ನಾದಿನಿಯರ ಅಕ್ಕರೆ ಮಾತಿಗೆ ಮರುಳಾಗಿ ಸುಬ್ಬ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದ. ಅದಕ್ಕೆ ಸುಬ್ಬಿ ಏನು ಮಾಡಿದ್ಲು ? ಅಂದ್ರೆ…ಸುಮ ಉಮೇಶ್ ಅವರ ಸುಬ್ಬ, ಸುಬ್ಬಿ ಕತೆಯನ್ನು ತಪ್ಪದೆ ಓದಿ…
ಸುಬ್ಬಿಗೆ ಫೇಸ್ಬುಕ್ ತುಂಬಾ ಗೆಳತಿಯರು. ಅದರಲ್ಲಿ ಒಂದಷ್ಟು ಗೆಳತಿಯರು ಸುಬ್ಬಿಯನ್ನು ಅಕ್ಕ ಅಕ್ಕ ಎನ್ನುತ್ತಾ ನಿಜವಾದ ಅಕ್ಕನಂತೆಯೇ ಸಲುಗೆ ಬೆಳೆಸಿಕೊಂಡಿದ್ದರು. ಆದ್ರೆ ಭಾವ ಸುಬ್ಬನ ಪರಿಚಯ ಆದ ಮೇಲೆ “ನಮ್ ಅಕ್ಕನಿಗಿಂತ ನಮ್ ಸುಬ್ಬಾ ಭಾವ ಇನ್ನೂ ಒಳ್ಳೆಯವರು” ಅನ್ನಿಸಲು ಶುರು ಆಯ್ತು..ಇರಬಹುದು..ಯಾಕೆಂದ್ರೆ ಈ ಸುಬ್ಬಿ ಬಾಯಿಬಡುಕಿ, ಮಾತು ಒರಟು, ಅತಿ ಶಿಸ್ತು, ಆದ್ರೆ ಮನಸ್ಸು ಮೃದು. ಸುಬ್ಬನೋ ಮೆಲುಮಾತಿನ ಸರದಾರ. ಅದಕ್ಕೇ ಇರಬೇಕು. ಎಲ್ಲರಿಗೂ ಭಾವ ಸುಬ್ಬನ ಕಂಡರೆ ವಿಪರೀತ ಅಕ್ಕರೆ, ಆದರ, ಗೌರವ. ಈ ಸುಬ್ಬನಿಗೂ ಮದುವೆ ಆದಾಗಿನಿಂದ ನಾದಿನಿಯರ ಕೊರತೆ ಕಾಡಿದ್ದರಿಂದ ಫೇಸ್ಬುಕ್ ಕೊಟ್ಟ ನಾದಿನಿಯರಂದ್ರೆ ಅಚ್ಚುಮೆಚ್ಚಾಯ್ತು. ಅಕ್ಕನನ್ನು ಗೋಳು ಹುಯ್ದುಕೊಳ್ಳವ ಸಮಯ ಬಂದ್ರೆ, ಭಾವ ನಾದಿನಿಯರು ಒಂದು ಪಾರ್ಟಿ ಆಗಿ ಬಿಡೋರು.
ನಾದಿನಿಯರ ಅಕ್ಕರೆ ಮಾತಿಗೆ ಮರುಳಾಗಿ ಸುಬ್ಬ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದ. ಆಮೇಲೆ ಬಂದು ಸುಬ್ಬಿ ಹತ್ರ “ಏನೇ ಮಾಡಲಿ…ಎಲ್ಲರೂ ನೈಸ್ ಆಗಿ ಮಾತನಾಡಿ ನನ್ ಜೋಬು ಖಾಲಿ ಮಾಡಿಸುತ್ತಾರೆ. ನಾನು ಒಳ್ಳೆಯವನೂ ಆಗಿರಬೇಕು. ನನ್ ದುಡ್ಡು ಖರ್ಚೂ ಆಗಬಾರದು..ಆ ಥರ ಪ್ಲಾನ್ ಮಾಡು ಅಂದ”. “ನೀವೇನು ಯೋಚನೆ ಮಾಡಬೇಡಿ. ಈ ಸಾರಿ ಬರಲಿ. ನೋಡಿ..ನಾನೇನು ಐಡಿಯಾ ಮಾಡ್ತೀನಿ” ಅಂದಳು.
ಒಮ್ಮೆ ಹೀಗಾಯಿತು. ಎಲ್ಲರೂ ಒಟ್ಟಿಗೆ ಅಕ್ಕನ ಮನೆಗೆ ದಾಳಿ ಇಟ್ಟರು. ಒಟ್ಟಿಗೆ ಎಲ್ಲರೂ ಬಂದಿದ್ದು ನೋಡಿ ಸುಬ್ಬ ಸುಬ್ಬಿ ಹಿರಿಹಿರಿ ಹಿಗ್ಗಿದರು. ಎಲ್ಲರಿಗೂ ಊಟ ಉಪಚಾರ ಆದ ಮೇಲೆ ನಾದಿನಿಯರ ವರಾತಗಳು, ಬೇಡಿಕೆಗಳು ಶುರು ಆದವು.
ಫೋಟೋ ಕೃಪೆ : google
ನಾದಿನಿ 1 : ಭಾವ..ಭಾವ.. ನಮ್ ಹಳ್ಳಿಯಲ್ಲಿ ಒಂದು dress ತಗೋಬೇಕು ಅಂದ್ರೆ ದೂರದ ಪಟ್ಟಣಕ್ಕೆ ಬಸ್ ನಲ್ಲಿ ಹೋಗಬೇಕು. ಭಾವ ಪ್ಲೀಸ್, ನಿಮ್ಮೂರಿನಲ್ಲಿ ಒಳ್ಳೊಳ್ಳೆಯ designs ಬಂದಿದೆ ಅಂತ ಗೊತ್ತಾಯಿತು. ಬನ್ನಿ ಭಾವ ಹೋಗಿ ತಂದು ಬಿಡೋಣ. ಹೇಗೂ ನಿಮ್ಮದೇ ಕಾರ್ ಇದೆಯಲ್ವ. ನಾಲ್ಕು ಡ್ರೆಸ್ ಕೊಡಿಸಿ ಬಿಡಿ ನಂಗೆ.
ನಾದಿನಿ 2 : ಭಾವ…ಭಾವ.. makeup set ಕೇಳಿದ್ರೆ ಅಪ್ಪ ಬೈತಾರೆ. ಹೋಗಿ ತಗೊಳೋಕ್ಕೆ ಬಿಡಲ್ಲ..ನೀವೇ ಕೊಡಿಸಿ ಬಿಡಿ ಭಾವ. ನನ್ ಬೀರುನಲ್ಲಿ ಬಚ್ಚಿಟ್ಟುಕೊಂಡು use ಮಾಡ್ಕೊತೀನಿ.. ಅಂತ ದೈನ್ಯಳಾಗಿ ಕೇಳಿದಳು.
ನಾದಿನಿ 3 : ಭಾವ ಭಾವ, ನಮ್ಮೂರಿನಲ್ಲಿ ಮಾಮೂಲಿ ಟಾಕೀಸಿನಲ್ಲಿ ಸಿನೆಮಾ ನೋಡಿ ನೋಡಿ ಬೋರ್ ಬಂದಿದೆ. ಒಂದೊಳ್ಳೆ ಹಿಂದಿ ಸಿನೆಮಾಗೆ ಕರ್ಕೊಂಡು ಹೋಗಿ ಭಾವ” ಎನ್ನುತ್ತಾ ಹಮ್ ಆಪ್ ಕೆ ಹೈ ಕೌನ್ ಮಾಧುರಿ ಥರ ನುಲಿದಳು.
ನಾದಿನಿ 4 : ಭಾವ ನಮಗೆ ಅಪ್ಪ ಅಮ್ಮ ಬಿಟ್ರೆ ಯಾರಿದ್ದಾರೆ..ಅಣ್ಣ ಇಲ್ಲ..ತಮ್ಮ ಇಲ್ಲ… ನೀವೇ ನಮಗೆಲ್ಲಾ..ನಮ್ ಪುಟ್ಟ ಪುಟ್ಟ ಆಸೆ ನೀವೇ ತಾನೇ ಈಡೇರಿಸಬೇಕು .. ಅಂತ ಇವಳು ಗೊಳೋ ಅಂತ ಶುರು ಮಾಡಿಯೇ ಬಿಟ್ಟಳು.
ಸುಬ್ಬ ಕರಗಿ ನೀರಾಗಿ ಹೋದ. ಸುಬ್ಬಿ ಕಡೆ ಒಂದ್ ಸಾರಿ ನೋಡಿದ. ಸುಬ್ಬಿ ಕಣ್ಣಿನಲ್ಲೇ “ನಾನಿದ್ದೇನೆ.. ಸುಮ್ನಿರಿ” ಅಂತ ಸಂಜ್ಞೆ ಮಾಡಿದಳು. ಸುಬ್ಬನ ಕಿವಿಯಲ್ಲಿ ಅದೇನೋ ಪಿಸುಗುಟ್ಟಿದಳು.
ಸರಿ..ಎಲ್ಲರೂ ರೆಡಿ ಆಗ್ರಮ್ಮ..ಹೊರಗೆ ತಿರುಗಾಡಿ ಬರೋಣ. ನೀವ್ ಕೇಳಿದ್ದೆಲ್ಲ shopping ಮಾಡೋಣ ಎನ್ನುತ್ತಿದ್ದ ಹಾಗೆ ಎಲ್ಲಾ ನಾದಿನಿಯರು ತಯಾರಾಗಿ ನಿಂತರು. ಅಕ್ಕ ಭಾವ ನಾದಿನಿಯರ ಸವಾರಿ ಪೇಟೆ ಕಡೆ ಹೊರಟಿತು.
ಕಾರ್ನಲ್ಲಿ ಕೂತಾಗ ಸುಬ್ಬ ಮಾತಿಗೆ ಶುರು ಮಾಡಿದ “ಬೆಂಗಳೂರಿನಲ್ಲಿ ಅದ್ಯಾರೋ ಕಿಡಿಗೇಡಿಗಳು ಕಾಣದ ವೈರಸ್ ಒಂದನ್ನು ಎಲ್ಲಾ ಕಡೆ ಹರಡುತ್ತಿದ್ದಾರೆ. ನಿನ್ನೆ you tube ನಲ್ಲಿ ನೋಡಿದೆ. ಯಾರಿಗೂ ಗೊತ್ತಾಗದ ಹಾಗೆ ಬಟ್ಟೆ ಅಂಗಡಿಯ ಬಟ್ಟೆಗಳ ಮೇಲೆ ಅದೆಂಥದೋ ದ್ರಾವಣ ಸಿಂಪಡಿಸುತ್ತಾರಂತೆ. ಆ ಬಟ್ಟೆ ತೊಟ್ಟ ಅರ್ಧ ಘಂಟೆಗೆ ಮೈಯೆಲ್ಲಾ ನವೆ ಶುರು ಆಗಿ, ಚರ್ಮವೆಲ್ಲ ಕಪ್ಪು ಬಣ್ಣಕ್ಕೆ ತಿರುಗಿ ಶಾಶ್ವತವಾಗಿ ಆ ಕಪ್ಪು ಕಲೆಗಳು ಉಳಿದು ಹೋಗುತ್ತಂತೆ. ನೀವೇನು ಹೆದರ ಬೇಡ್ರಮ್ಮ .ಇದೆಲ್ಲಾ ಬೋಗಸ್ ವೀಡಿಯೋ.. ನಂಬಬಾರದು.
ಡ್ರೆಸ್ ಕೊಡಿಸಿ ಅಂತ ಕೇಳಿದ್ದ ನಾದಿನಿ “ಭಾವ..ಈಗ ಇರುವ ಡ್ರೆಸ್ಗಳೇ ತುಂಬಾ ಆಗಿವೆ..ಈಗೇನು ಫಂಕ್ಷನ್ ಕೂಡಾ ಇಲ್ಲ. ನಂಗ್ ಡ್ರೆಸ್ ಬೇಡ ಭಾವ”.
ಈಗ ಸುಬ್ಬಿ ಶುರು “ರಿ, ಮೊನ್ನೆ ನಮ್ ಪಕ್ಕದ ಮನೆ ಪಂಕಜ ಅವರ ಮಗಳನ್ನು ಕರೆದುಕೊಂಡು ಸಿನೆಮಾಗೆ ಹೋಗಿದ್ದರಂತೆ. ಹಿಂದೆ ಕುಳಿತ ಯಾರೋ ಪೋಕರಿಗಳು ತುಂಬಾ ಕಾಡಿಸಿಬಿಟ್ಟರಂತೆ. ಪಾಪ ಪಂಕಜ ಗಂಡ ಅವರನ್ನು ಬೈಯಲು ಹೋದ್ರೆ ಚಾಕು ತೋರಿಸಿ ಬೆದರಿಸಿ ಬಿಟ್ರಂತೆ.
ಸುಬ್ಬ “ಅಲ್ವೇ, ಪಂಕಜ ಗಂಡನಿಗೆ ಅಷ್ಟೂ ಧೈರ್ಯ ಇಲ್ವಾ..ನಾಲ್ಕು ತದುಕೋದೂ ತಾನೇ”
ಸುಬ್ಬಿ”ಅಯ್ಯೋ, ಆತ… ಯಾಕ್ರಪ್ಪ ನಿಮಗೆ ಯಾರು ಅಕ್ಕ ತಂಗಿಯರು ಇಲ್ವ ಅಂತ ಅಷ್ಟೇ ಕೇಳಿದ್ದಕ್ಕೆ ಪಂಕಜ ಗಂಡನ ಕೈ ತಿರುವಿ ಮೂಳೆ ಫ್ರಾಕ್ಚರ್ ಆಗಿದೆಯಂತೆ. ಪುಣ್ಯಕ್ಕೆ ಅಲ್ಲಿದ್ದ ಬೇರೆ ಜನ ಇವರು ಮೂವರನ್ನು ಸರ್, ಸುಮ್ನೆ ಇಂಥವರ ಹತ್ರ ಯಾಕ್ ಗಲಾಟೆ ಅಂತ ಬೇಗ ಮನೆಗೆ ಕಳಿಸಿದರಂತೆ. ಪೂರ್ತಿ ಚಿತ್ರ ನೋಡದೆ ವಾಪಸ್ ಬಂದ್ವಿ ಅಂದರು ಪಂಕಜ”
ಸಿನೆಮಾಗೆ ಹೋಗೋಣ ಎಂದಿದ್ದ ನಾದಿನಿಗೆ ಒಳಗೊಳಗೆ ತುಂಬ ಭಯ ಆಯ್ತು. “ಅಯ್ಯೋ..ಮುಂಚೆಯೇ ನಮ್ ಭಾವ ನರಪೇತಲ ನಾರಾಯಣ..ಇವತ್ತೇನಾದರೂ ಹೀಗೆ ಆಗಿ ನಮ್ಮಿಂದ ಭಾವನಿಗೆ ತೊಂದರೆ ಆದ್ರೆ ಈ ಸುಬ್ಬಿ ಅಕ್ಕನ ಹತ್ರ ಜೀವನ ಪೂರ್ತಿ ನಾವು ಬೈಸ್ಕೋಬೇಕೂ ಎಂದು ಯೋಚಿಸಿ “ಭಾವ.. ಈ ನಡುವೆ ಯಾಕೋ ನಂಗೆ ತಲೆ ನೋವು ಬರ್ತಾ ಇದೆ. ಬಿಗ್ screen ಮುಂದೆ ಕುಳಿತರೆ ತಲೆ ನೋವು ಜಾಸ್ತಿ ಆಗುತ್ತೆ. ಇವತ್ತು ಪಿಚ್ಚರ್ ಬೇಡಾ ಭಾವ. ನೋಡಿ ಆಗಲೇ ಶುರು ಆಯ್ತು ತಲೆ ನೋವು..ಅಯ್ಯೊ..ಅಮ್ಮ..” ಎನ್ನುತ್ತಾ ತಲೆ ಒತ್ತಿ ಹಿಡಿದುಕೊಂಡಳು.
ಫೋಟೋ ಕೃಪೆ : google
ಈಗ ಮತ್ತೆ ಸುಬ್ಬನ ಸರದಿ “ಹೋಗಲಿ ಬಿಡ್ರಮ್ಮ..ನಾದಿನಿ 3 ಕೇಳಿದ makeup set ತಗೊಂಡು ಮನೆಗೆ ಹೋಗೋಣ. ಟಿವಿ 9 ನಲ್ಲಿ ತೋರಿಸಿದ್ದೆಲ್ಲಾ ನಾನು ನಂಬಲ್ಲ. ಅದು ಯಾರೋ ವಿಜ್ಞಾನಿ ಹೇಳ್ತಾ ಇದ್ದರೂ. Makeup ನ ಹೆಚ್ಚು ಬಳಕೆಯಿಂದ ಅಕಾಲ ವೃದ್ಧಾಪ್ಯ ಬರುತ್ತೆ ಅಂತ. ಅಯ್ಯೋ..ಅವರು ಹೇಳಿದ ಹಾಗೆ ಇಷ್ಟು ಬೇಗ ಮುಖದಲ್ಲಿ ನೆರಿಗೆ, ಚರ್ಮ ಒಣಗಿದಂತೆ, ತುಟಿಗಳು ಸೀಳಿದಂತೆ ಏನೂ ಆಗಲ್ಲಾ. ಕಣ್ಣುಗಳು ಜೋತು ಬಿದ್ದು, ಮುಖ ಸುಟ್ಟ ಬದನೆಕಾಯಿ ಥರ ಆಗುತ್ತೆ ಅಂತ ಹೆದರಿಸಿ ಬಿಟ್ಟರು. ಒಳ್ಳೆ ಬ್ರಾಂಡ್ use ಮಾಡಿದ್ರೆ ಏನೂ ಆಗಲ್ಲಾ..ನಿಂಗೆ ಯಾವ ಬ್ರಾಂಡ್ ಬೇಕಮ್ಮ.”
ಇನ್ನು ಮದುವೆ ಆಗದೆ ಗಂಡಿನ ಹುಡುಕಾಟದಲ್ಲಿ ಇದ್ದ ಮೂರನೇ ನಾದಿನಿ ಭಯದಿಂದ ತೊದಲಿದಳು “ಭಾವ, ಅಮ್ಮ ಅರಿಶಿನ, ಕಡಲೆಹಿಟ್ಟು, ನಿಂಬೆಸಿಪ್ಪೆ ಪುಡಿ ಮಾಡಿ ಇಟ್ಟಿದ್ದಾಳೆ. Makeup set ತೆಗೆದುಕೊಂಡು ಹೋಗಿ ಅಮ್ಮನ ಕಣ್ಣಿಗೆ ಕಾಣದ ಹಾಗೆ ಇಡೋದು ಕಷ್ಟ ನಮ್ ಮನೆಯಲ್ಲಿ. ನಂಗ್ ಬೇಡ ಭಾವ.. ಬೇಜಾರು ಆಗಬೇಡಿ.”
ಸುಬ್ಬಿ”ಅಯ್ಯೊ . ಏನ್ರೆ ..ನೀವೆಲ್ಲಾ ಇವತ್ತಿನ ಎಲ್ಲಾ ಪ್ರೋಗ್ರಾಂ ಕ್ಯಾನ್ಸಲ್ ಮಾಡಿಸಿ ಬಿಟ್ರಿ..ಎಂದು ಬೇಜಾರಾದಂತೆ ನಟಿಸಿದಳು. ಸುಬ್ಬ ಕೂಡಾ.. ಛೇ..ಇವರಿಗೆಲ್ಲ ಏನೂ ಕೊಡಿಸಲು ಆಗುತ್ತಿಲ್ಲ ಅಂತ ನಂಗ್ ತುಂಬಾ ಬೇಜಾರ್ ಆಗುತ್ತಿದೆ.. ಹೋಗಲಿ..ಒಂದೊಂದು ಪಾನಿಪುರಿ ತಿಂದು, milkshake ಕುಡಿದು ಹೋಗೋಣ. ಆದ್ರೆ ಪಾನಿ ಮಾಡಲು ನೀರು ಎಲ್ಲಿಂದ ತರುತ್ತಾನೆ ಅಂತ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಅಲ್ವಾ. ಪೂರಿ ಹಿಟ್ಟು ಕಾಲಿನಲ್ಲಿ ತುಳಿದು ನಾದಿರುತ್ತಾರೆ ಅನ್ನೋದನ್ನು ಮರೆತು ತಿಂದು ಬಿಡೋಣ.ಎನ್ನುತ್ತಾನೆ.
ನಾಲ್ಕನೇ ನಾದಿನಿ ಮನಸ್ಸಿನಲ್ಲೇ ಅಸಹ್ಯ ಪಟ್ಟು ಕೊಳ್ಳುತ್ತಾ “ಭಾವ…ಭಾವ.. ಅರ್ಜೆಂಟ್ ಆಗಿ ಹೊರಟು ಬಾ ಅಂತ ಊರಿನಿಂದ call ಬರ್ತಿದೆ..ನಮ್ಮನ್ನೆಲ್ಲ bustop ಗೆ ಡ್ರಾಪ್ ಮಾಡಿ ಸಾಕು.”
ನೀವೆಲ್ಲ ಹೀಗೆ ಮಾಡಿದ್ರೆ ನಾನಿನ್ನೇನು ಮಾಡಲಿ..ಸರಿ ಬನ್ರಮ್ಮ.. ಡ್ರಾಪ್ ಮಾಡಿ ಬಿಡ್ತೀನಿ ಎಂದು ಬಸ್ಸ್ಟಾಪ್ ಬಳಿ ಎಲ್ಲರನ್ನೂ ಇಳಿಸುತ್ತಾನೆ. ಎಲ್ಲರೂ ಸುಬ್ಬಿಯನ್ನು ತಬ್ಬಿಕೊಂಡು “ಅಕ್ಕ , ನೀನು ಭಾವ ಎಷ್ಟು ಒಳ್ಳೆಯವರು”ಎನ್ನುತ್ತಾರೆ.
ಸುಬ್ಬ ಕೂಡ “ಹೀಗೆ ಆಗಾಗ ಬರ್ತೀರಮ್ಮ..ನಮಗೂ ನಿಮ್ಮನ್ನು ಬಿಟ್ರೆ ಯಾರಿದ್ದಾರೆ. ನೀವ್ ಕೇಳಿದ್ದೆಲ್ಲ ಕೊಡಿಸಲು ಈ ಭಾವ ಯಾವಾಗಲು ರೆಡಿ..”ಎಂದಾಗ ಹೂಂ ಭಾವ.. “ಬರೀ ಅಕ್ಕ ನಮ್ಮೋಳಲ್ಲ. ಭಾವ ಕೂಡಾ ನಮ್ಮೋರು” ಅಂತ ನಿಮ್ಮ ಪರಿಚಯ ಆದ ಮೇಲೆಯೇ ಗೊತ್ತಾಗಿದ್ದು. ನಿಮ್ಮಿಬ್ಬರ ಮಾತು, ಪ್ರೀತಿ ಇಷ್ಟೆ ಸಾಕು ನಮಗೆ. ಲವ್ ಯು ಅಕ್ಕ ಭಾವ ಎಂದು ಕೈ ಬೀಸುತ್ತಾರೆ.
ಸುಬ್ಬ ಸುಬ್ಬಿ ವಿಜಯದ ನಗೆ ಬೀರುತ್ತಾ “ನಂಟು ಉಳಿಯಿತು , ಗಂಟು ಉಳಿಯಿತು” ಎನ್ನುತ್ತಾ ಮನೇ ಕಡೆ ಹೊರಡುತ್ತಾರೆ.
(ಇದೆಲ್ಲಾ 100% ಕಾಲ್ಪನಿಕ ಹಾಸ್ಯಬರಹ. ಎಲ್ಲಾ ತಂಗಿಯರಿಗೂ, ನಾದಿನಿಯರಿಗೂ ಸುಬ್ಬಿ ಸುಬ್ಬನ ಮನೆಗೆ ಆತ್ಮೀಯ ಸ್ವಾಗತ ಇದ್ದೆ ಇರುತ್ತೆ. ಹಾ. ಹೀಗೆಲ್ಲಾ ಚಮಕ್ ಕೊಡದೇ ಮನೆಗೆ ಬಂದರೆ ಒಂದೊಳ್ಳೆ ಊಟಾ, ಹೊರಗೆ ಸಿಕ್ರೆ ಒಂದೊಳ್ಳೆ ಟ್ರೀಟ್ ಕೊಡಿಸಿಯೆ ಕಳಿಸುವುದು)
- ಸುಮ ಉಮೇಶ್