ಚೊಕ್ಕಾಡಿಯವರ ಲೇಖನಿಯ ಗರಿಮೆ.



ಚೊಕ್ಕಾಡಿಯ ಅರವಿಂದರೆಂಬ ಗುರು ದ್ರೋಣಾಚಾರ್ಯರ ಕಾಣದ ಶಿಷ್ಯ, ಬಯಲುಸೀಮೆ ಚಿತ್ರದುರ್ಗದ ಉಮೇಶನೆಂಬ ಏಕಲವ್ಯ!ನಾನು. ಅರವಿಂದ ಚೊಕ್ಕಾಡಿಯವರ ಮಾತಿನ ವೈಖರಿಯಲ್ಲಿ, ಬರಹದ ನಿಭಿಡತೆಯಲ್ಲಿ ಏನಿಲ್ಲ? ಅನ್ನೋದಕ್ಕಿಂತ, ಏನೇನೆಲ್ಲ ಇದೆಯಲ್ಲ! ಅನ್ನುವ ಸೋಜಿಗ ಮೂಡದಿರದು – ಟಿ.ಪಿ.ಉಮೇಶ್, ಮುಂದೆ ಓದಿ…

ಪುಸ್ತಕ : ಉಪನ್ಯಾಸ ಮಾಲೆ
ಲೇಖಕರು : ಅರವಿಂದ ಚೊಕ್ಕಾಡಿ
ಪ್ರಕಾಶಕರು : ಪೃಥ್ವಿ ಪ್ರಕಾಶನ

ಅರವಿಂದ ಚೊಕ್ಕಾಡಿಯವರ ಕುರಿತು ಹೇಳುವುದು ಒಂದೇ, ಅವರ ಅಧ್ಯಯನ ಹಾಗೂ ಭಾಷಣ, ಬರಹಗಳ ಕುರಿತು ಹೇಳುವುದು ಒಂದೇ. ನಡೆನುಡಿ ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂಬಂತೆ, ಅರವಿಂದರು ನುಡಿದಂತೆಯೇ ನಡೆಯುವವರು. ಅಂತೆಯೇ ನಡೆನುಡಿಯನ್ನು ಸ್ಪಷ್ಟವಾಗಿ ದಾಖಲಿಸುವವರು. ಹಾಗಾಗಿ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಬಹುತೇಕ ಲೇಖಕರ ಬಗ್ಗೆ ಹೇಳುವಾಗಲು ಒಮ್ಮೊಮ್ಮೆ ವ್ಯಕ್ತಿನಿಷ್ಟವೊ ಇಲ್ಲ ಕೃತಿನಿಷ್ಟವೋ ಆಗಿರಬೇಕಾಗುತ್ತದೆ.

ಆದರೆ ಕೃತಿ ಹಾಗೂ ವ್ಯಕ್ತಿತ್ವ ಏಕತ್ರವಾಗಿರುವ ಕೆಲವೇ ಕೆಲವು ಲೇಖಕರಲ್ಲಿ ಅರವಿಂದ ಚೊಕ್ಕಾಡಿಯವರು ಪ್ರಮುಖರು. ಪ್ರಮುಖರು ಯಾಕೆಂದರೆ ಅವರಿನ್ನೂ ಬದುಕನ್ನು ದುಡಿಸಿಕೊಳ್ಳುತ್ತಿದ್ದಾರೆ ಹಾಗೂ ಬರಹವನ್ನು ಬದುಕುತ್ತಿದ್ದಾರೆ. ಕೆಲವರು ತಮ್ಮ ಮೊಂಡಾದ ಲೇಖನಿಯ ಸಾಣೆಯಿಡಿಸದೆ ಜೇಬೊಳಗಿಟ್ಟುಕೊಂಡು ಗತಕಾಲದ ಒಂದಷ್ಟು ಹರಿತ ಬರಹಗಳ ಆತ್ಮರತಿಯ ಕೊರೆತದಲ್ಲಿ ಮುಳುಗಿರುತ್ತಾರೆ. ಅರವಿಂದರು ಯಾವಾಗಲು ಪ್ರಖರ ವಾಸ್ತವ ಪ್ರಜ್ಞೆಯುಳ್ಳವರು. ಆಗಿದ್ದಕ್ಕೆ ಮೆರೆಯುತ್ತ, ಮರುಗುತ್ತ ಕೂರುವವರಲ್ಲ. ಅದಕ್ಕೊಂದು ಸ್ಪಷ್ಟ ಅಂತಿಮ ಚರಮ ಗೀತೆ ಬರೆದು ‘ಮತ್ತೆ ಮುಂದೇ…?’ ಎನ್ನುವ ಸ್ವಭಾವದವರು. ಹಾಗಾಗಿ ಯಾರಿಗೇ ಆಯಿತು ಅರವಿಂದರ ಕುರಿತು ಹೇಳುವಾಗ ಹಿಂದೆ ಮುಂದೆ ಯೋಚಿಸಬೇಕಾದ, ಲಾಭ ನಷ್ಟ ತೂಗಿಸಬೇಕಾದ ಅಗತ್ಯವಿಲ್ಲ! ಇದ್ದದ್ದನ್ನ ಇದ್ದ ಹಾಗೆ ಹೇಳಿದರಾಯಿತು. ಅದನ್ನ ತಳಕಬಳಕ ಮಾಡಿ ಮೇಲೆ ಕೆಳಗೆ ಹಾಕಿ ಯಾವುದೋ ದೂ(ದು)ರಾಲೋಚನೆಯಿಂದ ಮಾತಾಡಿದಿರೋ; ಬಲು ನ್ಯಾಯ ನಿಷ್ಟುರಿಯಾದ ಇವರ ಮಾತುಗಳ ಛಾಟಿಯಿಂದ ಹಿಂದೆ ಮುಂದೆ ನಿಲ್ಲಲಾಗದಂತೆ ತುರಿಸಿಕೊಳ್ಳಬೇಕಾಗುತ್ತದೆ! ಹಾಗಾಗಿ ಇವರ ಕುರಿತು ಮಾತಾಡುವುದು ಸುಲಭ! ವ್ಯಕ್ತಿತ್ವದಲ್ಲಿ ಯಾವುದೇ ಅಂಕು ಡೊಂಕು ಇಟ್ಟುಕೊಂಡವರಲ್ಲ.

ಇವರ ಬರಹವನ್ನು ಕುರಿತು ಹೇಳುವುದೂ ಸುಲಭ. ಅವರ ಬದುಕೇ ಬರಹವಾಗಿರುವಾಗ! ಆದರೂ ಅವರ ಹತ್ತಿರದಿಂದ ಕಾಣದ ಸಾವಿರಾರು ಓದುಗರಿಗೆ ಅವರ ಬರಹಗಳೇ ಅರವಿಂದರ ತೋರಿಸುವ ಅರಿವಿನ ದಾರಿಗಳು. ಹಾಗಾಗಿ ನಾವಿಲ್ಲಿ ಅವರ ಬರಹಗಳ ಕುರಿತು, ಸದ್ಯದ ಈ ಕೃತಿಯಲ್ಲಿನ ಉಪನ್ಯಾಸಗಳ ಕುರಿತು ವಿಚಾರ ಮಾಡಬೇಕಾಗಿದೆ. ಈಗ ಪ್ರಕಟಗೊಳ್ಳುತ್ತಿರುವ ಹೊತ್ತಿಗೆಯಲ್ಲಿನ ಒಂದೊಂದು ಉಪನ್ಯಾಸಗಳು ಒಮ್ಮೊಮ್ಮೆ ಒಂದು ಓದಿಗೆ ನಮಗೆ ಆ ಮಾರ್ಟಿನ್ ಲೂಥರ್ ಕಿಂಗ್‌ನ ಪ್ರಖ್ಯಾತ ಭಾಷಣವನ್ನು ನೆನೆಪಿಗೆ ತಂದರೆ ಅಚ್ಚರಿಯಿಲ್ಲ. ಹಾಗೆಯೇ ಕನ್ನಡದ ಮಾರ್ಟಿನ್ ಲೂಥರ್ ಕಿಂಗ್ ಆದ ಬಸವೇಶ್ವರರ ನೆನೆಪಿಗೆ ತಂದರೆ ವಿಸ್ಮಯವಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ ಭಾರತದ ಆತ್ಮವೇ ಆದ ಮಹಾತ್ಮ ಗಾಂಧೀಜಿಯವರ ನಮ್ಮ ಕಣ್ಮುಂದೆಯೇ ತಂದು, ಎದುರಿಗೆ ಕೂರಿಸಿ ಸಂವಾದಕ್ಕೆ ಶುರು ಹಚ್ಚಿದರೆ ಉದ್ವೇಗ ಪಡಬೇಕಿಲ್ಲ. ಇವರೆಲ್ಲರು ನಡೆದಂತೆಯೇ ನುಡಿದಂತಹವರು! ನುಡಿಗಾಗಿ ನಡೆಯ ಬಗ್ಗಿಸಿಕೊಂಡವರು! ಹಾಗಾಗಿ ಲೋಕದ ಎಲ್ಲಾ ಕಾಲಘಟ್ಟಕ್ಕು ಒಗ್ಗಿದಂತಹವರು! ಇಂದಿಗು ನಾಡಿನ ನಡೆನುಡಿಯ ಸಾಕ್ಷೀಪ್ರಜ್ಞೆಯಾಗಿರುವಂತಹವರು. ಅರವಿಂದರು ಈಗ ನಮ್ಮ ನಡುವೆ ಇರುವ ಅಂತಹ ಪ್ರಖರ ವ್ಯಕ್ತಿತ್ವದವರು. ಅವರ ಬರಹಗಳಲ್ಲಿ ಈ ಉಪನ್ಯಾಸಗಳು ನಮಗೊಂದು ಆಧುನಿಕ ಕನ್ನಡ ಉಪನಿಷತ್ತಿನಂತೆ ಅನುಭವ ನೀಡುತ್ತವೆ ಅನ್ನೋದಕ್ಕಿಂತ ಹೊಸಗನ್ನಡದ ಅರವಿಂದೋಪನಿಷತ್ತುಗಳೇ ಇವಾಗಿವೆ ಎಂದರೆ ಉತ್ಪೇಕ್ಷೆಯೇನಲ್ಲ.

ಅರವಿಂದ ಚೊಕ್ಕಾಡಿ ಅವರ ಉಪನ್ಯಾಸ ಮಾಲೆ ಮುಖಪುಟ

ಪ್ರಮುಖವಾದ ಮಾತು; ಅರವಿಂದ ಚೊಕ್ಕಾಡಿಯವರ ಉಪನ್ಯಾಸಗಳ ಅವಲೋಕನ ಮಾಡುವ ಅಗಾಧ ಕಾರ್ಯಕ್ಕೆ ಕೈ ಹಾಕಿರುವ ನಾನು ಈಗ ಮಾಡಿಕೊಂಡಿರುವ ಟಿಪ್ಪಣಿಗಳು ಮತ್ತು ಪೂರಕ ಮಾಹಿತಿಗಳ ವಿಸ್ತರಿಸುತ್ತಾ ಹೋದರೆ ಅದೇ ಒಂದು ಈ ಅರವಿಂದೋಪನಿಷತ್ತಿನಂತ ಉಪನ್ಯಾಸಗಳಿಗೆ ಕಿರು ಭಾಷ್ಯವಾಗಬಹುದು! ಪ್ರತಿ ಉಪನ್ಯಾಸವನ್ನು ಕೋಟ್ ಮಾಡುತ್ತಾ ಇದು ಹೀಗೆ ಹೀಗೆ ಎನ್ನುತ್ತಾ ಹೋದರೆ ಸಹೃದಯ ಓದುಗರ ವಿಶಾಲ ಮನಸ್ಸಿನ ಓದಿಗೆ ಮಿತಿ ಹಾಕಿದಂತೆಯೇ ಸರಿ. ಅಧ್ಯಯನಕ್ಕೆ ಈ ಹೊತ್ತು, ಈ ಹೊತ್ತಿಗೆ ಹಿಡಿದಿರುವ ನಿಮಗೆ ಅಕ್ಷರಗಳ ಅಂತರಾಳದ ಅರಿವಿನ ಸಾಂಗತ್ಯದ ಸ್ವಾರಸ್ಯ ಹೊರಟು ಹೋಗಬಹುದು. ಅರವಿಂದರ ವಿಚಾರಗಳನ್ನು, ಅಧ್ಯಯನಶೀಲತೆಯನ್ನು, ಅಂತರ್ನೋಟಗಳನ್ನು, ವಿಚಕ್ಷಣಮತಿಯನ್ನು, ಸಂವಾದದ ಕಲೆಯನ್ನು, ವಾದ ಪ್ರತಿಪಾದಿಸುವ ಸಿದ್ಧತೆಯನ್ನು, ಆಧಾರಗಳ ಒದಗಿಸುವ ನೈಪುಣ್ಯತೆಯನ್ನು, ಬದುಕಿನೊಂದಿಗೆ ಬರಹ ಮೇಳೈಸುವ ಆನುಭಾವಿಕತೆಯನ್ನು, ಅವರ ಬರಹಗಳ ಮೂಲಕವೇ ಓದಿ ಅರಗಿಸಿಕೊಳ್ಳಬೇಕು ಮತ್ತು ಸವಿಯಬೇಕು. ಹಾಗಾಗಿ ಇಲ್ಲಿ ನನ್ನದೇನೆದ್ದರು ಅರವಿಂದರ ಉಪನ್ಯಾಸಗಳ ಅರಿವಿನರಮನೆಯ ಹೊರ ಹೊಸ್ತಿಲಿಗೆ ಒಂದು ಕಿರು ತೋರಣ ಕಟ್ಟಿ ನಿಮ್ಮನ್ನೆಲ್ಲ ಸ್ವಾಗತಿಸುವ ಕಾರ್ಯವಷ್ಟನ್ನೇ ಮಾಡಬಹುದು.

ಈಗಲೇ ಹೇಳಿ ಬಿಡಬೇಕು; ನಾನು ಮಲೆನಾಡ ಮೂಡುಬಿದಿರೆ ಕಡೆಯ ಚೊಕ್ಕಾಡಿಯ ಅರವಿಂದರೆಂಬ ಗುರು ದ್ರೋಣಾಚಾರ್ಯರ ಕಾಣದ ಶಿಷ್ಯ, ಬಯಲುಸೀಮೆ ಚಿತ್ರದುರ್ಗದ ಉಮೇಶನೆಂಬ ಏಕಲವ್ಯ! ಕಳೆದ ನಾಲ್ಕೈದು ವರ್ಷಗಳಿಂದ ಇವರ ಹತ್ತಿರದ ಓದುಗ; ವಿವಿಧ ಮಾಧ್ಯಮಗಳ ಮುಖೇನ. ಮೊದಲು ದೂರದ ಓದುಗ; ಬರೀ ಕೃತಿಗಳ ಮುಖೇನ. ಓದು ಬರವಣಿಗೆ ಎಂಬ ಜೀವನದ ಉಪವಿಧಿಗಳು ನನ್ನಲ್ಲೊಂದಿಷ್ಟಿದ್ದರು ವಯಸ್ಸಿಗಾಗುವಷ್ಟು, ವಯಸ್ಸು ಮಾಗಿದಷ್ಟು ಇದ್ದಿಲ್ಲ. ಮನಸ್ಸೂ ವಯಸ್ಸಿನಷ್ಟು ವೇಗವಾಗಿರಲಿಲ್ಲ. ಯಾವಾಗ ಅರವಿಂದರೆಂಬ ನಿಸ್ತಂತು ವಿದ್ಯುತ್ತಿನ ಸಂಪರ್ಕಕ್ಕೆ ಬಂದೆನೊ ಒಂದಷ್ಟು ಅರಿವಿನ ಲೈಟು ಎದೆಯಲ್ಲಿ, ಮೆದುಳಲ್ಲಿ ಪಕಪಕ ಬೆಳಗ ಹತ್ತಿತು. ಇನ್ನೂ ಅದೇನು ಮರ್ಕ್ಯೂರಿ ಆಗಿಲ್ಲ; ಕೋಲು ಲೈಟೇ! ಅನ್ನೋದು ನನ್ನ ಭಾವನೆ. ಮುಂದೆ ಅವರ ನೇರ ಸಂಪರ್ಕ ಬಂದಾಗ ಅವರ ಅಡಿದಾವರೆಗಳಿಗೆ ನಮಿಸಿದಾಗ ಅವರ ತೇಜಃಪುಂಜ ಹಸ್ತಗಳ ಸ್ಪರ್ಶದಿಂದ ಕಾಳಿಯ ಸಂಸರ್ಗದಿಂದಾದ ಕಾಳಿದಾಸನಂತೋ, ರಾಮಕೃಷ್ಣರ ಸಂಪರ್ಕದಿಂದಾದ ವಿವೇಕರಂತೊ ಕೋಲ್ಮಿಂಚಂತೆ ಜಗ್ಗನೆಯೋ ಇಲ್ಲ ಹುಣ್ಣಿಮೆಯಂತೆ ನಿಧಾನಕ್ಕೋ ಜ್ಞಾನ ಪಕ್ವಗೊಳ್ಳಬಹುದು! ಈಗ ನನ್ನಿಂದ ಕಂಡೋ ಕಾಣ್ದಂಗೋ ಅದೇನೋ ಪಡೆದಿರುವಿಯೋ ಗೊತ್ತಿಲ್ಲ ಮಾರಾಯ, ಎನ್ನುವಂತೆ ‘ಈ ಉಪನ್ಯಾಸಗಳಿಗೆ ಒಂದಷ್ಟು ಮುನ್ನುಡಿ ಬರೀ’ ಅಂತ ಮೊನ್ನೆ ಮುಂಜಾನೆ ಬೆಳಿಗ್ಗೆ ಬೆಳಿಗ್ಗೆಯೇ ಮೇಘ ಸಂದೇಶ ಚರವಾಣಿಯಲ್ಲಿ! ‘ಸರ್ ನೀವೋ ಹಿಮಾಲಯ ಶಿವ ಶಿಖರ! ನಾನೋ ಬರೀ ಧ್ಯಾನಸ್ಥ ಕಿಂಕರ!! ಸರಸ್ವತಿಯ ವಾಗ್ಝರಿಯ ನರ್ತನ ನೀವು! ಪದಗಳಿಗೆ ತಡಕಾಡುವ ತುಡುಗ ನಾನು!!’ ಎಂದು ಬಹಳ ಸದು ವಿನಯದಿ ಮಾರೋಲೆ ಟೈಪಿಸಿ ಟಂಕಿಸಿದೆ. ಕರೆಂಟು ಶಾಕ್ ಹೊಡೀತು ನೋಡಿ ಆಗ ಫಳ್ ಗುಟ್ಟುತ್ತಾ ‘ಅದೆಲ್ಲ ಇರ್ಲಿ. ಈಗ ವಿಚಾರ ಹೇಳಿ.’ ಮುಂಗಾರು ನಮ್ಮ ಕಡೆ ಈಗ ಬರ್ತಿದೆ. ಅದು ಇಷ್ಟು ರಭಸಕ್ಕೆ ಅಪ್ಪಳಿಸಿ ಬರುತ್ತೆ ಅಂತ ನಾ ಅಂದುಕೊಂಡಿರ್ಲಿಲ್ಲ. ಮುಂದಕ್ಕೆ ಮಾತಾಡಿದರೆ ಸಿಡಿಲು ಗ್ಯಾರಂಟಿ. ರಕ್ಷಣೆ ಪಡೆಯೋಕೆ ನಾನೇನು ಪರ್ವತಗಳ ಮರಚ್ಚು ಓರೆಯಲ್ಲಿಲ್ಲ, ನಿಡಿದಾದ ಬಯಲೋ ಬಯಲಲ್ಲಿ ಬಯಲಾಗಿ ಕೂತಿರುವೆ. ತಕ್ಷಣಕ್ಕೆ ತಣ್ಣಗಾದೆ. ಗುರುಗಳು ದೂರ್ವಾಸರಾಗೋಕೆ ಮುಂಚೆ ವಿಶ್ವಾಮಿತ್ರರನ್ನಾಗಿ ಮಾಡಿಕೋಬೇಕು. ಆಮೇಲೆ ಅವರೆ ಶಾಂತ ವಸಿಷ್ಟರಾಗಿ, ಅಲೌಕಿಕ ಮಂದಹಾಸದ ವ್ಯಾಸರಾಗಿ ಬದಲಾಗ್ತಾರೆ ಎಂಬ ದೂರದ ಅರಿವಿದ್ದ ನಾನು, ‘ನೀವು ಗುರುಗಳು, ಹೇಳಿದರೆ ಕೇಳುವ, ಅದ ಪಾಲಿಸುವ ವಿನಮ್ರತೆಯಷ್ಟೇ ನನ್ನಲ್ಲಿದೆ, ನೀವು ಏನು ಹೇಳಿದರೂ ಶ್ರದ್ಧೆಯಿಂದ ಮಾಡಲು ಬದ್ಧನಾಗಿರುವೆ. ನೀವು, ನಿಮ್ಮ ನುಡಿಗಡಣ ಜ್ಞಾನದ ನವ ಮಜಲಿನ ಮಹಲಿಗೆ, ನನ್ನ ಒಂದು ಕಿರು ಪುಷ್ಪ ಬಯಸಿದರೆ ಅದಕ್ಕಿಂತ ವರವೇನಿದೆ ನನಗೆ?!’ ಎಂದು ನಡುಗುವ ಕೈಗಳಿಂದಲೇ ಮನದೆಲ್ಲ ಸಮರ್ಪಣೆಯ ಒಪ್ಪಿಸಿದೆ. ಒಂದೇ ಒಂದು ‘ನಮಸ್ಕಾರ’ ತಥಾಸ್ತು ಎನ್ನುವಂತೆ ಇಮೋಜಿ ನನ್ನ ಕಣ್ ಕೋರೈಸಿತು. ಮರುಕ್ಷಣವೇ ಅವರೆಲ್ಲ ಉಪನ್ಯಾಸಗಳ ಹೊತ್ತಿಗೆಯು ನಭೋ ಮಂಡಲದಿಂದ ಪಾರಿಜಾತ ಸುಮದಂತೆ ತೇಲಿ ಬಂತು. ‘ಸರ್ ಎರಡೆ ದಿನ, ಬರೆದು ಕಳಿಸುವೆ’ ಎಂದು ಹೇಳಿದೆ. ನಾನೇ ಅವರಿದ್ದಲ್ಲಿಗೆ ಹೋಗುವ ಸಂದರ್ಭ ಇದುತನಕ ಒದಗಿ ಬಂದಿಲ್ಲ. ಈಗಂತು ಬಿಡಿ ಮಾರಿ ಕರೋನದ ತಡೆಗೋಡೆಯಿಂದ ಮನೇಲಿರೋ ಮಡದಿಯ ಮೋರೆಯನ್ನೇ ನೆನೆದಾಗ ನೋಡೋದು ಕಷ್ಟವಾಗಿರುವಾಗ ದೂರದ ಗುರುಗಳನ್ನ ಕಾಣಲು ತಡೆರಹಿತ ಬಸ್ಸೇರಿ ಹೋಗುವ ಧಾವಂತದ ಈ ಸುಮೂಹರ್ತದ ಸುಸಂದರ್ಭಕ್ಕೆ ಅವಕಾಶವೇ ಇಲ್ಲ.

ಲೇಖಕರಾದ ಅರವಿಂದ ಚೊಕ್ಕಾಡಿ

ಎರಡು ದಿನ ಅಂದೆ ಅದೇ ಎಡವಟ್ಟಾಗಿದ್ದು. ಎರಡು ಮೂರು ಉಪನ್ಯಾಸಗಳ ಕಿರುಪುಸ್ತಕ ಬಿಡು ಅಂದುಕೊಂಡೆ, ಅಲ್ಲದೆ ಪಿಡಿಎಫ್‌ಲ್ಲಿ ಬಂದದ್ದು ೩೨೧ ಅಂತ ಇದ್ದ ಪುಟಗಳು,(ಮುದ್ರಣದ ಸಿದ್ಧತೆ ವೇಳೆಗೆ ವ್ಯತ್ಯಾಸ ಆಗಬಹುದು) ಗುರುಗಳ ಪುಸ್ತಕ ಬಂತು ಎಂಬ ಸಂತಸದ ಆನಂದದ ತೇಲುಗಣ್ಣಲ್ಲಿದ್ದ ನನಗೆ ಬರೀ ೩೨ ಕಾಣಬೇಕೆ?! ಅರವತ್ತಕ್ಕಲ್ಲ ನಂಗಿಲ್ಲಿ ಹರೆಯದಲ್ಲೇ ಅರಳು ಮರಳು! ಏನೇನುಕ್ಕೋ ಅಲ್ಲ ಅರಿವಿನ ಆತುರಕ್ಕಷ್ಟೇ. ಆಮೇಲೆ ಏನು ಹೇಳಲಿಲ್ಲ. ಮಾತು ತಪ್ಪಿದರೆ ಗುರುಗಳು ರುದ್ರನಾಗಿ ಮೂರನೇ ಕಣ್ಣ ತೆರೆದರೆ ಮುಗಿಯಿತು ಇರೋಬರೋ ಒಂದಷ್ಟು ಅರಿವು ಸುಟ್ಟು ಹೋಗುತ್ತೆ ಅಂತ ಎಲ್ಲ ಎಲ್ಲ ಕೆಲಸ ಬದಿಗೊತ್ತಿ ಹಳ್ಳಿಮನೆಯ ಅಟ್ಟದ ಮೇಲೆ ಚಾಪೆ ಹಾಕಿಕೊಂಡು ಪಟ್ಟಾಗಿ ಕೂತೆ. ಒಂದೊಂದೆ ಉಪನ್ಯಾಸಗಳ ಓದಲಿಲ್ಲ! ಅರವಿಂದ ಗುರುಗಳು ನನ್ನ ಮುಂದೆಯೇ ಪದ್ಮಾಸನದಲ್ಲಿ ಆಸೀನರಾಗಿದ್ದರು! ಒಮ್ಮೊಮ್ಮೆ ಅಗೋ ಆ ಮರದ ಖುರ್ಚಿಯಲ್ಲಿ ಕುಳಿತು; ಇನ್ನೊಮ್ಮೆ ಇತ್ತಕಡೆ ಬುಕ್ ರ‍್ಯಾಕ್‌ಗೆ ಒರಗಿಕೊಂಡು ಯಾವುದೋ ಬುಕ್‌ನಲ್ಲಿ ಕಣ್ ಹಾಯಿಸುತ್ತಾ; ಟಿಪ್ಪಣಿ ಬರೆಸುತ್ತಾ; ಮತ್ತೆ ನಡು ಗಂಬದ ಮುಂದೆ ನಿಂತು ಘನ ಗಂಭೀರವಾಗಿ ನನಗಿಲ್ಲಿ ಪಾಠ ಮಾಡುತ್ತಿದ್ದಾರೆ! ಹೀಗೆ ಓತಪ್ರೋತವಾಗಿ ಮುಂಜಾನೆಯೂ, ನಡು ಮಧ್ಯಾಹ್ನವು, ಮುಸ್ಸಂಜೆಯೂ, ವಾಕಿಂಗ್‌ನಲ್ಲು, ಶೌಚಾಚಮನದ ವೇಳೆಯಲ್ಲು, ಪೂಜಾ ಮಂದಿರದಲ್ಲು, ಊಟದ ಟೈಮಲ್ಲು, ಕುಂತಲ್ಲು ನಿಂತಲ್ಲು ನಡಿಗೆ ಓಟದಲ್ಲು ಅತ್ತಲಿತ್ತ ನೋಡದಂತೆ, ಆಯಾಸವೇ ಆಗದಂತೆ ತಮ್ಮ ಅಗಾಧ ಅರಿವಿನ ಸಂಪತ್ತಿನ ಅಮೃತದ ಧಾರೆಯನ್ನು ಮೊಗೆದು ಮೊಗೆದು ನನಗಿಲ್ಲಿ ಉಣ ಬಡಿಸಿದ್ದಾರೆ. ಅವರ ಜ್ಞಾನದ ಅಪರಿಮಿತ ಉತ್ಸಾಹಕ್ಕೆ ನಾನಿಲ್ಲಿ ಬೆರಗಾಗಿದ್ದೇನೆ. ಅಂತು ಎರಡೆಂದರೂ ದಿನಗಳು ಮೂರು ನಾಲ್ಕಾಯಿತು! ನಾನೇನು ಮಾಡುವುದು? ಅವರೇ ನಿಲ್ಲಿಸದೆ ಮೇಲಿಂದ ಮೇಲೆ ಉಪನ್ಯಾಸಗಳ ನೀಡುತ್ತಿದ್ದಾರೆ! ಗುರುವಿನ ಪದತಲದಿ ಕುಳಿತು ಕೇಳುವ, ಕಂಠಗತ ಮನೋಗತ ಹೃದ್ಗತ ಆತ್ಮಗತ ಮಾಡಿಕೊಳ್ಳುವುದಷ್ಟೇ ನನಗಿದ್ದ ಆಫ್ಶನ್ನು! ಅವರು ಇಂದು ಮುಂಜಾನೆ ನಸುಕಿನಲ್ಲಿ ತಮ್ಮ ಅರವಿಂದೋಪನಿಷತ್ತಿನ ಉಪನ್ಯಾಸಗಳ ಕಡೆಯ ಅಧ್ಯಾಯದ ಟಿಪ್ಪಣಿ ನೀಡಿ ಮಂಗಳ ಹೇಳಿ ಅದೃಶ್ಯರಾದರು. ಹೀಗೆ ಯಾವತ್ತೂ ಅವರ ಓದುವಾಗಲೂ ನಮ್ಮ ಜೊತೆಯೇ ಕೂತು ಆತು ಕಿವಿಹಿಡಿದು ಮೈದಡವಿ ಸಂಭಾಷಿಸಿದಂತಿರುತ್ತದೆ. ಇಲ್ಲಿನ ಒಂದೊಂದು ಉಪನ್ಯಾಸಗಳ ಓದುವಾಗಲು ಅದು ನಿಮ್ಮ ಅನುಭವಕ್ಕೆ ಬಾರದೆ ಇರಲಾರದು.

ಅರವಿಂದ ಚೊಕ್ಕಾಡಿಯವರ ಮಾತಿನ ವೈಖರಿಯಲ್ಲಿ, ಬರಹದ ನಿಭಿಡತೆಯಲ್ಲಿ ಏನಿಲ್ಲ? ಅನ್ನೋದಕ್ಕಿಂತ, ಏನೇನೆಲ್ಲ ಇದೆಯಲ್ಲ! ಅನ್ನುವ ಸೋಜಿಗ ಮೂಡದಿರದು. ಅವರ ಬರಹದಲ್ಲಿ ಮೂಡದ ಯಾವುದೇ ಜ್ಞಾನ ಶಾಖೆಯ ಅಂಶವೂ ಇರದು. ವೇದಗಳಿಂದ ಪುರಾಣಗಳವರೆಗೆ, ಉಪನಿಷತ್ತುಗಳಿಂದ ಮಹಾಕಾವ್ಯಗಳವರೆಗೆ, ಶಾಸನಗಳಿಂದ ಜನಪದದವರೆಗೆ, ಪಂಪನಿಂದ ಕುವೆಂಪುವರೆಗೆ, ಕುಮಾರವ್ಯಾಸನಿಂದ ಕಾರಂತರವರೆಗೆ, ಹಳೆಗನ್ನಡದ ಛಂದೋ ಬದ್ಧತೆಯಿಂದ ಭಾವಗೀತೆಗಳವರೆಗೆ, ವಚನ ರಗಳೆಗಳಿಂದ ಹೊಸಗನ್ನಡದ ವಿವಿಧ ಕಾವ್ಯ ನಾಟಕ ಪ್ರಬಂಧಗಳವರೆಗೆ, ಕಾಳಿದಾಸನಿಂದ ಕಾರ್ನಾಡರವರೆಗೆ, ಶೂದ್ರಕನಿಂದ ಶ್ರೀರಂಗರವರೆಗೆ, ವ್ಯಾಸ ವಾಲ್ಮೀಕಿಯಿಂದ ಜಿನ ಬುದ್ಧರವರೆಗೆ, ಶಂಕರ ಬಸವರಿಂದ ವಿವೇಕ ರಮಣಶ್ರೀ ಅರವಿಂದರವರೆಗೆ, ಅತ್ತ ಕೆನಡಾದ ಮೂಲೆ ಅಲಸ್ಕಾದಿಂದ ಇತ್ತ ಆಸ್ಟ್ರೇಲಿಯಾದ ಬ್ಯಾರಿಯರ್ ರೀಫ್‌ವರೆಗೆ, ಉತ್ತರದ ರಷ್ಯಾದ ತುದಿಯಿಂದ ದಕ್ಷಿಣದ ಅಂಟಾರ್ಟಿಕದವರೆಗೆ, ಸಿಂಧೂವಿನ ಸನಾತನತೆಯಿಂದ ಇಂಕಾ ನಾಗರೀಕತೆವರೆಗೆ, ಈಜಿಫ್ಟನ ಗೂಢತೆಯಿಂದ ಪೆರುವಿನ ಪವಿತ್ರತೆಯವರೆಗೆ, ಮೆಕ್ಕಾದ ಮಹಮ್ಮದನಿಂದ ಜೆರೋಸಲೆಮ್ ಏಸು ಅಯೋಧ್ಯೆಯ ರಾಮನ ಭಕ್ತಿಯವರೆಗೆ, ಸಾಮ್ರಾಟ ಅಶೋಕನಿಂದ ಸೀಜರ್‌ವರೆಗೆ, ವಿಕ್ರಮಾದಿತ್ಯನಿಂದ ಶ್ರೀಕೃಷ್ಣದೇವರಾಯನವರೆಗೆ, ಅಕ್ಬರ್‌ನಿಂದ ಪುಲಿಕೇಶಿವರೆಗೆ, ಟೀಪುನಿಂದ ಕೊಡಗಿನ ಚಿಕ್ಕವೀರ ರಾಜೇಂದ್ರವರೆಗೆ, ಸಾಮಾನ್ಯನ ಕಡು ಬಡತನದಿಂದ ಮಧ್ಯಮ ವರ್ಗದ ಪಡಿಪಾಟಲುಗಳವರೆಗೆ, ರಾಜಕೀಯದ ಡಂಭಾಚಾರದಿಂದ ಅದನ್ನ ಅನಿವಾರ್ಯವಾಗಿ ನೈತಿಕವಾಗಿ ಸಶಕ್ತಗೊಳಿಸಬೇಕಾದ ಉಪಾಯಗಳವರೆಗೆ, ಅಧಿಕಾರಶಾಹಿಯ ಉಡದ ಹಿಡಿತದಿಂದ ಪ್ರಜಾಪ್ರಭುತ್ವದ ಮಹತ್ವದವರೆಗೆ, ರಾಜಕೀಯ ಸಾಮಾಜಿಕ ಹಣಕಾಸು ವ್ಯವಹಾರ ಶಿಕ್ಷಣ ಉದ್ಯೋಗ ಸ್ಪರ್ಧಾತ್ಮಕ ಸಾಮಾನ್ಯ ಜ್ಞಾನ ಏನನ್ನೇ ಕೇಳಿ ಅದನ್ನು ದಾಖಲೆಗಳ ಸಮೇತ ಸತ್ಯನಿಷ್ಟವಾಗಿ ಚಿಂತನಾತ್ಮಕವಾಗಿ ವೈಚಾರಿಕವಾಗಿ ಮಂಡಿಸಬಲ್ಲರು. ಶ್ರೋತೃ ಓದುಗರನ್ನು ಅರಿವಿನ ಕಡಲಿನಲ್ಲಿ ಏರುಪೇರಾಗದಂತೆ ಗುರಿ ಮುಟ್ಟಿಸಬಲ್ಲರು. ವೇದಿಕೆಯ ಮೇಲೆ ಉಪನ್ಯಾಸ ಅಥವಾ ಭಾಷಣಕ್ಕಿಳಿದಿರಲಿ, ಮಕ್ಕಳ ಮುಂದೆ ಪಾಠ ಮಾಡುತ್ತಿರಲಿ, ಗೆಳೆಯರ ಬಳಗದ ಚರ್ಚಾಕೂಟದಲ್ಲಿರಲಿ, ಜ್ಞಾನ ವಿಜ್ಞಾನ ತಂತ್ರಜ್ಞಾನದ ಸಂವಾದಗಳಲ್ಲಿರಲಿ, ಪುಸ್ತಕದ ಬಿಡುಗಡೆಯ ವಿಮರ್ಶೆಯಿರಲಿ, ಶೈಕ್ಷಣಿಕ ಸುಧಾರಣೆಯ ಅವಲೋಕನದಲ್ಲಿರಲಿ, ಎಲ್ಲೆಲ್ಲಿಯೂ ಹದವರಿತ ಸಂಯಮಪೂರಿತ ಮಾತು ಹಾಗೂ ಸಂವಹನ ಮಾಡುವಂತಹವರು. ಯಾವ ಪದ ವಾಕ್ಯವು ಅನುಚಿತ ಎನ್ನಿಸದಂತೆ ಎಚ್ಚರಿಕೆ ವಹಿಸಿ ಕೇಳುಗರ ಬುದ್ಧಿ ವಿಕಾಸಪಡಿಸಬಲ್ಲರು.



ಯಾರ ವಿಚಾರವೇ ಇರಲಿ ಅದು ಹಿರಿಯರಾಗಿರಲಿ, ಕಿರಿಯರಾಗಿರಲಿ, ವಿದ್ವಾಂಸರಾಗಿರಲಿ, ಸಾಮಾನ್ಯರಾಗಿರಲಿ, ಅರಿವಿನವರಾಗಿರಲಿ ಉರಿಯುವವರಾಗಿರಲಿ, ಕೇಳುಗರಾಗಿರಲಿ ಪ್ರಶ್ನಿಸುವವರಾಗಿರಲಿ, ರಾಜಕೀಯದವರಾಗಿರಲಿ ವ್ಯಾಪಾರದವರಾಗಿರಲಿ, ಇನ್ನಿತರೆ ಯಾವ ವೃತ್ತಿಯವರೇ ಆಗಿರಲಿ, ಫುಲ್ ಟೈಂ ಸಮಾಜ ಸುಧಾರಣಾವಾದಿಗಳಾಗಿರಲಿ, ಪಾರ್ಟ್ ಟೇಂ ಘೋಷಣೆ ಕೂಗುವ ಹೊಟ್ಟೆಪಾಡಿನವರಾಗಿರಲಿ, ವಿದ್ಯಾರ್ಥಿಗಳಾಗಿರಲಿ, ಮನೆಯ ಮಕ್ಕಳೇ ಆಗಿರಲಿ, ಬಂಧುಗಳೇ ಆಗಿರಲಿ, ಮುಖ ಪರಿಚಯದವರೆ ಆಗಿರಲಿ, ಎಲ್ಲರ ಮಾತುಗಳನ್ನು, ಭಾವನೆಗಳನ್ನು, ವಿಚಾರಗಳನ್ನು ಕೂಲಂಕುಶವಾಗಿ ಕೇಳುತ್ತಾರೆ, ಓದುತ್ತಾರೆ. ಆನಂತರವೇ ಪ್ರತಿಕ್ರಿಯಿಸುತ್ತಾರೆ. ಯಾರನ್ನೂ ಅವರವರ ಅರಿವು ಮತ್ತಿತರ ಸ್ಥಾನ ಮಾನಗಳ ಮೇಲೆ ಅಳೆದು ತೂಗಿ ಮಾತಾಡುವ ಜಾಯಮಾನದವರು ಅರವಿಂದರಲ್ಲ. ಹಿರಿಯರಾದ ನೀಲಾವರ ಸುರೇಂದ್ರ ಅಡಿಗರಿಗೆ, ಪೂವಪ್ಪ ಕಾಣಿಯೂರು, ಗಿರಿಧರ ಗೌಡರಿಗೆ ಕೊಡುವಷ್ಟೆ ಆದ್ಯತೆ ಹಾಗೂ ಮಹತ್ವವನ್ನು ಕಿರಿಯ ಗೆಳೆಯರಾದ ಲಕ್ಷ್ಮೀಶ ಗಬಲಕ್ಕ ಹಾಗು ಮಹೇಶ ಪುಚ್ಚಪ್ಪಾಡಿಯವರಿಗು ಕೊಡುತ್ತಾರೆ. ತಂದೆ ಸಮಾನರಾದ ಹೆಗ್ಡೆಯವರ ಒಂದು ಕರೆಗೆ ಆಟಿಡೊಂಜಿ ದಿನಕ್ಕೆ ಬಸದಿಯ ಕಾರ್ಯಕ್ರಮಕ್ಕೆ ಹೋಗಿ ಉಪನ್ಯಾಸ ನೀಡುವಂತೆಯೇ, ಪುಚ್ಚಪ್ಪಾಡಿಯನ್ನ ಯುವ ನಾಯಕ ಎಂದು ಹುರಿದುಂಬಿಸಲು ಮೊಗ್ರ ಶಾಲೆಯ ಗಾಂಧಿ ಚಿಂತನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಕರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳನ್ನು ನೀಡುತ್ತಾರೆ. ಮೂಡುಬಿದಿರೆಯ ಪಿಂಚಣಿದಾರರ ಸಂಘದ ಸಮ್ಮೇಳನದಲ್ಲಿ ನಿವೃತ್ತರಿಗೆ ಜೀವನೋತ್ಸಾಹ ತುಂಬಿ ನಕ್ಕು ನಗಿಸಿದಂತೆಯೇ ಸಹಪಾಠಿ ಚಿನ್ಮಯರಾಜ್‌ನ ವೈಕುಂಠ ಸಮಾರಾಧನೆ ಸ್ಮರಣೆಯಲ್ಲಿ ಭಾವಪರವಶರಾಗಿ ಬಾಲ್ಯ ನೆನೆಯುತ್ತಾ ಕಣ್ಣೀರಾಗುತ್ತಾರೆ. ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಕೆಕೆ ಮೂವೀಸ್‌ನವರ ಕನ್ನಡ ಶಾಲೆ ಉಳಿಸುವಿಕೆಯಲ್ಲಿ ಕಾರ್ಯಯೋಜನೆಗಳ ಚರ್ಚಿಸಿದಂತೆ ಚಿತ್ರದುರ್ಗದ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಗಾಂಧಿವಾದದ ಪ್ರಸ್ತುತತೆ ಕುರಿತು ದಾಖಲಾರ್ಹವಾದಂತಹ ತಮ್ಮ ಉಪನ್ಯಾಸ ನೀಡುತ್ತಾರೆ. ತಮ್ಮ ಬಾಲ್ಯದ ಭಾವಕೋಶ ಶ್ರೀಮಂತಗೊಳಿಸಿದ ಸುಳ್ಯವನ್ನು ಸ್ಮರಿಸುತ್ತಾ ಚೊಕ್ಕಾಡಿಯ ಹೈಸ್ಕೂಲ್ ನೆನಪುಗಳ ಜೀಕಿನಲ್ಲಿ ತಮಗೆ ಕಲಿಸಿದ ಗುರುಗಳಾದ ತಿರುಮಲೇಶ್ವರ ಉಪಾಧ್ಯಾಯರು, ಸುಲೋಚನ ಉಪಾಧ್ಯಾಯರು, ನಾಯರ್ಕಲ್ಲು ಜನಾರ್ಧನ ಉಪಾಧ್ಯಾಯರು, ಓಣಿಯಡ್ಕ ಸುಬ್ರಾಯ ಉಪಾಧ್ಯಾಯರುಗಳ ಸ್ಮರಿಸಿ ಭಾವುಕರಾಗುತ್ತಾರೆ. ಈ ಶಾಲೆಯಲ್ಲೆ ತಮ್ಮ ಜೀವನ ಸಂಗಾತಿಯಾದ ಶ್ರೀಮತಿ ಪ್ರಮೀಳಾ ಚೊಕ್ಕಾಡಿಯವರು ದೊರೆತ ಹಾಗೂ ಅವರೊಂದಿಗಿನ ಸಾಂಗತ್ಯ ಯಾನವನ್ನು ನೆನೆಯುತ್ತಾರೆ, ತಮ್ಮ ವೃತ್ತಿಯ ಜೊತೆಗಾರರ, ಪ್ರಾಂಶುಪಾಲರ ಶಾಲಾ ಕಾಲೇಜಿಗೆ ಭಾಷಣಕ್ಕೆ ಹೋದಂತೆಯೇ ಸರಳವಾಗಿ ರಾಜಕಾರಣಿಗಳಾದ ವಸಂತ ಬಂಗೇರರವರ ಹಾಗೂ ಕಲ್ಲಡ್ಕ ಪ್ರಭಾಕರ ಭಟ್‌ರವರ ಕಾಲೇಜುಗಳಿಗೂ ಹೋಗಿ ಉಪನ್ಯಾಸಗಳನ್ನು ನೀಡುತ್ತಾರೆ. ಕುವೆಂಪು, ಸುಬ್ರಾಯ ಚೊಕ್ಕಡಿಯವರ, ಎಚ್.ಎಸ್.ವೆಂಕಟೇಶಮೂರ್ತಿಗಳ ಅಧ್ಯಯನ ಮಾಡಿದಂತೆಯೇ ಗೆಳೆಯರಾದ ವಾಸುದೇವ ನಾಡಿಗರನ್ನು ಓದುತ್ತಾರೆ. ಪಂಪ ಅಲ್ಲಮರಂತೆಯೇ ಕೂಲಂಕುಶವಾಗಿ ಮುಷ್ತಾಕ್‌ರ ಪುಸ್ತಕವನ್ನು, ಪುಟ್ಟಗೌರಿ ಮಕ್ಕಳ ಹೊತ್ತಿಗೆಯನ್ನು ಓದುತ್ತಾರೆ. ನರಹರಿಯವರ ಶೈಕ್ಷಣಿಕ ಪುಸ್ತಕದಷ್ಟೇ ಪ್ರೀತಿಯಿಂದ ಸುದರ್ಶನರವರ ಹಸಿರು ಹಂಪಿಯ ಸಂಶೋಧನಾತ್ಮಕ ಕಥೆಗಳಿಗೆ ಸ್ಪಂದಿಸುತ್ತಾರೆ. ಗೌರವಾನ್ವಿತರಾದ ಅಂಡಾರು ಗುಣಗೋಪಾಲ ಹೆಗ್ಡೆಯವರ ಕಂಡಷ್ಟೇ ಪ್ರೀತಿಯಿಂದ ನಿನ್ನೆ ಮೊನ್ನೆಯ ಪರಿಚಿತ ಈ ಉಮೇಶನನ್ನು ಕಾಣುತ್ತಾರೆ.

ಪ್ರತಿ ಅಕ್ಷರಕ್ಷರದ ವಿವೇಕ ಉಳ್ಳವರು ಅರವಿಂದರು. ಎಲ್ಲಿಯೂ ಅನಗತ್ಯ ಮಾತಾಡುವವರೇ ಅಲ್ಲವೆಂದು ನೆನೆದೆ; ಬರೆಯುವವರಂತೂ ಮೊದಲೇ ಅಲ್ಲ. ಹಾಗಾಗಿ ಅವರ ಕೇಳುವುದು ಮತ್ತು ಓದುವುದು ಎಲ್ಲ ಸಹೃದಯರಿಗೂ ಉಪಯೋಗಾರ್ಹ. ಅಕ್ಷರಗಳಿಗೆ ಯಾವತ್ತೂ ಘನತೆ ಗೌರವ ನೀಡುತ್ತಾರೆ. ಎಲ್ಲರ ಬರಹಗಳಿಗೂ ಸಮಾನ ಪ್ರಾಧಾನ್ಯತೆಯ ನಿಡುತ್ತಾರೆ; ಅದು ಒಮ್ಮೆ ಅಷ್ಟೆ! ಗಟ್ಟಿಯಿತ್ತೋ, ಬರಹದಲ್ಲಿ ಸ್ವಂತ ಮೆದುಳಿತ್ತೋ ಮಾರ್ಗದರ್ಶಿಸುತ್ತಾರೆ. ಬುರುಡೆ ಅಂತ ಗೊತ್ತಾಯ್ತೋ ಎಲ್ಲಿಯದೋ ಕಾಫಿ ಎತ್ತಿದಾರೆ ಅಂತ ತಿಳಿತೋ ಜನ್ಮ ಜಾಲಾಡಿ ಮರ್ಯಾದೆ ತೆಗೆವ ಮಟ್ಟಕ್ಕೆ ಹೋಗೋದಿಲ್ಲ ಅವರು! ಅಷ್ಟೇ ನಯ ವಿನಯವಾಗಿ ವೈಯುಕ್ತಿಕವಾಗಿಯೇ ತಿದ್ದಿಕೊಳ್ಳಲು ಹೇಳ್ತಾರೆ. ಬಗ್ಗದೆ ಕಿರಿಕಿರಿ ಪಿರಿಪಿರಿ ಮಾಡಿದರೆ ಹೇರಾಪೇರಿ ಝಾಡಿಸಿ ತಾರಾಮಾರ ಮಾಡಿ ಬಿಸಾಕುತ್ತಾರೆ! ಅಕ್ಷರಕ್ಕೆ, ಜ್ಞಾನದ ಶಿಸ್ತಿಗೆ ಅವರು ಕೊಡುವ ಗೌರವವಿದು. ಸಮಯವೇ ಬಹಳ ಬೆಲೆಯುಳ್ಳದ್ದು; ಅರವಿಂದ ಚೊಕ್ಕಾಡಿಯವರ ಸಮಯವೆನ್ನುವುದು ಬಹಳ ಬಹಳ ಬೆಲೆಯುಳ್ಳದ್ದು. ದಿನಕ್ಕೆ ಎರಡು ಮೂರು ಕಡೆ ಉಪನ್ಯಾಸಗಳ ಕೊಟ್ಟು, ಸಂಜೆಗೊ ರಾತ್ರಿಗೋ ಮನೆ ತಲುಪಿ, ರಾತ್ರಿ ಮತ್ತೆ ಮಕ್ಕಳಿಗೆ ಪಾಠ ಮಾಡುವ ಶ್ರಮ ಜೀವಿಗಳು. ಬಹುಶಃ ಅನಿಸುತ್ತೆ ನಮ್ಮ ದಿನದ ಇಪ್ಪತ್ನಾಲ್ಕು ಗಂಟೆಗಳು ಅವರಿಗೆ ನಲವತ್ತೆಂಟು ಗಂಟೆಗಳಾಗಿ ಪರಿವರ್ತನೆ ಆಗಿದ್ದಾವೋ ಏನೋ! ಇಲ್ಲ ನಮಗೆ ಸಮಯ ಬೇಗ ಬೇಗ ಓಡಿ ಅರವಿಂದರಿಗೆ ನಿಧಾನ ಓಡುತ್ತಿದೆಯೋ ಏನೋ!! ಹಾಗಾಗಿ ಅವರ ಬಳಿ ಜೋಕ್
ಮಾಡಲು ಅಗತ್ಯ ಹುಷಾರಿ ಇರಬೇಕು. ಜೋಕ್ ಆದರೂ ಅವರಿಂದ ಅದು ಒಂದು ಶುದ್ಧ ಅರಿವಿನ ವಿಕಾಸವೇ ಆಗಿರುತ್ತದೆ!

ಆಧಾರ ರಹಿತವಾಗಿ ಮಹಾತ್ಮ ಗಾಂಧಿಯ ಬಗ್ಗೆಯೇ ಇರಲಿ, ನಾಡಿನಲ್ಲಿ ಉಳಿದಿರುವ ಹೆಸರಲ್ಲಿರುವ ಗಾಂಧಿಗಳ ಬಗ್ಗೆಯೇ ಇರಲಿ, ವೀರ ಸಾವರ್ಕರ್ ದೇಶಭಕ್ತಿ ಕುರಿತಂತೆಯೇ ಇರಲಿ, ನೆಹರೂರವರ ಭಾರತ ವಿಕಾಸದ ಪರಿಕಲ್ಪನೆಯೇ ಇರಲಿ, ಭಗತ್ ಸಿಂಗ್ ಕ್ರಾಂತಿಯದ್ದೇ ಇರಲಿ, ಸುಭಾಷ್‌ಚಂದ್ರ ಭೋಸ್‌ರ ಸೈನಿಕ ಕಾರ್ಯಾಚರಣೆಯ ಯೋಜನೆಯದ್ದೇ ಇರಲಿ, ಅತಿರಂಜಿತವಾದ ಮಹಾತ್ಮರ ಬ್ರಹ್ಮಚರ್ಯವೇ ಇರಲಿ, ಅವರ ಸ್ತ್ರೀಯರ ಕುರಿತ ಹಠಮಾರಿ ಧೋರಣೆಗಳೇ ಇರಲಿ ಪರಾಂಬರಿಸದೆ ಮಾತಾಡಿದರೆ, ಬರೆದು ಬಿಟ್ಟರೆ ಖಂಡಿತ, ಖಂಡಿಸದೆ ಸಮಜಾಯಿಷಿ ನೀಡದೆ ಇರಲಾರರು. ಸತ್ಯ ಹುಡುಕದೆ, ತಿಳಿಯದೆ ಮಾತಾಡಲಾರರು. ಈ ನಿಟ್ಟಿನಲ್ಲಿ ಅವರು ಸದಾ ಸಂವಾದ ನಿರತರೇ ಹೊರತು ವಾಗ್ವಾದ ನಿಪುಣರಂತೂ ಅಲ್ಲವೇ ಅಲ್ಲ. ಬಹುಶಃ ಅವರ ಜೊತೆ ಸಾಕ್ಷಿ ಇಲ್ಲದೇ ಮಾತಾಡಬಹುದಾದ ಏಕೈಕ ವ್ಯಕ್ತಿಯೆಂದರೆ ಅವರ ಶ್ರೀಮತಿಯವರೊಬ್ಬರೇ ಇರಬಹುದೇನೋ! ತಾರ್ಕಿಕತೆಯಿಲ್ಲದೆ, ಬುದ್ಧಿಯ ಪರಿಪಕ್ವತೆಯ ಸುಸ್ಥಿತಿಯಲ್ಲಿಲ್ಲದೆ ಬಡಬಡಿಸಿದರೆ, ತಡವಿಲ್ಲದೆ ತಡಬಡಾಯಿಸುವಂತೆ ಅವರ ತಲೆಬುಡವಿಲ್ಲದ ಮಾತು ವಿಚಾರಗಳಿಗೆ ತಪರಾಖಿ ಕೊಡದೆ ಬಿಡುವವರಲ್ಲ.

ಅರವಿಂದರ ವಾಗ್ಝರಿ ಅದು ಸರಸ್ವತಿಯ ವರದಾನವೇ ಸರಿಯೇನೋ? ಅರವಿಂದರು ಸ್ವಂತ ಶ್ರಮದಿಂದಲೇ ಅವರ ಅಕ್ಷರಲೋಕವನ್ನು ಕಟ್ಟಿಕೊಂಡಿದ್ದಾರೆ! ಅವರಿಗೆ ಸುಮ್ಮನೆ ಬ್ರಹ್ಮ ಪ್ರತ್ಯಕ್ಷನಾಗಿ ‘ಭಕ್ತ ನಿನಗೆ ಇನ್ನು ಹೆಚ್ಚಿನ ಜ್ಞಾನ ಪ್ರಾಪ್ತಿ ಮಾಡುವೆ!’ ಎಂದರು, ಇವರು ‘ಅದೆಲ್ಲ ನಂಗೆ ಬೇಕಿಲ್ಲ ಕಾಣಿ, ಗೊತ್ತುಂಟು ನಾ ಪಡ್ಕೋತೇನೆ. ನಿಮಗೇನಾದರೂ ಸಮಸ್ಯೆ ಉಂಟೋ?’ ಎಂದು ಆ ಬ್ರಹ್ಮನಿಗೇ ಲೋಕದಿ ಅವ ಮಾಡಬೇಕಿರುವ ಕರ್ಮಗಳ ಭಾಷಣ ಮಾಡುವಂತಹವರು! ಒಮ್ಮೆ ಇವರ ಹಿರಿಯರು, ಇವರನ್ನು ಬಹುವಾಗಿ ಸಾಹಿತ್ಯ ಮತ್ತಿತರೆ ವೇದಿಕೆಗಳ ಮೂಲಕ ಬೆಳೆಸಲು ಶ್ರಮಿಸಿದ ಅಂಡಾರು ಗುಣಗೋಪಾಲ ಹೆಗ್ಡೆಯವರುಗಳ ಜೊತೆ ಫೋನ್‌ನಲ್ಲಿ ಮಾತಾಡುವಾಗ ‘ಅರವಿಂದರು ಬಹಳ ಓದುಗರು, ಉತ್ತಮ ಪುಸ್ತಕ ಇದೆ ಎಂದರೆ ಅದೆಲ್ಲೆ ಇರಲಿ ತರಿಸಿಕೊಂಡು, ತಂದೋ ಓದದೇಇರಲಾರರು. ಅವರ ಓದಿನ ಕುತೂಹಲ ಅಪಾರವಾದುದು. ನಾನು ಅವರನ್ನ ಸೇವೆಗೆ ಸೇರಿಸಿಕೊಂಡ ಮೊದಲಿಂದಲು ನೋಡಿದ್ದೇನಲ್ಲ; ಕ್ಷಣ ಮಾತ್ರವನ್ನು ಬಿಡುವೆಂದು, ತಮ್ಮ ಆಯಾಸ ಪರಿಹಾರಾರ್ಥವೆಂದು, ಕಳೆದವರಲ್ಲ. ವ್ಯರ್ಥ ಮನರಂಜನೆಗೆ ಮನ ಮಾಡಿದವರಲ್ಲ. ಓದು ಬರಹ ಚಿಂತನ ಮಂಥನವೇ ಅವರಿಗೆ ವಿರಾಮ ಕಳೆವ ಸಂಗಾತಿಗಳಾಗಿವೆ.’ ಎಂದು ಹೇಳಿದ್ದು ನಾನೆಂದು ಮರೆಯೋಲ್ಲ. ಬಹಳ ಶ್ರದ್ಧೆ ಶ್ರಮದಿಂದ ಅವರು ತಮ್ಮ ಅರಿವನ್ನು ಬೆಳೆಸಿಕೊಳ್ಳುತ್ತಾ ಬಂದಿರುತ್ತಾರೆ. ಈ ಮಟ್ಟದ ಶ್ರೇಷ್ಠ ಉಪನ್ಯಾಸಗಳ ನೀಡುವ ಮೂಲಕ ಕರ್ನಾಟಕದ ಪ್ರತಿ ಜಿಲ್ಲೆ ತಾಲೂಕಿನಲ್ಲೂ ಅಭಿಮಾನಿ ಓದುಗರನ್ನು, ಕೇಳುಗರನ್ನು ಹೊಂದಿದ್ದಾರೆ ಎಂದರೆ ಅದಕ್ಕೆ ಕಾರಣ ಅವರ ಅನವರತ ಅಧ್ಯಯನ ಹಾಗೂ ಬರವಣಿಗೆ. ಇವರ ಮಾತು ಕೇಳುವುದು ಮತ್ತು ಬರಹಗಳ ಓದುವುದೇ ನೆತ್ತಿಗೆ ಅರಿವಿನ ಬುತ್ತಿ. ಹೃದಯಕ್ಕೆ ಸಮಾಧಾನದ ಶಕ್ತಿ. ಈ ಹಿಂದೆ ಇದ್ದಂತಹ ಕನ್ನಡದ ತರಾಸು, ಅನಕೃ, ವೈಎನ್ಕೆ, ಅನಂತಮೂರ್ತಿ, ಲಂಕೇಶ್, ಬನ್ನಂಜೆಯವರುಗಳಂತೆ ಮಾತಿನ ಜೊತೆ ಜೊತೆ ವ್ಯಕ್ತಿತ್ವ ಅರಳಿಸುವ ಕಿರು ಕಥೆ, ಉದ್ಘಾರಗಳು ಹಾಗೂ ಸೂಕ್ತ ನಾನಾ ಭಾಷೆಯ ಗಾದೆ ಪಡೆನುಡಿಗಳ ಉದಾಹರಿಸುತ್ತಾ ಶ್ರೋತೃಗಳಿಗೆ ಜ್ಞಾನದ ಸುಗಂಧ ಪಸರಿಸಬಲ್ಲರು. ಆಶಿಷ್ ನಂದಿ, ರಾಜೇಂದ್ರ ಚೆನ್ನಿ, ಪುರುಷೋತ್ತಮ ಬಿಳಿಮಲೆ, ರಹಮತ್ ತರೀಕೆರೆ, ರಂಜಾನ್ ದರ್ಗಾ, ಬಿ.ಎಮ್.ಹನೀಫ್, ನಟರಾಜ ಹುಳಿಯಾರರಂತೆ, ಒಂದು ಸಾಮಾನ್ಯ ವಿಷಯದಲ್ಲಿಯೂ ಅಪೂರ್ವವಾದುದನ್ನು ಕಂಡು ಅದನ್ನು ಎಲ್ಲರಿಗೂ ಅಗತ್ಯವಾಗಿಸುವ ರೀತಿಯಲ್ಲಿ ಚಿಂತಿಸಬಲ್ಲವರು ಮತ್ತು ಮಾತು, ಬರವಣಿಗೆ ಮೂಲಕ ದಾಟಿಸಬಲ್ಲವರು. ಒಂದು ಹುಲ್ಲುಕಡ್ಡಿಯನ್ನು ವ್ಯರ್ಥ ಎಂದು ಭಾವಿಸದ ಆಚಾರ್ಯ ವಿನೋಭಾ, ಜೆ.ಕೃಷ್ಣಮೂರ್ತಿ, ಗುರು ನಾರಾಯಣರಂತೆ ಎಲ್ಲ ಜನವರ್ಗದವರನ್ನು ಅರವಿಂದರು ತಮ್ಮ ಉಪನ್ಯಾಸಗಳಿಂದ ಪ್ರಭಾವಿಸುತ್ತಿರುವರು.

ಗಾಂಧೀಜಿಯವರ ಬಗ್ಗೆ ಮಾತಾಡುವಾಗ ಬರೆಯುವಾಗ ಅರವಿಂದರಂತು ಪರಕಾಯ ಪ್ರವೇಶ ಮಾಡಿಬಿಡುತ್ತಾರೆ. ಗಾಂಧಿಯವರನ್ನ ಆವಾಹಿಸಿಕೊಂಡು ಬಿಡುತ್ತಾರೆ. ಈ ನಲವತ್ತೊಂದು ಉಪನ್ಯಾಸಗಳ ಮಾಲಿಕೆಯಲ್ಲಿ ಹತ್ತರಷ್ಟು ಉಪನ್ಯಾಸಗಳು ಮಹಾತ್ಮರ ಕುರಿತಂತೆಯೇ ಇವೆ. ಆದರೆ ಎಲ್ಲಿಯೂ ಅವರು ಒಂದು ಕಡೆಯ ವಿಷಯ ಇನ್ನೊಂದು ಕಡೆ ಮಂಡನೆಗೆ ಬಳಸಿಕೊಳ್ಳುವುದಿಲ್ಲ. ಸತ್ಯ ಅಹಿಂಸೆ ಸತ್ಯಾಗ್ರಹ ಎಂಬ ಗಾಂಧೀಜಿಯವರ ತಾತ್ವಿಕ ಹಾಗು ಸದಾ ಪ್ರಯೋಗಶೀಲವಾದಂತ ವಿಚಾರಗಳ ಕುರಿತು ಮಾತು ಆರಂಭಿಸಿದರು ಅವರುಗಳು ಅದಕ್ಕೆ ಕೊಡುವ ಮಹಾತ್ಮರ ಜೀವನ ಉದಾಹರಣೆಗಳು ಭಿನ್ನ ವಿಭಿನ್ನ. ಅದಕ್ಕೆ ಗಾಂಧೀಜಿಯವರ ೭೯ ವರ್ಷಗಳ ಜೀವನದ ೫೩ ಸಾವಿರಕ್ಕು ಮಿಕ್ಕಿದ ಸ್ವಂತ ಬರಹಗಳ ಅಧ್ಯಯನವನ್ನು ವ್ಯಾಪಕವಾಗಿ ಧೇನಿಸುತ್ತಾರೆ. ಇನ್ನು ನಾನು ಗಾಂಧಿಯ ಓದಬೇಕು ಸಾಗರದಂತಹ ಅವರಲ್ಲಿ ನಾನು ತಿಳಿದಿರುವುದು ಒಂದು ಹನಿ ಮಾತ್ರವೆಂದು ವಿನಯ ತೋರುತ್ತಾರೆ. ಗಾಂಧಿಯ ಉಪನ್ಯಾಸಗಳು ಈ ಕೃತಿಯಲ್ಲಿ ವಿಶೇಷ ಮೌಲಿಕ ಸ್ಥಾನ ಗಳಿಸಿಕೊಳ್ಳುತ್ತವೆ.

ಮಾತಿನಂತೆ ಬರಹದಲ್ಲು ರಾಜಿ ಆಗುವವರಲ್ಲ ಅರವಿಂದರು. ಲೋಕಲ್ ಪೇಪರ್ ಇರಲಿ ಸ್ಟೇಟ್ ಪೇಪರ್ ಇರಲಿ ಅಷ್ಟೇ ನಿಷ್ಠೆ ಕಾಳಜಿಯಿಂದಲೇ ಯಾವುದೇ ಪದಬಳಕೆ ಮತ್ತು ಭಾಷೆಯಲ್ಲಿ ರಾಜಿಮಾಡಿಕೊಳ್ಳದೆ ಬರೆಯುತ್ತಾರೆ. ಪ್ರಜಾವಾಣಿಗೆ ಬರೆದಷ್ಟೇ ಶ್ರದ್ಧೆಯಿಂದ ಕರಾವಳಿಯ ಜೈ ಕನ್ನಡಮ್ಮನಿಗೆ ಬರೆಯುತ್ತಾರೆ. ಅಲ್ಲದೇ ಪತ್ರಿಕೆಯ ದಿಕ್ಕುದೆಸೆಗಳನ್ನು ಸಿದ್ದಾಂತಗಳನ್ನು ಜನಪರ ಪ್ರಜಾಸತ್ತಾತ್ಮಕ ಕಾಳಜಿ ಇರದಿದ್ದರೆ ಯಾವ ಮುಲಾಜಿಲ್ಲದೆ ಅದೇ ಪತ್ರಿಕೆಗೆ ಬರೆದು ಪ್ರತಿಭಟನೆ ದಾಖಲಿಸುತ್ತಾರೆ. ಇವರ ಬರಹಗಳಿಗಾಗಿ ಪತ್ರಿಕೆಗಳು ಮುಂಚಿತವಾಗಿಯೇ ಬೇಡಿಕೆ ಇಡುತ್ತವೆ ಎಂದರೆ ಅವರ ಬರಹದ ಪ್ರಖರತೆ ಹಾಗು ಸತ್ಯಸಂಧತೆಯನ್ನು ನಾವು ಅರ್ಥಮಾಡಿಕೊಳ್ಳಬಹುದು. ಅರವಿಂದರು ಸುಮಧುರ ಸುಗಂಧಿತ ಅರಳಿದ ಹೂ ಇದ್ದಂತೆ ಅರಿವಿನ ಆಕಾಂಕ್ಷಿಗಳಿಗೆ! ದೂರದಿಂದ ನೋಡಿದರೆ ಸುಂದರ ಹೂಗುಚ್ಚದಂತೆ ಕಾಣುವ ಇವರು ಬಹು ವಿಚಾರಗಳ ಗಣಿ. ಇವರ ನೋಡಿ ಹೋದರೆ, ಹಾಗೆ ಹೋದವರಿಗೇನೂ ಲಾಭವಿಲ್ಲ. ಇವರಿಗೂ ನಷ್ಟವಿಲ್ಲ. ದುಂಬಿ ಜೇನ್ನೊಣಗಳಂತೆ ಬಳಿ ಸಮೀಪಿಸಿ ತುಸು ಜ್ಞಾನ ಸೌರಭ ಹೀಂಟಿಕೊಂಡು ಹೋದರೆ ಅದು ಒಳಿತೆ. ಆದರೆ ಇನ್ನು ಹೂವಿನ ಮಕರಂದ ಹೀರುತ್ತಾ ಹೀರುತ್ತಾ ಒಳ ಹೋದರೆ ಹೂವಿನಲ್ಲಿ ತುಂಬಾ ಸವಿಜೇನು ದೊರೆಯುವಂತೆ ಅರವಿಂದರ ಸಾತತ್ಯದಲ್ಲಿ ನಿರಂತರ ಇದ್ದರೆ ಜ್ಞಾನನಿಧಿಯಾಗುವುದರಲ್ಲಿ ಸಂಶಯವೇ ಇಲ್ಲ. ಅವರ ಸಂಪರ್ಕಕ್ಕೆ ಬಂದು ನಂತರ ಬಿಟ್ಟವ ಕೆಟ್ಟ, ಅವರ ಹಿಡುಕೊಂಡವ ಅರಿವಿನ ನೆಲೆ ಮುಟ್ಟುವ! ಅರಿವಿನ ಜೇನ ಸವಿಯಲು ಬಹು ತಾಳ್ಮೆಯಿಂದ ಅವರನ್ನ ಅವಲೋಕಿಸುತ್ತಾ, ಓದುತ್ತಾ, ಕೇಳುತ್ತಾ ಇರಬೇಕು. ಇದೊಂತರ ಗುರು ಶಿಷ್ಯ ಸಂಬಂಧದಂತೆ. ಬಸವಣ್ಣನವರ ಶರಣಸತಿ ಲಿಂಗಪತಿ ಭಾವದಂತೆ, ಅಕ್ಕನವರ ಮಲ್ಲಿಕಾರ್ಜುನನ ಹುಡುಕಾಟದಂತೆ!



ಅವರನ್ನು ಮಾತಾಡಿಸಲು ಸಾಮಾನ್ಯವಾಗಿ ಸಿದ್ಧತೆ ಬೇಕಿಲ್ಲ. ಪರಿಚಿತರಾದರೆ ಅವರೇ ಮೊದಲು ‘ನಮಸ್ತೆ’ ಅಂತಾರೆ. ಆದರೆ ಅವರ ಬಳಿ ಯಾವುದೇ ವಿಚಾರದಲ್ಲಿ ಸಂವಾದಿಸುವಾಗ ಮಾತ್ರ ಸಿದ್ಧತೆ ಇರಲೇಬೇಕು. ನೀವು ಯಾವುದೇ ಆಕಾಂಕ್ಷೆಯನ್ನು ಹೊಂದಿರಿ; ಅವರ ಓದು ಚಿಂತನ ಮಂಥನಕ್ಕೆ ಏನೋ ಪ್ರಶ್ನೆ ಮಾಡುವ ಅಂತ ಮಾಡಿದಿರಿ ಅಲ್ಲಿಗೆ ಮುಗೀತು ನೀವು ಬಿಟ್ಟರು ಅವರು ನಿಮ್ಮ ಬಿಡೋದಿಲ್ಲ. ವಿಕ್ರಮಾದಿತ್ಯ ಬೇತಾಳನಂತೆ! ಹುಂ, ಅದು ಅವರ ವೈಚಾರಿಕ ನಿಷ್ಟೆ. ಅವರನ್ನ ಸುಮ್ಮನೇ ಗಮನಿಸುತ್ತಾ ಆಲಿಸುತ್ತಾ ಇದ್ದರೆ ಸಾಕು ಗೊತ್ತಿಲ್ಲದೇ ಅರಿವಿನ ವೈಭವ ನಿಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಸಂತಸದ ಬೆಳಕು ನಿಮ್ಮಲ್ಲಿ ಮೂಡಲು ಮೊದಲಾಗುತ್ತದೆ. ನಿಜವಾದ ಜ್ಞಾನದ ಆರಾಧಕರಿಗೆ ಬದುಕಿನ ಉತ್ಸಾಹಿಗಳಿಗೆ ಇವರು ಒಂದು ಕೈಮರ, ಕೈದೀವಿಗೆ ಇದ್ದಂತೆ. ನಿನ್ನರಿವೆಂಬುದು ಜ್ಞಾನರತ್ನ ಕಾಣಾ ರಾಮನಾಥ ಎಂಬ ದೇವರ ದಾಸೀಮಯ್ಯನವರಂತೆ ಸದಾ ಜಗದ ಅರಿವನ್ನ ತಿಳಿಯಲು ಹಾಗೂ ತಿಳಿಸಲು ಹಂಬಲಿಸುವ ನಮ್ಮ ನಡುವಿರುವ ಏಕೈಕ ವ್ಯಕ್ತಿಯೆಂದರೆ ಅದು ಅರವಿಂದರು. ಇವರು ಶಿವರಾಮ ಕಾರಂತರಂತೆ ಒಂದು ವಿಶ್ವವಿದ್ಯಾನಿಲಯ ಮಾಡುವಷ್ಟು ಕೆಲಸ ಮಾಡುವ ಸನ್ನಾಹದಲ್ಲಿದ್ದಾರೆ. ಅಷ್ಟು ಜ್ಞಾನ ಸಂಪನ್ಮೂಲವು ಅವರಲ್ಲಿದೆ. ಪ್ರಸ್ತುತ ನಮಗೆಲ್ಲ ಅವರು ನಡೆದಾಡುವ ವಿಶ್ವಕೋಶವೇ ಆಗಿದ್ದಾರೆ.

ಇಲ್ಲಿನ ಉಪನ್ಯಾಸಗಳು ನೊಂದವರಿಗೆ ಉಲ್ಲಾಸ ತುಂಬುವ ಚೇತನದಾಯಿಗಳು, ಚಿಂತಕರಿಗೆ ದರ್ಶನ ಶಾಸ್ತ್ರಗಳು, ಜೀವನದ ಕುತೂಹಲಿಗಳಿಗೆ ಸೊಗಸಿನ ವಿವೇಕದ ದಾರಿಗಳು, ವ್ಯಾವಹಾರಿಕರಿಗೆ ಶಿಸ್ತಿನ ಪಾಠಗಳು, ವಿದ್ಯಾರ್ಥಿಗಳಿಗೆ ಅಕ್ಷಯ ಪಾತ್ರೆಗಳು, ಪೋಷಕರುಗಳಿಗೆ ಶಿಕ್ಷಕರುಗಳಿಗೆ ತಮ್ಮ ಬುದ್ಧಿ ಕೌಶಲಗಳ ಸಾಣೆ ಹಿಡಿದುಕೊಳ್ಳುವ ಪರುಷ ಮಣಿಗಳು. ನಿರಾಸೆ ಹೊಂದಿದವರ ಜಂಜಡ ಕ್ಲೇಷಗಳ ಕಳೆದು ಆತ್ಮಸ್ಥೆöÊರ್ಯ ತುಂಬುವ ಸ್ಪೂರ್ತಿಯ ಚುಂಬಕ ಶಕ್ತಿಗಳು, ದುಃಖ ಮಾನಸಿಕ ವೇದನೆಯವರಿಗೆ ಜೀವನೋತ್ಸಾಹ ತುಂಬುವ ಸಿದ್ಧೌಷಧಗಳು. ಅಸಂತುಷ್ಟ ಬದುಕಿಗೆ ವಿವೇಕ ಚೂಡಾಮಣಿಗಳು. ಹೀಗೆ ಅವರ ಎಲ್ಲ ಉಪನ್ಯಾಸಗಳು ಬಹು ಮೇಧಾವಿಗಳಿಗೂ, ತಾತ್ವಿಕರಿಗೂ, ತಾರ್ಕಿಕರಿಗೂ, ಸಾತ್ವಿಕರಿಗೂ, ಸಾಮಾನ್ಯರಿಗೂ, ವಿದ್ಯಾರ್ಥಿಗಳಿಗೂ, ಸ್ಪರ್ಧಾರ್ಥಿಗಳಿಗೂ, ಸಾಧಕರಿಗು ದಾರಿ ದೀಪವಾಗಿವೆ. ಸಹೃದಯ ಕೇಳುಗರೆಲ್ಲರಿಗು ಅರವಿಂದರ ಮಾತುಗಳು ಗುರಿಯನ್ನು ನೀಡುತ್ತವೆ; ಅಷ್ಟೇ ಅಲ್ಲ ಆ ಗುರಿಗಳ ಹಿಡಿಯಲಿಕ್ಕೆ ದಾರಿಯನ್ನು ತೋರುತ್ತವೆ. ಜೀವನದ ಓರೆಕೋರೆಗಳ ತಿದ್ದಿ ಬದುಕಿನ ಮೌಲ್ಯಗಳನ್ನು ಹೆಚ್ಚಿಸಿ ಘನತೆ ಗೌರವದ ಬಾಳಿಗೆ ಸನ್ನದ್ಧರನ್ನಾಗಿಸುತ್ತವೆ.

ಇವರುಗಳ ಕ್ರಿಯಾಶೀಲತೆ ಶೋಧಿಸಿದಷ್ಟು ವಿಸ್ತರಿಸುವ ಮಹಾಸಾಗರ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಶ್ರೀಯುತರು ತಂದೆಯವರ ಕುರಿತು ‘ಇಲ್ಲದ ತೀರದಲ್ಲಿ’ ಎಂಬ ಜೀವನ ಚರಿತ್ರೆ, ಹರ್ಡೇಕರ ಮಂಜಪ್ಪರ ಕುರಿತು, ತ್ರಿಸ್ತಾವೋ ಬ್ರಗಾಂಝ ಕುನಃ ಬಗ್ಗೆ, ಕೊಡಗಿನ ಸ್ವಾತಂತ್ರö್ಯ ಬಂಡಾಯದ ಬಗ್ಗೆಯೂ ಕೃತಿಗಳನ್ನು ರಚಿಸಿದ್ದಾರೆ. ಮಕ್ಕಳಿಗಾಗಿ ಶಿಸ್ತಿನ ಜೀವನ ಕೌಶಲಗಳು, ಜೀವನ ವಿಜ್ಞಾನ, ಮನೋ ವಿಕಾಸದ, ಉಪನಿಷತ್ತಿನ ಪಾತ್ರಗಳ ಕುರಿತಂತೆಯು ಬರೆಯುತ್ತಾ ಸಾಹಿತ್ಯ, ಸಂಪಾದನೆ, ವೈಚಾರಿಕ ನೆಲೆಗಟ್ಟಿನ ಅತ್ಯಮೂಲ್ಯವಾದ ನಲವತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿ ಸಾರಸ್ವತ ಕನ್ನಡ ಲೋಕದ ಓದುಗರಿಂದ ಮೆಚ್ಚುಗೆ ಪಡೆದಿದ್ದಾರೆ.

ಇನ್ನು ಕಡೆಯದಾಗಿ ಹೇಳದೇ ಇರಲಾರೆ; ಅರವಿಂದ ಚೊಕ್ಕಾಡಿಯವರ ನಗು. ಅದು ಅಖಿಲ ಕರ್ನಾಟಕದ ನಗು! ಅದು ಅವರದೇ ಮೂಡುಬಿದಿರೆಯ, ದಕ್ಷಿಣ ಕರ್ನಾಟಕದ ಬ್ರಾಂಡೆಡ್ ನಗು! ಅರವಿಂದರೆಂದರೆ ಸದಾ ಅರಳಿದ ಮಲ್ಲಿಗೆಯಂತಹ ನಗುವೇ ಕಣ್ಮುಂದೆ ಬಂದು ನಿಲ್ಲುತ್ತದೆ. ಅವರ ನಗುವಿನಂತೆ ಅವರ ಎಲ್ಲಾ ಉಪನ್ಯಾಸಗಳು ಅಖಿಲ ನಾಡಿನಾದ್ಯಂತ ಮತ್ತಷ್ಟು ಓದುಗರ ಹೃನ್ಮನಗಳನ್ನು ಆವರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಇಲ್ಲಿನ ಎಲ್ಲಾ ಉಪನ್ಯಾಸಗಳು ಓದಲು ಶುರು ಹಚ್ಚಿದರೆ ತಾವಾಗಿಯೇ ಓದಿಸಿಕೊಳ್ಳುತ್ತವೆ. ಅದು ಇವುಗಳ ಹಿರಿಮೆ. ಅರವಿಂದ


  • ಟಿ.ಪಿ.ಉಮೇಶ್ ತುಪ್ಪದಹಳ್ಳಿ, ಹೊಳಲ್ಕೆರೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading