ಬದಲಾದ ತನ್ನ ಜೀವನ ಶೈಲಿಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ, ಉತ್ತಮ ಆರೋಗ್ಯಕ್ಕೆ ಯೋಗ ಒಂದು ರಾಮಬಾಣವಿದ್ದಂತೆ ಎಂದು ಯೋಗದ ಮಹತ್ವವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ ಯೋಗ ಶಿಕ್ಷಕ ಲಕ್ಷ್ಮಣ ಗಂಗಾರಾಮ ಬೋಡಕೆ ಅವರು, ತಪ್ಪದೆ ಮುಂದೆ ಓದಿ…
ಮಾನವನು ಬದಲಾದ ತನ್ನ ಜೀವನ ಶೈಲಿಯಿಂದ ದಿನನಿತ್ಯದ ಅಪೇಕ್ಷೆಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ.ಆಧುನಿಕ ಜೀವನ ಶೈಲಿಗೆ ಮಾರುಹೋಗಿ ಅನಗತ್ಯ ಕೃತಕ ಸೌಲಭ್ಯಗಳನ್ನು, ಸಾಧನಗಳನ್ನು ಪಡೆಯಲು ಹಪಹಪಿಸುತ್ತಿದ್ದಾನೆ. ಅನಾವಶ್ಯಕ ವಿರಾಮದ ಬದುಕಿನಿಂದ ಮನೆಯ ಜನರು ಆಲಸ್ಯದಿಂದ ಸೋಮಾರಿಗಳಾಗುತ್ತಿದ್ದಾರೆ.ಶರೀರದಲ್ಲಿ ಜಡತ್ವ ಹೆಚ್ಚಾಗಿ ಕೊಬ್ಬು ಶೇಖರಣೆ ಆಗುತ್ತಿದೆ. ಬೇಜವಾಬ್ದಾರಿಯ ಜೀವನ ಶೈಲಿಯಿಂದ ಸಾಂಪ್ರದಾಯಿಕ ಕಟ್ಟುಪಾಡುಗಳು ಸಡಿಲವಾಗುತ್ತಿವೆ. ದುರಾಚಾರ ಹಾಗೂ ದುಷ್ಟ ಪ್ರವೃತ್ತಿಯ ಜೀವನ ಎಲ್ಲಾ ರೀತಿಯಲ್ಲೂ ಬೆಳೆಯತೊಡಗಿದೆ.ಇದರ ಪರಿಣಾಮವಾಗಿ ಆಹಾರ – ವಿಹಾರದ ಕ್ರಮದಲ್ಲಿ ಮತ್ತು ಆಚಾರ – ವಿಚಾರಗಳಲ್ಲಿ ಬದಲಾವಣೆ ಆಗುತ್ತಿದೆ. ಇದರಿಂದ ಸಮಾಜದಲ್ಲಿ ಮಾನಸಿಕ ಹಾಗೂ ಶಾರೀರಿಕ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ.

ಮನೆ ನಿರ್ವಹಣೆ ಮಾಡುವ ಯಜಮಾನನ ಪರಿಸ್ಥಿತಿ ಗಂಭೀರವಾಗಿದ್ದರೂ ಸಹ ಆತನಿಗೆ ತನ್ನ ಸ್ಥಿತಿಯ ಅರಿವಾಗುತ್ತಿಲ್ಲ.ನಿರ್ದಿಷ್ಟ ಗೊತ್ತು ಗುರಿಯಿಲ್ಲದ ಮಾರ್ಗದಲ್ಲಿ ಆತ ಪಯಣಿಸುತ್ತಿದ್ದಾನೆ. ದಿನೇ ದಿನೇ ಹೆಚ್ಚುತ್ತಿರುವ ಕುಟುಂಬದ ಬೇಡಿಕೆಗಳನ್ನು ಪೂರೈಸಲು ಜಾಸ್ತಿ ಹಣಬೇಕು. ಹೆಚ್ಚು ಹಣ ಸಂಪಾದನೆ ಮಾಡಲು ಹೆಚ್ಚು ದುಡಿಯಬೇಕು. ಮಿತಿ ಮೀರಿ ದುಡಿಯುವುದರಿಂದ ವಿಶ್ರಾಂತಿಯ ಅವಧಿ ಕಡಿಮೆಯಾಗುತ್ತದೆ, ವಿಶ್ರಾಂತಿವಿಲ್ಲದ ಕೆಲಸದಿಂದ ದೇಹ ಶ್ರಮ ಹೆಚ್ಚಾಗಿ ಶರೀರ ಅತಿಯಾಗಿ ಸುಸ್ತಾಗುವುದು. ಮಾನವ ಬಳಲಿದ ಶರೀರವನ್ನು ಚುರುಕುಗೊಳಿಸುವ ಸಲುವಾಗಿ ಕಾಫಿ, ಟೀ, ತಂಬಾಕು ಮುಂತಾದ ನರೋತ್ತೇಜಕ ದ್ರವ್ಯಗಳನ್ನು ಹೆಚ್ಚೆಚ್ಚು ಉಪಯೋಗಿಸುವುದರಿಂದ ತನ್ನ ಆರೋಗ್ಯವನ್ನು ತಾನೇ ಹಾಳು ಮಾಡಿಕೊಳ್ಳುತ್ತಿದ್ದಾನೆ. ನಿರಂತರವಾದ ಒತ್ತಡದ ಜೀವನದಿಂದ ಸಹಜವಾಗಿ ಮನಸ್ಸಿನ ಸ್ಥಿರತೆ ಕಳೆದುಕೊಂಡು ಸಮಾಜಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸದಾಕಾಲ ಆತಂಕ,ಭಯ, ಅಂಜಿಕೆ,ಕಳವಳ ಇವೇ ಮೊದಲಾದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಇಂತಹ ವ್ಯಕ್ತಿಯು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಮಧ್ಯಪಾನ, ಗಾಂಜಾ, ಆಫೀಮು ಸೇವಿಸಿ,ಅಸಹಜ ರೀತಿಯ ಜೀವನಕ್ಕೆ ಶರಣಾಗುವನು. ಇಂತಹ ವ್ಯಕ್ತಿಯಲ್ಲಿ ರಕ್ತದ ಒತ್ತಡ, ನರದೌರ್ಬಲ್ಯ, ಮಾನಸಿಕ ಅಸ್ಥಿರತೆ ಇಂತಹ ಮೊದಲಾದ ರೋಗಗಳು ಕಾಣಿಸಿಕೊಳ್ಳುವವು.ಇಂತಹ ದುರಂತದಿಂದ ಮಾನವನು ಹೊರಬರಬೇಕಾಗಿರುವುದು ಅತ್ಯವಶ್ಯಕವಾಗಿದೆ.

ಒಳ್ಳೆಯ ಯೋಗ ಶಿಕ್ಷಣದಿಂದ ವ್ಯಕ್ತಿಯ ಜೀವನದ ಮಾರ್ಗವೇ ಬದಲಾಗುವುದು, ಜೀವನದಲ್ಲಿ ಶಿಸ್ತು ಮೂಡಿಬಂದು , ಸುಂದರ ಜೀವನಕ್ಕೆ ಭದ್ರ ಬುನಾದಿ ಹಾಕಿದಂತಾಗುತ್ತದೆ.ಮಾನಸಿಕ ಅಸ್ಥಿರತೆ ಕಡಿಮೆ ಆಗಿ, ಉತ್ತಮ ದೇಹಾರೊಗ್ಯ ಹೊಂದಿ ಜೀವನದಲ್ಲಿ ಹೊಸ ಬೆಳಕು ಕಂಡುಬರುವುದು.ಯೋಗದಿಂದ ವ್ಯಕ್ತಿಯು ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ, ಬೌದ್ಧಿಕ ಮತ್ತು ಸಾಮಾಜಿಕ ಹೀಗೆ ಎಲ್ಲ ರೀತಿಯಲ್ಲೂ ವಿಕಸನ ಗೊಳ್ಳುತ್ತಾನೆ.

ಯೋಗಾಭ್ಯಾಸಕ್ಕೆ ಶ್ರದ್ಧೆ ಬಹಳ ಮುಖ್ಯ.ಯೋಗ ಶಿಕ್ಷಣದಿಂದ ನನಗೆ ಅಧಿಕ ಲಾಭ ಇದೆ ಎಂದು ಮನದಟ್ಟಾದರೆ ಶ್ರದ್ಧೆ ಸಹಜವಾಗಿಯೇ ಬರುತ್ತದೆ.ಗುರುವಿನ ಮಾರ್ಗದರ್ಶನದಲ್ಲಿ ಯೋಗ ಕಲಿಯುವುದು ಅತ್ಯಗತ್ಯ. ಯೋಗ ಶಿಕ್ಷಣಕ್ಕೆ ಜಾತಿ ಮತಗಳ ಬೇಧವಿಲ್ಲ, ಹೆಣ್ಣು -ಗಂಡು ತಾರತಮ್ಯವಿಲ್ಲದೆ ಎಲ್ಲಾ ವಯೋಮಾನದವರು ಮಾಡಬಹುದು.ಮಕ್ಕಳು, ವಿದ್ಯಾರ್ಥಿಗಳು, ಗೃಹಿಣಿಯರು, ಶ್ರಮಜೀವಿಗಳು, ಬುದ್ದಿಜೀವಿಗಳು, ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಹೀಗೆ ಪ್ರತಿಯೊಬ್ಬರೂ ಯೋಗ ಶಿಕ್ಷಣದ ಲಾಭವನ್ನು ಪಡೆದುಕೊಂಡು ಸುಖಶಾಂತಿಯಿಂದ ಕೂಡಿದ ಜೀವನವನ್ನು ನಡೆಸಬಹುದು.
ಮುಂದಿನ ಸಂಚಿಕೆಯಲ್ಲಿ ಯೋಗ ಎಂದರೇನು.? ಎಂಬುದನ್ನು ತಿಳಿಯೋಣ….
- ಲಕ್ಷ್ಮಣ ಗಂಗಾರಾಮ ಬೋಡಕೆ – ಯೋಗ ಶಿಕ್ಷಕರು