ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷತೆ – ನಟರಾಜ್ ಸೋನಾರ್

ಶ್ರೀ ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಮಾಸದಲ್ಲಿ ಕೃಷ್ಣ ಪಕ್ಷದ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ. – ನಟರಾಜ್ ಸೋನಾರ್, ಮುಂದೆ ಓದಿ…

ಪುರಾಣ ಹಿನ್ನೆಲೆ :

ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.
*ಮಥುರಾ ಕೃಷ್ಣನ ಜನ್ಮಸ್ಥಳ* ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ.
ಕೃಷ್ಣಜನ್ಮಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನುಪೂಜಿಸಲಾಗುತ್ತದೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ. ಉಡುಪಿಯಲ್ಲಿ ಈ ದಿನದಂದು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.

ಫೋಟೋ ಕೃಪೆ : kingbetru

ಕೃಷ್ಣನು ಭಾದ್ರಪದ ಕೃಷ್ಣ ಅಷ್ಟಮಿಯಂದು ಮಥುರಾ ಊರಿನ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ ೮ನೇ ಮಗನಾಗಿ ಜನಿಸಿದನು. ಮಥುರಾ (ಈಗಿನ ಉತ್ತರಪ್ರದೇಶದ ಮಥುರಾ ಜಿಲ್ಲೆ) ಯಾದವ ಕುಲದ ರಾಜಧಾನಿಯಾಗಿತ್ತು. ಕಂಸನು ತನ್ನ ತಂದೆ ಉಗ್ರಸೇನರನ್ನು ಬಂಧಿನದಲ್ಲಿಟ್ಟು, ತಾನು ರಾಜನಾಗಿದ್ದನು. ನಂತರ ತನ್ನ ಪ್ರೀತಿಪಾತ್ರಳಾದ ತಂಗಿ ದೇವಕಿಗೆ ಮದುವೆ ಮಾಡುತ್ತಾನೆ. ಅಣ್ಣಕಂಸನು ದೇವಕಿ-ವಸುದೇವರ ಮದುವೆಯಾದ ಮೇಲೆ ಅವರನ್ನು ಗಂಡನ ಮನೆಗೆ ಕರೆದೊಯ್ಯುತ್ತಿದ್ದಾಗ, ಅವನಿಗೆ ಒಂದು ಅಶರೀರವಾಣಿ ಕೇಳಿಸಿತು. ಅದರ ಪ್ರಕಾರ ದೇವಕಿಯ ಎಂಟನೇ ಮಗುವೂ ಕಂಸನ ವಧೆಯನ್ನು ಮಾಡುತ್ತದೆ ಎಂದು.

ಇದನ್ನು ಕೇಳಿದ ಕಂಸನು ದೇವಕಿಯನ್ನು ಆ ತಕ್ಷಣವೇ ಕೊಲ್ಲಲು ಹೊರಟನು. ಆಗ ವಸುದೇವನು ಅವನನ್ನು ತಡೆದು ಪ್ರತಿ ಮಗುವನ್ನು ಹುಟ್ಟಿದ ತಕ್ಷಣ ಕಂಸನ ಮಡಿಯಲ್ಲಿ ಅರ್ಪಿಸುವುದು ಎಂದು ಹೇಳಿದನು. ಅವರನ್ನು ಬಂಧಿಸಿ ಅವರಿಗೆ ಹುಟ್ಟಿದ ೭ ಮಕ್ಕಳನ್ನು ಕೊಂದನು. ೮ನೇ ಮಗು ಕೃಷ್ಣನನ್ನು ಅವನಿಗೆ ತಿಳಿಯದ ಹಾಗೆ ಯಮುನಾ ನದಿ ದಾಟಿ ಗೋಕುಲಕ್ಕೆ ಕರೆದುಕೊಂಡು ಹೋದನು.
ಅಲ್ಲಿ ಆಗ ತಾನೆ ಹುಟ್ಟಿದ್ದ ಯಶೋದೆ ಮಗಳನ್ನು ಇಲ್ಲಿಗೆ ತಂದನು. ಆದರೆ ಕಂಸ ಅವಳನ್ನು ಕೊಲ್ಲಲು ಬಂದಾಗ ಅವಳು ವಿಷ್ಣುವಿನ ಸಹಾಯಕಿ ಯೋಗಮಾಯಾ ರೂಪಕ್ಕೆ ಬದಲಾಗಿ ಅವನ ಸಾವಿನ ಬಗ್ಗೆ ಅರಿಯಬೇಕೆಂದು ಹೇಳಿ ಮಾಯವಾದಳು. ಕೃಷ್ಣ ಗೋಕುಲ ಹಾಗೂ ವೃಂದಾವನದಲ್ಲಿ ಬಲರಾಮನ ಜತೆ ಬೆಳೆದು, ಕೊನೇಗೆ ಮಥುರಾಗೆ ಬಂದು ಕಂಸನನ್ನು ಕೊಂದನು.

ಜನನ ಮತ್ತು ಜೀವನ :

ದೇವಕಿ ಮತ್ತು ವಸುದೇವರು ಸೆರೆಮನೆಯಲ್ಲಿ ಇರುವಾಗ ಕೃಷ್ಣನ ಜನನವಾಗುತ್ತದೆ. ತಂದೆ ವಸುದೇವ, ತಾಯಿ ದೇವಕಿ. ಸಾಕು ತಂದೆ ನಂದರಾಜ, ಸಾಕುತಾಯಿ ಯಶೋದೆ. ಉಗ್ರಸೇನ ಮಹಾರಾಜ ಕೃಷ್ಣನ ತಾತ. ರಾಕ್ಷಸನಾದ ಕಂಸ ಕೃಷ್ಣನ ಸೋದರಮಾವ. ಕಂಸ ಕೃಷ್ಣನಿಂದಲೇ ಮರಣ ಹೊಂದುತ್ತಾನೆ.

ಭಾಗವತ :

ಭಾಗವತದಲ್ಲಿ ಶ್ರೀಕೃಷ್ಣನ ಕಥೆಗಳಿವೆ. ಕಂಸ ಮತ್ತು ಚಾಣೂರರ ಸಂಹಾರಕ್ಕಾಗಿ ವಿಷ್ಣು ಶ್ರೀಕೃಷ್ಣನ ಅವತಾರವನ್ನೆತ್ತಿದ. ಮಥುರಾ ನಗರದಲ್ಲಿ ರಾಜನಾಗಿದ್ದ ಉಗ್ರಸೇನನ ಮಗ ಕಂಸ ತನ್ನ ತಂದೆಯನ್ನೇ ಬಂಧನದಲ್ಲಿಟ್ಟು ತಾನು ರಾಜನಾಗುತ್ತಾನೆ. ತನ್ನ ತಂಗಿ ದೇವಕಿಯ ಗರ್ಭದಲ್ಲಿ ಹುಟ್ಟಿದ ಶಿಶುವಿನಿಂದ ತನಗೆ ಮೃತ್ಯು ಎಂದು ನಂಬಿದ ಕಂಸ ದೇವಕಿ ಮತ್ತು ಅವಳ ಪತಿ ವಸುದೇವ ಇಬ್ಬರನ್ನೂ ಕಾರಾಗೃಹದಲ್ಲಿ ಬಂಧಿಸುತ್ತಾನೆ. ಇವರಿಗೆ ಹುಟ್ಟಿದ ಮಕ್ಕಳನ್ನು ಕಂಸ ನಿರ್ದಯೆಯಿಂದ ಕೊಲ್ಲುತ್ತಾನೆ. ಎಂಟನೇ ಮಗುವಾಗಿ ಹುಟ್ಟಿದ ಶ್ರೀಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ತಂದೆ ವಸುದೇವ ಗುಟ್ಟಾಗಿ ರಾತ್ರೋರಾತ್ರಿ ಕಾರಾಗೃಹದಿಂದ ತಪ್ಪಿಸಿಕೊಂಡು ನೆರೆಯ ಗೋಕುಲಕ್ಕೆ ಬರುತ್ತಾನೆ. ಅಲ್ಲಿ ಯಶೋದೆ ಮತ್ತು ನಂದಗೋಪರ ಶಿಶುವಿನ ಸ್ಥಾನದಲ್ಲಿ ಕೃಷ್ಣನನ್ನು ಮಲಗಿಸಿ ಆ ಶಿಶುವನ್ನು ತಾನು ಎತ್ತಿಕೊಂಡು ಕಾರಾಗೃಹಕ್ಕೆ ಮರಳುತ್ತಾನೆ. ಕಂಸ ಯಥಾಪ್ರಕಾರ ದೇವಕಿಗೆ ಹುಟ್ಟಿದ ಶಿಶು ಎಂದು ಭ್ರಮಿಸಿ ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆಗ ಒಂದು ಪವಾಡ ನಡೆಯುತ್ತದೆ. ಶಿಶು “ನಿನ್ನನ್ನು ಸಂಹಾರ ಮಾಡುವವನು ಈಗಾಗಲೇ ಭೂಮಿಯ ಮೇಲೆ ಜನ್ಮ ತಳೆದಾಗಿದೆ” ಎಂದು ಹೇಳಿ ಅಂತರ್ಧಾನವಾಗುತ್ತದೆ. ಕಂಸ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಟ್ಟಿದ ನವಜಾತ ಶಿಶುಗಳನ್ನು ಕೊಲ್ಲಲು ಅನೇಕ ರಾಕ್ಷಸರನ್ನು ಕಳಿಸುತ್ತಾನೆ. ಇವರಾರಿಗೂ ಶ್ರೀಕೃಷ್ಣನನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ. ಮುಂದೆ ವೃಷ್ಣನು ತನ್ನ (ಖಾಸಾ) ಅಣ್ಣ ಬಲರಾಮನೊಂದಿಗೆ ಮಥುರಾ ನಗರಕ್ಕೆ ಬಂದು ಕಂಸ ಮತ್ತು ಚಾಣೂರರನ್ನು ಮಲ್ಲಯುದ್ಧದಲ್ಲಿ ಸಂಹಾರ ಮಾಡುತ್ತಾನೆ. ಉಗ್ರಸೇನ ಮಹಾರಾಜನನ್ನು ಸೆರೆಯಿಂದ ಮುಕ್ತಗೊಳಿಸಿ ಅವನಿಗೆ ಫಟ್ಟಾಭಿಷೇಕ ಮಾಡುತ್ತಾನೆ.
ಶ್ರೀಕೃಷ್ಣನ ಬಾಲ್ಯದ ಅನೇಕ ರೋಚಕ ಕಥೆಗಳು ಭಾಗವತದಲ್ಲಿವೆ. ಶಕಟಾಸುರನ ವಧೆ, ಪೂತನಿಯ ವಧೆ, ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ, ಕಾಳಿಂಗಮರ್ದನ, ಗೋವರ್ಧನ ಗಿರಿಯ ರಕ್ಷಣೆ ಮೊದಲಾದ ಅನೇಕ ಕಥೆಗಳಿವೆ. ಭಕ್ತಿಯುಗದ ಕವಿಗಳು ಈ ಕಥೆಗಳನ್ನು ಆಧರಿಸಿ ಅನೇಕ ಭಜನೆಗಳನ್ನು ರಚಿಸಿದ್ದಾರೆ. ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ, ಇವರೆಲ್ಲರೂ ಶ್ರೀಕೃಷ್ಣನ ಭಕ್ತರಾಗಿದ್ದ ಕವಿಗಳು.

ಫೋಟೋ ಕೃಪೆ : youtube

ಶ್ರೀಕೃಷ್ಣನಿಗೆ ಬಾಲ್ಯದಲ್ಲಿ ರಾಧೆ ಎಂಬ ಪ್ರೇಯಸಿ ಇದ್ದಳು. ಶ್ರೀಕೃಷ್ಣ ಗೊಲ್ಲಕುಲವನ್ನು ತೊರೆದು ಮಥುರಾ ನಗರಕ್ಕೆ ಹೊರಟಾಗ ರಾಧೆಯನ್ನೂ ತೊರೆಯಬೇಕಾಗುತ್ತದೆ. ಆದರೆ ಭಾರತದಲ್ಲಿ, ವಿಶೇಷವಾಗಿ ಉತ್ತರಭಾರತದಲ್ಲಿ, ಇಂದಿಗೂ ಶ್ರೀಕೃಷ್ಣನ ಜೊತೆ ರಾಧೆಗೇ ಪೂಜೆ ಸಲ್ಲುತ್ತದೆ.

ರುಕ್ಮ ಎಂಬ ರಾಜನ ತಂಗಿ ರುಕ್ಮಿಣಿಯನ್ನು ಮದುವೆಯಾಗಲು ಶ್ರೀಕೃಷ್ಣ ಬಯಸುತ್ತಾನೆ. ರುಕ್ಮನಿಗೆ ಶ್ರೀಕೃಷ್ಣನನ್ನು ಕಂಡರೆ ದ್ವೇಷ. ಹೀಗಾಗಿ ರುಕ್ಮಿಣಿಯನ್ನು ಅಪಹರಿಸಿಕೊಂಡು ಬಂದು ಕೃಷ್ಣ ಮದುವೆಯಾಗುತ್ತಾನೆ. ಮುಂದೆ ಜಾಂಬವತಿ ಮತ್ತು ಸತ್ಯಭಾಮೆ ಎಂಬ ಕನ್ಯೆಯರನ್ನೂ ಕೃಷ್ಣ ವಿವಾಹವಾಗುತ್ತಾನೆ.

ಜರಾಸಂಧ ಎಂಬ ರಾಕ್ಷಸನೊಂದಿಗೆ ಕೃಷ್ಣನಿಗೆ ಅನೇಕ ಸಲ ಯುದ್ಧವಾಗುತ್ತದೆ. ಜರಾಸಂಧನನ್ನು ಸೋಲಿಸುವ ಬದಲು, ಕೃಷ್ಣ ತನ್ನ ಬಂಧು-ಬಾಂಧವರನ್ನೆಲ್ಲ ಗಂಗಾತೀರದ ಮಥುರೆಯಿಂದ, ಸಾಗರತೀರದ ದ್ವಾರಕೆಗೆ ಬಂದು, ನಗರವನ್ನು ನಿರ್ಮಿಸಿ ಮಥುರೆಯ ದೊರೆ ಉಗ್ರಸೇನನನ್ನೇ ರಾಜನಾಗಿ ನಿಲ್ಲಿಸುತ್ತಾನೆ.

ಮಹಾಭಾರತದಲ್ಲಿ:

ಮಹಾಭಾರತದಲ್ಲಿ ಶ್ರೀಕೃಷ್ಣನಿಗೆ ಪ್ರಮುಖ ಪಾತ್ರವಿದೆ. ಪಾಂಡವರ ತಾಯಿ ಕುಂತಿ ಶ್ರೀಕೃಷ್ಣನ ತಂದೆಯಾದ ವಸುದೇವನ ತಂಗಿ. ಮಹಾಭಾರತದ ಕಥೆಯಲ್ಲಿ ಶ್ರೀಕೃಷ್ಣನ ಪ್ರವೇಶವಾಗುವುದು ದ್ರೌಪದಿಯ ಸ್ವಯಂವರದ ಸಂದರ್ಭದಲ್ಲಿ ಅವನು ಅರ್ಜುನನ ಮತ್ತು ಪಾಂಡವರ ಗುರುತು ಹಿಡಿದು ಬಲರಾಮನಿಗೆ ತೋರಿಸುತ್ತಾನೆ. ನಂತರ ಅವನು ಯಾದವರೊಡನೆ ದ್ರೌಪದಿ ಮತ್ತು ಪಾಂಡವರ ವಿವಾಹದಲ್ಲಿ ಭಾಗವಹಿಸುವನು.


ಫೋಟೋ ಕೃಪೆ : indiatvnews

ಜೂಜಿನಲ್ಲಿ ಪಾಂಡವರು ಸೋತಾಗ ಕೌರವರು ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನಿಸುತ್ತಾರೆ. ಆಗ ದ್ರೌಪದಿಗೆ ಅಕ್ಷಯವಸ್ತ್ರವನ್ನು ಕೊಡುವ ಮೂಲಕ ಅವಳ ಮಾನರಕ್ಷಣೆ ಮಾಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಪಾಲ್ಗೊಳ್ಳುತ್ತಾನೆ.

ಯುದ್ಧರಂಗದಲ್ಲಿ ತನ್ನ ಗುರು-ಬಂಧು-ಮಿತ್ರರೊಂದಿಗೆ ಯುದ್ಧ ಮಾಡಲು ನಿರಾಕರಿಸುವ ಅರ್ಜುನನಿಗೆ ಶ್ರೀಕೃಷ್ಣ ಮಾಡುವ ಉಪದೇಶವೇ ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ ಎಂದು ಪ್ರಸಿದ್ಧವಾಗಿದೆ. ಕೃಷ್ಣ ಏಕಾಂಗಿಯಾಗಿ, ಆಯುಧಗಳು ಇಲ್ಲದೆಯೇ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರಿಗೆ ಜಯ ತಂದುಕೊಡುತ್ತಾನೆ.

ರಾಮಾಯಣದ ಜಾಂಬವಂತನನ್ನು ಎದುರಿಸಿ ಶ್ಯಮಂತಕ ಮಣಿಯನ್ನೂ, ಜಾಂಬವಂತನ ಮಗಳು ಜಾಂಬವತಿಯನ್ನೂ ಗೆಲ್ಲುವ ವೃಷ್ಣ, ಜಾಂಬವಂತನಿಗೆ ರಾಮಾಯಣದ ಶ್ರೀರಾಮಚಂದ್ರನ ರೂಪದಲ್ಲಿ ದರ್ಶನ ನೀಡುತ್ತಾನೆ.

ರಾಮಾಯಣದಲ್ಲಿ ರಾಮನಾಗಿ ವಾಲಿಯನ್ನು ಕೊಂದಾಗ, ವಾಲಿಗೆ ಮುಂದಿನ ಅವತಾರದಲ್ಲಿ ನೀನು ನನ್ನನ್ನು ಕೊಲ್ಲುವೆಯಂತೆ ಎಂದು ಮಾತು ನೀಡಿರುತ್ತ್ತಾನೆ. ಅದರಂತೆಯೇ ಜರಾ ಎಂಬ ಬೇಡನಾಗಿ ಜನ್ಮ ತಾಳಿದ ವಾಲಿಯು, ವೃಷ್ಣನ ಕಾಲಿನ ಹೆಬ್ಬೆರಳನ್ನು ಜಿಂಕೆ ಎಂದು ಭಾವಿಸಿ ಬಾಣ ಹೊಡೆಯುತ್ತಾನೆ. ಆ ಬಾಣದಿಂದ ಜಗನ್ನಿಯಾಮಕ ಶ್ರೀ ಕೃಷ್ಣ ಅಸು ನೀಗಿ ತನ್ನ ಅವತಾರವನ್ನು ಮುಗಿಸುತ್ತಾನೆ.

ಫೋಟೋ ಕೃಪೆ : dreamstime

ಕೃಷ್ಣನ ವಿಶೇಷ ನಾಮಗಳು ಮತ್ತು ಅರ್ಥಗಳು :

‌ಕೃಷ್ಣ : ಎಲ್ಲರನ್ನೂ ತನ್ನ ಕಡೆ ಆಕರ್ಷಣೆ ಮಾಡಿಕೊಳ್ಳುವವನು.
ಗಿರಿಧರ: ಪರ್ವತವನ್ನು ಎತ್ತಿ ಹಿಡಿದವನು.
ಮುರಳೀಧರ : ಮುರಳಿಯನ್ನು ನುಡಿಸುವವನು.
ಪೀತಾಂಬರಧಾರಿ : ಹಳದಿ ವಸ್ತ್ರವನ್ನು ಧರಿಸಿದವನು.
ಮಧುಸೂದನ : ಮಧು ಎಂಬ ದೈತ್ಯನನ್ನು ಸಂಹಾರ ಮಾಡಿದವನು.
ಯಶೋದ ದೇವಕಿ ನಂದನ : ಯಶೋದ ಹಾಗೂ ದೇವಕಿಯರಿಗೆ ಸಂತೋಷವನ್ನು ನೀಡುವ ಪ್ರಿಯ ಪುತ್ರ.
ಗೋಪಾಲ : ಗೋವುಗಳು ಅಥವಾ ಪೃಥ್ವಿಯ ಪಾಲನೆ ಮಾಡುವವನು.
ಗೋವಿಂದ : ಹಸುಗಳ ರಕ್ಷಕ.
ಶ್ರೀನಾಥ : ಲಕ್ಷ್ಮಿಗೆ ಆನಂದ ಕೊಡುವವನು.
ಕುಂಜ ವಿಹಾರಿ : ಕುಂಜ ಎಂಬ ಹೂದೋಟದಲ್ಲಿ ವಿಹಾರ ಮಾಡುವವನು.
ಚಕ್ರಧಾರಿ: ಸುದರ್ಶನ ಚಕ್ರ, ಜ್ಞಾನ ಚಕ್ರ, ಶಕ್ತಿ ಚಕ್ರ ಧರಿಸುವವನು.
ಘನಶ್ಯಾಮ : ಕಪ್ಪು ವರ್ಣದವನು.
ಮುರಾರಿ : ಮುರ ಎಂಬ ದೈತ್ಯನನ್ನು ಸೋಲಿಸಿದವನು.
ಅಸುರಾರಿ : ಅಸುರರನ್ನು ಸೋಲಿಸಿದವನು.
ಬನವಾರಿ : ಹೂದೋಟಗಳಲ್ಲಿ ವಿಹರಿಸುವವನು.
ಮುಕುಂದ : ನಿಧಿಗಳನ್ನು ಇಟ್ಟುಕೊಂಡಿರವವನು.
ಯೋಗೀಶ್ವರ : ಯೋಗಿಗಳ ಈಶ್ವರ.
ಗೊಪೇಶ : ಗೋಪಿಗಳ ಈಶ.
ಹರಿ : ದು:ಖವನ್ನು ದೂರಮಾಡುವವನು.
ಮದನ : ಸುಂದರ.
ಮನೋಹರ : ಮನಸ್ಸನ್ನು ಆಕರ್ಷಿಸುವವನು.
ಮೋಹನ : ಸಮ್ಮೋಹನ ಮಾಡುವವನು.
ಜಗದೀಶ : ಜಗತ್ತಿನ ಮಾಲೀಕ.
ಪಾಲನಹಾರ : ಸರ್ವರ ಲಾಲನೆ ಪಾಲನೆ ಮಾಡುವವನು.
ಕಂಸಾರಿ : ಕಂಸನನ್ನು ಸಂಹರಿಸಿದವನು.
ರುಕ್ಮಿಣಿ ವಲ್ಲಭ : ರುಕ್ಮಿಣಿಯ ಪತಿ.
ಕೇಶವ : ಕೇಶ ಎಂಬ ದೈತ್ಯನ ಸಂಹಾರ ಮಾಡಿದವನು. ನೀರಿನ ಮೇಲೆ ವಾಸ ಮಾಡುವವನು.
ವಾಸುದೇವ : ವಸುದೇವನ ಪುತ್ರ.
ರಣಛೋರ : ರುದ್ರಭೂಮಿಯಲ್ಲಿ ಇರುವವನು.
ಗುಢಾಕೇಶ : ನಿದ್ರೆಯ ಮೇಲೆ ವಿಜಯಿಯಾದವನು.
ಋಷಿಕೇಶ : ಇಂದ್ರಿಯಗಳನ್ನು ಜಯಿಸಿದವನು.
ಪಾರ್ಥ ಸಾರಥಿ : ಅರ್ಜುನನ ರಥದ ಸಾರಥಿ.
ಪೂರ್ಣಪರಬ್ರಹ್ಮ : ದೇವತೆಗಳಿಗೂ ಮಾಲೀಕ.
ದೇವೇಶ : ದೇವಗಳ ಈಶ.
ನಾಗ ನಥಿಯ : ಕಲಿನಾಗವನ್ನು ಕೊಂದವನು.
ವೃಷ್ಣಿಪತಿ : ಆ ಕುಲದಲ್ಲಿ ಹುಟ್ಟಿದವನು.
ಯದುಪತಿ : ಯಾದವರ ಮಾಲೀಕ.
ಯದುವಂಶಿ : ಯದು ವಂಶದ ಅವತಾರ.
ದ್ವಾರಕಾಧೀಶ : ದ್ವಾರಕೆಯ ಮಾಲೀಕ.
ನಾಗರ : ಸುಂದರ.
ಛಲೀಯ : ಛಲ (ಹಠ) ಮಾಡುವವನು.
ಮಥುರಾ ಗೋಕುಲವಾಸಿ : ಈ ಸ್ಥಳಗಳ ನಿವಾಸಿ.
ವಲ್ಲಭ : ಸದಾ ಆನಂದದಲ್ಲಿ ಇರುವವನು.
ದಾಮೋದರ : ಹೊಟ್ಟೆಗೆ ಹಗ್ಗ ಕಟ್ಟಿಸಿಕೊಂಡವವನು.
ಅಘಹಾರಿ : ಪಾಪಗಳನ್ನು ಹರಿಸುವವನು.
ಸಖ : ಅರ್ಜುನ ಮತ್ತು ಸುಧಾಮನ ಮಿತ್ರ.
ರಾಸರಚಯ್ಯ : ರಾಸ(ಒಂದು ಪ್ರಕಾರದ ನೃತ್ಯ) ರಚಿಸಿದವನು.
ನಂದಲಾಲ : ನಂದನ ಪುತ್ರ.
ಅಚ್ಯುತ: ಚ್ಯುತಿಯಿಲ್ಲದವ, ಯಾವುದೇ ದೋಷ ಇಲ್ಲದವನು.
ಅಸುರಾರಿ : ರಾಕ್ಷಸರಿಗೆ ಸದಾಕಾಲ ಶತ್ರುವಾಗಿದ್ದವನು.
ನಂದಗೋಪಾಲ: ನಂದ ಗೋಪನ ಮಗನಾಗಿದ್ದವನು
ಕಾಲದೇವ: ಯಮನನ್ನು ಮೀರಿಸಿದವ.
ಗೋಪಾಲ :ಗೋವುಗಳನ್ನು ಪಾಲಿಸಿ, ಕಾಪಾಡುವವನು.
ವೇಣುಗೋಪಾಲ : ಕೊಳಲನ್ನು ನುಡಿಸುವವನು.
ಚಕ್ರಧಾರಿ: ಚಕ್ರಾಯುಧವನ್ನು ಧರಿಸಿದವನು
ದ್ವಾರಕೀಶ : ದ್ವಾರಕಾನಗರಕ್ಕೆ ಒಡೆಯನಾದವನು
ಜಗನ್ನಾಥ : ಜಗತ್ತಿಗೆ ನಾಯಕನಾದವನು
ಪತಿತ ಪಾವನ: ಪಾಪಿಗಳನ್ನು ಉದ್ದರಿಸುವವನು
ಪರಬ್ರಹ್ಮ: ಬ್ರಹ್ಮನ ತಂದೆ (ವಿಷ್ಣು)
ಮಧುಸೂದನ: ಮಧು ಎಂಬ ರಾಕ್ಷಸನನ್ನು ನಾಶ ಮಾಡಿದವನು.
ಮಾ =ಲಕ್ಷ್ಮಿ -ಧವ =ಒಡೆಯ
ಮುಕುಂದ: ಮುಕ್ತಿಯನ್ನು ಕೊಡುವವನು
ಯೋಗೇಶ್ವರ: ಯೋಗಿಗಳಿಗೆಲ್ಲಾ ಸ್ವಾಮಿಯಾದವನು
ಶ್ಯಾಮಸುಂದರ: ಕಪ್ಪು ವರ್ಣದವನು
ಹೃಷೀಕೇಶ: ಹೃಷಿಕಗಳನ್ನು(ಇಂದ್ರಿಯ) ಹಿಡಿದಿಟ್ಟವನು
ಪುರುಷೋತ್ತಮ : ಪುರುಷರಲ್ಲೇ ಅತ್ಯುತ್ತಮನಾದವನು
ನವನೀತ : ತಾಜಾ ಬೆಣ್ಣೆಯನ್ನು ತಿಂದವನು
ಸುದರ್ಶನ : ಸುದರ್ಶನ ಚಕ್ರ ಹೊಂದಿದವ
ಮುರಳಿ : ಕೊಳಲನ್ನು ಹೊಂದಿದವ
ಜನಾರ್ಧನ : ಜನನವಿಲ್ಲದಂತೆ ಮಾಡುವವನು
ಮುರಾರಿ : ಮುರ ಎಂಬ ದೈತ್ಯನನ್ನು ಸೋಲಿಸಿದವನು
ದಾಮೋದರ: ಹೊಟ್ಟೆಯನ್ನು ಹಗ್ಗದಲ್ಲಿ ಕಟ್ಟಲ್ಪಟ್ಟವನು
ಕೇಶವ: ಕೇಶ ಎಂಬ ದೈತ್ಯನ ಸಂಹಾರ ಮಾಡಿದವನು


  • ನಟರಾಜ್ ಸೋನಾರ್  (ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ) ಕುಷ್ಟಗಿ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW