ವೃತ್ತಿಯಲ್ಲಿ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆಯವರ ‘ಸ್ವಲ್ಪ ಮಾತಾಡಿ ಪ್ಲೀಸ್’ ಕೃತಿಯನ್ನು ದುಡಿಮೆಯ ಹಿಂದೆ ಬಿದ್ದು ತಾನಾಗಿ ಬದುಕಲು ಸಾಧ್ಯವಾಗದ ” workoaloic” ಗಳೆಲ್ಲಾ ಓದಲೇಬೇಕಾದ ಪುಸ್ತಕ ಎನ್ನುತ್ತಾರೆ ಪಾರ್ವತಿ ಜಗದೀಶ್ ಅವರು. ಪುಸ್ತಕದ ಕುರಿತು ಪಾರ್ವತಿ ಜಗದೀಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಸ್ವಲ್ಪ ಮಾತಾಡಿ ಪ್ಲೀಸ್
ಲೇಖಕರು : ಡಾ. ವಿರೂಪಾಕ್ಷ ದೇವರಮನೆ
ಪ್ರಕಾಶಕರು : ಸಾವಣ್ಣ ಎಂಟರ್ ಪ್ರೈಸಸ್
ಪುಟ : 158
ಬೆಲೆ :150.00
ಲೇಖಕರು.ಡಾ.ವಿರೂಪಾಕ್ಷ ದೇವರಮನೆ. ವೃತ್ತಿಯಲ್ಲಿ ಮನೋವೈಧ್ಯರಾದ ಡಾ ವಿರೂಪಾಕ್ಷ ದೇವರಮನೆ ಅವರ ಕೃತಿ “ಸ್ವಲ್ಪ ಮಾತಾಡಿ ಪ್ಲೀಸ್ ” ಒಟ್ಟು ಮೂವತ್ತು ಲೇಖನಗಳು ಈ ಕೃತಿಯಲ್ಲಿವೆ. ಸಂಘ ಜೀವಿಯಾದ ಮನುಷ್ಯ ಹಣ, ಹೆಸರು ಗಳಿಸಲು ಮನೆಕಟ್ಟಲು ತನ್ನವರನ್ನು ಸುಖವಾಗಿಡಲು ಹೀಗೆ ಹಲವು ಹತ್ತು ಬೇರೆ ಬೇರೆ ಕಾರಣಗಳಿಗಾಗಿ ದುಡಿತದ ಗೀಳಿಗೆ ಸಿಲುಕಿ ತನ್ನ ಜೀವನದ ಇತರ ವಿಷಯಗಳಾದ ಕುಟುಂಬ, ಆರೋಗ್ಯ, ಸಂಬಂಧ, ಬಾಂಧವ್ಯಗಳನ್ನು ಹೇಗೆ ನಿರ್ಲಕ್ಷಿಸುತ್ತಾನೆ. ಎಲ್ಲಾ ಸಂಬಂಧಗಳನ್ನು ಜೋಡಿಸುವ ಕೊಂಡಿಯಾದ ‘ ಮಾತನ್ನೇ ಕಡಿಮೆಯಾಗಿಸಿಕೊಂಡು ಸಂಬಂಧಗಳಲ್ಲಿ ಬಿರುಕು ಮೂಡಿಸಿಕೊಳ್ಳುವರು ಎಂಬುದನ್ನು ಮನಶಾಸ್ತ್ರೀಯ ಹಿನ್ನೆಲೆಯಲ್ಲಿ ನಿರೂಪಿಸಿದ್ದಾರೆ.
ಮುನ್ನುಡಿಯಲ್ಲಿ ಡಾ.ಪಿ.ವಿ. ಭಂಡಾರಿಯವರ ಮಾತಿನಂತೆ ” ಈ ಜಗತ್ತಿನಲ್ಲಿ ಅನಾಹುತಗಳೇನಾದರೂ ನಡೆದಿದ್ದರೆ ಅವು ಬಂದೂಕಿನಿಂದಲ್ಲ, ಅಣು ಬಾಂಬಿನಿಂದಲ್ಲ, ಅವೇನಿದ್ದರೂ ಮಾತುಗಳಿಂದ” ಹೌದು ಹಿರಿಯರು ಹೇಳುತ್ತಾರೆ “ಮಾತೇ ಮುತ್ತು ಮಾತೇ ಮೃತ್ಯು” ಎಂದು ಈ ಜಗತ್ತಿನಲ್ಲಿ ಎಲ್ಲಾ ಮಾನವನ ಕ್ರಿಯೆಗಳಿಗೂ ಈ ಮಾತೇ ಮೂಲವಾಗಿದೆ. ಅಂತಹ ಶಕ್ತಿ ಇರುವ ಈ ಮಾತಿನ ಅಸ್ತ್ರ ಪ್ರತಿಯೊಬ್ಬರ ಬಳಿಯಲ್ಲಿಯೂ ಇದೆ. ಅದನ್ನು ನಾವೆಲ್ಲರೂ ಎಷ್ಟರ ಮಟ್ಟಿಗೆ ದುಡಿಸಿಕೊಳ್ಳತ್ತಿದ್ದೇವೆ ?. ಮಾತುಗಳು ಹೃದಯದಿಂದ ಬಂದಾಗ ಭಾವನೆಗಳೆನಿಸುತ್ತವೆ. ನೀವು ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ ಬೆಳೆಯುತ್ತವೆ. ನಿರ್ಲಕ್ಷಿಸಿದರೆ ಸಾಯುತ್ತವೆ. ಉಳಿಸಿದರೆ ಸದಾ ನಮ್ಮೊಂದಿಗೆ ಇರುತ್ತವೆ. ಎನ್ನುವ ಲೇಖಕರ ಮಾತಿನಂತೆ. ಮನಸ್ಸುಗಳೊಂದಿಗೆ ಮಾತನಾಡೊಣ. ಸ್ವಲ್ಪ ಮಾಡತಾಡಿ ಪ್ಲೀಸ್ ಅಗತ್ಯವಿರುವ ಮಾತಿಗೂ ಬರ ಬಂದು ಎಷ್ಟೋ ಬಂಧಗಳ ಜೀವನದಿ ಸೊರಗುತ್ತಿವೆ. ಜೀವಕ್ಕೆ ಚೈತನ್ಯಸೆಲೆಯಾದ ಪ್ರೀತಿ ಹೊಂದಾಣಿಕೆ ಎಂಬ ಜೀವಜಲಗಳು ಬತ್ತಿದರೆ ಭರವಸೆಯೆಂಬ ಉಸಿರು ನಿಲ್ಲುತ್ತದೆ.
ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ಸಮಯ ಕಳೆಯುತ್ತಾ ಯಾಂತ್ರಿಕ ಜೀವನ ನಡೆಸುತ್ತಿರುವ ಈ ವಾಸ್ತವ ಬದುಕಿನಲ್ಲಿ ಒಮ್ಮೆಯಾದರೂ ಹೀಗೆ ಆಲೋಚನೆ ಮಾಡುವ ಕೃತಿಯನ್ನು ಓದಬೇಕಿದೆ ಎಲ್ಲರೂ.
ಬಹುತೇಕ ಪೋಷಕರು ತಮ್ಮ ಕನಸ್ಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಪೂರ್ವ ತಯಾರಿ ಮಾಡದೇ ಮಾನಸಿಕವಾಗಿ ಅಣಿಗೊಳಿಸದೆ. ಅವರನ್ನು ಆರೋಪಿಸುವುದು, ದೂರುವುದು ಮಾಡುತ್ತಾರೆ. ಅದರಿಂದ ಅವರ ಕನಸು ಈಡೇರುವುದಿಲ್ಲ. ಮಕ್ಕಳು ನಲುಗುತ್ತಾರೆ. ದೊಡ್ಡವರು ಎಂದಾಕ್ಷಣ ಅವರ ಚಿಂತನೆ ಕೂಡ ದೊಡ್ಡದಾಗಿರಬೇಕು. ಕಿರಿಯರ ಭಾವನೆಗಳಿಗೆ ಸ್ಪಂದಿಸಬೇಕು ಆಗಷ್ಟೇ ಬದುಕು ಸೊಗಸಾಗುವುದು. ಮಕ್ಕಳ ಸಾಮರ್ಥ್ಯವನ್ನು ಅರಿಯದೇ ದೂಷಿಸುವುದು ಸರಿಯಲ್ಲ, ಅವರಿಗೆ ಸ್ಪೂರ್ತಿ ತುಂಬದೇ ಬೈಯುವುದರಿಂದ ಯಾವ ಪ್ರಯೋಜನವೂ ಇಲ್ಲ.
ವೃತ್ತಿಯಲ್ಲಿ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆಯವರ ಈ ಕೃತಿಯನ್ನು ದುಡಿಮೆಯ ಹಿಂದೆ ಬಿದ್ದು ತಾನಾಗಿ ಬದುಕಲು ಸಾಧ್ಯವಾಗದ ” workoaloic” ಗಳೆಲ್ಲಾ ಕಡ್ಡಾಯವಾಗಿ ಓದಬೇಕಾಗಿದೆ. ಮನುಷ್ಯ ಸಂಬಂಧದ ಬಿರುಕುಗಳಿಗೆ ಕಾರಣವಾಗುವ ಆಡದೇ ಸ್ವಗತವಾಗಿ ಉಳಿದ ಮಾತುಗಳು, ಇಲ್ಲವೇ ಸಮಯ ಮೀರಿ ತಡವಾಗಿ ಹೇಳಿದ ಮಾತುಗಳು ಆಥವಾ ಅಸಹನೆಯ ಕ್ಷಣಗಳಲ್ಲಿ ಆಡಿದ ಮಾತುಗಳೇ ಕಾರಣವಾಗುತ್ತವೆ.
ನಮಗೆ ಸಂತೋಷ ಕೊಡುವ ಮಕ್ಕಳೊಂದಿಗೆ, ನಾವು ಏಕೆ ನಿರೀಕ್ಷೆ ಮತ್ತು ಕೋಪವನ್ನು ತೋರುತ್ತೇವೆ. ಅವರು ಕೊಟ್ಟ ಪ್ರೀತಿ ಏಕೆ ಮರೆಯುತ್ತೇವೆ. ಗಂಡ- ಹೆಂಡತಿ, ಅತ್ತೆ- ಮಾವ, ಮಕ್ಕಳೊಂದಿಗೆ ಮನುಷ್ಯ ಸಂಬಂಧಗಳನ್ನು ಬಿರುಕು ಮೂಡದಂತೆ ನಡೆಸಿಕೊಂಡು ಹೋಗುವ ಮಾರ್ಗಸೂಚಿ ಇದಾಗಿದೆ.ಹೆಚ್ಚಿನವರು ಮಾಡುವ ತಪ್ಪು ಏನೆಂದರೆ, ಕೇಳಿಸಿಕೊಳ್ಳುವುದು ಅರ್ಧ ಮಾತ್ರ ಅರ್ಥಮಾಡಿಕೊಳ್ಳುವುದು ಕಾಲುಭಾಗ ಇನ್ನೂ ಯೋಚಿಸುವುದು ಶೂನ್ಯ… ಆದರೆ ಪ್ರತಿಕ್ರಿಯೆ ಮಾತ್ರ ಎರಡುಪಟ್ಟು. ಹೀಗಾಗಿಯೇ ಎಲ್ಲಾ ಬಾಂಧವ್ಯಗಳಲ್ಲಿ ಒಡಕು ಮೂಡಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಗೋದು ಆ ಕಾರಣದಿಂದಲಾದರೂ ಕೊಂಡಿ ಕಳಚುವ ಮುನ್ನ ಮಾತಾಡಿ ಸ್ವಲ್ಪ ಪ್ಲೀಸ್.
ಬೇರೆ ಎಲ್ಲಾ ಕಡೆ ಹೊಂದಿಕೊಂಡು ಹೋಗುವ ಮನುಷ್ಯರು ತಮ್ಮದೇ ಬಾಳ ಸಂಗಾತಿಗಳೊಂದಿಗೆ ಅಂತರ ಕಾಯ್ದುಕೊಳ್ಳುವುದು ಯಾಕೆ ?ಮೊದಲು ಇಷ್ಟ ಪಟ್ಟ ಸಂಬಂಧ ಕಹಿಯಾಗುವುದು ಯಾಕೆ ? ಒಂದು ಸಂಬಂಧವನ್ನು ಹಲವು ವರ್ಷ ಕಾಪಾಡಿಕೊಂಡು ಬರುವುದು ಅಷ್ಟು ಕಷ್ಟದ ಕೆಲಸವಾ ?ಪರಸ್ವರ ಪ್ರೀತಿ ಹಂಚಿದವರು. ವಿಲನ್ ಗಳಾಗಿ ಬಿಡುವುದು ಹೇಗೆ ?ಬದುಕು ಕೊಳಲಿದ್ದ ಹಾಗೆ ಅದರಲ್ಲಿ ರಂದ್ರಗಳಿದ್ದ ಹಾಗೆ ಬದುಕಿನಲ್ಲಿ ಖಾಲಿತನಗಳಿರುತ್ತವೆ ಅದನ್ನು ನುಡಿಸುವ ಕಲೆ ಗೊತ್ತಿದ್ದರೆ ಸಂಗೀತ ಹೊರಹೊಮ್ಮುತ್ತದೆ. ಮನಸ್ಸು ಮುನಿಸಿಕೊಂಡು ಮೌನದ ಹಂತ ತಲುಪದವರೆಗೂ ನೋಡಿಕೊಳ್ಳಬೇಕಾದ ಜವಾಬ್ದಾರಿ ಇಬ್ಬರದೂ ಆಗಿರುತ್ತದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಅಲ್ಲಿಯೇ ಗುರುತಿಸಿ ಪರಿಹರಿಸಿಕೊಂಡರೆ ಯಾವ ಸಮಸ್ಯೆಯೂ ಹೆಮ್ಮರವಾಗುವುದಿಲ್ಲ. ಅಲ್ಲವೇ.?
ದಿನ ನಿತ್ಯ ಬಳಸುವ ವಸ್ತುಗಳ ಬಗ್ಗೆ ಇರುವ ಕಾಳಜಿಯನ್ನು ನಾವು ನಮ್ಮದೇ ಸಂಬಂಧ, ಬಂಧಗಳಿಗೆ ನಾವು ಕೊಡುವುದೇ ಇಲ್ಲ. ಕಾರ್, ಬೈಕ್, ಮೊಬೈಲ್, ವಾಷಿಂಗ್ ಮಷಿನ್, ಇತ್ಯಾದಿ ಎಲ್ಲವಕ್ಕೂ ಕಾಲ, ಕಾಲಕ್ಕೆ ನಾವು ಮರೆತರೂ, ಆ ವಸ್ತುಗಳ ಡಿಲೀರ್ಸ್ ಗಳ ನೆನಪಿಸುವಿಕೆಯಿಂದಾದರೂ ಸರ್ವಿಸ್ ಮಾಡಿಸಿ ನಂತರ ಅವು ಹೆಚ್ಚು ಸಮರ್ಪಕವಾಗಿ ಕೆಲಸ ಮಾಡುವಾಗ ನಮಗೆ ಎಲ್ಲಿಲ್ಲದ ಸಂತಸ. ಆದರೇ, ನಮ್ಮ ಅಸ್ತಿತ್ವವನ್ನೇ ರೂಪಿಸುವ ಸಂಬಂಧಗಳಲ್ಲಿ ಮೂಡುವ ಬಿರುಕುಗಳನ್ನು ಸರಿಪಡಿಸಿಕೊಳ್ಳಲು ಯಾವ ನಿಗದಿತ ಸರ್ವಿಸ್ ಅವಧಿಯನ್ನು ಇಟ್ಟುಕೊಳ್ಳದಿರುವುದೇ ವಿಪರ್ಯಾಸ.
ಬದುಕಿಗೆ ಸಾರ್ಥಕ್ಯ ಕೊಡುವ ಸಂಬಂಧಗಳು ಹಾಳಾಗುವುದು ದೊಡ್ಡ, ದೊಡ್ಡ ಜಗಳಗಳಿಂದಲ್ಲ ನಾವು ಸಂಬಂಧಗಳೆಡೆಗೆ ತೋರುವ ಉದಾಸೀನತೆಗಳಿಂದ ಸಣ್ಣ ಪುಟ್ಟ ಮನಸ್ತಾಪಗಳು ಅವುಗಳಿಂದ ಉಂಟಾದ ಮೌನ, ಮಾತಾಡದೇ ಉಂಟಾಗುವ ಅಪನಂಬಿಕೆ, ಆಗಲೇ ಮೂರನೇ ವ್ಯಕ್ತಿಯ ಮದ್ಯoತರ ಪ್ರವೇಶ ಅಲ್ಲಿಗೆ ಮೂಲ ಸಂಬಂಧಗಳಿಗೆ ತಿಲಾoಜಲಿ.
ಹೀಗೆ ಕಳಚಿಕೊಂಡ ಸಂಬಂಧಗಳ ಬಗ್ಗೆ ಯೋಚಿಸಿದಾಗ ಅದರಲ್ಲಿ ಅವರ ತಪ್ಪೇನು ಇರುವುದಿಲ್ಲ. ಆದರೇ ಆ ಸಂಬಂಧಗಳ ನಿರ್ವಹಣೆಯಲ್ಲಿ ನಾವು ತೋರುವ ಉದಾಸೀನತೆಯ ಪರಿಣಾಮ ನಾವುಗಳೇ ಆ ಸಂಬಂಧಗಳಿಗೆ ಚರಮಗೀತೆ ಹಾಡಿ ಬಿಟ್ಟಿರುತ್ತೇವೆ ಅದರ ಬದಲಾಗಿ ಒಂದು ಕ್ಷಣ ಯಾಕೆ ಹೀಗಾಯ್ತು ಅಂತ ಯೋಚನೆ ಮಾಡಿದರೇ ಪರಿಹಾರವಾದರೂ ದೊರಕೀತು.
ನಾವೋ ಅದೆಲ್ಲ ಬಿಡ್ತಿವಿ ನಮ್ಮ ಪ್ರೀಯ ವ್ಯಕ್ತಿಗಳ ದುಃಖ, ಆತಂಕಗಳ ಕುರಿತು ತಾಳ್ಮೆಯಿಂದ ಯೋಚಿಸದೆ ನಿರ್ಲಕ್ಷ ಮನೋಭಾವನೆ ತಾಳಿ ಬಿಡುತ್ತೇವೆ ಅಲ್ಲಿಗೆ ಸಂಬಂಧಗಳು ಹಳಸಲು ಶುರು ಆಯ್ತು ಅಂತಾನೇ ಅರ್ಥ. ಅದು ನಮ್ಮರಿವಿಗೆ ಬಂದರೂ ಕೂಡ ಎರಡೂ ಕಡೆಯಿಂದ ಅಹಂ ಅಥವಾ ಉಡಾಫೇ ಮೂಡುವುವೋ ಆ ಸಂಬಂಧಗಳ ಬಿರುಕು ಸರಿ ಪಡಿಸುವುದು ಕಷ್ಟ ಜೊತೆಗೆ ಇನ್ನಷ್ಟು ಪರಿಸ್ಥಿತಿ ಹದಗೆಡಲು ಕಾರಣ ಆಗುತ್ತೆ.
ಜೀವನದಲ್ಲಿ ಇಂತಹ ಸಂಬಂಧಗಳು ಬೇಕು. ನಮ್ಮ ಸರಿ ತಪ್ಪು ತಿಳಿಹೇಳಲು, ಬಿದ್ದಾಗ ಮೇಲೆತ್ತಲು, ಎಡವಿದಾಗ ಸರಿ ದಾರಿ ತೋರಲು, ಗೆದ್ದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಲು. ಇಲ್ಲದೇ ಹೋದರೆ ನಾವು ಒಂಟಿಯಾಗಿ ಬಿಡ್ತೇವೆ ನಂತರ ಕಳೆದುಕೊಂಡ ಸಂಬಂಧಗಳ ಬಗ್ಗೆ ಪಶ್ಚಾತಾಪ ಪಡುವ ಬದಲು ನಮ್ಮ ಜೀವನದಲ್ಲಿ ನಮಗೆ ಆಪ್ತರಾದವರ ಇರುವಿಕೆ ಅವರ ಸಹಾಯ, ಸಹಕಾರ ನೆನೆದು ಅವರ ಮನಸಿನಲ್ಲೂ ನಮಗೊಂದು ಭದ್ರ ಸ್ಥಾನ ಕಾಯ್ದುಕೊಳ್ಳುವoತಾದರೇ ಎಷ್ಟೊಂದು ಚೆನ್ನ??
“ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಂನಾ ಕೋಟೆಯಲಿ ಎಷ್ಟು ಕಷ್ಟವೊ ಹೊಂದಿಕೆ ಎಂಬುದು ಈ ನಾಲ್ಕು ದಿನದ ಬದುಕಿನಲಿ “ಅನ್ನುವ ಕವಿ ಜಿ. ಎಸ್. ಶಿವರುದ್ರಪ್ಪನವರ ಸಾಲುಗಳು ನಮ್ಮನ್ನು ಎಚ್ಚರಿಸುವಂತಾಗಲಿ. ನಾಲ್ಕು ದಿನದ ಬದುಕನ್ನು ನಿತ್ಯ ನೂತನವಾಗಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.
ಸಾರಿಗೆ ವ್ಯವಸ್ಥೆ, ದೂರವಾಣಿ ವ್ಯವಸ್ಥೆ, ಇರದಂತ ಹಿಂದಿನ ದಿನಗಳಲ್ಲಿಯೂ ಅಪರೂಪದ ಭೇಟಿ, ಭಾವನೆಗಳನ್ನು ಬರೆದ ಪತ್ರಗಳೇ ಸಂಬಂಧಗಳನ್ನು ಗಟ್ಟಿಗೊಳಿಸಬೇಕಿತ್ತು ಆದ್ರೆ ಈಗ ಹಾಗಿಲ್ಲ ಮೊಬೈಲ್ ಯುಗ.ಭೇಟಿ ಆಗೋಕೆ ಆಗದೇ ಹೋದ್ರು ಕೊನೆ ಪಕ್ಷ ಕಾಲ್ ಮೂಲಕ ಸಂದೇಶಗಳ ಮೂಲಕವಾದರೂ ಎಷ್ಟೋ ಮುರಿದು ಹೋಗುವ ಸಂಬಂಧಗಳಿಗೆ ಹೊಸ ರೂಪ ಕೊಡಬಹುದು. ಆದರೆ ನಾವು ಮಾಡುವುದೇನು? ಅವರು ಬ್ಯುಸಿ ಇರಬಹುದು ಅವರಿಗ್ಯಾಕೆ ತೊಂದ್ರೆ ಕೊಡೊದು ಅನ್ನುವ ನಮ್ಮದೇ ಪೂರ್ವ ನಿರ್ದಾರಿತ ಯೋಚನೆ, ಯೋಜನೆ ಹೀಗಾಗಿಯೇ ಎಷ್ಟೋ ಬಾಂಧವ್ಯಗಳ ಅತೀ ಮುಖ್ಯ ವಿಚಾರಗಳೂ ನಮ್ಮರಿವಿಗೆ ಬಂದಿರುವುದೇ ಇಲ್ಲ ಯಾರೋ ಸತ್ತಿರಬಹುದು, ಮತ್ಯಾರದ್ದೋ ಶುಭ ಸುದ್ದಿ ಇರಬಹುದು ಯಾವುದೂ ಗೊತ್ತಾಗುವುದೇ ಇಲ್ಲ. ಒಂದು ಸಣ್ಣ ಭೇಟಿ, ಚಿಕ್ಕ ಸಂದೇಶ, ಎರೆಡು ನಿಮಿಷದ ಕರೆ ಇಂತಹ ಸಂಬಂಧಗಳಿಗೆ ಜೀವ ತುಂಬುತ್ತವೆ ಅನ್ನುವುದನ್ನು ನೆನಪಿಡಬೇಕು.
” ಬೆಟರ್ ಲೇಟರ್ ದ್ಯಾನ್ ನೆವರ್ ” ಅನ್ನುವ ತತ್ವ ಅಳವಡಿಕೆ ಮಾಡಿಕೊಂಡು ದೂರಾದ ಸಂಬಂಧಗಳಿಗೆ ಜೀವ ತುಂಬೋಣವೇ??
ಹಾಗಾಗದೆ ಹೋದರೆ ಅತೀ ಚಿಕ್ಕ ಮನಸ್ತಾಪಕ್ಕೆ ಜಗಳ, ದ್ವೇಷದಿಂದ ಜೀವನ ಪರ್ಯಂತ ಕೊರಗುವವರ ಸಾಲಿನಲ್ಲಿ ನಮ್ಮ ಹೆಸರು ಸೇರ್ಪಡೆ ಆಗುತ್ತೆ. ಹಾಗಾಗಬಾರದೆಂದರೆ, ಬೆಲೆಯೇ ಇಲ್ಲದ, ಮತ್ತೊಮ್ಮೆ ಕೊಳ್ಳಬಹುದಾದ ವಸ್ತುಗಳ ಬಗ್ಗೆ ಅತೀ ಕಾಳಜಿವಹಿಸುವ ನಾವು ನಮ್ಮ ಬದುಕಿಗೆ ಆಸರೆ ಆಗುವ ಅತ್ಯಮೂಲ್ಯ ಸಂಬಂಧಗಳಿಗಾಗಿ ನಮ್ಮದೊoಚೂರು ಸಮಯ ನಿಗದಿಪಡಿಸಿಕೊಳ್ಳೋಣವೇ??
ಅವರ ” ಸ್ವಲ್ಪ ಮಾತಾಡಿ ಪ್ಲೀಸ್” ”
- ಪಾರ್ವತಿ ಜಗದೀಶ್