ಕವಿಯತ್ರಿ ಕೆ.ಎನ್.ಲಾವಣ್ಯಪ್ರಭಾ ಅವರ ಮೂರು ಕವನ ಸಂಕಲನದ ಕುರಿತು ಪ್ರೇಮ ಕವಿ ಡಾ. ಲಕ್ಷ್ಮಣ ಕೌಂಟೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಪುಸ್ತಕಗಳು : ನದಿ ಧ್ಯಾನದಲ್ಲಿದೆ/ ಸ್ಪರ್ಶ ಶಿಲೆ/
ಲೇಖಕರು : ಕೆ.ಎನ್. ಲಾವಣ್ಯ ಪ್ರಭಾ
ಪ್ರಕಾಶಕರು : ಭೂಮಿಕಾ ಪ್ರಕಾಶನ
ಪುಟ : ೭೪
ಬೆಲೆ : 70.೦೦
ಖರೀದಿಗಾಗಿ : 9480663964/9243501563
ಕೆ.ಎನ್.ಲಾವಣ್ಯಪ್ರಭಾ ಅವರು ಈಚೆಗೆ ತಾವು ರಚಿಸಿದ ನಾಲ್ಕು ಕವನ ಸಂಕಲನಗಳಲ್ಲಿ ಮೂರನ್ನು ನನ್ನ ಓದಿಗಾಗಿ ಕಳುಹಿಸಿಕೊಟ್ಟಿದ್ದಾರೆ. ಅವರ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಋಣಿಯಾಗಿರುವೆ. ನನ್ನ ಎರಡೂ ಕಣ್ಣುಗಳು ಈಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದುದು ಅವರಿಗೂ ತಿಳಿದಿತ್ತು. ‘ನನ್ನ ಕವನ ಸಂಕಲನಗಳ ಕುರಿತು ತಾವು ಎರಡು ಮಾತುಗಳನ್ನು ಸಾಧ್ಯವಾದರೆ ಬರೆಯಿರಿ, ಸಾಧ್ಯವಾಗದಿದ್ದರೂ ಸರಿಯೇ’ ಎಂದಿದ್ದರು. ನಾನು ‘ಬರೆಯುತ್ತೇನೆ’ ಎಂದಿದ್ದೆ. ಅಲ್ಪ ವಿಳಂಬವಾದರೂ ಸರಿಯೇ, ಅವರ ಕೃತಿಯ ಕುರಿತು ಕೆಲವು ಮಾತುಗಳನ್ನು ಇಲ್ಲಿ ಬರೆಯುತ್ತಿರುವೆ.
ಮೂಲತಃ ನಾನು ಗದ್ಯ ಪ್ರಕಾರದ ಲೇಖಕ. ಈ ಮೊಬೈಲ್ ಕೈಗೆ ಬಂದ ನಂತರ ಫೇಸ್ ಬುಕ್ ನಲ್ಲಿ ನಿತ್ಯ ಹಲವರು ಬರೆಯುತ್ತಿದ್ದ ಕವಿತೆಗಳನ್ನು ಓದಿ ನಾನೂ ಕವನಗಳನ್ನು ಬರೆಯಲು ಆರಂಭಿಸಿದೆ. ಅವುಗಳ ಸಂಖ್ಯೆಯೂ ನಿರಂತರ ವೃದ್ಧಿಯಾಗುತ್ತ ಹತ್ತಾರು ಸಂಕಲನ ರೂಪ ಧಾರಣ ಮಾಡಿದ್ದರೂ; ನನ್ನ ಒಂದು ಕವನ ಸಂಕಲನಕ್ಕೆ ಮಾತ್ರ ಪ್ರಕಟನಾ ಭಾಗ್ಯ ದೊರೆತಿದೆ.
ಫೇಸ್ ಬುಕ್ ಸಂಪರ್ಕಕ್ಕೆ ಬಂದ ಮೇಲೆ ಕೆ.ಎನ್.ಲಾವಣ್ಯಪ್ರಭಾ ಅವರ ಕವಿತೆಗಳ ಪರಿಚಯ ನನಗಾಯಿತು, ಅವರ ಅನುಪಮ ಸ್ನೇಹತ್ವವೂ ನನಗೆ ದೊರಕಿತು. ಅದು ನನ್ನ ಭಾಗ್ಯವೂ ಅಹುದು.

ಕಾವ್ಯ, ಅದರಲ್ಲೂ ಕವಿತೆಗಳು ಕೇವಲ ಓದಿಗೆ ಅವುಗಳ ರಸಾನುಭವ ದಕ್ಕುವುದಿಲ್ಲ. ಕವಿತೆ ಸಾಮಾನ್ಯ ಓದುಗನಿಗೆ ಅಲ್ಲ. ಯಾರಲ್ಲಿ ಕವಿತ್ವ ರಚನೆಯ ಅಥವಾ ಅದರ ನಾದ ಮಾಧುರ್ಯ, ಒಳ ಹೂರಣ ಅರ್ಥೈಸಿಕೊಳ್ಳುವ ಸಾಮರ್ಥ್ಯವಿದೆಯೋ, ಅಂಥವರು ಮಾತ್ರ ಕವಿತೆಯ ಹಲವು ಒಳಾರ್ಥಗಳನ್ನು ಗ್ರಹಿಸಲು ಸಮರ್ಥರಾಗಿರುತ್ತಾರೆ. ಅದರಲ್ಲೂ ಪ್ರತಿಮಾತ್ಮಕ ಕವಿತೆಗಳು ಸುಮ್ಮನೆ ಒಂದು ಓದಿಗೆ ಅರ್ಥವಾಗುವುದಿಲ್ಲ. ಅದರ ಪ್ರತಿ ಓದಿನಲ್ಲೂ ಹೊಸ ಅರ್ಥಗಳೇ ಸ್ಫುರಿಸುತ್ತವೆ. ಸಾಮಾನ್ಯ ಕವಿತೆಗಳು ಒಂದೇ ಓದಿಗೆ ಅರ್ಥವಾಗಬಹುದು. ನಾನು ಸಾಮಾನ್ಯ ಓದುಗ. ಅಂತೆಯೇ ಲಾವಣ್ಯಪ್ರಭಾ ಅವರ ಪ್ರತಿಮಾತ್ಮಕ ಕವಿತೆಗಳ ಒಳಾರ್ಥ ಗ್ರಹಿಕೆಯಲ್ಲಿ ನನ್ನ ದೌರ್ಬಲ್ಯ ವ್ಯಕ್ತವಾಗಿರಬಹುದೇನೋ..!!
೨೦೦೪ರಲ್ಲಿ “ಹುಟ್ಟಲಿರುವ ನಾಳೆಗಾಗಿ”; ೨೦೧೦ರಲ್ಲಿ “ಗೋಡೆ ಗಿಡ”; ೨೦೧೩ರಲ್ಲಿ “ನದಿ ಧ್ಯಾನದಲ್ಲಿದೆ” ಮತ್ತು ೨೦೨೨ ರಲ್ಲಿ “ಸ್ಪರ್ಶ ಶಿಲೆ” ಕವನ ಸಂಕಲಗಳನ್ನು ಅವರು ಹೊರತಂದಿದ್ದಾರೆ. ಲಾವಣ್ಯಪ್ರಭಾ ರಚಿಸಿದ ಬಹುತೇಕ ಎಲ್ಲ ಕವನಗಳು ನಾಡಿನ ಪ್ರಮುಖ ದಿನಪತ್ರಿಕೆಗಳ ಪುರವಣಿಗಳಲ್ಲಿ, ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಮತ್ತು ಆ ಮೂಲಕ ಅವರು ಓದುಗರ ಮನಕ್ಕೆ ತಟ್ಟಿ ಅವರಲ್ಲಿ ಚಿರ ಪರಿಚಿತರಾಗಿ ಉಳಿದಿದ್ದಾರೆ. ಹಾಗೆಯೇ ಅವರನ್ನು ಸಾಹಿತ್ಯ ಕ್ಷೇತ್ರದ ದಿಗ್ಗಜರು ಮತ್ತು ವಿವಿಧ ಅಕಾಡೆಮಿಯವರು ಗುರುತಿಸಿ ಅವರ ವಿದ್ವತ್ ಸೇವೆಯನ್ನು ಬಳಸಿಕೊಂಡು ಲಾವಣ್ಯಪ್ರಭಾ ಅವರಿಗೆ ಗೌರವಾದರಗಳನ್ನು, ಸ್ಥಾನ-ಮಾನಾದಿಗಳನ್ನು ನೀಡಿದ್ದಾರೆ.

ನಲವತ್ತು ಕವಿತೆಗಳನ್ನು ಹೊಂದಿದ “ಗೋಡೆ ಗಿಡ” ಕವನ ಸಂಕಲನದಲ್ಲಿ ಸ್ತ್ರೀತ್ವವನ್ನು ಸ್ಥಾಪಿಸುವ ಹಂಬಲ ಉಳ್ಳ ಮತ್ತು ಮನೋಲೋಕದ ನವಿರು, ಸೂಕ್ಷ್ಮಗಳನ್ನು ಕೊಂಚ ಅಳುಕಿನಿಂದಲೇ ಚಿತ್ರಿಸುವ ಯತ್ನವನ್ನು ಅವರು ಮಾಡಿದ್ದಾರೆ. ಹಲವು ಬಗೆಯ ಸಂಬಂಧಗಳನ್ನು, ಬದುಕಿನ ದಿನ ನಿತ್ಯದ ಚಿತ್ರಗಳನ್ನು ಬಳಸಿಕೊಂಡು ಅವರು ಅರ್ಥಪೂರ್ಣವಾದ ಸುಂದರ ಕವಿತೆಗಳನ್ನು ರಚಿಸಿದ್ದಾರೆ.
“ನದಿ ಧ್ಯಾನದಲ್ಲಿದೆ” ಸಂಕಲನವು ೭೨ ಕವಿತೆಗಳನ್ನು ಹೊಂದಿದೆ. ಇಲ್ಲಿನ ಕವಿತೆಗಳು ಬಿಡಿಬಿಡಿ ಕವಿತೆಗಳ ಸಂಗ್ರಹವೆಂದು ತೋರುವುದಿಲ್ಲ. ಒಂದು ಸ್ಪಂದನಶೀಲ ಆತ್ಮದ ಒಳನುಡಿಗಳು ವಿವಿಧ ಚಂದಗಳಲ್ಲಿ, ಹಲವು ಆಕಾರಗಳಲ್ಲಿ ಕವಿತೆಯ ರೂಪ ತಾಳಿವೆ ಎಂದು ಹೇಳಬಹುದು. ಇಲ್ಲಿನ ಕವಿತೆಗಳು ಬಹಿರಂಗವನ್ನು ಧ್ಯಾನಿಸುತ್ತಲೇ ಅಂತರಂಗದಲ್ಲಿ ಮುಳುಗಿ ಹೋಗುವ ಶಬ್ದಾತೀತ ತುಡಿತಗಳಾಗಿವೆ ಎಂದೂ ಹೇಳಬಹುದಾಗಿದೆ.

“ಸ್ಪರ್ಶ ಶಿಲೆ” ಅವರ ಹೊಸ ಕವನ ಸಂಕಲನ. ಈಚೆಗೆ ಪ್ರಕಾಶನಗೊಂಡಿದ್ದು. ತನ್ನೊಡಲಲ್ಲಿ ಇದು ೩೬ ಕವಿತೆಗಳನ್ನು ಹೊಂದಿದೆ. ವಸ್ತು ವೈವಿಧ್ಯತೆ ಈ ಸಂಗ್ರಹದಲ್ಲಿ ಎದ್ದು ಕಾಣುವ ಅಂಶವಾಗಿದೆ. ತಮ್ಮ ವಯಕ್ತಿಕ ಅನುಭವಗಳನ್ನು ತನ್ಮಯತೆಯಿಂದ ನೋಡುತ್ತ ಅವನ್ನು ಕವಿತೆಗಳ ಮೂಲಕ ಸಾರ್ವತ್ರಿಕರಣಗೊಳಿಸುವ ಬಗೆಯನ್ನು ಇಲ್ಲಿ ಕಾಣಬಹುದಾಗಿದೆ.
ಲಾವಣ್ಯಪ್ರಭಾ ಅವರಿಗೆ ಕಾವ್ಯ ನಿರ್ಮಿತಿಯಲ್ಲಿರುವ ಕಾಳಜಿ, ಕವಿತೆಗಳ ನಿರ್ಮಾಣಕ್ಕೆ ಬಳಸುವ ಭಾಷಾಶೈಲಿಯಲ್ಲಿ ಎಚ್ಚರಿಕೆ ಇದೆ. ಅವರು ಲಾಲಿತ್ಯಪೂರ್ಣ ಬರಹದ ಮೂಲಕ ತಮ್ಮೊಳಗಿನ ಭಾವಗಳಿಗೆ ಕವಿತೆಯ ರೂಪವನ್ನು ಕೊಡಬಲ್ಲರು ಎನ್ನುವುದಕ್ಕೆ ಈ ಎಲ್ಲ ಕವನ ಸಂಕಲನಗಳು ಸಾಕ್ಷಿಯಾಗಿವೆ. ಅವರಲ್ಲಿ ಅಧ್ಯಯನಶೀಲತೆ ಇದೆ, ಪ್ರೌಢಿಮೆ ಇದೆ, ಜೀವನಾನುಭವದ ಸಮೃದ್ಧಿ ಇದೆ. ಲಾವಣ್ಯಪ್ರಭಾ ಅವರಲ್ಲಿ ಮಾನವೀಯತೆಯ ಕೋಮಲ ತುಡಿತಗಳಿವೆ. ಹಾಗೆಯೇ ಅವರು ಅಪೂರ್ವ ಗಾಯಕಿಯೂ ಆಗಿದ್ದಾರೆ. ಇನ್ನು ಮುಂದೆಯೂ ಅವರ ಲೇಖನಿಯಿಂದ ಈ ತರಹದ ಸುಂದರ ಕವಿತೆಗಳು, ಇತರ ಸಾಹಿತ್ಯದ ಬಗೆಗಳು ಸೃಷ್ಟಿಗೊಳ್ಳುವುದು ಸಾಧ್ಯವಾಗಲಿ ಎಂದು ನಾನು ತುಂಬು ಹೃದಯದಿಂದ ಆಶಿಸುತ್ತೇನೆ.
- ಡಾ. ಲಕ್ಷ್ಮಣ ಕೌಂಟೆ – ಕವಿ, ಲೇಖಕರು, ಉಪನ್ಯಾಸಕರು, ಕಲಬುರಗಿ.
