ಆಗಿನ ಹಳೆಯ ಟಿವಿಗಳೇ ಮಸ್ತ್ …ಮಸ್ತ್…ಚಾನೆಲ್ ಬದಲಾಯಿಸುವಾಗ ಟಿವಿಯ ನಾಬ್ ತಿರುವಬೇಕಿತ್ತು , ಅದರಲ್ಲೂ ಒಂದು ರೀತಿ ಸಂತೋಷವಿತ್ತು. ಕಾಲ ಬದಲಾದಂತೆ ಟಿವಿ ಬದಲಾಗಿದೆ, ಕೂತಲ್ಲಿಯೇ ಚಾನೆಲ್ ಬದಾಯಿಸಬಹುದು, ಆದರೆ ಆ ಹಳೆಯ ನೆನಪಿನಲ್ಲಿದ್ದ ಮಧುರ ಬಾಂಧವ್ಯ ಈಗ ನೆನಪು ಮಾತ್ರ ಎನ್ನುತ್ತಾ ತಮ್ಮ ನೆನಪಿನ ಬುತ್ತಿಯನ್ನು ಓದುಗರ ಮುಂದೆ ತೆರೆದಿಟ್ಟಿದ್ದಾರೆ ಲೇಖಕ ಸಿದ್ಧರಾಮ ಕೂಡ್ಲಿಗಿ ಅವರು. ತಪ್ಪದೆ ಮುಂದೆ ಓದಿ…
” ಸಂಜಿ ೫ ಗಂಟೆ ಆತು ಜಲ್ದಿ ಎಲ್ಲ ಕೆಲ್ಸ ಮುಗಿಸ್ಕೊಂಡು ಬಂದು ಕೂಡ್ರಿ ” ಆಗ ಮನೆಯವರನ್ನೆಲ್ಲ ಕರೆದಾಗ, ಮನೆಯಲ್ಲಿನ ಎಲ್ಲ ಸದಸ್ಯರು ಬೇಗ ಬೇಗ ಸಂಜೆಯ ಅಡುಗೆಯ ಎಲ್ಲ ತಯಾರಿ ಮುಗಿಸಿಕೊಂಡು ಶಿಸ್ತಾಗಿ ಹಾಸಿದ ಚಾಪೆಯ ಮೇಲೆ ಕುಳಿತುಕೊಂಡರೆಂದರೆ ಅದೇ ಆಗ ಹೊಸದಾಗಿ ಮನೆಗಳಿಗೆ ಬಂದಿದ್ದ ಟಿವಿಯಲ್ಲಿನ ಡಿಡಿ ಚಾನೆಲ್ ನೋಡಲು ಕುಳಿತಿದ್ದಾರೆಂದೇ ಅರ್ಥ.
ಅದೇ ತಾನೆ ಮನೆಗಳಲ್ಲಿ ಟಿವಿಗಳು ಬರುತ್ತಿದ್ದ ಕಾಲ. ನಮ್ಮ ಮನೆಯಲ್ಲಿಯೂ ಅಪ್ಪ ಸಾಲಿಡೇರ್ ಎಂಬ ಟಿವಿ ತಂದಿದ್ದರು. ಅದಕ್ಕೊಂದು ಪೆಟ್ಟಿಗೆ ಬೇರೆ. ಅದಕ್ಕೆ ಸರಿಸಿ ಮುಚ್ಚುವ ಮುಚ್ಚಳ. ಅದಕ್ಕೊಂದು ಪುಟ್ಟ ಕೀಲಿ. ಅದು ಯಾವಾಗಲೂ ಅಪ್ಪನ ಬಳಿ ಇರುತ್ತಿತ್ತು. ಸಂಜೆಯಾದಾಗ ಅಪ್ಪ ಕೀಲಿ ತೆಗೆದು ಪರದೆ ಸರಿಸಿದಂತೆ ಮುಚ್ಚಳ ಸರಿಸುತ್ತಿದ್ದ. ಒಳಗೆ ಮಾಯಾಜಾಲದ ಪೆಟ್ಟಿಗೆ ಎಂಬಂತೆ ಥಳ ಥಳ ಹೊಳೆವ ಟಿವಿ. ಅದನ್ನು ಎಷ್ಟು ನೋಡಿದರು ಕಣ್ಣು ತಣಿಯವು. ಸಂಜೆ ಯಾವಾಗ ಆದೀತೋ ಎಂದು ಮನೆಯಲ್ಲಿ ಕಾತುರ. ಮನೆಯಲ್ಲಿನ ಎಲ್ಲರೂ ಬೇಗ ಬೇಗ ಮುಖ ತೊಳೆದು, ತಿಂಡಿ ತಿಂದು ಚಹಾ ಕುಡಿದು, ಟಿವಿ ಮುಂದೆ ಚಾಪೆ ಹಾಸಿ ಕುಳಿತರೆ ಡಿಡಿ ಚಾನೆಲ್ ಆರಂಭಗೊಳ್ಳುತ್ತಿತ್ತು. ಬಹುಶ: ಸಂಜೆ ೫ಕ್ಕೆ ಒಂದೇ ಚಾನೆಲ್ ಡಿಡಿ ಚಾನೆಲ್ ಆರಂಭಗೊಳ್ಳುತ್ತಿತ್ತು. ಆಗಿನ್ನೂ ಟಿವಿಗಳು ಕಪ್ಪು ಬಿಳುಪಿನಲ್ಲಿದ್ದವು. ರಿಮೋಟ್ ಇರಲಿಲ್ಲ. ಏನಿದ್ದರೂ ಚಾನೆಲ್ ಬದಲಾಯಿಸಲು ಟಿವಿಯ ನಾಬ್ ತಿರುಗಿಸಬೇಕಾಗುತ್ತಿತ್ತು. ಟಿವಿಯ ನಾಬ್ ತಿರುವಿದರೆ ಟಿವಿ ಆರಂಭ. ಡಿಡಿ ನ್ಯಾಶನಲ್ ಎಂಬ ಹೆಸರಿನ ಮಧುರ ಹಿನ್ನೆಲೆ ಸಂಗೀತದೊಂದಿಗೆ ನಿಧಾನವಾಗಿ ಶುರುವಾಗುತ್ತಿತ್ತು. ನಂತರ ನಿರೂಪಕರು ಬಂದು ಅಂದಿನ ಕಾರ್ಯಕ್ರಮಗಳನ್ನು ಹೇಳುತ್ತಿದ್ದರು. ಆಗ ಅತ್ಯಂತ ಜನಪ್ರಿಯ ಹಿಂದಿ ಧಾರವಾಹಿಗಳು, ಯೇ ಜೋ ಹೈ ಜಿಂದಗಿ, ನುಕ್ಕಡ್, ಹಮ್ ಲೋಗ್ ಪ್ರಸಾರವಾಗುತ್ತಿದ್ದವು. ನಂತರ ರಾಷ್ಟ್ರೀಯ ವಾರ್ತೆ.

ಫೋಟೋ ಕೃಪೆ : India Today
ನಂತರ ಟಿವಿ ಧಾರವಾಹಿಗಳಲ್ಲೇ ಎಲ್ಲರನ್ನೂ ತನ್ನತ್ತ ಸೆಳೆದದ್ದು ರಾಮಾಯಣ ಧಾರವಾಹಿ. ಸಂಜೆ ರಾಮಾಯಣ ಧಾರವಾಹಿ ಆರಂಭಗೊಳ್ಳುತ್ತದೆಂದರೆ ಎಲ್ಲ ಓಣಿಗಳು ಸ್ತಭ್ದಗೊಳ್ಳುತ್ತಿದ್ದವು. ಯಾರ ಮನೆಯಲ್ಲಿ ಟಿವಿ ಇತ್ತೋ ಅವರ ಮನೆಗೆ ಸಿನಿಮಾಗೆ ಹೋದಂತೆ ಜನ ಹೋಗುತ್ತಿದ್ದರು. ನಾವೇ ಹೊಸದಾಗಿ ನಮ್ಮ ಮನೆಗೆ ಟಿವಿ ಬಂದಾಗ, ರಾಮಾಯಣ ನೋಡಲು ಓಣಿ ಜನರೆಲ್ಲ ಬಂದಾಗ, ಅವರಿಗಾಗಿ ಮೊದಲೇ ಚಾಪೆ, ಜಮಖಾನ ಹಾಸಿ ಸಿದ್ಧಪಡಿಸುತ್ತಿದ್ದೆವು. ಬಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ರಾಮಾಯಣ ಧಾರವಾಹಿ ನೋಡಿ ಮನೆಯಲ್ಲಿ ಎಲ್ಲರೊಂದಿಗೆ ಉಭಯಕುಶಲೋಪರಿ ಮಾತನಾಡೀ ಹೋಗುತ್ತಿದ್ದರು.
ಟಿವಿಯದು ಈ ಕತೆಯಾದರೆ, ಟಿವಿ ಪ್ರಸಾರವಾಗಲು ಮಾಳಿಗೆಯ ಮೇಲೆ ಏರಿಸಬೇಕಾದ ಆಂಟೆನಾದೇ ಒಂದು ಕತೆ. ಸುಮಾರು ೮-೧೦ ಅಡ್ಡಪಟ್ಟಿಗಳಿರುವ ಅಲ್ಯುಮಿನಿಯಂನ ಆಂಟೆನಾವನ್ನು ಮನೆಯ ಮಾಳಿಗೆಯ ಮೇಲೆ ಹತ್ತಿ ಅದನ್ನು ಒಂದೆಡೆ ಸ್ಥಾಪಿಸಿ ಆಂಟೆನಾ ದಿಕ್ಕನ್ನು ತಿರುಗಿಸಿ ತಿರುಗಿಸಿ ಕೆಳಗಿನವರಿಗೆ ಕೂಗುತ್ತಿದ್ದರು, ಟಿವಿಯಲ್ಲಿ ಚಿತ್ರ ಬಂತಾ ? ಎಂದು ಕೇಳಿದಾಗ ನಾವು ಓಡಿಹೋಗಿ ನೋಡಿಕೊಂಡು ಹೇಳುತ್ತಿದ್ದೆವು. ಒಮ್ಮೊಮ್ಮೆ ಮಂಗ ಬಂದು ಆಂಟೆನಾ ಬಾಗಿಸಿದರೆ, ತಿರುಗಿಸಿದರೆ ಮತ್ತೆ ಮಾಳಿಗೆ ಹತ್ತಿ ಮೊದಲಿನಂತೆಯೇ ಆಂಟೆನಾ ತಿರುಗಿಸುವ ಕಾರ್ಯ.

ಫೋಟೋ ಕೃಪೆ : DNA India
ಕಾರ್ಯಕ್ರಮಗಳಿಲ್ಲದಾಗ ಬೆಳಗಿನಿಂದ ಸಂಜೆಯವರೆಗೆ ಟಿವಿಗೆ ವಿಶ್ರಾಂತಿ. ಆಕಸ್ಮಾತ್ ಟಿವಿ ಆರಂಭವಾಗಿಬಿಟ್ಟಿದೆಯೋ ಏನೋ ಎಂದು ನಾನು ಒಮ್ಮೊಮ್ಮೆ ಟಿವಿ ಆನ್ ಮಾಡೀ ನೋಡುತ್ತಿದ್ದೆ. ಪರದೆಯ ಮೇಲೆ ಹುಳುಗಳು ಓಡಾಡಿದಂಟೆ ಭುಸ್ ಎಂಬ ಶಬ್ದ. ಮತ್ತೆ ಅದನ್ನು ಆರಿಸಿ, ಪೆಟ್ಟಿಗೆಯ ಮುಚ್ಚಳವನ್ನು ಮುಚ್ಚಿ ಕೀಲಿ ಹಾಕಿ ಸ್ವಸ್ಥಾನದಲ್ಲಿಡುತ್ತಿದ್ದೆ ಅಪ್ಪನಿಗೆ ಗೊತ್ತಾಗದಂತೆ.
ಒಮ್ಮೆ ಈ ರೀತಿ ಮಾಡಿ ಟಿವಿ ಆನ್ ಆಗುವುದನ್ನೇ ನಿಲ್ಲಿಸಿತು. ಅಪ್ಪನಿಗೆ ಗೊತ್ತಾದರೆ ಹೇಗೆ ಅಂತ ಎದೆಯಲ್ಲಿ ಅವಲಕ್ಕಿ ಕುಟ್ಟಲು ಆರಂಭ. ಅಪ್ಪ ಬಂದು ನೋಡಿದರು. ಆನ್ ಆಗಲಿಲ್ಲ. ಮನೆಯಲ್ಲಿ ಇಂತಹ ಘನಂದಾರಿ ಕೆಲಸ ಮಾಡುವ ಒಬ್ಬನೇ ಒಬ್ಬನೆಂದರೆ ಹಿಟ್ ಲಿಸ್ಟ್ ನಲ್ಲಿ ನಾನೇ. ಹಾಗಾಗಿ ನನ್ನನ್ನೇ ಹಿಡಿದು ಅಪ್ಪ ವಿಚಾರಣೆ ನಡೆಸುತ್ತಿದ್ದ. ಏನು ಲಾಗಾ ಹಾಕಿದರೂ ಅಪ್ಪ ಹೇಗೋ ಈ ಕಳ್ಳನನ್ನು ಹಿಡಿದೇಬಿಡುತ್ತಿದ್ದ. ನಂತರ ಏನಿದೆ ಅಪ್ಪನಿಂದ ಒದೆ ನನ್ನ ಭರತನಾಟ್ಯ ಆರಂಭಗೊಳ್ಳುತ್ತಿತ್ತು.
ಏನೇ ಇರಲಿ ಈಗ ಅತ್ಯಾಧುನಿಕ ಟಿವಿಗಳು ಬಂದಿವೆಯೆಂದರೂ, ಕೇವಲ ಕೈ ಚಲನೆಯಿಂದಲೇ ಚಾನೆಲ್ ಗಳು ಬದಲಾಗುವ ತಂತ್ರಜ್ಞಾನ ಬಂದಿದೆಯೆಂದರೂ, ಆಗಿನ ದಿನಗಳ ಮಧುರ
ನೆನೆಪುಗಳೇ ಬೇರೆ.
- ಸಿದ್ಧರಾಮ ಕೂಡ್ಲಿಗಿ
