ಡಾ.ಬಂಜಗೆರೆ ಜಯಪ್ರಕಾಶ್ ರವರ ‘ಕಳೆದ ಕಾಲದ ಪ್ರೇಯಸಿಯರು” ಎನ್ನುವ ಕವಿತೆಯಲ್ಲಿನ “ಸೂತಕ ” ಕವಿತೆಯ ಕುರಿತು ಡಾ. ಕೃಷ್ಣವೇಣಿ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಡಾ. ಬಂಜಗೆರೆ ಜಯಪ್ರಕಾಶ್ ರವರ ಕಳೆದ ಕಾಲದ ಪ್ರೇಯಸಿಯರು ಎನ್ನುವ ಕವಿತೆಗಳಲ್ಲಿ “ಸೂತಕ ” ಎನ್ನುವ ಕವಿತೆಯ ಬಗ್ಗೆ ನನ್ನ ಲೇಖನ. ಮಾರ್ಚ್ 1990ರಲ್ಲಿ ಡಾ. ಜೆಪಿಯವರು ಬರೆದ “ಸೂತಕ ” ಕವಿತೆಯ ಒಟ್ಟು ಸಾರಾಂಶದೊಳು ನಾನು ಕಂಡದ್ದು, ಒಂದರ್ಥದೊಳು ಕವಿಯ ಮನದ ತಲ್ಲಣದ ಒದ್ದಾಟ. ಇಡೀ ಭುವಿಯ ಸದ್ದನ್ನೇ ಗದ್ದಲೆಬ್ಬಿಸಿರುವ ಹಾಗೆ.
ಬಾಳೆ ಎಲೆಯ ಬಾಡೂಟವೂ ಕೂಡಾ ಕಣ್ಣಿಗೆ ರಕ್ತಸಿಕ್ತ ವಾಗಿ ಗೋಚರಿಸಿ, ಎಲೆಯ ಎಡ ಭಾಗವನು ಮಡಚಿ ಮೇಲೆದ್ದು ಸುತ್ತಲ ಜಗತ್ತಿಗೆ ತರ್ಪಣ ಬಿಟ್ಟ ಹಾಗಿದೆ. ಬಿಟ್ಟೇನೆಂದರು ಬಿಡದ ಸಂಸ್ಕೃತಿಯ ‘ಜಾತಿ’ ಸತ್ತ ಹೆಣ ಸಂಸ್ಕಾರವಿಲ್ಲದೇ ನಾರುತ್ತಿದ್ದರೂ ಕಣ್ಣು ಮುಚ್ಚದ ಹೆಣದ ದೇಹ ಕೊಳೆತು ಬಿದ್ದ ಹಾಗಿದೆ. ಇದು ಬರೀ ಭ್ರಮೆಯ ಪರಪಂಚದ ಬಾವಿ. ಇದಕ್ಕೆ ನೂರೆಂಟು ಬಾಯಿಗಳ ಶಾಪ. ಸೂತಕದ ತವಕಕ್ಕೆ ಇಡೀ ಭುವಿಯ ಅಗ್ರಹಾರ ನಡುಗುತ್ತಿದೆ. ಸಾಲದಕ್ಕೆ ಮಡಿ ಊಟದ ‘ಪಣಿ ಜನಿವಾರದೊಳು’ ನಾಲಗೆಯು ಬಾಯಾರಿಕೆಗೆ ಒದ್ದಾಡಿ ಸಂಪ್ರದಾಯವೆಂಬ ಕಡಿವಾಣದೊಳು ಜಾತಕದ ಸೂಚಿಯ ಪುಟ ತಿರುಗಿಸುವ ಹುನ್ನಾರದೊಲುಮೆಯಲಿ ಭಗವಂತನಿಗೆ ‘ಸೂತಕದ’ ಹೂವಿಟ್ಟು ಬೇಡುತ್ತಿದ್ದಾರೆ.

ಆದರೂ ನಿಲ್ಲಲೊಲ್ಲದೇ ಜಗದ ಸೂಕ್ಷ್ಮ ಕುತಂತ್ರದ ರಕ್ತ. ಇದನ್ನು ಅರಿಯದ ಜಗದ ಕಂದಮ್ಮಗಳು, ಕಕ್ಕಾಬಿಕ್ಕಿಯಾಗಿ ಗೂಡಿಲ್ಲದೆ ಪರಿತಪಿಸಿ ಚೀರುತ್ತಿವೆ. ಆಗಸದ ನಿಲುವಿನಲಿ ಕಾಗೆ ಗೂಬೆಗಳ ಹಾರಾಟ. ಇದರ ಹಾರಾಟಕ್ಕೆ ಮನವೊಲಿವ ಮನಸ್ಸು ಕೂಡಾ ಇನ್ನೂ ಹೊರ ನೋಟಕ್ಕೆ ಕುಚೇಷ್ಟೆ ಮಾಡಿ ಆಲಿಸಿ ನಗುತಿದೆ.
ಕವಿತೆಯ ಸಾಲಾದ ‘ಸಾವ ಸುದ್ದಿಯು ಹೂಗಳ ನಾರಿನಲಿ ಪೋಣಿಸಿಟ್ಟಿರುವಂತೆ ಕಾಗದ ಮುದುಡಿಕೊಳ್ಳುತ್ತಿದೆ’ ಎನ್ನುವ ಡಾ. ಜೆಪಿ ಯವರ 1990 ರ ದಶಕದ ವಿಚಾರ ಇಂದಿನ ಪ್ರಸ್ತುತ ಗಮನದ ‘ಸೂತಕ’ ನೀರೊಳು ನೆಲೆಯಿಲ್ಲದೆ ಹರಿಯುತಿದೆ. ದಿನಾಲೂ ಸುಡುವ ಹೆಣದ ಬೆಂಕಿಯ ಒಡಲು ಯಾವ ಸಿಡಿಲುಗಳದ್ದೋ? ಕಾಣೆವು. ಸೂತಕವಿಲ್ಲಯೇ ಬೂದಿಯನ್ನು ಸ್ಮಾರಕದ ಹಣೆಯ ಮೇಲೆ ಸುರಿದು “ವಿಭೂತಿ ”ಎಂದು ಕೊಡುವರಲ್ಲ?. ಇದು ಯಾರ ಮತ್ತು ಯಾವ ಸೂತಕದ ಸಂಕೇತ?.
ಶತ ಶತಮಾನದ ಶಾಪ ಸೂತಕದ ಗಿರಣಿಯೊಳು ಇಂದಿನ ದಿನದ ಕಾಡಾಟದೊಳು ಸುತ್ತಿ ಮನೆ ಮನೆಯ ಹೊಕ್ಕಿದೆ. ಇದಕೆ ಯಾವ ಮಂತ್ರ ಹೇಳೋಣ? ಯಾವ ನೀರನ್ನು ಸಿಂಪಡಿಸೋಣ? . ಏಕಾಬಿಕಿಯ ಕಲ್ಲ ಇಟ್ಟಿಗೆಯ ಸೂತಕದ ಬಾಗಿಲಿಗೆ ಯುಗದ ಹೊಸ ಮಾವಿನೆಲೆಯ ತೋರಣ? ಎಷ್ಟು ನಗೆತನದ ವ್ಯವಸ್ಥೆಯ ವ್ಯಂಗ್ಯವಲ್ಲವೇ? .
ಪ್ರತಿ ದಿನವೂ ಸೂತಕದ ಇರುಳು ಬೆಳಕಲ್ಲವೇ?. ಬಿಳಿ ಎಲೆಯ ಕಾಗದಕ್ಕೆ ಮದ್ದು ಗುಂಡಿನ ಕೆಂಪು ರಕ್ತ ಚಿಮ್ಮಿ ಜಗದ ಮಾಯೆಗೆ ಅಲ್ಲೋಲ ಕಲ್ಲೋಲ ಮಾಡಿ ಸೂತಕದ ಕತ್ತಲಲಿ ಎಲ್ಲರನ್ನು ಎಲ್ಲವನ್ನು ಮೊಬ್ಬಾಗಿಸಿದೆ. ಇದರ ಮಧ್ಯೆ ‘ಹಣೆಯ ಸಿಂಧೂರ’ ಬೆವರ ಹನಿಗೆ ಬೆಳ್ಮೋಡದ ಹಸಿ ನೆಲದಲ್ಲಿ ಇಳಿಯುತಿದೆ.
- ಡಾ. ಕೃಷ್ಣವೇಣಿ
