ಎಲ್ಲವನ್ನೂ ಬಂಧಿಸಿ ಬಯಲು ಮಾಡುವ ಸೊನ್ನೆ ಪ್ರೀತಿಯ ಸೊನ್ನೆ ಎಷ್ಟು ದೊಡ್ಡದು….ಯುವ ಕವಿ ವಿಶಾಲ್ ಮ್ಯಾಸರ್ ಅವರ ಸುಂದರ ಕವನದ ಸಾಲುಗಳನ್ನು ತಪ್ಪದೆ ಓದಿ…
“ಏನಾ ಜಗತ್ತು ಎಷ್ಟದೇ….?”
ಆಕಿ- ಕಿವಿಯಲ್ಲಿ ಉಸುರಿದಳು
ಸೊನ್ನೆಯಂತ ಕಣ್ಣಿನಷ್ಟು ಎಂದೆ.
ಆಕಿ- ನೀನು ಎಂದಳು
ಅದರೊಳಗಿನ ಚುಕ್ಕಿ ಎಂದೆ
ಹೌದಲ್ಲ ಆ ಚುಕ್ಕಿಯ ಬೆಳಕಲ್ಲಿ ನಾನು
ಮತ್ತು ನೀನು ಎಂದಳಾಕೆ.
ಹೌದು ಎಲ್ಲವನ್ನೂ ಬಂಧಿಸಿ ಬಯಲು ಮಾಡುವ ಸೊನ್ನೆ ಪ್ರೀತಿಯ ಸೊನ್ನೆ ಎಷ್ಟು ದೊಡ್ಡದು.
ಆಗವಳು ಸೊನ್ನೆಯೊಂದಿಗೆ ಹಾಡಿದಳು ಎದೆಗೆ ಬಿಟ್ಟ ಬೇರಂತೆ.
ಬೇರು ಎದೆಯ ಆಳ ಸೇರಿತು ಎಲೆ ಬಿಟ್ಟಿತು ಹೂವಾಯಿತು, ಕಾಯಿಯ ಆಕಾರ ಮತ್ತು ಹಣ್ಣಿನ ಸಾಕ್ಷಾತ್ಕಾರ
ಹಣ್ಣು ಮತ್ತದೇ ಬೀಜ ಸೊನ್ನೆಯಂತ ಬೀಜ
ಮರವ ಅದುಮಿಟ್ಟುಕೊಂಡ ಬೀಜ
ಹಾಡು ಹಾಡು ಜೀವರಸದ ಹಾಡು
ಬದುಕು ಹೆತ್ತ ಕಾರುಣ್ಯದ ಪಾಡು
- ವಿಶಾಲ್ ಮ್ಯಾಸರ್ – ವಿಶಾಲ್ ಮ್ಯಾಸರ್ ಮೂಲತಃ ಹೊಸಪೇಟೆಯವರು ಪ್ರಸ್ತುತ ವಿಜಯನಗರ ಮಹಾವಿದ್ಯಾಲಯ ಹೊಸಪೇಟೆಯಲ್ಲಿ ಬಿ.ಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಾರೆ “ಬಟ್ಟೆಗಂಟಿದ ಬೆಂಕಿ” ಇವರ ಪ್ರಕಟಿತ ಕವನ ಸಂಕಲನ.
