‘ಪ್ರಯಾಣ’ ಸಣ್ಣಕತೆ (ಭಾಗ೩) – ರೇಶ್ಮಾ ಗುಳೇದಗುಡ್ಡಾಕರ್

ತಬುಸುಮ್ ಕಣ್ಣೀರನ್ನು ಒರಿಸಿಕೊಳ್ಳುತ್ತಾ ಈ ಬದುಕಿನಲ್ಲಿ ಸಿಕ್ಕ ಒಂದು ಸುಂದರ ಗೆಳೆತನ ಕರೋನದಿಂದ ಸರ್ವನಾಶವಾಯಿತು ಎಂದಳು. ಕತೆಗಾರ್ತಿ ರೇಶ್ಮಾ ಗುಳೇದಗುಡ್ಡಾಕರ್ ಅವರ ‘ಪ್ರಯಾಣ’ದ ಮುಂದಿನ ಭಾಗ ತಪ್ಪದೆ ಓದಿ….

ಹೇಳಲಾಗದ ಹಸಿವು, ತಾಳಲಾಗದ ತಪನೆ |
ಆಳದಲ್ಲಿ ನಾಚನಾಗಿಪ ಚಿಂತೆಯುಂಟೆ ||
ಗಾಳಿಯತ್ತೆತ್ತಣಿನೂ   ತಂದೀವ ಸೋಂಕು
ಇವೆ ಬಾಳ ಸಾಮಗ್ರಿಯಲ 

            –ಮಂಕುತಿಮ್ಮ

ಅರವಿಂದ ಸರ ಸರನೆ ಬಂದು ಹೋಗುತ್ತಿರುವ ಹುಬ್ಬಳ್ಳಿ ಜನಶತಾಬ್ದಿ ರೈಲ್ ಹತ್ತಲು ಭಾರಿ ಸಾಹಸವೇ ಮಾಡ ಬೇಕಾಯಿತು. ಎಷ್ಟು ಬೇಗ ಏಳಬೇಕು ಎಂದರು ಕಣ್ಣು ತೆರೆಯದು. ರಾತ್ರಿ ನಿದ್ದೆಯೂ ಬಾರದು. ಅಂತಹ ಬರಡಾದ ಸಿಂಗಲ್ ಬದುಕು ಅವನದು, ಹಾಗೆಂದು ಅವನದು ತಕ್ಷಣ ಕಣ್ಣಿಗೆ ಕಾಣುವಷ್ಟು ಬರಡು ಬದುಕಲ್ಲ. ಒಳ್ಳೆಯ ಕಾರ್ಪೊರೇಟ್ ಕೆಲಸ, ಕೈತುಂಬ ಸಂಪಾದನೆ, ಮನೆಯಲ್ಲಿ ಒಬ್ಬ ಅಣ್ಣ ಅವನು ಕೆಲಸಕ್ಕೆ ಸೇರಿ ವಿವಾಹವಾಗಿ ಮಕ್ಕಳೂಂದಿಗೆ ಸಂಸಾರಸ್ಥ ಅಗಿದ್ದ. ಇನ್ನು ಉಳಿದವ  ಈ ಅರವಿಂದ ಸಣ್ಣವ ಮನೆಗೆ ಓಣಿಗೂ ಸದಾ ಸಣ್ಣವ.  ಹೊಸ ವರ್ಷ ಆರಂಭ ತಾಯಿಯ ಒತ್ತಾಯಕ್ಕೆ ಮಣಿದು ವರ ಮಹಾಶಯನಾಗಿ ಸ್ವಗೃಹ ಹುಬ್ಬಳ್ಳಿಗೆ ಪ್ರಯಾಣ ಬೆಳಸಿದ್ದ.

ಲಗುಬಗೆಯಲ್ಲಿ ಹತ್ತಿದವ ತನ್ನ ಬೋಗಿ ಯಾವುದು ಎಂದು ಮತ್ತೆ ಮೊಬೈಲ್ ತೆಗೆದು ನೋಡಿದ ತನ್ನ ಬೋಗಿ ಹಾಗೂ ಸೀಟನ್ನು ಹುಡುಕಿ ಕುಳಿತವರನ್ನು ಎಬ್ಬಿಸಿ ತಾನು ಬುಕ್ ಮಾಡಿದ ಸೀಟನ್ನು ತೋರಿಸಿ ಕಿಟಕಿಯ ಪಕ್ಕದ ಸೀಟಲ್ಲಿ ತಣ್ಣಗೆ ಕುಳಿತ ಬ್ಯಾಗನ್ನು ಪಕ್ಕ ದಲ್ಲಿರಿಸಿದ. ಇನ್ನೇನು ಕಣ್ಣು ಮುಚ್ಚಬೇಕು ಆದರೆ ತನ್ನ ಸೀಟಿನ ಎದುರಿನ  ನೇರಕ್ಕೆ ಕಾಣುವ ಕಿಟಕಿ ಪಕ್ಕದ  ಸಿಂಗಲ್ ಎರಡು  ಸೀಟಿನ ಒಂದರಲ್ಲಿ ಸ್ನಿಗ್ಧ ಸುಂದರಿಯತ್ತ ಮನ ಪಕ್ಕನೆ ಹಾರಿತ್ತು.  ಬೋಗಿಯ ಎಲ್ಲ ಸೀಟು ಭರ್ತಿಯಾಗಿದ್ದವು. ಎಲ್ಲರೂ ಕುಳಿತ ಕಾರಣ ಅವಳ ನೋಟಕ್ಕೆ ಅಡೆ ತಡೆ ಇರಲಿಲ್ಲ.

ಒಮ್ಮೆ ನೋಡಿದರು ಬಿಡದೆ ಮತ್ತೆ ಮತ್ತೆ ನೋಡುವಂತೆ ಮನ ಹಠ ಮಾಡುತ್ತಿತ್ತು. ರೈಲ್ ಚಲಿಸಿ ಆಗಲೇ ಗಂಟೆ ಕಳೆದರು ಅರವಿಂದನಿಗೆ ಇದ್ಯಾವುದರ ಪರಿವೇ ಇರಲಿಲ್ಲ ಸರಸರನೆ ಸಾಗುವ ರೈಲಿನ ಜೊತೆ ಮನವು ಅವಳ ನೋಟಕ್ಕೆ ಹಾತೊರೆಯುತ್ತಿತ್ತು. ಅವಳ ಗಂಭೀರ ವದನ, ವಿಶಾಲ ಕಂಗಳು ಚಿತ್ತ ವಿಚಲಿತವಾಗದಂತೆ ಕಿಟಕಿಯ ಹೊರನೋಟಕ್ಕೆ ಕಣ್ಣು ಹಾಕಿ ಕುಳಿತ ಅವಳ  ನಿಲುವು ಎಲ್ಲ ಮತ್ತೆ ಮತ್ತೆ ಕಾಡಿತ್ತು. ತಿದ್ದಿ ತೀಡದ ಆ ಹುಬ್ಬು, ಪಳಪಳಿಸದ ಸಾದಾ ಮೈ ಬಣ್ಣ ಸರಳ ರೂಪ ಅರವಿಂದನ ಮನದಲ್ಲಿ ಅನೂಹ್ಯ ತಲ್ಲಣವ ಸೃಷ್ಟಿಸಿತ್ತು. ಬೆಂಗಳೂರಿನ ಆಫೀಸಿನಲ್ಲಿ ಇವ “ಮೊಸ್ಟ ಬ್ಯಾಚುಲರ್ ಯಂಗ್ ಬಾಯ್ ”  ಅದರೆ ಊರಿನ ಓಣಿಯಲ್ಲಿ  ” ಹೆಣ್ಣು  ಸಿಗದ ಒಂಟಿ ಗೊಳಿ ” ಎಂಬ ಬಿರುದುಗಳು ಸರಾಗವಾಗಿ ತಲೆಗೆ ಏರಿದ್ದವು.

ಆದರೆ ಅರವಿಂದನಿಗೆ ಇದರ ಬಗ್ಗೆ ಕಿಂಚಿತ್ತು ಬೇಸರವಿರಲಿಲ್ಲ , ಹೆಣ್ಣು ನೋಡಲು ಹೋದಾಗ ಪದವಿಯ ಹಂತದ ಪುಟ್ಟ ಪುಟ್ಟ ಕಂಗಳ ಬೆಡಗಿಯರ ಕಂಡು ತಬ್ಬಿಬ್ಬಾಗಿ ತಾಯಿಗೆ ಖಡಕ್ಕಾಗಿ ಹೇಳಿದ್ದ ” ಅಮ್ಮ ಸಣ್ಣ ಸಣ್ಣ ಹುಡುಗಿಯರ ತಂದು ತೋರಿಸ ಬೇಡ .ಸ್ವಲ್ಪ ನನ್ನ ಅಲೋಚನೆಗಳಿಗೆ ಅನುಗುಣವಾಗಿ  ನೋಡಿ, ಆ ಪುಟ್ಟ  ಬಾಲೆಯರು  ನನಗೆ ಹೊಂದಿಕೆಯಲ್ಲ. ಹೀಗಾದರೆ ಹೆಣ್ಣುನೋಡುವ ಶಾಸ್ತ್ರ ಕ್ಕೆ ನಾ ಬರುವದೇ ಇಲ್ಲ’ ಎಂದು ಅಬ್ಬರಿಸಿದ. ಇದ ಕೇಳಿದ ತಾಯಿ “ಅಲ್ವೋ  ಹುಡುಗಿ ಬೇಡಾ ಅಂದರೆ ಅವಳ ಅಜ್ಜಿನ ಮದುವೆ ಆಗುತ್ತಿಯಾ ? ಎಲ್ಲರೂ ಹುಡುಗಿ , ಹುಡುಗಿ ಎಂದು ಜಪಿಸಿದರೆ ನಿನ್ನದು ಅತೀ ಆಯ್ತು ” ಎಂದಿದ್ದರು. ಇವನೂ ” ಅಲ್ಲಮ್ಮ  ನಾ ನಿನಗೆ ಚಂದನದ ಬೊಂಬೆ ತಂದು ಮದುವೆ ಮಾಡು  ಎಂದು ಹೇಳಿಲ್ಲ ,ನನ್ನ ಹವ್ಯಾಸ ಚಿಂತನೆಗಳು ಪರಸ್ಪರ  ಒಪ್ಪಿಗೆಯಾಗ ಬೇಡವೇ ? ನಾನು ಪದವಿ ಮುಗಿಸಿ ಅದೆಷ್ಟು ಹುಡುಗಿಯರಿಗೆ ಪಾಠ ಮಾಡಿರುವೆ ಇದೇ ವಯಸ್ಸಿನ ಎಷ್ಟೋ ಹೆಣ್ಣು ಮಕ್ಕಳಿ ಬಳಿ ಆಗ ಮಾತು ಅಡಿರುವೆ  ಹೀಗಿರುವಾಗ ಮತ್ತೆ ಅಂತಹ ವಯಸ್ಸಿನ  ಪುಟ್ಟ ಹೆಣ್ಣು  ಹೇಗೆ ಹೆಂಡತಿ ಎಂದು ಒಪ್ಪಿಕೊಳ್ಳಲಿ ? ಎಂದು ವಾದ ವಿವಾದ ತಾರಕ್ಕೆ ಏರಿ ಬೆಂಗಳೂರಿಗೆ ‌ಬಂದವನೆ ಊರಿಗೆ ತಲೆ ಹಾಕಿ ಮಲಗಿರಲಿಲ್ಲ.

ಈಗ ಬರೊಬ್ಬರಿ ಆರು ತಿಂಗಳ ಬಳಿಕ ಅಮ್ಮನ ಒತ್ತಾಯಕ್ಕೆ ಮಣಿದು ಊರಿಗೆ ಹೊರಟಿದ್ದ. ಅರವಿಂದ ಎಷ್ಟು ಹಿಡಿತ ಮಾಡಿದರು ಮನ ಕೇಳದೆ ಅವಳ ಬಳಿ ಹೋಗುತ್ತಿತ್ತು …ಅವಳೂ ನಿರಾಳವಾಗಿ ಬುದ್ದನಂತೆ ಧ್ಯಾನಕ್ಕೆ ಕುಳಿತವರಂತೆ ಎತ್ತಲೂ ನೋಡದೆ ಕಿಟಕಿಯ ಕಡೆ ಕಣ್ಣು ಇಟ್ಟಿದ್ದಳು.

ಯಾಕೆ  ಮನ ಇಷ್ಟು ಹಟ ಮಾಡುತ್ತಿದೆ ಎಂದು ಅರವಿಂದನಿಗೆ ತಿಳಿಯಲಿಲ್ಲ. ಆಫೀಸ್ ಅಲ್ಲಿ ನಿಕಿತಾ ಶರ್ಮಾ, ಆರೋಹಿ ಮಿಶ್ರ, ಚಂದನ ಕಾಮತ್ ಎಂಬ ಹಲವು ಯುವತಿಯರು ಇದ್ದರು.  “ಅವಿ”  ಎಂದೂ ಹೀಗೆ ಪರಿತಪಿಸಿದವನಲ್ಲ. ಗಂಟೆಗಟ್ಟಲೆ ಮೀಟಿಗ್, ಒಮ್ಮೊಮ್ಮೆ  ಅವರುಗಳಿಗೆ ಡ್ರಾಪ್ ಸಹ ನೀಡಿದ್ದ.  ಆದರೆ ಆಗೆಲ್ಲ ಅ ಹೆಣ್ಣುಗಳ ಜೊತೆ ಹಲವಾರು ಬಾರಿ ಮಾತನಾಡಿ ಅವರ  ಭಾವ ಬುದ್ದಿಯ ಬಗ್ಗೆ ತಿಳಿದು ಅಚ್ಚರಿಯಾಗುತಿತ್ತು. ವಿನಃ ತನ್ನ ಇತಿಮಿತಿ ಮೀರುತ್ತಿರಲಿಲ್ಲ.

ಯಾವುದೇ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವ ಸದಾ ಟೀಮಿನಲ್ಲಿ ಇತರರನ್ನು ಹುರಿದುಂಬಿಸುವ  ನಿಕಿತಾ ಶರ್ಮ ಎಂಬ ಸೂಜಿಗಲ್ಲಿಗೆ ಹಲವಾರು ಆಫೀಸ್ ನ ಪುರುಷ ಕುರಿಗಳು ಗಂಟು ಬಿದ್ದರು  ಆದರೆ ಅವಳು ಯಾರನ್ನು  ಪುರಸ್ಕರಿಸಿರಲಿಲ್ಲ. ಆದರೆ ನಿಕಿತಾ ಯಾವ ವಿಚಾರವನ್ನು ಮರೆಮಾಚದೆ ಆರವಿಂದನ ಬಳಿ ಹೇಳಿಕೊಂಡು ನಿರಾಳವಾಗುತ್ತಿದ್ದಳು ಅರವಿಂದ್ ತನಗೆ ತಿಳಿದಷ್ಟು ಸಮಾಧಾನ ಮಾಡುತ್ತಿದ್ದ ನೆ ಹೊರತು. ಎಂದೂ ಅವನು ತನ್ನ ಮಿತಿಯನ್ನು ಮೀರಿ ಯಾರೂಂದಿಗೂ ಮಾತು ,ಹಾವ ಭಾವ ವ್ಯಕ್ತ ಪಡಿಸಿರಲಿಲ್ಲ ಅದು ಅವನಿಗೇ ಬೇಕಾಗಿಯೂ ಇರಲಿಲ್ಲ. ಅದರೆ ಇಂದು ಈ ಜನಶತಾಬ್ದಿಯ ರೈಲಿನ ಪ್ರಯಾಣ ದಲ್ಲಿ ಮನ‌ಹಟಕ್ಕೆ ಬಿದ್ದಿತು .ಅದನ್ನು ಸಂತೈಸಲು ಬ್ಯಾಗಲ್ಲಿ ಯಾವುದಾರೂ ಕೃತಿ ಇರಬಹುದೇ ಎಂದು ತಡಕಾಡಿದನು. ಓದು ಅವನ ಮೆಚ್ಚಿನ ಹವ್ಯಾಸವಾಗಿತ್ತು. ಸಿಕ್ಕ ಸಿಕ್ಕ ಕೃತಿಗಳನ್ನು  ಕೊಂಡು ಯಾವಾಗಲೂ ಬ್ಯಾಗಿನಲ್ಲಿ ಹಾಕಿಕೊಳ್ಳುವದು ಅವನ ರೂಢಿ. ಅಂತೆಯೆ ಕೃತಿಯೂ ದೊರಕಿತು ಕೈಗೆ ಸಿಕ್ಕದ್ದನು ಯಾವುದು ಎಂದು ನೋಡದೆ ಕೈಯಲ್ಲಿ ಹಿಡಿದು ಕುಳಿತ.

ಕೃತಿಯ ಕೆಲ ಪುಟವ ಓದಿದ ಮತ್ತೆ ಮನ ಆ ವನಿತೆಯ ನೋಡಲು ಕಾತರವಾಗಿತ್ತು ಕಂಗಳು ಮತ್ತೆ ಮತ್ತೆ ದಾಳಿ ಮಾಡುತ್ತಿದ್ದವು. ತಿಂಡಿ, ಚಹಾದ ಬಗ್ಗೆ  ಗಮನ ಹೊರಡಲಿಲ್ಲ ನೋಡ ನೀಡುತ್ತಲೇ ಟ್ರೈನ್ ಹಾವೇರಿ ದಾಟಿ ಹುಬ್ಬಳ್ಳಿಯತ್ತ ಸಾಗಿರುವಂತೆ ಇವನಿಗೆ ಭಾಸವಾಯುತು. ಈ ಹಾಳಾದ ಟ್ರೈನ್ ಇಂದೇಕೆ ಶರವೇಗದಿ ಓಡುತ್ತಿದೆ ಎಲ್ಲಿಯಾದರೂ ಕೆಟ್ಟು ನಿಲ್ಲಬಾರದೆ ತಾನು ಎಷ್ಟು ಬಾರಿ ಓಡಾಡಿದಾಗಲೂ ಏನಾದರೂ ತಡೆ ಉಂಟಾಗಿ ಹೆಣದಂತೆ ಕಾಯಬೇಕಿತ್ತು ಟ್ರೈನ್ ಒಳಗೆ. ಅದರೆ ಇಂದು ಏನಿದು ಶರವೇಗ ಎನಿಸಿತು ಅವನಿಗೆ ಆ ಸುಂದರಿ ಯಾವ ನಿಲ್ದಾಣ ದಲ್ಲಿ ಯೂ ಇಳಿಯದೆ ಇದ್ದದ್ದು ಇವನಿಗೆ ಮತ್ತಷ್ಟು ಖುಷಿಯಾಗಿತ್ತು. ಹುಬ್ಬಳ್ಳಿ ನಿಲ್ದಾಣ ತಲುಪಿತು ಟ್ರೈನ್ ಜನರು ಮೊದಲೇ ಎದ್ದು ಇಳಿಯುವವರು ಸಿದ್ದರಾದರೂ  ಈ ಸುಂದರಿ ಇಳಿಯುವದನ್ನು ನೋಡಿ ಅರವಿಂದನಿಗೆ ಒಮ್ಮೆಲೇ  ಎದೆಯ ಸಮುದ್ರ ಉಕ್ಕಿದಂತೆ ಮನವು ಹಾಲ್ಗಡಲಲ್ಲಿ ತೇಲುದಂತೆ ಭಾಸವಾಯುತು. ಅವಳು ನಿಧಾನವಾಗಿ ಒಬ್ಬ ಹಿರಿಯ ಮಹಿಳೆಯೊಂದಿಗೆ ಇಳಿಯುವ ಪ್ರಯತ್ನ ಮಾಡಿದಳು ತಾನೊ ಮೊದಲು ಇಳಿದು ಆ ಹಿರಿಯ ಮಹಿಳೆಯನ್ನು ಇಳಿಸಿಕೊಂಡು ಫ್ಲಾಟ್ ಫಾರಂ ಇಂದ ಹೊರಗೆ ಬಂದು ಕಾಯಿತೊಡಗಿದಳು. ,ಅರವಿಂದ ಜನರಿಂದ ತೊರಿಕೊಂಡು ಕಿಟಕಿಯಲ್ಲಿ ಅವಳನ್ನು ನೋಡೂತ್ತಾ ಅವಸರಾವಸರವಾಗಿ ಇಳಿದು ಹೊರ‌ಬಂದ . ಆ ಯುವತಿ ಮೊಬೈಲ್ ಹಿಡಿದು ನೋಡುತ್ತಾ ನಿಂತಿದ್ದಳು .ಅರವಿಂದ ಅವಳನ್ನು ಮಾತನಾಡಿಸುವ ಪ್ರಯತ್ನ ಮಾಡಲು ಮನ ಕೂಗುತ್ತಿತ್ತು. ತಡ ಮಾಡದೆ ತನ್ನ ಬ್ಯಾಗ್ ತೆಗೆದುಕೊಂಡುಅವಳ ಬಳಿ ಸಾಗಿದ  ” ಹಲೋ  ಮೇಡಂ ಎನಾದರೂ ಸಹಾಯ ಬೇಕಿತ್ತೆ ” ನಾನು ಅರವಿಂದ ಇದೇ ಊರಿನವ “ಎಂದ . ಹುಡುಗಿ ತಲೆಯೆತ್ತಿ ನೋಡಿ ಮುಗುಳು ನಕ್ಕು”  ಹೂ….  ಹೌದಾ …. ಸರಿ ಆದ್ರೆ, ನಮ್ಮದೂ ಇದೆ ಊರು ಸದ್ಯ ಯಾವ ಸಹಾಯವು ಬೇಡ. ಧನ್ಯವಾದಗಳು” ಎಂದಳು‌. ಅರವಿಂದನಿಗೆ ಅಚ್ಚರಿಯಾಯಿತು. ‘ಓಕೆ ನಿಮ್ಮ ಹೆಸರು ಹೇಳಲಿಲ್ಲ’ ಎಂದು ತನ್ನ ಪೂರ್ತಿ ಪರಿಚಯವ ಹೇಳಿದ ಅವಳಿಗೆ, ಯುವತಿ ನಗುತ್ತಾ . “ನನ್ನ ಹೆಸರು ತಬ್ಸುಮ್ ಮೈಸೂರಿನ ಕಾಲೇಜು ಒಂದರಲ್ಲಿ ವಿಜ್ಞಾನ ವಿಭಾಗದಲ್ಲಿ ಉಪನ್ಯಾಸಕಿಯಾಗರುವೆ” ಎಂದಳು ಅರವಿಂದ ” ನೀವು ಇಷ್ಟು ಚನ್ನಾಗಿ ಕನ್ನಡ ಮಾತಾಡುತ್ತಿರುವಿರಿ “ಎಂದನು ಖುಷಿಯಿಂದ. ಯುವತಿ ” ನಾ ಓದಿದ್ದು ಕನ್ನಡ ಮಾಧ್ಯಮದಲ್ಲಿ ಇರುವುದು ಕರ್ನಾಟಕದಲ್ಲಿ ಅಲ್ಲವೇ? ಎಂದಳು. ನಿಮ್ಮ ಪರಿಚಯವಾಗಿ ತುಂಬಾ ಖುಷಿಯಾಯಿತು “ಎಂದು ಹೇಳಿ ತಾಯಿಯನ್ನು ಕರೆದುಕೊಂಡು  ಬುಕ್ಮಾಡಿದ ಟ್ಯಾಕ್ಸಿ ಬಳಿ ತೆರಳಿದಳು.

ಟ್ಯಾಕ್ಸಿ ಒಳಗಿಂದ ಮತ್ತೆ ಅರವಿಂದನ ಕಡೆ ನೋಡಿ ನಗುತ್ತ ಕೈ ಬೀಸಿದಳು. ಅರವಿಂದ ಮನದಲ್ಲಿ ಬೆಳಕೊಂದು ಮಿಂಚಿ ಮರೆಯಾಗದೆ ಉಳಿದುಕೊಂಡಿತ್ತು. ಟ್ಯಾಕ್ಸಿ ತೆರಳಿದರು ಅರವಿಂದನ ಮನದಲ್ಲಿ ತಬ್ಬಸುಮ್ ಭದ್ರವಾಗಿದ್ದಳು. ಹೃದಯ ಅವಳು ನಾನೇ. ನೀನೇ ಅವಳು ಎಂದು ಎಡಬಿಡದೆ ಕೂಗುತಿತ್ತು. ಯಾವುದೋ ಒಂದು ಭಾವ ಸೆಳೆಯುತ್ತಿತ್ತು. ಮನೆಗೆ ನಗುಮುಖದಿಂದಲೇ ಆಗಮಿಸಿದ ಮಗನ ಕಂಡು ತಾಯಿ ಸಂಭ್ರಮಿಸಿದರು, ಬಂದವನೆ ತಾಯಿಯ ಅಪ್ಪಿ ಕಾಲುಗಳಿಗೆ  ನಮಸ್ಕಾರ ಮಾಡಿದ.

ಅಮ್ಮನ ಮುದ್ದಿನ‌ ಮಗ. ಒಂಟಿ ಬದುಕಿನ ತಾಯಿಯ ಬಾಳಿನ ಎಲ್ಲಾ ಏಳು-ಬೀಳುಗಳಿಗೆ  ಅಮ್ಮನ  ಈ ಪುಟ್ಟ ಕಂದ ಜೀವಂತ ಸಾಕ್ಷಿಯಾಗಿದ್ದ ಅಂದು, ಇಂದು! “ಯಪ್ಪಾ… ಊಟಕ್ಕ ಬಾ… ಅಣಿಮಾಡಿನಿ, ಎಂದು ತಾಯಿ  ಮಗನನ್ನು ಕರೆದರು. ಅಮ್ಮಾ ದಾದಾಗೂ‌ (ಅಣ್ಣ) ಹೇಳಿಯಾ ಬಾ ಅಂತ’… ಬಹಳ ದಿನ ಆತು ಅವನ ಜೊತೆ ಊಟ ಮಾಡಿ ಎಂದ. “ಫೊನ್ ಹಚ್ಚಿದ್ದೆ ಅವನೂ ಬರ್ತಾನ ಬಾ ತಮ್ಮಾ ನೀ… ಅವನದು  ಹೊಸ  ವಿಚಾರ  ಇಲ್ಲ ಎಲ್ಲಾ ಗೊತ್ತಲ್ಲ ನಿನಗ….ನೀ… ಬಾ… ಯಪಾsss… ದಣಿದು  ಬಂದಿ.ಲಗು ಊಟಮಾಡು. ಎಂದು ತಾಯಿ ಒತ್ತಾಯಮಾಡಿ ಊಟಕ್ಕೆ ಸಿದ್ಧ ಮಾಡಿದಳು. ಅರವಿಂದನಿಗೆ ಇದು ತಿಳಿಯದ ವಿಷಯ ಅಲ್ಲ.ಮದುವೆ  ಮಾಡಿಕೊಂಡು ಮನೆ  ಇಂದ ದೂರವಾದ ಅಣ್ಣ ಒಂಟಿ  ತಾಯಿಗೆ ಅತಿಥಿಯಾಗಿ ಮನಗೆ ಬರುತ್ತಿದ್ದ.

ಅತ್ತಿಗೆ ಬಂದರೂ ಮಾತು ಕತೆ ಇಲ್ಲ ಮನೆಯ ಸದಸ್ಯರೊಂದಿಗೆ ಎಲ್ಲಾ ಕೆಲಸ ಅರವಿಂದ್ ನ ತಾಯಿಯೇ ಮಾಡಿ ಮುಂದಕ್ಕೆ ಇಡಬೇಕಿತ್ತು. ಅಣ್ಣನ ಮಾತು, ಗತ್ತು, ಎಲ್ಲಾ ತಾಯಿಯ ಬಳಿ  ಮಾತ್ರ ಹೆಂಡತಿ ಮುಂದೆ ಅವನು ವಿಧೇಯ.

ಸಂಸಾರದ ಏರಿಳಿತಗಳನ್ನು ತಾಯಿಯ ಮುಂದೆ ಹೇಳಿ ಆಗಾಗ  ಬಂದು ತಾಯಿಯ ಬಳಿ ಅತ್ತು ಕರೆದು ಹೋಗುತ್ತಿದ್ದ ದೂಡ್ಡ  ಮಗ. ತನ್ನ ದುರಿತ  ಕಾಲದಲ್ಲಿಯು  ಗಂಡನಿಲ್ಲದೆ  ಇಬ್ಬರು ಮಕ್ಕಳ ಜವಾಬ್ದಾರಿ ಹೊತ್ತಾಗಲು ತಾನು ಯಾವುದಕ್ಕೂ ಜಗ್ಗಿಲ್ಲ ಎಂಬುದು ತಾಯಿಗೆ ನೆನಪಾಗುವಂತೆ  ಮಾಡುತ್ತಿದ್ದ.

***

ಬಿಸಿ ಬಿಸಿ ಜೋಳದ  ರೊಟ್ಟಿ, ಪುಂಡಿ ಪಲ್ಯ,ಮುಳ್ಳಗಾಯಿ ಪಲ್ಯ,ಶೇಂಗಾ ಸಾರು, ಕರದಂಟು. ಎಲ್ಲವನ್ನು ಸವಿದು  ಗಟ್ಟಿ ಮಜ್ಜಿಗೆ ಕುಡಿದು ಕೋಣೆಗೆ ಹೊರಟ ಅರವಿಂದನ ಹೃದಯ ರೈಲಿನ ತಾಜಾ  ಸಮಾಚಾರವನ್ನು  ಪದೇ ಪದೇ  ಬಿತ್ತರಿಸುತಿತ್ತು. ಕಿಟಕಿ  ಇಂದ ಬಂದ  ತಣ್ಣನೆಯ  ಗಾಳಿ ಅವಳ ನೆನಪುಗಳ ತಂದು ದೇಹವನ್ನು  ತಂಪಾಗಿಸಿತ್ತು. ಯಾವುದೂ ಒಂದು ಅವ್ಯಕ್ತ ಭಾವ  ಸುಮಧುರವಾಗಿ ಅವನಲ್ಲಿ ತುಂಬಿ ನಿದ್ದೆ ಬಂದರೂ  ಕಂಗಳು ಹಠಮಾಡಿ, ಹಾಸಿಗೆ ಮೇಲೆ ಹೊರಳಾಡುವಂತೆ ಮಾಡಿತು.

ಕೊಠಡಿ  ಇಂದ ಎದ್ದೇಳಲು ಸಹಾಯ ಮಾಡಿದ್ದು ಗೆಳೆಯನ ಫೋನ್. ಡೈನಿಂಗ್ ಟೇಬಲ್ ಮೇಲೆ ಫೋನ್ ರಿಂಗಣಿಸಿದಾಗಲೇ  ಅರವಿಂದ  ತನ್ನ ಕನಸಿನ  ಲೋಕದಿಂದ  ಎಚ್ಚೆತ್ತ , ಸುತ್ತಲೂ ನೋಡಿ, ಓಡಿ ಬಂದು ಫೋನ್ ನೋಡುತ್ತಾನೆ. ಗೆಳೆಯ ನವೀನ್ ನ ಸುಮಾರು ಮಿಸ್ ಕಾಲ್ ಗಳು. ಸಮಯ  ನೋಡಿದ  ಸಂಜೆ ನಾಲ್ಕು ಆಗುತ್ತಾ ಬಂದಿತ್ತು, ಗಡಿಬಿಡಿ ಇಂದ ಬಟ್ಟೆ ಬದಲಿಸಿ  ತಾಯಿಗೆ ಬಾಯ್ ಹೇಳಿ ತನ್ನ ಬೈಕ್ ತೆಗೆದುಕೊಂಡು ಹೊರಬಿದ್ದ. ಅವಿ ತೇಜಸ್ವಿ ನಗರದಿಂದ  ಸಂಗೊಳ್ಳಿ ರಾಯಣ್ಣ ನಗರ   ಬಸ್ ಸ್ಟಾಪ್ ಬಳಿ ಬರುತಿರುವಾಗ ಮತ್ತೆ  ಫೋನ್  ರಿಂಗಣಿಸಿತು ಬೈಕ್ ನಿಲ್ಲಿಸಿ ಫೋನ್ ತೆಗೆಯಲು ಮುಂದಾದ  ಆಗ ಅವನ ಬೈಕ್ ಗೆ ಮುಂದೆ  ಒಂದು ಸ್ಕೋಟಿ  ಬಂದು ಡಿಕ್ಕಿ ಹೊಡೆಯಿತು.

ಅವಿ ಯಾರು ಎಂದು ನೋಡಿದಾಗ ಲಡ್ಡು ಬಂದು ಬಾಯಿಗೆ ಬಿದ್ದಿತ್ತು. ಎದುರುಗಡೆ ತಬಸುಮ್ ಇದ್ದಳು ಅವಳು ಬಂದು ಡಿಕ್ಕಿ ಹೊಡೆದು ಗಾಡಿ ನಿಲ್ಲಿಸಿದಳು ಗಲಿಬಿಲಿಯಾಗಿದ್ದಳು. ಅವಳು ಬಂದ ದಾರಿ ಸರಿ ಇತ್ತು. ಅರವಿಂದ ಫೋನ್  ತೆಗೆಯುವ  ಅವಸರದಲ್ಲಿ ದಾರಿ ಮಧ್ಯ  ಬೈಕ್ ನಿಲ್ಲಿಸಿದ್ದ.

ಆದರೆ  ಇದು ಯಾವದು ಪರಿಯಿಲ್ಲದೆ, ಹೆಲ್ಮೆಟ್ ತೆಗೆ ದು “ಹೊ…. ಫೋನ್  ನಂಬರ್  ಕೊಡಲು ಬಂದ್ರ ? ನಾನು ಅದೇ ಯೋಚನೆ ಮಾಡ್ತಿದ್ದೆ ಹೇಗೆ ನಿಮ್ಮನ್ನು  ಸಂಪರ್ಕ ಮಾಡಲಿ ಎಂದು? “ಎಂದ.” ತಬಸುಮ್ ಗೆ ಮೊದಲೇ ಗಲಿಬಿಲಿ ಆಗಿತ್ತು,ಜೊತೆ  ಅರವಿಂದನ ನೋಡಿ ಅಚ್ಚರಿಯು ಆಗಿ ಅವಳ ಕದಪುಗಳು ಕೆಂಪೇರಿದ್ದವು.

ತಬಸುಮ್ ” ರೀ ಸರ  ನೀವು ಎಲ್ಲಿ ಗಾಡಿ ನಿಲ್ಲಿಸಿರಿ ಅಂತ  ಗೊತ್ತದ  ಏನು?  ಹೊಳ್ಳಿ ನನಗ ಪ್ರಶ್ನೆ ಮಾಡ್ತಿರಲ್ಲ ಎಂದು ತರಾಟೆಗೆ ತೆಗೆದುಕೊಂಡಳು. ಅಷ್ಟರಲ್ಲಿ  ಇವನು ಫೋನ್ ತೆಗೆಯದ  ಕಾರಣ ಗೆಳಯ  ನವೀನ್ ಬಂದ ಆದ್ರೆ ಅಲ್ಲಿ ಒಬ್ಬ ಬದಲಾಗಿ  ಇಬ್ಬರು ಮಾತಾಡುತ್ತಿರುವುದು, ಸಾಲದೇ  ಅರವಿಂದ್ ನ ಸಂತೂಷ್ಟ  ಮುಖಭಾವ ಯುವತಿ ಕಾತುರ  ಕಂಗಳು ನೋಡಿ ಬಂದವನೇ “ದೋಸ್ತ sorry ಭಾರಿ  ಬಿಜಿ ಅದಿ ನಡೆಸು  ದೋಸ್ತ ನಡ್ಸು ” ಎಂದು ಇವನ  ಉತ್ತರಕ್ಕೂ ಕಾಯದೆ ಬಂದವ ಯು ಟರ್ನ್ ಮಾಡಿ ರೊಯ್ ಎಂದು ಹೋದ.

ತಬಸುಮ್ ಗೆ ಮತ್ತೂ ಸಿಟ್ಟು ಏರಿತ್ತು, ರಾಯಣ್ಣ ಬಸ್ಟ್ಯಾಂಡ್ ಬಳಿ ಇವರ  ಚಕಮಕಿ  ನಡೆದಿತ್ತು. ಕೊನೆಗೆ ಅರವಿಂದ್ “ಬನ್ನಿ ಮುಂದೆ ಹೋಗೋಣ  ನಿಮ್ಮ ಎಲ್ಲಾ ಪ್ರಶ್ನೆಗಳಿಗೂ  ಉತ್ತರಿಸುವೆ ಪ್ಲೀಸ್ ಬನ್ನಿ ಎಂದ. ಸಂಜೆ ಸೂರ್ಯ ನೂ ತಂಪಾಗುತ್ತಿದ್ದ. ತಬ್ಬಸುಮ್  ಇನ್ನು ಇವನು ಬಿಡಲಾರ  ಸರಿ ನೋಡಿಯೇ ಬಿಡುವ  ಎಂದು ಗಾಡಿ ರಿವೆರ್ಸ್ ತೆಗೆದು ಕೊಂಡಳು ಇಬ್ಬರು ಅಲ್ಲಿಂದ ಜಾಗ ಖಾಲಿ ಮಾಡಿದರು.ತುಸು ದೂರ ಸಾಗಿ ಅರವಿಂದ್ “ ಖಡಕ್ ಚಹಾ “ ಶಾಪ್ ಬಳಿ ಬೈಕ್ ನಿಲ್ಲಿಸಿದ. ತಬಸುಮ್ ಹಿಂದೆಯೇ ಬಂದು ಸ್ಕೋಟಿ ನಿಲ್ಲಿಸಿದಳು.

ಒಳಗೆ ಹೋಗಿ ಚಹಾ ಸವಿಯುತ್ತಾ ಪರಸ್ಪರ ಪರಿಚಯವನ್ನು ಮಾಡಿಕೊಂಡರು. ತಬಸುಮ್ ಸಮಾಧಾನವಾಗಿ ಅರವಿಂದನ ಮಾತನ್ನು ಕೇಳಿಸಿಕೊಳ್ಳುತ್ತಿದ್ದಳು. ಅವಳ ಶಾಂತತೆಯನ್ನು ಕಂಡು ಅರವಿಂದನಿಗೆ ಮತ್ತಷ್ಟು ತನ್ನ ವಿಚಾರವನ್ನು ತಿಳಿಸಲು ತನ್ನ ಪ್ರೀತಿಯ ಬಗ್ಗೆ ಹೇಳಲು ಕಾತುರ ಹೆಚ್ಚಾಯಿತು.

ಅರವಿಂದ ನೇರವಾಗಿ ಅವಳಿಗೆ ತನ್ನ ಮನದ ಮಾತು ಹೇಳಿದ. ಇದನ್ನು ಕೇಳಿ ತಬ್ಸಮ್ ಕೆರಳಲಿಲ್ಲ ಅರಳಲು ಇಲ್ಲ. ನಿಧಾನವಾಗಿ ಹೇಳಿದಳು “ನಿಮಗೆ ನಾನು ಯಾರು ಎಂದು ಸಂಪೂರ್ಣ ತಿಳಿದಿಲ್ಲ ಆದರೂ ನೀವು ಪ್ರಪೋಸ್ ಮಾಡಿದರೆ ನಾನು ಏನು ಮಾಡಲು ಸಾಧ್ಯವಿಲ್ಲ”. ನನಗೆ ಈ ಪ್ರೀತಿ ಪ್ರೇಮದ ಬಗ್ಗೆ ಯಾವ ನಂಬಿಕೆ ಉಳಿದಿಲ್ಲ ನಾನು ಕೆಲವು ದಿನಗಳವರೆಗೆ ಇರಲು ಬಂದಿದ್ದೇನೆ. ಆದರೆ ನಿಮಗೆ ಶುಭ ಹಾರೈಸುವೆ ಮುಂದೇ ಒಳಿತಾಗಲಿ” ಎಂದಳು.

ಅರವಿಂದ್ ನೀವು ಹೇಳಿದ್ದು ಖಂಡಿತ ಸತ್ಯ ಕ್ಷಣ ಮಾತ್ರದಲ್ಲಿ ಪ್ರೇಮ ನಿವೇದನೆ ಆಗಲು ಸಾಧ್ಯವಿಲ್ಲ ಆದರೆ ನನಗೆ ಹಾಗೆ ಅನಿಸುತ್ತಿಲ್ಲ ದಯವಿಟ್ಟು ತಪ್ಪು ತಿಳಿಯಬೇಡಿ ಎಂದ”.

ತಬ್ಬು “ಇರಬಹುದು ಆದರೆ ನಾನು ಈ ಪ್ರೀತಿ ಪ್ರೇಮ ಯಾರಿಗೆ ಹೇಗೆ ಆಗುತ್ತದೆ ಎಂಬುದನ್ನು ಸ್ಟಡಿ ಮಾಡಿಲ್ಲ ಈ ಬಗ್ಗೆ ನನಗೆ ಆಸಕ್ತಿಯೂ ಇಲ್ಲ”. ಎಂದು ಹೊರಡಲು ಅನುವಾದಳು . ಅಷ್ಟರಲ್ಲಿ ಅವಳ ಮೊಬೈಲ್ ಗೆ ಒಂದು ಕರೆ ಬಂದಿತ್ತು ಕಾರಣ ಅಲ್ಲಿ ಸ್ವಲ್ಪ ಕುಳಿತಳು.

“ಸರಿ ನಾನೇ ಹೋಗಿ ಬರುತ್ತೇನೆ. ನೀನು ಆರೋಗ್ಯವನ್ನು ನೋಡಿಕೊ” ಎಂದು ಹೇಳಿ ಹೊರಡಲು ತಯಾರಾದಳು. ಅರವಿಂದ “ ನೀವು ಎಲ್ಲಿಯಾದರೂ ಪ್ರಯಾಣ ಹೊರಡುವುದಾದರೆ ನಾನು ಬರಬಹುದೆ? “ ಎಂದು ತುಸು ಅನುಮಾನದಿಂದ ಕೇಳಿದನು. ತಬ್ಸುಮ್ ಸ್ವಲ್ಪ ಯೋಚಿಸಿ “ ಸರಿ , ಬನ್ನಿ ಆದರೆ ಮತ್ತೆ ನೀವು ನನಗೆ ಪ್ರೀತಿ ಪ್ರೇಮ ಎಂದು ಹೇಳುವ ಹಾಗಿಲ್ಲ.  ಆದರೆ ನೀವು ಆದರೆ ನೀವು ಇಂಟರ್ವ್ಯೂ ಗೆ ಹೋಗ್ಬೇಕು ಎಂದು ಹೇಳಿದ್ದೀರಲ್ಲ.

ಅರವಿಂದ್ ‘ಅಡ್ಡಿ ಇಲ್ಲ, ರೆಸುಮ್ ಹಾಕಿದ್ದೇನೆ ಅವರಿಂದ ಇನ್ನು ಯಾವುದೇ ರಿಪ್ಲೇ ಬಂದಿಲ್ಲ , ಅಲ್ಲದೆ ನಾನು ಇನ್ನು ಬೆಂಗಳೂರಿನ ಆಫೀಸ್ ಬಿಟ್ಟಿಲ್ಲ. ರಜೆ ತೆಗೆದುಕೊಂಡಿರುವೆ. ತಬ್ಬು “ಸರಿ ಹಾಗಾದ್ರೆ ನನ್ನ ಸ್ಕೂಟಿಯಲ್ಲಿ ನಾನು ಬರುವೆ ನಿಮ್ಮ ಬೈಕ್ ಅಲ್ಲಿ ನೀವು ಬನ್ನಿ ಸಿಬಿಟಿ ಬಸ್ ಸ್ಟಾಂಡ್ ಬಳಿ ಬನ್ನಿ ಬೆಳಗ್ಗೆ 10 ಗಂಟೆಗೆ ನಾನು ಅಲ್ಲಿ ಬಂದು ಕಾಯುತ್ತಿರುತ್ತೇನೆ” ಎಂದು ಹೇಳಿ ತೆರಳಿದಳು. ಅರವಿಂದ ನಸುನಗುತ್ತಾ ಅವಳು ಹೋದ ದಾರಿ ನೋಡುತಾ ನಿಂತ. ಮಧ್ಯಾಹ್ನ 12ರ ಸಮಯಕ್ಕೆ  ಸರಿಯಾಗಿ ಇಬ್ಬರು ದೇಗಾವ್ ಬಳಿ ಇರುವ ಕಲ್ಲಿನ  ಮಂಟಪದ ಬಳಿ ತಲುಪಿದರು. ಮೋಡ ಮುಸುಕಿದ ತಿಳಿ ಬಿಸಿಲಿನ ಹವಾಮಾನ ಹಚ್ಚಹಸುರಿನ ಸಿರಿಯಲ್ಲಿ ಕಂಗಳಿಸುತ್ತಿದ್ದ ಕಮಲ ನಾರಾಯಣ ದೇವಸ್ಥಾನ ಅಹ್ಲಾದಕರ. ವಾತಾವರಣವನ್ನು ಸೃಷ್ಟಿಸಿತ್ತು.

ಅರವಿಂದ ‘ಮೇಡಂ, ಇದನ್ನು ಕಮಲ ನಾರಾಯಣ ದೇವಸ್ಥಾನ ಎಂದು ಕರೆಯುತ್ತಾರೆ ‘ ಎಂದು ಹೇಳಿದನು. ತಬ್ಸಮ್ ‘ಹೌದೆ, ನೀವು ಇಲ್ಲಿಗೆ. ಮೊದಲೇ ಬಂದಿರಬಹುದು  ಅಲ್ಲವೇ’ ಎಂದಳು.

ಅರವಿಂದ ‘ಬಹಳ ಕೇಳಿದ್ದೆ  ಮೇಡಂ, ಆದರೆ ನಾನು ಬರಲು ಆಗಿರಲಿಲ್ಲ. ಇದು ಕದಂಬರ ಕಾಲದ ನಿರ್ಮಾಣ’ ಎಂದನು. ಇಬ್ಬರು ತಮ್ಮ ವಸ್ತುಗಳನ್ನು ತೆಗೆದುಕೊಂಡು  ಸುಂದರವಾದ ಕಲ್ಲಿನಿಂದ ರಚಿತವಾದ ಮನಮೋಹಕ ಮಂಟಪವನ್ನು ನೋಡಿದರು. ಮಂಟಪದ ಪ್ರಾಂಗಣವನ್ನು ಸುತ್ತಾಡಿದರು.

ತಬ್ಬು ‘ತೊಡೆಯ ಮೇಲೆ ಲಕ್ಷ್ಮಿಯನ್ನು ಕೂಡಿಸಿಕೊಂಡಿರುವ ನಾರಾಯಣನ ಮೂರ್ತಿ ಅದರ ಕೆತ್ತನೆಯನ್ನು ನೋಡಿ’ ಅಚ್ಚರಿಯಾದಳು. ಅರವಿಂದ ಅವಳಿಗೆ ಬೇಕಾದಂತೆ ತನ್ನ ಕ್ಯಾಮರದಲ್ಲಿ ಫೋಟೋವನ್ನು ಸೆರೆ ಹಿಡಿದು ಕೊಟ್ಟನು. ತಬ್ಬುಸುಮ್ ಸುತ್ತಲಿನ ಪ್ರದೇಶಗಳನ್ನು ನೋಡಿ ನೋಟ್ ಮಾಡಿಕೊಳ್ಳುತ್ತಾ ಹೋದಳು. ಮಧ್ಯಾಹ್ನ ಸಮೀಪಿಸಿದ ನಂತರ ತಬ್ಬುಸುಮ್  ತನ್ನ ಊಟದ ಡಬ್ಬಿಯನ್ನು ತೆಗೆಯುತ್ತಾ ಊಟ ಮಾಡಲು ಕರೆದಳು.

ಇಬ್ಬರು ಊಟ ಮಾಡುತ್ತಾ ಕುಳಿತಾಗ. ಇದು ನಿಮ್ಮ ಹವ್ಯಾಸವೆ ಎಂದು ಅರವಿಂದ ಅವರನ್ನು ಪ್ರಶ್ನಿಸಿದ. ತಬುಸುಮ್” ಊಟ ಮಾಡುವುದನ್ನು ತಡೆದು ಭಾರವಾದ ದನಿಯಲ್ಲಿ. ಗಂಡನಿಂದ ದೂರವಾಗಿ ಮಗುವನ್ನು ಕಳೆದುಕೊಂಡ ನಂತರ ಇದು ನನ್ನ ಹವ್ಯಾಸವಾಯಿತು’.

ಅರವಿಂದ  ‘ಸಾರಿ ನಿಮಗೆ ನೋವಾಗಲಿ ಎಂದು ನಾನು ಕೇಳಲಿಲ್ಲ. ನೋವಿನ ವಿಚಾರಗಳನ್ನು ಬದುಕಿನಲ್ಲಿ ಮರೆಯುವುದೇ ಒಳಿತು. ನಿಮ್ಮ ಖಾಸಗಿ ಬದುಕಿನ ವಿಚಾರಗಳನ್ನು ನಾನು ಎಂದು ಕೇಳುವುದಿಲ್ಲ’

‘ನೀವು ಇಲ್ಲಿ ಓದಿರುವಿರಾ’ ಎಂದು ಕೇಳಿದನು.

ತಬುಸುಮ್ ‘ಹೌದು, ನಾನು ಪದವಿಯನ್ನು ಇಲ್ಲಿಗೆ ಮುಗಿಸಿದ್ದು. ಗೆಳತಿಯ ಒತ್ತಾಯದ ನಂತರ ಕೋವಿಡ್ ಸಮಯದಲ್ಲಿ ನಾನು ಇಲ್ಲಿಗೆ ಆಗಮಿಸಿದೆ’. ಈಗ ಗೆಳತಿಯ ಮನೆಯಲ್ಲಿ ಇಲ್ಲೇ ಇರುವೆನು. ನೀವು ಕೆಲಸವನ್ನು ಮಾಡಲು ಪ್ರಯತ್ನಿಸಲಿಲ್ಲವೇ ಎಂದು ಅರವಿಂದ ಮರು ಪ್ರಶ್ನೆಸಿದ.

“ಹೋಗಿದ್ದೆ ಸರ್, ಆದರೆ ನೀನು ಸಿಂಗಲ್ಲ? ಡಬ್ಬಲ್ಲ ?ಯಾಕೆ ಕಪ್ಪು? ಹೇಗೆ ಕನ್ನಡ ಮಾತನಾಡುತ್ತಿ?’… ಎಂಬ ಈ ಎಲ್ಲಾ ಪ್ರಶ್ನೆಗಳು ಕೆಲಸ ಮಾಡುವ ಕಡೆಯಲ್ಲಿ ನನ್ನನ್ನು ನೋಡುವ ರೀತಿಯಲ್ಲಿ ಬೇರೆಯಾದಾಗ ಈಗ ಮನೆಯಲ್ಲಿ ನಾನು ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದೇನೆ. ಎಂದಳು ಭಾರವಾದ ದನಿಯಲ್ಲಿ ತಬುಸುಮ್.

“ಇದು ಸರ್ವೇಸಾಮಾನ್ಯವಾಗಿದೆ, ಹೆಣ್ಣಿಗೆ ಮಾತ್ರವಲ್ಲ ಗಂಡಿಗೂ ಇದರಿಂದ ಬಹಳಷ್ಟು ಒದ್ದಾಟವಿದೆ’ ಮೀಸೆ ಇಲ್ಲಾ, ದ್ವನಿ ಗಡಸು ಇಲ್ಲ , ಕಣ್ಣಿನಲ್ಲಿ ಗಂಡಿನ ಖದರೂ ಇಲ್ಲ ಎಂದು ಹಲವಾರು ವಿಚಾರಗಳಿಂದ ಟೀಕೆ ಮಾಡುವವರಿಗೆ ಏನು ಕಡಿಮೆ ಇಲ್ಲ. ಸಹಜತೆಯನ್ನು ಮರೆಮಾಚಿಕೊಂಡು ಬದುಕುವ ಜನರ ನಡುವೆ ಇವೆಲ್ಲಾ ಸಹಜ.

‘ಸಿಂಗಲ್ ಬಾಳು ಅದರ  ಗೋಳು ಹೇಳಲು  ಸಾಧ್ಯವೇ ಇಲ್ಲ” ಎಂದ ಅರವಿಂದ. ತಬ್ಬುಸುಮ್ ‘ನಿಜ ನಮ್ಮನ್ನು ಮನುಷ್ಯರೆಂದು ಅವರು ನೋಡುವುದಿಲ್ಲ ಗಂಡು ಹೆಣ್ಣು ಎಂಬ ಭೇದ-ಭಾವಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಅಸಹ್ಯಕ್ಕೆ ತಿಳಿಸುವಂತೆ ಆಗಿವೆ. ನಮಗೆ ನಮ್ಮ ಯೋಚನೆಗೆ ತಕ್ಕ ಗೆಳತನ, ಸಂಬಂಧಗಳು, ಪಡೆಯುವುದೇ  ದೊಡ್ಡ ತಪಸ್ಸು ಈ ದಿನಗಳಲ್ಲಿ ಅರವಿಂದ್  “ಹೌದಲ್ಲ, ನಿಮ್ಮ ಗೆಳತಿಯ ಏನು ಮಾಡುತ್ತಿದ್ದಾರೆ’ ಎಂದು ಕೇಳಿದ.

“ಕರೋನಾದ ಎರಡನೇ ಅಲೆಯಲ್ಲಿ ಗಂಡ – ಹೆಂಡತಿ, ಇಬ್ಬರೂ ಮಗುವನ್ನು ಬಿಟ್ಟು ಈ ಲೋಕವನ್ನು ತ್ಯಜಿಸಿದರು. ಅವಳ ಪತಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅಲ್ಲಿಯ ಮರಣವನ್ನು ಅಪ್ಪಿದರು. ಈಗ ಅವರ ವೃದ್ಧ ತಾಯಿಯೊಂದಿಗೆ ಅವಳ ಮೂರು ವರ್ಷದ ಪುಟ್ಟ ಶ್ರೀ ನಿಧಿ ಜೊತೆ ನನ್ನ ಬದುಕು ಸಾಗುತ್ತಿದೆ” ಎಂದು ಹೇಳಿದ.

ತಬುಸುಮ್ ಕಣ್ಣೀರನ್ನು ಒರಿಸಿಕೊಳ್ಳುತ್ತಾ ಈ ಬದುಕಿನಲ್ಲಿ ಸಿಕ್ಕ ಒಂದು ಸುಂದರ ಗೆಳೆತನ ಕರೋನದಿಂದ ಸರ್ವನಾಶವಾಯಿತು ಎಂದಳು. ಅರವಿಂದ ‘ನೋವಿನ ಕ್ಷಣಗಳನ್ನು ಮರೆಯಿರಿ. ಮೇಡಂ, ಆಗುವುದಿಲ್ಲ ಒಳ್ಳೆಯದೆಂದು ನಾನು ಹೇಳುವುದಿಲ್ಲ. ಆದರೆ ನಿಮ್ಮ ಒಂಟಿ ಬದುಕಿನ ಬಿಡುಗಡೆ ಆ ಮಗುವಿನಿಂದ ನೀವು ಪಡೆದಿದ್ದೀರಿ, ಮುಂದೆ ಒಳಿತಾಗುತ್ತದೆ’ ಎಂದು ಅವಳನ್ನು ಸಂತೈಸಿದ. ಮಾತಿನ ಮಧ್ಯೆ ಊಟ ಸಾಗಿದ್ದೆ ಗೊತ್ತಾಗಲಿಲ್ಲ.

ಪರಸ್ಪರ ಇಬ್ಬರು ತಮ್ಮ ನೋವು – ನಲಿವುಗಳನ್ನು ವಿನಿಮಯ ಮಾಡಿಕೊಂಡರು.ಸಂಜೆಯಾಗುತ್ತಾ ಬಂದಾಗ ಕಲ್ಲಿನ ಮಂಟಪ ಮತ್ತಷ್ಟು ರಮಣೀಯವಾಗಿ ಕಾಣತೊಡಗಿತ್ತು. ಮತ್ತೊಮ್ಮೆ ಸುಂದರ ಸ್ಥಳದಲ್ಲಿ ಸುತ್ತಾಡಿದಳು ತಬ್ಸುಮ್.

ಆಕಾಶವು ಕಾರ್ಮೋಡಗಳಿಂದ ಭಯಂಕರವಾಗಿ ಕಾಣಿಸತೊಡಗಿತು. ಅರವಿಂದನು ನಮ್ಮ ಕೆಲಸ ಮುಗಿದಿದ್ದರೆ ಹೊರಡೋಣ ಬನ್ನಿ ಎಂದು ಅವಳನ್ನು ಕರೆದುಕೊಂಡು ಹೊರಡಲು ಅನುವಾದನು.  ತಮ್ಮ ವಸ್ತುಗಳನ್ನು ತೆಗೆದುಕೊಂಡು ಬಾಗಿನಲ್ಲಿ ಹಾಕಿಕೊಂಡು ಇಬ್ಬರು ಮೆಲ್ಲನೆ ಜೊತೆಯಾಗಿ ಕಮಲ ನಾರಾಯಣ ದೇವಸ್ಥಾನದ ಆವರಣವನ್ನು ದಾಟತೊಡಗಿದರು.  ಅಷ್ಟರಲ್ಲಿ ಸಂಜೆ ಅವರಿಸುತ್ತಾ ಬಂದಿತ್ತು.

ಆ ತಣ್ಣನೆ ತಂಗಾಳಿ ಇಬ್ಬರ ಹೃದಯದಲ್ಲಿ ಒಂದು ಅನುರಾಗದ ಅಲೆಯನ್ನು ಸೃಷ್ಟಿಸಿತು.


  •  ರೇಶ್ಮಾ ಗುಳೇದಗುಡ್ಡಾಕರ್
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW