“ಕೀರ್ತನ ಎಂ “ಅವರ ಚೊಚ್ಚಲ ಕಾದಂಬರಿ ಇದಾಗಿದ್ದು ಕಥೆಯು ಇಂದಿನ ಯುವ ಜನತೆ, ಪ್ರೀತಿ ಪ್ರೇಮ ಹಾಗೂ ಅವರ ಬದುಕಿನ ಸುತ್ತ ಸಾಗುತ್ತದೆ. ಕಾದಂಬರಿಯ ಕುರಿತು ಲೇಖಕಿ ಆತ್ಮಾ ಜಿ ಎಸ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ …
ಪುಸ್ತಕ : ತನ್ಮಯಳಾದೆ ನಾ ನಿನ್ನ ಪ್ರೀತಿಗೆ
ಲೇಖಕಿ : ಕೀರ್ತನ ಎಂ
ಪ್ರಕಾಶನ : ಹೆಚ್.ಎಸ್. ಅರ್. ಎ ಪ್ರಕಾಶನ
ಪ್ರಕಾರ : ಕಾದಂಬರಿ
ವಿವಾಹ ಹೆಣ್ಣಿನ ಬದುಕಿನ ಮೈಲಿಗಲ್ಲು. ಒಳ್ಳೆಯ ಮನದ ವ್ಯಕ್ತಿಯ ಕೈ ಹಿಡಿದು ಸಂಸಾರ ಮಾಡಿದರೆ ಬದುಕು ಸಾರ್ಥಕ ಎಂಬ ಭಾವ ಹೆಣ್ಣಿನದು. ಆಕೆಯ ಭಾವನಾತ್ಮಕ ಪ್ರಪಂಚದಲ್ಲಿ ಗಂಡ ಮಾತ್ರ ಸೀಮಿತ ಅಲ್ಲ. ಅಲ್ಲಿ ಅತ್ತೆ, ಮಾವ, ನಾದಿನಿ ಮನೆ ಮಂದಿ ಎಲ್ಲರೂ ಒಳಗೊಳ್ಳುತ್ತಾರೆ ಹಾಗಾಗಿಯೇ ವಿವಾಹ ಬಂಧನಕ್ಕೆ ಹಿರಿಯರು ಮುಂದೆ ನಿಂತು ನಡೆಸಿದಲ್ಲಿ ಎಲ್ಲರಿಗೂ ತೃಪ್ತ ಭಾವ. ಆದ್ದರಿಂದಲೇ ಮೊದಲಿನಿಂದಲೂ ಹಿರಿಯರು ನಿಂತು ಮಾಡುವ ಮದುವೆಗೆ ಪ್ರಾಶಸ್ತ್ಯ. ಆದರೆ ಹೆಣ್ಣು /ಗಂಡು ತಾನೇ ಸಂಬಂಧ ನೋಡಿಕೊಂಡು ಹಿರಿಯರ ಆಶೀರ್ವಾದ ಪಡೆದು ಮದುವೆ ನಡೆದಲ್ಲಿ ಸ್ವಾಮಿ ಕಾರ್ಯ ಸ್ವಕಾರ್ಯ ಎರಡೂ ನಡೆದಂತೆ. ಹಾಗಿದ್ದಲ್ಲಿಯೂ ಎಲ್ಲರಿಗೂ ಇಂತಹ ಅವಕಾಶಗಳು ಸಿಗದು.
ಬದುಕು ಯಾವ ತಿರುವಿನಲ್ಲಿ ಅಚ್ಚರಿ, ಆಘಾತ ನೀಡುತ್ತದೆಯೋ ಬಲ್ಲವರು ಯಾರು? ತಾವು ಎಣಿಸಿದೆ ಕೆಲವು ಘಟನೆಗಳು ಕೆಲವರ ಬದುಕಿನಲ್ಲಿ ನಡೆದು ಬಿಡುತ್ತದೆ. ಇದು ಕೆಲವೊಮ್ಮೆ ಒಳ್ಳೆಯದನ್ನೇ ಮಾಡಿದರೆ ಇನ್ನು ಕೆಲವೊಮ್ಮೆ ಕೆಟ್ಟದ್ದನ್ನು ಮಾಡಬಲ್ಲದು. ಇವೆರಡರ ಮಿಶ್ರ ಭಾವ ಇದ್ದಲ್ಲಿ ಬದುಕು ಸಸಾರ. ಇಂಥದ್ದೇ ಬದುಕಿನ ವಿವಿಧ ಅಚ್ಚರಿಯ ಘಟನೆಗಳಿಗೆ ಸಾಕ್ಷಿಯಾಗುವ ,ಅನಿರೀಕ್ಷಿತ ಘಟನೆಗಳಿಗೆ ಆಘಾತಕ್ಕೆ ಒಳಗಾಗುವ ಕಥೆಯ ಹಂದರ ” ತನ್ಮಯಳಾದೆ ನಾ ನಿನ್ನ ಪ್ರೀತಿಗೆ”.
“ಕೀರ್ತನ ಎಂ “ಅವರ ಚೊಚ್ಚಲ ಕಾದಂಬರಿ ಇದಾಗಿದ್ದು ಕಥೆಯು ಇಂದಿನ ಯುವ ಜನತೆ, ಪ್ರೀತಿ ಪ್ರೇಮ ಹಾಗೂ ಅವರ ಬದುಕಿನ ಸುತ್ತ ಸಾಗುತ್ತದೆ. ಕಥಾ ನಾಯಕ ತಾರಕ್ ತನ್ನದೇ interior decoration ಉದ್ದಿಮೆ ನಡೆಸುವ ಯುವ ಉತ್ಸಾಹಿಯಾದರೆ, ನಾಯಕಿ “ತನ್ಮಯ” ಈತನ ಕಂಪನಿಯಲ್ಲಿ ಕೆಲಸಕ್ಕೆಂದು ಸಂದರ್ಶನಕ್ಕೆ ಬರುವವಳು. ಇದಕ್ಕೂ ಮೊದಲ ದಿನ ಗೆಳತಿಯ ಮದುವೆಯಲ್ಲಿ ಕಥಾ ನಾಯಕ, ನಾಯಕಿಯನ್ನು ಭೇಟಿ ಆಗಿದ್ದು,ಇಬ್ಬರೂ ಸಂದರ್ಶನದಲ್ಲಿ ಭೇಟಿ ಮಾಡುವ ನಿರೀಕ್ಷೆಯೂ ಇರುವುದಿಲ್ಲ. ಕೆಲಸದ ಸಂದರ್ಶನಕ್ಕೆ ಬಂದ ತನ್ಮಯ ನಂತರದ ಬೆಳವಣಿಗೆಯಲ್ಲಿ ತಾರಕ್ ಬದುಕಿನಲ್ಲಿ ಭದ್ರ ಸ್ಥಾನ ಪಡೆಯುತ್ತಾಳೆ. ಹಿರಿಯರು ನಿಂತು ಮಾಡಿದ ಮದುವೆಯೇ ಆಗಿದ್ದರೂ ಮದುವೆಯ ಹಿಂದಿನ ಕಾರಣ ತಿಳಿಯದ ನಾಯಕಿಗೆ ಅತ್ತೆ , ಮಗನ ಬದುಕಿಗೆ ಕಂಟಕ ಇರುವುದಾಗಿ ,ಒಂದಷ್ಟು ವ್ರತ ನೇಮ ಮಾಡಲು ತಿಳಿಸಿ ಮಗನ ಬದುಕು ನಿನ್ನ ಕೈಯಲ್ಲಿದೆ ಎಂದೇ ಆತನ ಜವಾಬ್ದಾರಿಯನ್ನು ಈಕೆಯ ಮೇಲೆಯೇ ಹಾಕುತ್ತಾರೆ. ಬದುಕು ಸರಳವಾಗಿ ಸಾಗುವಾಗ ಬಂದೆರಗುವ ಮೊದಲ ಆಘಾತ ನಾಯಕನ ಗೆಳಯ ಸಮರ್ಥನ ರೂಪದಲ್ಲಾದರೆ,ನಂತರ ಆಕೆಯ ಬಾಲ್ಯ ಸ್ನೇಹಿತ ಆಕರ್ಶ. ಈಕೆಯ ಬದುಕಿಗೆ ಕಪ್ಪು ನೆರಳಾಗಿ ಕಾಡುತ್ತಾರೆ. ಆಕೆಗೆ ಎದುರಾದ ಆಘಾತವನ್ನು ನಿಭಾಯಿಸುವ ರೀತಿ ಕುತೂಹಲ ವಾಗಿದ್ದು ಕಥೆ ಎಲ್ಲಿಯೂ ತನ್ನ ಓಘವನ್ನು ಬಿಟ್ಟುಕೊಡುವುದಿಲ್ಲ. ಕಥೆ ಕೇವಲ ತನ್ಮಯ ಮತ್ತು ತಾರಕ್ ಸುತ್ತ ನಡೆಯದೇ ಕುಟುಂಬದ ಎಲ್ಲರೂ ಇದರಲ್ಲಿ ಪಾತ್ರಧಾರಿಗಳು. ಪ್ರತಿಯೊಬ್ಬರೂ ಒಂದಕ್ಕೊಂದು ಕೊಂಡಿಯ ರೀತಿಯಲ್ಲಿ ಕಷ್ಟಕ್ಕೂ ಜೊತೆಯಾಗುತ್ತಾರೆ. ಹಾಗೆಯೇ ಸುಖದ ಸಮಯದಲ್ಲೂ.
ಕಾದಂಬರಿ ಎರಡು ಅಧ್ಯಾಯದಲ್ಲಿ ಇದ್ದು ಪೂರ್ತಿ ಕಥೆಯೂ ಸ್ವಗತದ ರೂಪದಲ್ಲಿ ಸರಳವಾಗಿ ಚಿತ್ರಿತವಾಗಿದೆ. ಹಾಗಾಗಿಯೇ ಓದುಗರಿಗೆ ಓದಿಸಿಕೊಳ್ಳಲು ಸುಲಭವಾಗಿದ್ದು. ಕೀರ್ತನ ಈ ಕಾದಂಬರಿಯ ಮೂಲಕ ಯುವ ಜನತೆಯ ಭಾವನೆಗಳನ್ನು ಹೊರ ತಂದ ರೀತಿಯಲ್ಲಿಯೇ ಇಂದಿನ ಯುವ ಜನತೆಗೆ ಬೇಕಾದ ಮಾನವೀಯ ಮೌಲ್ಯಗಳು ಉತ್ತಮ ರೀತಿಯಲ್ಲಿಯೇ ವ್ಯಕ್ತವಾಗಿದೆ. ಕಥೆ ಆರಂಭದಲ್ಲಿ ಮಾಮೂಲು ಪ್ರೀತಿ ಪ್ರೇಮದ ಸುತ್ತ ಹೆಣೆದಂತೆ ಭಾಸವಾದರೂ ಕಥೆಯೂ ಮುಂದುವರೆದ ಹಾಗೆಯೇ ಕುತೂಹಲವನ್ನು ಕಾದಿಡುತ್ತದೆ. ಭಾಷೆಯ ದೃಷ್ಟಿಯಿಂದ ಸರಳವಾಗಿದ್ದು, ಇನ್ನು ಮುಂದಿನ ಬರವಣಿಗೆಯನ್ನು ಬೇರೆ ರೀತಿಯ ಪ್ರಯೋಗಗಳಿಗೆ ಒಡ್ಡಿ ಕೊಳ್ಳುವಂತೆ ಆಗಲಿ.
ಹೆಚ್.ಎಸ್. ಅರ್. ಎ ಪ್ರಕಾಶನದಿಂದ ಈ ಕಾದಂಬರಿ ಹೊರ ಬಂದಿದ್ದು,ಹೊನ್ನಿನ ಬಣ್ಣದ ಮುಖಪುಟ ಆಕರ್ಷಕವಾಗಿದೆ. ಯಾವುದೇ ರೀತಿಯ ತಪ್ಪುಗಳು ಇಲ್ಲದ ಓದಲು ಖುಷಿ ನೀಡುವ ಈ ಕಾದಂಬರಿಯು 232 ಪುಟಗಳನ್ನು ಹೊಂದಿದ್ದು ಓದಲು ಕುಳಿತರೆ ಓದಿಸಿಕೊಂಡು ಹೋಗುವ ಪುಸ್ತಕ. ತಮ್ಮ ಮೊದಲ ಪ್ರಯತ್ನದಲ್ಲಿ ಲೇಖಕಿ ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದು,ಕೇವಲ ಪ್ರೀತಿ ಪ್ರೇಮದ ಕಥೆಗೆ ಬರಹಗಳು ಸೀಮಿತವಾಗದೆ ಬದುಕಿನ ಬೇರೆ ಬೇರೆ ಚಿತ್ರಣ ಇವರ ಲೇಖನಿಯಲ್ಲಿ ಮೂಡಿ ಬರಲಿ ಎಂಬ ಹಾರೈಕೆ.
- ಆತ್ಮಾ ಜಿ ಎಸ್