‘ಕವಚ’ ಸಿನಿಮಾ ನಾಡಿನೆಲ್ಲೆಡೆ ಸಾಕಷ್ಟು ಸದ್ದು ಮಾಡುತ್ತಿದೆ. ಆ ಸದ್ದಿಗೆ ನಾನು ಕೂಡ ಕುಟುಂಬ ಸಮೇತಳಾಗಿ ಸಿನಿಮಾವನ್ನು ಹೋಗಿ ನೋಡಿ ಬಂದೆ. ‘ಕವಚ’ವನ್ನು ಕನ್ನಡದ ಪದಗುಂಜದಲ್ಲಿ ಹೇಳಬೇಕೆಂದರೆ ರಕ್ಷಣೆಯ ಹೊದಿಕೆ ಎಂದರ್ಥ. ಈ ಸಿನಿಮಾದಲ್ಲಿ ಕಥಾನಾಯಕ ಯಾರಿಗೆ ರಕ್ಷಣೆಯ ಹೊದಿಕೆಯಾಗಿ ನಿಲ್ಲುತ್ತಾನೆ? ಎನ್ನುವ ರೋಚಕ ಕತೆಯೇ ಕವಚವಾಗಿದೆ.
ಈ ಸಿನಿಮಾದಲ್ಲಿ ಶಿವಣ್ಣ ಅವರು ನಾಯಕನಾಗಿ ನಟಿಸಿದ್ದು, ಈ ಯುಗಾದಿ ಹಬ್ಬ ಅವರ ಅಭಿಮಾನಿಗಳಿಗೆ ದೊಡ್ಡ ಸಂಭ್ರಮವನ್ನೇ ತಂದುಕೊಟ್ಟಿದೆ. ಮಾಸ್ ಲುಕ್ ನಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿದ್ದ ಶಿವಣ್ಣ, ಈ ಸಿನಿಮಾದಲ್ಲಿ ಕುರುಡನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕುರುಡನ ಪಾತ್ರ ಎಂದಾಕ್ಷಣ ಶಿವಣ್ಣ ಸಿನಿಮಾ ಪೂರ್ತಿ ಸಪ್ಪೆಯಾಗಿ ಕಾಣುತ್ತಾರೆ ಎಂದು ಕೊಳ್ಳ ಬೇಡಿ. ಸಖತ್ ಥ್ರಿಲ್ ಆಗಿ ನಟಿಸಿದ್ದಾರೆ. ಕಣ್ಣಿದ್ದು ಕುರಡನಾಗಿ ಅಭಿನಯಿಸುವುದು ತುಂಬಾನೇ ಕಷ್ಟ. ಆ ಸವಾಲನ್ನು ಸ್ವೀಕರಿಸಿ ಸಿನಿಮಾವನ್ನು ಯಶಸ್ಸಿನತ್ತ ಕೊಂಡೊಯ್ಯುತ್ತಿದ್ದಾರೆ ಶಿವಣ್ಣ. ಅವರಿಗೆ ಸಾಥ್ ನೀಡಿದ ಬೇಬಿ ನಂದಿನಿ (ಬೇಬಿ ಮೀನಾಕ್ಷಿ) ಪಾತ್ರ ವಿಮರ್ಶಕರಿಗೂ ಇಷ್ಟಾಗುತ್ತದೆ. ಅಷ್ಟು ಮುದ್ದು- ಮುದ್ದಾಗಿ ಕಾಣುವ ನಂದಿನಿ ಎಲ್ಲರ ಮನಸ್ಸಿಗೂ ಬೇಗನೆ ಹತ್ತಿರವಾಗುತ್ತಾಳೆ. ಇವರಿಬ್ಬರು ಜೋಡಿಯಾಗಿ ಹಾಡುವ ಒಂದು ದೃಶ್ಯದಲ್ಲಿ ಡಾ. ರಾಜ್ ಕುಮಾರ ಮತ್ತು ಸುಧಾರಾಣಿಯ ಅಭಿನಯದ ‘ದೇವತಾ ಮನುಷ್ಯ’ ಸಿನಿಮಾದಲ್ಲಿನ ‘ ನಿನ್ನಂತಹ ಅಪ್ಪ ಇಲ್ಲ… ‘ ಹಾಡು ನೆನಪಿಗೆ ಬರುತ್ತದೆ. ಆ ಕ್ಷಣ ಡಾ. ರಾಜ್ ಕುಮಾರ್ ಅವರು ಶಿವಣ್ಣನ ರೂಪದಲ್ಲಿ ನನಗೆ ಕಾಣಿಸಿದರು.
ಕುರುಡರನ್ನು ಅನುಕಂಪದಿಂದ ನೋಡುವ ಈ ಸಮಾಜದಲ್ಲಿ ಕಣ್ಣಿಲ್ಲದಿದ್ದರೂ ಅವರ ಇತರೆ ಇಂದ್ರಿಯಗಳು ಎಷ್ಟು ಚುರುಕಾಗಿರುತ್ತವೆ. ಅವುಗಳನ್ನು ಉಪಯೋಗಿಸಿಕೊಂಡು ಅವರು ಕೂಡ ಸಮಾಜದಲ್ಲಿ ಎಲ್ಲರಂತೆ ಸಭಲರಾಗಿ ಬಾಳಬಲ್ಲರು ಎನ್ನುವುದನ್ನು ಶಿವಣ್ಣ ಅವರ ಪಾತ್ರದ ಮೂಲಕ ಜನರಿಗೆ ಚಿತ್ರತಂಡ ತಿಳಿಹೇಳಿದ್ದಾರೆ. ಮಲಯಾಳಂ ನ ‘ಅಪ್ಪಂ’ ಸಿನಿಮಾದ ರಿಮೇಕ್ ಆದರೂ ಸ್ವಂತ ತನವನ್ನು ತುಂಬುವಲ್ಲಿ ಚಿತ್ರ ಕಥೆಗಾರ ಮತ್ತು ನಿರ್ದೇಶಕ ಜಿವಿಆರ್ ವಾಸು ಅವರ ಪ್ರಯತ್ನ ಯಶಸ್ವೀ ಆಗಿದೆ.
ಈ ಸಿನಿಮಾದಲ್ಲಿ ಖಳನಾಯಕನಾಗಿ ವಸಿಷ್ಠ ಸಿಂಹ ಅವರು ಅಭಿನಯಿಸಿದ್ದಾರೆ ಎಂದು ಒಂದೇ ಸಾಲಿನಲ್ಲಿ ಹೇಳುವುದಕ್ಕಿಂತ ಅವರ ಅಭಿನಯ ಅದ್ಬುತ, ಅತ್ಯದ್ಬುತ್ತವಾಗಿದೆ ಎಂದು ಪದೇ ಪದೇ ಹೇಳಬಹುದು. ಈ ಸಿನಿಮಾದಲ್ಲಿ ನಾಯಕನಷ್ಟೇ ತೂಕದ ಪಾತ್ರ ಖಳನಾಯಕನಿಗೂ ನೀಡಲಾಗಿದೆ. ಆ ಪಾತ್ರವನ್ನು ವಸಿಷ್ಠ ಸಿಂಹ ಅವರು ಸಿಕ್ಕ ಅವಕಾಶವನ್ನು ಸರಿಯಾಗಿ ಸದು ಪಯೋಗ ಪಡಿಸಿಕೊಂಡಿದ್ದಾರೆ. ವಸಿಷ್ಠ ಅವರು ತೆರೆಯ ಮೇಲೆ ಎಂಟ್ರಿ ಕೊಡುವಾಗ ಯಾವುದೇ ಭಯಾನಕ ಮ್ಯೂಸಿಕ್ ಅಬ್ಬರಗಳು ಕೇಳುವುದಿಲ್ಲ. ಕಾರಣ ಅವರ ರಗಡ ಲುಕ್, ಖಡಕ್ ಧ್ವನಿ ಒಂದು ಸಾಕು ಪ್ರೇಕ್ಷಕರನ್ನು ನಡುಗಿಸಲು ಎಂದು ಕವಚದಲ್ಲಿ ತಮ್ಮ ಅಭಿನಯದ ಮೂಲಕ ಸಮರ್ಥವಾಗಿ ಅಭಿನಯಿಸಿ ತೋರಿಸಿದ್ದಾರೆ. ‘ದಿ ವಿಲನ್’ ಎಂದರೆ ವಸಿಷ್ಠ ಎನ್ನುವಷ್ಟು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಅಭಿನಯ ನನಗೆ ತುಂಬಾನೇ ಇಷ್ಟವಾಯಿತು. ಈ ಸಿನಿಮಾಕ್ಕಾಗಿ ಅವರು ಹೊಟ್ಟೆಯನ್ನು ಭರಿಸಿಕೊಂಡು, ಸಿನಿಮಾ ಮುಗಿದ ನಂತರ ಮತ್ತೆ ತಮ್ಮ ಹಳೆ ರೂಪಕ್ಕೆ ವಾಪಸ್ಸಾರಾದರೆಂದು ಕೇಳ್ಪಟ್ಟಿದ್ದೆ. ಪಾತ್ರಕ್ಕಾಗಿ ದಪ್ಪ- ಸಣ್ಣ ಆಗುವ ಕಲಾವಿದರ ಶ್ರದ್ಧೆಗೆ ಮೆಚ್ಚುಗೆಯ ಚಪ್ಪಾಳೆ. ‘ವಸಿಷ್ಠ ಸರ್, ಯು ಆರ್ ರಾಕ್ಡ್.
ನಾಗೇಂದ್ರ ಪ್ರಸಾದ ಅವರ ರಚನೆಯ ‘ರೆಕ್ಕೆಯ ಕುದುರೆಯನ್ನೇರಿ…’ ಹಾಡು ತುಂಬಾನೇ ಇಷ್ಟವಾಯಿತು. ಈ ಹಾಡನ್ನು ಮತ್ತೆ ಮತ್ತೆ ಕೇಳಬೇಕು ಎನ್ನಿಸುತ್ತದೆ ಅಷ್ಟು ಮನಸ್ಸಿಗೆ ಖುಷಿ ಕೊಡುತ್ತದೆ. ಇನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಎವರ್ ಗ್ರೀನ್ ಮ್ಯಾಜಿಕಲ್ ಸಂಗೀತ ನಿರ್ದೇಶಕ ಎಂದೇ ಹೇಳಬಹುದು. ಅವರು ಯಾವುದೇ ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಮಾಡಲಿ ಅದು ಮ್ಯಾಜಿಕ್ ರೀತಿಯಲ್ಲಿ ಸೀದಾ ಪ್ರೇಕ್ಷಕರ ಹೃದಯದಲ್ಲಿ ಹೋಗಿ ನೆಲೆಸಿಬಿಡುತ್ತದೆ.
ಸಿನಿಮಾದಲ್ಲಿ ತೆರೆಯ ಮುಂದೆ ಕೆಲಸ ಮಾಡಿದವರು ಬೇಗನೆ ಜನರ ಕಣ್ಣಿಗೆ ಬಿದ್ದು ಬಿಡುತ್ತಾರೆ. ಆದರೆ ಅದರ ಹಿಂದೆ ಕೆಲಸ ಮಾಡಿದ ಎಷ್ಟೋ ಕಲಾವಿದರು, ತಂತ್ರಜ್ಞರು ಹಿಂದೆಯೇ ಉಳಿದುಕೊಳ್ಳುತ್ತಾರೆ. ಅವರಲ್ಲಿ ಛಾಯಾಗ್ರಾಹಕನು ಕೂಡ ಒಬ್ಬರು. ತಮ್ಮ ಕೈ ಚಳಕದಿಂದ ಉತ್ತಮ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಛಾಯಾಗ್ರಾಹಕನ ಪಾತ್ರ ದೊಡ್ಡದು. ಆ ಕೆಲಸವನ್ನು ಈ ಸಿನಿಮಾದಲ್ಲಿ ರಾಹುಲ ಶ್ರೀವತ್ಸವ ಮತ್ತು ಡ್ರೋನ್ ಕ್ಯಾಮೆರಾವನ್ನು ನಿಭಾಯಿಸಿದ ಶಿವ ಅವರಿಗೆ ಫುಲ್ ಮಾರ್ಕ್ಸ್ ಕೊಡಬೇಕು. ನಮ್ಮ ದೇಶ ಇತರೆ ದೇಶಗಳಿಗಿಂತ ಎಷ್ಟು ಸುಂದರವಾಗಿದೆ ಎನ್ನುವುದನ್ನು ನೋಡುವ ಭಾಗ್ಯ ಅವರ ಮೂಲಕ ಪ್ರೇಕ್ಷಕರಿಗೆ ಸಿಕ್ಕಿದೆ.
‘ಕವಚ’ಕ್ಕೆ ಶೀರ್ಷಿಕೆ ವಿನ್ಯಾಸ ಮಾಡಿದ ಕಲಾವಿದನನ್ನು ಕೂಡ ಇಲ್ಲಿ ನೆನೆಪಿಸಿಕೊಳ್ಳಬೇಕು. ಕಾರಣ ಬ್ಯಾನರ್ ಮೇಲಿನ ಶೀರ್ಷಿಕೆಯ ವಿನ್ಯಾಸ ವಿಭಿನ್ನವಾಗಿ ನನಗೆ ಕಾಣಿಸಿತು. ‘ಕವಚ’ ಪದ ಮೂರೇ ಅಕ್ಷರವಾದರೂ ಪರೋಕ್ಷವಾಗಿ ರಕ್ಷಣೆಯ ಹೊದಿಕೆ ಎಂದು ಶೀರ್ಷಿಕೆಯನ್ನು ನೋಡುತ್ತಿದ್ದಂತೆ ಅರ್ಥವಾಗುತ್ತದೆ. ಇದರ ವಿನ್ಯಾಸಕಾರನು ಕೂಡ ಸಿನಿಮಾದ ಯಶಸ್ಸಿಗೆ ಪರೋಕ್ಷವಾಗಿ ಕಾರಣ ರಾಗಿದ್ದಾರೆ.
ಇನ್ನು ನಾಯಕಿಯರಾಗಿ ಅಭಿನಯಿಸಿದ ಇಶಾ ಕೊಪ್ಪಿಕರ್ ಮತ್ತು ಕೃತಿಕಾ ಜಯರಾಮ್ ಪಾತ್ರ ಅಷ್ಟಕ್ಕೇ ಅಷ್ಟೇ ಇದ್ದರೂ ತಮ್ಮ ಪಾಲಿಗೆ ಬಂದ ಪಾತ್ರವನ್ನುಯಾವುದೇ ಮುನಿಸಿಲ್ಲದೇ ಸಂತೋಷದಿಂದ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆದಷ್ಟು ಕನ್ನಡದ ಕಲಾವಿದರನ್ನು ಹಾಕಿ ಕೊಂಡಿದ್ದರೇ, ಸಿನಿಮಾ ಇನ್ನಷ್ಟು ದೇಸಿಮಯವಾಗುತ್ತಿತ್ತು ಎಂದು ಸ್ವಲ್ಪಮಟ್ಟಿಗೆ ಅನ್ನಿಸಿತು. ಸಿನಿಮಾದ ಎಡಿಟಿಂಗ್ ಅಲ್ಲಿ- ಇಲ್ಲಿ ಸ್ವಲ್ಪ ಮಟ್ಟಿಗೆ ದಾರಿ ತಪ್ಪಿದೆ ಅನ್ನುವುದನ್ನು ಬಿಟ್ಟರೆ, ಸಿನಿಮಾ ರೋಚಕವಾಗಿದೆ, ರಹಸ್ಯಮಯ ವಾಗಿದೆ ಮತ್ತು ಇಷ್ಟಪಟ್ಟು ನೋಡುವಂತಹ ಸಿನಿಮಾವಾಗಿದೆ ಎಂದು ಮನಸ್ಸು ಪೂರ್ತಿಯಾಗಿ ಹೇಳಬಹುದು.
ಸಿನಿಮಾ ವಿಮರ್ಶೆ ಲೇಖನ : ಶಾಲಿನಿ ಪ್ರದೀಪ್