ದೇಶದ ಸಂಸ್ಕೃತಿಯ ಪ್ರತಿಬಿಂಬವಾಗಿರುವ ರಂಗೋಲಿ ಕಲೆಯನ್ನು ಬೆಳೆಸುವಲ್ಲಿ ಡಾ. ಭಾರತಿ ಮರವಂತೆ ಅವರ ಪಾತ್ರ ದೊಡ್ಡದು, ರಂಗೋಲಿಯಲ್ಲಿಯೇ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎನ್ನುವ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ. ಡಾ. ಭಾರತಿ ಮರವಂತೆ ಅವರ ಸಾಧನೆಯನ್ನು ತಪ್ಪದೆ ಮುಂದೆ ಓದಿ….
ಮನೆ ಮುಂದೆ ಕಸಗೂಡಿಸಿ… ನೀರು ಹಾಕಿ… ಚಂದದ ರಂಗೋಲಿ ಬಿಡಿಸಿದರೆ ಆ ಮನೆಯ ಅಂಗಳಕ್ಕೂ, ಆ ಮನೆಗೂ ಒಂದು ಶೋಭೆ. ದುಷ್ಟಶಕ್ತಿಗಳು ರಂಗೋಲಿಯನ್ನು ದಾಟಿ ಬರುವುದಿಲ್ಲ ಎನ್ನುವ ನಂಬಿಕೆ ಅನಾದಿಕಾಲದಿಂದಲೂ ಇದೆ. ಹಾಗಾಗಿ ಹಿಂದೆ ರಂಗೋಲಿ ಬಾರದ ಹೆಣ್ಣುಮಕ್ಕಳೇ ಇರುತ್ತಿರಲಿಲ್ಲ. ಚಿಕ್ಕದು, ದೊಡ್ಡದು, ಚುಕ್ಕಿ, ಎಳೆ, ಒಂದೆಳೆ , ಎರಡೆಳೆ ಹೀಗೆ ರಂಗೋಲಿ ಹಾಕುವುದರಲ್ಲಿ ಹೆಣ್ಣುಮಕ್ಕಳು ಯಾವಾಗಲು ಸ್ಪರ್ಧೆಗೆ ಇಳಿಯುತ್ತಿದ್ದರು, ಅದೇ ಕಾಲ ಬದಲಾದಂತೆ ರಂಗೋಲಿ ಹಾಕುವ ಕೈಗಳೆಲ್ಲ ಗಾಣದ ಎತ್ತಿನಂತೆ ಹೊರಗೆ ದುಡಿಯೋ ಕಡೆಗೆ ಗಮನ ಹರಿಸಿದರೋ ಆಗ ನಮ್ಮ ನಾಡಿನ ಸಂಸ್ಕೃತಿಯಲ್ಲಿ ಒಂದಾದ ರಂಗೋಲಿಯು ನಿಧಾನವಾಗಿ ಕಾಣೆಯಾಗುತ್ತಾ ಹೋಯಿತು.

ಈಗ ಪಿಜ್ಜಾ, ಬರ್ಗರ್ ನಗರಗಳಲ್ಲಿ ಮನೆ ಮುಂದೆ ರಂಗೋಲಿಗಳು ಕಾಣುವುದು ಅಸಾಧ್ಯ, ರಂಗೋಲಿಯ ವೈಭವವನ್ನು ನೋಡಬೇಕು ಎಂದರೆ ಹಳ್ಳಿಗಳಿಗೆ ಹೋಗಬೇಕು, ಬಹುಶಃ ಅಲ್ಲಿಯೂ ಕಮ್ಮಿ ಆಗಿರಬಹುದು. ಹೀಗೆ ಅಳಿವಿನಂಚಿನಲ್ಲಿರುವ ರಂಗೋಲಿಯನ್ನು ಉಳಿಸುವ, ಬೆಳೆಸುವ ಮತ್ತು ಅದರಲ್ಲಿಯೇ ಸಾಧಿಸಿ ತೋರಿಸುವ ಛಲವೇನಾದರೂ ಇದ್ದರೇ ಅದು ಭಾರತಿ ಮರವಂತೆ ಅವರದು.
ಭಾರತಿ ಮರವಂತೆ ಅವರು ಮೂಲತಃ ಕರ್ನಾಟಕದ ಉಡುಪಿ ಜಿಲ್ಲೆಯವರು, ತಾಯಿ ಸುಶೀಲ್ ಹಾಗೂ ತಂದೆ ಶೇಷಾಗಿರಿ ದಂಪತಿಗಳ ಮೂರೂ ಮಕ್ಕಳಲ್ಲಿ ಇವರು ಒಬ್ಬರು. ಓದಿನಲ್ಲಿ ಚೂಟಿಯಾಗಿದ್ದ ಅವರು, ರಂಗೋಲಿ ಹಾಕುವುದರಲ್ಲಿ ಅಷ್ಟೇ ಪ್ರವೀಣರಾಗಿದ್ದರು. ಬಿ ಎ ಓದುವಾಗ ಕನ್ನಡ ಪ್ರಾಧ್ಯಾಪಕರು ಇವರು ಬಿಡಿಸಿದ ರಂಗೋಲಿ ನೋಡಿ ಬಾಯಿ ಮೇಲೆ ಬೆರಳಿಟ್ಟು, ‘ರಂಗೋಲಿ ಸ್ಪೆಷಲಿಸ್ಟ್ ಭಾರತಿ’ ಎಂದೇ ನಾಮಕರಣ ಮಾಡಿದರಂತೆ. ಎಲ್ಲೇ ರಂಗೋಲಿ ಸ್ಪರ್ಧೆಗಳಿರಲಿ ಭಾರತಿ ಅವರನ್ನು ತಪ್ಪದೆ ಕಳುಹಿಸುತ್ತಿದ್ದರಂತೆ. ಹೋದ ಕಡೆಯಲ್ಲೆಲ್ಲ ಭಾರತಿಯವರು ಬಹುಮಾನವಿಲ್ಲದೆ ವಾಪಾಸ್ ಮನೆಗೆ ಬರುತ್ತಿರಲಿಲ್ಲ.
ಭಾರತಿ ಅವರ ರಂಗೋಲಿ ನೋಡಿದ ‘ರಂಗೋಲಿ ಬ್ರಹ್ಮ’ ಎಂದೇ ಖ್ಯಾತರಾದ ಬಿಪಿ ಬಾಯರಿ ಅವರು ಭಾರತಿ ಅವರನ್ನು ಕರೆದು ಹರಿಸಿದರಂತೆ. ಹೀಗೆ ಉಡುಪಿಯಿಂದ ಶುರುವಾದ ರಂಗೋಲಿ ಪಯಣ ಗೋಕಾಕ್ ನಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನ ಬಂದಾಗ ಕಾರನಾಡಿ ಗುರುಗಳು ‘ನೀನು, ಇದರಲ್ಲಿಯೇ ಮುಂದುವರೆ …ನಾಡಿನ ಸಂಸ್ಕೃತಿ ಬೆಳೆಸುವ ರೂವಾರಿಯಾಗು’… ಎಂದು ಶುಭ ಹಾರೈಸಿದರಂತೆ. ಹೀಗೆ ನಾಡಿನ ಹಿರಿಯರ ಆಶೀರ್ವಾದ, ಪ್ರೀತಿಯಿಂದ ನನ್ನಲ್ಲಿ ಬೆಳೆಯುವ ಉತ್ಸಾಹ ತುಂಬಿತು ಎಂದು ಭಾರತಿಯವರು ನಗುತ್ತಾ ಹೇಳುತ್ತಾರೆ.
ಹೀಗೆ ಪ್ರತಿಭಾವಂತರನ್ನು ಒಂದು ಮೂಲೆಯಲ್ಲಿ ಕಟ್ಟಿ ಕೂಡಿಸಲಾಗದು, ಅವರ ಪ್ರತಿಭೆ ಹೇಗಾದರೂ ಪಸರಿಸುತ್ತಲೇ ಇರುತ್ತದೆ. ಭಾರತಿಯವರ ಪ್ರತಿಭೆಯೂ ಹಾಗೆಯೇ ಬಾಲ್ಯದಿಂದಲೂ ಚಿತ್ರಕಲೆ, ರಂಗೋಲಿಯ ಜೊತೆ ಆಟವಾಡುತ್ತಾ ಬಣ್ಣಗಳ ಮೇಲೆ ಒಲವನ್ನು ಬೆಳೆಸಿಕೊಂಡವರು. ಆ ಪ್ರೀತಿ ಮುಂದೊಂದು ದಿನ ‘ರಂಗೋಲಿಯಲ್ಲಿಯೇ ಡಾಕ್ಟರೇಟ್ ಪಡೆದ ಮೊದಲ ಮಹಿಳೆ’ ಆಗುತ್ತೇನೆ ಎಂದು ಅವರೇ ನೆನೆಸಿರಲಿಲ್ಲವಂತೆ. ೨೦೧೦ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಡಾ. ಅಕ್ಕಮಹಾದೇವಿಯವರ ಮಾರ್ಗದರ್ಶನದಲ್ಲಿ ರಂಗೋಲಿ ಕಲೆ ವಿಷಯದ ಸಂಶೋಧನೆ ಮಾಡಿ ಡಾಕ್ಟರೇಟ್ ಪದವಿ ಪಡೆದ ಹೆಗ್ಗಳಿಕೆ ಅವರದು.

ವೃತ್ತಿಯಲ್ಲಿ ಭಾರತಿಯವರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದು, ಪ್ರವೃತ್ತಿಯಾಗಿ ರಂಗೋಲಿ ಕಲಾವಿದರಾಗಿ ಎಲ್ಲರ ಹೃದಯದಲ್ಲಿ ಅಚ್ಚಳಿಯದ ಚಂದದ ಚಿತ್ತಾರ ಬಿಡಿಸುವಲ್ಲಿ ಯಶಸ್ವಿಯಾದವರು. ರಂಗೋಲಿ ಬಿಡಿಸುವ ಕೈಗಳೆಲ್ಲ ಮನೆಯ ಸೌಟು ಹಿಡಿಯುಲು ಯೋಗ್ಯರು ಅನ್ನುವವರಿಗೆ ಭಾರತಿಯವರು ರಂಗೋಲಿಯಲ್ಲಿಯೇ ಸಾಕಷ್ಟು ಸಾಧಿಸಿ ತೋರಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ರಂಗಭೂಮಿಯಲ್ಲಿ ‘ಬಣ್ಣಗಾರಿಕೆ’ ವಿಷಯದಲ್ಲಿ ಕಲಾವಿದರ ಫೆಲೋಶಿಪ್ ಪಡೆದಿದ್ದಾರೆ, ರಂಗೋಲಿ ಕಲಾ ಪರಿಷತ್ತಿನ ಸಂಸ್ಥಾಪಕರಾಗಿ ಹಾಗೂ ‘ಶ್ರೀ ರಂಗೋಲಿ’ ಪತ್ರಿಕೆ ಎನ್ನುವ ಪತ್ರಿಕೆ ಕಟ್ಟಿ ೧೪ ಸಂಚಿಕೆಯನ್ನು ಹೊರಗೆ ತಂದಿದ್ದಾರೆ. ಇದು ಭಾರತದ ಮೊದಲ ಪತ್ರಿಕೆಯಾಗಿದ್ದು, ಇದರಲ್ಲಿ ರಂಗೋಲಿಗಳ ವಿನ್ಯಾಸ, ರಂಗೋಲಿ ಕಲಾವಿದರ ಪರಿಚಯ, ಬುಡಕಟ್ಟು ಜನ ಸಮುದಾಯದವರಲ್ಲಿ ಕಾಣುವ ಹಸೆ ಚಿತ್ತಾರ, ಹಲಿ, ಸಾಮಾನ್ಯ ರಂಗೋಲಿಯ ಪರಿಚಯ ಈ ಪತ್ರಿಕೆಯ ವಿಶೇಷತೆ.
ಭಾರತಿಯ ಅವರು ರಂಗೋಲಿಗೆ ಸಂಬಂಧ ಪಟ್ಟಂತೆ ಕೆಲವು ಕೃತಿಗಳು ಪ್ರಕಟಗೊಂಡಿವೆ, ಅವುಗಳಲ್ಲಿ ‘ಕರಾವಳಿ ಕರ್ನಾಟಕದ ರಂಗೋಲಿ ಕಲೆ’ ಭಾರತಿಯವರ ಸಂಶೋಧನಾ ಕೃತಿಯಾಗಿದ್ದು, ಅದನ್ನು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಪ್ರಕಟಿಸಿದೆ. ‘ಜಾನಪದ ಚಿತ್ತಾರಗಳು’ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಕಟಿಸಿದೆ. ದೇವದಾಸಿಯರ ಹಾಡುಗಳು, ಹಾಡಿಗೆ ಹನ್ನೆರಡಂಗ, ಕಥಿ ಹೇಳೋ ಹಾಡ್ಗರ್, ರಂಗೋಲಿ, ಹಬ್ಬಗಳಿಗೆ ರಂಗೋಲಿ, ಜಾನಪದ ಇಣಕು ನೋಟ ಸೇರಿದಂತೆ ಸುಮಾರು ೧೦ ಕ್ಕೂ ಹೆಚ್ಚು ಕೃತಿಗಳು ಏನ್. ಆರ್. ಎಂ. ಹೆಚ್ ಪ್ರಕಾಶನ ಕೊಟ್ಟೇಶ್ವರ ಉಡುಪಿ ಜಿಲ್ಲೆ ಪ್ರಕಟಿಸಿದೆ.

ಸಣ್ಣ ಚುಕ್ಕಿಯಿಂದ ಶುರುವಾದ ರಂಗೋಲಿಯೊಂದಿಗಿನ ಒಡನಾಟ, ಮುಂದೆ ೭೬ ನಿಮಿಷದಲ್ಲಿ ೭೬ ರಾಷ್ಟ್ರಧ್ವಜಗಳನ್ನು ರಚಿಸಿ ‘ಜಾಕಿ ಬುಕ್ ಆಫ್ ವಲ್ಡ್ ರೆಕಾರ್ಡ್ಸ್’ ನಲ್ಲಿ ತಮ್ಮಹೆಸರನ್ನು ದಾಖಲಿಸುವಲ್ಲಿ ಯಶಸ್ವಿಯಾದರು. ಇವರ ಇನ್ನೊಂದು ಸಾಧನೆಯೆಂದರೆ ೫,೦೦೦ ಹೆಚ್ಚು ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ರಂಗೋಲಿ ತರಬೇತಿ ನೀಡಿದ್ದು, ನಾಡಿನಾದ್ಯಂತ ೧,೦೦೦ ಕ್ಕೂ ಹೆಚ್ಚು ಬೃಹತ್ ರಂಗೋಲಿ ಪ್ರದರ್ಶನ ನೀಡಿದ ಕೀರ್ತಿ ಭಾರತಿ ಮರವಂತೆ ಅವರದು.
ಹುಬ್ಬಳ್ಳಿಯ ಶಿವಾನಂದ ಎನ್ನುವ ಸಂಶೋಧಕರೊಬ್ಬರು ಡಾ.ಭಾರತಿ ಮರವಂತೆಯವರ ಸಾಧನೆಯ ಕುರಿತು ‘ಭಾರತಿಯವರ ಕಲಾ ಜೀವನ’ ಎನ್ನುವ ವಿಷಯದ ಮೇಲೆ ಸಂಶೋಧನೆ ಮಾಡಿದ್ದಾರೆ. ೨೦೧೧ ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಇಂದಿರಾ ಗಾಂಧಿ ಸಧ್ಭಾವನಾ ಪ್ರಶಸ್ತಿ, ಕರ್ನಾಟಕ ಕಲಾ ಮಾಧ್ಯಮ ರತ್ನ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಸುವರ್ಣ ಕನ್ನಡ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಗೌರವಗಳು ಅವರಿಗೆ ಸಂದಿವೆ.
ತಮ್ಮ ಸಾಧನೆಯ ಹಿಂದೆ ಕುಟುಂಬ ಸದಸ್ಯರ ಬೆಂಬಲವನ್ನು ತಪ್ಪದೆ ಸ್ಮರಿಸುತ್ತಾರೆ. ತಮ್ಮಾ ವಿಶ್ವನಾಥ್ ತಾವು ಎಲ್ಲೇ ಹೋದರು ರಂಗೋಲಿ ಪುಡಿಯ ಹೊತ್ತುಕೊಂಡು ಬರುತ್ತಿದ್ದ, ನಾನು ಏನೇ ಸಾಧಿಸಿದ್ದರೂ ಅದರ ಶ್ರೇಯಸ್ಸು ನನ್ನ ಕುಟುಂಬಕ್ಕೆ ಸೇರಬೇಕು ಎಂದು ಸಂತೋಷದಿಂದ ಹೇಳುತ್ತಾರೆ.
ಡಾ.ಭಾರತಿ ಮರವಂತೆ ಅವರ ಸಾಧನೆಯ ಕುರಿತು ಎಷ್ಟೇ ಬರೆದರೂ ಕಡಿಮೆಯೇ ಆಗುತ್ತದೆ, ಅವರ ಸಾಧನೆ ಎನ್ನುವುದು ಅವರು ಬಿಡಿಸಿದ ದೊಡ್ಡ ರಂಗೋಲಿಯಂತೆ ಅದನ್ನು ಎಷ್ಟೇ ನೋಡಿದರು ನಮ್ಮನ್ನು ಬೆರಗುಗೊಳ್ಳಿಸುತ್ತಾ ಹೋಗುತ್ತದೆ, ಅವರ ಸಾಧನೆ ನಿರಂತರವಾಗಿ ಸಾಗುತ್ತಿರಲಿ ಎಂದು ಆಕೃತಿ ಕನ್ನಡ ಅವರಿಗೆ ಶುಭಕೋರುತ್ತದೆ.
- ಶಾಲಿನಿ ಹೂಲಿ ಪ್ರದೀಪ್
