“ಗಾಡ್ is not ರೀಚಬಲ್” ಕೃತಿ ಪರಿಚಯ

ರವೀಂದ್ರ ಮುದ್ದಿಯವರ ‘ಗಾಡ್ is not ರೀಚಬಲ್’ ಕೃತಿಯ ಕುರಿತು ರಾಘವೇಂದ್ರ ಪಿ ಅಪರಂಜಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಗಾಡ್ is not ರೀಚಬಲ್
ಲೇಖಕರು : ರವೀಂದ್ರ ಮುದ್ದಿ
ಮುದ್ರಕರು: ಲಕ್ಷ್ಮೀ ಮುದ್ರಣಾಲಯ, ಬೆಂಗಳೂರು.

ಆತ್ಮೀಯರಾದಂತ ರವೀಂದ್ರ ಮುದ್ದಿಯವರು ಪ್ರೀತಿಯಿಂದ ಕಳುಹಿಸಿಕೊಟ್ಟ “ಗಾಡ್ is not ರೀಚಬಲ್” ಕಾದಂಬರಿಯನ್ನು ಓದಿದಾಗ ಮನಸ್ಸಿಗೆ ಹೊಸದೊಂದು ಅನುಭವ ದಕ್ಕಿತು. ಇದು ಕೇವಲ ಒಂದು ಕಾದಂಬರಿ ಎನ್ನಿಸುವುದಿಲ್ಲ, ಬದಲಿಗೆ ಬದುಕಿನ ಆಳವಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಒಂದು ರೋಚಕ ಪಯಣ ಅನಸ್ತು. ಲೇಖಕರು ಕಟ್ಟಿಕೊಟ್ಟಿರುವ ಕಥಾ ಹಂದರ ಮತ್ತು ಪಾತ್ರಗಳ ವಿನ್ಯಾಸ ಓದುಗರನ್ನು ಮೊದಲಿಗೇ ಸೆಳೆದುಬಿಡುತ್ತದೆ.

ಕಾದಂಬರಿಯ ಮುಖ್ಯ ಪಾತ್ರಧಾರಿ ಗೌತಮನು, ತನಗೆ ಸಿಕ್ಕ ಒಂದು ಸಣ್ಣ ಚೀಟಿಯಿಂದಾಗಿ, ದೇವರನ್ನು ಹುಡುಕಲು ಕಾಶಿಯತ್ತ ಪ್ರಯಾಣ ಬೆಳೆಸುವ ಕಥೆಯು ಇಡೀ ಕಾದಂಬರಿಗೆ ಒಂದು ತಾತ್ವಿಕ ಮತ್ತು ಆಧ್ಯಾತ್ಮಿಕ ನೆಲೆಯನ್ನು ಒದಗಿಸುತ್ತದೆ.

ಕರಾವಳಿಯ ಮಣ್ಣಿನ ಸೊಗಡಿನಿಂದ ಆರಂಭವಾಗಿ ಮುಂಬೈ, ಕುಮಟಾ ಮುಂತಾದ ಪ್ರದೇಶಗಳ ಮೂಲಕ ಉತ್ತರ ಭಾರತದ ಕಾಶಿಯ ವರೆಗೆ ಸಾಗುವ ಗೌತಮನ ಪ್ರಯಾಣ ಕೇವಲ ಭೌಗೋಳಿಕವಾಗಿರುವುದಿಲ್ಲ, ಅದು ಆಂತರಿಕ ಅನ್ವೇಷಣೆಯ ಹಾದಿಯೂ ಹೌದು. ಲೇಖಕರು ಸ್ಥಳೀಯ ಸಂಸ್ಕೃತಿ ಮತ್ತು ವಾತಾವರಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

ರವೀಂದ್ರ ಮುದ್ದಿಯವರ ನಿರೂಪಣಾ ಶೈಲಿ ಬಹಳ ಚುರುಕಾಗಿದೆ. ಕಥೆಯ ವೇಗ, ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಗಳಂತೆ ಕುತೂಹಲವನ್ನು ಕೆರಳಿಸುತ್ತಾ ಸಾಗುತ್ತದೆ. ಮುಂದೇನು? ಎಂಬ ಪ್ರಶ್ನೆ ಓದುಗರ ಮನಸ್ಸಿನಲ್ಲಿ ಸದಾ ಕೊರೆಯುತ್ತಿರುತ್ತದೆ.

ಪಾತ್ರಗಳ ಭಾವನಾತ್ಮಕ ಒಳನೋಟಗಳು, ಅವರ ನೋವು, ಹರ್ಷ, ಗೊಂದಲಗಳನ್ನು ಲೇಖಕರು ಅತ್ಯಂತ ಸಹಜವಾಗಿ ಮತ್ತು ಪ್ರಬುದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರಚಲಿತ ಕಾಲಘಟ್ಟದಿಂದ ೧೨ನೇ ಶತಮಾನದವರೆಗಿನ ಕಥಾ ಸೂತ್ರಗಳನ್ನು ಸಮರ್ಥವಾಗಿ ಜೋಡಿಸಿರುವ ಲೇಖಕರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಒಟ್ಟಾರೆಯಾಗಿ, “ಗಾಡ್ is not ರೀಚಬಲ್” ಕಾದಂಬರಿಯು ದೇಸಿ ಕಥಾ ಹಂದರ, ಆಧ್ಯಾತ್ಮಿಕ ಹುಡುಕಾಟ, ಭಾವನಾತ್ಮಕ ಸೆಳೆತ ಮತ್ತು ವೇಗದ ನಿರೂಪಣೆಯನ್ನು ಒಳಗೊಂಡಿರುವ ಕನ್ನಡದ ಹೊಸ ತಲೆಮಾರಿನ ಅತ್ಯುತ್ತಮ ಕೃತಿಯಾಗಿದೆ.

ಇದು ಓದುಗರನ್ನು ಯೋಚನೆಗೆ ಹಚ್ಚುವುದಲ್ಲದೆ, ಬದುಕಿನ ಸತ್ಯಗಳ ಕುರಿತು ಮರುಚಿಂತನೆ ನಡೆಸುವಂತೆ ಪ್ರೇರೇಪಿಸುತ್ತದೆ. ಒಂದು ಉತ್ತಮ ಸಿನಿಮಾಕ್ಕೆ ಬೇಕಾದ ಎಲ್ಲ ಅಂಶಗಳೂ ಈ ಕಾದಂಬರಿಯಲ್ಲಿವೆ ಎಂಬುದು ನಿರ್ವಿವಾದ. ಓದು ಮುಗಿದ ನಂತರವೂ ಗೌತಮನ ಪ್ರಯಾಣ ಮನಸ್ಸಿನಲ್ಲಿ ಖಂಡಿತಾ ಉಳಿಯುತ್ತದೆ. ನೀವು ಓದರಿ ಮತ್ತ.


  • ರಾಘವೇಂದ್ರ ಪಿ ಅಪರಂಜಿ

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW