ದೇಶದ ಬೆನ್ನೆಲುಬು ಎಂದರೆ ಒಬ್ಬ ರೈತ, ಮತ್ತೊಬ್ಬ ಸೈನಿಕ. ಈ ಇಬ್ಬರು ದೇಶದ ಎರಡು ಕಣ್ಣುಗಳಿದ್ದಂತೆ. ಇಬ್ಬರೂ ದೇಶದ ಉದ್ಧಾರಕ್ಕಾಗಿ ಪಣತೊಟ್ಟವರೆ, ಅಂತವರಲ್ಲಿ ಇಂದು ನಮ್ಮ ಒಬ್ಬ ಧೀರ ಸೈನಿಕ ಶ್ರೀ ರೇವಣ ಸಿದ್ದಯ್ಯ ಎಸ್ ಆರ್ ಅವರ ಅಂತರಾಳವನ್ನು ತಿಳಿಯುವ ಪುಟ್ಟ ಸಂದರ್ಶನ. ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
ಸ್ವಾತಂತ್ರ್ಯ ದಿನ ದೇಶಕ್ಕಾಗಿ ತಮ್ಮ ಜೀವ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸ್ವಾತಂತ್ರ್ಯ ನಂತರದಲ್ಲಿ ದೇಶದ ಭದ್ರತೆಗಾಗಿ ಸೇವೆ ಸಲ್ಲಿಸುವ ಸೈನಿಕರ ಧೈರ್ಯ, ಹೋರಾಟ ಮತ್ತು ಬಲಿಷ್ಠ ಸೇವೆಯನ್ನು ನೆನೆಯುವ ದಿನವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಸೈನ್ಯದಲ್ಲಿ ಸುಮಾರು ೨೨ ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ ರೇವಣ ಸಿದ್ದಯ್ಯ ಎಸ್ ಆರ್ ಅವರ ಸೇವೆಯನ್ನು ಗುರುತಿಸಿ ‘ಮಲಬಾರ್ ಗೋಲ್ಡ್ ಹೆಮ್ಮೆಯ ಭಾರತೀಯ -೨೦೨೩ ಪ್ರಶಸ್ತಿ’ ನೀಡಲಾಗುತ್ತಿದೆ.
ಆಗಸ್ಟ್ ೨೧, ೧೯೬೧ ರಲ್ಲಿ ಹುಟ್ಟಿದ ಅವರು ದೇಶಕ್ಕಾಗಿ ಏನಾದರೂ ಮಾಡಬೇಕು ಅಂದುಕೊಂಡಾಗ ಯೋಧನಾಗಬೇಕು, ದೇಶದ ಗಡಿಕಾಯಬೇಕು ಎನ್ನುವ ಉತ್ಸಾಹದಿಂದ ಸೈನ್ಯಕ್ಕೆ ಸೇರಿದರು. ಮೊದಲು ತಮ್ಮ ವೃತ್ತಿಯನ್ನು ಆರಂಭಿಸಿದ್ದು ಹರಿಯಾಣದಲ್ಲಿ, ತದನಂತರ ಜಮ್ಮು ಕಾಶ್ಮೀರ, ಪಂಜಾಬ್ ರಾಜಸ್ತಾನ, ಉತ್ತರ ಪ್ರದೇಶ, ಆಸಾಂನಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಒಂದು ‘ಬ್ಲೂ ಸ್ಟಾರ್ಟ್’ ನೀಡಿ ಗೌರವಿಸಲಾಗಿದೆ. ಇವರು ಕಾರ್ಗಿಲ್ ಯುದ್ಧದಲ್ಲಿ ತಮ್ಮ ಅಪೂರ್ವ ಸೇವೆ ಸಲ್ಲಿಸಿದ್ದು ಅವರ ಬಗ್ಗೆ ನಮಗೆ ಹೆಮ್ಮೆ ಇದೆ.
ಪ್ರಸ್ತುತ ಅವರು ಈಗ ಬೆಂಗಳೂರಿನ ಮೂಡಲಪಾಳ್ಯದಲ್ಲಿ ನೆಲೆಸಿದ್ದಾರೆ. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಮೂಲಕ ಸಮಾಜ ಸೇವೆ ಮಾಡುತ್ತ, ತಮ್ಮ ನಿವೃತ್ತಿ ಜೀವನದಲ್ಲಿಯೂ ದೇಶಕ್ಕಾಗಿ ದುಡಿಯುತ್ತ ತಮ್ಮ ಬದುಕಿನ ಸಾರ್ಥಕತೆ ಕಾಣುತ್ತಿದ್ದಾರೆ.
ಅವರ ಸೇವೆಯ ಕುರಿತು ತಮ್ಮ ಸಿಹಿ ಕಹಿ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
- ಸಂದರ್ಶಕ : ನೀವು ಆರ್ಮಿಗೆ ಸೇರಲು ಕಾರಣ ಮತ್ತು ಪ್ರೇರೇಪಣೆ ಏನು?
ರೇವಣ ಸಿದ್ದಯ್ಯ ಎಸ್ ಆರ್ : ನಮ್ಮ ತಾತನವರೇ ನಾನು ಸೈನ್ಯಕ್ಕೆ ಸೇರಲು ಪ್ರೇರಣೆ ನೀಡಿದವರು, ನಮ್ಮ ತಾತನವರು ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರಿಂದ ಪ್ರೇರಿತನಾಗಿ ಬಾಲ್ಯದಿಂದಲೂ ಮುಂದೆ ನಾನು ಸೇನೆಗೆ ಸೇರಲು ಕನಸು ಕಾಣುತ್ತಿದ್ದೆ. ಅದೇ ಕನಸು ನಾನು ಸೈನ್ಯಕ್ಕೆ ಸೇರಲು ಕಾರಣವಾಯಿತು.
- ಸಂದರ್ಶಕರು: ಕಾರ್ಗಿಲ್ ಯುದ್ಧ ಸಮಯದಲ್ಲಿ ಆದ ನಿಮ್ಮ ಅನುಭವವನ್ನು ಹೇಳಿ…
ರೇವಣ ಸಿದ್ದಯ್ಯ ಎಸ್ ಆರ್ : ನನ್ನ ದೇಶ ಬ್ರಿಟಿಷರಿಂದ ಸ್ವತಂತ್ರವಾಗಿದೆ, ಇಂದು ಮುಂದೆಯೂ ಸ್ವತಂತ್ರವಾಗಿಯೇ ಇರಬೇಕು ಎಂದು ಕಾರ್ಗಿಲ್ ಯುದ್ಧ ಸಮಯದಲ್ಲಿ ಅನಿಸುತ್ತಿತ್ತು.
- ಸಂದರ್ಶಕರು : ನಿಮ್ಮ ಸೇವಾ ಅವಧಿಯಲ್ಲಿ ಎಂದೂ ಮರೆಯದಂತ ದಿನ ಮತ್ತು ಅಂತಹ ಸಂದರ್ಭ ಯಾವುದು?
ರೇವಣ ಸಿದ್ದಯ್ಯ ಎಸ್ ಆರ್ : ಜೀವನದಲ್ಲಿ ಎಂದು ಮರೆಯಲಾಗದಂತಹ ಸಂದರ್ಭ ಎಂದರೆ ನನ್ನ ನಿವೃತ್ತಿಯ ಕೊನೆಯ ಸಂದರ್ಭದಲ್ಲಿ ನನ್ನ ತಾಯಿಯನ್ನು ಕಳೆದುಕೊಂಡಿದ್ದು, ಮತ್ತು ಕೊನೆಯ ಬಾರಿ ನನ್ನ ತಾಯಿಯನ್ನು ನೋಡಲು ಅವಕಾಶ ಸಿಗಲಿಲ್ಲ. ಅದು ತುಂಬಾ ನೋವಾಗತ್ತೆ.

- ಸಂದರ್ಶಕರು : ಸ್ವಾತಂತ್ರ್ಯ ಅನ್ನೋದು ನಿಮ್ಮ ದೃಷ್ಟಿಯಲ್ಲಿ ಏನು?
ರೇವಣ ಸಿದ್ದಯ್ಯ ಎಸ್ ಆರ್ : ಸ್ವಾತಂತ್ರ್ಯ ಅನ್ನೋದು ನನ್ನ ದೃಷ್ಟಿಯಲ್ಲಿ ಸಮಾನತೆ. ಎಲ್ಲರೂ ಪ್ರೀತಿಯಿಂದ ಬಾಳಬೇಕು. ಕಿತ್ತಾಟ ಜಗಳಗಳು ನಮ್ಮ ನಮ್ಮಲ್ಲೇ ಆದ್ರೆ ಸ್ವಾತಂತ್ರ ಸಿಕ್ಕು ಏನು ಲಾಭ?… ಅಂತ ಆಗಾಗ ನನ್ನ ಮನಸ್ಸಿಗೆ ಬರುತ್ತೆ.
- ಸಂದರ್ಶಕರು: ಸಿನಿಮಾಗಳಲ್ಲಿ ತೋರಿಸುವ ಸೈನಿಕರಿಗೂ, ನಿಜ ಜೀವನದಲ್ಲಿನ ಸೈನಿಕರಿಗೂ ಇರುವ ವ್ಯತ್ಯಾಸವೇನು?
ರೇವಣ ಸಿದ್ದಯ್ಯ ಎಸ್ ಆರ್ : ಸಿನಿಮಾ ರೀಲ್ …ಸೈನಿಕ ರಿಯಲ್… ನೀವೇ ಯೋಚಿಸಿ.
- ಸಂದರ್ಶಕರು: ನೀವು ಕಂಡಂತೆ ಜನಸಾಮಾನ್ಯರಲ್ಲಿ ಒಬ್ಬ ಸೈನಿಕನಿಗೆ ಇರುವ ಗೌರವ ಎಂತಹದ್ದು?
ರೇವಣ ಸಿದ್ದಯ್ಯ ಎಸ್ ಆರ್ : ದೇವರು ಕಾಣಲ್ಲ ದೈವ ಕಾಣಲ್ಲ ನಿಜವಾದ ಸೈನಿಕರೆಂದರೆ ದೇವರ ಸಮಾನ.

- ಸಂದರ್ಶಕರು: ಯಾವತ್ತಾದರೂ ನಿಮಗೆ ನಾನು ಸೈನ್ಯಕ್ಕೆ ಸೈನ್ಯಕ್ಕೆ ಸೇರಬಾರದು ಅಂತ ಅನಿಸಿದ್ದು ಇದ್ದೇನಾ?
ರೇವಣ ಸಿದ್ದಯ್ಯ ಎಸ್ ಆರ್ : ಬಾಲ್ಯದಿಂದಲೂ ಸೈನಿಕನಾಗಬೇಕು ಎಂಬ ಆಸೆ ಇತ್ತು. ಹಾಗಾಗಿ ಆಸೆ ಈಡೇರಿದಾಗ ಅದರ ಬಗ್ಗೆ ಪಶ್ಚಾತ್ತಾಪವಿಲ್ಲ. ಬೇಗ ನಿವೃತ್ತಿ ಆಯ್ತಲ್ಲ ಅಂತ ಒಮ್ಮೊಮ್ಮೆ ಬೇಸರ ಆಗುತ್ತೆ…
- ಸಂದರ್ಶಕರು : ಸರ್ಕಾರದ ಅಗ್ನಿವೀರ ಬಗ್ಗೆ ನಿಮ್ಮ ಅಭಿಪ್ರಾಯ?
ರೇವಣ ಸಿದ್ದಯ್ಯ ಎಸ್ ಆರ್ : ದೇಶವು ಪ್ರಗತಿಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಸೂಚನೆಕೊಡುತ್ತೆ.
- ಸಂದರ್ಶಕರು : ಯುದ್ಧದ ಸಮಯದಲ್ಲಿ ನಿಮಗೆ ಗುಂಡು ತಗುಲಿತೆ?
ರೇವಣ ಸಿದ್ದಯ್ಯ ಎಸ್ ಆರ್ : ಅಂತಹ ಅವಕಾಶ ಬರಲಿಲ್ಲ.
- ಸಂದರ್ಶಕರು : ವೈರಿಗಳನ್ನು ಕಂಡಾಗ ನಿಮ್ಮೆದೆಯಲ್ಲಿ ಯಾವ ರೀತಿ ಕಿಚ್ಚು ಹೊತ್ತಿತ್ತು?
ರೇವಣ ಸಿದ್ದಯ್ಯ ಎಸ್ ಆರ್ : ದೇಶಕ್ಕಾಗಿ ಮಾಡು ಇಲ್ಲವೇ ಮಡಿ.

- ಸಂದರ್ಶಕರು : ಯುದ್ಧದಲ್ಲಿ ನಿಮ್ಮ ಜೊತೆಗಿನ ಸ್ನೇಹಿತರನ್ನು ಕಳೆದುಕೊಂಡಾಗ ಮನಸ್ಸು ವಿಚಲಿತವಾಗುತ್ತಿತ್ತಾ?
ರೇವಣ ಸಿದ್ದಯ್ಯ ಎಸ್ ಆರ್ : ಅದನ್ನು ಅಕ್ಷರದಲ್ಲಿ ಆಗಲಿ, ಮಾತಿನಲ್ಲಾಗಲಿ ಹೇಳಲು ಸಾಧ್ಯವಿಲ್ಲ, ಅದೊಂದು ಧರ್ಮ ಸಂಕಟದ ಕ್ಷಣಗಳು.
- ಸಂದರ್ಶಕರು : ಸೈನ್ಯಕ್ಕೆ ಬಂದ ಮೇಲೆ ಪಡೆದದ್ದು ಎಷ್ಟು? ಕಳೆದುಕೊಂಡದ್ದು ಎಷ್ಟು?
ರೇವಣ ಸಿದ್ದಯ್ಯ ಎಸ್ ಆರ್ : ಪಡೆದಿದ್ದು ಕೀರ್ತಿಯ ಜೀವನ. ಕಳೆದುಕೊಂಡಿದ್ದು ಯೌವ್ವನ (ನಗು).
- ಸಂದರ್ಶಕರು : ನಿಮ್ಮ ಮಕ್ಕಳ ಬಾಲ್ಯವನ್ನು ನೋಡಿ ಆನಂದಿಸೋದಕ್ಕೆ ನಿಮಗೆ ಸಾಧ್ಯವಾಗುತ್ತಿರಲಿಲ್ಲ ಹಾಗೂ ವರ್ಷಕ್ಕೆ ಒಮ್ಮೆ ಮನೆಗೆ ಹೋದಾಗ ನಿಮ್ಮ ಮಕ್ಕಳ ಪ್ರತಿಕ್ರಿಯೆ ಹೇಗಿರುತ್ತಿತ್ತು?
ರೇವಣ ಸಿದ್ದಯ್ಯ ಎಸ್ ಆರ್ : ಅದೊಂದೇ ನಮ್ಮನ್ನು ವಿಚಲಿತರನ್ನಾಗಿ ಮಾಡುವ ಸಂದಿಗ್ಧ ಪರಿಸ್ಥಿತಿ. ಮನೆಗೆ ಹೋದಾಗ ನಮ್ಮ ಮಕ್ಕಳೇ ನಮ್ಮನ್ನು ಗುರುತಿಸುತ್ತಿರಲಿಲ್ಲ ಅದು ನೋವಿನ ಸಂಗತಿ (ಭಾವುಕರಾಗುತ್ತಾರೆ).
- ಸಂದರ್ಶಕರು : ಸೋಶಿಯಲ್ ಮೀಡಿಯಾಗಳಲ್ಲಿ ಸೈನಿಕರಿಗೆ ಗೌರವ ಕೊಡುವುದು ತುಂಬಾ ಜೋರಾಗಿ ಇರುತ್ತೆ ಅದೇ ವಾಸ್ತವದಲ್ಲಿ ನಿಮಗೆ ಅದೇ ರೀತಿ ಗೌರವ ದೊರಕುತ್ತಿದೆಯೇ?
ರೇವಣ ಸಿದ್ದಯ್ಯ ಎಸ್ ಆರ್ : ಮುದ್ರಣ ಮಾಧ್ಯಮ, ಸುದ್ದಿ ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾ ಗಳಿಂದಲೇ ಸೈನಿಕರ ಶಕ್ತಿ ಗುರುತಿಸಿ ಗೌರವ ನೀಡುತ್ತಿದ್ದಾರೆ.
- ಸಂದರ್ಶಕರು : ಬೇರೆ ಬೇರೆ ರಾಜ್ಯದ ಸೈನಿಕರು ಬಂದು ಸೈನ್ಯದಲ್ಲಿರುತ್ತಾರೆ, ನಿಮ್ಮ ನಡುವೆ ಭಿನ್ನಾಭಿಪ್ರಾಯ ಏನಾದ್ರು ಬರುತ್ತಿತ್ತಾ?
ರೇವಣ ಸಿದ್ದಯ್ಯ ಎಸ್ ಆರ್ : ನಾವು ಭಾರತೀಯರು ಅನ್ನೋದಷ್ಟೇ ನಮ್ಮ ತಲೆಯಲ್ಲಿರುತ್ತೆ. ಅವನು ಯಾವ ರಾಜ್ಯದವನು, ಅವನ ಭಾಷೆ ಏನು?, ಅವನ ಆಚಾರ ವಿಚಾರಗಳು ಮುಖ್ಯವಾಗುವುದಿಲ್ಲ. ಅಲ್ಲಿ ಮುಖ್ಯವಾಗುವುದು ನಮ್ಮ ದೇಶ ಮಾತ್ರ.

- ಸಂದರ್ಶಕರು : ನಾನು ಕೇಳಿದ್ದೆ ಸೈನಿಕರು ತಮ್ಮ ಯೂನಿಫಾರ್ಮ್ ನಲ್ಲಿದ್ದಾಗ ಕಣ್ಣುಗಳಲ್ಲಿ ನೀರು ಬರಲ್ಲ ಅಂತ ಇದು ಸತ್ಯವೇ ?
ರೇವಣ ಸಿದ್ದಯ್ಯ ಎಸ್ ಆರ್ : ಖಂಡಿತವಾಗಿಯೂ ಸುಳ್ಳು.ನಾವು ಮನುಷ್ಯರೇ…ನಮಗೂ ಭಾವನೆಗಳಿವೆ. ಕೆಲವೊಮ್ಮೆ ನಮ್ಮ ಭಾವನೆಗಳು ಹಿಡಿತ ಮೀರಿ ಹೋಗುತ್ತದೆ. ಕಣ್ಣಲ್ಲಿ ನೀರು ಬರುತ್ತೆ. ಅಳುತ್ತೇವೆ, ನಗುತ್ತೇವೆ, ಹಾಡುತ್ತೇವೆ, ಕುಣಿಯುತ್ತೇವೆ. ಎಲ್ಲವು ಪರಿಸ್ಥಿತಿಗನುಗುಣವಾಗಿ ನಮ್ಮ ಭಾವನೆಗಳು ಇರುತ್ತದೆ.
- ಸಂದರ್ಶಕರು : ಕೊನೆಯದಾಗಿ ಒಬ್ಬ ಸೈನಿಕನಾಗಿ ನಿವೃತ್ತರಾಗಿರುವ ನಿಮಗೆ ಎಷ್ಟು ಆತ್ಮ ಸಂತೃಪ್ತಿ ಇದೆ?
ರೇವಣ ಸಿದ್ದಯ್ಯ ಎಸ್ ಆರ್ :ಖಂಡಿತವಾಗಿ ನಾನು ಸಾಧಿಸಿ ಬಂದೇ ಅನ್ನುವ ಆತ್ಮ ಸಂತೃಪ್ತಿ ಇದೆ. - ಸಂದರ್ಶಕರು : ಸೈನಿಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋ ಅಥವಾ ಸಾಧನೆ ಬಗ್ಗೆ ಹೇಳಿಕೊಳ್ಳುವುದು ನೋಡಿಲ್ಲ, ಇದರ ಬಗ್ಗೆ ನೀವು ಏನು ಹೇಳುತ್ತೀರಿ.
ರೇವಣ ಸಿದ್ದಯ್ಯ ಎಸ್ ಆರ್ : ನಮ್ಮ ಭುಜವನ್ನು ನಾವೇ ತಟ್ಟಿಕೊಳ್ಳುವಂತಹ ಪ್ರಮೆಯೇ ಬಂದಿಲ್ಲ.
- ಸಂದರ್ಶಕರು : ನಿಮ್ಮ ಪ್ರಕಾರ ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆಗೆ ಎಷ್ಟು ಮಟ್ಟಿಗೆ ನ್ಯಾಯ ದೊರಕಿದೆ?
ರೇವಣ ಸಿದ್ದಯ್ಯ ಎಸ್ ಆರ್ : ಲಾಲ್ ಬಹುದ್ದೂರ್ ಶಾಸ್ತ್ರಿಜಿ, ಬದುಕ ಬೇಕಿತ್ತು ಅವರು ಉತ್ತರ ಕೊಡುತ್ತಿದ್ದರು.

- ಸಂದರ್ಶಕರು : ನಿಮಗೆ ಅಭ್ಯಂತರವಿಲ್ಲದಿದ್ದರೆ ನಿವೃತ್ತಿಯ ಸಮಯದಲ್ಲಿ ನಿಮ್ಮ ವೇತನ ಎಷ್ಟಿತ್ತು?
ರೇವಣ ಸಿದ್ದಯ್ಯ ಎಸ್ ಆರ್ : ಮೂಲ ವೇತನ ಏಳು ಸಾವಿರ ರೂಪಾಯಿ ಮತ್ತು ನಿವೃತ್ತಿ ಸಮಯದಲ್ಲಿ ಪಿಂಚಣಿ 1, 700 ರೂಪಾಯಿ.
- ಸಂದರ್ಶಕರು : ಇಂದಿನ ಪೀಳಿಗೆಗೆ ನಿಮ್ಮ ದೇಶಭಕ್ತಿಯ ಪಾಠ?
ರೇವಣ ಸಿದ್ದಯ್ಯ ಎಸ್ ಆರ್ : ಇಂದಿನ ಯುವ ಪೀಳಿಗೆ ದೇಶ ನನಗೆ ಏನು ಕೊಟ್ಟಿತ್ತು ಅಥವಾ ಕೊಡುತ್ತಿದೆ ಎನ್ನುವುದಕ್ಕಿಂತ ದೇಶಕ್ಕೆ ನಾನು ಏನು ಕೊಡಬೇಕು ಎನ್ನುವುದನ್ನು ಅರಿಯಬೇಕು ಎನ್ನುವುದು ನನ್ನ ಪಾಠ. - ಸಂದರ್ಶಕರು : ಕೊನೆಯ ಪ್ರಶ್ನೆ ಪ್ರತಿಯೊಬ್ಬ ಪ್ರಜೆಯ ಹೃದಯದಲ್ಲಿ ದೇಶಭಕ್ತಿ ಮೂಡಿಸುವುದು ಹೇಗೆ? ಹಾಗೂ ದೇಶಭಕ್ತಿ ಮೂಡಿಸುವ ಕರ್ತವ್ಯ ಯಾರದ್ದು ಮತ್ತು ದೇಶಭಕ್ತಿ ಅನ್ನೋದು ಒಂದು ದೇಶದ ಪ್ರಗತಿಗೆ ಯಾವ ರೀತಿಯ ಪಾತ್ರ ವಹಿಸುತ್ತದೆ?
ರೇವಣ ಸಿದ್ದಯ್ಯ ಎಸ್ ಆರ್ : ಪ್ರಾರಂಭಿಕ ಹಂತದಲ್ಲಿ ಮಕ್ಕಳಿಗೆ ಪೋಷಕರು ಸಂಸ್ಕಾರದ ಅರಿವು ಮೂಡಿಸಿದ್ದಲ್ಲಿ ಮುಂದೆ ಪ್ರತಿಯೊಬ್ಬ ಪ್ರಜೆಯ ಹೃದಯದಲ್ಲಿ ದೇಶ ಪ್ರೇಮ ಮೂಡಿ ಬರುತ್ತದೆ. ದೇಶ ಸುಭಿಕ್ಷವಾಗಿ ಇರಬೇಕೆಂದರೆ, ದೇಶ ರಕ್ಷಣೆಯಾಗಿ ಇರಬೇಕೆಂದರೆ ಈ ಸಂಸ್ಕಾರ ತಿಳಿದ ಮಕ್ಕಳು ದೇಶ ರಕ್ಷಣೆಗೆ ಮುಂದಾಗುತ್ತಾರೆ, ಸಂಸ್ಕಾರವಿದ್ದಲ್ಲಿ ಎಲ್ಲವೂ ಸಾಧ್ಯ.
ಸೈನಿಕರು ದೇಶದ ರಕ್ಷಣೆ ಮತ್ತು ಭಾರತೀಯರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಮಳೆ, ಚಳಿ, ಗಾಳಿ ಎನ್ನದೆ ದೇಶಕ್ಕಾಗಿ ತಮ್ಮ ಜೀವವನ್ನು ಮುಡಿಪಾಗಿಟ್ಟಿರುತ್ತಾರೆ. ದೇಶದ ಪ್ರತಿ ಕುಟುಂಬವು ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶದ ಯೋಧರು. ಸ್ವಾತಂತ್ರ ದಿನದಂದು ಅವರನ್ನು ನೆನೆದು ಗೌರವಿಸುವುದು ಪ್ರತಿ ನಾಗರೀಕರ ಕರ್ತವ್ಯ.
ಆ ಸಣ್ಣ ಪ್ರಯತ್ನವನ್ನು ಆಕೃತಿಕನ್ನಡ, ಕನ್ನಡಿಗ ಕ್ರಿಯೇಷನ್ ಮತ್ತು ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ರಾಜಾಜಿನಗರ ಮಾಡಿದೆ.
ಜೈ ಜವಾನ್ ಜೈ ಕಿಸಾನ್…
ಕೃಪೆ : ‘ಕನ್ನಡಿಗನ ಕ್ರಿಯೇಷನ್‘ ಯೂಟ್ಯೂಬ್ ಚಾನೆಲ್

- ಕಾವ್ಯ ದೇವರಾಜ್ – ಯುವ ಕತೆಗಾರ್ತಿ ಮತ್ತು ಆಕೃತಿಕನ್ನಡ ಕುಟುಂಬದ ಸದಸ್ಯರು.
