ಕವಿ ವೀರೇಶ ಬ ಕುರಿ , ಸೋಂಪೂರ ಅವರ ಲೇಖನಿಯಲ್ಲಿ ಅರಳಿದ ‘ತುಂಟ ಕೃಷ್ಣ’ ಕವನ , ತಪ್ಪದೆ ಓದಿ…
ಕೇಳು ನನ್ನ ಮುದ್ದು ಅಮ್ಮ
ಸತ್ಯವನ್ನೇ ಹೇಳುವೆನು.
ಕದಿಯಲಿಲ್ಲ ನಾನು ಬೆಣ್ಣೆ
ನಾ ತುಂಬಾ ಒಳ್ಳೆಯವನು.
ಅವರಿವರ ಮಾತು ಕೇಳಿ
ಏತಕೆ ಕೈಗಳ ಕಟ್ಟಿರುವೆ?
ನನ್ನನು ಬಡಿಯಲೆಂದು
ಕೋಲನೊಂದು ಇಟ್ಟಿರುವೆ!
ತಡೆಯಲಾರೆನಮ್ಮ ದು:ಖ
ಕಣ್ಗಳ ತುಂಬಾ ನೀರಿದೆ.
ನಿನ್ನ ಕೋಪ ಕಂಡು ನಾನು
ಹೆದರಿಕೊಂಡು ಹೌಹಾರಿದೆ!
ನಿನ್ನ ಕೆನ್ನೆಗೆ ಮುತ್ತ ಕೊಡುವೆ
ಹಾಡಿ ಕುಣಿದು ನಗಿಸುವೆ.
ಕರುಣೆ ತೋರು ಅಮ್ಮನೆ
ನೀ ಬೈಯಬೇಡ ಸುಮ್ಮನೆ.
ಬಾರೆ ಅಮ್ಮ ಬೇಗ ಬಾರೆ
ಕೈಯ ಕಟ್ಟನು ಬಿಚ್ಚು ನೀನು.
ಬೆಣ್ಣೆ ಬಿಟ್ಟು ಇರಲಾರೆನು
ಈಗಲೇ ಬೆಣ್ಣೆ ತಿನ್ನುವೆನು!!
- ವೀರೇಶ ಬ ಕುರಿ , ಸೋಂಪೂರ