ಗೌರಿಯ ತಳಮಳ – ಶೋಭಾ ನಾರಾಯಣ ಹೆಗಡೆ

ತಾಯಿ ಗೌರಿ ತನ್ನ ಪುತ್ರನ ಮೇಲಿರುವ ಪ್ರೀತಿಯನ್ನು ಕವಿಯತ್ರಿ ಶೋಭಾ ನಾರಾಯಣ ಹೆಗಡೆ ಅವರು ಒಂದು ಸುಂದರವಾಗಿ ಲೇಖನದ ಮೂಲಕ ವರ್ಣಿಸಿದ್ದಾರೆ, ಮುಂದೆ ಓದಿ…

ಭೂಲೋಕದಲ್ಲಿ ತುಂಬಾ ಮಳೆಯಂತೆ. ಹೇಗೆ ಕಳುಹಿಸಿ ಕೊಡಲಿ ನನ್ನ ಪುಟ್ಟ ಕಂದನ…ಶೀತ ಭಾಧೆ ತಟ್ಟಿದರೆ ನನ್ನ ಕರುಳ ಪಾಡೇನು?

ಹೇ ಮುದ್ದು ಕಂದ, ನಾನೂ ನಿನ್ನೊಡನೆ ಬರುವೆ. ಹಾಗೇ ಹಬ್ಬ ಮುಗಿಸಿ ನನ್ನೊಡನೆಯೇ ಮರಳಿ ಬಂದು ಬಿಡೋ ನನ್ನ ಬಂಗಾರ.. ಅಲ್ಲೇ ಉಳಿವೆ ಎಂಬ ಹಠವೇಕೋ ಚಿನ್ನ.
ನಾನು ಮರಳಿ ಬಂದಮೇಲೆ ಅಲ್ಲಿ ನೋಡಿಕೊಳ್ಳುವವರು ಯಾರೋ ಮುದ್ದು ಮರಿ?ಊಹು..ಕೇಳಲೊಲ್ಲದು ನನ್ನ ಚಿನ್ನಿ ಮರಿ..ಏಳೆಂಟು ದಿನ ಉಳಿಯುವೆ ಎನ್ನುತಿದೆ.ಪರಶಿವನಾದರೂ ಒಂದು ಮಾತು ಹೇಳಿದರೆ ,ಕೇಳುತ್ತಿತ್ತೇನೋ ನನ್ನ ಕಂದ.ಅವರೂ ಏನೂ ಹೇಳರು.ಮೊದಲೇ ಭೂಲೋಕದಲ್ಲಿ ಏನೂ ಸರಿಯಿಲ್ಲ. ರೋಗರುಜಿನಗಳ ಬೀಡಾಗಿದೆಯಂತೆ.ಮೊನ್ನೆ ನಾರದರು ಹೇಳುತ್ತಿದ್ದರು.

ಫೋಟೋ ಕೃತೆ : indiaherald

ಓ ಇಲಿಮರಿಯೇ ..ನೀನು ನನ್ನ ಕಂದನ ಕಾಪಾಡುವೆ ಎಂಬ ಭರವಸೆ ಮೇಲೆ ಬಿಟ್ಟು ಬರುವೆ…ಶೀತ ಆಗದಂತೆ ,ನೋಡಿಕೋ…ಭಕ್ತರು ಎಲ್ಲಾ ತರಹದ ತಿಂಡಿ, ತೀರ್ಥಗಳನ್ನು ಕೊಟ್ಟು ಬಿಡುತ್ತಾರೆ. ಮನೆಯಲ್ಲಿ ಸ್ವಚ್ಛವಾಗಿ ಮಾಡಿದ್ದರೆ ಸರೀ.ಅಂಗಡಿ ಮುಂಗಟ್ಟುಗಳಿಂದ ತಂದು ಕೊಟ್ಟು ಬಿಟ್ಟರೆ ನನ್ನ ಕಂದನ ಗತಿ ಏನು?ಹಾಂ..ನನ್ನ ಕಂದನಿಗೆ ಮೇಕಪ್ ಬೇಡ..‌ಅವನು ಹೇಗಿದಾನೋ ಹಾಗೇ ಇರಲಿ…ಅವನಿಗೆ ಬಣ್ಣ ಬಳಿದು ಅವನ ದೇಹವನ್ನು ಹಾಳುಮಾಡಿಬಿಡುತ್ತಾರೆ…ಸಿಡಿಮದ್ದುಗಳ ಭರಾಟೆ ಜೋರು ಭೂಲೋಕದಲ್ಲಿ. ಹುಷಾರು.ಆ ವಾಸನೆ ,ಸದ್ದಿಗೆ ನನ್ನ ಪುಟ್ಟ ಮರಿ ಎಲ್ಲಿ ಹೆದರಿ ಬಿಡುತ್ತೋ ಎಂಬ ಭಯ ನನಗೆ.

ಇನ್ನೊಂದು ತುಂಬಾ ಭಯವಾಗುವ ವಿಷಯ. ನನ್ನ ಕಂದನನ್ನು ಎಲ್ಲೆಂದರಲ್ಲಿ ಮುಳುಗಿಸಿ ಬಿಡುತ್ತಾರೆ.ಕಲ್ಮಶ ತುಂಬಿದ ನೀರಿನಲ್ಲಿ ಕೂಡ…ಅವನ ಆರೋಗ್ಯ ಏನಾಗಲಿಕ್ಕಿಲ್ಲ. ಕಳುಹಿಸಿಕೊಡುವೆ ಮುದ್ದು ಕಂದನ. ಜೋಪಾನವಾಗಿ ನೋಡಿಕೊಂಡು ಮರಳಿ ಕಳಿಸುತ್ತೇವೆ ಎಂದರೆ ಮಾತ್ರ… ನನ್ನ ಕಂದ ಮೊದಲ ಪೂಜೆ ಸ್ವೀಕರಿಸೋ ಅಧಿನಾಯಕನಾದರೂ ತಾಯಿಗೆ ಪುಟ್ಟ ಮಗ ಅವ. ಅವನ ಜತನ ಗೈವ ಹೊಣೆ ತಾಯಿಯಾಗಿ ನನ್ನದು.ನನ್ನ ಮಗನನ್ನು ನಾನು ಹೇಗೆ ಕಳುಹಿಸಿ ಕೊಡುವೆನೋ ,ಹಾಗೇ ನನಗೆ ವಾಪಸ್ ಕಳುಹಿಸಿ ಕೊಡಿ…ನನ್ನ ಕರುಳು ಬಳ್ಳಿಯನು. ಹ್ಮ,ಹಾಗೇ ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಭಾಗಿಯಾಗಿ. ನಿರ್ಗತಿಕರ ಹೆಗಲಾಗುತ್ತ,ಅವರಿಗೂ ಹಬ್ಬದ ಸಂಭ್ರಮವ ನೀಡಿ.

ಮೂಷಿಕ ಮತ್ತೆ ಮತ್ತೆ ಹೇಳುವೆ…ಕಂದನ ಜೋಪಾನವಾಗಿ ನೋಡಿಕೋ….ನಾನಿಲ್ಲದಾಗ ನೀನು ಅವನಿಗೆ ವಾಹನ ಮಾತ್ರ ಅಲ್ಲ… ಅಮ್ಮ ಕೂಡ…ಆಯಿತಾ…ಸರಿ ಇನ್ನು ನನ್ನ ಮನ ನಿರಾಳ…ಹೋಗಿ ಬಾ ನನ್ನ ಮುದ್ದು ಕಂದ…ಭೂಲೋಕಕೆ.

ಉಫ್!!ತಾಯಿಯ ಮಮತೆ ಅಂದ್ರೆ ಹೀಗೇ ಅಲ್ವಾ?ನನ್ನ ಕಂದ ಜಗಕೆ ನಾಯಕನೇ ಇರಬಹುದು. ಆದರೆ ನನಗೆ ಪುಟ್ಟ ಕಂದ ಅವ..ಏನ್ಮಾಡ್ತಾ ಇದಾನೋ ಏನೋ..ನಾನಂತೂ ಬಂದಾಯ್ತು,ಭೂಲೋಕದಿಂದ.ಮೂಷಿಕ,ನನ್ನ ಕಂದನ ಚೆನ್ನಾಗಿ ನೋಡ್ಕೋತಾ ಇದಾನೋ ಏನೋ..ಎಲ್ಲಾ ಚಿಂತೆಗಳಿಂದ ಹೈರಾಣಾಗಿ ಕೂತಿದ್ದೆ.

ಫೋಟೋ ಕೃತೆ : facebook

ಗೌರಮ್ಮ… ಗೌರಮ್ಮ ಎಂದು ಕರೆಯುತ್ತಾ , ನಾರದರು ಒಳ ಬಂದರು.ಅವರು ಕರೆದ ಪರಿ ಕೂಡ ನನ್ನ ಅರಿವಿಗೆ ಬಾರಲೇ ಇಲ್ಲ. ಮಗನ ಚಿಂತೆಯಲ್ಲಿ ಕಳೆದೇ ಹೋಗಿದ್ದೆ ಅಷ್ಟು ಗಾಢವಾಗಿ…ಏನು ತಾಯಿ, ಭೂಲೋಕದಲ್ಲಿ ಮಗನನ್ನು ಬಿಟ್ಟು ಬಂದು..ಇಷ್ಟು ಸೊರಗಿ ಕೂತರೆ ಹೇಗೇ?ಅಲ್ಲಿ ಭಕ್ತರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ,ತಾಯಿ, ಚಿಂತೆ ಬೇಡ..‌ನಾರಾಯಣ… ನಾರಾಯಣ ಎಂದರು ನಾರದರು. ಓ ನಾರದರು. ಬರಬೇಕು.ಬರಬೇಕು. ಭೂಲೋಕದಿಂದ ಬರುತ್ತಿರುವಿರಾ?ಎಲ್ಲಾ ಕುಶಲವೇ ಎಂದು ಲಗುಬಗೆಯಿಂದ ಕೇಳಿದೆ.ಹು ತಾಯಿ. ನಾನೀಗ ಭೂಲೋಕದಿಂದಲೇ ಬರುತ್ತಿರುವುದು. ನಿನ್ನ ಮತ್ತೆ ಪರಶಿವನ ಅನುಗ್ರಹದಿಂದ ಭೂಮಿ ತಾಯಿ,ಸುಭಿಕ್ಷೆಯಿಂದ ರಾರಾಜಿಸುತ್ತಿದ್ದಾಳೆ…ಅಲ್ಲಿ ಯಾವ ಚಿಂತೆಯೂ ಇಲ್ಲ… ಓ ಹೌದೇನು?ನನ್ನ ಮಗ ಹೇಗಿರುವನು ನಾರದರೇ? ಎಂದು ಕೇಳಿದೆ.

ತಾಯಿ, ನೀನು ಜಗಜ್ಜನನಿಯಾಗಿ ಇಷ್ಟೊಂದು ತಳಮಳವೇ ನಿಮ್ಮ ಪುತ್ರ,ತುಂಬಾ ಸಂತೋಷದಿಂದ ಮನ,ಮನೆಗಳಲ್ಲಿ ಸಂಭ್ರಮ ಪಡುತ್ತಾ ಇದ್ದಾನೆ.ಎಂದರು.ಮೂಷಿಕ ಕೂಡ ಜೊತೆಯಲ್ಲಿ ಇದ್ದು,ನಮ್ಮ ಗಣಪನ ಕಾಳಜಿ ಮಾಡುತ್ತಿದೆ ಎಂದಾಗ ಮನಕೆ ನಿರಾಳ ಅನಿಸಿತು.

ತಾಯಿ, ಚಿಂತೆ ಬೇಡ.ನಿಮ್ಮ ಪುತ್ರ ಆದಷ್ಟು ಬೇಗ ಮರಳಿ ನಿಮ್ಮ ಮಡಿಲು ಸೇರುವ.ನೆಮ್ಮದಿಯಿಂದ ಇರಿ. ನಾನಿನ್ನು ಬರುವೆ.ನಾರಾಯಣ.. ನಾರಾಯಣ… ಹೊರಟರು ನಾರದರು ನನ್ನ ಅಪ್ಪಣೆ ಪಡೆದು…ನಾರದರ ಮಾತಿನಿಂದ ತುಸು ನೆಮ್ಮದಿ ದೊರೆತು,ಮನಸ್ಸು ಹಗುರ ಆಯಿತು.. ಮಗ ಬರುವ ದಾರಿ,ಕಾಯುತ್ತಾ,ಬೀಸಿ ಕರೆಯುತ್ತಿದ್ದ ನನ್ನ ಕರ್ತವ್ಯದ ಕಡೆಗೆ ಮನಸ್ಸನ್ನು ಹೊರಳಿಸಿದೆ….


  • ಶೋಭಾ ನಾರಾಯಣ ಹೆಗಡೆ (ಕವಿಯತ್ರಿ , ಲೇಖಕಿ)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW