ಇಂತೀ, ನಿನಗೆ ಸಲ್ಲದವಳು..!ಪುಸ್ತಕ ಪರಿಚಯ – ಚೇತನ್ ಗವಿಗೌಡ

ಕವಿಯತ್ರಿ ಕಾವ್ಯ ಪುನೀತ್ ಅವರ ‘ಇಂತೀ, ನಿನಗೆ ಸಲ್ಲದವಳು’ ಕವನ ಸಂಕಲನದ ಕುರಿತು ಚೇತನ್ ಗವಿಗೌಡ ಅವರು ಬರೆದಿರುವ ಒಂದು ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ಇಂತೀ, ನಿನಗೆ ಸಲ್ಲದವಳು
ಕವಯತ್ರಿ : ಕಾವ್ಯ ಪುನೀತ್
ಪ್ರಕಾಶನ : ಕೃಷ್ಣವನ ಪ್ರಕಾಶನ
ಪ್ರಕಾರ : ಕವನ ಸಂಕಲನ

ಪ್ರೀತಿ ಎನ್ನುವುದು ಮಾಯೆ. ಆ ಮಾಯೆ ಇಲ್ಲದೆ ಬದುಕಿಲ್ಲ. ಬದುಕು ಸುಂದರವಾಗಿ ಇರಬೇಕು ಎಂದರೆ ಪ್ರೀತಿಯ ಮಾಯೆ ನಮ್ಮನ್ನು ಸುತ್ತುತ್ತಿರಬೇಕು. ನಿಜ, ಪ್ರೀತಿಗಾಗಿ ಮನುಷ್ಯ ಹಾತೊರೆಯುತ್ತಾನೆ. ನಮಗಾಗಿ ಒಂದು ಜೀವ ಇದೆ, ನಮ್ಮ ಎಲ್ಲಾ ಅಗತ್ಯತೆಗಳಿಗೆ ಆದ್ಯತೆಯನ್ನು ನೀಡಿ ರಕ್ಷಣೆಯ ಭಾವವನ್ನು ನೀಡುತ್ತದೆ ಎನ್ನುವ ನಂಬಿಕೆಯೇ ಜೀವಕ್ಕೊಂದು ಬೆಳಕು.

ಪ್ರೀತಿ ಎನ್ನುವ ಬೆಳಕು ಜೀವನದಲ್ಲಿ ನಂದಾದೀಪವಾಗಿ ಉಳಿದರೆ ಸದಾ ಕಾಲ ನೆಮ್ಮದಿಯ ಜೀವನವನ್ನು ಕಾಣುತ್ತೇವೆ. ಆ ಪ್ರೀತಿ ಎನ್ನುವ ಸುಂದರವಾದ ಭಾವನೆ ಹೇಗೆ ಬರುವುದು? ಅದರ ಸೆಳೆತಕ್ಕೆ ಸಿಲುಕಿದಾಗ ಏಕೆ ನಮ್ಮ ಮನಸ್ಸಿನ ಸಂವೇದನೆಗಳು ತೊಳಲಾಟಕ್ಕೆ ಒಳಗಾಗುವುದು? ಎನ್ನುವುದಕ್ಕೆ ಉತ್ತರವಿಲ್ಲ. ಪ್ರೀತಿಯನ್ನು ಪಡೆದುಕೊಂಡಾಗ ನಮ್ಮ ಜೀವನವು ಸದ್ದಿಲ್ಲದ ಉತ್ಸವ ಸಂಭ್ರಮವನ್ನು ಆಚರಿಸುವುದು.

ಪ್ರಾಯಕ್ಕೆ ಬಂದಾಗ ಪ್ರತಿಯೊಂದು ಜೀವಿಯೂ ಪ್ರೀತಿಯನ್ನು ಯಾಚಿಸುತ್ತದೆ. ತಮ್ಮನ್ನು ಇತರರು ನೋಡಬೇಕು, ಆಕರ್ಷಿಸಬೇಕು, ನಮ್ಮನ್ನು ಗುರುತಿಸಬೇಕು ಎನ್ನುವಂತಹ ಅನೇಕ ಬಯಕೆಗಳು ಕಾತರಗಳು ಹುಟ್ಟಿಕೊಳ್ಳುತ್ತವೆ. ಅಂತಹ ಭಾವನೆಗಳನ್ನು ಹೇಗೆ ನಿಯಂತ್ರಿಸಬೇಕು? ಎನ್ನುವುದನ್ನು ಯಾರೂ ಹೇಳಿಕೊಡುವುದಿಲ್ಲ.

ಅವು ಶಾಲೆಯಲ್ಲಿ ಕಲಿಸಿಕೊಡುವಂತಹ ವಿದ್ಯೆಯೂ ಅಲ್ಲ. ಹಾಗಾಗಿ ಪ್ರೀತಿ ಎನ್ನುವುದು ಯಾರನ್ನೋ ನೋಡಿ ಕಲಿಯುವುದು ಅಲ್ಲ.. ಪ್ರೀತಿಗೆ ಪ್ರೇಮಿಯೇ ಜೊತೆಗಿರಬೇಕು ಎಂದೇನಿಲ್ಲ.. ಅವನ ನೆನಪು ಒಂದಿದ್ದರೂ ಸಾಕು..!

ಇಷ್ಟೆಲ್ಲಾ ಪೀಠಿಕೆಗೆ ಕಾರಣ.. ಕಾವ್ಯ ಪುನೀತ್ ಅವರ

” ಇಂತೀ,
ನಿನಗೆ ಸಲ್ಲದವಳು..! “

ಮನುಷ್ಯನಿಗೆ ಪಂಚೆದ್ರೀಯಗಳು ಎಷ್ಟು ಮುಖ್ಯವೋ.. ಅಷ್ಟೇ ಸಮನಾಗಿ ಕವನಸಂಕಲನದ ಐದು ಭಾಗಗಳು ಪುಸ್ತಕಕ್ಕೆ ಮೆರಗು ತಂದುಕೊಟ್ಟಿವೆ ಎಂದರೆ ತಪ್ಪಾಗಲಾರದು. ಈ ಹೊತ್ತಿಗೆ ಕತ್ತಲಲ್ಲಿ ಕನವರಿಸಿದ ಸಾಲುಗಳನ್ನ ಹೇಳುತ್ತಾ ಪ್ರೀತಿಯ ಬೆಳಕು ಚೆಲ್ಲುತ್ತದೆ.

ತನ್ನ ಮನದ ಒಳಗಿನ ಪ್ರೀತಿ, ಹಾತುರ, ವಿರಹ, ಮೋಹ, ತ್ಯಾಗ, ಸಿಗದವರ ಸೆಳೆತ, ನೆಮ್ಮದಿ, ಹತಾಶೆ ಎಲ್ಲವೂ ರಸಭರಿತವಾಗಿ ರುಚಿಸುತ್ತವೆ.
ಈ ಪ್ರೀತಿ ಅನ್ನೋದು ಬರೆಯಲು ಚಿಕ್ಕ ಪದವಾಗಿರಬಹುದು. ಆದ್ರೆ ಈ ಪದ ಎಲ್ಲರ ಜೀವನದಲ್ಲೂ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ..!

ಯಾರಿಗೆ ಪ್ರೀತಿ ಬೇಡ ಹೇಳಿ?

ಗರ್ಭದ ಒಳಗಿರುವ ಮಗುವಿನಿಂದ ಹಿಡಿದು ವಯಸ್ಸಾದ ನಮ್ಮ ಅಜ್ಜ ಅಜ್ಜಿಯರಿಗೂ ಪ್ರೀತಿ ಬೇಕು ಎನ್ನಿಸುವುದು ಸಹಜ.. ಎರಡು ಹೃದಯ / ಮನಸ್ಸುಗಳನ್ನ ಒಂದು ಮಾಡುವುದೇ ಈ ಪ್ರೀತಿ. ಆದರೆ ಸಿಗದ ಪ್ರೀತಿಯನ್ನ ಬಯಸುತ್ತಾ, ಆತೊರೆಯುತ್ತಾ, ಸಂಕಟದಿ ನರಳುತ್ತ, ಅಸಹಾಯಕತೆಯಿಂದ ನೋಡುತ್ತಾ, ಸಿಗದವನ ಹಿತ ಬಯಸುತ್ತಾ, ಪ್ರೇಮ ನಿವೇದನೆಯನ್ನ ಮಾಡುತ್ತಾ ಕವಿತೆಗಳು ರುಪುಗೊಳ್ಳುತ್ತ ಸಾಗುತ್ತವೆ.

ವಿಫಲವಾದ ದೊರೆಯದ ಪ್ರೀತಿಯ ನೆನೆದು ಕಣ್ಣೀರಿಡುತ್ತ, ಶಪಿಸುತ್ತ ಜೀವನ ಕಳೆಯುವ ಬದಲು, ಸಿಗದವನಿಗೂ ಹಿತವನ್ನೇ ಬಯಸುತ್ತಾ, ಪ್ರೇಮ ನಿವೇದನೆಯನ್ನ ಕವಯತ್ರಿ ತಮಗೆ ತಾವೇ ತೋಡಿಕೊಳ್ಳುತ್ತಾ, ಪ್ರೇಮ ಭರಿತ ಭಾವಗಳನ್ನ ಬಿಂಬಿಸಿದ್ದಾರೆ. ದಕ್ಕದವನ ಬೆನ್ನೇರಿ, ಅವಳು, ಕ್ರೌರ್ಯ, ಪ್ರೇಮ ಆಕಸ್ಮಿಕ, ನನ್ನವನಲ್ಲ, ದೂರು, ಕನ್ನಡ ಕವಿತೆ, ಇವು ವೈಯಕ್ತಿಕವಾಗಿ ನನ್ನ ಪುನಃ ಪುನಃ ಓದಿಸಿಕೊಂಡವು.

ಪ್ರೇಮ ಆಕಸ್ಮಿಕ ಕವಿತೆಯಲ್ಲಿ ಕವಯತ್ರಿ ಅವರೇ ಹೇಳಿರುವಂತೆ ಪ್ರೇಮಕ್ಕೆ ಇಬ್ಬರು ಪ್ರೇಮಿಗಳು ಭೇಟಿಯಾಗಲೇ ಬೇಕಾದ ಜರೂರತ್ತಿಲ್ಲ.. ಎಂಬ ಮಾತು ಸತ್ಯ. ಪ್ರೇಮ ನಿವೇದನೆ ಮಾಡಲು ಪ್ರೇಮಿಯೇ ಜೊತೆ ಇರಬೇಕೆಂದೆನಿಲ್ಲ, ಅವರ ನೆನಪು ಇದ್ದರಷ್ಟೇ ಸಾಕು. ಅವನು ಪ್ರತಿಕ್ಷಣ ಬದಲಾಗುತ್ತಾನೆ,
ಹೊಸತನಕ್ಕೆ ತೆರೆದು ಕೊಳ್ಳುತ್ತಾನೆ, ಬದುಕುತ್ತಾನೆ.

ಆದರೂ ಹಳಬಳೆ ಆದ ನನ್ನನ್ನೇಕೋ ಇನ್ನೂ ಬದಲಿಸಿಲ್ಲ. ಈ ಸಾಲುಗಳು ನಿರಂತರ ಪ್ರೀತಿಯಲ್ಲಿ ಬದಲಾಗುವನ ಬಗ್ಗೆ ಹೇಳುತ್ತಾ, ತನ್ನ ನಿಸ್ಕಲ್ಮಷ ಪ್ರೀತಿ ಎಂದೂ ಬದಲಾಗದನ್ನ ಸೂಚಿಸುತ್ತದೆ. ಬದುಕಿನ ಕೊನೆಗೆ ಎಲ್ಲವೂ ಕವಿತೆಯೇ ಆಗಲಿ, ನಿಜ ಜೀವನದಲ್ಲಿ ಸಿಗದವನು ಕೊನೆ ಪಕ್ಷ ಕವಿತೆಗಳಲ್ಲಿಯಾದರು ಸಿಗುವನೆಂಬ ಆತ್ಮತೃಪ್ತಿ ದೊರೆಯುತ್ತದೆ.

ಇಂಥಹ ಅನೇಕ ಕವಿತೆಗಳು ಪುಸ್ತಕದೊಳಗಿವೆ. ಪ್ರೀತಿ, ವಿರಹ ವೇದನೆ, ನರಳಾಟ, ಏಕಾಂಗಿತನ, ಪ್ರೇಮಿಯ ಹಂಬಲ, ಅನುಬಂಧ, ಕೋರಿಕೆ, ನೋವು, ನೆನಪು ವೈಶಿಷ್ಟ್ಯವಾದ ಭಾವಗಳು ಸಿಗದವನ ಹಿತ ಬಯಸುತ್ತವೆ. ಕವಯತ್ರಿ ಸಿಗದವನ ಪ್ರೀತಿಯ ಜಾಡು ಹಿಡಿದು, ಅವನಿಲ್ಲದಿದ್ದರೂ ಅವನಲ್ಲಿನ ಪ್ರೀತಿಯ ದಾರಿ ತೋರಿದ್ದಾರೆ. ಅವನ ನೆನಪಿನ ಹಾದಿ ಭಾರವಾದಗ, ಒಡಲಾಳದಿಂದ ಅಕ್ಷರಗಳ ತೆಗೆದು ಕಾಗದಕ್ಕೆ ಇಳಿಸಿ, ಮಳೆ ಸುರಿಸಿ ಹಗುರಾದ ಮುಗಿಲಿನಂನಂತೆ ಕಾಣುತ್ತಾರೆ.

ಇಲ್ಲಿರುವ ಎಷ್ಟೊಂದು ಸಾಲುಗಳು ಓದುಗರಿಗೆ ಹಿತ ನೀಡುತ್ತವೆ, ಭಾಷೆ, ಸೊಗಡು, ಪದಗಳ ಬಳಕೆ, ಜೀವಂತಿಕೆಯ ಭಾವ, ಅವನ ಮೇಲಿರುವ ನಿಸ್ಕಲ್ಮಷ ಪ್ರೇಮ, ಪ್ರಾಮಾಣಿಕ ಪ್ರೀತಿ,ಒಡಲಾಳದ ತೋಳಲಾಟ ಕವನದ ಗೆಲುವಿಗೆ ಮೇಲುಗೈ. ಕಾವ್ಯ ಪುನೀತ್ ಅವರ ಹಿಂದಿನ ಪುಸ್ತಕಗಳಿಗಿಂತ ಈ ಪುಸ್ತಕ ವಿಭಿನ್ನವಾಗಿದೆ. ತಮ್ಮ ತಪ್ಪುಗಳನ್ನ ತಿದ್ದಿಕೊಂಡಿದ್ದಾರೆ. ಅಕ್ಷರಗಳನ್ನ ಅಯಸ್ಕಾಂತದಂತೆ ಸೆಳೆದಿದ್ದರೆ. ಅವರ ಪರಿಶ್ರಮಕ್ಕೆ ತಕ್ಕಂತೆ ಈ ಪುಸ್ತಕ ಪ್ರತಿಫಲ ನೀಡಲಿ.. ಶುಭವಾಗಲಿ..


  • ಚೇತನ್ ಗವಿಗೌಡ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW