ವೀರನಾರಾಯಣನಿಂದ ವಿರೂಪಾಕ್ಷನತ್ತ ಚಿತ್ತ



ಗದುಗಿನಿಂದ ಹೊರಟು, ಐದು ಊರುಗಳಲ್ಲಿ ತಂಗಿದ ಬಳಿಕ ವಿಜಯನಗರದ ಸಮೀಪ ತಲುಪಿದೆವು. ಗುರು ವಿದ್ಯಾರಣ್ಯರ ಮಕ್ಕಳು, ಸಂಬಂಧಿಗಳು ಯಾರಾದರೂ ಇದ್ದಾರೆಯೇ?’ ಅಂತಹ ಮಹಾನ್ ವ್ಯಕ್ತಿಯ ಸಂಬಂಧಿಗಳು ಯಾರಾದರೂ ಇದ್ದರೆ ಅವರನ್ನು ಭೇಟಿಮಾಡುವ ಪುಣ್ಯ ಲಭಿಸುವುದೇ ಎನ್ನುವ ಆಸೆ ಮನದಲ್ಲಿದೆ ಎನ್ನುತ್ತಾರೆ ಲೇಖಕರಾದ ವಿಂಗ್ ಕಮಾಂಡರ್ ಸುದರ್ಶನ ಅವರು. ಮುಂದೆ ಓದಿ…

ನಾವು ಗದುಗಿನಿಂದ ವಿಜಯನಗರಕ್ಕೆ ಹೊರಟಾಗ ಆಗಲೇ ಬೇಸಿಗೆಕಾಲ ಪ್ರಾರಂಭವಾಗಿತ್ತು…

ಇವರು ಪ್ರಯಾಣದ ಸಂಪೂರ್ಣ ವಿವರಣೆ ಕೊಡುತ್ತಾ…

‘ ನೋಡು ಮಹಾಲಕ್ಷ್ಮಿ…ಪ್ರತಿದಿನ ಸೂರ್ಯೋದಯಕ್ಕೆ ಮುನ್ನವೇ ಪ್ರಯಾಣ ಆರಂಭಿಸೋಣ…ತಂಪನೆ ಹೊತ್ತಿನಲ್ಲಿ ಆಯಾಸ ತೋರುವುದಿಲ್ಲ, ಸೂರ್ಯ ನೆತ್ತಿಯ ಮೇಲೆ ಬರೋವರೆಗೆ ಸಾಗೋಣ, ಅಷ್ಟರಲ್ಲೇ ಒಂದು ಹಳ್ಳಿನೋ, ಊರೋ ಸಿಗುತ್ತದೆ, ಅಲ್ಲಿಯ ದೇವಸ್ಥಾನದಲ್ಲಿ ತಂಗೋಣ. ಅಲ್ಲಿನ ಪೂಜಾರಿಯವರಿಗೆ, ಹಳ್ಳಿಯ ಜನಗಳಿಗೆ ನಮ್ಮ ಪರಿಚಯ ಮಾಡಿಕೊಂಡು…ಸಾಯಂಕಾಲ ನಾವು ಮಹಾಭಾರತದ ಕಥೆ ಹೇಳುತ್ತೇವೆ, ಆಸಕ್ತಿ ಇದ್ದವರು ಬಂದು ಕೇಳಬಹುದು ಎಂದು ಹೇಳೋಣ. ವ್ಯವಸಾಯದ ಕೆಲಸಗಳೆಲ್ಲಾ ಈ ಸಮಯದಲ್ಲಿ ಮುಗಿದಿರುತ್ತವೆ, ಹಳ್ಳಿಯ ಜನಗಳು ವಿಶ್ರಮಿಸುವ ಕಾಲವಿದು, ಹಾಗಾಗಿ ಕಥೆ ಕೇಳಲು ಬರಬಹುದು. ಗದುಗಿನ ಭಾರತದ ಕೆಲವು ಷಟ್ಪದಿಗಳನ್ನು ನೀನು ಹಾಡು, ನಾನು ಅದರ ಭಾವಾರ್ಥವನ್ನು ಬಿಡಿಸಿ ಹೇಳುತ್ತೇನೆ. ಮಕ್ಕಳಿಗೆ, ಹೆಣ್ಣುಮಕ್ಕಳಿಗೆ, ವೃದ್ಧರಿಗೆ ನಿಧಾನವಾಗಿ, ಕುತೂಹಲ ಮೂಡುವಂತೆ ಬಿಡಿಸಿ ಹೇಳೋಣ. ರಾತ್ರಿ ಅಲ್ಲೇ ವಿಶ್ರಮಿಸುವ ಮತ್ತೆ ಮರುದಿನ ಬೆಳಿಗ್ಗೆ ಇನ್ನೊಂದು ಊರಿನ ಕಡೆ ಮುಖ. ಕೆಲವು ಕಡೆ ಇನ್ನೊಂದು ದಿನವಿರಬೇಕು ಎನಿಸಿದರೆ ಇದ್ದರಾಯಿತು…ಹಂಪೆ ತಲುಪಲು ಏನು ಅವಸರವೇನಿಲ್ಲ.

‘ಸರಿ ಹಾಗೇ ಆಗಲಿ..ಊಟದ ವ್ಯವಸ್ಥೆಗೆ ಕೆಲವು ದಿನಗಳಿಗಾಗುವಷ್ಟು ಅಕ್ಕಿ, ಬೇಳೆಗಳನ್ನು ಇಟ್ಟು ಕೊಂಡಿರುತ್ತೇನೆ, ತರಕಾರಿಗಳನ್ನು ಅಲ್ಲೇ ತೆಗೆದುಕೊಂಡರಾಯಿತಲ್ಲವೇ?

‘ಹಾಂ..ಹಾಗೇ ಮಾಡುವ’

ಫೋಟೋ ಕೃಪೆ :pinterest

ಕರ್ನಾಟಕದ..ಭಾರತದ ಕಥೆಯ ಗುಂಗು ಅವರಿಗೆ..ಅಡುಗೆಯ ವ್ಯವಸ್ಥೆ ನನಗಂಟಿದ ಗೀಳು..ಅಂದುಕೊಂಡು ಹೊರಡಲನುವಾದೆವು. ಚಿಕ್ಕದೊಂದು ಕಮಾನಿನ ಎತ್ತಿನ ಬಂಡಿಯಲ್ಲಿ ಬಟ್ಟೆಗಂಟುಗಳು, ಹಾಸಿಗೆ, ಹೊದಿಕೆ ದಿಂಬುಗಳು, ಅಡುಗೆಗೆ ಬೇಕಾದ ಪಾತ್ರೆಗಳು ಮತ್ತು ದಿನಸಿಗಳನ್ನು ಹಿಂದಿನ ರಾತ್ರಿಯೇ ಪೇರಿಸಿ ಭದ್ರವಾಗಿ ಕಟ್ಟಿ ಮೇಲೆ ದಪ್ಪನೆಯ ಗೋಣಿಚೀಲವನ್ನು ಮುಚ್ಚಿದೆವು. ವಿಜಯನಗರದ ಇಮ್ಮಡಿ ದೇವರಾಯರಿಗೆ ಬೇಡ ಅವರ ಮಂತ್ರಿಗಳಿಗಾದರೂ ನಾವು ವಿಜಯನಗರಕ್ಕೆ ಹೊರಟಿದ್ದೇವೆ ಎಂದು ವಿಷಯ ತಿಳಿಸಿದ್ದರೆ ಏನೆಲ್ಲಾ ವ್ಯವಸ್ಥೆ ಮಾಡಿಬಿಟ್ಟಿರೋರು ಎನಿಸಿತು. ಇವರ ಅಪರಿಗ್ರಹವ್ರತ..ಯಾರಿಂದಲೂ ಅದರಲ್ಲೂ ರಾಜ, ಮಂತ್ರಿಗಳಿಂದ ಏನನ್ನೂ ಸಹಾಯ, ಪರಿಹಾರ, ಸನ್ಮಾನ ರೂಪದಲ್ಲಿ ಪಡೆಯಬಾರದು ಎನ್ನುವ ನಿಲುವು, ನಿಶ್ಚಯ, ಅದಕ್ಕೆಲ್ಲಾ ಅಡ್ಡಿಯಾಗಿ ಕೂತಿದೆ. ಇರಲಿ ಕೆಲವು ದಿನಗಳ ಪ್ರಯಾಣದ ಆಯಾಸ ತಾನೇ..ಅನುಭವಿಸಿದರಾಯಿತು. ವಿಜಯನಗರದ ಬಗ್ಗೆ ಅಲ್ಲಿನ ವೈಭವದ ಬಗ್ಗೆ ಅಷ್ಟೆಲ್ಲಾ ಕೇಳಿದ್ದೇನೆ, ಅದನ್ನೆಲ್ಲಾ ನೋಡುವ ತವಕವೀಗ.
ಗದುಗಿನಿಂದ ವಿಜಯನಗರಕ್ಕೆ ಹೊರಟ ಪ್ರಯಾಣದ ಮೊದಲ ದಿನ, ಇನ್ನೂ ಸೂರ್ಯೋದಯವೇ ಆಗಿರಲಿಲ್ಲ ವೀರನಾರಾಯಣನ ದೇವಸ್ಥಾನದ ಮಂಗಳಾರತಿಯಾದ ನಂತರ ಹೊರಟೆವು. ಪ್ರಯಾಣದ ಮಧ್ಯ ಇವರು ಒಂದೊಂದೇ ಷಟ್ಪದಿಯನ್ನು ಹೇಳುತ್ತಾ ಹೋದರು, ನಾನೂ ಅವರನ್ನು ಅನುಸರಿಸುತ್ತಾ ಹೋದೆ. ಆ ಆರು ಸಾಲಿನ ಪದ್ಯಗಳಲ್ಲಿ ಅದೆಷ್ಟು ಪದಗಳನ್ನು ತುಂಬಿದ್ದಾರೆ ಎನಿಸಿತು, ಹಾಗೆ ನೋಡಿದರೆ ಹೆಚ್ಚಾಗಿ ಆಡುಭಾಷೆಯ ಪದಗಳೇ ಆದರೆ ಈ ಪದಗಳ ಮಾಂತ್ರಿಕ ಅದು ಹೇಗೆ ಪೋಣಿಸಿದ್ದಾರೆ ಅಂದರೆ, ಒಂದೊಂದನ್ನೇ ಬಿಡಿಸುತ್ತಾ ಹೋಗುವಾಗ ಸಿಗುವ ಭಾವಾರ್ಥಗಳು ಅದ್ಭುತ, ಅವುಗಳ ತಾತ್ಪರ್ಯ ಒಂದು ಪುಟಕ್ಕಾಗುವಷ್ಟಿರುತ್ತದೆ. ಅದನ್ನೆಲ್ಲಾ ಕೇಳುತ್ತಾ ಕೇಳುತ್ತಾ …ಕೆಲವೊಮ್ಮೆ ಮೈರೆತು ಇವರ ಮುಖವನ್ನೇ ನೋಡಿತ್ತಿದ್ದೆ…ಆಗ ಇವರೇ ಮೆಲ್ಲಗೆ ಗದರಿಸಿ ಹಾಡಲು ಪ್ರೇರೇಪಿಸುತ್ತಿದ್ದರು. ಎತ್ತಿನ ಕೊರಳುಗಳಿಗೆ ಕಟ್ಟಿದ್ದ ಗಂಟೆಗಳು ನನ್ನ ಹಾಡಿಗೆ ಹಿನ್ನಲೆ ಸಂಗೀತದಂತೆ ಇಂಪಾಗಿ ಲಯಬದ್ದವಾಗಿತ್ತು. ಗ್ರಾಮೀಣ ಜನರಿಗೆ ಅರ್ಥವಾಗುವ ಕೆಲವು ಸುಲಭವಾದ ಷಟ್ಪದಿಗಳನ್ನೇ ಆರಿಸಿ ಹಾಡಲು ಹೇಳಿದರು. ಮಧ್ಯೆ ಇವರು ಕೊಡುತ್ತಿದ್ದ ಕಥಾವಿವರಣೆ ಇನ್ನೂ ರೋಚಕವಾಗಿತ್ತು. ವೇದವ್ಯಾಸರ, ಪಂಪನ ಭಾರತದಲ್ಲಿ ಹುದುಗಿದ್ದ ಈ ಅದ್ಭುತ ಕಥಾನಕವನ್ನು ಅದೆಷ್ಟು ಎಳೆಎಳೆಯಾಗಿ, ಸರಳವಾಗಿ, ಸುಂದರವಾಗಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಹೊರತಂದಿದ್ದಾರೆ… ಇದರಲ್ಲಿ ಬರುವ ಎಲ್ಲಾ ಪಾತ್ರಗಳು ನಮ್ಮ ನಡುವೆಯೇ ನಡೆದಾಡುತ್ತಿವೆಯೇನೋ ಎನ್ನವಷ್ಟು ನೈಜವಾಗಿವೆ, ಆದರೆ ಅದೊಂದು ವಿಶೇಷ ಪಾತ್ರದ ಹೊರತಾಗಿ..ಅವನೇ ಈ ನಾಟಕದ ಸೂತ್ರಧಾರಿ ಶ್ರೀಕೃಷ್ಣ ಪರಮಾತ್ಮ..ಅವನೊಬ್ಬನಿಗೇ ದೈವೀಸ್ಥಾನ ಮೀಸಲು…

ಇನ್ನು ಉಳಿದವರೆಲ್ಲಾ ನಶ್ವರ ಜೀವಿಗಳು, ಅದಕ್ಕೇ ಇವರು ಅದನ್ನು ಕೃಷ್ಣಕಥೆ ಎಂದೇ ಕರೆಯುತ್ತಿದ್ದರು. ನಾರಾಯಣನೇ ಇದರ ಕತೃ…ನಾನೇನಿದ್ದರೂ ಲಿಪಿಕಾರನಷ್ಟೇ ಎನ್ನುವುದು ಇವರ ವಿನೀತಭಾವ.

ಫೋಟೋ ಕೃಪೆ : nativeplanet

ಮೊದಲನೆ ದಿನದ ತಂಗುವಾಸ ಪಾಪನಾಶಿನಿ ಎನ್ನುವ ಸ್ಥಳ. ಹಳ್ಳದಿಂದ ತುಸುವೇ ದೂರದ ಸುಂದರವಾದ ಹಳ್ಳಿ. ಗುದುಗಿಗೆ ಹೆಚ್ಚು ದೂರವೇನು ಇರಲಿಲ್ಲ ಹಾಗಾಗಿ ನಾರಾಣಪ್ಪನವರ ಮತ್ತು ಅವರ ಗದುಗಿನ ಭಾರತದ ಬಗ್ಗೆ ಅರಿತಿದ್ದರು ಇಲ್ಲಿನ ಜನ. ದೇವಸ್ಥಾನದಲ್ಲಿ ಇಳಿದು ಕೊಂಡಿದ್ದ ನಮ್ಮನ್ನು ಕಾಣಲು, ಮಾತಾಡಿಸಲು ಊರಿನ ಜನ ಒಬ್ಬೊಬ್ಬರಾಗಿ ಬರತೊಡಗಿದರು. ಜೊತೆಯಲ್ಲಿ ನಾನೂ ಇರುವ ವಿಷಯ ತಿಳಿದು ಹೆಣ್ಣುಮಕ್ಕಳೂ ಬರಲು ಪ್ರಾರಂಭಿಸಿದರು. ಕೆಲವರು ಹಣ್ಣು, ಹಾಲು, ಮೊಸರು, ತರಕಾರಿಗಳನ್ನು ತೆಗೆದುಕೊಂಡು ಬಂದರು. ನಮಗೆಷ್ಟು ಅವಶ್ಯವೋ ಅಷ್ಟನ್ನು ತೆಗೆದುಕೊಂಡು ಉಳಿದಿದ್ದನ್ನು ಹಿಂತಿರುಗಿಸಿದೆ. ಸಂಜೆಗೆ ಮಕ್ಕಳನ್ನೂ ಕರೆದುಕೊಂಡು ಬನ್ನಿ ಇವರು ಕಥೆ ಹೇಳುತ್ತಾರೆ ಎಂದು ಹೇಳಿದ್ದಕ್ಕೆ…ಓ ಎಲ್ಲಾರು ಬರುತ್ತೇವೆ ಎಂದು ಹೊರಟು ಹೋದರು. ಪೂಜಾರಿಗಳು ಗುಡಿಯ ಬಾಗಿಲನ್ನು ತೆರೆದಿಟ್ಟೇ ಹೋದರು.

ಸಂಜೆಗಾಗಲೇ ದಟ್ಟವಾದ ಜನಸಂದಣಿ ದೇವಸ್ಥಾನದ ಮುಂದೆ ನೆರೆದು ಬಿಟ್ಟಿತ್ತು. ಹಳ್ಳದ ಕಡೆಯಿಂದ ತೇಲಿ ಬರುತ್ತಿದ್ದ ತಂಗಾಳಿಯಿಂದ ತಂಪು ಮೂಡಿದ ವಾತಾವರಣ. ಮಕ್ಕಳ ಕಲರವ, ಹೆಣ್ಣುಮಕ್ಕಳ ಸಡಗರ ಎಲ್ಲಾ ಸೇರಿ ಒಂದು ರೀತಿಯ ಸಂಭ್ರಮದ ವಾತಾವರಣ ಸೃಷ್ಟಿಯಾಯಿತು. ಮಂಗಳಾರತಿಯಾಗುತ್ತಲೇ ಎಲ್ಲಾರು ದೇವಸ್ಥಾನದ ಪ್ರಾಂಗಣದಲ್ಲಿ ಕುಳಿತುಕೊಂಡರು. ಚಿಕ್ಕ ತಿದಿಪೆಟ್ಟಿಗೆಯೊಂದನ್ನು ಮುಂದಿಟ್ಟುಕೊಂಡು ನಾನೂ ಇವರ ಪಕ್ಕ ಕುಳಿತುಕೊಳ್ಳುತ್ತಿದ್ದಂತೆಯೇ…

ಶ್ರೀವನಿತೆಯರಸನೇ ವಿಮಲ ರಾಜೀವನ…..

ಇವರು ಸುಶ್ರಾವ್ಯವಾಗಿ ಪ್ರಾರಂಭ ಮಾಡೇಬಿಟ್ಟರು, ನಾನು ಜೊತೆಯಲ್ಲಿ ದನಿಗೂಡಿಸಿದೆ. ಮೊದಲು ಮೆಲುದನಿಯಿಂದ ಪ್ರಾರಂಭವಾದರೂ ನನಗರಿವಿಲ್ಲದೆಯೇ ನಾನೂ ಕಥೆಯ ಭಾಗವಾಗಿ ಹೋದೆ.
ಕಥೆಯನ್ನು ಪಾಂಡವರ ಕೌರವರ ಬಾಲ್ಯದಿಂದ..ಅವರ ಆಟೋಟಗಳಿಂದ ಪ್ರಾರಂಭಿಸಿದರು…ನನಗೆ ನನ್ನ ಹಾಡಿನ ಸುಳಿವು ಸಿಕ್ಕಿತು..

ಆಳಿನೇರಿಕಿ ಹಿಡಿಗವಡೆ ಗುರಿ
ಯಾಳು ಚೆಂಡಿನ ಹೊಣಕೆ ಚಿಣಿ ಕೋ
ಲಾಳು ಗೊತ್ತಿನ ದಂಡೆಯನೆ ನಾನಾ ವಿನೋದದಲಿ|
ಗುಡುಗು ಗುತ್ತಿನ ಚೆಂಡು ಗುಮ್ಮನ
ಬಡಿವ ಕತ್ತಲೆ ಗುದ್ದುಗಂಬದ
ಗಡಣೆ ಕಣ್ಮುಚ್ಚಸಗವರಿ ಹರಿಹಲಗೆ ನಿಡುಗವಣೆ
ಕೆಡಹು ಕುಟ್ಟಿಗನಾದಿಯಾದವ
ಗಡ ವಿನೋದದಲಾಡಿದರು ಪಂ
ಗಡದಲೈವರು ನೂರ್ವರಿವರೊಂತ್ತಂಡವಾಗಿ||

ಐದು ಜನ ಪಾಂಡವರ ಒಂದು ತಂಡವಾದರೆ, ನೂರು ಕೌರವರ ಇನ್ನೊಂದು ತಂಡದ ನಡುವೆಯ ಕವಡೆ ಆಟ, ಚಿನ್ನಿ ದಾಂಡು, ಲಗ್ಗೋರಿ ಆಟ, ಕಣ್ಣಾಮುಚ್ಚಾಲೆ, ಕಬ್ಬಡ್ಡಿ ಆಟ ಇತರೆ ಬಾಲ್ಯದಾಟಗಳ ವಿವರಣೆ ಕೇಳುತ್ತಿದ್ದ ಅಲ್ಲಿದ್ದ ಮಕ್ಕಳ ಕಣ್ಣುಗಳ ಹೊಳಪು, ತೆರೆದ ಬಾಯಿಗಳಿಂದಲೇ ಅರಿವಾಯಿತು ಈ ಕಥೆ ಮಕ್ಕಳಿಗೆ ತುಂಬಾ ಇಷ್ಟವಾಯಿತು ಎಂದು. ಅಲ್ಲಿಂದ ಮಕ್ಕಳು ತಮ್ಮ ಚೇಷ್ಟೆಗಳನ್ನೆಲ್ಲಾ ಬಿಟ್ಟು ಆಸಕ್ತಿಯಿಂದ ಕಥೆ ಕೇಳಲು ಪ್ರಾರಂಭಿಸಿದರು.



ಪಾಂಡವರಿಗೆ ಅನ್ಯಾಯ, ಮೋಸವಾದಾಗಲೆಲ್ಲಾ ಅದರಲ್ಲೂ ದ್ರೌಪದಿಯ ವಸ್ತ್ರಾಪಹರಣದ, ಕೀಚಕನ ಕೋಟಲೆಯ ಪ್ರಸಂಗ ಬಂದಾಗ ಹೆಣ್ಣು ಮಕ್ಕಳು ಗಳಗಳನೆ ಕಣ್ಣೀರು ಸುರಿಸಿದರು ..
ಆದರೆ ಅದೇ ಹೆಂಗಸರು ಕೀಚಕವಧಾ ಪ್ರಸಂಗ ಬಂದಾಗ ಅವಡುಗಚ್ಚಿಕೊಂಡು ನೆಲವನ್ನು ಕುಟ್ಟುತ್ತಾ… ಹಾಗೇ ಆಗಬೇಕು ನೀಚ ಕೀಚನಿಗೆ ಎಂದಾಗ ಅವರುಗಳ ಕಣ್ಣು ಕೆಂಪು ಕೆಂಡವಾಗಿದ್ದವು….
ಬಲಭೀಮ ಕೀಚಕನಿಗೆ ಯಾವ ಗತಿಕಾಣಿಸಿದನು ಎಂದು ಇವರು ವಿವರಣೆ ಕೊಡುವಾಗ ನಾನು ಹಾಡಲು ಪ್ರಾರಂಭಿಸಿದೆ….

ತಲೆಯನೆದೆಯೊಳಗಿಕ್ಕಿ ಕೈ
ಕಾಲ್ಗಳನು ಬಸುರೊಳು ಸಕ್ಕಿ ದೂರಕೆ
ತೊಲಗಿದನು ತೋರಿದನು ಕೀಚಕನ ಹದನ|
ಖಳನ ಕಾಲನ ಕೋಣ ತುಳಿದಂ
ತಿಳಿಯೊಳರಗಿರೆ ಕಂಡು ಕಾಮಿನಿ
ಕಳಕಳಿಸಿದಳು ಭೀಮಸೇನನಪ್ಪಿ ಮುಂಡಾಡಿ||

ಮಾಂಸದ ಉಂಡೆಯಾಗಿ ಹೋದ ಕೀಚಕನ ದೇಹ ಯಮನ ಕೋಣ ತುಳಿದು ಹೋದಂತೆ ಕಾಣುತ್ತಿದ್ದುದನ್ನು ನೋಡಿ ಸಮಾಧಾನಗೊಂಡ ದ್ರೌಪದಿ ಭೀಮಸೇನನ್ನು ಅಪ್ಪಿ ಮುದ್ದಾಡಿದಳಂತೆ.
ವಿರಾಟ ಪರ್ವ ಮುಂದುವರೆದು ಉತ್ತರ ಕುಮಾರನ ಪೌರುಷದ ಪ್ರಸಂಗ ಬಂದಾಗಲಂತೂ ನೆರದಿದ್ದವರೆಲ್ಲಾ ನಗೆಗಡಲಲ್ಲಿ ತೇಲಾಡಿದರು. ಅರ್ಜುನನು ಅವನ ಸಾರಥಿಯಾಗಲು ಒಪ್ಪಿ ರಥವನ್ನು ಕೌರವರ ಸೈನ್ಯದ ಮುಂದೆ ನಿಲ್ಲಿಸಿದಾಗ ಥರಥರನೆ ನಡುಗಲು ಪ್ರಾರಂಭಿಸಿದ ಉತ್ತರ ಕುಮಾರ ರಥದ ಹಿಂಬಾಗದಿಂದ ಜಿಗಿದು ಓಡಿಹೋಗಲು ಪ್ರಾರಂಭಿಸುತ್ತಾನೆ…

ಎಂದೊಡರ್ಜುನ ನಗುತ ರಥವನು
ಮುಂದೆ ನಾಲ್ಕೆಂಟಡಿಯ ನೂಕಲು
ಕೊಂದನೀ ಸಾರಥಿ ಎನುತ ಸಂವರಿಸಿ ಮುಂಜೆರಗ|
ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ||

ಅಷ್ಟರಲ್ಲೇ ಜಿನುಗಿನ ಮಳೆ ಶುರುವಾಯಿತು. ಬಹುಶಃ ಮಳೆ ಬರದೇ ಇದ್ದಿದ್ದರೆ ಕಥೆ ಬೆಳಗಿನ ಜಾವದವರೆಗೂ ಮುಂದುವರೆಯುತ್ತಿತ್ತೇನೋ ಕಥೆಯನ್ನು ಅಲ್ಲಿಗೇ ನಿಲ್ಲಿಸಿ…ಬೇಗ ಬೇಗ ನಿಮ್ಮ ಮನೆಗಳನ್ನು ಸೇರಿಕೊಳ್ಳಿ ಎಂದು ನಾವು ಅವರಿಗೆ ವಿದಾಯ ಹೇಳಿದೆವು.

ಹೀಗೆ ವಿಜಯನಗರ ತಲುಪುವವರೆಗೂ ಅನೇಕ ಊರುಗಳಲ್ಲಿ ತಂಗಿ…ಕರ್ನಾಟ ಭಾರತ ಕಥಾಮಂಜರಿಯ ಕಂಪನ್ನು ಕರ್ನಾಟಕ ಸಾಮ್ರಾಜ್ಯದೆಲ್ಲೆಡೆ ಪಸರಿಸುವಾಗ ಆಗುತ್ತಿದ್ದ ಆನಂದ ವರ್ಣಿಸಲಸಾಧ್ಯ.

ನಮ್ಮ ತಾತನವರು ಹೇಳುತ್ತಿದ್ದ ಮಾತೊಂದು ನನಗೆ ನೆನಪಾಯಿತು…
‘ವಿರಾಟ ಪರ್ವದ ಪಾರಾಯಣ ನಡೆದಾಗಲೆಲ್ಲಾ ಮಳೆ ಬರುತ್ತದಂತೆ..ನಿಜವೇ ?
ಇವರನ್ನು ಕೇಳಿದೆ,

‘ಹೌದು ಇಂತಹದೊಂದು ಬಲವಾದ ನಂಬಿಕೆ #ಉತ್ತರ_ಭಾರತದ ಕಡೆ ಮತ್ತು ನಮ್ಮ ಕೆಲವು ಹಳ್ಳಿಗಳಲ್ಲಿ ಇದೆ, ಏಕೆಂದರೆ ಭೀಷ್ಮನು ಪಾಂಡವರ ಪರವಹಿಸಿ ಮಾತಾಡುವಾಗ…ಯುಧಿಷ್ಠಿರನ ರಾಜ್ಯದಲ್ಲಿ ಧರ್ಮ ನೆಲಸಿರುತ್ತದೆ, ಕಾಲಕಾಲಕ್ಕೆ ತಕ್ಕಂತೆ ಮಳೆ ಬೆಳೆಗಳಾಗಿ ಎಲ್ಲೆಲ್ಲೂ ಸುಭೀಕ್ಷತೆ, ಸಮೃದ್ಧತೆ ತುಂಬಿ ತುಳುಕುತ್ತದೆ ಎನ್ನುವ ಭೀಷ್ಮರ ಈ ಆಶೀರ್ವಚನದಲ್ಲಿ ವರುಣ ಬೀಜಾಕ್ಷರ ಅಡಗಿದೆ ಎನ್ನಲಾಗುತ್ತದೆ…ಇದ್ದರೂ ಇರಬಹುದು’

ಗದುಗಿನಿಂದ ಹೊರಟು ಒಂದು ವಾರದ ನಂತರ, ಐದು ಊರುಗಳಲ್ಲಿ ತಂಗಿದ್ದು ಭಾರತ ವಾಚನದ ಅನುಭವದ ನಂತರ ವಿಜಯನಗರದ ಸಮೀಪ ತಲುಪಿದೆವು. ಉತ್ತರ ಭಾರತದಿಂದ ಬಂದ ದಾಳಿಕೋರ ಮುಸ್ಲಿಮರ ದುಷ್ಟ ಶಕ್ತಿಯನ್ನು ನಿಗ್ರಹಿಸಿ, ಗುರು ವಿದ್ಯಾರಣ್ಯರ ಕೃಪಾಕಟಾಕ್ಷದಡಿಯಲ್ಲಿ ಶಿಷ್ಟಧರ್ಮವನ್ನು ದಕ್ಷಿಣ ಭಾರತದಲ್ಲಿ ಮರುಸ್ಥಾಪನೆಗೊಳಿಸಿ ಸುಮಾರು ನೂರು ವರ್ಷಗಳು ಕಳೆದಿವೆ ನಮ್ಮ ಕರ್ನಾಟಕ ಸಾಮ್ರಾಜ್ಯಕ್ಕೆ…ಹಲವಾರು ಏಳು ಬೀಳುಗಳನ್ನು ಕಂಡ ಈ ಸಾಮ್ರಾಜ್ಯ ಪ್ರೌಢ ದೇವರಾಯರಿಂದಾಗಿ ಮತ್ತೊಮ್ಮೆ ವೈಭವದ ದಿನಗಳನ್ನು ಕಾಣುತ್ತಿದೆಯಂತೆ…

‘ಈಗ ಗುರು #ವಿದ್ಯಾರಣ್ಯರ ಮಕ್ಕಳು..ಸಂಬಂಧಿಗಳು ಯಾರಾದರೂ ಇದ್ದಾರೆಯೇ?’

ಅಂತಹ ಮಹಾನ್ ವ್ಯಕ್ತಿಯ ಸಂಬಂಧಿಗಳು ಯಾರಾದರೂ ಇದ್ದರೆ ಅವರನ್ನು ಭೇಟಿಮಾಡುವ ಪುಣ್ಯ ಲಭಿಸುವುದೇ ಎನ್ನುವ ಆಸೆ ಮನದಲ್ಲಿ.. ಇವರು ಸ್ವಲ್ಪ ಹೊತ್ತು ಯೋಚಿಸಿ…

‘ವಿದ್ಯಾರಣ್ಯರಿಗೆ..ಸಾಯಣಾಚಾರ್ಯ, ಭೋಗನಾಥಾಚಾರ್ಯ ಎನ್ನುವ ಇಬ್ಬರು ತಮ್ಮಂದಿರು ಮತ್ತು ಸಿಂಗಳಾಂಬಿಕೆ ಎನ್ನುವ ತಂಗಿಯೊಬ್ಬರಿದ್ದರು…ಆ ತಂಗಿಯ ಮಗನೇ ಪ್ರೌಢದೇವರಾಯರ ಆಸ್ಥಾನದಲ್ಲಿರುವ ಅಮಾತ್ಯ ಲಕ್ಷ್ಮೀಧರರು…ನಮ್ಮ ಅದೃಷ್ಟವಿದ್ದರೆ ಅವರಿಗೆ ನಮಸ್ಕರಿಸುವ ಪುಣ್ಯವೂ ಲಭಿಸಬಹುದೇನೋ’

ದೂರದಿಂದಲೇ ಕಾಣುತ್ತಿದ್ದ ಬಂಡೆಗಲ್ಲುಗಳ ಬೆಟ್ಟವನ್ನು ತೋರಿಸುತ್ತಾ..
‘ಮಹಾಲಕ್ಷ್ಮಿ ನಿನ್ನ ಕನಸಿನ ನಗರವನ್ನು ಸಮೀಪಿಸುತ್ತಿದ್ದೇವೆ…ನೋಡು’

ಸುತ್ತಲೂ ಹಸಿರು ಛಾದರ ಹೊದ್ದ ಭೂತಾಯಿ..ಜುಳುಜುಳು ಹರಿಯುತ್ತಿರುವ ತುಂಗಭದ್ರೇ..ಬೃಹದಾಕಾರದ ಬಂಡೆಗಳು..ನೋಡು ನೋಡುತ್ತಲೇ ನಮ್ಮ ಎತ್ತಿನ ಬಂಡಿ ವಿರೂಪಾಕ್ಷ ದೇವಸ್ಥಾನದ ಮುಂದೆ ನಿಂತಿತು..ಎಂಥಹಾ ಆನಂದ… ಆ ವಿರೂಪಾಕ್ಷ ದೇವಸ್ಥಾನವನ್ನು ನೋಡು ನೋಡುತ್ತಲೇ ಗದುಗಿನ ನಾರಣಪ್ಪನ ಧರ್ಮಪತ್ನಿಯಾದ ನಾನೂ ಸಹಾ ಕವಯಿತ್ರಿಯಾಗಿ ಬಿಟ್ಟೆ…ಷಟ್ಪದಿಯ

ಸಾಲುಗಳು ನನಗರಿವಿಲ್ಲದೆ ಹೊರ ಬಂದವು…|

ದೂರ ಗದುಗಿಂ ಕಾಣಬಂದೆವು
ತೀರ ಪಂಪಾ ಕ್ಷೇತ್ರ ಮಹಿಮನೆ
ಚಾರುರೂಪನೆ ಭಾರಿಗೋಪುರ ದೊಳ್ನೆಲಸಿದವನೇ|
ನೂರು ನಮನವು ದೇವದೇವನೆ
ತೋರುದಾರಿಯ ದುರಿತನಾಶನೆ
ಪಾರುಗಾಣಿಸೊ ಪೊರೆಯುತೆಮ್ಮನು ವಿರೂಪಾಕ್ಷನೆ ನೀ||


  • ವಿಂಗ್ ಕಮಾಂಡರ್ ಸುದರ್ಶನ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW