ಸ್ಪೈ ಕ್ಯಾಮೆರಾಗಳು ಇರುವುದೇ ಕದ್ದು ಮುಚ್ಚಿ ಸೆರೆಹಿಡಿಯಲು.ಇವು ಲೈಟು ಇಲ್ಲದೆಯೆ ಕತ್ತಲೆಯಲ್ಲೂ ಸೆರೆಹಿಡಿಬಲ್ಲವಾಗಿರುತ್ತವೆ!ಬಹುತೇಕ ಸ್ಪೈ ಕ್ಯಾಮೆರಾಗಳು ಕತ್ತಲೆಯಲ್ಲಿ ಬೆಳಕು ಮಿಣುಕಿಸುತ್ತವೆ. ಆದ್ದರಿಂದ ಹೋಟೆಲ್ ನ ರೂಮಿನ ಎಲ್ಲ ಲೈಟುಗಳನ್ನು ಆಫ್ ಮಾಡಿ ಕತ್ತಲಾಗಿಸಿ ಸುತ್ತ ಅವಲೋಕಿಸಿದರೆ ಇಂಥವು ಸಿಗೆ ಬೀಳುತ್ತವೆ. ಸ್ಪೈ ಕ್ಯಾಮೆರಾ ಕುರಿತು ಲೇಖಕ ಮಧು ವೈ ಎನ್ ಅವರು ಬೆರೆದ ಲೇಖನ ಎಲ್ಲರಿಗೂ ಉಪಯೋಗವಾಗಲಿದೆ, ತಪ್ಪದೆ ಎಲ್ಲರೂ ಓದಿ…
ನಾವೆಲ್ಲ ಸಂಬಂಧಿಕರ ಸಂಭ್ರಮಗಳು ಪ್ರವಾಸಗಳು ಮುಂತಾಗಿ ಹೊಟೆಲು/ಲಾಡ್ಜುಗಳಲ್ಲಿ ಉಳಿಯಬೇಕಾದ ಸಂದರ್ಭ ಬರುತ್ತದೆ. ಸಣ್ಣದರಿಂದ ಹಿಡಿದು ದೊಡ್ಡ ಹೊಟೆಲುಗಳು ತನಕ ಯಾವುವೂ ಸಂಪೂರ್ಣ ವಿಶ್ವಾಸಮಯವಲ್ಲ. ಓನರು ಒಳ್ಳೆಯವನಿದ್ದು ಚಪರಾಸಿ ಕೆಟ್ಟವನಿರಬಹುದು. ಚಪರಾಸಿ ಒಳ್ಳೆಯವನಿದ್ದು ಓನರೇ ಕೆಟ್ಟವನಿರಬಹುದು. ಅಥವಾ ನಿಮಗೂ ಮುಂಚೆ ಉಳಿದುಕೊಂಡಿದ್ದ ಗ್ರಾಹಕ ಫಿಕ್ಸ್ ಮಾಡಿ ಹೋಗಿರಬಹುದು. ಇಂದಿನ ಬಹುತೇಕ ಪಾರ್ನ್ ವೆಬ್ಸೈಟುಗಳು ಅಮಾಯಕ ದಂಪತಿಗಳ/ಪ್ರೇಮಿಗಳ/ಮಹಿಳೆಯರ ಖಾಸಗಿ ಕ್ಷಣಗಳಿಂದಲೆ ತುಂಬಿಕೊಂಡಿವೆ. ಇದು ಎಷ್ಟೊಂದು ಆತ್ಮಹತ್ಯೆಗಳಿಗೆ ಕಾರಣವಾಗಿದೆ.
ಇಲ್ಲೆಲ್ಲ ದುರುಳರು ಕಣ್ಣಿಗೆ ಕಾಣದ ಸ್ಪೈ ಕ್ಯಾಮರಾಗಳನ್ನು ಇಟ್ಟು ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿರುತ್ತಾರೆ. ಇದರಿಂದ ತಪ್ಪುಸಿಕೊಳ್ಳುವುದು ಹೇಗೆ? ಈ ತಂತ್ರಜ್ಞಾನಕ್ಕೆ ಪ್ರತಿತಂತ್ರಜ್ಞಾನವಿದೆಯೇ? ಉತ್ತರ- ಹೌದು, ಇಲ್ಲ ಎರಡೂ! ಅಕಸ್ಮಾತ್ ನೀವು ಪ್ರೇಮಿಗಳು ಒಂದು ಹಗಲು ಪಾರ್ಕಿನಲ್ಲಿ ಕುಳಿತಿರುತ್ತೀರಿ. ದೂರದಲ್ಲೆಲ್ಲೊ ಮರೆಯಲ್ಲಿ ಮೊಬೈಲ್ ಕ್ಯಾಮೆರಾದಿಂದ ನಿಮ್ಮನ್ನು ಸೆರೆಹಿಡಿಯುತ್ತಾರೆ. ಹೇಗೆ ಕಂಡುಹಿಡಿಯುವುದು? ದುರುಳ ಆನ್ ಮಾಡಿಕೊಂಡು ಸುಮ್ಮನೆ ಶರಟಿನ ಜೇಬಲ್ಲಿಟ್ಟುಕೊಂಡಿರುತ್ತಾನೆ. ಎಷ್ಟು ಜನರ ಜೇಬುಗಳನ್ನು ಅನುಮಾನಿಸುತ್ತೀರಿ? ಇದಕ್ಕೆ ಯಾವ ಪ್ರತಿ ತಂತ್ರಜ್ಞಾನವೂ ಇಲ್ಲ! ಇರುವ ಟೆಕ್ನಿಕ್ಕುಗಳು ಪ್ರಾಕ್ಟಿಕಲ್ಲೂ ಅಲ್ಲ. ಅಲ್ಲೆಲ್ಲ ಕಾಮನ್ ಸೆನ್ಸ್, ಎಚ್ಚರಿಕೆ, ಮನುಷ್ಯ ಪ್ರಜ್ಞೆ- ಇವಷ್ಟೇ ಕೆಲಸಕ್ಕೆ ಬರುವುದು.
ಅದೇ ನೀವು ಹೋಟೆಲ್ ನಲ್ಲಿರುತ್ತೀರಿ. ಹಗಲೊತ್ತು. ಧಿರಿಸು ಬದಲಾಯಿಸಬೇಕು. ಫ್ಯಾನ್ ಹಿಂದೆ, ಟೀವಿ ಹಿಂದೆ, ಕಿಟಕಿ ಪರದೆ ಹಿಂದೆ, ಸೆಟಪ್ ಬಾಕ್ಸಿನೊಳಗೆ, ಗೋಡೆಯ ಸಣ್ಣ ತೂತಿನಲ್ಲಿ- ಎಲ್ಲಿ ಬೇಕಾದರೂ ಸ್ಪೈ ಕ್ಯಾಮೆರಾ ಇರಬಹುದು. ಬರಿಗಣ್ಣಿನಲ್ಲಿ ಹುಡುಕುವುದಂತೂ ಅಸಾಧ್ಯ. ಅಷ್ಟು ಚಿಕ್ಕದಿರುತ್ತವೆ. ಮತ್ತು ಕಪ್ಪುಬಣ್ಣದಲ್ಲಿದ್ದು ಊಸರವಳ್ಳಿಯಂತೆ ಹಿನ್ನೆಲೆ ಬಣ್ಣದಲ್ಲಿ ಲೀನವಾಗಿರುತ್ತದೆ. ಇಲ್ಲಿ ಒಂದೆರಡು ಜಾಗ್ರತೆ ಟೆಕ್ನಾಲಜಿಗಳು ಸಹಾಯಕ್ಕಿವೆ. ಮುಂದೆ ಹೇಳುವೆ. ಆದರೆ ಈ ಕೇಸಿನಲ್ಲಿ ಆ ಟೆಕ್ನಾಲಜಿಗಳಿಗಿಂತ ಮುಖ್ಯವಾದ ಟೆಕ್ನಾಲಜಿಯಂದರೆ ಮತ್ತೆ ಕಾಮನ್ ಸೆನ್ಸ್, ಎಚ್ಚರಿಕೆ. ಅದೇನೆಂದರೆ ಸಾಧ್ಯವಾದಷ್ಟೂ ಕತ್ತಲೆ ಸೃಷ್ಟಿಸುವುದು. ಬಾಗಿಲು, ಕಿಟಕಿ ಪರದೆ ಮುಚ್ಚುವ ಮೂಲಕ. ಲೈಟುಗಳನ್ನು ಆಫ್ ಮಾಡುವ ಮೂಲಕ. ಅಷ್ಟು ನೀವು ಮಾಡಿದರೆ ಮುಂದೆ ಹೇಳಲಿರುವ ಕೆಲವು ಟೆಕ್ನಿಕ್ಕುಗಳು ನಿಮಗೆ ಇನ್ನಷ್ಟು ಸಹಾಯ ಮಾಡುತ್ತವೆ.

ಫೋಟೋ ಕೃಪೆ : google
ಹಾಗಾದರೆ ಆ ಟೆಕ್ನಿಕ್ಕುಗಳು ಏನು?
೧. ಮಾಮೂಲಿ ಡಿಜಿ ಕ್ಯಾಮೆರಾಗಳು ಮತ್ತು ಮೊಬೈಲಿನ ಕ್ಯಾಮೆರಾಗಳು – ಇವನ್ನು ಹೆಡ್ಡ ಹುಡುಗರು ಮಾತ್ರ ಬಳಸುತ್ತಾರೆ. ಕಿಟಿಕಿ ಹಿಂದೆ ಇಟ್ಟು, ಗೋಡೆಗೆ ತೂತು ಕೊರೆದು, ಆನ್ ಮಾಡಿ ಜೇಬಿನಲ್ಲಿಟ್ಟುಕೊಂಡು.. ಮುಂತಾಗಿ. ಒಟ್ಟಿನಲ್ಲಿ ಮರೆಯಲ್ಲಿ ನಿಂತು. ಇವರಿಗೆ ಸ್ಪೈ ಕ್ಯಾಮೆರಾ ಕೊಳ್ಳುವಷ್ಟು ಬಳಸುವಷ್ಟು ದುಡ್ಡು/ಬುದ್ಧಿ ಎರಡೂ ಇರುವುದಿಲ್ಲ. ಇದಕ್ಕೆ ಒಂದು ಪರಿಹಾರ ಸುತ್ತಮುತ್ತ ಏನಿದೆ ಏನಿಲ್ಲ ಎಂಬ ಪ್ರಜ್ಞೆ ನಮಗಿರಿವುದು. ಎರಡನೆಯದು ಮೊದಲೇ ಹೇಳಿದಂತೆ ಕತ್ತಲೆ ಸೃಷ್ಟಿಸುವುದು. ಕಾರಣ ಈ ಕ್ಯಾಮೆರಾಗಳಿಗೆ ಕತ್ತಲೆಯಲ್ಲಿ ಕಾಣಲ್ಲ! ಅವು ಕತ್ತಲೆಯಲ್ಲೂ ಸೆರೆಹಿಡಿಬೇಕು ಎಂದರೆ ಫ್ಲಾಶ್ ಲೈಟು ಬೇಕು. ಲೈಟು ಬಿದ್ದರೆ ನಿಮಗೆ ಗೊತ್ತಾಗುತ್ತದೆ. ದುರಂತವೆಂದರೆ ಪಾರ್ಕು ಆಫೀಸು ಮುಂತಾದ ಬಯಲುಗಳಲ್ಲಿ(ಹಗಲಿನಲ್ಲಿ) ಇವನ್ನು ಕಂಡುಹಿಡಿಯಲಾಗದು.
೨. ನಿಜವಾದ ಸ್ಪೈ ಕ್ಯಾಮೆರಾಗಳು- ಇವು ಇರುವುದೇ ಕದ್ದು ಮುಚ್ಚಿ ಸೆರೆಹಿಡಿಯಲು. ಆದ್ದರಿಂದ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಮತ್ತು ಫ್ಲಾಶ್ ಲೈಟು ಇಲ್ಲದೆಯೆ ಕತ್ತಲೆಯಲ್ಲೂ ಸೆರೆಹಿಡಿಬಲ್ಲವಾಗಿರುತ್ತವೆ! (ನೀಲಿ ನೀಲಿ ನೋಡಿರ್ತೀರಲ್ಲ!). ಹೇಗೆ? ಇವು ಇನ್ಫ್ರಾ ರೆಡ್ ಎಂಬ ಕಣ್ಣಿಗೆ ಕಾಣದ ಬೆಳಕನ್ನು ಹರಿಸಿ ಎದುರಿನ ದೃಶ್ಯವನ್ನು ಸೆರೆಹಿಡಿಯುತ್ತವೆ. ನಿಮ್ಮ ಮೊಬೈಲ್ ಅಥವಾ ಲ್ಯಾಪ್ ಟಾಪ್ ಗಳಲ್ಲಿ ಫ್ರಂಟ್ ಕ್ಯಾಮೆರಾಗಳು ಫೇಸ್ ಡಿಟೆಕ್ಟ್ ಮಾಡಿ ಲಾಗಿನ್ ಆಗಲು ಬಿಡುತ್ತವೆಂದರೆ ಅವೂ ಇದೇ ಕೆಟಗರಿಯೇ!. ಕಾರಣ ಮುಖ ಗುರುತಿಸುವ ಮೂಲಕ ಲಾಗಿನ್ ಆಗಲು ಬಿಡುವ ಕ್ಯಾಮೆರಾಗಳಿಗೆ ಕತ್ತಲೆಯಲ್ಲೂ ದೃಷ್ಟಿಯಿರಬೇಕಿರುತ್ತದೆ. ಇಲ್ಲಾಂದ್ರೆ ಕರೆಂಟು ಹೋದಾಗ ನೀವು ಲಾಗಿನ್ ಆಗುವುದು ಹೇಗೆ? ನಿಮ್ಮ ಬಳಿ ಇಂತಹ ಲ್ಯಾಪಟಾಪ್ ಇದ್ದರೆ ಮನೆಯ ಲೈಟ್ ಆಫ್ ಮಾಡಿದಾಗ ಲ್ಯಾಪ್ಟಾಪಿನ ಹಣೆಯಿಂದ ಕೆಂಪು ಬೆಳಕು ಮಿಣಿಮಿಣಿ ಮಿನುಗುತ್ತಿರುತ್ತದೆ… ಅದೇ ಇನ್ಫ್ರಾ ರೆಡ್ ಲೈಟು. ಬಹುತೇಕ ಸ್ಪೈ ಕ್ಯಾಮೆರಾಗಳು ಹೀಗೆ ಕತ್ತಲೆಯಲ್ಲಿ ಬೆಳಕು ಮಿಣುಕಿಸುತ್ತವೆ. ಆದ್ದರಿಂದ ಹೊಟೆಲಿನ ರೂಮಿನ ಎಲ್ಲ ಲೈಟುಗಳನ್ನು ಆಫ್ ಮಾಡಿ ಕತ್ತಲಾಗಿಸಿ ಸುತ್ತ ಅವಲೋಕಿಸಿದರೆ ಇಂಥವು ಸಿಗೆಬೀಳುತ್ತವೆ. ಪ್ರಾಬ್ಲಂ ಇಷ್ಟು ಸುಲಭವಾಗಿ ಪರಿಹಾರವಾಗಲ್ಲ. ಕೆಲವು ಹೈ ಎಂಡ್ ಕ್ಯಾಮೆರಾಗಳು ಈ ಮಿಣಿಮಿಣಿ ಲೈಟನ್ನು ಹೊರಸೂಸುವುದಿಲ್ಲ!. ಏನು ಮಾಡುವುದು?

ಫೋಟೋ ಕೃಪೆ : google
ಒಂದು- ಪೂರ್ತಿ ಕತ್ತಲೆ ಸೃಷ್ಟಿಸಿ ಮೊಬೈಲಿನ ಫ್ಲಾಶ್ ಲೈಟು ಆನ್ ಮಾಡಿ ಸುತ್ತ ಹಿಡಿದರೆ ಎಲ್ಲಿಂದಲಾದರೂ ಚೂಪಾದ ಪ್ರತಿಫಲನ ಬಂದರೆ ಹತ್ತಿರ ಸುಳಿದು ಪರೀಕ್ಷಿಸಬಹುದು. ಕಾರಣ ಲೆನ್ಸ್ ಗಳು ಗಾಜಿನವೇ ಇದ್ದು ಫ್ಲಾಶ ಲೈಟಿಗೆ ಮಿನುಗುತ್ತವೆ. ಇದು ಹೆಬ್ಬೆಟ್ಟು ರೂಲ್.
ಎರಡು- ಮೊಬೈಲ್ ಗಳಲ್ಲಿ ಕೆಲವು ಆಪ್ ಬರುತ್ತವೆ. Hidden camera detector ಎಂದು. ಅವನ್ನು ಬಳಸಿ ಸುತ್ತ ಮೊಬೈಲ್ ಹಿಡಿದು ನೋಡಬಹುದು. ಬಹುತೇಕ ದೋಖಾ ಆಪ್ ಗಳೇ ಇರುವುದು. ಆದರೂ ಒಂದು ಇಪ್ಪತ್ತು ಪರ್ಸೆಂಟ್ ಕೆಲಸ ಮಾಡುತ್ತವೆ. ಹೇಗಂದರೆ ಎಲ್ಲಿಂದಲಾದರೂ ಕಣ್ಣಿಗೆ ಕಾಣದ ಇನ್ ಫ್ರಾ ರೆಡ್ ಕಿರಣಗಳು ಬರುತ್ತಿದ್ದರೆ ಅದನ್ನು ಹೈಲೈಟ್ ಮಾಡಿ ತೋರಿಸುತ್ತವೆ.
ಮೂರು- ಕಾಲ್ ಮಾಡಿ ರೂಮು ತುಂಬ ಓಡಾಡಿ, ಕಿರಕಿರ ಅಂದರೆ ಅಲ್ಲೇನೊ ಇದೆ ಎಂದರ್ಥ- ಎಂಬ ತಂತ್ರ ಬಳಸಿ ಕೆಲವು ಆಪ್ ಗಳು ಕೆಲಸ ಮಾಡುತ್ತವೆ. ಅವು ವೇಸ್ಟು. ಒಂದು ಹೊಟೆಲ್ ರೂಮೆಂದರೆ ಟಿವಿ ಇರತ್ತೆ ಏಸಿ ಇರತ್ತೆ ಸೆಟಾಪ್ ಬಾಕ್ಸ್ ಇರತ್ತೆ… ಯಾವುವು ಬೇಕಾದರೂ ಕಾಲ್ ಮಾಡಿದಾಗ ಇಂಟರ್ ಫಿಯರೆನ್ಸ್ (ಕಿರಕಿರ ಸದ್ದು) ಸೃಷ್ಟಿಸಬಹುದು. ಆದ್ದರಿಂದ ಇದು ತಂತ್ರ ಸರಿಯಿದ್ದರೂ ಸಮರ್ಪಕವಾಗಿಲ್ಲ.

ಫೋಟೋ ಕೃಪೆ : google
ನಾಲ್ಕು- ಇದು ನನ್ನ ಬೆಸ್ಟ್ ಮೆತಡ್ಡು. ಒಂದು RF(radio frequency) detector ಖರೀದಿಸಿ, ನಿಮ್ಮ ಪ್ರವಾಸಿ ಸಂಗಾತಿಯನ್ನಾಗಿ ಇಟ್ಟುಕೊಳ್ಳಿ. ಪ್ರವಾಸಕ್ಕೆಂದೇ ಶೂಸು, ಸ್ವೆಟರು, ಬಾಚಣಿಗೆ, ಚಾರ್ಜರು, ಬ್ಯಾಟರಿ ಇಟ್ಟುಕೊಳ್ಳಬಲ್ಲಿರಾದರೆ ಇದಕ್ಕೇನು ಸಂಕೋಚ ಪಡಬೇಕಿಲ್ಲ. ಯಾವುದೇ ಹೋಟೆಲ್ ರೂಂ ಗೆ ಎಂಟರಾದಾಗ ಮೊದಲು ಲಗೇಜು ಇಳಿಸಿ ಪರದೆಗಳನ್ನೆಲ್ಲ ಮುಚ್ಚಿ ಕೋಣೆಯ ಮೇನ್ ಸ್ವಿಚ್ ಆಫ ಮಾಡಿ ಒಂದ ಸಲ RF detector ಇಂದ ಸ್ಕಾನ್ ಮಾಡಿ. ಎಲ್ಲಿಂದಲಾದರೂ radio frequency ಬಂದರೆ ನಿಮ್ಮ ಕೈಲಿರುವ ವಸ್ತು ಬೀಪ್ ಬೀಪ್ ಸದ್ದು ಮಾಡುತ್ತದೆ. ಗುರುತು ಮಾಡಿಕೊಳ್ಳಿ. ಇಡೀ ರೂಂ ಸ್ಕಾನ್ ಆದ ನಂತರ ಮೇನ್ ಸ್ವಿಚ್ ಆನ್ ಮಾಡಿ ಗುರುತು ಮಾಡಿಕೊಂಡ ಸ್ಥಳಗಳನ್ನು ಕೂಲಂಕಷ ಪರೀಕ್ಷಿಸಿ. ಮೇನ್ ಸ್ವಿಚ್ ಆಫ ಮಾಡಿದ್ದಾಗ ಯಾವ ಅಧಿಕೃತ ಡಿವೈಸೂ ಕೆಲಸ ಮಾಡುತ್ತಿರಲ್ಲ. ಅನಧಿಕೃತ ಡಿವೈಸನ್ನು ಹುಡುಕುವುದು ಹೀಗೆ.
ಐದು- ನಿಮ್ಮ ಮೊಬೈಲಿನ ಫ್ರಂಟ್ ಕ್ಯಾಮೆರಾ ಆನ್ ಮಾಡಿಕೊಂಡು ಅದಕ್ಕೆ ಫುಲ್ ರೂಮನ್ನು ತೋರಿಸಿ. ಎಲ್ಲಿಂದಲಾದರೂ ಇನ್ ಫ್ರಾ ರೆಡ್ ಕಿರಣಗಳು ಬರುತ್ತಿದ್ದರೆ ಅದು ಕ್ಯಾಮೆರಾ ದೃಶ್ಯದಲ್ಲಿ ಗೋಚರಿಸುತ್ತದೆ. ಇದನ್ನು ಮೊಬೈಲ್ ಹಿಂದಿನ ಕ್ಯಾಮೆರಾದಲ್ಲಿ ಮಾಡಲಾಗದು ಕಾರಣ ಅವುಗಳಲ್ಲಿ ಇಂತಹ ಕಿರಣಗಳನ್ನು ಕ್ಯಾನ್ಸೆಲ್ ಮಾಡುವ ಫಿಲ್ಟರುಗಳು ಇರುತ್ತವೆ. ಇದು ಸಫಲವಾಗಲು ನಿಮ್ಮ ಮೊಬೈಲಲ್ಲಿ ಫೇಸ್ ಡಿಟೆಕ್ಷನ್ ಲಾಗಿನ್ ಫೀಚರು ಇರಬೇಕು.
ಆರು- ಇದು ಎಂಜಿನಿಯರ್ ಲೆವೆಲ್ ನವರು ಮಾಡಬಹುದಷ್ಟೆ. ಏನಂದರೆ ವೈಫೈ ರೌಟರಿಗೆ ಕನೆಕ್ಟ್ ಆಗಿ ಯಾವೆಲ್ಲ ಡಿವೈಸುಗಳು ರೌಟರಿಗೆ ಕನೆಕ್ಟ್ ಆಗಿದಾವೆ ಎಂದು ಚೆಕ್ ಮಾಡುವುದು. ಅನುಮಾನಾಸ್ಪದ ಕಂಡುಬಂದಲ್ಲಿ ಪರಿಶೀಲಿಸುವುದು. ವೈರ್ ಫೈ ಕನೆಕ್ಟೆಡ್ ಕ್ಯಾಮೆರಾಗಳನ್ನು ಹೀಗೆ ಕಂಡುಹಿಡಿಯಬಹುದು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇದು ಕೇವಲ ರಾಜಕಾರಣಿ/ಅಧಿಕಾರಿಗಳು ಮಾತ್ರ ಎದುರಿಸುವ ಸಮಸ್ಯೆಯಲ್ಲ. ಸಾಮಾನ್ಯರೂ ಸಹ ನಿತ್ಯ ಎದುರಿಸಬೇಕಾದ ಆಪತ್ತು. ಆದರೆ ಸಾಮಾನ್ಯರೂ ಪಾರಾಗಲು ಕಷ್ಟವಿರುವ ಸಮಸ್ಯೆ. ಸಮರ್ಪಕ ಪ್ರತಿತಂತ್ರಜ್ಞಾನವಿಲ್ಲ. ಇರುವ ಟೆಕ್ನಾಲಜಿ ಗೊತ್ತಿರದ ದಂಪತಿಗಳು ಏನು ಮಾಡಬೇಕು? ಪಾಪ ಅವರು IR/ RF ಡಿಟೆಕ್ಟರು ಆಂಡ್ರಾಯ್ಡ್ ಆಪ್ ಮುಂತಾದುವನ್ನೆಲ್ಲ ಹೇಗೆ ಬಳಸಲು ಸಾಧ್ಯ. ನನ್ನ ಕೇಳಿದರೆ ʼಮನೆಯ ಹೊರಗಡೆ ಕತ್ತಲೆಯೇ ಸೌಖ್ಯʼ. ನಗಬೇಡಿ- ಅನುಮಾನ ಬಂದ ಜಾಗದಲ್ಲೆಲ್ಲ ಒಂದೊಂದು ಟವೆಲ್ ಹಾಕಿ ಮುಚ್ಚಿಬಿಡಿ :-D. ಯಾಕೆ ಬೇಕು ತಲನೋವು ಅಲ್ವ.
ಮಧು ವೈ ಎನ್ ಅವರ ಪುಸ್ತಕಗಳನ್ನು ಓದಲು ಈ ಲಿಂಕ್ ಬಳಸಿ : http://www.ayyayyooo.com/
- ಮಧು ವೈ ಎನ್ (ಲೇಖಕರು,ಚಿಂತಕರು)
