ಸಿಖಂದರ ಅಲಿಯವರ ಗಜಲ್ ಸಂಕಲನ

ಶ್ರೀ ಎಸ್ ಎಸ್ ಅಲಿ ಯವರ ಗಜಲ್ ಓದುತ್ತಾ ಹೋದಾಗ ಬರೆಯಲು ಮಧ್ಯರಾತ್ರಿ ಸಹ ಎದ್ದು ಕುಳ್ಳಿರಿಸಿದ ಸಾಲುಗಳಿವು. ಓದುಗನನ್ನು ಚಿಂತೆಯ ಧಾವಂತಕ್ಕೆ ದೂಡುವದು ಅಲ್ಲದೇ ಆತ್ಮಾವಲೋಕನಕ್ಕೆ ಹಚ್ಚುತ್ತವೆ ಎನ್ನುತ್ತಾರೆ ಹಿರಿಯ ಲೇಖಕ ಸಿದ್ಧರಾಮ ಹೊನ್ಕಲ್ ಅವರು, ತಪ್ಪದೆ ಮುಂದೆ ಓದಿ…

ಪುಸ್ತಕ : ಮೌನ ನಗರಿಯ ಮಾತು
ಲೇಖಕರು : ಸಿಕಂದರ್ ಅಲಿ
ಪ್ರಕಾಶನ : ಮನ್ವಂತರ ಪ್ರಕಾಶನ
ಬೆಲೆ : 101/

ಶ್ರೀ ಸಿಖಂದರ ಅಲಿಯವರ ಗಜಲ್ ಸಂಕಲನಕ್ಕೆ ಒಂದಷ್ಟು ಮನದಾಳದ ಹೊನ್ನುಡಿ

ಪ್ರೇಮ ಪಯಣದಲಿ ಪೆಟ್ಟು ತಿಂದಿರುವೆ
ಮರೆತ ಗಾಯವು ಕಂಪಿನಲಿ ಸೂಸುತ್ತಿದೆ

ಮೊಹಬ್ಬತ್ ಮೈಮೇಲೆ ಎರಚಿಕೊಂಡಿರುವೆ
ದ್ವೇಷದ ಮುನಿಸಲಿ ಪ್ರೀತಿ ಮರೆಯಾಗುತ್ತಿದೆ

ಖೋಟಾ ಮನಸಿಗೂ ಬೆಲೆಯು ಬಂದಂತಿದೆ
ಬಿಕ್ಕಳಿಕೆ ಬರೀ ಬದುಕುವಾಸೆ ಕಸಿಯುತ್ತಿದೆ

ಈ ಮೇಲಿನ ಮೂರು ಶೇರಗಳು ತುಂಬಾ ಕಾಡಿದವು. ಗಜಲ್ ಲೇಖಕ ಶ್ರೀ ಸಿಖಂದರ ಅಲಿಯವರ ಗಜಲ್ ಕೃತಿ ಕುರಿತು ಅವರ ಅಪೇಕ್ಷೆಗೆ ಕಟ್ಟುಬಿದ್ದು ಬರೀವಾಗ ನನ್ನ ಭಾವವೇ ಆದ ಸಾಲುಗಳಿವು.

ಯಾವುದೇ ಒಬ್ಬ ಲೇಖಕ ಯಶಸ್ಸಿ ಲೇಖಕ ಅನಿಸಿಕೋಬೇಕಾದರೆ ಆತ ಬರೆದ ಭಾವಗಳು ಓದುಗರು ತಮ್ಮವು ಸಹ ಅನಿಸಿಕೋಬೇಕು.ಅಂದಾಗ ಮಾತ್ರ ಆ ಲೇಖಕ ಬರೆದ ಬರಹಗಳು ಸಾರ್ವಜನಿಕ, ಸಾಮಾಜಿಕ ಮನ್ನಣೆಗೆ ಪಾತ್ರವಾದಂತೆ.ಈ ಮಿತ್ರ ಅಲಿಯವರು ಯಾವತ್ತೂ ಪ್ರಗತಿಪರ ಮನೋಭಾವದ,ಸಾಮರಸ್ಯದ ಬದುಕು ಎಲ್ಲರದಾಗಲಿ ಎಂದು ಬಯಸುವ ಕಮಿಟೇಡ್ ಲೇಖಕ.ಅವರು ತಮ್ಮ ಅನೇಕ ಜನಮುಖಿ ಆಶಯದ ಧರೆಯಮಾತು (ಮನ್ವಂತರ) ಸಂಘಟನೆಯ ಮೂಲಕ ಸದಾ ನೊಂದವರ, ಶೋಷಿತರ,ಧ್ವನಿ ಇಲ್ಲದವರ, ದಮನಿತರ ಅಸಹಾಯಕರ ಬೆನ್ನಿಗೆ ನಿಂತು ಅವರಿಗೆ ವೇದಿಕೆ ಕಲ್ಪಿಸಿದವರು.ಇವರ ಬರಹ ಬದುಕು ತೋರಿಕೆಯದಲ್ಲ.ತೋರಿಕೆಯ, ಯಾವುದೇ ಸಾಮಾಜಿಕ ಬದ್ಧತೆಯು ಇಲ್ಲದ, ಮೌಲ್ಯಗಳೇ ಇಲ್ಲದೆ ಬದುಕುವ ಅನೇಕ ಆಷಾಡಭೂತಿಗಳ ಮಧ್ಯೆ ಇಂತಹ ಬರಹ ಬದುಕಿನ ಸಾಮರಸ್ಯ ಹೊಂದಿರುವ ಲೇಖಕರು ಇಂದಿನ ದಿನಮಾನದಲ್ಲಿ ಬಹಳ ಅಪರೂಪ. ಅಂತಹ ಅಪರೂಪದ ಈ ಅಲಿಯವರ ಗಜಲ್ ಕೃತಿಗೆ ನಾಲ್ಕು ಸಹಜವಾದ ಮಾತು ಬರೆಯಲು ಸಂತಸ ಆಗುತ್ತಿದೆ.

ಚಿಂದಿ ಆಯುವವನ ಬದುಕೆ ಚಿಂದಿ ಆದಾಗ ಯಾರಿಗೆ ಹೇಳಲಿ ನ್ಯಾಯ

ನುಡಿ ಮುತ್ತುಗಳೇ ನಗುವನ್ನು ನುಂಗಿದಾಗ ಯಾರಿಗೆ ಕೇಳಲಿ ನ್ಯಾಯ

ಶ್ರೀ ಎಸ್ ಎಸ್ ಅಲಿ ಯವರ ಗಜಲ್ ಓದುತ್ತಾ ಹೋದಾಗ, ಬರೆದುಕೊಡಬೇಕಾದ ಒತ್ತಡದಲ್ಲಿ ನಿದ್ದೆ ಬಾರದೆ, ಬರೆಯಲು ಮಧ್ಯರಾತ್ರಿ ಸಹ ಎದ್ದು ಕುಳ್ಳಿರಿಸಿದ ಸಾಲುಗಳಿವು.ಓದುಗನನ್ನು ಚಿಂತೆಯ ಧಾವಂತಕ್ಕೆ ದೂಡುವದು ಅಲ್ಲದೇ ಆತ್ಮಾವಲೋಕನಕ್ಕೆ ಹಚ್ಚುತ್ತವೆ.

ಗಜಲ್ ಅನ್ನುವುದು ನವಿರು ಭಾವಗಳಿಗೆ ಮೀಸಲು ಎಂಬ ಕಾಲ ಒಂದಿತ್ತು.ಆ ವಾದವನ್ನು ನಾನು ಒಪ್ಪುತ್ತೇನೆ.ಆದರೆ ಸಮಾಜದ ನೋವುಗಳಿಗೆ ಸ್ಪಂದಿಸಲಾರದವ ಕವಿಯಾಗಲಾರ ಎಂಬ ಮಾತಿನಂತೆ ಸಮಾಜಮುಖಿ ಚಿಂತನೆಗಳ ಅನೇಕ ಕವಿಗಳು ಗಜಲ್ ಅನ್ನು ಸಹ ಪ್ರೀತಿ ಪ್ರೇಮ ಅನುರಾಗ ಮೋಹಕ್ಕೆ ಹೊರತಾಗಿಸಿಯು ರಚಿಸುತ್ತಿದ್ದಾರೆ.ಆ ನಿಟ್ಟಿನಲ್ಲಿ ಮೇಲಿನ ಸಾಲುಗಳು ಗಮನ ಸೆಳೆಯುತ್ತವೆ.ಇಲ್ಲಿ ಇಂತಹ ಅನ್ಯಾಯ ನಡಿತಿವೆ. ನ್ಯಾಯಕ್ಕಾಗಿ ಯಾರಿಗೆ ಕೇಳಲಿ ಎಂಬ ಪ್ರಶ್ನೆ ಎಲ್ಲರದೂ ಆಗುತ್ತದೆ.ಕವಿಯಾದವನದಂತೂ ಆಗಲೇಬೇಕಿದೆ.

ಬೆನ್ನ ಹಿಂದೆ ಚೂರಿಗಳನ್ನು ಇಟ್ಟುಕೊಂಡು ಕಾವಲು ಕಾಯುವಾಗ ಯಾರಿಗೆ ಕೇಳಲಿ ನ್ಯಾಯ ಎಂದು ಅಲಿಯವರು ದೇಶವಾಸಿಗರ ಪ್ರತಿನಿಧಿಯಾಗಿ ಪ್ರಶ್ನಿಸುತ್ತಾರೆ.

ಬಜಾರಿನ ಬಾನಂಗಳ ಬಾಣಂತಿಯಾಗಿದೆ
ಗರ್ಭದ ನಕ್ಷತ್ರ ನೇತುಹಾಕಿ ಅಳಬೇಡ (ಗ-೪೭)

ಎಂತಹ ಮೋಹಕ ವಿಚಾರಪೂರ್ಣ ರೂಪಕಗಳು ನೋಡಿ.

ನಶ್ಸರ ದೇಹಕೂ ನೂರೆಂಟು ಆಸೆಗಳಿವೆ ಅಲಿ
ಶೂನ್ಯ ಕವಿದ ಕತ್ತಲಲಿ ಈಜುತಿರುವೆ ಜನಾಬ್ (ಗ-೧೨)

ಬಾನಿಗೂ ಬಟ್ಟೆ ತೋಡಿಸಿದ ಮೋಡ ಇರಿಯುತ್ತಿದೆ
ಇರುಳ ಮೌನವಾಗಿಸಿದ ಹಗಲು ಇರಿಯುತ್ತಿದೆ

ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡವರೆಲ್ಲ ಗೆದ್ದಿಲ್ಲ
ಮರಣವೇ ಬಚ್ಚಿಟ್ಟ ದಾಹವು ಇರಿಯುತ್ತಿದೆ (ಗ-೧೭)

********

ಪ್ರೀತಿಸದೆ ಪ್ರೇಮಿಯಾಗಲು ಹೊರಟುಬಿಟ್ಟೆಯಲ್ಲ
ದ್ವೇಷಿಸುತ್ತಾ ಸೂಫಿಯಾಗಿ ನಟಿಸಿಬಿಟ್ಟೆಯಲ್ಲ (ಗ-೪೬)

ಒಂದಕ್ಕಿಂತ ಒಂದು ಸುಂದರ ರೂಪಕಗಳು ಒಂದು ಕಡೆಯಾದರೆ ಅವು ಒಡಲಲ್ಲಿ ಬಚ್ಚಿಟ್ಟುಕೊಂಡ ದಾರುಣ ಸತ್ಯಗಳು ಇವರ ಗಜಲ್ ಗಳಲ್ಲಿ ಕಂಡುಬಂದು ಯೋಚನೆಗೆ ಹಚ್ಚುತ್ತವೆ.ಈ ನಾಡಿನಲ್ಲಿ, ದೇಶದಲ್ಲಿ ಬೆಂಕಿ ಹಚ್ಚಿ ಚಳಿ ಕಾಯುಸುವವರ ಸಂಖ್ಯೆ ಹೆಚ್ಚುತ್ತಿದೆ ಎಂಬ ದಿಗಿಲು ಕಾಡಿದರೂ ಕೊನೆಗೆಂದು ಅವರು ಗೆದ್ದಿಲ್ಲ.ಅಂಥವರಿಗೆ ಬೆಲೆ ಇಲ್ಲ…ಎಂಬುದು ಕೊಂಚ ನೆಮ್ಮದಿ ಮೂಡಿಸುತ್ತದೆ. ಭರವಸೆಯ ಬದುಕಿನಲ್ಲಿ ಇಂತಹ ಚೈತನ್ಯ, ಜೀವರಸ ತುಂಬಬೇಕಿದೆ.

ಪ್ರೀತಿಸದೇ ಪ್ರೇಮಿಯಾಗಲೂ ಹೊರಟವರೇ ಜಾಸ್ತಿ ಇಲ್ಲಿ. ದ್ವೇಷ,ಅಸೂಯೇ ಸಣ್ಣತನ, ರೋಗಗ್ರಸ್ತ ಮನಸುಗಳು, ಆಷಾಢಭೂತಿತನ ತುಂಬಿಕೊಂಡು,ಅಜ್ಞಾನದಿಂದ ಬಳಲುತ್ತಾ ಕೇವಲ ಮುಖದಲ್ಲಿ ಗಡ್ಡ ಬೆಳೆಸಿಕೊಂಡ ಮಾತ್ರಕ್ಕೆ ಸೂಫಿಯಾಗುವುದಿಲ್ಲ.ಅದು ಸೂಫಿತನದ ನಟನೆಯಷ್ಟೆ ಎಂದು ಅಂತಹ ಮೂರ್ಖರಿಗೆ ಚಾಟಿ ಬೀಸಿದ್ದಾರೆ.ಸ್ಯಾಡಿಸ್ಟ ಮನಸ್ಸುಗಳೇ ಕೇಳಿ. ಸುಳ್ಳಿನ ಪೊಳ್ಳು ಸೌಧದ ಮೇಲೆ ಮನೆಕಟ್ಟಿ ಬಹುದಿನ ಬಾಳಲಾಗುವುದಿಲ್ಲ. ಅದೊಂದು ದಿನ ಕುಸಿದು ಬೀಳಲಿದೆ ಎಂಬ ಸಾರ್ವತ್ರಿಕ ಸತ್ಯವನ್ನು ಬಿತ್ತರಿಸಿದ್ದಾರೆ.ಇಲ್ಲಿ ಇನ್ನೂ ಅನೇಕ ಇಂತಹ ಗಜಲ್ ಗಳು ಸಂಕಲನದ ಉದ್ದಕ್ಕೂ ಉಲ್ಲೇಖಿಸುವಂತೆ ಇವೆ.

ಇವರ ಗಜಲ್ ಗಳಲ್ಲಿ ಕೇವಲ ಸಮಾಜಮುಖಿ; ಜನಮುಖಿ ಗಜಲ್ ಇವೆ ಅಂತ ಯಾರು ಅಂದುಕೊಳ್ಳಬೇಕಿಲ್ಲ.ಗಜಲ್ ದ ಇಷ್ಕ್ ಗೆ ಸಂಬಂಧಿಸಿದ ಅನೇಕ ಮೋಹಕ ಗಜಲ್ ಸಹ ಇದ್ದು ಅವು ಓದುಗನೆದೆಯಲ್ಲಿ ನವಿರುತನ, ಕೋಮಲತೆ, ಆದ್ರತೆ ಮೂಡಿಸುವಲ್ಲಿ ತುಂಬಾ ಯಶಸ್ವಿಯಾಗಿವೆ.

ನೀನು ಕೆಡವಿದ ಅರಮನೆಯಲ್ಲಿ ಜಾಗಕೊಡು
ಬಾಡಿರುವ ಪ್ರೀತಿಗೆ ನಿನ್ನೆದೆಯಲ್ಲಿ ಜಾಗ ಕೊಡು

ವಾಹ್! ಇಂತಹ ಒಂದಷ್ಟು ಗಜಲ್ ಗಳು ಬಹುಕಾಲ ಕಾಡುವಂತಿವೆ.ಮುಂದುವರಿದು ಹೀಗೆ ಹೇಳುತ್ತಾರೆ.

ಅಲಿ ಮೇಲಿಟ್ಟ ಗುಲಾಬಿಯೂ ಮುತ್ತ ನೀಡಿದೆ
ಗೋರಿಯೇ ತಾಜ್ ಮಹಲ್ ಆಗಲಿ ಜಾಗಕೋಡು

ಎಂದು ತಮ್ಮ ಪ್ರೇಯಸಿಯ ಮನೋಮಂದಿರದಲಿ,  ಆ ಸುಂದರ ಹೃದಯದಲಿ ಕೊಂಚ ಜಾಗಕೊಡೆಂದು ಕೇಳುವ ಈ ಪರಿ ಇದೆಯಲ್ಲ ಅದು ಅಲಿಯಂತಹವರ ಹೃದಯದ ಪಿಸುಮಾತಾಗಿ ಓದುಗರೆದೆಯಲ್ಲಿ ಮಾರ್ದವತೆ ಮೂಡಿಸಿ ಒಂದು ಸುಂದರ ತಾಜ್ ನ ಸಾಂಕೇತಿಕ ದ ಮೂಲಕ ಅನೂಹ್ಯ ಭಾವಲೋಕಕ್ಕೆ ಕರೆದೊಯ್ಯುತ್ತವೆ.ಇಂತಹ ಮೋಹಕ ಪ್ರೀತಿ ಪ್ರೇಮದ ಸುಂದರ ಅನೇಕ ಗಜಲ್ ಈ ಕೃತಿಯಲ್ಲಿವೆ.ಪ್ರೇಯಸಿಯನ್ನು ಪ್ರೀತಿಸುವಷ್ಟೆ ಗಾಢವಾಗಿ ಜಗತ್ತನ್ನು ಪ್ರೀತಿಸಬಲ್ಲ.ಅಲ್ಲಿಯ ಜನರನ್ನು ಪ್ರೀತಿಸಬಲ್ಲವರಾಗಿ ನಮಗೆ ಈ ಸಿಖಂದರ ಅಲಿಯವರು ಕಾಣುತ್ತಾರೆ.ಆ ದಿಸೆಯಲ್ಲಿ ಇವರ ಇಲ್ಲಿಯ ಗಜಲ್ ಗಳು ಸಾಕ್ಷಿ ನೀಡುತ್ತವೆ.

ಬಿತ್ತಿದ ಬೀಜ ಮೊಳಕೆಯೊಡೆಯಲಿಲ್ಲ
ಕಟ್ಟಿರುವ ಕನಸು ಕಂಗೊಳಿಸಲಿಲ್ಲ (ಗ-೪೫)

ಇದು ಕವಿಯೊಬ್ಬನಿಗಿರುವ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.ಆತನ ಕನಸುಗಳು ಅಪಾರ. ಕವಿಯಾದವನ ದೃಷ್ಟಿಕೋನವೇ ಬೇರೆ.ಆತ ಸರ್ವ ಜನಾಂಗದ ಶಾಂತಿಯ ತೋಟದಲಿ ಗುಲಾಬಿ ಅರಸುವವನು, ಅರಳಿಸುವವನು ಆಗಿರುತ್ತಾನೆ. ಆಗಿರಬೇಕು ಸಹ. ಸುಖಿ ಸಮಾಜದ ಕನಸು ಕಾಣುವವನು,ಸಕಲ ಜೀವಾತ್ಮರಿಗೆ ಲೇಸ ಬಯಸುವವನು ಆಗಿರುತ್ತಾನೆ. ಆಗಿರಬೇಕು ಸಹ.ಅಂತಹ ಕನಸು ಈಡೇರದೇ ಹೋದಾಗ ಆ ಕವಿಯ ಕೊರಗು ಏಕಾಂತದ ಚಿಂತನೆಯಿಂದ ಲೋಕಾಂತವಾಗುತ್ತದೆ.ಈ ಸಂಕಲನ ಅಂತಹ ಏಕಾಂತದ ಚಿಂತನೆಗಳು ಲೋಕಾಂತವಾಗಿ ಓದುಗರೆದೆಯಲ್ಲಿ ಹೊಸಬೆಳಕಿನ ಆಶಯದ ಬೀಜ ಬಿತ್ತುತ್ತವೆ.ಇಂತಹ ತಮ್ಮೊಳಗಿನ ಬೆಳಕಿನ ಬೀಜ ಬಿತ್ತಿ ಫಸಲಿಗಾಗಿ ಅಲಿಯವರು ಆಶಾವಾದ ಹೊಂದಿದ್ದಾರೆ. ಅವರಿಗೂ ಅವರ ಕನಸಿಗೂ ಶುಭ ಕೋರುತ್ತಾ ಮುಗಿಸುವೆ.ನಮಸ್ಕಾರ.


  • ಸಿದ್ಧರಾಮ ಹೊನ್ಕಲ್ (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಶಹಾಪುರ)

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW