್ನು ತಬ್ಬಲಿ ಎಂದು ಬೆರಗುಗೊಂಡು ನಿಂತಿರುವ ಯೌವನದ ಹುಡುಗ, ಏಕಕಾಲಕ್ಕೆ ಇಲ್ಲಿ ಮುಖಾಮುಖಿಯಾಗುತ್ತಾರೆ.ʼ

ಈ ವಯಸ್ಸಿನಲ್ಲಿ, ತಾವು ಅನುಭವಿಸುತ್ತಿರುವ ತಳಮಳ ಮತ್ತು ಜಿಜ್ಙಾಸೆಗಳು ಶಾಶ್ವತ ಎನ್ನುವ ಅವ್ಯಕ್ತ ಹೆದರಿಕೆ ಇರುವ ವಯಸ್ಸಿದು. ಹದಿನಾರರ ನಂತರ, (ಹುಡುಗರಿಗೆ) ಒಂದು ರೀತಿಯ ಜವಾಬ್ದಾರಿ ಅಥವಾ ಉಡಾಫೆ ಬಂದಿರುತ್ತದೆ. ಇವೆರೆಡೂ ಅವರು ಆ ಕಾಲಘಟ್ಟದಲ್ಲಿ ಇರುವ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ. ಹುಡುಗರು ಮುಕ್ತವಾಗಿ ಮಾತನಾಡಲು ಆರಂಭಿಸುವುದೇ ಈ ಘಟ್ಟ ಕಳೆದ ಮೇಲೆ.

ಈ ಪುಸ್ತಕ ನನಗೆ ಇನ್ನೂ ಹತ್ತಿರವಾಗಲು ಕಾರಣವೆಂದರೆ, ವಿಕಾಸ್‌ ತನ್ನ Adolescent ಘಟ್ಟವನ್ನು ಕಳೆಯುವ ಒಂದು ದಶಕದ ಮುಂಚೆ, ಅದೇ ಉಡುಪಿಯಲ್ಲಿ ನಾನು ʻyoung bratʼ ಆಗಿ ಎರಡು ವರ್ಷಗಳ ಕಾಲ ಕಳೆದಿದ್ದೇನೆ. ಆ ರಥಬೀದಿ, ಕಲ್ಸಂಕ, ಗೀತಾಂಜಲಿ, ಅಲಂಕಾರ್‌, ಡಯಾನ ಥಿಯೇಟರ್‌ ಎಲ್ಲವೂ ಇಂದಿಗೂ ನನ್ನ ಹೃದಯಕ್ಕೆ ಹತ್ತಿರವೇ.

ಪಾಪ ವಿಕಾಸ್… ಒಂದೆರೆಡು ಹೋಟೆಲ್‌ ನೋಡಿರಬಹುದು ಅಷ್ಟೆ. ರಥಬೀದಿಗೆ ಹೊಂದಿಕೊಂಡಂತೆ ಇದ್ದ ಕಲ್ಸಂಕದ ನಾನ್‌ ಕಿಂಗ್‌, ಮಣಿಪಾಲದ ಬ್ಯಾಕಸ್‌ ಇನ್‌, ಡಯಾನಾ ಹೋಟೆಲ್‌, ಕಿದಿಯೂರು ಹೋಟೆಲ್‌ ಮತ್ತು ನಮ್ಮ ಹಾಸ್ಟೆಲ್‌ ಹತ್ತಿರದ ವಿಜಯಾ ಬಾರ್‌ ಸಹ ನಮ್ಮ ಅಡ್ಡೆಗಳಾಗಿದ್ದವರು. ತಿಂಗಳಿಗೊಮ್ಮೆಯಾದರೂ ಮಲ್ಪೆ ಸಮುದ್ರದಲ್ಲಿ ಮುಳುಗು ಹಾಕುತ್ತಿದ್ದೆವು.

ಈ ಪುಸ್ತಕ ಓದುತ್ತಿದ್ದಷ್ಟೂ ಹೊತ್ತು, ನಾನು ನನ್ನ Adolescence ನ ಎರಡನೇ ಘಟ್ಟದಲ್ಲಿ, ಅದೇ ಉಡುಪಿಯಲ್ಲಿ ಓಡಾಡುತ್ತಿದ್ದಾಗ ನಡೆದ ಘಟನೆಗಳು ನನ್ನ ಸ್ಮೃತಿ ಪಟಲದಲ್ಲಿ ಮೂಡುತ್ತಿದ್ದವು….


  • ಮಾಕೋನಹಳ್ಳಿ ವಿನಯ್‌ ಮಾಧವ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW