“ಇದು ನಮ್ಮ ನಿಮ್ಮದೇ ಅಂತರಾಳದ ಆಕ್ರೋಶದ ಕವಿತೆ. ವ್ಯಕ್ತಿಸಲಾಗದ ಅಸಂಖ್ಯ ನೋವು ಸಂಕಟಗಳ ದುರಂತ ಗೀತೆ. ಇಂದು ದಿನನಿತ್ಯವೂ ಬೀಳುತ್ತಿರುವ ಹೆಣಗಳು, ಮಸಣವಾಗುತ್ತಿರುವ ಬಡವರ ಮನೆಗಳು ನೋಡುತ್ತಿದ್ದರೆ ಎದೆಗೆ ಬೆಂಕಿಬಿದ್ದಂತಾಗುತ್ತಿದೆ. ಹೇಳುವುದಾದರೂ ಯಾರಿಗೆ? ಕೇಳುವವರಾದರೂ ಯಾರು..?” – ವಿಷಾದದಿಂದ ಎ.ಎನ್.ರಮೇಶ್.ಗುಬ್ಬಿ.
ಇವರಿಗೆ ಒಂದಿಷ್ಟು ಹೆಣಗಳು ಬೇಕಿಹುದು ಈಗ
ಅವರಿಗೂ ಒಂದಿಷ್ಟು ಹೆಣಗಳು ಬೇಕಿಹುದು ಈಗ
ಒಬ್ಬರಿಗೆ ಗದ್ದುಗೆಯಲಿ ಇರುವವರ ಕೆಳಗಿಳಿಸಲು
ಮತ್ತೊಬ್ಬರಿಗೆ ಮತ್ತೆ ಆ ಗದ್ದುಗೆಯ ಮೇಲೇರಲು.!
ನಡುಬೀದಿಯಲಿ ಹೆಣ ಬಿದ್ದಷ್ಟೂ ಹಾದಿ ಸುಗಮ
ಉರಿವ ಮನೆಯಲ್ಲಿ ಗಳ ಹಿರಿವ ಕುಟಿಲ ನಿಯಮ
ಅವರಿವರಿವರೆಲ್ಲರಿಗೂ ಇದು ಸಂಕೀರ್ಣ ಘಟ್ಟ
ಹೊತ್ತಷ್ಟೂ ಲಾಭವಿದೆ ಅಮಾಯಕ ಜನಗಳ ಚಟ್ಟ.!
ಬಿಸಿರಕ್ತಗಳಿಗೆ ದ್ವೇಷ ಮತ್ಸರಗಳ ಕಿಚ್ಚು ಹಚ್ಚುತ್ತಾರೆ
ಮುಗ್ಧಮನಗಳಿಗೆ ಧರ್ಮದ ಅಫೀಮು ಕುಡಿಸುತ್ತಾರೆ
ಬೆಂಕಿ ಬಿದ್ದು ನರಳಿ ಕೆರಳಿದಷ್ಟೂ ಬಡವರಾ ಬದುಕು
ಗದ್ದುಗೆ ಏರುವವರ ಮೆಟ್ಟಿಲುಗಳಿಗೆ ಹೊಂಬೆಳಕು.!
ಬೀಳುತ್ತವೆ ಅವರಿವರ ಆ ಹುನ್ನಾರಗಳಿಗೆ ಹೆಣಗಳು
ಬಡತಂದೆಯೊಬ್ಬ ಬೆಳೆದ ಮಗನ ಕಳೆದುಕೊಳ್ಳುತ್ತಾನೆ
ಬೀಳುತ್ತವೆ ಯಾರದೋ ಸ್ವಾರ್ಥಸ್ವಹಿತಕೆ ಹೆಣಗಳು
ಒಂಟಿತಾಯಿ ಆಸರೆಯ ಮಗನ ಕಳೆದುಕೊಳ್ಳುವಳು.!
ಬೀಳುತ್ತವೆ ಇವರವರ ಅಧಿಕಾರಲಾಲಸೆಗೆ ಹೆಣಗಳು
ತಂಗಿಯೊಬ್ಬಳು ಭರವಸೆಯಾದ ಅಣ್ಣನ ಕಳೆದುಕೊಳ್ಳುವಳು
ಅಕ್ಕವೊಬ್ಬಳು ಮನೆಬೆಳಕಾಗಿದ್ದ ತಮ್ಮನ ಕಳೆದುಕೊಳ್ಳುವಳು.!
ಹೆಂಡತಿ ಜೀವದುಉಸಿರಾಗಿದ್ದ ಗಂಡನ ಕಳೆದುಕೊಳ್ಳುವಳು.!
ಬಿದ್ದಂತೆಲ್ಲ ಹೆಣಗಳು ಖಾಲಿಯಾಗುತಿವೆ ಬಡವರಮನೆ
ಬೀದಿಗೆಬಿದ್ದು ಅನಾಥವಾಗುತಿವೆ ಬಾಳು ಒಂದೇಸಮನೆ
ಈ ಸುಟ್ಟ ಹೆಣಗಳ ಕರಟುವಾಸನೆಯ ನಡುವೆ ಪ್ರತಿನಿತ್ಯ
ಅವರಿವರ ಹಗ್ಗಜಗ್ಗಾಟ ಲಾಭನಷ್ಟದ ಚದುರಂಗ ಪಂದ್ಯ.!
ದೀಪದ ಪತಂಗಗಳಂತೆ ಸಾಯುತ್ತಲೇ ಇದ್ದಾರೆ ಇವರು
ಹೆಣಗಳ ಲೆಕ್ಕವಿಟ್ಟು ಹುರಿದುಂಬಿಸುತ್ತಲೇ ಇದ್ದಾರೆ ಅವರು
ಜೋಪಡಿಯಲ್ಲಷ್ಟೇ ಸತತವಾಗಿದೆ ಸಾವಿನ ಮೆರವಣಿಗೆ
ಅರಮನೆಗಳಲ್ಲಿ ನಾಳಿನ ಗುರಿ ಲೆಕ್ಕಾಚಾರಗಳ ಬರವಣಿಗೆ.!
ಏಕೆಂದರೀಗ ಹೆಣಗಳು ಬೇಕಿದೆ ಅಧಿಕಾರದಾಹಿಗಳಿಗೆ
ಈಮರ್ಮ ಅರ್ಥವೇ ಆಗುತಿಲ್ಲ ಸಾಯ್ವ ಅಮಾಯಕರಿಗೆ.!
ಹೆಣಗಳ ಎಣಿಸಿ ಪೇರಿಸುವ ಹುಚ್ಚು ಸೂತ್ರ ಹಿಡಿದವರಿಗೆ.!
ಜಾತಿ ಮತ ಮತ್ಸರಗಳ ಕಿಚ್ಚು ಸಾಯಲು ಹೊರಟವರಿಗೆ.!
- ಎ.ಎನ್.ರಮೇಶ್. ಗುಬ್ಬಿ( ಅವರು ವೃತ್ತಿಯಲ್ಲಿ ಕಾರವಾರದ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿಯಾಗಿದ್ದು, ಪ್ರವೃತ್ತಿಯಲ್ಲಿ ಸಾಹಿತಿಗಳು. ರಾಜ್ಯ ಪ್ರಶಸ್ತಿ, 2012 ರಲ್ಲಿ ರಾಜ್ಯ ಮಟ್ಟದ ಚುಟುಕು ಸ್ಪರ್ಧೆ ಬಹುಮಾನ, 2013 ರ ಯುವ ಪ್ರತಿಭಾ ಪುರಸ್ಕಾರ, ನೃಪ ಸಾಹಿತ್ಯ ಪ್ರಶಸ್ತಿ, ಜನ್ನ ಕಾವ್ಯ ಪ್ರಶಸ್ತಿ, ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ, ಪುಸ್ತಕ ಪ್ರಶಸ್ತಿ, ಕನಕಶ್ರೀ ಸಾಹಿತ್ಯ ಪ್ರಶಸ್ತಿ, ರಾಜ್ಯ ಬಸವ ಪುರಸ್ಕಾರ, ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.) ಕೈಗಾ.