“ಪುಸ್ತಕ ಸಂತೆ”ಗೆ ತಪ್ಪದೆ ಬನ್ನಿ…

ಖ್ಯಾತ ಸಿನಿ ಬರಹಗಾರರಾದ ಗಣೇಶ ಕಾಸರಗೋಡು ಅವರ ‘ಬೆಳ್ಳಿತೆರೆಯ ಬಂಗಾರದ ಗೆರೆ’ ಮತ್ತು ‘ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್’ ಎರಡು ಕೃತಿಗಳನ್ನು ‘ವೀರಲೋಕ’ ಅಚ್ಚು ಹಾಕಿಸಿದೆ.ಈಗ ಮೂರನೇ ವರ್ಷದ “ಪುಸ್ತಕ ಸಂತೆ”ಗೆ ಸಿದ್ಧತೆ ನಡೆಸಿದ್ದಾರೆ ವೀರಕಪುತ್ರ ಶ್ರೀನಿವಾಸ್.  ನವೆಂಬರ್ 14, 15, 16 ರಂದು ಈ ‘ಪುಸ್ತಕ ಸಂತೆ’ ನಡೆಯಲಿದೆ. ಪ್ರವೇಶ ಉಚಿತ.ತಪ್ಪದೆ ಬನ್ನಿ…

‘ಸಾಹಿತ್ಯಲೋಕ ಇಷ್ಟು ಚೆನ್ನಾಗಿದೆ ಅನ್ನೋ ಸಣ್ಣ ಅಂದಾಜೂ ನನಗಿರಲಿಲ್ಲ! ಇದರ ಮುಂದೆ ಸಿನಿಮಾ, ರಾಜಕೀಯ, ಕ್ರಿಕೆಟ್ಟೂ ಸಪ್ಪೆ ಮಾರ್ರೇ ‘ – ವೀರಕಪುತ್ರ ಶ್ರೀನಿವಾಸ್

‘ಶುಭಂ’ ನನ್ನ 25 ನೇ ಪುಸ್ತಕ. ನನ್ನದೇ ಆದ ‘ಅಮ್ಮ ಪ್ರಕಾಶನ’ ದಲ್ಲಿ ಮತ್ತೊಂದು ಪುಸ್ತಕವನ್ನು ಪ್ರಿಂಟ್ ಮಾಡೋದಿಲ್ಲ ಅಂತ ನಿರ್ಧಾರ ತೆಗೆದುಕೊಂಡಿದ್ದೆ. ಆದರೆ ಬರೆಯುವವರ ಕೈ ಕಟ್ಟಿ ಹಾಕಲು ಸಾಧ್ಯವೇ? ಮತ್ತೊಂದು ಪುಸ್ತಕ ಬರೆದೆ. ಅದರ ಹೆಸರು : ‘ಸಾಂಪ್ರತಾ’. ಆದರೆ ನನ್ನ ಪ್ರಕಾಶನದಲ್ಲಿ ಪ್ರಕಟಿಸಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ ಈ ಸ್ಕ್ರಿಪ್ಟನ್ನು ವೀರಕಪುತ್ರ ಶ್ರೀನಿವಾಸ್ ಅವರಿಗೆ ಕಳಿಸಿಕೊಟ್ಟೆ. ಈ ಸ್ಕ್ರಿಪ್ಟನ್ನು ಕೂಲಂಕುಷವಾಗಿ ಓದಿದ ಶ್ರೀನಿವಾಸ್ ‘ಗುರುಗಳೇ, ಬಹಳ ಚೆನ್ನಾಗಿದೆ. ಆದರೆ ಇದನ್ನು ನನ್ನ ಯುಟ್ಯೂಬ್ ಚಾನಲ್’ ಗೆ ಬಳಸಿಕೊಳ್ಳುತ್ತೇನೆ ಆಗದೇ?’ – ಎಂದರು. ‘ನಿಮ್ಮ ಕೈಲಿಟ್ಟಿದ್ದೇನೆ, ಆಯ್ಕೆ ನಿಮ್ಮದು’ ಅಂದೆ. ಅವರು ಹಾಗೆಯೇ ಮಾಡಿದರು. ಮೊದಲೆರಡು ಎಪಿಸೋಡ್ ಭರ್ಜರಿ ಲೈಕ್ಸ್ ಪಡೆದುವು. ಆದರೆ ಅದಕ್ಕೆ ಸಂಬಂಧಿಸಿದ ತಾರೆಯರು ರೊಚ್ಚಿಗೆದ್ದು ಬಿಟ್ಟರು! ಪರ-ವಿರೋಧ ಚರ್ಚೆಯಾಯಿತು. ನಡುವೆ ಈ ಎಪಿಸೋಡುಗಳನ್ನು ಕೈ ಬಿಟ್ಟರು ಅಂತ ಕಾಣತ್ತೆ. ನಾನು ವಿಚಾರಿಸುವ ಗೋಜಿಗೆ ಹೋಗಲಿಲ್ಲ.

ನನ್ನದೊಂದು ಹಠವಿತ್ತು : ಶ್ರೀನಿವಾಸ್ ಕೈಲಿ ನನ್ನ ಪುಸ್ತಕವೊಂದನ್ನು ಪ್ರಿಂಟ್ ಮಾಡಿಸುವ ಹಠ! ಈ ಪುಸ್ತಕಕ್ಕೆ ಆಯ್ಕೆ ಮಾಡಿಕೊಂಡದ್ದು ‘ವಿಜಯವಾಣಿ’ಯಲ್ಲಿ ನಾನು ಬರೆದುಕೊಂಡಿದ್ದ ‘ಬೆಳ್ಳಿತೆರೆಯ ಬಂಗಾರದ ಗೆರೆ’ ಸಬ್ಜೆಕ್ಟ್’ನ್ನು. ಮರು ಕಂಪೋಸ್ ಮಾಡಿ ಸ್ಕ್ರಿಪ್ಟನ್ನು ಶ್ರೀನಿವಾಸ್ ಅವರಿಗೆ ಕಳಿಸಿಕೊಟ್ಟೆ. ಅದನ್ನು ಓದಿ ಅವರೊಂದು ವಾಯ್ಸ್ ಮೆಸೇಜ್ ಮಾಡಿದರು :
‘ಪುಸ್ತಕವನ್ನು ಎಲ್ಲರೂ ಓದುತ್ತಾರೋ ಇಲ್ಲವೋ ಗೊತ್ತಿಲ್ಲ, ಆದ್ರೆ ಡಿಜಿಟಲ್ ಮೀಡಿಯಾ ಎಷ್ಟೊಂದು ಸ್ಟ್ರಾಂಗ್ ಅಂದ್ರೆ, ಇನ್ಸ್ಟೆಂಟ್ ಆಗಿ 10,000 ನೋಡುಗರು ಸಿಕ್ಕಿ ಬಿಡುತ್ತಾರೆ. ಪುಸ್ತಕ ಪ್ರಿಂಟ್ ಮಾಡಿ, ಅದು ಓದುಗರನ್ನು ತಲುಪಿ, ಅಭಿಪ್ರಾಯ ಬರುವುದನ್ನು ಕಾದು ಕುಳಿತುಕೊಳ್ಳುವ ಹಿಂಸೆಯಿದೆಯಲ್ಲಾ…’ – ಇದು ವೀರಕಪುತ್ರ ಶ್ರೀನಿವಾಸರ ಆಗಿನ ಅಭಿಪ್ರಾಯವಾಗಿತ್ತು.
ನಾನು ಪಟ್ಟು ಬಿಡಲಿಲ್ಲ. ಮತ್ತೊಂದು ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡು ಅದರ ಸ್ಕ್ರಿಪ್ಟನ್ನು ಶ್ರೀನಿವಾಸ್ ಅವರಿಗೆ ಕಳಿಸಿಕೊಟ್ಟೆ. ಅದರ ಟೈಟಲ್ : ‘ಕನ್ನಡ ಚಿತ್ರರಂಗದ ಲೆಜೆಂಡ್’ಗಳ ಕೊನೆಯ ದಿನಗಳು’. ಶ್ರೀನಿವಾಸ್ ಉತ್ತರ ಬಂತು : ‘ಅಯ್ಯೋ ಸಾರ್, ಇದಕ್ಕಾಗಿಯೇ ಒಂದು ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಬೇಕು. ಒಮ್ಮೆ ಶುರು ಮಾಡಿದ್ರೆ ಒಂದೇ ಪುಸ್ತಕದೊಂದಿಗೆ ಕೊನೆಯಾಗಬಾರದು…’ – ಇತ್ಯಾದಿ ಇತ್ಯಾದಿ. ನಾನು ಮೌನವಾದೆ. ತಿಂಗಳು ಬಿಟ್ಟು ಅವರೇ ವಾಯ್ಸ್ ಮೆಸೇಜ್ ಕಳಿಸಿದರು : ‘ಸರ್, ನೀವು ಸೂಚಿಸಿದ ಪ್ರಾಜೆಕ್ಟ್ ವರ್ಕೌಟ್ ಮಾಡಿದ್ದೇನೆ. ತುಂಬಾ ಸೀರಿಯಸ್ ಆಗಿ ಇದನ್ನು ಕಾರ್ಯರೂಪಕ್ಕೆ ತರಲು ಯೋಚಿಸಿದ್ದೇನೆ. ನಮ್ಮ ಸಂಸ್ಥೆಗೆ ‘ವೀರಲೋಕ ಪುಸ್ತಕ ಪ್ರಕಾಶನ’ ಎಂಬ ಹೆಸರನ್ನು ರಿಜಿಸ್ಟರ್ ಮಾಡುತ್ತಿದ್ದೇನೆ…’ – ನನಗೆ ಗಾಳಿಯಲ್ಲಿ ತೇಲಿದ ಅನುಭವ! ಮುಂದಿನದ್ದು ಇತಿಹಾಸ…

ಈಗ ನೋಡಿ, ವೀರಕಪುತ್ರ ಶ್ರೀನಿವಾಸ್ ಅವರ ಈ ಪ್ರಾಜೆಕ್ಟ್ ವಿಶ್ವರೂಪ ಪಡೆದು ನಿಮ್ಮ ಮುಂದಿದೆ. ಚಾಮರಾಜಪೇಟೆಯಲ್ಲೊಂದು ವ್ಯವಸ್ಥಿತವಾದ ಆಫೀಸು ಮಾಡಿಕೊಂಡಿದ್ದಾರೆ. ಹತ್ತಾರು ಮಂದಿ ಜತೆ ಸೇರಿದ್ದಾರೆ. ಹತ್ತಾರು ಮಂದಿ ಬರಹಗಾರರ ತಂಡವೇ ರೆಡಿಯಾಗಿದೆ. ವೀರಕಪುತ್ರ ಶ್ರೀನಿವಾಸ್ ಅವರ ಎಂಟೆದೆಗೆ ಮೆಚ್ಚಲೇ ಬೇಕು. ಏಕಕಾಲಕ್ಕೆ 10-12 ಪುಸ್ತಕಗಳ ಬಿಡುಗಡೆ ಸಮಾರಂಭ ಮಾಡಿ ಬರಹಗಾರರನ್ನು, ಓದುಗರನ್ನು ಜತೆ ಸೇರಿಸುವ ಇವರ ಶ್ರಮಕ್ಕೆ ಎಣೆಯುಂಟೆ? ಬೀದರ್, ಮೈಸೂರುಗಳಲ್ಲೂ ಪುಸ್ತಕ ಲೋಕಾರ್ಪಣೆಯ ಸಂಭ್ರಮವನ್ನು ಓದುಗರಿಗೆ ರುಚಿಕಟ್ಟಾಗಿ ಕೊಟ್ಟ ಧನ್ಯತೆ ಸಾಮಾನ್ಯದ್ದಾ? ‘ಹೊತ್ತಿಗೆ ದಿಬ್ಬಣ’ ಎಂಬ ಹೊಸ ಕಾನ್ಸೆಪ್ಟ್’ನಡಿ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಪುಸ್ತಕಗಳನ್ನು ಮಾರಾಟ ಮಾಡಿದ ದಾಖಲೆ ‘ವೀರಲೋಕ’ದ್ದು. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಓರಗೆಯ ಪ್ರಕಾಶಕರನ್ನೂ ಜತೆ ಸೇರಿಸಿ ಪುಸ್ತಕ ಹಬ್ಬ ಮಾಡುವ ವೀರಕಪುತ್ರನ ವೀರೋಚಿತ ನಿಷ್ಕಲ್ಮಶ ನಿಲುವನ್ನು ಯಾರಾದರೂ ಶ್ಲಾಘಿಸಲೇ ಬೇಕು…ಅಂದಹಾಗೆ, ಮೊದಲೇ ಹೇಳಿದ ಹಾಗೆ ನನ್ನ ಎರಡು ಪುಸ್ತಕಗಳನ್ನು ‘ವೀರಲೋಕ’ ಅಚ್ಚು ಹಾಕಿಸಿದೆ : ‘ಬೆಳ್ಳಿತೆರೆಯ ಬಂಗಾರದ ಗೆರೆ’ ಮತ್ತು ‘ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್’. ಇನ್ನೂ ಒಂದು ಸಿಹಿ ಸುದ್ದಿ : ಈ ಸೀಮಿತ ಅವಧಿಯಲ್ಲೇ ವೀರಲೋಕ ಪ್ರಕಾಶನ ಸಂಸ್ಥೆ ಪ್ರತಿಷ್ಠಿತ ‘ದಿ ಫೆಡರೇಶನ್ ಆಫ್ ಇಂಡಿಯನ್ ಪಬ್ಲಿಷರ್ಸ್’ ಸಂಸ್ಥೆಯ ಸದಸ್ಯತ್ವ ಪಡೆದಿದೆ.

ಇದೀಗ ಮೂರನೇ ವರ್ಷದ “ಪುಸ್ತಕ ಸಂತೆ”ಗೆ ಸಿದ್ಧತೆ ನಡೆಸಿದ್ದಾರೆ ವೀರಕಪುತ್ರ ಶ್ರೀನಿವಾಸ್. ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ನಡೆಯಲಿರುವ ಈ ಪುಸ್ತಕೋತ್ಸವದ ಬೋನಸ್ ಆಕರ್ಷಣೆಯೆಂದರೆ ಮೂವತ್ತು ಮಂದಿ ಕನ್ನಡದ ಮಹತ್ವದ ಕವಿವರ್ಯರ ಕಟೌಟ್ ಗಳು! ನವಂಬರ್ 14, 15, 16 ರಂದು ಈ ಪುಸ್ತಕ ಸಂತೆ ನಡೆಯಲಿದೆ. ಪ್ರವೇಶ ಉಚಿತ…
ಒಟ್ಟಿನಲ್ಲಿ ವೀರಕಪುತ್ರ ಶ್ರೀನಿವಾಸ್ ಯಾವ ನಿಗೂಢ ಗುರಿಯಿಟ್ಟುಕೊಂಡು ಈ ‘ವೀರಲೋಕ’ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೋ ಗೊತ್ತಿಲ್ಲ. ಗುರಿ ಮುಟ್ಟುವ ಈ ಛಲದಂಕಮಲ್ಲನ ಸಾಹಸಕ್ಕೆ ನಿಮ್ಮದೊಂದು ಸ್ಟ್ರಾಂಗ್ ಶುಭ ಹಾರೈಕೆಯಿರಲಿ…ಶುಭಂ…


  • ಗಣೇಶ ಕಾಸರಗೋಡು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW