50 ವರ್ಷಗಳ ಹಿಂದೆ ದಿನಪತ್ರಿಕೆ, ರೇಡಿಯೋ, ಟಿವಿ, ಮೊಬೈಲ್, ಬಸ್ಸು, ಕಾರು, ಕಾರ್ಖಾನೆ ,ವಿದ್ಯುತ್, ಆಸ್ಪತ್ರೆ, ರಸ್ತೆ ಏನೂ ಇರಲಿಲ್ಲ. ಅವರ ಬದುಕು ಹೇಗಿತ್ತು. ಅದೇ ಈಗ ನಮಗೆ ಎಲ್ಲವೂ ಇದೆ. ಆದರೆ ಏನು ಇಲ್ಲದಂತೆ ಇದ್ದೇವೆ. ಅಂದರೆ ಇಲ್ಲಿ ಯಾರು ಯಶಸ್ವಿ ಬದುಕು ಬದುಕಿದರು? ಒಂದು ಒಳ್ಳೆಯ ಚಿಂತನ ಲೇಖನ ಮುಷ್ತಾಕ್ ಹೆನ್ನಾಬೈಲ್ ಅವರ ಲೇಖನಿಯಲ್ಲಿ, ಮುಂದೆ ಓದಿ…
ನಿಕಟಪೂರ್ವ ಇತಿಹಾಸದ ಹೆಚ್ಚು ಬೇಡ, ಸುಮಾರು 50 ವರ್ಷಗಳ ಹಿಂದಿನ ಕಾಲವನ್ನು ಊಹಿಸಿಕೊಳ್ಳಿ. ಇಡೀ ಒಂದು ದಿನಕ್ಕೆ ಒಂದೇ ಬಸ್ಸು ಹೋಗುವ ಮತ್ತು ಒಂದೇ ಬಸ್ ಹೋಗಬಹುದಾದಷ್ಟು ಅಗಲದ ರಾಷ್ಟೀಯ ಹೆದ್ದಾರಿ. ಒಂದೇ ಬಸ್ಸು ಕಷ್ಟಪಟ್ಟು ಹೋಗುವ- ಬರುವ ರಾಜ್ಯ ಹೆದ್ದಾರಿ. ಜಿಲ್ಲಾ ರಸ್ತೆಗಳು ಮತ್ತು ಗ್ರಾಮ ರಸ್ತೆಗಳು ಎಂಬ ಪರಿಕಲ್ಪನೆಯೇ ಆಗಿರಲಿಲ್ಲ ಮಾತ್ರವಲ್ಲ, ರಾಷ್ಟ್ರ – ರಾಜ್ಯ ಹೆದ್ದಾರಿಗಳನ್ನು ಬಿಟ್ಟು ಯಾವ ವಾಹನವೂ ಎಲ್ಲಿಗೂ ಬರುತ್ತಿರಲಿಲ್ಲ. ಯಾರಿಗೂ ವಾಹನ ಬೇಕಾಗಿರಲಿಲ್ಲ. ವಾಹನವನ್ನು ಅವಲಂಬಿಸಿ ಯಾರೂ ಇರಲಿಲ್ಲ. ಈ ಲೋಕದಲ್ಲಿರುವ ಹೆಚ್ಚಿನವರಿಗೆ ಆ ಕಾಲದಲ್ಲಿ ಹೋಗಬೇಕಾದ್ದು ಎಲ್ಲಿಯೂ ಇರಲಿಲ್ಲ. ಅವರುಗಳು ಈ ಲೋಕ ಬಿಟ್ಟರೆ ಹೋಗುತಿದ್ದುದು ಪರಲೋಕಕ್ಕೆ ಮಾತ್ರ. ಯಾವ ನದಿಗಳಿಗೂ ಸೇತುವೆಗಳಿರಲಿಲ್ಲ. ಬಸ್ಸು ಹೋಗುವುದು ನದಿಯ ಕಿನಾರೆಗಳವರೆಗೆ ಮಾತ್ರ. ಕೆಲವೊಮ್ಮೆ ಬಸ್ಸು ಹತ್ತಲು ಬಸ್ಸಿನಲ್ಲಿ ಹೋಗಬೇಕಾದ ದೂರಕ್ಕಿಂತ ಹೆಚ್ಚು ಕಾಲ್ನಡಿಗೆಯಲ್ಲೇ ಕ್ರಮಿಸಿ ತಲುಪಬೇಕಿತ್ತು. ನದಿಯನ್ನು ದಾಟಿಸಲು ದೋಣಿಗಳಿರುತ್ತಿದ್ದವು. ಈಗಿನ ಪೀಳಿಗೆಗೆ ದೋಣಿಯ ಪಯಣದ ಅನುಭವಗಳಿಲ್ಲ. ಆಗಿನ ಪೀಳಿಗೆಯಲ್ಲಿ ದೋಣಿಯ ಪಯಣದ ಅನುಭವ ಇರದವರೇ ಇರಲಿಲ್ಲ. ಮನುಕುಲ ಇತಿಹಾಸದ ಮೊದಲ ಸಾರಿಗೆ ಸಾಗಾಟಗಳೆಲ್ಲ ಬಹುಶಃ ದೋಣಿಯಿಂದಲೇ ಆರಂಭವಾದದ್ದಿರಬೇಕು. ಬದುಕಿನ ಬಹುತೇಕ ಗಡಿಗಳು ನದಿಯ ಕಿನಾರೆಗಳೇ. ಬಹುತೇಕರ ಪ್ರಪಂಚದೊಳಗೆ ನದಿ ತೀರಗಳೇ ಆ ಕಾಲದ ಊರು, ರಾಜ್ಯ, ದೇಶದ ಗಡಿಗಳು. ಸಾಮಾನ್ಯವಾಗಿ ಆ ಕಾಲದ ವೈವಾಹಿಕ ಮತ್ತು ಕೌಟುಂಬಿಕ ಸಂಬಂಧಗಳು ಒಂದು ನದಿಯಿಂದ ಇನ್ನೊಂದು ನದಿಯ ತಟದವರೆಗೆ ಮಾತ್ರವೇ ಇರುತಿತ್ತು. ಊರಿಗೊಬ್ಬ ಪಟೇಲನಿರುತ್ತಿದ್ದ. ಅವನೇ ಆ ಕಾಲದ ವಿಧಾನಸಭೆ, ಪಾರ್ಲಿಮೆಂಟ್, ಸುಪ್ರೀಂ ಕೋರ್ಟಿನ ಸಮಸ್ತ ಕಾರ್ಯನಿರ್ವಹಿಸುತಿದ್ದ. ಅದೆಷ್ಟೋ ಮನೆಗಳಲ್ಲಿ ಮೂರು ಹೊತ್ತಿನ ತುತ್ತಿಗೆ ಗತಿಯಿರಲಿಲ್ಲ. ಊರಿನಲ್ಲಿ ತಿಂದುಂಡು ಸುಖವಾಗಿ ತಿರುಗುತ್ತಿದ್ದವರು ಊರ ಪಟೇಲ ಮತ್ತು ಅವನ ಫ್ಯಾಮಿಲಿ-ಪಟಾಲಮ್ಮು ಮಾತ್ರ. ವರ್ಷಕ್ಕೊಮ್ಮೆ ಅಥವ ಎರಡು ಬಾರಿ ಗ್ರಾಮೀಣ ಜನಪದ ಮೂಲ ಹಬ್ಬಗಳೇ ಆ ಕಾಲದ ವಾರ್ಷಿಕ ಮನರಂಜನೆಗಳು. ಯಾರಾದರೂ ಸತ್ತರೆ ವಾರಗಟ್ಟಲೆ ಊರಿನಲ್ಲಿ ಸೂತಕದ ಛಾಯೆ.
ಫೋಟೋ ಕೃಪೆ : scoopwhoop
ಸತ್ತವನ ಬದುಕಿನ ಕಥೆಗಳು ತಿಂಗಳಿಡೀ ಊರಲ್ಲಿ ತಿರುಗಾಡುತ್ತಿದ್ದವು. ಹತ್ತಿರದ ಸಂಬಂಧಿಗಳಿಗೆ ಬದುಕಿನ ಸಂಬಂಧ ಮತ್ತು ಸಹಪಯಣಿಗ ಸತ್ತನಲ್ಲ ಎಂಬ ಬೇಸರವಾದರೆ, ಬಹಳಷ್ಟು ಜನರಿಗೆ, ಹುಟ್ಟಿದವನು ಇಂದಲ್ಲ ನಾಳೆ ಸತ್ತೇ ಸಾಯುತ್ತಾನೆ, ಈ ಮಾಲಿಕೆಯಲ್ಲಿ ತಾವೂ ಕೂಡ ಸಾಯಲೇಬೇಕು ಎನ್ನುವುದು ಯಾರಾದರೂ ಸತ್ತಾಗಲೇ ತಿಳಿಯುತ್ತಿದ್ದ ಮತ್ತು ನೆನಪಾಗುತಿದ್ದ ಸತ್ಯ. ಅದೆಷ್ಟೋ ಜನರಿಗೆ ಸತ್ತವನು ಭೂತವಾಗಿ ಕಾಡುವನೋ ಎಂಬ ಭಯ. ಸಾವಿನ ನಂತರ ಕೆಲದಿನಗಳವರೆಗೆ ಸಂಜೆ ಸೂರ್ಯ ಮುಳುಗುತ್ತಿದ್ದಂತೆ ಮನೆಯಿಂದ ಹೊರಗೆ ಯಾರೂ ಬರುತ್ತಿರಲಿಲ್ಲ. ಸತ್ತವನ ಮುಂದೆ ಅಳುವವರಲ್ಲಿ ಎಲ್ಲರೂ ಸತ್ತವನ ನೆನೆದು ಅಳುವುದಲ್ಲ. ಹೆಚ್ಚಿನವರು ತಾವೂ ಸಾಯಬೇಕಲ್ಲ ಎಂದು ಅಳುವುದು. ರೋಗವು ಅಪರೂಪವಾಗಿರುತಿತ್ತು. ಅವಘಡಗಳೂ ತೀರ ಕಡಿಮೆ. ಕ್ಷಯ-ಕುಷ್ಠರೋಗ ಬಂದವರು ಮತ್ತು ಅಂಗವೈಕಲ್ಯ ಹೊಂದಿದವರು ಶಾಪಗ್ರಸ್ತರೆಂದು ಪರಿಗಣಿಸಲ್ಪಡುತ್ತಿದ್ದರು. ಇಂಥವರಿಗೆ ಅದ್ಯಾವುದೋ ಜನ್ಮದ ಪಾಪ ಈ ಜನ್ಮದಲ್ಲಿ ಕಾಡುತ್ತಿದೆ ಎಂಬುದು ಬಹುತೇಕರ ನಂಬಿಕೆಯಾಗಿತ್ತು. ಉಳಿದ ಸಣ್ಣಪುಟ್ಟ ರೋಗಗಳನ್ನು ಮನೆಮನೆಯಲ್ಲಿನ ಮುದಿ ಡಾಕ್ಷರುಗಳು ಕಷಾಯ, ಕರಿಮೆಣಸು, ಜೇನುತುಪ್ಪ ಕೊಟ್ಟು ನೋಡನೋಡುತ್ತಿದ್ದಂತೆಯೇ ಶಮನ ಮಾಡುತ್ತಿದ್ದರು. ಜ್ವರ, ಹೊಟ್ಟೆನೋವು, ತಲೆನೋವು, ನೆಗಡಿ, ಕೆಮ್ಮು, ಕಿವಿನೋವು, ಕಿವಿ ಸೋರುವಿಕೆ, ವಾಂತಿ -ಬೇಧಿ, ಸೊಂಟ ನೋವು, ಕಣ್ಣಿನ ಕಾಯಿಲೆ, ಕಜ್ಜಿ, ಹುಣ್ಣು, ತುರಿಕೆ, ನಂಜು, ತಲೆ ಸುತ್ತುವುದು, ಚರ್ಮದ ಕಾಯಿಲೆ ಮುಂತಾದ ರೋಗಗಳು ಆ ಕಾಲಕ್ಕೆ ರೋಗಗಳೇ ಅಲ್ಲ. ಅದೆಷ್ಟೋ ಕಾಯಿಲೆಗಳನ್ನು ಮುದುಕಿಯರು ಬರೀ ಬಿಸಿನೀರು ಕುಡಿಸಿ ಒಂದೆರಡು ಭೀಷಣ ಡೈಲಾಗು ಹೊಡೆದೇ ಓಡಿಸುತ್ತಿದ್ದರು. ಮಾನಸಿಕ ಕಾಯಿಲೆಗಳೆಲ್ಲವೂ ಆಗಿನ ಕಾಲದಲ್ಲಿ ಭೂತದ ಉಪದ್ರವಗಳಾಗಿರುತ್ತಿದ್ದವು.
ಫೋಟೋ ಕೃಪೆ : scoopwhoop
ಯಾವುದಾದರೂ ಈ ಕಾಯಿಲೆಗಳು ಬಿಟ್ಟು ಬಿಟ್ಟು ಬರುತಿದ್ದರೆ ಈ ಮುದುಕಿಯರು ದೃಷ್ಟಿ ತೆಗೆಯುತ್ತಿದ್ದರು. ಶತ್ರುಗಳ ಕಣ್ಣು, ರಂಡೆ-ಮುಂಡೆಯರ ಕಣ್ಣು, ನೆರೆಮನೆಯವರ ಹೊಟ್ಟೆಕಿಚ್ಚಿನ ಕಣ್ಣು, ದಾರಿಹೋಕರ ಕಣ್ಣು ಬೀಳದಿರಲಿ ಎಂದು ಮೊಮ್ಮಗನ ಮುಖಕ್ಕೆ ಒಂಬತ್ತು ಬಾರಿ ತಿರುಗಿಸಿ, ಮೂರು ಬಾರಿ ಥೂ ಥೂ ಎಂದು ಉಗಿಯುತಿದ್ದರು. ಎದುರಿನ ಹಲ್ಲುಗಳೆಲ್ಲ ಉದುರಿದ, ಕಪ್ಪು ಮುಸುಡಿಯ, ಮೂರು ದಿನಕ್ಕೊಮ್ಮೆಯೂ ಸ್ನಾನ ಮಾಡಲು ಉದಾಸೀನ ತೋರುವ, ಮೈತುಂಬ ಕಜ್ಜಿಯ ಆಕೆಯ ಮೊಮ್ಮಗನ ಮೇಲೆ ದೃಷ್ಟಿ ಬೀಳಲು ಇರುವ ಕಾರಣ ದೇವರೇ ಬಲ್ಲ. ಆಗಿನ ಮನೆಮನೆಯ ಮುದಿ ವೈದ್ಯರು ಈಗ ಬದುಕಿದ್ದಿದ್ದರೆ, ಈಗಿನ ಬಹುತೇಕ ಸುಶಿಕ್ಷಿತ ವೈದ್ಯರೆಲ್ಲ ಉಪವಾಸ ಬಿದ್ದು ಸಾಯುತಿದ್ದರು. ಹೆರಿಗೆ ಮಾಡಿಸುವ ಸೂಲಗಿತ್ತಿ ಆಗಿನ ಕಾಲದ ನುರಿತ ಸ್ತ್ರೀರೋಗ ತಜ್ಞೆ. ಹೆರಿಗೆಯಾಗುವಾಗ ಎಲ್ಲರೂ ಆತಂಕದಲ್ಲಿದ್ದರೂ ಸೂಲಗಿತ್ತಿಯದ್ದು ಮಾತ್ರ ಭಯಂಕರ ಹಾಸ್ಯಭರಿತ ಮಾತುಗಳು. ಹೆರುವವಳು ಸ್ವಲ್ಪವೇ ನರಳಿದರೂ” ಏನು ನೀನೊಬ್ಬಳೇ ಈ ಭೂಮಿಯ ಮೇಲೆ ಹೆರುವವಳು. ಈ ಕೈ ಅದೆಷ್ಟು ಹೆರಿಗೆ ಮಾಡಿಸಿಲ್ಲ. ನಿನ್ನ ಅತ್ತೆಯ ಹೆರಿಗೆಯನ್ನು ನಾನೇ ಮಾಡಿಸಿದ್ದು. ಹಾಗೆ ಮಾಡಿಸಿದ್ದರಿಂದಲೇ ಪಾಪಿ ನಿನ್ನ ಗಂಡ ಹುಟ್ಟಿಕೊಂಡ. ಸಾಕು ನಿನ್ನ ನಾಟಕ, ಸುಮ್ಮನಿರು” ಎಂದು ಲಘ ಹಾಸ್ಯದಲ್ಲಿ ನೋವು ಮತ್ತು ಆತಂಕದ ವಾತಾವರಣವನ್ನು ತಿಳಿಗೊಳಿಸುತ್ತಿದ್ದಳು. ಉಬ್ಬಸ- ಕುಷ್ಠರೋಗ ಮುಂತಾದ ರೋಗಗಳಿಗೆ ಔಷಧ ಲಭ್ಯವಿಲ್ಲದಿರುತ್ತಿದ್ದ ಕಾರಣದಿಂದಾಗಿ ರೋಗಿಗೆ ವಿಪರೀತ ಗಿಡಮೂಲಿಕೆಗಳನ್ನು ಕುಡಿಸಿ, ಸರ್ವಾಂಗಗಳಿಗೆ ತಂತಿ- ತಾಯತಗಳನ್ನು ಕಟ್ಟಿ ಸಾಯುವ ಮುಂಚೆ ವಿಪರೀತ ನರಳಾಡಿಸಿ ಸಾಯಿಸುತಿದ್ದರು. ತಲೆ ಬಾಚುವುದು ಮತ್ತು ಹೇನು ಹೆಕ್ಕುವುದು ಆ ಕಾಲದ ಹೆಂಗಸರ ಅತೀ ಇಷ್ಟದ ಕೆಲಸ. ಮುದುಕಿಯರು ಮುದುಕರನ್ನು ವಿಪರೀತ ಶೋಷಿಸುತ್ತಿದ್ದರು. ಮುದುಕರು ಮನೆಯಲ್ಲಿ ವಿಪರೀತ ಮುಂಗೋಪಿಗಳಾಗಿರುತ್ತಿದ್ದರು.

ಆ ಕಾಲದ ಮದುವೆಗಳ ಸಂಭ್ರಮವೇ ಬೇರೆ. ಹುಡುಗಿಯನ್ನು ಹುಡುಗ ಒಪ್ಪಿದ ದಿನದಿಂದ ಮದುವೆಯ ಮನೆಯ ಚಟುವಟಿಕೆಗಳು ಆರಂಭವಾಗುತಿದ್ದವು. ಹುಡುಗನ ಊರಿನಲ್ಲಿ ಹುಡುಗಿಯ ಮನೆಯವರ ಬಗ್ಗೆ ಮತ್ತು ಹುಡುಗಿಯ ಊರಿನಲ್ಲಿ ಹುಡುಗನ ಉದ್ಯೋಗ, ನಡತೆ ಮತ್ತು ಕುಟುಂಬದ ಬಗ್ಗೆ ವಿಪರೀತ ಚರ್ಚೆಗಳು ಆರಂಭವಾಗುತ್ತಿದ್ದವು. ಹುಡುಗ ಹುಡುಗಿಯ ಬಗೆಗಿನ ಆರಂಭಿಕ ಅಭಿಪ್ರಾಯಗಳು ಭ್ರಮೆಯಾಗಿದ್ದವು ಎಂಬುದು ಮದುವೆಯಾಗಿ ಕೆಲ ತಿಂಗಳ ನಂತರ ಎಲ್ಲರಿಗೂ ಗೊತ್ತಾಗುತಿತ್ತು. ಮದುವೆಯ ಚಪ್ಪರ ತಯಾರಿಸುವಾಗಲೂ ವಿಪರೀತ ಸಂಭ್ರಮವಿರುತಿತ್ತು. ಮದುವೆಗೆ ವಾರದ ಮುಂಚೆಯೇ ಸಂಬಂಧಿಕರ ಪಟಾಲಮ್ ಮದುವೆ ಮನೆಗೆ ಬಂದಿರುತಿತ್ತು. ಸಂಬಂಧಿಕರ ಮಧ್ಯೆ ಸಣ್ಣಪುಟ್ಟ ಗಲಾಟೆಗಳೂ ನಡೆಯುತಿತ್ತು. ಮದುವೆಯ ದಿನ ಕೆಲವರು ಸಿಟ್ಟು ಮಾಡಿಕೊಂಡು ಮದುವೆಗೆ ಬರುವುದಿಲ್ಲ ಎಂದು ಬೆದರಿಸುತಿದ್ದರು. ಕೆಲವರು ಅರ್ಧ ಊಟ ಮಾಡಿ ಸಿಟ್ಟು ಮಾಡಿಕೊಂಡು ಹೋಗುತ್ತಿದ್ದರು. ಮದುವೆಯ ದಿಬ್ಬಣ ದೂರ ಹೋಗುವುದಿದ್ದರೆ ಆಗಿನ ಕಾಲದಲ್ಲಿ ಲಾರಿ, ವ್ಯಾನುಗಳನ್ನು ಬಾಡಿಗೆಗೆ ತರುತ್ತಿದ್ದರು. ಈ ವಾಹನಗಳಲ್ಲಿ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವುದಕ್ಕೆ ವಿಪರೀತ ಪೈಪೋಟಿ ಇರುತಿತ್ತು. ಖಾಸಗಿ ವಾಹನಗಳ ಕಾಲಕ್ಕಿಂತ ಮುಂಚೆ ಮದುವೆ ದಿಬ್ಬಣ ದಿನದಲ್ಲಿ ನಿಗದಿತ ಸಮಯಕ್ಕೆ ಬರುವ ಏಕೈಕ ಸರ್ವೀಸ್ ಬಸ್ಸಿನಲ್ಲೇ ಹೋಗುತಿತ್ತು. ಸೀಟಿಲ್ಲದಿದ್ದರೆ ಮದುಮಗ ಗೇರ್ ಬಾಕ್ಸ್ ಮೇಲೆ ಕೂರಬೇಕಿತ್ತು.
ಕಾರು ಬೈಕುಗಳಿಲ್ಲದ ಕಾಲವಾದ್ದರಿಂದ ಕೈಗೆ ವಾಚ್ ಕಟ್ಟಿಕೊಂಡವನೇ ಆ ಕಾಲದ ಕಾರ್ಯಕ್ರಮಗಳಲ್ಲಿ ಆಕರ್ಷಣೆಯ ಕೇಂದ್ರಬಿಂದು. ಹುಡುಗನಲ್ಲಿ ವಾಚ್ ಇದೆಯೆನ್ನುವುದು ಒಳ್ಳೆಯ ಹುಡುಗಿ ಸಿಗಲು ಇರುವ ಪ್ರಮುಖ ಕಾರಣಗಳಲ್ಲಿ ಒಂದಾಗಿರುತಿತ್ತು. ವಾಚ್ ಹಾಕಿಕೊಂಡವನೂ ಕೂಡ ಎಷ್ಟು ಸಾಧ್ಯವೋ ಅಷ್ಟು ವಾಚು ಪ್ರದರ್ಶಿಸುತ್ತಿದ್ದ. ದಿಬ್ಭಣದ ಲಾರಿಯ ಮುಂದಿನ ಸೀಟಿಗಾಗಿನ ಜಗಳ ಬಿಡಿಸಲು ಮನೆಯ ಹಿರಿಯರಿಗೆ ಬಹಳ ಕಷ್ಟವಾಗುತಿತ್ತು. ಸಿಟ್ಟು ಮಾಡಿಕೊಂಡು ಅಲ್ಲಿಂದಲೇ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋಗುವವರೂ ಬಹಳ ಜನ ಇದ್ದರು. ಮದುವೆಗೆ ಬಂದವರ ಡ್ರೆಸ್ ಈಗಿನದ್ದಕ್ಕೆ ಹೋಲಿಸಿದರೆ ನಗು ಬರುತ್ತದೆ. ಅಪರೂಪಕ್ಕೆ ಒಬ್ಬಿಬ್ಬರು ಪ್ಯಾಂಟ್ ಹಾಕುತ್ತಿದ್ದರು. ಹೆಚ್ಚುಕಡಿಮೆ 18 -20 ವರ್ಷದವರೂ ಚಡ್ಡಿ ಹಾಕಿಕೊಂಡಿರುತ್ತಿದ್ದರು. ಅದೆಷ್ಟೋ ಮಕ್ಕಳು ಹಾಕಿದ ಚೆಡ್ಡಿಯಲ್ಲಿ ಚಡ್ಡಿಯ ಕಲರ್ ಗೆ ವಿರುದ್ಧವಾದ ನೂಲು ಮತ್ತು ಸೂಜಿಯ ಪ್ರಯೋಗ ವಿಪರೀತವಿರುತಿತ್ತು. ಕೆಲವೊಂದಷ್ಟು ಮಕ್ಕಳ ಚೆಡ್ಡಿಯ ಒಳಗಿನಿಂದ ನೇಲುವ-ಇಣುಕುವ ವಸ್ತುಗಳು ಚೆಡ್ಡಿಯ ಉದ್ದೇಶವನ್ನು ಅಣಕವಾಡುತ್ತಿದ್ದವು. ಚೆಡ್ಡಿ ಅದೆಷ್ಟೇ ಪ್ರಯತ್ನಪಟ್ಟರೂ ಮಾನ ರಕ್ಷಿಸಲು ಹೆಣಗಾಡಬೇಕಿತ್ತು. ಎಲ್ಲರ ಚೆಡ್ಡಿಯ ಅವಸ್ಥೆಯೂ ಅದೇ ಆಗಿರುವುದರಿಂದ ಮಾನವೂ ಕೂಡ ಮಾನದ ವಿಚಾರದಲ್ಲಿ ಮೌನವಾಗಿರುತಿತ್ತು.ಹುಡುಗಿಯನ್ನು ಧಾರೆಯೆರೆದು ಗಂಡನ ಮನೆಗೆ ಕಳಿಸುವಾಗ ಸಂಬಂಧಪಡದವರೆಲ್ಲ ಸುಮ್ಮನೆ ಅಳುತಿದ್ದರು. ಇನ್ನೊಬ್ಬರ ಹೆಗಲ ಮೇಲೆ ತಲೆಯಿಟ್ಟು ಅಳುವವರಲ್ಲಿ ಹೆಚ್ಚಿನವರು ಪರಸ್ಪರ ಅಪರಿಚಿತರಾಗಿರುತ್ತಿದ್ದರು.
ಮನೆ ಬಿಟ್ಟು ಹೋಗುವ ಹುಡುಗಿಯನ್ನು ಅಂದೇ ಮೊದಲು ನೋಡಿದವರೂ ಸಂಬಂಧಿಕರ ಗಮನ ಸೆಳೆಯಲು ಪುಕ್ಕಟೆ ಗುಣಗಾನ ಮಾಡುತಿದ್ದರು. ಮದುವೆ ಮನೆಯ ಆ ಲಾಸ್ಟ್ ಸೀನ್ ವಿಪರೀತ ನಾಟಕೀಯವಾಗಿರುತಿತ್ತು. ಮದುಮಗ ಮಾತ್ರ ಮದುವೆ ಎಂಬ ಮಾಯೆಗೆ ಮರುಳಾಗಿ ಮುಂದಾಗುವ ಅನಾಹುತಗಳ ಅರಿವಿಲ್ಲದೆ ಯುದ್ಧ ಗೆದ್ದ ಸಂಭ್ರಮದಲ್ಲಿರುತಿದ್ದ. ತನಗೆ ಧಾರೆಯೆರೆದ ಹೆಣ್ಣಿಗೆ ತಾನು ಬದುಕನ್ನೇ ಧಾರೆಯೆರೆದೆ ಎಂಬ ಸಣ್ಣ ಸುಳಿವೂ ಆ ಹೊತ್ತಿಗೆ ಅವನಿಗಿರುತ್ತಿರಲಿಲ್ಲ. ಮದುಮಗಳ ನೆತ್ತಿಯ ಮೇಲಿನ ಮಲ್ಲಿಗೆಯ ಪರಿಮಳಕ್ಕೆ ಮದುಮಗ ವಿಪರೀತ ಮೈಮರೆಯುತ್ತಿದ್ದ. ಮೊದಲ ರಾತ್ರಿಯ ಸವಿ-ಸುಖಗಳನ್ನು ನೆನೆದು ಹಗಲನ್ನು ಶಪಿಸಿ ರಾತ್ರಿಯ ಬರುವಿಕೆಗಾಗಿ ಇನ್ನಿಲ್ಲದಂತೆ ಕಾಯುತ್ತಿದ್ದ. ಈಗಿನಂತೆ ಆಗ ಸಾರಿಗೆ, ಸಂಪರ್ಕ ,ಮಾಹಿತಿ, ತಂತ್ರಜ್ಞಾನಗಳಿರಲಿಲ್ಲ. ಯಾರಿಗೂ ಎಲ್ಲಿಗೂ ಹೋಗಲು ಇರಲಿಲ್ಲ. ಹೊತ್ತು ತಂದದ್ದೇ ತುತ್ತು. ಬಿತ್ತಿ ಬೆಳೆದದ್ದನ್ನು ಮತ್ತು ಬೆಳೆದವರು ಕೊಟ್ಟದ್ದನ್ನೇ ತಿನ್ನಬೇಕಿತ್ತು. ಹುಲ್ಲಿನ ಛಾವಣಿಯ ಮನೆಗಳು. ಕೆಲವೊಮ್ಮೆ ತಿನ್ನುವ ಹೊತ್ತಿನಲ್ಲಿ ಕುಡಿಯುವ ನೀರೇ ಗತಿ. ಯಾರ ಗೋಳೂ ಯಾರೂ ಕೇಳುತ್ತಿರಲಿಲ್ಲ. ಯಾಕೆಂದರೆ ಎಲ್ಲರ ಗೋಳು ಒಂದೇ ಆಗಿತ್ತು.
ಫೋಟೋ ಕೃಪೆ : richardarunachal
ರಾತ್ರಿ ಮಲಗಿ ಬೆಳಿಗ್ಗೆ ಎದ್ದರೆ ಮತ್ತದೇ ದಿನ ಆರಂಭ. ಅಪರೂಪಕ್ಕೆ ಊರಿಗೇ ಬರುವ ಪಂಚಾಯತ್ ಚೇರ್ಮನ್ ಆ ಕಾಲದ ಅತಿಗಣ್ಯ ವ್ಯಕ್ತಿ. ಈ ಚೇರ್ಮನ್ ಊರ ಪಟೇಲನ ಪ್ರತಿರೂಪ. ಊರ ಪಟೇಲ ಪರಿಚಿತ, ಚೇರ್ಮನ್ ಅಪರಿಚಿತ, ಅಷ್ಟೇ ವ್ಯತ್ಯಾಸ. ಆ ಕಾಲಕ್ಕೆ ಪಂಚಾಯತ್ ಕೈಬರಹದ ಪಹಣಿ ಇಟ್ಟುಕೊಳ್ಳುವ ಗ್ರಾಮ ಲೆಕ್ಕಿಗ ಮತ್ತು ಜಾಗ ಅಳತೆಯ ಸರಪಳಿ ಹಿಡಿದುಕೊಂಡು ತಿರುಗುವ ಉಗ್ರಾಣಿಯ ಕಛೇರಿ. ಇದಕ್ಕಿಂತ ಹೊರತಾಗಿ ಆ ಕಾಲದ ಪಂಚಾಯತ್ ಯಾಕಿತ್ತು ಎಂಬುದು ಇಂದಿಗೂ ಯಾರಿಗೂ ಗೊತ್ತಿಲ್ಲ. ಸರ್ಕಾರಕ್ಕೂ ಸಾರ್ವಜನಿಕರಿಗೂ ಯಾವ ನೇರ ಸಂಬಂಧವೂ ಇರಲಿಲ್ಲ. ವಾರದ ಸಂತೆಗಳಲ್ಲೇ ಸ್ವಲ್ಪಮಟ್ಟಿಗಿನ ಚಟುವಟಿಕೆಗಳಿರುತಿದ್ದವು. ಕೋತಿಯಾಟ, ಕರಡಿ ಕುಣಿತ, ದೊಂಬರಾಟ, ಗಿಣಿ ಭವಿಷ್ಯ ಆ ಕಾಲದ ಸಂತೆಯ ಕುತೂಹಲಗಳು. ನವರಾತ್ರಿಯ ವೇಷಗಳ ಹಿಂದೆ ಒಂದಿಡೀ ಊರೇ ಇರುತಿತ್ತು. ರಸ್ತೆಗಳ ಮೇಲೆ ದಿನಕ್ಕೊಂದು ಬಸ್ಸು, ಹಲವು ಬಾರಿ ತಿರುಗುವ ಒಂದೇ ಲಾರಿ, ಕಂಡಕಂಡಲ್ಲಿ ಕಾಣಸಿಗುವ ಎತ್ತಿನ ಗಾಡಿ, ಅಪರೂಪಕ್ಕೊಮ್ಮೆ ಕಾಣಸಿಗುವ ಯೆಜಡಿ- ರಾಜ್ ದೂತ್ ಬೈಕು, ಎಲ್ಲಿಂದಲೋ ಹೊರಟು ಎಲ್ಲಿಗೋ ಹೋಗುವ ಅಪರಿಚಿತರು ಬಿಟ್ಟರೆ ಇನ್ನುಳಿದಂತೆ ನೀರವ ಮೌನದ ನಿರ್ಜನ ರಸ್ತೆಗಳು. ವರ್ಷಕ್ಕೊಮ್ಮೆ ದೇವಾಸ್ಥಾನದ ಕೆಲ ಉತ್ಸವಗಳು, ಆಲೆಮನೆಗಳು, ಮೊದಲ ಮಳೆಗಳಿಗೆ ಮೀನು ಹೊಡೆಯುವುದು ಬಿಟ್ಟರೆ ಆ ಕಾಲದ ರಾತ್ರಿಗಳು ಬೆಳಗುವುದು ಕಡಿಮೆ. ಸಂಜೆಯಾಯಿತು ಎಂದರೆ ಸಮಸ್ತ ಸೃಷ್ಟಿಯೇ ಕತ್ತಲಾಗಿಬಿಡುತಿತ್ತು. ಎಲ್ಲೋ ಮರದಿಂದ ಬಿದ್ದು ಅಥವ ನೀರಿನಲ್ಲಿ ಮುಳುಗಿ ಸತ್ತ ಸುದ್ದಿ ಬಂದರೆ ಎಲ್ಲರಿಗೂ ಭಯವಾಗುತಿತ್ತು. ವಾಹನಗಳ ಆ್ಯಕ್ಸಿಡೆಂಟ್ ಆಗ ಇರಲಿಲ್ಲ. ಕೊಲೆ ಸುಲಿಗೆಗಳು ಅಪರೂಪ. ಚುಡಾಯಿಸುವಿಕೆ, ಪ್ರೀತಿ ಪ್ರೇಮಗಳಿಗೆ ಮದುವೆಯೇ ಶಿಕ್ಷೆ. ಪ್ರೇಮವು ನೇರ ಹಾದರವಾಗಿ ಪ್ರಚಾರ ಪಡೆಯುತಿತ್ತು. ಪ್ರೀತಿಸಿ ಮದುವೆಯಾದವಳಿಗೆ ಕುಟುಂಬದಲ್ಲಿ ಗೌರವ ಕಡಿಮೆಯಿರುತಿತ್ತು. ಆ ಕಾಲದಲ್ಲಿ ಮುಂಬೈ ಬೆಂಗಳೂರು ಹೈದರಾಬಾದ್ ನೋಡಿದವರಿಗೆ ಈಗ ಚಂದ್ರಲೋಕಕ್ಕೆ ಹೋಗಿ ಬಂದವರಿಗಿಂತ ಹೆಚ್ಚು ಬೆಲೆ.
ದಿನಪತ್ರಿಕೆ, ರೇಡಿಯೋ, ಟಿವಿ, ಮೊಬೈಲ್, ಬಸ್ಸು, ಕಾರು, ಕಾರ್ಖಾನೆ ,ವಿದ್ಯುತ್, ಆಸ್ಪತ್ರೆ, ರಸ್ತೆ ಏನೂ ಇಲ್ಲದ ಈ ಕಾಲಕ್ಕಿಂತಲೂ ಹಿಂದಿನ ಕಾಲವನ್ನು ಊಹಿಸಿಕೊಂಡರೇ ಮಗದೊಂದು ಬದುಕಿನ ರೂಪ ತೆರೆಯಲ್ಪಡುತ್ತದೆ. ಕೇವಲ 50 ವರ್ಷಗಳ ಹಿಂದೆ ಇದ್ಯಾವುದೂ ಇರಲಿಲ್ಲ. ಅದಕ್ಕಿಂತ ಹಿಂದಿನ ಕಾಲಗಳಲ್ಲಿ ಇನ್ನೂ ಅದೇನೇನು ಇರಲಿಲ್ಲವೋ? ಆ ಕಾಲದವರು ಅದು ಹೇಗೆ ಬದುಕುತಿದ್ದರೋ? ಏನೂ ಇಲ್ಲದೇ ಬದುಕಿದವರು ಎಂದು ನಾವು ಅವರನ್ನು ಅಣಕವಾಡುತ್ತಿದ್ದೇವೋ ಅಥವ ಬದುಕಲು ಇವೆಲ್ಲ ಬೇಡ ಎಂದು ಅವರು ತಮಾಷೆ ಮಾಡುತ್ತಿದ್ದಾರೋ? ಒಂದೂ ಅರಿಯುತ್ತಿಲ್ಲ. ಅವರೂ ಬದುಕಿದರು, ನಾವೂ ಬದುಕುತ್ತಿದ್ದೇವೆ. ಅದೆಷ್ಟು ಅಂತರ ಅಲ್ಲವೇ? ಎಲ್ಲವೂ ಇದ್ದು ಏನೂ ಇಲ್ಲದಂತಿರುವ ನಾವು, ಏನೂ ಇಲ್ಲದೆ ಎಲ್ಲವೂ ಇದ್ದಂತಿದ್ದ ಅವರು. ಅವರು- ನಾವು, ಯಾರು ಯಶಸ್ವಿ ಬದುಕು ಬದುಕಿದರು?
- ಮುಷ್ತಾಕ್ ಹೆನ್ನಾಬೈಲ್ (ಚಿಂತನಕಾರರು, ಲೇಖಕರು ) ಕುಂದಾಪುರ