‘ತಾಳಿದವನು ಬೆಳೆದಾನು’

ಇನ್ಫೋಸಿಸ್ ಪ್ರಾರಂಭಿಸಿದಾಗ ನಾರಾಯಣ ಮೂರ್ತಿರವರಿಗೆ ಬೆನ್ನೆಲುಬಾಗಿ ನಿಂತವರು ಅವರ ಪತ್ನಿ ಶ್ರೀಮತಿ ಸುಧಾ ಮೂರ್ತಿರವರು. ವರ್ಷದ 365 ದಿನ, ವಾರದ 7 ದಿನಗಳ ಕಾಲ ನಾರಾಯಣ ಮೂರ್ತಿಯವರು ಶ್ರಮವಹಿಸುತ್ತಿದ್ದರೆ, ಸುಧಮ್ಮನವರು ತಮ್ಮ ಎರಡೂ ಮಕ್ಕಳನ್ನು ಬೆಳೆಸುವಲ್ಲಿ ನಿರತರಾದರು ಡಾ. ರಾಜಶೇಖರ ನಾಗೂರ ಅವರ ಇಂದಿನ ಅಂಕಣದಲ್ಲಿ ಸುಧಾಮೂರ್ತಿ ಅವರ ಜೀವನದ ಸ್ಫೂರ್ತಿಯನ್ನು ತಪ್ಪದೆ ಮುಂದೆ ಓದಿ…

‘ತಾಳಿದವನು ಬಾಳಿಯಾನು’ ಎಂಬುದು ಪ್ರಸಿದ್ಧವಾದ ಗಾದೆ ಮಾತು. ಇದನ್ನೇ ನಾನು ಸ್ವಲ್ಪ ಬದಲಾಯಿಸಿ ನನ್ನದೇ ದೃಷ್ಟಿಕೋನದಲ್ಲಿ ಹೇಳುವುದಾದರೆ ‘ತಾಳಿದವನು ಬೆಳೆದಾನು’ ಎಂದು. ಈ ಉಕ್ತಿಗೆ ಜೀವಂತ ನಿದರ್ಶನವೆಂದರೆ ಅದು ಇನ್ಫೋಸಿಸ್ ಕಂಪನಿ ಮತ್ತು ಅದರ ಹಿಂದಿರುವ ವ್ಯಕ್ತಿಗಳು.

ಶ್ರೀ ನಾರಾಯಣ ಮೂರ್ತಿರವರು ತಮ್ಮ ಪತ್ನಿ ಶ್ರೀಮತಿ ಸುಧಾ ಮೂರ್ತಿರವರು ಹೊಂದಿಸಿ ಕೊಟ್ಟ, ಹತ್ತು ಸಾವಿರ ರೂಪಾಯಿಗಳಿಂದ 1981 ರಲ್ಲಿ ಪ್ರಾರಂಭಿಸಿದ ಇನ್ಫೋಸಿಸ್ ಎಂಬ ಕಂಪನಿ ಭಾರತೀಯ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಯಾಗಿದ್ದು ಇಂದು ಅಂದಾಜು ಮಾರುಕಟ್ಟೆ ಬಂಡವಾಳ 6,86,193 ಕೋಟಿ ರೂಪಾಯಿಗಳನ್ನು ಹೊಂದಿದೆ.

ಈ ಬೃಹತ್ ಬೆಳವಣಿಗೆ ಒಂದೇ ರಾತ್ರಿಯಲ್ಲಿ ಆಗಿದ್ದಲ್ಲ. ಬೆಟ್ಟದಷ್ಟು ಪರಿಶ್ರಮ, ಒಳ್ಳೆಯ ಉದ್ದೇಶ ಮತ್ತು ಶಬರಿಯಂತಹ ತಾಳ್ಮೆಯಿಂದ ಸಾಧ್ಯವಾಗಿದೆ. ಪರಿಶ್ರಮವಿದ್ದೂ ತಾಳ್ಮೆ ಮತ್ತು ಒಳ ಉದ್ದೇಶ ಸರಿ ಇರದಿದ್ದರೆ ಕಾಲ ಚಕ್ರದಲ್ಲಿ ಬಹಳ ದಿನ, ವ್ಯಕ್ತಿಯಾಗಲಿ ಉದ್ಯಮವಾಗಲಿ ನಿಲ್ಲಲು ಸಾಧ್ಯವಿಲ್ಲ.

ಫೋಟೋ ಕೃಪೆ : google

ಇನ್ಫೋಸಿಸ್ ಪ್ರಾರಂಭಿಸಿದಾಗ ನಾರಾಯಣ ಮೂರ್ತಿರವರಿಗೆ ಬೆನ್ನೆಲುಬಾಗಿ ನಿಂತವರು ಅವರ ಪತ್ನಿ ಶ್ರೀಮತಿ ಸುಧಾ ಮೂರ್ತಿರವರು. ಕಂಪನಿ ಪ್ರಾರಂಭವಾದ ನಂತರ ಮುಂದಿನ 30 ವರ್ಷಗಳ ಕಾಲ ಯಾವ ‘ಹಾಲಿಡೇ’ ಗಳಿಗೂ ಅವರು ಎಲ್ಲಿಯೂ ತೆರಳಲಿಲ್ಲ. ವರ್ಷದ 365 ದಿನ, ವಾರದ 7 ದಿನಗಳ ಕಾಲ ನಾರಾಯಣ ಮೂರ್ತಿಯವರು ಶ್ರಮವಹಿಸುತ್ತಿದ್ದರೆ, ಸುಧಮ್ಮನವರು ತಮ್ಮ ಎರಡೂ ಮಕ್ಕಳನ್ನು ಬೆಳೆಸುವಲ್ಲಿ ನಿರತರಾದರು ಮತ್ತು ಕೌಟುಂಬಿಕ ಜವಾಬ್ದಾರಿಯ ಹೊರೆಯನ್ನು ಸ್ವಲ್ಪವೂ ನಾರಾಯಣ ಮೂರ್ತಿಯವರ ಕಂಪನಿಯ ಕೆಲಸದ ಮೇಲೆ ಬೀಳದಂತೆ 30 ವರ್ಷಗಳ ಕಾಲ ಯಾವ ಹಾಲಿಡೇ ಗಳಿಲ್ಲದೆ ಕಳೆದದ್ದು ಸುಲಭದ್ದಲ್ಲ.

ತನಗೋಸ್ಕರ ತನ್ನ ಗಂಡನಿಗೆ ಏನನ್ನೂ ಕೇಳದೇ, ಪೀಡಿಸದೆ, ಸತತವಾಗಿ ನೆರಳಂತೆ ನಿಂತು ಬೆನ್ನೆಲುಬಾದ ಕಾರಣ, ಇಂದು ಆ ಇನ್ಫೋಸಿಸ್ ಭಾರತದ ಎರಡನೆಯ ಅತೀ ದೊಡ್ಡ IT ಕಂಪನಿಯಾಗಿ ನಿಲ್ಲಲು ಸಾಧ್ಯವಾಗಿದ್ದು ಮತ್ತು ಭಾರತದ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಮತ್ತು ಅಮೇರಿಕಾದ ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ (NYSE) ನ ಪಟ್ಟಿಯಲ್ಲಿ ಗುರುತಿಸಿಕೊಂಡ ಕಂಪನಿಯಾಗಿದೆ.

ಒಮ್ಮೆ ಮಕ್ಕಳು, ತಮ್ಮ ಸ್ವಂತ ಕಾಲುಗಳ ಮೇಲೆ ತಾವು ತಮ್ಮನ್ನು ನಿಭಾಯಿಸಿಕೊಳ್ಳುವ ಹಂತಕ್ಕೆ ಬಂದಾದ ಮೇಲೆ ಸುಧಾ ಮೂರ್ತಿಯವರು ಆ ಮನೆಯ ಪ್ರಪಂಚದಿಂದ ಹೊರ ಜಗತ್ತಿಗೆ ಕಾಲಿಟ್ಟರು.

 

ಶ್ರಮದ ಫಲವಾಗಿ ಸಾವಿರಾರು ಕೋಟಿ ಆದಾಯ ಬರುವ ಕಂಪನಿಯಾಗಿ ಬೆಳೆದು ನಿಂತ ಮೇಲೆ ಪರೋಪಕಾರ, ಲೋಕ ಕಲ್ಯಾಣದ (Philanthropy) ಸಲುವಾಗಿ ಮನೆಯಿಂದ ಹೊರಗೆ ಕಾಲಿಟ್ಟು, ಸುನಾಮಿ, ಚಂಡಮಾರುತ, ಪ್ರವಾಹಗಳಂತಹ 14 ರಾಷ್ಟ್ರೀಯ ವಿಪತ್ತುಗಳ ನಿರ್ವಹಣೆಯಲ್ಲಿ (National Disaster managements) ಪಾಲ್ಗೊಂಡು ಗುರುತಿಸಿಕೊಂಡಿದ್ದಾರೆ.

-ಸಾಕಷ್ಟು ಸಾಮಾಜಿಕ ಅಭಿವೃದ್ಧಿಗೆ ಅವರದೇ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟಿದ್ದಾರೆ. ದೇವದಾಸಿಯಂತಹ ಅನಿಷ್ಟ ಪದ್ದತಿಯ ತೊಲಗಿಸುವಿಕೆಗಾಗಿ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಬರೆದ ‘Three Thousand Stitches’ ಎಂಬ ಪುಸ್ತಕ ಮನೆಮಾತಾಗಿದೆ.

ಫೋಟೋ ಕೃಪೆ : google

-ಅವರ ‘ಮನದ ಮಾತು’ ಎಂಬ ಪುಸ್ತಕ ನನ್ನ ಮನಸಲ್ಲಿ ಉಳಿದು ಹೋಗಿದೆ.

-ಇವರ ‘ಮಹಾ ಶ್ವೇತೆ’ ಎಂಬ ಇನ್ನೊಂದು ಪುಸ್ತಕ ನನ್ನನ್ನು ತುಂಬಾ ಕಾಡಿದ ಪುಸ್ತಕ. ಹಾಳಾಗ ಬೇಕಿದ್ದ ಒಂದು ಹೆಣ್ಣಿನ ಜೀವನವನ್ನು ಮರು ಸ್ಥಾಪಿಸಿದ ಪುಸ್ತಕವಿದು. ಮದುವೆ ನಿಶ್ಚಯವಾದ ವರ್ಷಗಳ ಮೇಲೆ ಹುಡುಗಿಯನ್ನು ಮದುವೆಯಾಗಲಾರೆ ಎಂದು ಬಿಟ್ಟುಹೋದ ಹುಡುಗನೊಬ್ಬ ಸುಧಾ ಮೂರ್ತಿರವರ ಈ ಪುಸ್ತಕವನ್ನು ಆಕಸ್ಮಿಕವಾಗಿ ಓದಿ, ತಾನು ಬಿಟ್ಟ ಹುಡುಗಿಯನ್ನು ಮತ್ತೆ ಮದುವೆಯಾದ ಸತ್ಯ ಘಟನೆಯ ಉಲ್ಲೇಖವನ್ನು ಸ್ವತಃ ಸುಧಾ ಮೂರ್ತಿಯವರು ‘ಮನದ ಮಾತು’ ಪುಸ್ತಕದಲ್ಲಿ ಉಲ್ಲೆಖಿಸಿರುತ್ತಾರೆ. ಹೀಗೆ ಸುಮಾರು ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಪ್ರಸಿದ್ಧ ಲೇಖಕಿ ಕೂಡ ಹೌದು.

-ಅಲ್ಪ ಸ್ವಲ್ಪ ಐಶ್ವರ್ಯ ಬಂದರೂ ಸಾಕು, ಮೈತುಂಬಾ ಒಡವೆಗಳನ್ನು ಹಾಕಿಕೊಂಡು ಪ್ರದರ್ಶನ ಮಾಡುವ ಇಂದಿನ ತೋರಿಕೆಯ ಜನರ ನಡುವೆ ಕೋಟಿ ಕೋಟಿ ಹಣ ಹೊಂದಿದ್ದರೂ, ಮುಖದಲ್ಲಿ ಮಂದಹಾಸ, ಹಣೆಯಲ್ಲಿ ಒಂದು ಬಿಂದಿ, ಕೊರಳಲ್ಲಿ ಸರಳವಾದ ಮಂಗಳಸೂತ್ರ ಈ ಆಭರಣಗಳನ್ನು ಮಾತ್ರ ಅವರಲ್ಲಿ ನಾವು ಕಾಣಬಹುದು. ಸರಳತೆಯ ಸಾಕಾರ ಮೂರ್ತಿ ಎಂದರೆ ತಪ್ಪಲ್ಲ.

-ಇಂತಹ ಸದ್ಗುಣಗಳನ್ನು ಹೊಂದಿದ ಇವರು 2006ರಲ್ಲಿ ‘ಪದ್ಮಶ್ರೀ’ ಮತ್ತು 2023ರಲ್ಲಿ ‘ಪದ್ಮಭೂಷಣ’ ನಾಗರೀಕ ಪುರಸ್ಕಾರಗಳನ್ನು ಪಡೆದದ್ದು ಅತ್ಯಂತ ಸೂಕ್ತವೆನಿಸಿದೆ.

– 8 ನೇ ಮಾರ್ಚ್ 2024 ರಂದು ರಾಜ್ಯ ಸಭೆಗೆ ಆಯ್ಕೆಯಾಗಿ, ನಿನ್ನೇ ಅಂದರೆ 14/03/2024 ರಂದು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ರಾಜ್ಯದಿಂದ ರಾಜ್ಯಸಭೆಗೆ ಪ್ರವೇಶ ಮಾಡಿದರು.

ತಾಳ್ಮೆಗೆ, ತ್ಯಾಗಕ್ಕೆ, ಸರಳತೆಗೆ, ವಿನಯಯತೆಗೆ ಯಾವತ್ತಿದ್ದರೂ ಬೆಲೆ ಇದೆ. ಅದು ಯಾವ ಎತ್ತರಕ್ಕಾದರೂ ಕೊಂಡೊಯ್ಯಬಲ್ಲದು ಎಂಬುದನ್ನು ನಿರೂಪಿಸಿದ ಸುಧಮ್ಮನವರಿಗೆ ಕನ್ನಡಿಗರ ಪರವಾಗಿ ಅಭಿನಂದನೆಗಳು.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading