ಮೆಗಾ ಸೀಫುಡ್ ಪಾರ್ಕ್ ಕುರಿತು ಅದರ ಸಾಧಕ-ಬಾಧಕಗಳನ್ನು ರಾಜಾರಾಂ ತಲ್ಲೂರ್ ಅವರು ಚರ್ಚಿಸಿದ್ದಾರೆ ಮತ್ತು ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಮುಂದೆ ಓದಿ…
ನಿಡ್ದೋಡಿಯಲ್ಲಿ ಸರ್ಕಾರದ ವತಿಯಿಂದ ಆರಂಭ ಆಗಲಿರುವ #ಮೆಗಾ_ಸೀಫುಡ್_ಪಾರ್ಕ್ ಜಾಗ ನೋಡಲು ಹೋದ ಮೀನುಗಾರಿಕಾ ಸಚಿವರಿಗೆ ಸ್ಥಳೀಯರು ಘೇರಾವ್ ಮಾಡಿದ ಬಗ್ಗೆ ವರದಿ ಓದಿದೆ. ಇದನ್ನು ಸ್ವಲ್ಪ ಆಳಕ್ಕಿಳಿದು ಹುಡುಕಾಡಿದಾಗ ಸಿಕ್ಕ ಮಾಹಿತಿಗಳನ್ನು ಕಂಡರೆ, ಇದು ನಿಡ್ಡೋಡಿಯ ಜನತೆ ಮಾತ್ರವಲ್ಲ; ಇಡಿಯ ಮಂಗಳೂರು-ಉಡುಪಿ ಕರಾವಳಿ ಮೀನುಗಾರ ಸಮುದಾಯದವರು ಈ ಬಗ್ಗೆ ಸ್ವಲ್ಪ ವಿವರವಾಗಿ ಗಮನಿಸಿಕೊಂಡು, ಅದರ ಸಾಧಕ-ಬಾಧಕಗಳನ್ನು ಅರ್ಥಮಾಡಿಕೊಂಡು ಮುಂದುವರಿಯುವುದು ಅಗತ್ಯವಿದೆ ಅನ್ನಿಸುತ್ತದೆ.
ಮೊದಲು ಕೆಲವು ನೀತಿ ಸಂಬಂಧಿ ಮಾಹಿತಿಗಳು:
- ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೇಂದ್ರ ಆಹಾರ ಸಂಸ್ಕರಣಾ ಇಲಾಖೆಯು (MOFPI) ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಿಗೆ ಸಾಗರೋತ್ಪೊನ್ನಗಳು (Maraine Products)ಮೇಲೆ ಗಮನ ಹರಿಸಲು ನಿಯೋಜಿಸಿದೆ.
- ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ (PMMSY) ಕರ್ನಾಟಕಕ್ಕೆ 2025ಕ್ಕೆ ಮುನ್ನ 25 ಮೀನುಗಾರರ ಉತ್ಪಾದಕ ಸಂಸ್ಥೆಯ/ಕಂಪನಿ ( Fish Farmers Producers Organization (FFPOs)/Companies(Cs) ) ಗಳನ್ನು ಆರಂಭಿಸುವ ಗುರಿ ನೀಡಲಾಗಿದೆ.
- ಕರ್ನಾಟಕದಲ್ಲಿ ಸದ್ಯ 3.93ಲಕ್ಷ ಮೆಟ್ರಿಕ್ ಟನ್ ಸಾಗರೋತ್ಪನ್ನಗಳು ಉತ್ಪಾದನೆ ಆಗುತ್ತಿದ್ದು, ಅವುಗಳಲ್ಲಿ 1.41 ಲಕ್ಷ ಮೆಟ್ರಿಕ್ ಟನ್ ರಫ್ತಾಗುತ್ತಿದೆ. ಇದು (2019-20) ರ ವರದಿ.
- 2025ರ ಹೊತ್ತಿಗೆ ಈ ರಫ್ತನ್ನು ಮತ್ತೆ 1.20ಲಕ್ಷ ಟನ್ ಹೆಚ್ಚಿಸಿ, ಒಟ್ಟು ಅಂದಾಜು ವಾರ್ಷಿಕ 5ಲಕ್ಷ ಟನ್ ಸಾಗರೋತ್ಪನ್ನಗಳನ್ನು ಉತ್ಪಾದಿಸುವ ಗುರಿಯನ್ನು ವಿಧಿಸಲಾಗಿದೆ.
- ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಈಗಾಗಲೇ ಕರ್ನಾಟಕಕ್ಕೆ 206.9ಕೋಟಿ ರೂ.ಗಳ ಯೋಜನೆಗೆ ಶಿಫಾರಸು ಮಾಡಿದ್ದು, 164.23ಕೋಟಿ. ರೂ.ಗಳ ಯೋಜನೆಗಳನ್ನು ಈಗಾಗಲೇ ಮಂಜೂರು ಮಾಡಲಾಗಿದೆ.
- ಈ ಎಲ್ಲ ಬೆಳವಣಿಗೆಗಳ ಉದ್ದೇಶ, 1.37ಕೋಟಿ ಮೆಟ್ರಿಕ್ ಟನ್ ಇರುವ ಭಾರತದ ಸಾಗರೋತ್ಪನ್ನಗಳ ಉತ್ಪಾದನೆಯನ್ನು 2025ರ ಹೊತ್ತಿಗೆ 2.20ಕೋಟಿ ಮೆಟ್ರಿಕ್ ಟನ್‌ಗಳಿಗೆ ಏರಿಸುವ ಮೂಲಕ ಮೀನುಗಾರಿಕೆಯ ಆದಾಯವನ್ನು ದುಪ್ಪಟ್ಟು ಮಾಡುವುದು. ರಫ್ತನ್ನು ಹಾಲೀ Rs.46,589 ಕೋಟಿಗಳಿಂದ 2024-25 ಹೊತ್ತಿಗೆ Rs.1,00,000 ಕೋಟಿಗಳಿಗೆ ಏರಿಸುವುದು.
- ಈ ಉದ್ದೇಶಕ್ಕಾಗಿ, ಉತ್ಪಾದನೆ ಹೆಚ್ಚಿಸಲು ಆಧುನೀಕರಣ, ಖಾಸಗಿ ಹೂಡಿಕೆ, ಮೀನುಗಾರಿಕೆಯಲ್ಲಿ ಉದ್ಯಮಶೀಲತೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಲು ಸರ್ಕಾರ ತೀರ್ಮಾನಿಸಿದೆ.
- ಇದೆಲ್ಲದರ ಜೊತೆ ಕೇಂದ್ರ ಸರ್ಕಾರ ಮಾರಿಟೈಮ್ ಬಂದರುಗಳನ್ನು (ಮೀನುಗಾರಿಕಾ ಬಂದರುಗಳು ಎಂದು ಓದಿಕೊಳ್ಳಿ) ಖಾಸಗಿಯವರಿಗೆ ವಹಿಸಿಕೊಡಲು ತೀರ್ಮಾನಿಸಿದೆ; ಆ ಬಗ್ಗೆ ಕಾನೂನು ತರಲು ಕರಡು ಕಾನೂನು ಸಜ್ಜಾಗಿ ಕುಳಿತಿದೆ (ನನ್ನ ಹಳೆಯ ಪೋಸ್ಟ್ ನೋಡಿ)

ನಿಡ್ಡೋಡಿಯಲ್ಲಿ ಏನಾಗಿದೆ?
ಎಲ್ಲ ಯೋಜನೆಗಳೂ ಈಗ ಮೇಲಿನಿಂದ ಉದುರುವುದರಿಂದಾಗಿ ಸ್ಥಳೀಯರಿಗೆ ಅದರ ಬಗ್ಗೆ ಮಾಹಿತಿಗಳೇ ಇರುವುದಿಲ್ಲ. ಪತ್ರಿಕಾ ವರದಿಗಳ ಪ್ರಕಾರ, ನಿಡ್ಡೋಡಿಯ ಸರ್ವೇ ನಂಬರ್ 88/1ರಲ್ಲಿರುವ 88.73ಎಕರೆ ಜಾಗದಲ್ಲಿ ಅಂದಾಜು 50ಎಕ್ರೆ ಜಾಗದಲ್ಲಿ ಮೆಗಾ ಸೀಫುಡ್ ಪಾರ್ಕ್ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ ೨೦೨೦ ರ ಡಿಸೆಂಬರಿನಲ್ಲಿ ಸಾರ್ವಜನಿಕ ಆಕ್ಷೇಪಗಳೇನಾದರೂ ಇವೆಯೇ ಎಂದು ಕೇಳಲಾಗಿತ್ತು. ಆಕ್ಷೇಪಗಳಿದ್ದರೆ ಮೂಡಬಿದಿರೆ ತೆಹಶೀಲ್ದಾರರಿಗೆ ಹದಿನೈದು ದಿನಗಳಲ್ಲಿ ಸಲ್ಲಿಸಬೇಕಿತ್ತು.
ಆ ಅವಧಿ ಈಗ ಕಳೆದಿದ್ದು, ಅಲ್ಲಿಗೆ ಸ್ಥಳಪರಿಶೀಲನೆಗೆ ಸಚಿವರು ಹೋಗಿದ್ದರೆ, ಸಾರ್ವಜನಿಕರು ಸಚಿವರಿಗೆ ಘೇರಾವ್ ಮಾಡಿದ್ದಾರೆ.
ಗಮನಿಸಬೇಕಾದ ವಿಷಯಗಳೇನು?
- ಸಮುದ್ರ ರತ್ನಾಕರ ಹೌದು. ಆದರೆ, ಅಲ್ಲೂ ಕೂಡ “ಉತ್ಪಾದನೆ”ಗೆ ಮಿತಿ ಇದೆ. ಕರಾವಳಿಯ ಮೀನುಗಾರರಿಗೆ ಅದು ಚೆನ್ನಾಗಿ ಗೊತ್ತಿದೆ. ಹಾಗಾಗಿಯೇ ಸಾಂಪ್ರದಾಯಿಕ ಮೀನುಗಾರರು ಮೀನು ಮರಿಹಾಕುವ ಕಾಲದಲ್ಲಿ ಮೀನುಗಾರಿಕೆಗೆ ರಜೆ ಹಾಕುವುದು ಮತ್ತು ಆಳಸಮುದ್ರದ “ಲೈಟ್ ಬಳಸಿ ಮೀನುಗಾರಿಕೆ”ಯಿಂದ ಮೀನುಗಳ ಇಕೊಸಿಸ್ಟಮ್‌ಗೆ ಹಾನಿ ಆಗುತ್ತದೆ ಎಂದು ತಗಾದೆ ಮಾಡುತ್ತಿರುವುದು. ಸಾಂಪ್ರದಾಯಿಕ ಮೀನುಗಾರಿಕೆ ಯಾವತ್ತೂ ಪರಿಸರಕ್ಕೆ ವಿರುದ್ಧ ಅಲ್ಲ.
- ಈಗ ಮೀನುಗಾರಿಕೆ ಎನ್ನುವುದು ಉತ್ಪನ್ನವಾಗಿ, ಉತ್ಪಾದನಾ ಸಾಮರ್ಥ್ಯಕ್ಕೆ “ಗುರಿ” ವಿಧಿಸಿದಾಗ (ಈ ಗುರಿ ತೀರ್ಮಾನ ಹೇಗೆ, ಅದು ಪರಿಸರ ಮಾನದಂಡಗಳನ್ನು ಪರಿಗಣಿಸಿದೆಯೆ ಎಂಬುದೆಲ್ಲ ಇನ್ನು ಗಮನಿಸಬೇಕು) ಗುರಿ ಸಾಧನೆಗೆ ಹೊರಟರೆ ಕರಾವಳಿಯ ಸಮುದ್ರದ ಇಕೊಸಿಸ್ಟಮ್ ಕತೆ ಏನು?
- FFPO/FFPCಗಳು ಕರಾವಳಿಯಲ್ಲಿ ರೂಪುಗೊಂಡಾಗ, ಕರಾವಳಿಯ ಮೀನುಗಾರಿಕಾ ಬಂದರುಗಳನ್ನು ಖಾಸಗಿವವರು ವಹಿಸಿಕೊಂಡಾಗ ನಮ್ಮ ಸಾಂಪ್ರದಾಯಿಕ ಮೀನುಗಾರರ ಕತೆ ಏನು? ಅವರೂ ಕೂಡ ನಮ್ಮ ರೈತರ ಹಾಗೆಯೇ ಸೂಟುಬೂಟಿನ ಮೀನುಗಾರರ ಕೆಲಸದಾಳುಗಳಾಗಿ ಅಥವಾ ಉಪಗುತ್ತಿಗೆಯವರಾಗಿ ಕೆಲಸ ಮಾಡಬೇಕಾಗುತ್ತದೆಯೆ?
- ಬಂದರು, ಸಾಗಣೆ, ಸ್ಟೋರೇಜ್, ಮಾರುಕಟ್ಟೆ ಇವೆಲ್ಲವೂ ಬಲಾಢ್ಯ ಕಂಪನಿಗಳ ಕೈಗೆ ಬಂದರೆ, ಮೀನು ಮಾರಾಟಗಾರರು ಮತ್ತು ಆ ಸರಬರಾಜು ಚೈನಿನಲ್ಲಿ ಬರುವ ಇತರ ಕತೆ ಏನು?
ಈ ಬಗ್ಗೆ ಕರಾವಳಿಯಲ್ಲಿ ವಿಸ್ತ್ರತ ಚರ್ಚೆ ನಡೆಯಲಿ. ಸಾಧಕ-ಬಾಧಕಗಳನ್ನು ಜನ ಅರಿತು ಮುಂದಡಿ ಇಡುವಂತಾಗಲಿ. ಕನಿಷ್ಠ ಈ ವಿಚಾರದಲ್ಲಾದರೂ ನಮ್ಮ ಮಾಧ್ಯಮಗಳು ಕರಾವಳಿಯ ಪರ ನಿಲ್ಲಲಿ.
ಹೆಚ್ಚಿನ ಮಾಹಿತಿಗಳಿಗಾಗಿ ಕೆಲವು ಲಿಂಕ್‌ಗಳು ಇಲ್ಲಿವೆ:
Click to access AnnexureFrameworktostatesUT_0.pdf
https://fisheries.karnataka.gov.in/…/SLAMC%20and%20DLC…
https://www.deccanherald.com/…/karnataka-govt-invites…
https://pmmsy.dof.gov.in/
https://pib.gov.in/PressReleasePage.aspx?PRID=1652573
- ರಾಜಾರಾಂ ತಲ್ಲೂರ್ (ಸಾಹಿತಿಗಳು, ಲೇಖಕರು)
