ಕುಂದಾಪುರದ ಸಾಹಸಿ ಸೋಮಶೇಖರ್ ಕಥೆ!

ಹೋಟೆಲು ಸಪ್ಲಯರ್ ಆಗಿ ಕೆಲಸ ಮಾಡುತ್ತಿದ್ದಾತ ‘ಪ್ರಸಿದ್ಧಿ’ ಎಂಬ ಹೋಟೆಲ್ ಸಾಮ್ರಾಜ್ಯವನ್ನೇ ಕಟ್ಟಿ ಪ್ರಸಿದ್ಧಿಗೆ ಬಂದ ಕುಂದಾಪುರದ ಸಾಹಸಿ ಸೋಮಶೇಖರ್ ಕಥೆ! – ಗಣೇಶ್ ಕಾಸರಗೋಡು, ತಪ್ಪದೆ ಮುಂದೆ ಓದಿ…

‘ರಾಜಕುಮಾರ್ ಅವರಿಗೆ ನಮ್ಮ ಹೋಟೆಲಿನ ಇಡ್ಲಿ ಸಾಂಬಾರ್ ಅಂದ್ರೆ ಪಂಚಪ್ರಾಣ. ನಾನು ವಾರಕ್ಕೊಮ್ಮೆಯಾದರೂ ಬಿಸಿಬಿಸಿ ಇಡ್ಲಿ ಸಾಂಬಾರನ್ನು ಡಬ್ಬಾದಲ್ಲಿ ಹಾಕಿಕೊಂಡು ಸದಾಶಿವನಗರದ ಅವರ ಮನೆಗೆ ಹೋಗಿ ಕೊಡುತ್ತಿದ್ದೆ. ನನ್ನ ಮುಂದೆಯೇ ಅವರು ಡಬ್ಬಾದೊಳಗಿನ ಇಡ್ಲಿಯನ್ನು ತಟ್ಟೆಗೆ ಹಾಕಿ ಅದರ ಮೇಲೆ ಸಾಂಬಾರ್ ಸುರಿದು ತಿನ್ನುತ್ತಿದ್ದ ದೃಶ್ಯ ಈಗಲೂ ಕಣ್ಣ ಮುಂದಿದೆ…’ – ಎಂದು ಹೇಳಿ ತಾವು ಕುಳಿತಿರುವ ಕುರ್ಚಿಯ ಹಿಂದಿನ ಗೋಡೆ ಮೇಲೆ ತೂಗು ಹಾಕಿರುವ ತಮ್ಮ ಅಭಿಮಾನದ ಡಾ|ರಾಜಕುಮಾರ್ ಅವರ ಫೋಟೋವನ್ನು ದಿಟ್ಟಿಸಿ ನೋಡಿದರು…

ಅದು ಸಾರಕ್ಕಿಯ ಇಂದಿರಾಗಾಂಧಿ ಸರ್ಕಲ್ ಬಳಿಯಿರುವ ‘ಪ್ರಸಿದ್ಧಿ ಫುಡ್ ಕಾರ್ನರ್’ ಹೋಟೆಲಿನ ಒಳ ಕೋಣೆಯ ಆಫೀಸು. ಅಲ್ಲಿ ಕೂತು ಹೋಟೆಲ್ ಓನರ್ ಸೋಮಶೇಖರ್ ಕುಲಾಲ್ ಫ್ಲಾಶ್ ಬ್ಯಾಕ್’ಗೆ ಜಾರಿದ್ದರು.

ಹೆಚ್ಚೇನೂ ಎತ್ತರವಿಲ್ಲದ ಮೈಕಟ್ಟು. ಆದರೆ ಹೋಟೆಲು ಅನುಭವದಲ್ಲಿ ಬಹಳ ಎತ್ತರಕ್ಕೆ ಏರಿದವರು. ನಲವತ್ತು ವರ್ಷಗಳ ಹಿಂದೆ ಕುಂದಾಪುರ ಬಿಟ್ಟು ಈ ಕಾಂಕ್ರೀಟ್ ಕಾಡಿಗೆ ಕಾಲಿಟ್ಟಾಗ ಕೈಲಿ ಚಿಕ್ಕಾಸೂ ಇರಲಿಲ್ಲ. ಹೊಟ್ಟೆಪಾಡಿಗಾಗಿ ಅದ್ಯಾವುದೋ ಹೋಟೆಲಿನಲ್ಲಿ ಸಪ್ಲಯರ್ ಆಗಿ ಕೆಲಸ ಮಾಡಿದ್ದೆಷ್ಟೋ ಅಷ್ಟೇ ಅನುಭವ. ಆದರೆ ಅಲ್ಲಿ ಕಲಿತದ್ದು ದೊಡ್ಡ ಪಾಠ. ಅದೊಂದು ಯುನಿವರ್ಸಿಟಿಯ ವ್ಯಾಸಂಗದಂತೆ! ಯಾವುದೋ ಲೆಕ್ಕಾಚಾರ ಹಾಕಿ ಸಾಲ ಸೋಲ ಮಾಡಿ ಈಗಿರುವ ಸೈಟನ್ನು 75 ಲಕ್ಷಕ್ಕೆ ಕೊಂಡಾಗ ಇದೊಂದು ದೊಡ್ಡ ಉದ್ಯಮವಾಗಿ ಇಷ್ಟೊಂದು ಬೆಳೆಯುತ್ತದೆ ಎನ್ನುವ ಕನಸನ್ನೂ ಕಂಡವರಲ್ಲ ಸೋಮಶೇಖರ್ ಸರ್. ಆದರೆ ಭಗವಂತನ ಆಶೀರ್ವಾದವಿತ್ತು.

ಒಂದು ಪುಟ್ಟ ಹೋಟೆಲಿನಿಂದ ಬದುಕು ಆರಂಭವಾಯಿತು. 25 ವರ್ಷಗಳ ಹಿಂದೆ ಕಟ್ಟಿದ ಈ ಹೋಟೆಲು ಎರಡು ವರ್ಷಗಳ ಹಿಂದೆ ರಿನ್ನೋವೇಟ್ ಆಗಿ ಇಷ್ಟು ದೊಡ್ಡದಾಗಿ ಬೆಳೆದು ನಿಂತಿದೆ. ನೂರಾರು ಮಂದಿ ಕೆಲಸಗಾರರಿಗೆ ಉದ್ಯೋಗ ನೀಡಿದೆ. ಲಕ್ಷಾಂತರ ಕಸ್ಟಮರ್ ಹೊಟ್ಟೆ ತುಂಬಿಸಿದೆ. ಹಾಗೆಂದು ಇದು ತೀರಾ ಲಾಭದಾಯಕ ವ್ಯವಹಾರವೆಂದು ಜಂಬ ಕೊಚ್ಚಿಕೊಳ್ಳಲು ಸೋಮಶೇಖರ್ ಸರ್ ಸಿದ್ಧರಿಲ್ಲ. ಕಾರ್ಮಿಕರಿಗೆ ಕೊಟ್ಟ ಉದ್ಯೋಗ ಮತ್ತು ಕಸ್ಟಮರ್’ಗೆ ಕೊಟ್ಟ ತೃಪ್ತಿ ಇವರ ಲಾಭದ ಮೊತ್ತದಲ್ಲಿ ಜಮೆಯಾಗಿದೆ! ಇಂಥಾ ಸೋಮಶೇಖರ್ ಕುಲಾಲ್ ಅವರದ್ದು ಪರಿಪೂರ್ಣ ಸಂತೃಪ್ತ ಬದುಕು…

ಕೊನೆಯಲ್ಲಿ ಇವರು ಹೇಳುವುದಿಷ್ಟು : ‘ನಮ್ಮ ಹೋಟೆಲನ್ನು ಹೊಗಳುವ ಭರದಲ್ಲಿ ಇನ್ನೊಂದು ಹೋಟೆಲನ್ನು ತೆಗಳಬಾರದು ಎನ್ನುವುದು ನನ್ನ ಬದುಕಿನ ಸೂತ್ರ.

ನಿಮಗೊಂದು ಗುಟ್ಟು ಹೇಳುತ್ತೇನೆ : ನನ್ಗೆ ‘ತಾಜಾ ತಿಂಡಿ’ ಹೋಟೆಲಿನ ಇಡ್ಲಿ ಅಂದ್ರೆ ತುಂಬಾ ಇಷ್ಟ. ಇಡ್ಲಿ ತಿನ್ನಬೇಕು ಎಂದೆನಿಸಿದಾಗ ಅಲ್ಲಿಗೇ ಹೋಗುತ್ತೇನೆ ಅಥವಾ ಪಾರ್ಸೆಲ್ ಕಟ್ಟಿಸಿಕೊಂಡು ಬರುತ್ತೇನೆ. ಹಾಗೆಂದು ನಮ್ಮ ಹೋಟೆಲಿನ ಇಡ್ಲಿ ಕೆಟ್ಟದ್ದಾಗಿದೆ ಎಂದು ದೂರಲಾರೆ. ‘ತಾಜಾ ತಿಂಡಿ’ ಹೋಟೆಲಿನ ಇಡ್ಲಿಗೆ ತನ್ನದೇ ಅದೊಂದು ಟೇಸ್ಟಿದೆ. ಇಂಥಾ ಟೇಸ್ಟನ್ನು ಬೆಂಗಳೂರಿನ ಯಾವ ಹೊಟೇಲಿನಲ್ಲೂ ನಾನು ಕಂಡಿಲ್ಲ…’ – ಎಂದು ಹೇಳುವ ಈ ಹೃದಯವಂತ ಸೋಮಶೇಖರ್ ಸರ್ ಅವರ ‘ಪ್ರಸಿದ್ಧಿ ಫುಡ್ ಕಾರ್ನರ್’ಗೆ ನೀವು ಒಮ್ಮೆಯಾದರೂ ಭೇಟಿ ಕೊಡಲೇ ಬೇಕು…ಅಲ್ಲಿನ ರುಚಿಕಟ್ಟಾದ ವೈವಿಧ್ಯಮಯ ತಿಂಡಿ ತಿಂದು, ನೌಕರರ ಪ್ರೀತಿ ಮತ್ತು ಗೌರವವನ್ನು ಅನುಭವಿಸಲೇ ಬೇಕು…


  • ಗಣೇಶ್ ಕಾಸರಗೋಡು – ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading