ಪೌರ್ಣಮಿಯ ರಾತ್ರಿ ಕತ್ತಲಾಗಿತ್ತು.. ಅಜ್ಜಿ ಹೇಳಿದ ದೆವ್ವ, ಪ್ರೇತಗಳ ಮಾತುಗಳು ಪೂರ್ಣಿಗೆ ನೆನಪಾಗಲು ಆರಂಭಿಸಿತು.ಮನದಲ್ಲಿ ಆತಂಕ ಹೆಚ್ಚಾಗಿತ್ತು.. ಬೇಗ ಬೇಗ ನಡೆಯಲಾರಂಭಿಸಿದಳು..ಮುಂದೇನಾಯಿತು ತಪ್ಪದೆ ಓದಿ ಆಶ್ರಿತಾ ಕಿರಣ್ (ಆಕೆ) ಅವರ ರೋಚಕ ಕತೆ…
“ಅಯ್ಯಬ್ಬಾ.. ಅಂತೂ ಆರಾಮಾಗಿ ಊರಿಗೆ ಬಂದು ಸೇರಿದ್ವಿ. ಎಲ್ಲಾ ಜೋಡಿಸಿಕೊಂಡಾಯ್ತು..ಈ ಹೊಸ ಊರಿಗೆ ಹೊಂದಿಕೊಳ್ಳೊಕೆ ಸ್ವಲ್ಪ ಸಮಯ ಹಿಡಿಯುತ್ತೆ ಅಲ್ವಾ..”
“ಹೌದಮ್ಮ ನನಗಂತೂ ಈ ನನ್ ಮಗನಿಗೆ ಯಾಕಾದ್ರೂ ಸರ್ಕಾರಿ ಕೆಲಸ ಸಿಕ್ತು ಅಂತ ಅನ್ನಿಸಿಬಿಟ್ಟಿದೆ.. ಪ್ರತಿ ಮೂರು ವರ್ಷಕ್ಕೆ ವರ್ಗಾಯಿಸ್ತಾರೆ.. ಹೊಸ ಊರಿಗೆ ಹೊಂದಿಕೊಳ್ಳುತಿದ್ದೇವೆ ಅನ್ನೋ ಹೊತ್ತಿಗೆ ಮತ್ತೆ ಬೇರೆ ಕಡೆಗೆ ಹಾಕ್ತಾರೆ..”
“ಹೌದು ಅಮ್ಮ ನನಗೂ ಸಾಕಾಗಿದೆ ಈ ವರ್ಷ ವಾಲೆಂಟರಿ ರಿಟೈರ್ಮೆಂಟ್ ತಗೊಳೋಣ ಅಂತಿದೀನಿ.. ನಾವು ನಮ್ ತೋಟದ ಮನೆಗೆ ಹೋಗಿ ಇದ್ದು ಬಿಡೋಣ ಹೇಗೂ ಮಕ್ಕಳಿಬ್ಬರು ಹಾಸ್ಟೆಲ್ನಲ್ಲಿ ಇದ್ದು ಓದುತ್ತಿದ್ದಾರೆ..”
“ಅಲ್ಲ ಸುಜಾತ…..ಪೂರ್ಣಿ ಇವತ್ತು ಬರ್ತೇನೆ ಇಲ್ಲಿಗೆ ಅಂತ ಹೇಳಿದ್ಲಲ್ವಾ ಹೊರಟಿದ್ದಾಳ ಏನು ಅಂತ ಕೇಳು. ಇವತ್ತು ಪೌರ್ಣಮಿ. ಈ ಊರು ಬೇರೆ ಹೊಸದು. ಇಲ್ಲಿ ರೀತಿ ರಿವಾಜು ಯಾವುದು ಗೊತ್ತಿಲ್ಲ. ಭೂತ ಪ್ರೇತಗಳು ಇದ್ದಾವೋ ಏನೋ ಯಾರಿಗೆ ಗೊತ್ತು.. ಮೊದಲು ಆ ನಿನ್ ಮುದ್ದು ಮಗಳಿಗೆ ಕತ್ತಲಾಗೋದ್ರೊಳಗೆ ಮನೆಗ್ ಬರೋಕ್ ಹೇಳು..
“ಅತ್ತೆ ನೀವಿನ್ನು ಯಾವ ಕಾಲದಲ್ಲಿ ಇದ್ದೀರಿ, ಭೂತ ಪ್ರೇತ ಇರೋದಿಲ್ಲ.ಅದು ಅಲ್ಲದೆ ಪೌರ್ಣಮಿ ದಿನ ಭೂತ ಎಲ್ಲಿ ಕಾಣುತ್ತೆ…!ಪೂರ್ಣಿ ಆಗಲೇ ಹೊರಟಿದ್ದೀನಿ ಅಂತ ಹೇಳಿದ್ಲು ಸಂಜೆ ಹೊತ್ತಿಗೆ ಬರಬಹುದು.”
“ಕಾಲ ಬದಲಾದಂತೆ ನಂಬಿಕೆಗಳು ಬದಲಾಗ್ತವೆ ನನ್ ಮಾತು ನೀನೇ ಕೇಳಲ್ಲ ಅಂದಮೇಲೆ ನಿನ್ ಮಗಳು ಕೇಳ್ತಾಳ..ಪ್ರತಿ ಹುಣ್ಣಿಮೆಯಲ್ಲಿ ಚಂದ್ರ ಕಾಣ್ಣಲ್ಲ..ಕತ್ತಲಲ್ಲಿ ದುಷ್ಟಶಕ್ತಿಗಳು ಓಡಾಡುತ್ತವೆ.”
“ಅಯ್ಯೋ ಅತ್ತೆ ಬೇಜಾರು ಮಾಡ್ಕೋಬೇಡಿ ಈಗ್ಲೇ ಫೋನ್ ಮಾಡ್ತೀನಿ ಸರಿನಾ.. “ಫೋನ್ ತೆಗೆದು ಪೂರ್ಣಿಗೆ ಕರೆ ಮಾಡಿದಳು.
“ಹಲೋ ಮಗ್ಳೇ ಹೊರಟಿದ್ದೀಯ ನೀನು ಎಲ್ಲು ಸುತ್ತಕ್ಕೆ ಹೋಗಬೇಡ ಸೀದಾ ಮನೆಗೆ ಬಾ ನಿಮ್ಮಜ್ಜಿ ತುಂಬಾ ಭಯಪಟ್ಟಿದ್ದಾರೆ.. ಹೊಸ ಊರು ಹೊಸ ವಾತಾವರಣ ಭೂತ ಪ್ರೇತಗಳಿರಬಹುದು ಅಂತ ಹೇಳ್ತಾ ಇದ್ದಾರೆ”ಎಂದವಳು ಸ್ಪೀಕರ್ ಆನ್ ಮಾಡಿದಳು. ಜೋರಾಗಿ ನಗುತ್ತಿದ್ದ ಮೊಮ್ಮಗಳ ಸ್ವರವನ್ನು ಕೇಳಿ ಕೋಪಿಸಿಕೊಂಡ ಲಕ್ಷ್ಮಜ್ಜಿ
” ಏ ಕಪಿ, ನೀನ್ ನಗಾಡೋದು ನೋಡಿದ್ರೆ ನಿಂಗೆ ದೆವ್ವ ಮೆಟ್ಕೊಂಡಿದೆ ಅಂತ ಅಕ್ಕಪಕ್ಕದವರು ಅನ್ಕೋಬಹುದು .. ಸುಮ್ನೆ ಹುಡುಗಾಟ ಆಡಬೇಡ.. ಕತ್ತಲಾಗುವ ಮೊದಲು ಮನೆ ಸೇರಿಕೋ..”
“ಓಯ್, ಲಕ್ಷ್ಮಿ ಡಾರ್ಲಿಂಗ್ ಟೆನ್ಶನ್ ಮಾಡ್ಕೋಬೇಡ ನನ್ನನ್ನು ನೋಡಿ ಭೂತ ಪ್ರೇತ ಹೆದ್ರಿ ಹೋಗ್ಬೇಕು.. ನೀನು ಚಿಂತೆ ಮಾಡ್ಬೇಡ ಹೋಗಿ ಶುಂಠಿ ಟೀ ಮಾಡ್ಕೊಂಡು ಕುಡಿ”ಎಂದವಳು ಪೋನ್ ಇಟ್ಟಳು..
ಪೂರ್ಣಿ ಹುಡುಗಾಟದ ಸ್ವಭಾವದವಳು. ಆಗಲೇ ಹೊರಟಿದ್ದೇನೆ ಎಂದು ಸುಳ್ಳು ಹೇಳಿದವಳು ಸುಮಾರು ಮಧ್ಯಾಹ್ನದ 12 ಗಂಟೆಯ ವೇಳೆಗೆ ಅವಳು ಓದುತ್ತಿದ್ದ ಹಾಸ್ಟೆಲ್ನಿಂದ ಹೊರಟು ಬಸ್ಸ್ ಹತ್ತಿದಳು.ಮಧ್ಯದಲ್ಲಿ ಸಂಜೆಯ ಕಾಫಿಗೆ ಬಸ್ ನಿಲ್ಲಿಸಿದಾಗ ನೇರವಾಗಿ ಹೋಟೆಲಿಗೆ ಹೋಗದೆ ತನ್ನ ಫೋನ್ ಹಿಡಿದು ಸುತ್ತಲಿನ ಗಿಡಮರಗಳ ಜೊತೆ ಒಂದಿಷ್ಟು ರೀಲ್ಸ್ ಮಾಡುತ್ತಾ ಸಮಯ ಕಳೆದಳು. ಹೊಟ್ಟೆ ಚುರುಗುಟ್ಟಿತೆಂದು ಬಸ್ ನಿಲ್ಲಿಸಿದ ಹೋಟೆಲ್ ಗೆ ಹೋಗಿ ತನಗೆ ಬೇಕಾಗಿದ್ದನ್ನು ಆರ್ಡರ್ ಮಾಡಿ ತಿನ್ನುವ ವೇಳೆಗೆ ಬಸ್ ಹೊರಟಿತು.. ಇದಲ್ಲದಿದ್ದರೆ ಇನ್ನೊಂದು ಸಿಗುತ್ತದೆ ಎಂದು ಆ ಬಸ್ಸನ್ನು ಹೋಗಲು ಬಿಟ್ಟು ಅವಳಷ್ಟಕ್ಕೆ ಆರಾಮವಾಗಿ ತಿನ್ನುತ್ತಾ ಅದೇ ಬಸ್ ಸ್ಟಾಂಡ್ನಲ್ಲಿ ಬಸ್ಸಿಗಾಗಿ ಕಾಯಲಾರಂಭಿಸಿದಳು.. ಅಂತೂ ಮುಕ್ಕಾಲು ಗಂಟೆಯ ನಂತರ ಊರಿಗೆ ಹೋಗಲು ಇನ್ನೊಂದು ಬಸ್ ಬಂದಿತ್ತು. ಅದು ಆ ಊರಿಗೆ ಹೋಗುವ ಕಡೆಯ ಬಸ್ ಆಗಿತ್ತು .ಹತ್ತಲು ಜಾಗವಿಲ್ಲದಿದ್ದರೂ ಜಾಗ ಮಾಡಿಕೊಂಡು ಬಸ್ ಒಳಗೆ ಕಾಲಿಟ್ಟಳು.. ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಸೆರೆ ಹಿಡಿಯುವ ಮನಸಿದ್ದರು ಕೈಯಲ್ಲಿದ್ದ ಫೋನ್ ತೆಗೆಯುವಷ್ಟು ಜಾಗವಿಲ್ಲದ ಕಾರಣ ಕಣ್ಣಿನಲ್ಲಿ ಸೆರೆ ಹಿಡಿದುಕೊಳ್ಳುತ್ತಿದ್ದಳು.
ಕಂಡಕ್ಟರ್ ಕೂಗುತ್ತಿದ್ದಂತೆ ತಾನು ಇಳಿಯಬೇಕಾದ ಆ ಜಾಗ ಇದೆ ಇರಬೇಕೆಂದು ಬಸ್ ಇಳಿದಳು. ಅವಳನ್ನು ಇಳಿಸಿ ಬಸ್ ಮುಂದೆ ಹೋಯಿತು. ಸುತ್ತಲು ನೋಡಿದಳು.ಆ ಬಸ್ ಸ್ಟಾಪ್ ನ ಸುತ್ತಮುತ್ತ ಯಾರೂ ಇರಲಿಲ್ಲ. ಬಸ್ ಇಳಿಯುತ್ತಿದ್ದಂತೆ ಬಲದ ಬದಿ ದೊಡ್ಡದಾದ ಕಮಾನು ಕಾಣುತ್ತದೆ ಎಂದು ಅಮ್ಮ ಹೇಳಿದ ನೆನಪಾಯಿತು. ಆದರೆ ತಾನು ಇಳಿದ ಜಾಗದಲ್ಲಿ ಆ ಕಮಾನು ಇಲ್ಲದಿರುವುದನ್ನು ಕಂಡು ಬಹುಷಃ ನಾನು ಬೇರೆ ಜಾಗದಲ್ಲಿ ಇಳಿದಿರಬೇಕೆಂದುಕೊಂಡು ಯಾರನ್ನಾದರೂ ಕೇಳ ಬೇಕೆಂದು ಯೋಚಿಸಿ ಸುತ್ತಲು ನೋಡಿದಳು.. ಸುತ್ತಮುತ್ತ ದೈತ್ಯಾಕಾರದ ಮರಗಳು ಗಗನಕ್ಕೆ ಚುಂಬಿಸುವಂತೆ ತಲೆಯೆತ್ತಿ ನಿಂತಿದ್ದವು. “ವಾವ್ ಸೋ ಬ್ಯೂಟಿಫುಲ್….” ಎಂಬ ಉದ್ಗಾರ ತೆಗೆದು ತನ್ನ ಫೋನಿಂದ ಅವುಗಳಲ್ಲೆವನ್ನು ಸೆರೆ ಹಿಡಿದಳು.. ಮನೆಗೆ ಹೋಗುವ ದಾರಿಯನ್ನು ಹುಡುಕಲು ಆರಂಭಿಸಿದಳು. ಯಾವ ದಿಕ್ಕಿಗೆ ಹೋಗಬೇಕೆಂದು ತೋಚದೆ ಕರೆ ಮಾಡಲೆಂದು ಫೋನ್ ತೆಗೆದು ನೋಡಿದರೆ ನೆಟ್ವರ್ಕ್ ಇಲ್ಲ.. ಯಾರಾದರೂ ಬರಬಹುದೆಂದು ಅಲ್ಲಿಯೇ ಕಾಯುತ್ತಾ ಕುಳಿತಳು.. ಅದೆಷ್ಟು ಹೊತ್ತು ಕಾದರೂ ಯಾರೂ ಬರುವ ಲಕ್ಷಣ ಕಾಣಲಿಲ್ಲ.. ಇಲ್ಲಿ ಕುಳಿತು ಕಾಯುವ ಬದಲು ನಡೆದು ಹೋಗುತ್ತೇನೆ ಎಂದು ನಿರ್ಧರಿಸಿದಳು. ಬಸ್ ಹೋದ ದಾರಿಯಲ್ಲಿ ನಡೆಯಲಾರಂಭಿಸಿದಳು.. ಬಾಗಿನಲ್ಲಿದ್ದ ಚಿಪ್ಸ್ ಪ್ಯಾಕೆಟ್ ತೆಗೆದು ತಿನ್ನುತ್ತಾ ಮೊಬೈಲ್ ನಲ್ಲಿ ಸೇವ್ ಮಾಡಿದ್ದ ಹಾಡುಗಳನ್ನು ಕೇಳುತ್ತಾ ನಡೆಯಲಾರಂಭಿಸಿದಳು.. ಸಮಯ ಅದಾಗಲೇ 7 ತೋರಿಸುತ್ತಿತ್ತು.. ಆದಷ್ಟು ಬೇಗ ಮನೆಗೆ ಸೇರಬೇಕೆಂದು ಬೇಗ ಬೇಗ ಹೆಜ್ಜೆ ಹಾಕಲಾರಂಬಿಸಿದಳು.. ನಡೆದು ನಡೆದು ಸುಸ್ತಾದಳು. ಸ್ವಲ್ಪ ಹೊತ್ತು ಧಣಿವಾರಿಸಿಕೊಂಡು ಮುಂದೆ ಹೋಗುತ್ತೇನೆ ಎಂದು ಯೋಚಿಸಿ ಅಲ್ಲಿಯೇ ಸಮೀಪದಲ್ಲಿದ್ದ ಬಸ್ ಸ್ಟ್ಯಾಂಡ್ ಬಳಿ ಹೋಗಿ ಕುಳಿತಳು.. ಕತ್ತಲಾಗಿದ್ದ ಕಾರಣ ತನ್ನ ಮೊಬೈಲ್ ನಲ್ಲಿದ್ದ ಟಾರ್ಚನ್ನು ಆನ್ ಮಾಡಿದಳು. ಲೈಟ್ ಹಿಡಿದು ಸುತ್ತಲೂ ನೋಡಿದಳು. ಜೋರಾಗಿ ಕಿರುಚ್ಚಬೇಕೆನಿಸಿತು.. ತಾನಾಗ ಬಂದಿಳಿದ ಬಸ್ ಸ್ಟ್ಯಾಂಡ್ ಹೀಗೆ ಇದೆಯಲ್ಲ ಎಂದು ಒಂದು ಕ್ಷಣ ಕುಳಿತ ಜಾಗದಿಂದ ಎದ್ದು ಲೈಟ್ ಅನ್ನು ಸುತ್ತಲೂ ಹಿಡಿದಳು.. ಅದೇ ಮರಗಳು… ಅದೇ ಬಸ್ ಸ್ಟ್ಯಾಂಡ್..
ಇಷ್ಟು ಹೊತ್ತು ಧೈರ್ಯದಿಂದ ಇದ್ದ ಪೂರ್ಣಿ ಹೆದರಿಕೆಯಿಂದ ನಡುಗಲು ಆರಂಭಿಸಿದಳು.. ಸುಮಾರು ಒಂದು ಗಂಟೆ ನಡೆದು ಬಂದರು ತಾನು ಹೇಗೆ ಇನ್ನೂ ಇದೇ ಜಾಗದಲ್ಲಿ ಇದ್ದೇನೆ ಎಂಬ ಪ್ರಶ್ನೆ ಕಾಡಲಾರಂಭಿಸಿತು.. ಇನ್ನು ಇಲ್ಲಿ ಕೂರುವುದು ಸರಿಯಲ್ಲವೆಂದನಿಸಿ ಮತ್ತೆ ಅಲ್ಲಿಂದ ಹೆಜ್ಜೆ ಹಾಕಿದಳು.. ಮನದಲ್ಲಿ ಆತಂಕ ಹೆಚ್ಚಾಗಿತ್ತು.. ಬೇಗ ಬೇಗ ನಡೆಯಲಾರಂಭಿಸಿದಳು..ಸುತ್ತಲೂ ಕಗ್ಗತ್ತಲು.. ಆಗಸದಲ್ಲಿ ಮಿನುಗಬೇಕಿದ್ದ ಚಂದ್ರ ಮೋಡದ ಮರೆಯಲ್ಲಿ ಅವಿತು ಕುಳಿತಿದ್ದ..
ಪೌರ್ಣಮಿಯ ರಾತ್ರಿ ಕತ್ತಲಾಗಿತ್ತು.. ಅಜ್ಜಿ ಹೇಳಿದ ಮಾತುಗಳು ನೆನಪಾಗಲು ಆರಂಭಿಸಿತು. ಆದಷ್ಟು ಬೇಗ ಮನೆ ಸೇರಬೇಕೆಂದು ಎದುಸಿರು ಬಿಡುತ್ತಾ ನಡೆಯಲು ಆರಂಭಿಸಿದಳು.. ಹಿಂದಿರುಗಿ ನೋಡಿದಾಗ ಬಸ್ ಸ್ಟ್ಯಾಂಡ್ ಕಾಣುತ್ತಿರಲಿಲ್ಲ.. ಅಬ್ಬಾ ಬಹಳ ದೂರ ಬಂದಿದ್ದೇನೆ ಎಂದನಿಸಿ ಮೊಬೈಲ್ ನಲ್ಲಿ ಕರೆ ಮಾಡಲು ಮುಂದಾದಳು.. ಸುತ್ತಮುತ್ತಲು ಯಾರು ಇರಲಿಲ್ಲ ಫೋನ್ ಕೈಯಲ್ಲಿ ಹಿಡಿದು ಇನ್ನೇನು ಮನೆಗೆ ಕರೆ ಮಾಡಬೇಕು ಎನ್ನುವಷ್ಟರಲ್ಲಿ ಅವಳನ್ನು ಯಾರೋ ಮುಟ್ಟಿದಂತೆ ಅನಿಸಿತು. ಹಿಂತಿರುಗಿ ನೋಡಿದವಳು ಕಣ್ಣು ಮುಚ್ಚಿಕೊಂಡು ಕಿರುಚಿದಳು..ಅವಳ ಎದುರು ಸುಮಾರು 45 ರ ವಯಸ್ಸಿನ ಹೆಂಗಸು ಹಲ್ಲು ಕಿರಿದುಕೊಂಡು ನಿಂತಿದ್ದಳು..
“ಇಷ್ಟು ಹೊತ್ತಿನಲ್ಲಿ ಒಂಟಿ ಹುಡುಗಿ ಇಲ್ಲೇನು ಮಾಡ್ತಿದ್ದಿ, ಇದು ಒಂಟಿಯಾಗಿ ಓಡಾಡುವ ಸಮಯವಲ್ಲ.. ಯಾವುದು ನಿನ್ನ ಮನೆ? ನಡಿ ನಾನು ಬಿಟ್ಟು ಬರುತ್ತೇನೆ” ಎಂದವಳ ಮಾತು ಕೇಳಿ ಪೂರ್ಣಿಗೆ ಸ್ವರವೇ ಹೊರ ಬರದಂತಾಯಿತು. ಎರಡು ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಜೋರಾಗಿ ಅಳಲಾರಂಭಿಸಿದಳು.
“ಹುಡುಗಿ ಅಳಬೇಡ.. ಅದೆಲ್ಲಿ ಹೋಗಬೇಕು ಅಂತ ಹೇಳು ಬಿಟ್ಟು ಬರ್ತೀನಿ”
“ನಾನು ಮನೆಗೆ ಹೋಗ್ಬೇಕು ಮನೆಯೆಲ್ಲಿದೆ ಅಂತ ಗೊತ್ತಿಲ್ಲ ನಾನು ಈ ಊರಿಗೆ ಹೊಸಬ್ಬಳು. ಅಪ್ಪ ಅಮ್ಮ ನಿನ್ನೆ ಬೆಳಗ್ಗೆ ಈ ಊರಿಗೆ ಬಂದ್ರು.. “ಎನ್ನುತ್ತಾ ನಡುಗುವ ಸ್ವರದಲ್ಲಿ ಉಸುರಿದಳು.
“ಓಹೋ ನೀನು ಶ್ರೀನಿವಾಸ ಮೇಷ್ಟರ ಮಗಳ.. ತಡಿ ನನ್ನ ಮನೆ ಇಲ್ಲೇ ಇದೆ.. ಬೇಗ ಹೋಗಿ ನನ್ ಮಗನ್ನ ಕರ್ಕೊಂಡು ಬರ್ತೀನಿ ಅವನದ್ದು ಆಟೋ ರಿಕ್ಷಾ ಇದೆ” ಎಂದ ಆ ಹೆಂಗಸು ಅಲ್ಲೇ ಹತ್ತಿರದಲ್ಲಿದ್ದ ಗುಡ್ಡವನ್ನು ಹತ್ತಲಾರಂಭಿಸಿದಳು..
ಗುಡ್ಡ ಹತ್ತಿ ಹೋಗುತ್ತಿದ್ದ ಹೆಂಗಸನ್ನು ನೋಡುತ್ತಾ ಅಲ್ಲಿಯೇ ನಿಂತಳು.. ಅದೆಷ್ಟು ಕಾದರೂ ಅವಳು ಹಿಂದಿರುಗಿ ಬರಲೇ ಇಲ್ಲ ಅದಾಗಲೇ ಸಮಯ 10 ತೋರಿಸುತ್ತಿತ್ತು.. ಪೂರ್ಣಿಯ ಧೈರ್ಯವೆಲ್ಲ ಅಡಗಿಹೋಯಿತು.. ಇನ್ನು ಅಲ್ಲಿ ನಿಲ್ಲುವುದು ಕ್ಷೇಮವಲ್ಲವೆಂದನಿಸಿ ಮತ್ತೆ ನಡೆಯಲು ಆರಂಭಿಸಿದಳು. ಒಂದಿಷ್ಟು ದೂರ ಹೋಗುತ್ತಿದ್ದಂತೆ ಆಟೋರಿಕ್ಷದ ಶಬ್ದ ಕೇಳಿತು. ಒಂದು ಕ್ಷಣ ನಿಂತಳು. ಶಬ್ದ ನಿಂತಿತು. ಮತ್ತೆ ನಡೆಯಲಾರಂಭಿಸಿದಳು. ಮತ್ತೆ ಶಬ್ದ ಕೇಳಿತು. ಏನು ಮಾಡಬೇಕೆಂದು ತೋಚದೆ ಪುನಃ ಕರೆ ಮಾಡಲು ಮುಂದಾದಳು.ಆಗಲು ಅಪ್ಪನ ಫೋನಿಗೆ ಕನೆಕ್ಟ್ ಆಗಲಿಲ್ಲ..
ನಡೆದರೆ ಬೇಗ ಮನೆಗೆ ತಲುಪಲಾರೆ ಎಂದನಿಸಿ ಓಡಲಾರಂಬಿಸಿದಳು. ಓಡಿ ಓಡಿ ಸುಸ್ತಾಯಿತು. ತನ್ನ ಮೊಣಕಾಲ ಮೇಲೆ ಕೈಗಳನ್ನು ಉರಿ ಬಗ್ಗಿ ನಿಂತಳು.. ದೂರದಲ್ಲಿ ಆಟೋ ಬರುವುದು ಕಾಣಿಸಿತು. ಬದುಕಿದೆಯ ಬಡ ಜೀವ ಎಂದನಿಸಿ ಆಟೋ ನಿಲ್ಲಿಸಲು ಮುಂದಾಗುವಷ್ಟರಲ್ಲಿ ಆಟೋ ಅವಳ ಬಳಿ ನಿಂತಿತು.ಇಣುಕಿ ನೋಡಿದಳು.. ಆಟೋ ಓಡಿಸುತ್ತಿದ್ದವಳು ಅಲ್ಲಿ ಸಿಕ್ಕ ಹೆಂಗಸು.. ಮತ್ತೊಮ್ಮೆ ಕಣ್ಣು ಮುಚ್ಚಿ ಕಿರುಚಿದಳು..
“ಅಲ್ವೇ ಹುಡುಗಿ.. ನಿನಗೆ ಕಿರುಚೋ ಕಾಯಿಲೆ ಇದೆಯಾ..? ಅಲ್ಲೇ ನಿಂತಿರು ಅಂತ ಹೇಳಿದ್ದೆ ಅಲ್ವಾ… ನನ್ ಮಗ ಆಟೋ ತಗೊಂಡು ಹೊರಗಡೆ ಹೋಗಿದ್ದ .ಅವನು ಬರೋದನ್ನು ಕಾದು ಬರುವ ಹೊತ್ತಿಗೆ ಇಷ್ಟು ಹೊತ್ತು ಆಯ್ತು.. ಇರ್ಲಿ ಈಗ ಬೇಗ ಹತ್ತು.. ಬೇಗ ನಿನ್ನ ಮನೆಗೆ ಬಿಟ್ಟು ನಮ್ಮನೆಗೆ ಹೋಗ್ಬೇಕು.. ಇನ್ನೊಂದ್ ಸ್ವಲ್ಪ ಹೊತ್ತಿಗೆ ದೆವ್ವಗಳು ಓಡಾಡ್ತವೆ ಅಷ್ಟರೊಳಗೆ ಮನೆ ಸೇರಬೇಕು” ಎಂದು ಹೇಳುತ್ತಿದ್ದವಳ ಮಾತು ಕೇಳುತ್ತಾ ಅಂಜುತ್ತಲೇ ಪೂರ್ಣಿ ಆಟೋ ಹತ್ತಿದಳು..
ಹನ್ನೊಂದರ ಸುಮಾರಿಗೆ ಮನೆಯ ಮುಂದೆ ಆಟೋ ನಿಂತಿತು. ಪವರ್ ಕಟ್ಟ್ ಇದ್ದ ಕಾರಣ ಅಂದು ಆ ಊರಿನ ಎಲ್ಲೆಡೆ ಕರೆಂಟ್ ಇರಲಿಲ್ಲ..”ನೋಡಮ್ಮ ಇದೇ ನಿಮ್ಮ ಮನೆ ಹೋಗು ಭದ್ರವಾಗಿ ಮನೆ ಸೇರ್ಕೊ…” ಎಂದು ಹೇಳಿದ್ದನ್ನು ಕೇಳಿದವಳಿಗೆ ಸಂತೋಷವಾಯಿತು.. ಆಟೋ ಇಳಿದು ಮನೆಗೆ ಹೋಗುತ್ತಿದ್ದವಳು ಹಿಂದಿರುಗಿ ನೋಡಿದಳು..ಆಟೋ ಕಾಣಲಿಲ್ಲ..ಮನೆ ಕಡೆ ಓಡಿದಳು.
ಮನೆಗೆ ಪ್ರವೇಶಿಸುತ್ತಿದ್ದಂತೆ ಗಾಬರಿಯಾಗಿ ನಿಂತಿದ್ದ ಅಮ್ಮನನ್ನು ಕಂಡು ಅಳುತ್ತಾ ತಬ್ಬಿಕೊಂಡಳು.. ಕುಡಿಯಲು ನೀರು ಕೇಳಿ ನೀರು ಕುಡಿಯುತ್ತಾ ನಡೆದ ವಿಚಾರವನ್ನು ತಿಳಿಸಿದಳು.. ಎಲ್ಲರೂ ಗಾಬರಿಯಿಂದ ಅವಳನ್ನೇ ನೋಡುತ್ತಿರುವವರ ಬಗ್ಗೆ ಪೂರ್ಣಿಗೆ ಆಶ್ಚರ್ಯವೆನಿಸಿತು..
“ಇದ್ಯಾಕಮ್ಮ ಎಲ್ಲ ಹೀಗ್ ನೋಡ್ತಾ ಇದ್ದೀರಾ.ಏನಾಯ್ತು.. ನಾನು ಹೇಳಿದ್ದು ನಿಜ ..ಯಾವುದೋ ಒಂದು ಆಂಟಿ ನನ್ನನ್ನ ಆಟೋದಲ್ಲಿ ತಂದು ಬಿಟ್ಟು ಹೋದರು” ಎಂದಳು..
“ಪೂರ್ಣಿ ನೀನು ಆಟೋದಲ್ಲಿ ಬಂದ್ಯಾ..!ಆಟೋದಲ್ಲಿ ಬಂದಿದ್ರೆ ಶಬ್ದ ಕೇಳಬೇಕಿತ್ತಲ್ವಾ ನಮಗ್ಯಾರಿಗೂ ಆಟೋ ಶಬ್ದನೆ ಕೇಳಿಲ್ಲ”
“ಅಮ್ಮ ಏನ್ ಹೇಳ್ತಿದ್ದೀಯಾ ಮನೆಗೂ ರೋಡಿಗೂ ಹೆಚ್ಚು ದೂರ ಇಲ್ಲ.. ಇದೇ ನಿಮ್ಮನೆ ಅಂತ ಆ ಆಂಟಿ ನನಗೆ ತೋರಿಸಿ ಹೋದರು ತಮಾಷೆ ಮಾಡಬೇಡ ನಿಜವಾಗ್ಲೂ ನಿಮಗೆ ಶಬ್ದ ಕೇಳಿಲ್ವಾ..”
“ಇಲ್ಲ ಮಗಳೇ …ಈ ಊರಲ್ಲಿ ಇಷ್ಟೊತ್ತಿಗೆಲ್ಲ ಆಟೋನೆ ಓಡಾಡಲ್ವಂತೆ. ನಾವು ನಿನ್ನನ್ನು ಹುಡುಕಲು ಆಟೋಗಾಗಿ ಹುಡುಕಾಡುತ್ತಿದ್ದೆವು..ಅಪ್ಪ ಅಕ್ಕಪಕ್ಕದವರೆನೆಲ್ಲಾ ವಿಚಾರಿಸಿದ್ರು.. ಈ ಊರಲ್ಲಿ 7 ರ ಮೇಲೆ ಯಾವ ಗಾಡಿನೂ ಓಡಾಡಲ್ವಂತೆ..”
ಕೇಳಿದ್ದನ್ನು ನಂಬಲಾಗದೆ ಅನುಭವಿಸಿದ್ದನ್ನು ಜೀರ್ಣಿಸಿಕೊಳ್ಳಲಾಗದೆ ಒದ್ದಾಡುವ ಸ್ಥಿತಿ ಪೂರ್ಣಿಯದಾಗಿತ್ತು.
‘ಅಬ್ಬ ಮನೆಗೆ ವಾಪಸ್ ಬಂದಿದ್ದಾಳಲ್ಲ ಅದಕ್ಕೆ ಖುಷಿಪಡಿ ಆಟೋ ಶಬ್ದ ಕೇಳಿಲ್ಲ ಕೇಳ್ತು ಅನ್ನೋ ಮಾತು ಈಗ ಬೇಡ ಮೊದಲು ಅವಳಿಗೆ ಕೆಂಪು ನೀರು ಮಾಡಿ ದೃಷ್ಟಿ ತೆಗೆದು ಚೆಲ್ಲು.. ಹೇಳಿದ್ದನ್ನ ಕೇಳುವಂತ ಜಾಯಮಾನನೇ ನಿಮಗಳದ್ದಲ್ಲ.. ನಾನು ಆಗಲೇ ಬಡ್ಕೊಂಡಿದ್ದೆ.. ಈ ಮುದುಕಿಯ ಮಾತು ಕವಡೆ ಕಾಸಿಗೂ ಕಿಮ್ಮತ್ತಿಲ್ಲ” ಎಂದು ಗೊಣಗುತ್ತ ಒಳಹೋದ ಅಜ್ಜಿಯನ್ನು ,ದೃಷ್ಟಿ ತೆಗೆಯಲೆಂದು ನೀರು ತರಲು ಹೋದ ಅಮ್ಮನನ್ನು, ಮಗಳು ಮನೆಗೆ ಬಂದಳೆಂದು ಪರಿಚಯಸ್ತರಿಗೆ ಫೋನ್ ಮಾಡಿ ತಿಳಿಸುತ್ತಿದ್ದ ಅಪ್ಪನನ್ನು ಕಲ್ಲಿನಂತೆ ನಿಂತು ನೋಡುತ್ತಿದ್ದವಳಿಗೆ ನನ್ನನ್ನು ಮನೆಯವರಿಗೆ ತಂದುಬಿಟ್ಟವರು ಯಾರಿರಬಹುದು..ಎಂಬ ಪ್ರಶ್ನೆ ಮನದಲ್ಲಿ ಕುಣಿಯುತಿತ್ತು..
ಆ ಕೆಂಪು ದೊಡ್ಡ ಬೊಟ್ಟಿನ ಮುಖ, ಎಲೆ ಅಡಿಕೆಯ ಕೆಂಪು ರಸ ಹೀರಿದ್ದ ಹಲ್ಲುಗಳು ಕೆದರಿದ್ದ ತಲೆ ಕೂದಲು ಎಲ್ಲವು ಕಾಡುತಿತ್ತು ..ತುಂಬಾ ಹೆದರಿದ್ದ ಕಾರಣ ಜ್ವರ ಬಂದಿತ್ತು..ಮುಂಜಾನೆ ತಡವಾಗಿ ಎದ್ದವಳಿಗೆ ಹಿಂದಿನ ದಿನ ನಡೆದ ಘಟನೆಗಳೆಲ್ಲ ನೆನಪಾಯಿತು.. ಪೌರ್ಣಮಿಯ ರಾತ್ರಿಯಲಿ ನನ್ನೊಂದಿಗೆ ಇದ್ದವರು ಯಾರು ಎಂಬ ಪ್ರಶ್ನೆ ಅವಳನ್ನು ಕಾಡುತ್ತಿತ್ತು.
ತಂಗಿಯನ್ನು ಕಾಣಲು ಬಂದ ಅಣ್ಣ” ಏನೇ ರಾತ್ರಿ ದೆವ್ವದ ಜೊತೆ ಆಟೋ ರೈಡ್ ಬಂದೆಯಂತೆ.. ಹೇಗಿತ್ತು ಎಕ್ಸ್ಪೀರಿಯನ್ಸ್.. ಅಮ್ಮ ಅಜ್ಜಿ ಹೇಳಿದ್ರು “ ಎಂದು ರೇಗಿಸಿದವನ ಮಾತು ಕೇಳಿ ನಗಬೇಕೋ ಅಳಬೇಕೋ ತಿಳಿಯದೆ ಅಣ್ಣನನ್ನು ಉರಿ ಕಣ್ಣಿನಿಂದ ನೋಡಿದಳು..ಅನುಭವಿಸಿದವರಿಗೆ ಗೊತ್ತು ಅದರ ಸಂಕಟ ಎಂದು ಅಜ್ಜಿ ಹೇಳುವ ಮಾತು ನೆನಪಾಯಿತು..
- ಆಶ್ರಿತಾ ಕಿರಣ್ (ಆಕೆ)
