ಕಾವೇರಿ ತೀರದ ಕಥೆಗಳು – ಹೇಮಂತ್ ಪಾರೇರ

ಮೇಜರ್ ಡಾ. ಕುಶ್ವಂತ್ ಕೋಳಿಬೈಲ್ ರವರದ್ದು ಬಹುಮುಖ ಪ್ರತಿಭೆ .ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ಸ್ ವಿಭಾಗದಲ್ಲಿ ವೈದ್ಯರಾಗಿ ಪ್ರಸಕ್ತವಾಗಿ ಸೇವೆ ಸಲ್ಲಿಸುತ್ತಿರುವ ಇವರು ವೈದ್ಯ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಕೊಡಗಿನ ಭಾಗಮಂಡಲದ ಸಮೀಪದ ತಾವುರಿನವರು. ಅವರ ಕಾವೇರಿ ತೀರದ ಕಥೆಗಳು ಕುರಿತು ಹೇಮಂತ್ ಪಾರೇರ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ..

ಪುಸ್ತಕ : ಕಾವೇರಿ ತೀರದ ಕಥೆಗಳು
ಪ್ರಕಾರ : ಕಥಾಸಂಕಲನ
ಲೇಖಕರು : ಮೇಜರ್  ಡಾ . ಕುಶ್ವಂತ್ ಕೋಳಿಬೈಲ್
ಪ್ರಕಾಶನ : ಮೈತ್ರಿ ಪ್ರಕಾಶನ

ಸಾಮಾಜಿಕ ಜಾಲತಾಣದಲ್ಲಿ ಪದ್ಯದಂಗಡಿ ಎಂಬ ವಿನೂತನವಾದ ಕವನ ವಾಚಕರ ಬಳಗವನ್ನೆ ಸೃಷ್ಟಿಸಿದ ಹಿರಿಮೆ ಕುಶ್ವಂತ್ ಅವರಿಗೆ ಸಲ್ಲುತ್ತದೆ.

ಸಮಕಾಲೀನ ಸಂದರ್ಭದಲ್ಲಿ ಕೊಡಗಿನ ಮೂಲೆಮೂಲೆಗಳಲ್ಲಿ ಎಲೆಮರೆ ಕಾಯಿಯಂತಿದ್ದ ಸಾಹಿತ್ಯಾಸಕ್ತರನ್ನು ಒಂದುಗೂಡಿಸುವ ಕಾರ್ಯವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ಹೊಸ ತಲೆಮಾರಿನ ಸಾಹಿತ್ಯ ಲೋಕದ ಉದಾರಿಗಳು ಜೊತೆಗೆ ಯುವ ಬರಹಗಾರರಿಗೆ ಮಾರ್ಗದರ್ಶಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇವರ ಮೊದಲನೇ ಕೃತಿಯಾದ “ಕೂರ್ಗು ರೆಜಿಮೆಂಟ್ ” ಸಾಹಿತ್ಯ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಪುಸ್ತಕವಾಗಿದೆ. ಲೇಖಕರ ಬರವಣಿಗೆಯ ಶೈಲಿ ಹಾಗೂ ಸೇನೆಯ ಶೌರ್ಯ ಸಾಹಸದ ಜೊತೆ ಜೊತೆಯಾಗಿ ಸೈನಿಕನ ಮನದಾಳದಲ್ಲಿ ಸೂಪ್ತವಾಗಿರುವ ನೋವುಗಳನ್ನು ಕೃತಿಗಿಳಿಸಿ , ಸಾಮಾಜಿಕ ,ವೈಯಕ್ತಿಕ ಜೀವನದ ಬವಣೆಗಳನ್ನು ಕಥೆಯಾಗಿಸಿದ್ದಾರೆ .
ಕಾವೇರಿ ತೀರದ ಕಥೆಗಳು , ಕೊಡಗಿನ ಪರಿಸರದ ನಡುವೆ ಹಾಸು ಹೋಕ್ಕಾಗಿರುವಂತೆ ಹೆಣೆದ ಹಲವು ವ್ಯಕ್ತಿತ್ವಗಳ ವಿಭಿನ್ನ ಕಥೆಗಳ ಸುಂದರ ಸಂಕಲನವಾಗಿದೆ .

ಕೃತಿಯ ಶೀರ್ಷಿಕೆಯು ಹೇಳುವಂತೆ “ಕಾವೇರಿ ತೀರದ ಕಥೆಗಳು” ವಿವಿಧ ಸ್ತರಗಳ ಪಾತ್ರಗಳು ಓದುಗರ ನಿರೀಕ್ಷೆಯನ್ನು ಹೆಚ್ಚಿಸುತ್ತದೆ. ಪ್ರತಿ ಕಥೆಯಲ್ಲಿಯೂ ಹೊಸತನವನ್ನು ಪ್ರಯೋಗಿಸುವ ಮೂಲಕ ತಮ್ಮದೇ ಆದ ಬರವಣಿಗೆಯ ಶೈಲಿಯಿಂದ ಓದುಗರನ್ನು ಹಿಡಿದಿಟ್ಟುಕೊಳ್ಳುವಂತೆ ಕಥೆಗಳನ್ನು ಸೃಷ್ಠಿಸಿದ್ದಾರೆ .

ಡಾಕ್ಟರ್ ನರ್ಸ್ , ರೇಡಿಯೋ, ಸೈನಿಕ, ರಾಜಕೀಯ, ಮದುವೆ, ಪ್ರಾದೇಶಿಕ ಸಂಪ್ರದಾಯಗಳು ಹೀಗೆ ಎಲ್ಲವನ್ನೂ ಕಥಾವಸ್ತುವನ್ನಾಗಿ ಬಳಸಿಕೊಂಡು ಓದುಗರಿಗೆ ನಮ್ಮ ನಡುವೆಯೇ ಅಕ್ಕ ಪಕ್ಕದಲ್ಲಿ ನಡೆದ ವಾಸ್ತವ ಘಟನೆಯಂತೆ ಕಥೆಗಳು ಕಾಡಿಬಿಡುತ್ತವೆ .ಕುತೂಹಲದಿಂದ ಓದಿಸಿಕೊಂಡು ಪುಟತಿರುವುವಂತೆ ಮಾಡುತ್ತವೆ.

ಪ್ರತಿ ಕಥೆ ಮುಗಿದ ನಂತರ ಹೊಸ ಕಥೆಯನ್ನು ಓದಲು ಪ್ರಾರಂಭಿಸಿದಂತೆ ಹೊಸ ಅನುಭವಗಳು ಮನದೊಳಗೆ ಗಿರಗಿಟ್ಲೆಯಂತೆ ಗಿರಕಿ ಹೊಡೆಯಲಾರಂಭಿಸುತ್ತವೆ.
ಸಾಮಾಜಿಕವಾಗಿ ಸುಸಂಸ್ಕೃತ ಸಮಾಜಕ್ಕೆ ಅನಿವಾರ್ಯವಾದ ಹಲವು ಸಂಗತಿಗಳನ್ನು ಹದವಾಗಿ ಕುಟಕಿ ,ಮೌಡ್ಯಗಳನ್ನು ತಿರಸ್ಕರಿಸುವಂತೆ ಪ್ರತಿ ಕಥೆಯಲ್ಲಿಯೂ ಉತ್ತಮ ಸಂದೇಶಗಳನ್ನು ಸೂಪ್ತವಾಗಿ ಕಥೆಯೊಳಗಿಟ್ಟು ಓದುಗರಿಗೆ ಸಂದೇಶ ನೀಡಿದ್ದಾರೆ ಲೇಖಕರು.

ಬೀಟಿಕಾಡು ಎಸ್ಟೇಟ್ ,ಭೂಮಾಪಿಯದ ದುಷ್ಪರಿಣಾಮದಿಂದ ಪಾರಂಪರಿಕ ಆಚರಣೆಗಳು, ಕುಟುಂಬದ ಘನತೆ,ಅನಾದಿ ಕಾಲದಿಂದ ಮಣ್ಣಿನಲ್ಲಿ ನಡೆದು ಬಂದ ಸಾಂಪ್ರದಾಯಿಕ ಪದ್ಧತಿಯನ್ನು ನಾಶಪಡಿಸುತ್ತದೆ ಎಂಬುದು ಕಥೆಯ ಒಟ್ಟು ಸಾರಾಂಶವಾಗಿದೆ .

ಹಳ್ಳಿ ರೇಡಿಯೋ ಕಥೆಯ ,ರೇಡಿಯೋ ಪ್ರೇಮ ಕೊಡಗಿನ ಹಳ್ಳಿಗಳಲ್ಲಿ ಹಲವಾರು ವರ್ಷಗಳ ಹಿಂದೆ ಹೊಲ ಗದ್ದೆಗಳಿಗೆ ರೇಡಿಯೋ ಸಮೇತ ಹೋಗುತಿದ್ದ ರೈತಾಪಿ ಕುಟುಂಬಗಳ ನೆನಪಾಗುವಂತೆ ಮಾಡುತ್ತದೆ. ಕೃಷ್ಣನೆಂಬ ಮುಖವಾಡದ ವ್ಯಕ್ತಿಯೊಬ್ಬ ತಾನು ರಾಜಕೀಯವಾಗಿ ಬೆಳೆಯಲು ಹಳ್ಳಿಯ ಮುಗ್ಧ ಜನರನ್ನು ಸುಳ್ಳು ಆಶ್ವಾಸನೆಗಳನ್ನು ಕೊಡುತ್ತಾ ಯಾಮಾರಿಸುತ್ತಾ ಮೋಸ ಮಾಡುವ ರೀತಿ ಇಂದಿನ ಪ್ರಸಕ್ತ ರಾಜಕೀಯ ಸನ್ನಿವೇಶಕ್ಕೆ ಹೋಲಿಸಿದರೆ ನಿಜ ಅನಿಸುತ್ತದೆ.

ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ, ಒಬ್ಬನ ಕೋಳಿ ಹೋಗಿ ಇನ್ನೊಬ್ಬನ ಅಂಗಳದಲ್ಲಿ ಕೇರಿ, ಸಣ್ಣ ಜಗಳವಾದರೂ ಒಂದೆರಡು ವೋಟು ಅತಿತ್ತ ಹೋಗಿ ,ಗೆಲ್ಲುವ ಅಭ್ಯರ್ಥಿಯೂ
ಸೋತು ಬಿಡುತ್ತಿದ್ದ ಎನ್ನುವಂತ ಹಲವು ಹಾಸ್ಯ ಬರಹಗಳು ಪ್ರತಿ ಕಥೆಗಳಲ್ಲಿ ಕಾಣಬಹುದು.

ಲೇಖಕರ ಹಾಸ್ಯ ಪ್ರಜ್ಞೆಯ ಸೊಗಸಾದ ಸಾಲುಗಳು ಅದ್ಭುತ ಬರಹಗಾರನ ಪರಿಪೂರ್ಣತೆಗೆ ಸಾಕ್ಷಿಯಾಗಿದೆ . ಹಾಸ್ಯವೇನಿಸಿದರೂ ಓದುಗರಿಗೆ ನಗು ತರಿಸಿದ ವಿಚಾರಗಳು ವಾಸ್ತವವಾಗಿ ಸತ್ಯವೂ ಹೌದು.

ಕಾವೇರಿ ತೀರದ ಕಥೆಗಳು ಲೇಖಕ ಮೇಜರ್  ಡಾ . ಕುಶ್ವಂತ್ ಕೋಳಿಬೈಲ್

ಒದ್ದೆ ಹಾಸಿಗೆ ಕಥೆಯಲ್ಲಿ ತಾಯಿ ಮಗುವಿನ ಪ್ರೀತಿ, ಆಕೆಯ ಕರ್ವವ್ಯ ನಿಷ್ಠೆಯ ಮದ್ಯೆ ಗಂಡನ ಕಿರುಕುಳ ಎಂತವರನ್ನು ಭಾವನಾತ್ಮಕವಾಗಿ ಕಾಡದೇ ಬಿಡುವುದಿಲ್ಲ.
ದೇವರ ಗದ್ದೆ ಬೋಜಮ್ಮ ಮದುವೆಯಾಗಿ ಇಂಗ್ಲೆಂಡ್ನಲ್ಲಿ ಜೀವನ ಮಾಡುತ್ತಿದ್ದರೂ ತಾಯ್ನಾಡಿನ ಭೂಮಿ ಅನ್ಯ ರಾಜ್ಯದ ಭೂಗಳ್ಳರ ಪಾಲಾಗುವುದು ಅರಿತ ಆಕೆ ಸುಬೇದಾರ್ ಸುಬ್ಬಯ್ಯನವರ ಮಗನಾಗಿ ಹುಟ್ಟಿದಿದ್ದರೂ, ಕೊನೆಗೆ ಮಗಳಾಗಿ, ಮಗನ ಸ್ಥಾನದಲ್ಲಿ ನಿಂತು ತನ್ನ ಕರ್ತವ್ಯವನ್ನು ಪೂರ್ಣಗೊಳಿಸಿದಳು.

ತೊದಲು ಬದಲು ಕಥೆಯಲ್ಲಿ ಸೈನಿಕನೊಬ್ಬ ಹುಟ್ಟಿದ ಊರು, ತಂದೆ ತಾಯಿ, ಹೆಂಡತಿ ಮಕ್ಕಳನ್ನು ಬಿಟ್ಟು ದೇಶ ಸೇವೆಗಾಗಿ ತಮ್ಮನ್ನು ಮುಡಿಪಾಗಿಟ್ಟು ತಮ್ಮ ಅಮೂಲ್ಯವಾದ ಯೌವನವನ್ನು ದೇಶದ ಹಿತಕ್ಕಾಗಿ ತ್ಯಾಗ ಮಾಡಿ, ವರ್ಷದ ಕೇವಲ ಎರಡು ತಿಂಗಳು ಊರಿಗೆ ಬಂದು ವೈಯಕ್ತಿಕ ಜೀವನವನ್ನು ಕಳೆಯುವ ಪ್ರತಿಯೊಬ್ಬ ಸೈನಿಕನ ಜೀವನವೇ ರೋಚಕ ಕಥೆಗಳು. ಸೇನೆಯಲ್ಲಿರುವ ಉತ್ತಪ್ಪ , ತಂದೆಯಾದ ಸಂಭ್ರಮವನ್ನು ಅನುಭವಿಸುವ ಮತ್ತು ಊರಿಗೆ ಬರುವ ತವಕದ ನಡುವೆ ನಡೆದು ಹೋಗುವ ಅವಾಂತರಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಕೊನೆಯಲ್ಲಿ ಪುಲ್ವಾಮ ದಾಳಿಗೆ ಸಿಕ್ಕಿ ಕಿವಿ ಕೇಳಿಸದಂತ್ತಾಗಿ ಬದುಕಿ ಉಳಿಯುವ ಉತ್ತಪ್ಪನವರನ್ನು ಅವರ ಮಗು ಪಪ್ಪಾ ಎಂದು ಕರೆದರೂ, ಕೇಳಲಿಲ್ಲ. ಕಣ್ಣಾಲಿಗಳಲ್ಲಿ ನೀರು ತರಿಸಿದ ಕಥೆ ಇದು. ಪುಲ್ವಾಮ ದಾಳಿಯಲ್ಲಿ ಬಹಳಷ್ಟು ಸೈನಿಕರು ಹುತಾತ್ಮರಾದರು. ಪ್ರತಿಯೊಬ್ಬ ಸೈನಿಕನ ಕುಟುಂಬದವರು ಅದೆಷ್ಟು ನೋವನ್ನು ಅನುಭವಿಸಿರಬಹುದು ,ಅಲ್ಲವೇ.
ಪ್ರತಿಯೊಂದು ಕಥೆಗಳಲ್ಲೂ ವಿಭಿನ್ನವಾದ ಪಾತ್ರಗಳನ್ನು ಸೃಷ್ಟಿಸಿ ಬರೆದು ಓದುಗರನ್ನು ಭಾವನಾತ್ಮಕವಾಗಿ ಸೆಳೆದ ಲೇಖಕರ ಬರವಣಿಗೆ ಶೈಲಿ ಪ್ರತಿ ಕಥೆಯಿಂದ ಕಥೆಗೆ ವಿಭಿನ್ನವಾಗಿದೆ.
l ಮೇಜರ್  ಡಾ . ಕುಶ್ವಂತ್ ಕೊಳಿಬೈಲ್ ಅವರಿಂದ ಸಾಹಿತ್ಯ ಸಂಬಂಧವಾಗಿ ಇನ್ನಷ್ಟು ವಿನೂತನ ಕಾರ್ಯಕ್ರಮಗಳ ಜೊತೆಗೆ ಇನ್ನಷ್ಟು ಹೆಚ್ಚಿನ ಕೃತಿಗಳು ಬರಲೆಂದು ಆಶಿಸುತ್ತಾ ಧನ್ಯವಾದಗಳೊಂದಿಗೆ,


  • ಹೇಮಂತ್ ಪಾರೇರ, ಯಡವನಾಡು

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW