ಕಾಯಕಯೋಗಿ ಸಿದ್ದಗಂಗಾ ಸ್ವಾಮೀಜಿ ಆನಂದಪುರಂಕ್ಕೆ ಬಂದ ಪ್ರಸಂಗ

ಅನ್ನ ಮತ್ತು ವಿದ್ಯಾದಾನಿ ಸಿದ್ಧಗಂಗಾ ಸ್ವಾಮೀಜಿ ಆನಂದಪುರಂ ಹೋಬಳಿಯ ನರಸೀಪುರದಲ್ಲಿ ಮಹಾತ್ಮಾ ಗಾಂಧಿ ಜನ್ಮ ಶತಾಬ್ದಿ ಸ್ಮರಣಾರ್ಥ ಪ್ರಾಥಮಿಕ ಶಾಲೆ ಶಂಕುಸ್ಥಾಪನೆ ಮಾಡುತ್ತಾರೆ. ಇಂತಹ ಅಪೂರ್ವ ದಾಖಲೆಗಳು ನಮೂದಾಗಿರುವ ಆನಂದಪುರಂ ಇತಿಹಾಸ ಪುಸ್ತಕ ಮುದ್ರಣದಲ್ಲಿದೆ. ತಪ್ಪದೆ ಮುಂದೆ ಓದಿ…

ಮಹಾತ್ಮಾ ಗಾಂಧೀಜಿ ಜನ್ಮದಿನ 2 ಅಕ್ಟೋಬರ್ 1869, ಭಾರತ ದೇಶದ ಸ್ವಾತಂತ್ರ್ಯ ಹೋರಾಟದ ನೇತಾರರಾದ ಅವರ ಜನ್ಮ ಶತಮಾನೋತ್ಸವ 1969 ರಲ್ಲಿ ದೇಶದಾದ್ಯಂತ ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗಿತ್ತು. ಜನ್ಮ ಶತಮಾನೋತ್ಸವದ ವಿಶೇಷ ಅಂಚೆ ಚೀಟಿ, ಅಂಚೆ ಕಾರ್ಡು, ನಾಣ್ಯಗಳು, ಕರೆನ್ಸಿಗಳು ಮತ್ತು ಶಾಲೆ ಮುಂತಾದ ನಿರ್ಮಾಣ ಕೂಡ ಆಯಿತು. ಮಹಾತ್ಮಾ ಗಾಂಧಿಯವರ ಜನ್ಮ ಶತಮಾನೋತ್ಸವಕ್ಕೆ ಭಾರತ ಮಾತ್ರವಲ್ಲ ವಿಶ್ವದ 40 ದೇಶಗಳು ಅವರ ಸ್ಮರಣಾರ್ಥವಾಗಿ 1969 ರಲ್ಲಿ ವಿಶೇಷ ಅಂಚೆ ಚೀಟಿ ಲೋಕಾರ್ಪಣೆ ಮಾಡಿ ಮಹಾತ್ಮಾ ಗಾಂಧೀಜಿಯವರನ್ನು ಸ್ಮರಿಸಿ ಗೌರವಾರ್ಪಣೆ ಮಾಡಿತ್ತು. (ಬೇರೆ ಬೇರೆ ಸಂದರ್ಭಗಳಲ್ಲಿ ಗಾಂಧೀಜಿ ಅಂಚೆ ಚೀಟಿ ಬಿಡುಗಡೆ ಮಾಡಿದ ದೇಶಗಳ ಸಂಖ್ಯೆ 100 ಕ್ಕೂ ಹೆಚ್ಚು) ಸ್ವಾತಂತ್ರ ಪಡೆದ 22ನೇ ವಾರ್ಷಿಕೋತ್ಸವ ಕೂಡ ಇದಾದ್ದರಿಂದ ಭಾರತ ದೇಶದಲ್ಲಿ ಗಾಂಧಿ ಜನ್ಮ ಶತಮಾನೋತ್ಸವ ಸಂಭ್ರಮದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸರ್ಕಾರದ ಆಡಳಿತದಲ್ಲಿನ ನೌಕರ ವೃಂದ ಮತ್ತು ಗುತ್ತಿಗೆದಾರರು ಕೂಡ ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿತ್ತು ಅಂದರೆ ಸುಮ್ಮನೆ ಭಾಗಿವಹಿಸುವುದಲ್ಲ, ಅವರೆಲ್ಲ ಸೇರಿ ಅವರ ವೇತನದಲ್ಲಿನ ಹಣ, ಅವರ ಸಂಪಾದನೆಯ ಹಣ ಸಂಗ್ರಹಿಸಿ ಮಹಾತ್ಮ ಗಾಂಧೀಜಿ ಜನ್ಮ ಶತಮಾನೋತ್ಸವದ ಅಂಗವಾಗಿ ಶಾಶ್ವತವಾದ ಸ್ಮರಣೆ ದಾಖಲಿಸುವ ಮಹತ್ತರ ಕೆಲಸವದು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು, ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಗಳು ಮತ್ತು ನೀರಾವರಿ ಇಲಾಖೆ ಕಂಟ್ರಾಕ್ಟರ್ ಗಳು ಸೇರಿ ಮಹಾತ್ಮ ಗಾಂಧೀಜಿ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಆನಂದಪುರಂ ಹೋಬಳಿಯ ನರಸೀಪುರದಲ್ಲಿ (ಈಗಿನ ಶಿಕಾರಿಪುರ ಆನಂದಪುರಂ ರಾಷ್ಟ್ರೀಯ ಹೆದ್ದಾರಿ, ಆನಂದಪುರಂನಿಂದ ಶಿಕಾರಿಪುರ ಮಾರ್ಗದಲ್ಲಿ ಎಡ ಭಾಗದಲ್ಲಿ) ಪ್ರಾಥಮಿಕ ಶಾಲೆ ನಿರ್ಮಿಸಲು ಯೋಚಿಸುತ್ತಾರೆ.

1964 ರಲ್ಲಿ ಸಮೀಪದ ಅಂಬ್ಲಿಗೋಳ ಡ್ಯಾಂ ಉದ್ಘಾಟನೆ ಆಗಿದ್ದರೂ ಬಾಕಿ ಉಳಿದ ಕಾಮಗಾರಿ 1969 ರಲ್ಲೂ ನಡೆಯುತ್ತಿತ್ತು. ಈ ಎಲ್ಲಾ ನಿರಾವರಿ ಇಲಾಖೆ ಕಾಮಗಾರಿ ನಿರ್ವಹಿಸುವ ಕಂಟ್ರಾಕ್ಟರ್ ಗಳೂ ಕೈಜೋಡಿಸುತ್ತಾರೆ. ನರಸೀಪುರದ ಗ್ರಾಮಸ್ಥರನ್ನು ಸೇರಿಸಿ ತಮ್ಮ ಉದ್ದೇಶ ತಿಳಿಸುತ್ತಾರೆ, ಆಗ ನರಸೀಪುರ – ತಳಗೇರಿ ಭಾಗದಲ್ಲಿ ಶಾಲೆ ಇದ್ದಿರಲಿಲ್ಲ. ದೂರದ ಹೊಸಕೊಪ್ಪ ಮತ್ತು ಗೌತಮಪುರದಲ್ಲಿ ಮಾತ್ರ ಶಾಲೆ ಪ್ರಾರಂಭ ಆಗಿತ್ತು, 1964 ರಲ್ಲಿ ಹೊಸಕೊಪ್ಪ ಶಾಲೆ ಪ್ರಾರಂಭ ಆಗಿತ್ತು.

ಆ ಕಾಲದ ಹಿರಿಯ ಸಮಾಜವಾದಿ ದುರೀಣ ಖೈರಾದ ಬಿ. ಕೆ. ಕೊಲ್ಲಪ್ಪ ನೇತೃತ್ವದಲ್ಲಿ, ತಂಗಳವಾಡಿ ಬಿ.ಧರ್ಮಪ್ಪ (ನಂತರ 1883 ರಲ್ಲಿ ಶಾಸಕರಾಗುತ್ತಾರೆ), ಕೌತಿ ನಾಗಪ್ಪ, ನರಸೀಪುರದ ಎನ್.ಡಿ. ಹುಚ್ಚಪ್ಪ, ಆನಂದಪುರಂನ ಕಂಟ್ರಾಕ್ಟರ್ ತಿರುಮಲಾಚಾರ್ ಅಯ್ಯಂಗಾರ್ ಸೇರಿ ಈ ಘನ ಕಾಯ೯ದ ನೇತೃತ್ವವಹಿಸುತ್ತಾರೆ. ಇವರೆಲ್ಲ ಸೇರಿ ನರಸೀಪುರದ ಗ್ರಾಮಸ್ಥರನ್ನು ಸೇರಿಸಿ ತಮ್ಮ ಉದ್ದೇಶ ತಿಳಿಸುತ್ತಾರೆ. ಈ ವಿಚಾರ ಕೇಳಿ ನರಸೀಪುರದ ಗ್ರಾಮಸ್ಥರು ತಮ್ಮ ಊರಿಗೆ ಶಾಲೆ ಬರುವ ವಿಚಾರದಿಂದ ಪುಳಕಿತರಾಗುತ್ತಾರೆ ಮತ್ತು ತಮ್ಮ ಊರಲ್ಲೇ ಶಾಲೆ ಪ್ರಾರಂಭವಾಗಲಿ ಎಂದು ಸಂತೋಷದಿಂದ ಜಾಗ ನೀಡುತ್ತಾರೆ.

ಮಹಾತ್ಮಾ ಗಾಂಧೀಜಿ ಜನ್ಮ ಶತಮಾನೋತ್ಸವ ಸಂಭ್ರಮದ ಆಚರಣೆ ಸ್ಮರಣೀಯ ಮಾಡುವ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣವನ್ನ ಕೈಗೊಂಡ ಇವರೆಲ್ಲ ಸೇರಿ ಈ ಸಂದರ್ಭವನ್ನೂ ಇನ್ನೊಂದು ಐತಿಹಾಸಿಕ ಸ್ಮರಣೀಯ ದಾಖಲೆಗೆ ಕಾರಣವಾಗುವ ಕೆಲಸ ಮಾಡಿದರು. ಅದೇನೆಂದರೆ ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳನ್ನು ಕರೆತಂದು ಈ ಶಾಲೆಯ ಶಂಕುಸ್ಥಾಪನೆ ನೆರವೇರಿಸುತ್ತಾರೆ.

24 ಏಪ್ರಿಲ್ 1969 ರ ಆ ದಿನ ಸಿದ್ದಗಂಗಾ ಶ್ರೀಗಳು ಆನಂದಪುರಂನ ನರಸೀಪುರದಲ್ಲಿ ಮಹಾತ್ಮಾ ಗಾಂಧೀಜಿ ಜನ್ಮ ಶತಮಾನದ ಸ್ಮರಣಾರ್ಥ ನಿರ್ಮಿಸುವ ಪ್ರಾಥಮಿಕ ಶಾಲಾ ಕಟ್ಟಡದ ಭೂಮಿ ಪೂಜೆ ಮಾಡಿ ಶಂಕುಸ್ಥಾಪನೆ ನೆರವೇರಿಸುತ್ತಾರೆ. ಅವತ್ತು ಸುತ್ತ ಮುತ್ತಲಿನ ಗ್ರಾಮಸ್ಥರೆಲ್ಲ ಸೇರಿ ಸಿದ್ದಗಂಗಾ ಸ್ವಾಮೀಜಿಗಳ ಸ್ವಾಗತಿಸುತ್ತಾರೆ. ಅದೇ ವರ್ಷದಲ್ಲಿ ಶಾಲೆ ಪ್ರಾರಂಭ ಆಗುತ್ತದೆ.

ಇವತ್ತು ನರಸೀಪುರದ ಶಾಲೆ ಅನೇಕ ಕೊಠಡಿಗಳ ಜೊತೆ ಮಾಧ್ಯಮಿಕ ಶಾಲೆಯಾಗಿ ಅನೇಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ನಿರ್ಮಾಣವಾಗಿ 53 ವರ್ಷ ವಾಯಿತು.
ಇವತ್ತೂ ಈ ಶಾಲೆಯಲ್ಲಿ 24- ಏಪ್ರಿಲ್ 1969 ರಲ್ಲಿ ಸಿದ್ದಗಂಗಾ ಸ್ಟಾಮಿಗಳಿಂದ ಶಂಕುಸ್ಥಾಪನೆ ಮಾಡಿದ ಶಾಲಾ ಕಟ್ಟಡದ ಗೋಡೆಗೆ ಅಳವಡಿಸಿದ ಶಿಲಾ ಫಲಕ ಸಂರಕ್ಷಿಸಿಕೊಂಡು ಬಂದ ಶಿಕ್ಷಕ ವರ್ಗ ಮತ್ತು ಗ್ರಾಮಸ್ಥರು ಅಭಿನಂದನೀಯರು.

ಸಿದ್ದಗಂಗಾ ಸ್ವಾಮೀಜಿ ಶತಾಯುಷಿಗಳಾಗಿ ಬದುಕಿದರು. ಸಿದ್ಧಗಂಗಾದಲ್ಲಿ ನಿತ್ಯ ಸಾವಿರಾರು ಜನರಿಗೆ ಅನ್ನದಾಸೋಹ. ಪ್ರತಿ ವರ್ಷ 10 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ವಿದ್ಯಾ ದಾಸೋಹದಿಂದ, ನಿಸ್ವಾರ್ಥ ಸಮಾಜ ಸೇವೆಯಿಂದ ದೈವ ಸ್ವರೂಪರಾಗಿ ನಡೆದಾಡುವ ದೇವರೆಂದೇ ಪ್ರಸಿದ್ಧರಾದರು. ಇವರ ಅಮೃತ ಹಸ್ತದಲ್ಲಿ ಶಂಕುಸ್ಥಾಪನೆ ಆದ ನರಸೀಪುರ ಶಾಲೆ ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ ಮತ್ತು ಈ ನಡೆದಾಡುವ ದೇವರು ನಮ್ಮ ಆನಂದಪುರಂ ನೆಲದಲ್ಲಿ ನಡೆದಾಡಿದರೆಂಬುದು ಕೂಡ ಪುಣ್ಯ ಸ್ಮರಣೆ ಆಗಿದೆ.


  • ಅರುಣ್ ಪ್ರಸಾದ್

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW