ಹೂಲಿಶೇಖರ ಅವರ ೫೦ನೇಯ ರಂಗಕೃತಿ 'ಸುಳಿವಾತ್ಮ ಎನ್ನೊಳಗೆ' ಬಿಡುಗಡೆ

ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ಮಾಡಬೇಕಾದ್ರೆ ಮನೆಯವರ ಅನುಕೂಲವನ್ನು ನೋಡಿಕೊಂಡರೆ ಸಾಲದು. ಕಾರ್ಯಕ್ರಮಕ್ಕೆ ಬರುವ ಹೊರಗಿನ ಜನರ ಅನುಕೂಲವೂ ನೋಡಿಕೊಳ್ಳಬೇಕು. ಇಲ್ಲವಾದರೆ ಸಭಾಂಗಣ ಭಣ ಭಣವಾಗಿ ಬಿಡುತ್ತದೆ. ಯುಗಾದಿ ಹಬ್ಬವನ್ನು ಮೊನ್ನೆಯಷ್ಟೇ ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಜೊತೆಗೆ ಧಗೆ ಧಗೆ ಬಿಸಿಲಿನ ನಡುವೆ ಎಲೆಕ್ಷನ್ ಪ್ರಚಾರವು ಕಾವೇರಿತ್ತು. ಇವುಗಳ ಮಧ್ಯೆ ನನ್ನ ಅಪ್ಪ ಹೂಲಿಶೇಖರ ಬರೆದಂತಹ ಹೊಸ ನಾಟಕ ‘ಸುಳಿವಾತ್ಮ ಎನ್ನೊಳಗೆ’ ಪುಸ್ತಕದ ಅನಾವರಣ ಕಾರ್ಯಕ್ರಮವನ್ನು ಭಾನುವಾರದಂದು ಮಾಡುವುದಾಗಿ ಪ್ರಚಾರ ಮಾಡಿ ಬಿಟ್ಟಿದ್ದೆವು. ಆಮೇಲೆ ಶುರುವಾಯಿತು ನೋಡಿ ಹಬ್ಬ ಮತ್ತು ಎಲೆಕ್ಷನ್ ಎನ್ನುವ ಎರಡು ಸುಳಿಗಳ ಭಯ.

ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಗಣ್ಯವ್ಯಕ್ತಿಗಳು ಬರುವುದಾಗಿ ಒಪ್ಪಿಕೊಂಡಿದ್ದರು. ಪುಸ್ತಕ ಬಿಡುಗಡೆ ನೀವೇ ಮಾಡಬೇಕು ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಟಿ.ಎಸ್. ನಾಗಾಭರಣ ಅವರನ್ನು ಕೇಳಿಕೊಂಡಾಗ ತುಂಬು ಹೃದಯದಿಂದ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿದ್ದರು. ನಾಗಾಭರಣ ಅವರ ಸರಳ ವ್ಯಕ್ತಿತ್ವ ಅಪ್ಪನ ಪ್ರತಿಯೊಂದು ಕಾರ್ಯಕ್ರಮದಲ್ಲಿ ಅವರನ್ನು ನೆನೆಸಿಕೊಳ್ಳುವಂತೆ ಮಾಡುತ್ತಾರೆ. ಕಾರ್ಯಕ್ರಮಕ್ಕೆ ನೀವು ಮುಖ್ಯ ಅತಿಥಿಗಳಾಗಿ ಆಗಮಿಸಬೇಕು ಎಂದು ಪ್ರಜಾವಾಣಿ ಸಂಪಾದಕ ಶ್ರೀರವೀಂದ್ರ ಭಟ್ ಅವರನ್ನು ಕೇಳಿಕೊಂಡಾಗ ಒಂದು ಕ್ಷಣವೂ ಯೋಚಿಸದೆ ‘yes, ನಾನು ಬರ್ತೀನಿ’ ಅಂತ ಖುಷಿಯಿಂದ ಒಪ್ಪಿಗೆ ನೀಡಿದ್ದರು.ಅವರ ಬಗ್ಗೆ ಒಂದು ಸತ್ಯವಾದ ಮಾತನ್ನು ಹೇಳಬೇಕೆಂದರೆ ಕಾರ್ಯಕ್ರಮದ ಮೊದಲು ನಾನಾಗಲಿ ಅಥವಾ ಅಪ್ಪವಾಗಲಿ ಅವರನ್ನು ಎಂದು ಮುಖಾಮುಖಿ ಯಾಗಿ ಭೇಟಿಯಾಗಿರಲಿಲ್ಲ. ಇಂದಿನ ಕಾಲದಲ್ಲಿ ಪರಿಚಯವಿದ್ದರೂ ‘ನಾನು ಬ್ಯುಸಿ’ ಎನ್ನುವ ಜನರಿದ್ದಾರೆ. ಅಂಥದರಲ್ಲಿ ರವೀಂದ್ರ ಭಟ್ ಅವರು ಒಪ್ಪಿಗೆ ನೀಡಿದಾಗ ಅಪ್ಪನಿಗೆ, ನನಗೆ ತುಂಬಾನೇ ಸಂತೋಷವಾಗಿತ್ತು. ಇನ್ನು ಕಾರ್ಯಕ್ರಮಕ್ಕೆ ಅಧ್ಯಕ್ಷರನ್ನಾಗಿ ಧಾರವಾಡದ ಜವಾರಿ ಭಾಷೆ, ಸಾಹಿತ್ಯ ವಿಮರ್ಶೆಗೆ ಹೆಸರಾದ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರನ್ನು ಕೇಳಿಕೊಂಡಾಗ ತಮ್ಮ ನಗು ಮುಖದಲ್ಲೇ ‘ಆಗಲಿ ಹೂಲಿ, ನಾನು ಬರ್ತೀನಿ’ ಎಂದರು. ಪಟ್ಟಣ ಶೆಟ್ಟಿ ಅವರು ಕೇವಲ ನಮ್ಮ ತಂದೆ ಹೂಲಿಶೇಖರ ಅವರಿಗಷ್ಟೇ ಗುರುಗಳಾಗಿರಲಿಲ್ಲ. ನನ್ನ ಅಣ್ಣ, ಅಕ್ಕ ಹಾಗು ನನಗೂ ಕೂಡ ಗುರುಗಳು, ಮಾರ್ಗದರ್ಶಕರು.

ಈ ಮೂವರು ದಿಗ್ಗಜರು ಬರುವ ಕಾರ್ಯಕ್ರಮಕ್ಕೆ ಜನ ಬಾರದಿದ್ದರೇ ಏನು ಗತಿ?ಎನ್ನುವ ಭೀತಿ ಒಂದೆಡೆ ಶುರುವಾಗಿತ್ತು. ಆದರೆ ಹಬ್ಬವಿರಲಿ, ಹರಿದಿನವಿರಲಿ, ಎಲೆಕ್ಷನ್ ಬಿಸಿ ಇರಲಿ, ಸಾಹಿತ್ಯದ ಕಂಪು, ಸಾಹಿತ್ಯದ ಮೇಲಿನ ಪ್ರೀತಿ, ಅಪ್ಪನ ಮೇಲಿನ ಪ್ರೀತಿಗೆ ಆ ಕಾರ್ಯಕ್ರಮಕ್ಕೆ ನೂರಾರು ಜನರು ಸಾಕ್ಷಿಯಾದರು. ಕಾರ್ಯಕ್ರಮ ಶುರುವಾಗುವಷ್ಟರಲ್ಲಿ ಹಾಲ್ ಫುಲ್ ಆಗಿ ಹೋಗಿತ್ತು. ಅಲ್ಲಿ ನೆರೆದಿದ್ದ ಜನರನ್ನು ನೋಡಿದಾಗ ಸಂತೋಷವಾಗುವುದಷ್ಟೇ ಅಲ್ಲ,ಸ್ವಲ್ಪ ಮಟ್ಟಿಗೆ ನಾನು ಭಾವುಕಳೂ ಆಗಿದ್ದೆ. ಕಾರಣ ಅಪ್ಪ ಬರೆದ ಈ ನಾಟಕ ೫೦ನೇಯದಾಗಿತ್ತು. ಮನೆಯವರಿಗೆಲ್ಲ ಈ ಕಾರ್ಯಕ್ರಮ ಬಹಳ ವಿಶೇಷವಾಗಿತ್ತು. ಅವರು ಬರೆದಂತಹ ಪ್ರತಿಯೊಂದು ನಾಟಕದಲ್ಲಿ ಹೊಸದೊಂದು ವಿಚಾರಗಳು, ಆಲೋಚನೆಗಳಿರುತ್ತವೆ. ‘ಸುಳಿವಾತ್ಮ ಎನ್ನೊಳಗೆ’ ನಾಟಕದಲ್ಲಿಯೂ ಹೊಸತನವಿದೆ. ಅದನ್ನು ರಂಗದ ಮೇಲೆ ತಂದಾಗ ಹೊಸದೊಂದು ಕ್ರಾಂತಿಯೇ ಆಗುತ್ತದೆ ಎನ್ನುವ ನಂಬಿಕೆ ನನಗಿದೆ. ಅಂತಹ ಪುಸ್ತಕವನ್ನು ಅದ್ದೂರಿಯಾಗಿಯೇ ಹೊರಗೆ ತರಬೇಕು ಎನ್ನುವ ಆಸೆ ನನಗೆ ಮತ್ತು ನನ್ನ ಕುಟುಂಬದವರಿಗಿತ್ತು. ಅದನ್ನುಜನರು ನಿರಾಸೆ ಮಾಡಲಿಲ್ಲ .

ಇತ್ತೀಚಿಗಷ್ಟೇ ಆಕೃತಿ ಕನ್ನಡ ಡಾಟ್ ಕಾಮ್ ಅಂತರ್ಜಾಲ ಪತ್ರಿಕೆಯನ್ನು ಅಪ್ಪಾಜಿ, ನಾನು ಆರಂಭಿಸಿದ್ದೆವು. ಈ ಅಂತರ್ಜಾಲ ಪತ್ರಿಕೆಯ ಮೂಲಕವೇ ಹಿರಿಯ ಕಲಾವಿದರು ಮತ್ತು ನಾಟಕಕಾರರನ್ನು ತಮ್ಮ ಕಾರ್ಯಕ್ರಮದಲ್ಲಿ ಪ್ರೋತ್ಸಾಹಿಸಬೇಕು, ಬೆಳೆಸಬೇಕು ಎನ್ನುವ ಉದ್ದೇಶದಿಂದ ‘ಆಕೃತಿ ಕನ್ನಡಶ್ರೀ ಪ್ರಶಸ್ತಿ’ಯನ್ನು ನೀಡಬೇಕು ಎಂದು ಮನೆಯವರೊಂದಿಗೆ ಚರ್ಚಿಸಿದಾಗ ಮನೆಯವರಿಗೆಲ್ಲ ಹೆಮ್ಮೆಯ ಜೊತೆಗೆ ಸಂತೋಷವು ಆಯಿತು. ಆ ಪ್ರಶಸ್ತಿಯನ್ನು ಯಾರಿಗೆ ಕೊಡಬೇಕು ಎನ್ನುವ ಪ್ರಶ್ನೆ ಬಂದಾಗ,ಆಗ ಆಯ್ಕೆ ಮಾಡಿಕೊಂಡಿದ್ದು, ಧಾರವಾಡದ ಸಾಧನಕೇರಿಯ ಅನಂತ ದೇಶಪಾಂಡೆ ಅವರನ್ನು. ನೋಡಲು ದ.ರಾ.ಬೇಂದ್ರೆ ಅವರಂತೆ ಕಾಣುವ ಅವರು ಅಪ್ಪಟ ಬೇಂದ್ರೆಯ ದರ್ಶನವನ್ನು ಕೊಡುವ ಕಿರುತೆರೆಯ ಕಲಾವಿದ.ಈ ಕಾರ್ಯಕ್ರಮಕ್ಕೆ ಮುಖ್ಯ ಆಕರ್ಷಣೆಯನ್ನು ತಂದುಕೊಟ್ಟರು.

ಮಾತುಗಳ ಮಧ್ಯೆ ಸಂಗೀತ ಇದ್ದರೇ ಕಾರ್ಯಕ್ರಮಕ್ಕೆ ಒಂದು ಕಳೆ. ಕಾರ್ಯಕ್ರಮದಲ್ಲಿ ಹೂಲಿಶೇಖರ ಅವರ ರಚನೆಯ ರಂಗ ಗೀತೆಯನ್ನು ಹಾಡಿದ ಪ್ರದೀಪ್, ಅಂದರೆ ನನ್ನ ಮನೆಯ ಯಜಮಾನ ಹಾಡುವುದರ ಮೂಲಕ ಅಪ್ಪಾಜಿಯ ರಂಗಗೀತೆಯತ್ತ ಪ್ರೇಕ್ಷಕರನ್ನು ಸೆಳೆದರು.

ಕಾರ್ಯಕ್ರಮದ ಕುಂದುಕೊರತೆಗಳನ್ನು ಮುಚ್ಚಿಹಾಕುವ ಶಕ್ತಿ ಇದ್ದರೇ ಅದು ನಿರೂಪಕರಿಗೆ ಮಾತ್ರ ಸಾಧ್ಯ. ಅದರ ಉಸ್ತುವಾರಿಯನ್ನುತಗೆದುಕೊಳ್ಳುವುದಷ್ಟೇ ಅಲ್ಲ, ಅಚ್ಚುಕಟ್ಟಾಗಿ ನಿಭಾಯಿಸಿದ ಚೈತನ್ಯ ಟೆಕ್ನೋ ಶಾಲೆಯ ಪ್ರಾಂಶುಪಾಲರಾದ ಜಗದೀಶ ಮತ್ತು ಕಿರುತೆರೆಯ ನಟಿ ಲಕ್ಷ್ಮಿ ನಾಡಗೌಡ ಅವರಿಗೆ ಹೃತ್ಪೂರ್ವಕ ವಂದನೆಯನ್ನು ಹೇಳಲೇಬೇಕು. ರಂಗಸ್ಥೆ ತಂಡ ಕಾರ್ಯಕ್ರಮದ ಬೆನ್ನೆಲುಬಾಗಿ ನಿಂತರು. ಕಾರ್ಯಕ್ರಮವು ಯಾವುದೇ ಕುಂದುಕೊರತೆಗಳಿಲ್ಲದೆ ಹಬ್ಬದ ವಾತಾವರಣವಾಗಿಸಿದ ಪ್ರತಿಯೊಬ್ಬರಿಗೂ ನನ್ನ ಅಕ್ಷರ ರೂಪದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಹೀಗೆ ನಿಮ್ಮೆಲ್ಲರ ಪ್ರೋತ್ಸಾಹ, ಆಶೀರ್ವಾದ ಇರಲಿ ಎನ್ನುವುದು ನನ್ನ ಆಶಯ…

 

 

 

 

ಶಾಲಿನಿ ಪ್ರದೀಪ್

aakritikannada@outlook.com

Home
News
Search
All Articles
Videos
About
%d bloggers like this:
Aakruti Kannada

FREE
VIEW